ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thimmanna Bhagwat Column: ವೈದ್ಯ ವೃತ್ತಿಯ ನೀತಿ ಸಂಹಿತೆ ಕೇವಲ ಕಾಗದದ ತುಂಡಾ?

ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19 ಪಿಡುಗು ವೈದ್ಯಕೀಯ ಲೋಕಕ್ಕೆ ಪರೀಕ್ಷಾ ಕಾಲ. ಅನಿರೀಕ್ಷಿತ ವಾಗಿ ಬಂದೊದಗಿದ ಕಾಯಿಲೆಗೆ ಮದ್ದಿಲ್ಲವೆಂದು ತಿಳಿದಿದ್ದರೂ ವೈದ್ಯರನ್ನೇ ನಂಬಿ ಆಸ್ಪತ್ರೆಗೆ ಬರುವ ರೋಗಿಗಳು. ವಿಶ್ವ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ವೈದ್ಯಕೀಯ ಮಂಡಳಿ ಯಂಥವುಗಳೇ ಯಾವ ಚಿಕಿತ್ಸೆ ಸೂಚಿಸಬೇಕೆಂದು ತಿಳಿಯದೆ ಕೈಚೆಲ್ಲಿದ ಪರಿಸ್ಥಿತಿ. ಆದರೆ ಅನೇಕರು ಕರೋನಾಗೆ ಚಿಕಿತ್ಸೆ ನೀಡುತ್ತೇವೆ ಎಂದು ರಾಜಾರೋಷ ಘೋಷಿಸಿಯೇ ಬಿಟ್ಟರು

ಕಾನೂನ್ ಸೆನ್ಸ್

ತಿಮ್ಮಣ್ಣ ಭಾಗವತ್

‘ಡಾ.ಡೆತ್’ ಎಂಬ ವೆಬ್ ಸೀರಿಸ್ ಕುರಿತು ಅನೇಕರು ಕೇಳಿರಬಹುದು. ಉತ್ತರ ಟೆಕ್ಸಾಸ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಡಾ.ಕ್ರಿಸ್ಟೋಪರ್ ಡನ್ಟ್ಷ್ ( Christoper Duntsch) ಎಂಬ ಅರೆ-ಹುಚ್ಚ, ನಕಲಿ ನ್ಯುರೋ ಸರ್ಜನ್ ಎರಡು ವರ್ಷಗಳಲ್ಲಿ ಮಾಡಿದ ನರ ಶಸ್ತ್ರಚಿಕಿತ್ಸೆಗಳ ಪರಿಣಾಮವಾಗಿ 31 ಜನರು ಶಾಶ್ವತ ಅಂಗವಿಕಲರಾಗಿ ಇಬ್ಬರು ಸಾವನ್ನಪ್ಪಿದ ಘಟನೆಗಳ ಸುತ್ತ ಈ ಧಾರಾವಾಹಿ ಕೇಂದ್ರೀಕೃತ ವಾಗಿದೆ. ತುಂಬಾ ಆಕರ್ಷಕ ವ್ಯಕ್ತಿತ್ವ ಹೊಂದಿದ ಆತ ತಾನು ನಿಜಕ್ಕೂ ಸಮರ್ಥ ನ್ಯುರೋಸರ್ಜನ್ ಎಂದು ಆಸ್ಪತ್ರೆಯ ಅಽಕಾರಿಗಳನ್ನು ಮತ್ತು ಇತರ ವೈದ್ಯರನ್ನು, ನರ್ಸ್‌ಗಳನ್ನು ನಂಬಿಸಿದ ಬಗೆ ರೋಚಕ. ಆತನನ್ನು ಶಂಕಿಸಿದವರೂ ಆತನಿಗೆ ಏನೂ ಮಾಡಲಾಗದೆ ಅಸಹಾಯಕರಾದರು.

ನಿಜ ಘಟನೆಯನ್ನು ಆಧರಿಸಿದ ಈ ಧಾರಾವಾಹಿ, ವೈದ್ಯಕೀಯ ವ್ಯವಸ್ಥೆಯ ಕರಾಳ ಮುಖ ಮತ್ತು ಅಸ್ತವ್ಯಸ್ತತೆಗಳನ್ನು ತೆರೆದಿಡುವದರ ಜೊತೆಗೆ ಧನದಾಹೀ ವೈದ್ಯನಿಂದಾಗಿ ಜೀವ ಕಳೆದುಕೊಂಡ ಅಥವಾ ಅಂಗವಿಕಲರಾದ ಹತಭಾಗ್ಯ ರೋಗಿಗಳ ದಾರುಣ ವ್ಯಥೆಯನ್ನು ಬಿಂಬಿಸುತ್ತದೆ. ಆತನ ಲೈಸೆನ್ಸ್ ರದ್ದಾಗಿ ಆತ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಹೊತ್ತಿಗೆ ಸರಿಪಡಿಸಲಾಗದ ಅನಾಹುತಗಳ ಸರಮಾಲೆಯೇ ನಡೆದು ಹೋಗಿರುತ್ತದೆ.

ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19 ಪಿಡುಗು ವೈದ್ಯಕೀಯ ಲೋಕಕ್ಕೆ ಪರೀಕ್ಷಾ ಕಾಲ. ಅನಿರೀಕ್ಷಿತ ವಾಗಿ ಬಂದೊದಗಿದ ಕಾಯಿಲೆಗೆ ಮದ್ದಿಲ್ಲವೆಂದು ತಿಳಿದಿದ್ದರೂ ವೈದ್ಯರನ್ನೇ ನಂಬಿ ಆಸ್ಪತ್ರೆಗೆ ಬರುವ ರೋಗಿಗಳು. ವಿಶ್ವ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ವೈದ್ಯಕೀಯ ಮಂಡಳಿ ಯಂಥವುಗಳೇ ಯಾವ ಚಿಕಿತ್ಸೆ ಸೂಚಿಸಬೇಕೆಂದು ತಿಳಿಯದೆ ಕೈಚೆಲ್ಲಿದ ಪರಿಸ್ಥಿತಿ. ಆದರೆ ಅನೇಕರು ಕರೋನಾಗೆ ಚಿಕಿತ್ಸೆ ನೀಡುತ್ತೇವೆ ಎಂದು ರಾಜಾರೋಷ ಘೋಷಿಸಿಯೇ ಬಿಟ್ಟರು. ಅಧಿಕೃತ ಔಷಧವೇ ಇಲ್ಲದ ಕಾಯಿಲೆಯ ಚಿಕಿತ್ಸೆಗೆ ರೋಗಿಗಳನ್ನು ಅಡ್ಮಿಟ್ ಮಾಡಿಕೊಂಡು ಲಕ್ಷಗಟ್ಟಲೆ ಬಿಲ್ ಮಾಡಲಾಯಿತು.

ಇದನ್ನೂ ಓದಿ: Thimmanna Bhagwath Column: ಭೂಲ್ ಭುಲಯ್ಯ ಆದ ದೊಡ್ಡಾಸ್ಪತ್ರೆ: ಹೊರಬರುವುದೆಂತು?

ತರಾತುರಿಯಲ್ಲಿ ತರಲಾದ ವ್ಯಾಕ್ಸಿನ್‌ಗಳ ಕಂಪನಿಗಳಿಗೆ ಹಣದ ಸುರಿಮಳೆಯೇ ಆಯಿತು. ಪಿಪಿಇ ಕಿಟ್, ಟೆಸ್ಟ್-ಕಿಟ್, ಬಗೆ ಬಗೆಯ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು, ಹ್ಯಾಂಡ್ ವಾಶ್, ಹ್ಯಾಂಡ್ ಗ್ಲೌಸ್ ಇವೆಲ್ಲವೂ ಹಲವು ಪಟ್ಟು ದರದಲ್ಲಿ ಮಾರಾಟವಾದವು. ಎಲ್ಲಾ ಕಡೆ ಸ್ಟಾಕ್ ಖಾಲಿ. ಜ್ವರದ ಮಾತ್ರೆಗಳು, ಇಂಜೆಕ್ಶನ್‌ಗಳಂತೂ ಕಾಳಸಂತೆಯಲ್ಲಿ ಮಾರಾಟವಾದವು. ಔಷಧದ ಅಂಗಡಿಗಳಿಗೆ ಬಾಗಿಲು ಹಾಕಲು ಪುರಸೊತ್ತಿಲ್ಲ. ಆಕ್ಸಿಜೆನ್ ಸಿಲೆಂಡರ್ ತುಂಬಿಸುವ ಹೊಸ ಕಾರ್ಖಾನೆಗಳು ಪ್ರಾರಂಭವಾದವು. ಆಯುರ್ವೇದ, ಹೋಮಿಯೋಪತಿ ಎಲ್ಲರ ಔಷಧಗಳೂ ಮಾರಾಟವಾದವು. ಸರಕಾರ ನೀಡುವ ಅನುದಾನದ ಲಾಭ ಪಡೆಯಲು ನಕಲಿ ಕರೋನಾ ಸೆಂಟರ್‌ಗಳನ್ನು ಆರಂಭಿಸಿ, ನಕಲಿ ಚಿಕಿತ್ಸಾ ದಾಖಲೆಗಳನ್ನು ಸೃಷ್ಟಿಸ ಲಾಗಿತ್ತು ಎಂಬ ಆಪಾದನೆಯಿದೆ. ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದ ಪಿಡುಗೊಂದು ಬಿಲಿಯನ್‌ಗಟ್ಟಲೆ ವ್ಯವಹಾರಕ್ಕೆ ಕಾರಣವಾದದ್ದು ಇತಿಹಾಸ.

ಬಿಳಿ ಕಾಲರ್ ವಂಚನೆ (White Collar Fraud) ಎಂದು ಕರೆಯಲ್ಪಡುವ ವೈದ್ಯಕೀಯ ರಂಗದ ವಂಚನೆಯ ಜಾಲ ರೋಗಿಗಳನ್ನಲ್ಲದೆ ಪ್ರಾಮಾಣಿಕ ವೈದ್ಯರನ್ನೂ ಚಿಂತೆಗೀಡು ಮಾಡಿದೆ. ಕಿಕ್-ಬ್ಯಾಕ್, ಕಮಿಶನ್, ರೆಫರೆನ್ಸ್ ಫೀಯಂಥ ವ್ಯವಸ್ಥೆ ಎಲ್ಲಾ ಹಂತದಲ್ಲಿ ಕಾರ್ಯನಿರ್ವಹಿಸುತ್ತದೆ. ಅದು ಹೃದಯ ಕಾಯಿಲೆಗೆ ಸ್ಟೆಂಟ್ ಹಾಕುವದಿರಲಿ, ಮೊಣಕಾಲು ಮಂಡಿ ರಿಪ್ಲೇಸ್‌ಮೆಂಟ್ ಇರಲಿ ಅಥವಾ ಬೆನ್ನು ನೋವಿಗೆ ನರದ ಆಪರೇಶನ್ ಇರಲಿ. ಎಲ್ಲಾ ಕಡೆ ಒಂದೇ ಸೂತ್ರ- ಎಲ್ಲರಿಗೂ ಪಾಲು. ರೋಗಿಯ ಕಿಸೆಗೆ ಕತ್ತರಿ.

ಇದಕ್ಕೇ ಇರಬೇಕು ‘ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರಃ | ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿಚ|’ ಅಂದರೆ ಯಮ ಕೇವಲ ಪ್ರಾಣವನ್ನು ಅಪಹರಿಸಿದರೆ ಅವನ ಸಹೋದರ ನಾದ ವೈದ್ಯನು ಪ್ರಾಣ ಮತ್ತು ಹಣ ಎರಡನ್ನೂ ಅಪಹರಿಸುತ್ತಾರೆ ಎಂಬ ಸುಭಾಷಿತ ಹುಟ್ಟಿಕೊಂಡದ್ದು. ಇದು ಅನ್ವಯವಾಗದ ದಕ್ಷ, ಪ್ರಾಮಾಣಿಕ, ಸೇವಾ ನಿರತ ವೈದ್ಯರಿಗೆ ನಮಸ್ತುಭ್ಯಂ ಎನ್ನಲೇ ಬೇಕು.

62

ಭಾರತದಲ್ಲಿ ವೈದ್ಯಕೀಯ ರಂಗದ ಕಾರ್ಯಗಳನ್ನು ನಿಯಂತ್ರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (National Medical Council) ಇದೆ. ಇನ್ನು ಔಷಧ ತಯಾರಿಕೆಯನ್ನು ಪರಿಶೀಲಿಸಿ ಅವುಗಳ ಸುರಕ್ಷತೆ ಖಾತರಿ ಪಡಿಸಿ, ದರ ನಿಗದಿಯನ್ನೂ ನಿಯಂತ್ರಿಸಲು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ, ರಾಷ್ಟ್ರೀಯ ವೈದ್ಯಕೀಯ ಆಯೋಗ, ರಾಷ್ಟ್ರೀಯ ಫಾರ್ಮಾಸ್ಯು ಟಿಕಲ್ ದರ ನಿಗದಿ ಪ್ರಾಧಿಕಾರ ಮುಂತಾದ ಸಂಸ್ಥೆಗಳಿವೆ. ಇವುಗಳಲ್ಲದೆ ರಾಜ್ಯ ಮಟ್ಟದಲ್ಲಿ ಕೂಡಾ ಲೈಸೆನ್ಸ್ ನೀಡುವ ಸ್ಟೇಟ್ ಲೈಸೆನ್ಸಿಂಗ್ ಪ್ರಾಧಿಕಾರಗಳಿವೆ.

ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಆರೋಗ್ಯ ವಿಜ್ಞಾನದ ಡೈರೆಕ್ಟರ್ ಜನರಲ್‌ರವರ ಕಚೇರಿ ಇಡೀ ದೇಶದ ಅರೋಗ್ಯ ವ್ಯವಸ್ಥೆಯನ್ನು ನಿಯಂತ್ರಿಸುವ ಹೊಣೆ ಹೊತ್ತಿದೆ. 2010ರಲ್ಲಿ Clinical Establishments (Registration and Regulation) Act ನ್ನು ಜಾರಿ ಮಾಡಲಾಯಿತು.

ಕರ್ನಾಟಕದಲ್ಲಿ 2007ರಲ್ಲೇ The Karnataka private medical establishments act ನ್ನು ಜಾರಿ ಗೊಳಿಸಲಾಗಿತ್ತು. ಈ ಕಾಯಿದೆಗಳು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ನರ್ಸಿಂಗ್ ಹೋಮ್, ಲ್ಯಾಬೊ ರೇಟರಿ, ಸ್ಕ್ಯಾನಿಂಗ್ ಸೆಂಟರ್, ಎಕ್ಸ್‌ರೇ, ಫಿಸಿಯೋ ಥೆರಪಿ ಸೆಂಟರ್, ಹಲ್ಲಿನ ಆಸ್ಪತ್ರೆ ಮುಂತಾದ ಎಲ್ಲ ಬಗೆಯ ವೈದ್ಯಕೀಯ ವ್ಯವಸ್ಥೆಗಳಿಗೆ ಅನ್ವಯವಾಗುತ್ತವೆ. ಅಂಥ ಎಲ್ಲ ಕಾರ್ಯಸ್ಥಾನಗಳಲ್ಲಿ ಅಗತ್ಯ ಸೇವಾ ಗುಣಮಟ್ಟ, ಸ್ವಚ್ಛತೆ, ಅಗತ್ಯ ವಿದ್ಯಾರ್ಹತೆ ಇರುವ ವೈದ್ಯರು ಮತ್ತು ಸಿಬ್ಬಂದಿ, ಉಪಕರಣಗಳ ಕಾರ್ಯಕ್ಷಮತೆ, ಸೇವಾದಕ್ಷತೆಯಂಥ ಎಲ್ಲ ವಿಷಯಗಳನ್ನು ಪರಿಶೀಲಿಸಿಯೇ ಲೈಸೆನ್ಸ್ ನೀಡಲಾಗುತ್ತದೆ ಮತ್ತು ಲೈಸೆನ್ಸ್ ನವೀಕರಿಸುವಾಗಲೂ ಇವೆಲ್ಲವನ್ನು ಪರಿಶೀಲಿಸ ಲಾಗುತ್ತದೆ.

ಆಸ್ಪತ್ರೆಗಳು ಹೊಂದಿರಬೇಕಾದ ವಿವಿಧ ಗುಣಮಟ್ಟಗಳನ್ನು ನಿಗದಿಪಡಿಸಲು ಮತ್ತು ಅಂಥ ಗುಣಮಟ್ಟವನ್ನು ಹೊಂದಿರುವದನ್ನು ಪರಿಶೀಲಿಸುವ ಸಲುವಾಗಿ ಪರಿಣಿತರ ಸಮಿತಿ ಇದೆ. ವಿವಿಧ ರೋಗಗಳಿಗೆ ಅನುಸರಿಸಬೇಕಾದ ಚಿಕಿತ್ಸಾ ವಿಧಾನ, ಅಗತ್ಯವಿರುವ ಟೆಸ್ಟ್‌ಗಳು, ಅಂಥ ಎಲ್ಲಾ ಟೆಸ್ಟ್, ಚಿಕಿತ್ಸಾ ವಿಧಾನ ಮತ್ತು ಶಸ್ತ್ರ ಚಿಕಿತ್ಸೆಗಳಿಗೆ ವಿಧಿಸಬೇಕಾದ ಶುಲ್ಕ ಮುಂತಾದವುಗಳನ್ನು ನಿಗದಿ ಪಡಿಸುವ ಅಧಿಕಾರ ಆ ಸಮಿತಿಗೆ ಇದೆ. ಅಲ್ಲದೆ ವಿವಿಧ ರೋಗ ಪತ್ತೆ ಪ್ರಕ್ರಿಯೆ, ಚಿಕಿತ್ಸೆ ಮತ್ತು ವಿಧಾನಗಳಿಗೆ ತಾವು ವಿಧಿಸುವ ಶುಲ್ಕದ ವಿವರಗಳನ್ನು ಎಲ್ಲಾ ಖಾಸಗೀ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಕಾಣುವ ಸ್ಥಳದಲ್ಲಿ ನೋಟೀಸ್ ಬೋರ್ಡಿನಲ್ಲಿ ಪ್ರಕಟಿಸಬೇಕು ಮತ್ತು ಅಂಥ ವಿವರಗಳನ್ನು ಸರಕಾರ ಸೂಚಿಸಿದ ವೆಬ್ ಸೈಟ್ ಹಾಗೂ ತಮ್ಮದೇ ವೆಬ್ ಸೈಟ್‌ನಲ್ಲಿ ಕೂಡಾ ಪ್ರಚುರ ಪಡಿಸ ಬೇಕೆಂಬ ನಿಯಮವಿದೆ.

ಅಲ್ಲದೆ ರೋಗಿಗಳಿಗೆ ನೀಡುವ ಬಿಲ್‌ನಲ್ಲಿ ಅಂಥ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ನೋಟೀಸ್ ಬೋರ್ಡಿನಲ್ಲಿ ಪ್ರಕಟಿಸಿದ ದರಗಳಿಗಿಂತ ಹೆಚ್ಚಿನ ಹಣವನ್ನು ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಪಡೆಯು ವಂತಿಲ್ಲ. ಪರಿಣಿತರ ಸಮಿತಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಟೆಸ್ಟ್‌ಗಳು, ಚಿಕಿತ್ಸೆ ಅಥವಾ ವಿಧಾನಗಳನ್ನು ಮಾಡುವದಿದ್ದಲ್ಲಿ ಅದರ ಅಗತ್ಯ ಮತ್ತು ವೆಚ್ಚಗಳ ಕುರಿತು ರೋಗಿಗೆ ಅಥವಾ ಅವರ ಸಂಬಂಧಿಕರಿಗೆ ಸರಿಯಾಗಿ ತಿಳಿಹೇಳಿ ಅವರ ಒಪ್ಪಿಗೆ ಪಡೆದ ನಂತರವೇ ಅಂಥ ಚಿಕಿತ್ಸೆಗಳನ್ನು ನಡೆಸಬೇಕು.

ಸರಕಾರೀ ಆರೋಗ್ಯ ಯೋಜನೆಗಳ ಸೌಲಭ್ಯಗಳಿಗೆ ಅರ್ಹರಾಗುವ ರೋಗಿಗಳಿಗೆ ಆಯಾ ಯೋಜನೆ ಯಂತೆ ಸರಕಾರ ದಿಂದ ಲಭಿಸುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಮಾತ್ರ ರೋಗಿಗಳಿಂದ ಪಡೆಯಬೇಕು ಮತ್ತು ಅಂಥ ರೋಗಿಗಳಿಗೆ ಸರಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಮೊತ್ತ ವನ್ನು ಪಡೆಯುವಂತಿಲ್ಲ.

ಆಸ್ಪತ್ರೆ ಮತ್ತು ಲ್ಯಾಬೊರೇಟರಿಯಂಥ ವೈದ್ಯಕೀಯ ಕೇಂದ್ರಗಳ ಕುರಿತು ರೋಗಿಗಳು ಅಥವಾ ಇತರರು ದೂರು ಸಲ್ಲಿಸಲು ಪ್ರತೀ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಜಿಲ್ಲಾ ಆರೋಗ್ಯ ಅಧಿಕಾರಿ ಯನ್ನೂ ಒಳಗೊಂಡ ಕುಂದುಕೊರತೆ ಪರಿಹಾರ ಸಮಿತಿಗಳನ್ನು ರಚಿಸಲಾಗಿದೆ. ಯಾವದೇ ದೂರು ಬಂದಲ್ಲಿ ಆ ಕುರಿತು ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡಲು ಸಮಿತಿಗೆ ಅಧಿಕಾರವಿದೆ.

ಈ ಕಾಯಿದೆಗೆ 2018ರಲ್ಲಿ ಮಾಡಲಾದ ಮಹತ್ವದ ತಿದ್ದುಪಡಿಯೆಂದರೆ ಖಾಸಗಿ ಆಸ್ಪತ್ರೆಗಳಿಗೆ ಎಮರ್ಜೆನ್ಸಿ ಚಿಕಿತ್ಸೆಗಾಗಿ ರೋಗಿಯನ್ನು ಕರೆತಂದಾಗ ಅವರಿಂದ ಮುಂಗಡ ಹಣ ಪಡೆಯದೆ ಅಂಥ ಚಿಕಿತ್ಸೆಯನ್ನು ನೀಡಬೇಕು ಮತ್ತು ರೋಗಿ ತೀರಿಕೊಂಡರೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ನಿರಾಕರಿಸಬಾರದು ಎಂಬ ನಿಯಮಗಳನ್ನು ತರಲಾಗಿದೆ. ರೋಗಿಗಳಿಗೆ ಚಿಕಿತ್ಸೆಯನ್ನು ಪಡೆಯುವ ಹಕ್ಕು, ಚಿಕಿತ್ಸೆಯ ಪೂರ್ತಿ ವಿವರ ಪಡೆಯುವ ಹಕ್ಕು, ಇನ್ನೊಬ್ಬ ವೈದ್ಯರ 2ನೇ ಅಭಿಪ್ರಾಯ ಪಡೆಯುವ ಹಕ್ಕು, ಸರಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ನೀಡದಿರುವ ಹಕ್ಕು ಕೂಡಾ ಸೇರಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗವು ದೇಶದಲ್ಲಿ ವೈದ್ಯ ವೃತ್ತಿಯಲ್ಲಿರುವವರು ಅನುಸರಿಸಬೇಕಾದ ನೀತಿ ಸಂಹಿತೆಯನ್ನು (Code of medical Ethics Regulations) 2002ರಲ್ಲಿಯೇ ಬಿಡುಗಡೆ ಮಾಡಿದೆ. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಈ ನೀತಿ ಸಂಹಿತೆಯು ವೈದ್ಯ ವೃತ್ತಿಯಲ್ಲಿ ಸೇವೆಯೇ ಪ್ರಥಮ ಆದ್ಯತೆಯಾಗಿದ್ದು ಹಣ ಗಳಿಕೆಗಾಗಿ ವೃತ್ತಿ ಧರ್ಮವನ್ನು ಬಿಡಬಾರದು ಎಂಬ ಸ್ಪಷ್ಟ ಸಂದೇಶ ನೀಡುತ್ತದೆ.

ಆದೇಶದ ರೂಪದಲ್ಲಿರುವ ಈ ನಿಯಮಾವಳಿಗಳು ವೈದ್ಯಕೀಯ ವೃತ್ತಿಯಲ್ಲಿರುವವರು ಪಾಲಿಸ ಬೇಕಾದ ನಿಯಮಗಳು, ಇರಿಸಬೇಕಾದ ದಾಖಲೆಗಳು, ರೋಗಿಗಳ ಕುರಿತು ಅವರು ತೋರಿಸಬೇಕಾದ ಕಾಳಜಿ ಹಾಗೂ ಕರ್ತವ್ಯ, ವೈದ್ಯರು ಪಾಲಿಸಬೇಕಾದ ವೈಯಕ್ತಿಕ ನಡವಳಿಕೆಗಳು ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಸಕಾರಣವಿಲ್ಲದೆ ಯಾವದೇ ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸು ವದನ್ನು ಇದು ನಿಷೇಧಿಸುತ್ತದೆ. ಆದರೆ ಯಾವದೇ ಚಿಕಿತ್ಸೆ ನೀಡುವದು ತನ್ನ ಜ್ಞಾನ ಮತ್ತು ಅನುಭವಕ್ಕೆ ಮೀರಿದ್ದಾದರೆ ಅಂಥ ಚಿಕಿತ್ಸೆಯನ್ನು ನೀಡಬಾರದು ಎಂದಿದೆ. ಅಂಥ ಸಂದರ್ಭ ದಲ್ಲಿಯೂ ರೋಗಿಯ ಕುರಿತಾದ ಕಾಳಜಿ, ತೆಗೆದುಕೊಳ್ಳಬೇಕಾದ ಕರ್ತವ್ಯವನ್ನು ಹೇಳಲಾಗಿದೆ.

ಇನ್ನು ಔಷಧಗಳ ತಯಾರಿಕೆ, ಆಮದು ಮತ್ತು ಮಾರಾಟಗಳನ್ನು ನಿಯಂತ್ರಿಸುವ The drugs and cosmetics Act- 1940, Drugs (Control) Act- 1950 ಯಂಥ ಕಾಯಿದೆಗಳು ನಿಷೇಧಿತ ಔಷಧಗಳ ಆಮದು ಮತ್ತು ಮಾರಾಟ, ಔಷಧಗಳಿಗೆ ಬೇಕಾಬಿಟ್ಟಿ ದರ ನಿಗದಿ ಮತ್ತು ನಕಲಿ ಔಷಧಗಳ ಮಾರಾಟ ದಂಥ ಅಕ್ರಮಗಳಿಗೆ ತಡೆ ಒಡ್ಡಲು ರೂಪಿತವಾಗಿವೆ.

ಆದರೆ ಇಂಥ ಕಾನೂನುಗಳು ಇವೆ ಎಂಬುದೇ ಅನೇಕರಿಗೆ ತಿಳಿದಿರುವದಿಲ್ಲ ಮತ್ತು ತಿಳಿದರೂ ವ್ಯವಸ್ಥೆಯ ವಿರುದ್ಧ ಹೋರಾಡುವ ಸಾಹಸಕ್ಕೆ ಕೈಹಾಕುವದಿಲ್ಲ. ಇಷ್ಟೆಲ್ಲ ಕಾನೂನುಗಳು, ನಿಯಂತ್ರಣ ಮತ್ತು ವಿಚಕ್ಷಣ ವ್ಯವಸ್ಥೆ ಇದ್ದರೂ ಹಣದಾಹದ ಕಾರಣಕ್ಕೆ ಕೆಲವು ವ್ಯಕ್ತಿ ಹಾಗೂ ಸಂಸ್ಥೆಗಳು ರೋಗಿಗಳಿಗೆ ಹಾಗೂ ತನ್ಮೂಲಕ ಸಮಾಜಕ್ಕೆ ಮೋಸ, ವಂಚನೆ ಮಾಡಿದ ಘಟನೆಗಳು ವರದಿಯಾಗಿವೆ. ಕಾನೂನಿನ ಗೋಡೆಗಳು ಎಲ್ಲಿ ದುರ್ಬಲವಾಗಿವೆ, ಕಾನೂನು ರಕ್ಷಕರನ್ನು ಹೇಗೆ ಯಾಮಾರಿಸಬೇಕು ಅಥವಾ ಒಲಿಸಿಕೊಳ್ಳಬೇಕು ಎಂಬುದನ್ನು ಅರಿತಿರುವವರಿಗೆ ಕಾನೂನುಗಳು ಕೇವಲ ಕಾಗದದ ಮೇಲಿನ ಪ್ರಿಂಟ್ ಅಷ್ಟೆ ಎಂಬುದು ತಿಳಿದಿರುತ್ತದೆ.