Leena Joshi Column: ಒಡೆದು ಆಳುವ ನೀತಿಯ ದುರಂತ ಇತಿಹಾಸ
1920 ಮತ್ತು 1930ರ ದಶಕದವರೆಗೆ ಬ್ರಿಟಿಷ್ ಇಂಡಿಯನ್ ಸಾಮ್ರಾಜ್ಯವು ಕೆಂಪು ಸಮುದ್ರದಿಂದ ಆಗ್ನೇಯ ಏಷ್ಯಾದವರೆಗೆ ಹರಡಿತ್ತು. ಬರ್ಮಾ ಅದರ ಆಡಳಿತ ವ್ಯವಸ್ಥೆಯ ಭಾಗವಾಗಿತ್ತು, ಅಂದಿನ ಯೆಮೆನ್ ದೇಶದ ಪ್ರಮುಖ ನಗರವಾಗಿದ್ದ ಏಡನ್ (Aden) ಭಾರತೀಯ ಸಾಮ್ರಾಜ್ಯಿಕ ಆಡಳಿತ ಮತ್ತು ವ್ಯಾಪಾರದೊಂದಿಗೆ ಸಂಪರ್ಕ ಹೊಂದಿತ್ತು.
-
ಅಮೃತಕಾಲ
ಲೀನಾ ಜೋಶಿ
ಭಾರತದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಸ್ವಾತಂತ್ರ್ಯಪೂರ್ವದ ನಕ್ಷೆಯನ್ನು ನೋಡಬೇಕು. ಅದು ವಸಾಹತುಶಾಹಿಯ ರಾಜಕೀಯದ ದಾಖಲೆ, ಅಧಿಕಾರದ ಲೆಕ್ಕಾಚಾರದ ದಾಖಲೆ, ವಿಭಜನೆಯ ಬೆಲೆಯ ದಾಖಲೆ. ಸ್ಯಾಮ್ ಡಾಲ್ರಿಂಪಲ್ ಅವರ ಪುಸ್ತಕ Shattered Lands: Five Partitions and the Making of Modern Asia ಸಂಪೂರ್ಣ ಇತಿಹಾಸವನ್ನು ತೆರೆದಿಟ್ಟ, ಕಣ್ಣು ಮುಸುಕು ಮಾಡುವ ಗ್ರಂಥ. ಬೃಹತ್ ಭಾರತೀಯ ಸಾಮ್ರಾಜ್ಯವು ಒಡೆದು 12 ಆಧುನಿಕ ರಾಷ್ಟ್ರ ಗಳಾಗಿ ಮಾರ್ಪಟ್ಟಿದ್ದನ್ನು ಎಳೆಎಳೆಯಾಗಿ ತೆರೆದಿಡುತ್ತದೆ.
ಒಂದು ಕಾಲದಲ್ಲಿ ಒಂದೇ ಸಾಮ್ರಾಜ್ಯಿಕ ವ್ಯವಸ್ಥೆಯೊಳಗೆ ಸಂಪರ್ಕ ಹೊಂದಿದ್ದ ಭೂಭಾಗಗಳು ಹೇಗೆ ಒಂದರ ನಂತರ ಮತ್ತೊಂದು ರಾಜಕೀಯ ಗಡಿಗಳಾಗಿ ವಿಭಜಿತವಾದವು ಎಂಬುದೇ ಈ ಪುಸ್ತಕದ ಹೂರಣ.
1920 ಮತ್ತು 1930ರ ದಶಕದವರೆಗೆ ಬ್ರಿಟಿಷ್ ಇಂಡಿಯನ್ ಸಾಮ್ರಾಜ್ಯವು ಕೆಂಪು ಸಮುದ್ರದಿಂದ ಆಗ್ನೇಯ ಏಷ್ಯಾದವರೆಗೆ ಹರಡಿತ್ತು. ಬರ್ಮಾ ಅದರ ಆಡಳಿತ ವ್ಯವಸ್ಥೆಯ ಭಾಗವಾಗಿತ್ತು, ಅಂದಿನ ಯೆಮೆನ್ ದೇಶದ ಪ್ರಮುಖ ನಗರವಾಗಿದ್ದ ಏಡನ್ (Aden) ಭಾರತೀಯ ಸಾಮ್ರಾಜ್ಯಿಕ ಆಡಳಿತ ಮತ್ತು ವ್ಯಾಪಾರ ದೊಂದಿಗೆ ಸಂಪರ್ಕ ಹೊಂದಿತ್ತು.
ಇದನ್ನೂ ಓದಿ: Leena Joshi Column: ರೋಗಿ ಭಾರತೀಯ, ಬಿಲ್ ಲಾಭ ವಿದೇಶಕ್ಕೆ
ಕೊಲ್ಲಿ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ, ಹಣಕಾಸು ಮತ್ತು ಸಮುದ್ರ ಸಂಪರ್ಕಗಳು ಇದ್ದವು. ಇಂದಿನ ನಕ್ಷೆಯಲ್ಲಿರುವ ವಿದೇಶ ಎಂಬ ಪದ, ನಿನ್ನೆಯ ಇತಿಹಾಸದಲ್ಲಿರಲಿಲ್ಲ. ಬ್ರಿಟಿಷರು ಭಾರತ ವನ್ನು ಪ್ರತ್ಯಕ್ಷ ಆಡಳಿತದ ಮೂಲಕ, ಪರೋಕ್ಷ ಹಸ್ತಕ್ಷೇಪದ ಮೂಲಕ, ವರ್ಗೀಕರಣದ ಮೂಲಕ, ವಿಭಿನ್ನ ಸಮುದಾಯಗಳ ರಾಜಕೀಯ ಪ್ರತಿನಿಧಿತ್ವವನ್ನು ಬೇರೆ ಬೇರೆ ರೀತಿಯಲ್ಲಿ ರೂಪಿಸುವ ಮೂಲಕ, ಪ್ರಾಂತ್ಯ ಗಳನ್ನು ಮರು ರಚಿಸುವ ಮೂಲಕ ಆಡಳಿತ ನಡೆಸಿದರು. ಇದನ್ನೇ ಸ್ಪಷ್ಟವಾಗಿ ಹೇಳುವುದು ಒಡೆದು ಆಳುವ ನೀತಿ (Divide and Rule) ಎಂದು. ವಿಭಜನೆ ಒಂದು ದಿನದಲ್ಲಿ ಹುಟ್ಟುವುದಿಲ್ಲ, ಮೊದಲು ಮನಸ್ಸಿನಲ್ಲಿ ರೇಖೆ ಎಳೆಯಲಾಗುತ್ತದೆ, ನಂತರ ಆಡಳಿತದಲ್ಲಿ, ಕೊನೆಗೆ ನಕ್ಷೆಯಲ್ಲಿ.
1937- ಬರ್ಮಾ (ಮ್ಯಾನ್ಮಾರ್)
ಬ್ರಿಟಿಷರು ಮೂರು ಆಂಗ್ಲೋ-ಬರ್ಮೀಸ್ ಯುದ್ಧಗಳ ನಂತರ ಬರ್ಮಾವನ್ನು ಸಂಪೂರ್ಣವಾಗಿ ಗೆದ್ದು, 1886ರಲ್ಲಿ ಅದನ್ನು ಬ್ರಿಟಿಷ್ ಇಂಡಿಯಾದ ಪ್ರಾಂತ್ಯವಾಗಿ (Province) ಸೇರಿಸಿಕೊಂಡರು. ಮೊದಲು ಕಲ್ಕತ್ತಾ, ನಂತರ ದೆಹಲಿಯಿಂದ ಬರ್ಮಾದ ಆಡಳಿತ ನಡೆಯುತ್ತಿತ್ತು. ಭಾರತದಲ್ಲಿ ಬೆಳೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಬರ್ಮಾಕ್ಕೂ ಹರಡಬಾ ರದೆಂಬ ಭಯದಿಂದ, 1935ರ ‘ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್’ ಪ್ರಕಾರ 1937ರಲ್ಲಿ ಬರ್ಮಾವನ್ನು ಭಾರತದಿಂದ ಅಧಿಕೃತವಾಗಿ ಪ್ರತ್ಯೇಕಿಸಲಾಯಿತು.
1937ಕ್ಕಿಂತ ಮುಂಚೆ ಭಾರತ ಮತ್ತು ಬರ್ಮಾ ನಡುವೆ ಅಂತಾರಾಷ್ಟ್ರೀಯ ಗಡಿಗಳಿರಲಿಲ್ಲ. ಜನರು ಮುಕ್ತವಾಗಿ ಓಡಾಡುತ್ತಿದ್ದರು. ಬರ್ಮಾ ಆ ಕಾಲದಲ್ಲಿ ಅಕ್ಕಿ ಮತ್ತು ಖನಿಜ ಸಂಪನ್ಮೂಲಗಳಲ್ಲಿ ಅತ್ಯಂತ ಶ್ರೀಮಂತವಾಗಿತ್ತು. ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಬಂಗಾಳದ ಲಕ್ಷಾಂತರ ಕಾರ್ಮಿಕರು, ವ್ಯಾಪಾರಿಗಳು (ಚೆಟ್ಟಿಯಾರ್ ಸಮುದಾಯದವರು), ಬ್ಯಾಂಕರ್‌ಗಳು ಮತ್ತು ಸರ್ಕಾರಿ ನೌಕರರು ಬರ್ಮಾಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದರು.
ರಂಗೂನ್ (ಯಾಂಗೂನ್) ನಗರದಲ್ಲಿ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಭಾರತೀಯರದ್ದೇ ಆಗಿತ್ತು. ಲಕ್ಷಾಂತರ ಭಾರತೀಯರು ಕಾಲ್ನಡಿಗೆಯ ಅಸ್ಸಾಂ ಮತ್ತು ಮಣಿಪುರದ ಕಾಡುಗಳ ಮೂಲಕ ಭಾರತಕ್ಕೆ ಬರಬೇಕಾಯಿತು. ಈ ಕಠಿಣ ಪಯಣದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿ (ಮಣಿಪುರ, ಮಿಜೋರಾಂ) ನಾವು ಕಾಣುವ ಜನಾಂಗೀಯ ಸಂಘರ್ಷಗಳು ಮತ್ತು ರೋಹಿಂಗ್ಯಾ ಬಿಕ್ಕಟ್ಟಿನ ಬೇರುಗಳು ಬ್ರಿಟಿಷರು 1937ರಲ್ಲಿ ಮತ್ತು ನಂತರ 1947ರಲ್ಲಿ ಎಳೆದ ಅಸಹಜ ಗಡಿರೇಖೆಗಳ ಇವೆ.
1937- ಏಡನ್ (ಯೆಮೆನ್)
1937ಕ್ಕಿಂತ ಮೊದಲು, ಏಡನ್ ಆಡಳಿತಾತ್ಮಕವಾಗಿ ಭಾರತದ ಉಪಖಂಡದ ಒಂದು ಭಾಗವಾಗಿತ್ತು. ಇದನ್ನು ಮುಂಬೈನಿಂದ ಆಳಲಾಗುತ್ತಿತ್ತು. ಏಡನ್ ಅನ್ನು ಭಾರತದಿಂದ ಪ್ರತ್ಯೇಕಿಸಿ, ಲಂಡನ್‌ನಲ್ಲಿ ರುವ ಕರಾವಳಿ ವಸಾಹತು ಕಚೇರಿಯ ನೇರ ನಿಯಂತ್ರಣಕ್ಕೆ ಒಳಪಡಿಸಿ ‘ಕ್ರೌನ್ ಕಾಲೋನಿ’ ಮಾಡಲಾಯಿತು. ಈ ವಸಾಹತುಶಾಹಿ ವಿಭಜನೆಯು ಆಳವಾದ ರಾಜಕೀಯ ಬಿಕ್ಕಟ್ಟಿಗೆ ಕಾರಣ ವಾಯಿತು. ಈ ಐತಿಹಾಸಿಕ ವಿಭಜನೆಯೇ ಇಂದಿಗೂ ಆ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷ ಗಳಿಗೆ ಪ್ರಮುಖ ಕಾರಣವಾಗಿದೆ.
1947- ವಿಭಜನೆಯೊಂದಿಗೆ ಸ್ವಾತಂತ್ರ್ಯ
ಬ್ರಿಟಿಷ್ ಸರ್ಕಾರವು ಮೊದಲು ಭಾರತಕ್ಕೆ ಸ್ವಾತಂತ್ರ್ಯ ನೀಡಲು ನಿಗದಿಪಡಿಸಿದ್ದು ಜೂನ್ 1948. ಲಾರ್ಡ್ ಮೌಂಟ್ ಬ್ಯಾಟನ್ ಅಧಿಕಾರ ಹಸ್ತಾಂತರದ ದಿನಾಂಕವನ್ನು 10 ತಿಂಗಳು ಮುಂಚಿತವಾಗಿ, ಅಂದರೆ 15 ಆಗ 1947ಕ್ಕೆ ತಂದರು. ಗಡಿ ಗುರುತಿಸುವ ಜವಾಬ್ದಾರಿಯನ್ನು ಬ್ರಿಟಿಷ್ ವಕೀಲ ಸಿರಿಲ್ ರಾಡ್ ಕ್ಲಿಫ್ʼನಿಗೆ ನೀಡಲಾಯಿತು. ಅತ್ಯಂತ ಆಘಾತಕಾರಿ ವಿಷಯವೆಂದರೆ, ರಾಡ್‌ಕ್ಲಿಫ್ ಅದಕ್ಕೆ ಮುಂಚೆ ಎಂದಿಗೂ ಭಾರತಕ್ಕೆ ಬಂದವನಲ್ಲ!
ಅವನಿಗೆ ಭಾರತದ ಭೌಗೋಳಿಕತೆ, ಸಂಸ್ಕೃತಿಯ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಇಡೀ ದೇಶವನ್ನು ವಿಭಜಿಸಲು ಸಿಕ್ಕಿದ್ದು ಕೇವಲ 5 ವಾರಗಳು. ಹಳೆಯ ನಕಾಶೆಗಳು, ಪೊಲೀಸ್ ಠಾಣೆಗಳು, ಜನಗಣತಿಯ ಅಂಕಿ-ಅಂಶಗಳನ್ನು ಇಟ್ಟುಕೊಂಡು ಕಾಗದದ ಮೇಲೆ ಗಡಿ ರೇಖೆ ಎಳೆಯಲಾಯಿತು. ಸ್ವಾತಂತ್ರ್ಯ ಸಿಕ್ಕ ಆಗ 15ರಂದು ಪಂಜಾಬ್ ಮತ್ತು ಬಂಗಾಳದ ಜನರಿಗೆ ತಾವು ಯಾವ ದೇಶದಲ್ಲಿ ದ್ದೇವೆ ಎಂದೇ ತಿಳಿದಿರಲಿಲ್ಲ!
ಆಗ 17ರಂದು ಗಡಿ ರೇಖೆಯನ್ನು ಅಧಿಕೃತವಾಗಿ ಪ್ರಕಟಿಸಿದಾಗ ರಾತ್ರೋರಾತ್ರಿ ಲಕ್ಷಾಂತರ ಜನರು ತಮ್ಮದೇ ದೇಶದಲ್ಲಿ ವಿದೇಶಿಯರಾದರು. ಸುಮಾರು 2 ಕೋಟಿ ಜನರು ತಮ್ಮ ಜೀವ ಉಳಿಸಿಕೊಳ್ಳಲು ಮನೆ, ಆಸ್ತಿ ಬಿಟ್ಟು ಬರಿಗೈಲಿ ಓಡಬೇಕಾಯಿತು. ಹಿಂದೂ-ಸಿಖ್ಖರು ಭಾರತದ ಕಡೆಗೆ, ಮುಸ್ಲಿಮರು ಪಾಕಿಸ್ತಾನದ ಕಡೆಗೆ ಹೆಜ್ಜೆ ಹಾಕಿದರು. ಬಿಸಿಲು, ಹಸಿವು ಮತ್ತು ಕಾಲರಾದಿಂದ ದಾರಿಯ ಸಾವಿರಾರು ಜನ ಸತ್ತರು. ಮನುಷ್ಯತ್ವ ಮರೆತು ನೆರೆಹೊರೆಯವರೇ ಪರಸ್ಪರ ಕೊಲೆ ಮಾಡಿಕೊಂಡರು.
ನಿರಾಶ್ರಿತರಿಂದ ತುಂಬಿದ್ದ ರೈಲುಗಳು ಗಡಿ ದಾಟುವಾಗ ಕೇವಲ ಹೆಣಗಳ ರಾಶಿಯಾಗಿ ಭಾರತ ಅಥವಾ ಪಾಕಿಸ್ತಾನವನ್ನು ತಲುಪುತ್ತಿದ್ದವು. ಲಕ್ಷಾಂತರ ಮಹಿಳೆಯರ ಅಪಹರಣ ಮತ್ತು ಅತ್ಯಾಚಾರ ನಡೆಯಿತು. ಕುಟುಂಬದ ಗೌರವ ಕಾಪಾಡಲು ತಂದೆ-ಅಣ್ಣಂದಿರೇ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ವಿಷವಿಕ್ಕಿದ, ಗುಂಡಿಕ್ಕಿದ, ಕತ್ತರಿಸಿ ಕೊಲೆಗೈದ, ಬಾವಿಗೆ ದೂಡಿದ ಕರುಣಾಜನಕ ಘಟನೆಗಳು ನಡೆದವು.
ವಿಭಜನೆಯನ್ನು ಕೇವಲ ಬ್ರಿಟಿಷರ ಕುತಂತ್ರ ಎಂದು ಹೇಳಿದರೆ ಇತಿಹಾಸ ಅಪೂರ್ಣ. ಅದೇ ರೀತಿ ಬ್ರಿಟಿಷರ ಪಾತ್ರವೇ ಇರಲಿಲ್ಲ ಎಂದು ಹೇಳಿದರೂ ಇತಿಹಾಸ ಅಪೂರ್ಣ. 1946-47ರಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ರಾಜಕೀಯ ಸಂಘರ್ಷ ತೀವ್ರವಾಗಿತ್ತು. ಮುಸ್ಲಿಂ ಲೀಗ್ ಪಾಕಿಸ್ತಾನ ದ ಬೇಡಿಕೆಯನ್ನು ಬಲವಾಗಿ ಮುಂದಿಟ್ಟಿತ್ತು. ಬ್ರಿಟಿಷ್ ಸರ್ಕಾರ ಅಧಿಕಾರ ಹಸ್ತಾಂತರವನ್ನು ವೇಗಗೊಳಿಸಿತು. ಕೊನೆಗೆ ಭಾರತೀಯ ರಾಜಕೀಯ ನಾಯಕತ್ವವೂ ಆ ಯೋಜನೆಯನ್ನು ಒಪ್ಪಿಕೊಂಡಿತು. ರಾಜಕೀಯದ ಒಂದು ನಿರ್ಧಾರ, ಕೋಟ್ಯಂತರ ಜನರ ವೈಯಕ್ತಿಕ ದುರಂತಗಳಾಗಿ ಬದಲಾಯಿತು.
1971ರ ಹಿಂಸಾಚಾರ, ಬಾಂಗ್ಲಾ
ಉದಯ ಗಡಿಯನ್ನು ಎಳೆದರೆ ಸಂಘರ್ಷ ಮುಗಿಯುತ್ತದೆ ಎಂಬುದಕ್ಕೆ ಇತಿಹಾಸ ಯಾವುದೇ ಖಾತರಿ ನೀಡುವುದಿಲ್ಲ ಎಂಬುದು 1971ರ ಬಾಂಗ್ಲಾದೇಶದ ಉದಯದೊಂದಿಗೆ ಸಾಬೀತಾಯಿತು. 1947ರಲ್ಲಿ ಧರ್ಮದ ಆಧಾರದ ಮೇಲೆ ಸೃಷ್ಟಿಯಾದ ಪಾಕಿಸ್ತಾನವು, ಕೇವಲ 24 ವರ್ಷಗಳಲ್ಲಿ ಭಾಷೆ ಮತ್ತು ಸಂಸ್ಕೃತಿಯ ಬಿಕ್ಕಟ್ಟಿನಿಂದಾಗಿ ಮತ್ತೊಂದು ವಿಭಜನೆಯನ್ನು ಕಂಡಿತು.
1947ರಲ್ಲಿ ಬ್ರಿಟಿಷರು ಭಾರತವನ್ನು ವಿಭಜಿಸಿದಾಗ ಎರಡು ಧರ್ಮಗಳಿಗೆ ಬೇರೆ ಬೇರೆ ದೇಶ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ ಎಂದು ಭಾವಿಸಿದ್ದರು. ಆದರೆ 1971ರ ಘಟನೆಯು ಕಾಗದದ ಮೇಲೆ ಗಡಿಗಳನ್ನು ಎಳೆಯುವುದರಿಂದ ಅಥವಾ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವುದರಿಂದ ಶಾಶ್ವತ ಶಾಂತಿ ಸಿಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿತು. ಮಾನವೀಯತೆ, ಭಾಷೆ, ಸಂಸ್ಕೃತಿ ಮತ್ತು ಸಮಾನ ಗೌರವವನ್ನು ಕಡೆಗಣಿಸಿ ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ದೇಶಗಳನ್ನು ವಿಭಜಿಸಿ ದರೆ, ಆ ವಿಭಜನೆಯ ಗರ್ಭದಿಂದ ಮತ್ತೊಂದು ವಿಭಜನೆಯೇ ಹುಟ್ಟಿಕೊಳ್ಳುತ್ತದೆ ಎಂಬುದಕ್ಕೆ ಬಾಂಗ್ಲಾದೇಶ ಸಾಕ್ಷಿ. ಇದಕ್ಕೆ ಬಂಗಾಳಿಗಳು ಕೊಟ್ಟದ್ದು ಬಹು ದೊಡ್ಡ ಬೆಲೆ. ಪಶ್ಚಿಮ ಪಾಕಿಸ್ತಾನದ ಸೇನೆಯು ‘ಆಪರೇಷನ್ ಸಚ್ ಲೈಟ್’ ಎಂಬ ಹೆಸರಿನಲ್ಲಿ ಲಕ್ಷಾಂತರ ಬಂಗಾಳಿಗಳನ್ನು ಕೊಲ್ಲಲಾಯಿತು.
ಲಕ್ಷಾಂತರ ಮಹಿಳೆಯರ ಮೇಲೆ ದೌರ್ಜನ್ಯ ನಡೆಯಿತು. ಪ್ರಾಣ ಉಳಿಸಿಕೊಳ್ಳಲು ಸುಮಾರು 1 ಕೋಟಿ ನಿರಾಶ್ರಿತರು ಭಾರತದ ಗಡಿಯೊಳಗೆ (ಪಶ್ಚಿಮ ಬಂಗಾಳ ಮತ್ತು ಅಸ್ಸಾಂ) ವಲಸೆ ಬಂದರು. ಭಾರತೀಯ ಸೇನೆಯು ಬಂಗಾಳಿಗಳ ಮುಕ್ತಿವಾಹಿನಿಗೆ ಬೆಂಬಲ ನೀಡಿ, ಪಾಕಿಸ್ತಾನವನ್ನು ಸೋಲಿಸಿತು. 93000 ಪಾಕಿಸ್ತಾನಿ ಸೈನಿಕರು ಭಾರತದ ಮುಂದೆ ಶರಣಾದರು. ಜಗತ್ತಿನ ಭೂಪಟದಲ್ಲಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದಯಿಸಿತು.
ಕೊಂಡಿ ಕಳಚಿಕೊಂಡ ಕೊಲ್ಲಿ ರಾಷ್ಟ್ರಗಳು
ಇಂದು ನಾವು ನೋಡುವ ಗಗನಚುಂಬಿ ಕಟ್ಟಡಗಳ ದುಬೈ, ಕತಾರ್ 1950ಕ್ಕಿಂತ ಮುಂಚೆ ಇರಲಿಲ್ಲ. ಆಗ ಅವು ಮರಳುಗಾಡು ಮತ್ತು ಸಮುದ್ರ ತೀರದ ಸಣ್ಣ ಹಳ್ಳಿಗಳಾಗಿದ್ದವು. ಅಂದಿನ ಕೊಲ್ಲಿ ರಾಷ್ಟ್ರಗಳ ಪ್ರಮುಖ ಆರ್ಥಿಕತೆ ಎಂದರೆ ಸಮುದ್ರದಲ್ಲಿ ಮುಳುಗಿ ಮುತ್ತುಗಳನ್ನು ಆರಿಸುವುದು. ಈ ಮುತ್ತುಗಳಿಗೆ ಜಾಗತಿಕವಾಗಿ ಅತಿ ದೊಡ್ಡ ಮಾರುಕಟ್ಟೆ ಇದ್ದದ್ದು ಮುಂಬೈನಲ್ಲಿ. ಕುವೈತ್, ಬಹ್ರೇನ್, ಕತಾರ್, ದುಬೈ, ಅಬುಧಾಬಿ ರಾಷ್ಟ್ರಗಳಲ್ಲಿ ಭಾರತೀಯ ರೂಪಾಯಿ ಅಧಿಕೃತ ಚಲಾವಣೆಯ ಕರೆನ್ಸಿಯಾಗಿತ್ತು!
ಅಲ್ಲಿನ ಬ್ಯಾಂಕಿಂಗ್, ಅಂಚೆ ಮತ್ತು ಆಡಳಿತ ವ್ಯವಸ್ಥೆ ಎಲ್ಲವೂ ಮುಂಬಯಿ ಮತ್ತು ದೆಹಲಿ ಯಿಂದಲೇ ನಿರ್ದೇಶಿಸಲ್ಪಡುತ್ತಿತ್ತು. ಅರಬ್ ವ್ಯಾಪಾರಿಗಳು ಭಾರತದ ಸಾಂಬಾರ ಪದಾರ್ಥಗಳು, ಬಟ್ಟೆ ಮತ್ತು ಅಕ್ಕಿಗಾಗಿ ಭಾರತಕ್ಕೆ ಬರುತ್ತಿದ್ದರು. ಮುಂಬೈ ಮತ್ತು ಕಲ್ಕತ್ತಾಗಳು ಅರಬರಿಗೆ ವಾಣಿಜ್ಯ ಮತ್ತು ಶಿಕ್ಷಣದ ಕೇಂದ್ರಗ ಳಾಗಿದ್ದವು. ಕೊಲ್ಲಿ ರಾಷ್ಟ್ರಗಳಲ್ಲಿ ತೈಲ ಪತ್ತೆಯಾಯಿತು. ಈ ಕಪ್ಪು ಚಿನ್ನ ಇಡೀ ಗಲ ಪ್ರಾಂತ್ಯದ ಹಣೆಬರಹವನ್ನೇ ಬದಲಾಯಿಸಿತು. ಬ್ರಿಟಿಷರ ಆಡಳಿತ ಕೊನೆಗೊಂಡು ಇವು ಸ್ವತಂತ್ರ ದೇಶಗಳಾಗಿ ಜಾಗತಿಕ ನಕ್ಷೆಯಲ್ಲಿ ಮೂಡಿದಾಗ, ಹಳೆಯ ವಲಸೆ ನಿಯಮಗಳು ಬದಲಾದವು. ಭಾರತೀಯ ರೂಪಾಯಿಯ ಚಲಾವಣೆ ನಿಂತಿತು.
ಬ್ರಿಟಿಷರು ತೊಲಗಿದರೂ ಅವರು ಬಿಟ್ಟ ನಕ್ಷೆಗಳು ಉಳಿದವು. ವಸಾಹತುಶಾಹಿ ಮುಗಿದರೂ ಅದರ ಭೌಗೋಳಿಕ ಪರಿಣಾಮಗಳು ಮುಗಿದಿಲ್ಲ. ಬ್ರಿಟಿಷರು ಮಾಡಿದ ಆತುರದ ಮತ್ತು ಬೇಜವಾಬ್ದಾರಿ ಯುತ ನಿರ್ಧಾರಕ್ಕೆ ಬೆಲೆ ತೆತ್ತದ್ದು ಭಾರತದ ಸಾಮಾನ್ಯ ಜನರು. ಈ ಗಾಯಗಳು ಇಂದಿಗೂ ಎರಡೂ ದೇಶಗಳ ನಡುವಿನ ರಾಜಕೀಯ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಜೀವಂತವಾಗಿವೆ.