ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thimmanna Bhagwath Column: ಭೂಲ್ ಭುಲಯ್ಯ ಆದ ದೊಡ್ಡಾಸ್ಪತ್ರೆ: ಹೊರಬರುವುದೆಂತು?

ಉತ್ತರ ಪ್ರದೇಶದ ಲಖನೌ ಹತ್ತಿರ ಇಮಾಮಬಾರ ಕಟ್ಟಡದ ಮಹಡಿ ಅಥವಾ ಸೀಲಿಂಗ್ ಭಾಗವನ್ನು ಭೂಲ್ ಬುಲಯ್ಯ ಎಂದು ಕರೆಯುತ್ತಾರೆ. ಅಲ್ಲಿ ಒಳಹೊಕ್ಕರೆ ಹೊರಗೆ ಬರುವ ದಾರಿಯೇ ತಿಳಿಯು ವದಿಲ್ಲ. ಮಾರ್ಗದರ್ಶಕರಿಲ್ಲದಿದ್ದರೆ ಅಲ್ಲಿಯೇ ಗಂಟೆಗಟ್ಟಲೆ ತಿರುಗುತ್ತಿರಬೇಕಾದೀತು. ಇತ್ತೀಚಿಗೆ ನನ್ನ ತಾಯಿಯ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಯೊಂದಕ್ಕೆ ಹೋದಾಗ ನನಗೆ ಭೂಲ್ ಬುಲಯ್ಯ ನೆನಪಾಯಿತು.

ಭೂಲ್ ಭುಲಯ್ಯ ಆದ ದೊಡ್ಡಾಸ್ಪತ್ರೆ: ಹೊರಬರುವುದೆಂತು?

-

Profile
Ashok Nayak Jul 20, 2026 6:00 AM

ಕಾನೂನು ಸೆನ್ಸ್

ತಿಮ್ಮಣ್ಣ ಭಾಗವತ್

ಉತ್ತರ ಪ್ರದೇಶದ ಲಖನೌ ಹತ್ತಿರ ಇಮಾಮಬಾರ ಕಟ್ಟಡದ ಮಹಡಿ ಅಥವಾ ಸೀಲಿಂಗ್ ಭಾಗವನ್ನು ಭೂಲ್ ಬುಲಯ್ಯ ಎಂದು ಕರೆಯುತ್ತಾರೆ. ಅಲ್ಲಿ ಒಳಹೊಕ್ಕರೆ ಹೊರಗೆ ಬರುವ ದಾರಿಯೇ ತಿಳಿಯು ವದಿಲ್ಲ. ಮಾರ್ಗದರ್ಶಕರಿಲ್ಲದಿದ್ದರೆ ಅಲ್ಲಿಯೇ ಗಂಟೆಗಟ್ಟಲೆ ತಿರುಗುತ್ತಿರಬೇಕಾದೀತು. ಇತ್ತೀಚಿಗೆ ನನ್ನ ತಾಯಿಯ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಯೊಂದಕ್ಕೆ ಹೋದಾಗ ನನಗೆ ಭೂಲ್ ಬುಲಯ್ಯ ನೆನಪಾಯಿತು.

ವಾಹನ ಬಾಡಿಗೆಗೆ ಪಡೆದು ರೋಗಿಯನ್ನು ಕರೆದೊಯ್ಯುವದೇ ದೊಡ್ಡ ಸಂಗತಿ. ಅಲ್ಲಿ ಹೋದ ಮೇಲೆ ಆ ಭೂತ ಬಂಗಲೆಗಳಂಥ ಕಟ್ಟಡಗಳನ್ನು ನೋಡಿಯೇ ಜೀವ ಅರ್ಧ ಹೋಗಿರುತ್ತದೆ. ವೈದ್ಯ ರನ್ನು ಎಲ್ಲಿ ಕಾಣಬೇಕೆಂದು ಬಾಗಿಲಲ್ಲಿ ನಿಂತ ಒಬ್ಬಳನ್ನು ಕೇಳಿದೆ. ರಿಜಿಸ್ಟ್ರೇಷನ್ ಮಾಡಿಸಿ ಎಂಬ ಅಪ್ಪಣೆ ಆಯ್ತು. ತಾಯಿಯನ್ನು ಬೆಂಚಿನ ಮೇಲೆ ಕೂಡ್ರಿಸಿ ಉದ್ದ ಕ್ಯೂದಲ್ಲಿ ನಿಂತೆ. ಅರ್ಧ ಗಂಟೆಗೆ ನನ್ನ ಪಾಳಿ ಬಂದಾಗ ಆ ಲಲನಾಮಣಿ ತಲೆ ಎತ್ತಿ ಇಲ್ಲಿ ಹಳೆ ಪೇಷಂಟ್ ಫೈಲ್ ರಿನಿವಲ್ ಮಾತ್ರ. ಹೊಸ ರಿಜಿಸ್ಟ್ರೇಷನ್‌ಗೆ ಪಕ್ಕದ ಕೌಂಟರ್‌ಗೆ ಹೋಗಿ ಎಂದಳು.

ಪುನಃ ಇನ್ನೂ ಉದ್ದದ ಕ್ಯೂ. ಕೌಂಟರ್ ಹತ್ತಿರ ಬಂದಾಗ, ಅಲ್ಲಿ ಹೆಲ್ಪ್ ಡೆ‌ಸ್ಕ್ ನಲ್ಲಿ ಒಂದು ಚೀಟಿ ಬರೆಸಿಕೊಂಡು ಇಲ್ಲಿ ಬರಬೇಕು ಅಂದರು. ಅಲ್ಲಿ ಹೋದರೆ ಮತ್ತೊಂದು ಕ್ಯೂ. ಅಲ್ಲಿದ್ದವ ಫೋನ್‌ ನಲ್ಲಿ ಮಾತನಾಡುತ್ತಲೇ ನನಗೆ ಒಂದು ಫಾರಂ ಕೊಟ್ಟು ಆಧಾರ್ ಕಾರ್ಡ್ ಜೆರಾಕ್ಸ್ ಜೊತೆಗೆ ಇದನ್ನು ತುಂಬಿಸಿಕೊಡಿ ಅಂದ. ಚಿಕಿತ್ಸೆ ಮಾಡಿಸಲೂ ಆಧಾರ್ ಬೇಕೆಂದು ಊಹಿಸಿರಲೂ ಇಲ್ಲ. ಯಾರೋ ಸ್ನೇಹಿತರನ್ನು ಕೇಳಿ ಇ-ಆಧಾರ್ ಡೌನ್‌ಲೋಡ್ ಮಾಡಿ ಅದನ್ನೇ ಪ್ರಿಂಟ್ ತೆಗೆಸಿದೆ. ಫಾರಂ ತುಂಬಿಕೊಂಡು ಪುನಃ ಕ್ಯೂನಲ್ಲಿ ನಿಂತು ರಿಜಿಸ್ಟ್ರೇಷನ್ ಮುಗಿಯುವ ಹೊತ್ತಿಗೆ ಮಧ್ಯಾಹ್ನ. ನಮಗೆ ಬೇಕಾದ ವೈದ್ಯರಿರಲಿಲ್ಲ. ಬೇರೊಬ್ಬರಿಗೆ ಬರೆದರು.

ತಾಯಿಗೆ ಹಸಿವೆಯಾಗಿತ್ತು. ತಿಂಡಿ ತಂದರೆ ಅಲ್ಲಿ ತಿನ್ನಂಗಿಲ್ಲ. ಅವಳನ್ನೂ ಕರೆದುಕೊಂಡು ಹೊರಗೆ ಹೋಗಿ ತಿನ್ನಿಸಿದೆ. ನಂತರ ಓಪಿಡಿಗೆ ಹೋದರೆ ರಶ್. ಪೇಷಂಟ್ ಕೂಡ್ರಲೂ ಜಾಗ ಇಲ್ಲ. ನಂತ ಒಬ್ಬ ಪಿಜಿ ಬಂದಳು. ಅವಳು ಉತ್ತರ ಭಾರತದವಳು. ಕನ್ನಡ ಬರೋದಿಲ್ಲ. ಪೇಷಂಟ್‌ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವದಿಲ್ಲ. ಅವರು ಕೇಳಿದ್ದನ್ನು ನಾನು ಕನ್ನಡಕ್ಕೆ ಅನುವಾದಿಸಿ ಇವಳಿಂದ ಉತ್ತರ ಪಡೆದು ಹೇಳಿ ಮುಗಿಸಿದೆ. ಮುಖ್ಯ ವೈದ್ಯರ ಕೋಣೆಗೆ ಹೋದರೆ ಅವರು ನಮ್ಮ ಹತ್ತಿರ ಮಾತೇ ಆಡುವದಿಲ್ಲ. ಎಲ್ಲಾ ಈ ಪಿಜಿಯೇ ಹೇಳುತ್ತಾಳೆ.

ಇದನ್ನೂ ಓದಿ: Thimmanna Bhagwat Column: ಪೌರತ್ವ ಪರೀಕ್ಷೆಯಲ್ಲಿ ಪಾಸ್‌ಪೋರ್ಟ್ ಪಾಸ್ ಆಗಲ್ಲ ಏಕೆ?

ರೋಗಿ ಏನನ್ನೋ ಹೇಳಹೊರಟರೆ ಕೇಳುವವರೇ ಇಲ್ಲ. ಅಂತೂ ಡಾಕ್ಟರ್ ನಮ್ಮನ್ನು ನೋಡಿ ಇನ್ಶೂರೆನ್ಸ್ ಇದೆಯಾ ಎಂದು ಕೇಳಿದರು. ನಾನು ಇದೆ ಅಂದೆ. ಆಗ ಡಾಕ್ಟರ್ ಮುಖ ಸ್ವಲ್ಪ ಪ್ರಸನ್ನ ವದನ ಆಯಿತು. ಅಡ್ಮಿಟ್ ಆಗಬೇಕಾಗುತ್ತದೆ ಎಂದರು. ನಾವು ಮುಖ ಮುಖ ನೋಡಿಕೊಂಡೆವು. ಬೇರೆ ಆಯ್ಕೆ ಇರಲಿಲ್ಲ. ಆಯ್ತು ಅಂದೆ. ಹೊರಗೆ ಬಂದರೆ ಕೌಂಟರ್‌ನಲ್ಲಿದ್ದ ಅದೇ ಸಿಸ್ಟರ್ ಉದ್ದದ ಫಾರಂನಲ್ಲಿ ಏನೇನೋ ಬರೆದು ಇದನ್ನು ಅಡ್ಮಿಶನ್ ಕೌಂಟರ್‌ನಲ್ಲಿ ಕೊಟ್ಟು ಅಡ್ಮಿಟ್ ಮಾಡಿಸಿ ಎಂದಳು. ನಾನು ಪೇಷಂಟ್ ಕರೆದುಕೊಂಡು ಪುನಃ ಅದೇ ಕೌಂಟರಿಗೆ ಬಂದೆ.

ಬರುವಾಗ ಕೌಂಟರ್ ಕ್ಲೋಸ್. ಹೊರಗೆ ಹೋಗಿ ಊಟ ಮಾಡಿ ಬರುವಷ್ಟರಲ್ಲಿ ಪುನಃ ಕ್ಯೂ. ಅಡ್ಮಿಶನ್ ಕೌಂಟರ್‌ನಲ್ಲಿ ಇರುವ ಸಿಬ್ಬಂದಿ ಇನ್ನೂ ಸೀರಿಯಸ್. ಬೇರೆ ಯಾವ ವಾರ್ಡ್‌ನಲ್ಲೂ ಖಾಲಿ ಇಲ್ಲ. ಎಸಿ ಸ್ಪೆಷಲ್ ರೂಮ್ ಮಾತ್ರ ಇದೆ. ವಾರ್ಡ್ ಚಾರ್ಜ್ ದಿನಕ್ಕೆ 6500 ರೂಪಾಯಿ. ಎಲ್ಲಾ ಟೆಸ್ಟ್ ಮತ್ತು ಟ್ರೀಟ್ಮೆಂಟ್‌ಗಳಿಗೆ ಹೆಚ್ಚಿನ ಚಾರ್ಜ್ ಆಗುತ್ತದೆ ಅಂದಳು. ತುಂಬಾ ದುಬಾರಿ ಆಗುತ್ತದೆ. ಇನ್ಶೂರೆನ್ಸ್ ಕವರೇಜ್‌ಗಿಂತ ಜಾಸ್ತಿ ಆಗುತ್ತದೆ ಎಂದೆ ದೈನೇಸಿ ಮುಖ ಮಾಡಿಕೊಂಡು. ಆಯ್ತು ಒಂದು ಸೆಮಿ ಸ್ಪೆಷಲ್ ಇದೆ ಅದನ್ನೇ ಕೊಡುತ್ತೇನೆ ಎಂದಳು.

ನೀವು ಇನ್ಶೂರೆ ಕೌಂಟರಿಗೆ ಹೋಗಿ ಸಹಿ ಮಾಡಿಸಿಕೊಂಡು ಬನ್ನಿ ಅಂತ ಆದೇಶ ಬಂತು. ಫೈಲ್ ತಗೊಂಡು ಇನ್ಶೂರೆ ಕೌಂಟರಿಗೆ ಹೋದೆ. ಅಲ್ಲಿದ್ದ ಮಹಾಶಯ ಪುನಃ ಒಂದು ಫಾರಂ ತುಂಬಿಸಲು ಹೇಳಿದ. ಆಧಾರ್ ಜೆರಾಕ್ಸ್ ಕೇಳಿ ಪಡೆದು ಸೀಲ್ ಹಾಕಿ ಕೊಟ್ಟ. ಪುನಃ ಅಡ್ಮಿಶನ್ ಕೌಂಟರಿಗೆ ಬಂದು ಕ್ಯೂನಲ್ಲಿ ನಿಂತು ಫೈಲ್ ಪಡೆಯುವಾಗ 4.30. ಆಗ ಬಂತು ನೋಡಿ ಪೇಷಂಟಿಗೆ ವೀಲ್ ಚೇರ್. ಅವಳನ್ನು ಕರೆದುಕೊಂಡು ಇನ್ನೊಂದು ಕಟ್ಟಡಕ್ಕೆ ಹೋದೆವು. ವಾರ್ಡಿನ ಕೌಂಟರಲ್ಲಿ ಫೈಲ್ ಕೊಟ್ಟು ರೂಮ್ ಕೇಳಿದೆ.

62 ok

ಪೇಷಂಟ್ ಪಾರ್ಟಿ ಯಾರು ಎಂದಳು ಆ ಮಹಾತಾಯಿ. ನಾನೇ ಎಂದರೆ ಸೆಮಿ ಸ್ಪೆಷಲ್ ಫೀಮೇಲ್ ವಾರ್ಡ್‌ನಲ್ಲಿ ಜೊತೆಗೆ ಗಂಡಸರು ಇರುವಂತಿಲ್ಲ ಎನ್ನಬೇಕೆ. ಅಷ್ಟು ಹೊತ್ತು ತಡೆದುಕೊಂಡಿದ್ದ ಕೋಪ ಒಮ್ಮೆಲೇ ಸ್ಫೋಟವಾಯ್ತು. ನೀವು ಯಾಕೆ ಇದನ್ನು ಮೊದಲೇ ಹೇಳುವದಿಲ್ಲ. ನಾನು ಒಬ್ಬನೇ ಮಗ ಇರುವದು ಅವಳಿಗೆ. ಯಾರನ್ನು ಕರೆತರಲಿ ಎಂದು ಕೇಳಿದೆ. ಪುಣ್ಯಕ್ಕೆ ಆ ಸೆಮಿ ಸ್ಪೆಷಲ್ ರೂಮಿನಲ್ಲಿ ಫೀಮೇಲ್ ಪೇಷಂಟ್ ಜೊತೆ ಅವರ ಮಗನೇ ಇದ್ದರು. ಹೊಂದಾಣಿಕೆ ಮಾಡಿಕೊಂಡು ಇರುತ್ತೇವೆ ಅಂತ ಒಪ್ಪಿಸುವಾಗ ಕಲಿತ ವಿದ್ಯೆಯೆ ಖರ್ಚಾಯಿತು. ಅಂತೂ ರೂಮಿಗೆ ಬಂದು ತಾಯಿಯನ್ನು ಮಲಗಿಸುವವರೆಗೆ ಅವಳಿಗೆ ಕಾಯಿಲೆ ಇರುವದೇ ಮರೆತುಹೋಗಿತ್ತು. ಪಾಪ ಎಷ್ಟು ತ್ರಾಸ್ ಆಯಿತೋ. ಅವಳು ಸಹಿಸಿಕೊಂಡು ಏನೂ ಹೇಳದೆ ಸುಮ್ಮನಿದ್ದಳು.

ನಾನು ವಾಶ್ ರೂಮಿಗೆ ಹೋಗಿ ಬರುವಷ್ಟರಲ್ಲಿ ಇನ್ಶೂರೆನ್ಸ್ ಕೌಂಟರ್‌ನಿಂದ ಬುಲಾವ್. ನಿಮ್ಮದು ಕ್ಯಾಶಲೆಸ್ ಅಪ್ರೂವಲ್ ಬಂದಿಲ್ಲ. ನೀವು ಈಗ ಪೇ ಮಾಡಿ ಅಂದರು. ನಾನು ನಮ್ಮ ಇನ್ಶೂರೆನ್ಸ್ ವಿಭಾಗಕ್ಕೆ ಫೋನ್ ಮಾಡಿ ವಿನಂತಿಸಿದೆ. ಈಗ ಎಲ್ಲರೂ ಹೋಗಿಯಾಯ್ತು ನಾಳೆ ವಿಚಾರಿಸಿ ಎಂದರು. ನಿರ್ವಾಹವಿಲ್ಲದೆ ಮುಂಗಡ ಹಣ ಪಾವತಿಸಿದೆ.

ರಾತ್ರಿ ಉಳಿಯಲು ಬೇಕಾದ ಬಟ್ಟೆ, ಪೇಸ್ಟ್, ಬ್ರಷ್ ತರಲಿಲ್ಲ ಎಂಬುದು ನೆನಪಾಯ್ತು. ಹೊರಗೆ ಹೋಗೋಣವೆಂದರೆ ಡಾಕ್ಟರ್ ರೌಂಡ್ಸ್ʼಗೆ ಬರುತ್ತಾರೆ. ಅವರು ಬಂದಾಗ ನಾನು ಇಲ್ಲದಿದ್ದರೆ ಏನು ಹೇಳುತ್ತಾರೋ ಎಂಬ ಭಯ. ಸಿಸ್ಟರ್ ಕೇಳಿದರೆ ಅವರಿಗೆ ಅದೆಲ್ಲ ಸಂಬಂಧವೇ ಇಲ್ಲ. ತಾಯಿಗೆ ಫೋನ್ ಮಾಡಲೂ ತಿಳಿಯುವದಿಲ್ಲ. ಪಕ್ಕದ ಬೆಡ್‌ನ ಪೇಷಂಟ್ ಪಾರ್ಟಿ ಒಳ್ಳೆಯವರಿದ್ದರು. ಅವರಿಗೆ ನನ್ನ ನಂಬರ್ ಕೊಟ್ಟು ಡಾಕ್ಟರ್ ಈ ಫ್ಲೋರಿಗೆ ಬಂದರೆ ಕೂಡಲೇ ಫೋನ್ ಮಾಡುವಂತೆ ವಿನಂತಿಸಿದೆ. ಓಡಿ ಹೋಗಿ ಬೇಕಾದ ಸಾಮಾನು ಖರೀದಿಸಿ ಬಂದೆ.

ಫೋನ್ ಮಾಡಿದರೆ ಊಟ ತರುತ್ತಾರೆ. ಆದರೆ ನನ್ನ ತಾಯಿಗೆ ಖಾರ ಆಗದು. ಅಂಥ ಊಟ ಬೇಕೆಂದರೆ ಮೊದಲೇ ಹೇಳಬೇಕು ಎಂದರು. ಆ ಕ್ಯಾಂಟೀನ್ ಪಕ್ಕದ ಕಟ್ಟಡದಲ್ಲಿದೆ. ನಾವಿರುವದು 4ನೇ ಮಹಡಿಯಲ್ಲಿ. ಲಿಫ್ಟಿಗಾಗಿ ಕಾದು ಕೆಳಗೆ ಬಂದು ಕ್ಯಾಂಟೀನ್ ನವರಲ್ಲಿ ವಿನಂತಿಸಿ ಊಟದ ವ್ಯವಸ್ಥೆ ಮಾಡಿದ್ದಾಯಿತು. ಮೇಲೆ ಬರುವಷ್ಟರಲ್ಲಿ ಡಾಕ್ಟರ್ ಬಂದಿದ್ದರು. ಏನೂ ಹೆದರಬೇಕಾದ್ದಿಲ್ಲ. ಆದರೆ ಎಲ್ಲಾ ಟೆಸ್ಟ್ ಮಾಡಬೇಕಾಗುತ್ತದೆ. ನಾಳೆ ಒಂದು ಬ್ಲಡ್ ಟೆಸ್ಟ್ ಮತ್ತು ಎಕ್ಸ್‌ರೇ ಇದೆ. ಅದನ್ನು ನೋಡಿ ಉಳಿದ ಟೆಸ್ಟ್ ಮಾಡೋಣ ಅಂತ ಕೂಲ್ ಆಗಿ ಹೇಳಿದರು.

ಜ್ವರಕ್ಕೆ ಪ್ಯಾರಾಸಿಟಮಾಲ್ ಕೊಡುತ್ತೇವೆ. ಬೇರೆ ಔಷಧ ಕೊಡಲು ಟೆಸ್ಟ್ ಮುಗಿಯಬೇಕು. ಇನೆಕ್ಷನ್ ಯಾಕಿದೆ ಅಂತ ಡಯಾಗ್ನೋಸ್ ಮಾಡಿ ನೋಡಬೇಕು ಎಂದು ಡಾಕ್ಟರ್ ಹೇಳಿದ್ದಾರೆ ಎಂದರು ಸಿಸ್ಟರ್. ಮಾರನೇ ದಿನ ಬೆಳಿಗ್ಗೆ ಡಾಕ್ಟರ್ ಬಂದಾಗ ತಾಯಿಗೆ ಜ್ವರ ಇರಲಿಲ್ಲ. ಟೆಸ್ಟ್ ರಿಪೋರ್ಟ್ ಬರಲಿ ನೋಡೋಣ ಎಂದರು. ಇಡೀ ದಿನ ರೂಮಲ್ಲಿ ಕುಳಿತದ್ದೇ ಬಂತು. ಟ್ರೀಟ್ಮೆಂಟ್ ಶುರುವೇ ಆಗಲಿಲ್ಲ. ಡಯಾಗ್ನೋಸ್ ಆಗಬೇಕು ತಾನೆ?

ಮಧ್ಯಾಹ್ನ ಇನ್ನೊಬ್ಬ ಪಿಜಿ ಬಂದ. ಏನೇನೋ ಕೇಳಿದ. ನಿಮ್ಮ ಮನೆಯಲ್ಲಿ ಯಾರಿಗಾದರೂ ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಹಾರ್ಟ್ ಸಮಸ್ಯೆ, ಶುಗರ್, ಬಿಪಿ, ಅಸ್ತಮಾ ಇದೆಯಾ ಅಂದ. ನನಗೆ ಹಾರ್ಟು ನಿಂತೇ ಹೋದಂತಾಯಿತು. ಯಾಕೆ ಇವಳಿಗೆ ಅಂತದೇನಾದರೂ ಆಗಿರಬಹುದಾ ಎಂದೆ. ಅದೆಲ್ಲ ಟೆಸ್ಟ್ ಮುಗಿದ ಮೇಲೆಯೇ ತಿಳಿಯುತ್ತದೆ. ಈಗ ಹೇಳಲಾಗುವದಿಲ್ಲ ಎಂದ. ರಾತ್ರಿ ಇನ್ನೊಬ್ಬ ಡಾಕ್ಟರ್ ಬಂದರು. ಮುಖ್ಯ ಡಾಕ್ಟರಿಗೆ ಕಾನರೆ ಇದೆಯಂತೆ. ನಾಳೆ ಅವರು ಬಂದ ಮೇಲೆ ನಾವು ಮುಂದಿನ ಕೋರ್ಸ್ ಟ್ರೀಟ್ಮೆಂಟ್ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು. ನನಗೆ ರಜೆ ಇಲ್ಲ, ಬಾಸ್ ಕಿರಿ ಕಿರಿ ಮಾಡುತ್ತಾರೆ ಎಂದು ಅವರಿಗೆ ಹೇಗೆ ಹೇಳಲಿ?

ಮರುದಿನ ಮುಖ್ಯ ಡಾಕ್ಟರ್ ತುಂಬಾ ಸೀರಿಯಸ್ ಆಗಿ ಫೈಲ್ ನೋಡಿದರು. ರಿಪೋರ್ಟ್‌ಗಳೆಲ್ಲ ನಾರ್ಮಲ್ ಇವೆ. ಇನೆಕ್ಷನ್‌ಗೆ ಕಾರಣ ತಿಳಿಯಲು ಒಂದು ಸಿಟಿ ಸ್ಕ್ಯಾನ್ ಮತ್ತು ಇನ್ನೆರಡು ಬ್ಲಡ್ ಟೆಸ್ಟ್ ಮಾಡುತ್ತೇವೆ ಅಂದರು. ನಾನು ಮೆಲ್ಲನೆ ಡಿಸ್ಚಾರ್ಜ್ ಎಂಬ ಶಬ್ದ ಹೇಳಿದೆ. ಅವರಿಗೆ ಕೇಳಿಸಲೇ ಇಲ್ಲ. ಸಿಸ್ಟರ್ ಹಾಗೆಲ್ಲ ಕೇಳಬಾರದು ಎಂಬಂತೆ ನನ್ನ ಮುಖ ನೋಡಿದರು. ಮಾರನೇ ದಿನ ಕೂಡಾ ಸ್ಕ್ಯಾನಿಂಗ್, ಬ್ಲಡ್ ಟೆಸ್ಟ್ ಎಲ್ಲಾ ನಾರ್ಮಲ್. ಬೇರೆ ಏನೋ ಟೆಸ್ಟ್ ಮಾಡಬೇಕು ಎಂದರು. ಅದನ್ನೂ ಮಾಡಿಯಾಯ್ತು. ರಿಪೋರ್ಟ್ ಏನು ಬಂತು ಅಂತ ನಮಗೆ ಹೇಳಲಿಲ್ಲ. ಆದರೆ ಡಿಸ್ಚಾರ್ಜ್ ಸುದ್ದಿಯೇ ಇಲ್ಲ. ‌

ಶನಿವಾರ ಬೆಳಿಗ್ಗೆ ಡಾಕ್ಟರ್ ಬಂದಾಗ ಧೈರ್ಯ ಮಾಡಿ ವಿಷಯ ಏನು ಅಂತ ಕೇಳಿದೆ. ಇನ್ನೊಂದು ರಿಪೋರ್ಟ್ ಬರಲಿಕ್ಕೆ ಬಾಕಿ ಇದೆ ಸೋಮವಾರ ನೋಡುವ ಎಂದರು. ಅಂತೂ ಸೋಮವಾರದ ವರೆಗೆ ಬಿಡುಗಡೆ ಇಲ್ಲ ಅಂತಾಯಿತು. ರವಿವಾರ ಕೂಡಾ ಯಾವದೇ ವಿಶೇಷ ಟ್ರೀಟ್ಮೆಂಟ್ ಇಲ್ಲದೆ ಕಳೆಯಿತು. ಸೋಮವಾರ ಶ್ವಾಸಕೋಶದ ಒಳಗಡೆ ಪೈಪ್ ಹಾಕಿ ಟೆಸ್ಟ್ ಮಾಡಿದರು. ಆ ಟೆಸ್ಟ್ ಲೋಕಲ್ ಅನಸ್ತೇಶಿಯಾದಲ್ಲಿ ಮಾಡಲಾಗುತ್ತದೆ. ಒಂದು ದಿನ ನಿಗಾದಲ್ಲಿ ಇಡಬೇಕು ಅಂತ ಡಿಸ್ಚಾರ್ಜ್ ಇನ್ನೂ ಒಂದು ದಿನ ಮುಂದಕ್ಕೆ ಹೋಯ್ತು.

ಮಂಗಳವಾರ ಬೆಳಿಗ್ಗೆ ನನ್ನ ಸಂಬಂಧಿಕ ಡಾಕ್ಟರ್ ಒಬ್ಬರು ತಾಯಿಯನ್ನು ಅಡ್ಮಿಟ್ ಮಾಡಿದ ವಿಷಯ ಗೊತ್ತಾಗಿ ನೋಡಲು ಬಂದರು. ಅಲ್ಲಿನ ಡಾಕ್ಟರನ್ನು ಭೇಟಿಯಾಗಿ ಬಂದು ಮಲೇರಿಯಾ ಟೆಸ್ಟ್ ಮಾಡಿಸಲು ಹೇಳಿದರು. ಅರ್ಧ ಗಂಟೆಯಲ್ಲಿ ರಿಪೋರ್ಟ್ ಬಂತು. ವಿವಾಕ್ಸ್ ಮಲೇರಿಯ ಪಾಸಿಟಿವ್ ಅಂತ. ಹತ್ತು ಮಾತ್ರೆ ಬರೆಸಿಕೊಂಡು ಮಾರನೇ ದಿನ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದೆವು.

ಬಹಳ ಪ್ರಕರಣಗಳಲ್ಲಿ ಕಾರ್ಪೊರೇಟ್ ಆಸ್ಪತ್ರೆಗೆ ರೋಗಿಯನ್ನು ಒಯ್ದರೆ ದೊಡ್ಡ ಕಾಯಿಲೆ ಇರಬಹುದೆಂದು ಹೆದರಿಸಿ ಅನವಶ್ಯಕ ಟೆಸ್ಟ್, ಪ್ರೊಸೀಜರ್ ಮತ್ತು ಆಪರೇಷನ್ ಮಾಡಿಸಿ ದೊಡ್ಡ ಬಿಲ್ ಮಾಡುತ್ತಾರೆ ಎಂಬ ಆರೋಪ ಇದೆ. ಅದರಲ್ಲೂ ಅರೋಗ್ಯ ವಿಮೆ ಇರುವ ರೋಗಿಗೆ ಜಾಸ್ತಿ ಟೆಸ್ಟ್ ಮತ್ತು ಅನವಶ್ಯಕ ಅಡ್ಮಿಟ್ ಎಂಬ ಆಪಾದನೆ ಇದೆ. ‌

ಇತ್ತೀಚಿಗಂತೂ ಹೃದಯ ಕಾಯಿಲೆಗೆ ಸ್ಟೆಂಟ್ ಹಾಕುವ ಪ್ರಕರಣಗಳು ತೀರಾ ಹೆಚ್ಚಾಗುತ್ತಿವೆ. ವೈದ್ಯರು ಸಮಸ್ಯೆ ಇದೆ. ಅದಕ್ಕೆ ಆಪರೇಷನ್ ಅಥವಾ ಸ್ಟೆಂಟ್ ಹಾಕುವದೇ ಪರಿಹಾರ ಎಂದಾಗ ಆ ಸನ್ನಿವೇಶದಲ್ಲಿ ರೋಗಿಯನ್ನು ಒಯ್ದ ಮಗ ಅಥವಾ ಹೆಂಡತಿ ಕೂಡಲೇ ಆಪರೇಷನ್ ಮಾಡಲು ಸಹಜವಾಗಿ ಒಪ್ಪಿಗೆ ಕೊಡುತ್ತಾರೆ. ಆದರೆ ನನ್ನ ಒಬ್ಬ ಮಿತ್ರರು ಆಸ್ಪತ್ರೆಗೆ ಅಡ್ಮಿಟ್ ಆದಾಗ ರಾತ್ರಿ ಪಾಳಿಯಲ್ಲಿ ಐಸಿಯುದಲ್ಲಿದ್ದ ವೈದ್ಯರು ಯಾವದೇ ಸಮಸ್ಯೆಯಿಲ್ಲ ಅದು ಕೇವಲ ಆಸಿಡಿಟಿಯಿಂದ ಬಂದ ನೋವು. ನೀವು ಮನೆಗೆ ಹೋಗಬಹುದು ಎಂದರಂತೆ.

ಆದರೆ ಬೆಳಿಗ್ಗೆ ಬಂದ ಎಚ್‌ಒಡಿ, ಎಂಜಿಯೋಗ್ರಾಮ್ ಮಾಡಲೇಬೇಕು ಎಂದು ಹೇಳಿ ಎಂಜಿಯೋ ಗ್ರಾಮ್ ಜೊತೆ ಸ್ಟೆಂಟ್ ಕೂಡಾ ಹಾಕಿಸಿ ಮೂರು ಲಕ್ಷದ ಬಿಲ್ ಮಾಡಿಸಿದರು ಎಂದು ಅಲವತ್ತು ಕೊಂಡ. ಇಂಥ ಪ್ರಕರಣಗಳನ್ನು ನೋಡಿದಾಗ ಸಹಜವಾಗಿ ಆಸ್ಪತ್ರೆ ಎಂಬುದು ಒಂದು ದೊಡ್ಡ ಬಿಸಿನೆಸ್ ಎಂದು ತೋರುತ್ತದೆ. ಜನರಿಗೆ ಕಾಯಿಲೆ ಬಂದರೆ ಸಂತಸ ಪಡುವವರ ಕೈಯ್ಯಲ್ಲಿ ನಮ್ಮ ಶರೀರ ಒಪ್ಪಿಸುವ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಆಸ್ಪತ್ರೆಗಳು ನಡೆಸುವ ಶೋಷಣೆಗೆ ಸ್ವಲ್ಪ ಮಟ್ಟಿಗಿನ ಲಗಾಮು ಹಾಕಲು ಒಂದು ಸಲಹೆ. ಸರಕಾರ ಪ್ರತೀ ತಾಲೂಕು ಮಟ್ಟದಲ್ಲಿ ಒಬ್ಬ ಅಗತ್ಯ ವಿದ್ಯಾರ್ಹತೆ ಇರುವ ವೈದ್ಯಾಧಿಕಾರಿಯನ್ನು ಇಂಥ ವಿಷಯಗಳ ಮೇಲ್ವಿಚಾರಣೆಗಾಗಿಯೇ ನೇಮಿಸಬೇಕು. ತೀರಾ ತುರ್ತು ಸಂದರ್ಭಗಳನ್ನು ಹೊರತು‌ ಪಡಿಸಿ ಯಾವದೇ ಖಾಸಗಿ ಆಸ್ಪತ್ರೆಗಳು ಸರ್ಜರಿ, ದೊಡ್ಡ ವೆಚ್ಚದ ಟೆಸ್ಟ್ ಅಥವಾ ಪ್ರೊಸೀಜರ್ ಮಾಡುವದಿದ್ದಲ್ಲಿ ಅಂಥ ವೈದ್ಯಾಧಿಕಾರಿ ಅಥವಾ ಅಂಥ ವೈದ್ಯರ ಸಮಿತಿಯು ಪರಿಶೀಲನೆ ನಡೆಸಿ ಎರಡನೇ ಅಭಿಪ್ರಾಯ ನೀಡಬೇಕು.

ಆಪರೇಷನ್ ಅಥವಾ ಪ್ರೊಸೀಜರ್ ನಡೆಸಲು ತಗಲುವ ವೆಚ್ಚದ ಆಧಾರದಲ್ಲಿ ಅಂಥ ಪರಿಶೀಲನೆ ಯನ್ನು ಕಡ್ಡಾಯಗೊಳಿಸಬೇಕು. ಅಂಥ ಅನುಮತಿ ಪಡೆದು ಅದರ ಪ್ರತಿಯನ್ನು ರೋಗಿಗೆ ನೀಡಬೇಕು. ಮತ್ತು ಕಾಲಕಾಲಕ್ಕೆ ಆಸ್ಪತ್ರೆ ಪರಿವೀಕ್ಷಣೆ ನಡೆಸಿ ಈ ನಿಯಮ ಪಾಲಿಸಿದ್ದನ್ನು ಖಚಿತ ಪಡಿಸಿಕೊಳ್ಳಬೇಕು. ಹೀಗಾದಲ್ಲಿ ಸ್ವಲ್ಪ ಮಟ್ಟಿಗೆ ನಿಯಂತ್ರಣ ಬರಬಹುದು. ಭ್ರಷ್ಟಾಚಾರಕ್ಕೆ ಇದೊಂದು ದಾರಿಯಾಗದಿರಲು ಸೂಕ್ತ ವಿಚಕ್ಷಣಾ ವ್ಯವಸ್ಥೆಯನ್ನು ಜಾರಿ ಮಾಡಬೇಕು. ರೋಗಿಗೆ ತನ್ನ ಆಯ್ಕೆಯ ವೈದ್ಯರಿಂದ ಸೆಕೆಂಡ್ ಒಪೀನಿಯನ್ ಪಡೆಯುವ ಸ್ವಾತಂತ್ರ್ಯ ಇರಬೇಕು.

ಸ್ಟೆಂಟ್‌ಗೆ ದರ ನಿಗದಿ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಆದರೆ ಅದನ್ನು ಅಳವಡಿಸುವ ವೆಚ್ಚದ ಮೇಲೆ ಯಾವದೇ ನಿಯಂತ್ರಣವಿಲ್ಲ. ಅದರಂತೆ ಇತರ ಕಾಯಿಲೆಗಳ ಚಿಕಿತ್ಸೆಗೂ ಮಿತಿ ಹೇರುವ ನಿಯಮ ರೂಪಿಸಬೇಕು. ಇದೆಲ್ಲವನ್ನೂ ಮಾಡುವ ಇಚ್ಛಾಶಕ್ತಿ ಇರುವ ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ಕೇವಲ ಕನಸು ಎಂದೆನಿಸುತ್ತದೆ.