ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಹಬ್ಬದ ನಲ್ಮೆಯ ನಂತರದ ನರಳಾಟ ಅನಿವಾರ್ಯವೇ ?

ಹೂವಿನ ಅಲಂಕಾರ, ಮಾವಿನ ತೋರಣ, ಚೆಂದದ ಮಂಟಪ, ಬಾಳೆ ಕಂಬ, ಬಗೆ ಬಗೆಯ ದೀಪಗಳು- ಇವೆಲ್ಲವೂ ಮನೆ-ಮನಗಳಲ್ಲಿ ದೈವೀಕ ಭಾವವನ್ನು ಜಾಗೃತಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಹಿರಿಯರಿಗೆ ಉಡುಗೊರೆಯನ್ನ ಕೊಟ್ಟು ಆಶೀರ್ವಾದ ಪಡೆಯುವುದರ ಮೂಲಕ ಹೊಸ ಶಕ್ತಿ ಮತ್ತು ಚೈತನ್ಯವನ್ನು ಪಡೆದ ಭಾವ.

ಸ್ವಾಸ್ಥ್ಯ ಸ್ವಾತಂತ್ರ್ಯ

ನಮ್ಮ ಜೈವಿಕ ಗಡಿಯಾರವನ್ನು ಗಮನಿಸಿ ಅದನ್ನು ರಕ್ಷಿಸುವುದು ಸಹ ಒಂದು ರೀತಿಯ ಪೂಜೆ. ಹಾಗಾಗಿ ಹಬ್ಬದ ಸಮಯದಲ್ಲಿ ಇದನ್ನು ಭಂಗಗೊಳಿಸುವುದು ಆರೋಗ್ಯಕ್ಕೆ ದೊಡ್ಡ ಪೆಟ್ಟನ್ನೇ ನೀಡುತ್ತದೆ. ಹಬ್ಬದ ಸಮಯದಲ್ಲಿ ಪ್ರಸಾದದ ಹೆಸರಿನಲ್ಲಿ ತಿನಿಸುಗಳನ್ನೆಲ್ಲ ಆಗಾಗ್ಗೆ ಮೆಲ್ಲುವುದು, ಪದೇ ಪದೆ ಕರುಂಕುರುಂ ಎಂದು ಚಪ್ಪರಿಸುವುದು ಸಾಮಾನ್ಯದ ವಿಷಯ. ಈ ಅಭ್ಯಾಸದಿಂದಲೇ ಅಜೀರ್ಣ, ವಾಂತಿ, ಬೇಧಿ, ಜ್ವರ, ತಲೆನೋವು ಕಾಣಿಸಿ ಕೊಂಡು ಹಬ್ಬದ ಆನಂದಕ್ಕೆ ಧಕ್ಕೆ ಉಂಟಾಗುತ್ತದೆ.

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲೋ ಸಾಲು. ಎಡೆ ಸಂಭ್ರಮ ಮತ್ತು ಸಡಗರ. ಮನೆಗಳೆ ಬೆಳಗಿ ಹೊಳೆಯುವ ಸಮಯ. ಮನಸ್ಸುಗಳು ಆನಂದದಿಂದ ತೇಲಾಡುವ ಸಂದರ್ಭ. ಬಂಧು-ಬಳಗ ವೆಲ್ಲ ಸೇರಿ ಪ್ರಾರ್ಥಿಸುವ ಕ್ಷಣ. ಊಟ-ತಿಂಡಿ ವಿಷಯದ ಬಗ್ಗೆಯಂತೂ ಹೇಳುವುದೇ ಬೇಡ. ಪ್ರತಿ ಹಬ್ಬಕ್ಕೊಂದು ಹೊಸ ರೀತಿಯ ವೈಶಿಷ್ಟ್ಯ.

ಪಾಯಸದಿಂದ ಹಿಡಿದು ಹೋಳಿಗೆಯವರೆಗೆ- ಎಲ್ಲ ಬಗೆಯ ಸಿಹಿತಿನಿಸುಗಳ ಉತ್ಸವವೇ ಆಗಿ ಬಿಡುತ್ತದೆ ನಮ್ಮ ಹಬ್ಬಗಳು. ಸ್ನೇಹಿತರ ಮನೆಗಳಿಗೆ ಹೋಗಿ ಜತೆಯಾಗಿ ಸಂಭ್ರಮಿಸುವು ದರಲ್ಲಿರುವ ಸಂತಸವೇ ಬೇರೆ. ಹೊಸ ಬಟ್ಟೆಗಳನ್ನು ತೊಟ್ಟು ಮನೆಯ ತುಂಬಾ ಓಡಾಡುವ ಮುದ್ದು ಮಕ್ಕಳನ್ನು ನೋಡುವುದೇ ಮುದ.

ಹೂವಿನ ಅಲಂಕಾರ, ಮಾವಿನ ತೋರಣ, ಚೆಂದದ ಮಂಟಪ, ಬಾಳೆ ಕಂಬ, ಬಗೆ ಬಗೆಯ ದೀಪ ಗಳು- ಇವೆಲ್ಲವೂ ಮನೆ-ಮನಗಳಲ್ಲಿ ದೈವೀಕ ಭಾವವನ್ನು ಜಾಗೃತಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಹಿರಿಯರಿಗೆ ಉಡುಗೊರೆಯನ್ನ ಕೊಟ್ಟು ಆಶೀರ್ವಾದ ಪಡೆಯುವುದರ ಮೂಲಕ ಹೊಸ ಶಕ್ತಿ ಮತ್ತು ಚೈತನ್ಯವನ್ನು ಪಡೆದ ಭಾವ.

ಹಬ್ಬದ ದಿನ ಇಷ್ಟು ಸಂತೋಷವಾಗಿರುವ ಮನೆಯ ವಾತಾವರಣವು, ಹಬ್ಬದ ನಂತರ ಏಕಾಏಕಿ ಬದಲಾಗಲು ಕಾರಣವೇನು? ಹಬ್ಬದ ನಂತರ ಆರೋಗ್ಯದ ವ್ಯತ್ಯಾಸವಾಗುವುದು ಸರ್ವೇಸಾಮಾನ್ಯ ವಾಗಿ ಬಿಟ್ಟಿದೆ. ಜ್ವರ, ಮೈ ಕೈ ನೋವು, ಅಜೀರ್ಣ, ವಾಂತಿ, ಬೇಧಿ, ನೆಗಡಿ, ತಲೆನೋವು, ಅಸಿಡಿಟಿ- ಹೀಗೆ ಬೇರೆ ಬೇರೆ ರೀತಿಯ ಕಾರಣಗಳಿಂದ ಬಳಲುವುದೇ ಹೆಚ್ಚಾಗಿ ಬಿಡುತ್ತದೆ.

ಇದನ್ನೂ ಓದಿ: Dr Sadhanashree Column: ಸರ್ವರೋಗಕ್ಕೂ ಇದೇ ಕಾರಣ: ಆಗಬೇಕು ಇವುಗಳ ನಿಯಂತ್ರಣ

ಹಬ್ಬದ ದಿನ ಸಿಕ್ಕ ಸಂತೋಷವೆಲ್ಲ ಒಂದೇ ದಿನದಲ್ಲಿ ನೀರು ಪಾಲಾದಂತೆ. ಮನೆಯಲ್ಲಿ ಯಾರೋ ಒಬ್ಬರು ಹುಷಾರು ತಪ್ಪಿದರೆ ಅದರ ಪರಿಣಾಮವಾಗಿ ಒಬ್ಬರಾದ ಮೇಲೆ ಒಬ್ಬರಂತೆ ಮನೆಯವ ರೆಲ್ಲರೂ ಮಲಗುವುದು ಖಂಡಿತ. ಒಂದನ್ನು ಖರೀದಿಸಿದರೆ ಇನ್ನೊಂದು ಉಚಿತ ಎಂಬ ಸೇಲ್‌ನಂತೆ ಹಬ್ಬದ ಜತೆ ಆರೋಗ್ಯದ ವ್ಯತ್ಯಾಸ ಉಚಿತವೇ? ನಲ್ಮೆಯ ನಂತರ ನರಳಾಟ ಅಗತ್ಯವೇ? ಹಬ್ಬದ ಸಮಯದಲ್ಲಿ ಸ್ವಾಸ್ಥ್ಯ ರಕ್ಷಣೆ ಅಸಾಧ್ಯವೇ? ಹಬ್ಬ ಮುಗಿದ ಮೇಲೂ ಆರೋಗ್ಯವಂತರಾಗಿ ನಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸುವುದು ಆಗಲಾರದ ವಿಷಯವೇ? ಬನ್ನಿ ನಮ್ಮ ಆಯುರ್ವೇದ ಆಚಾರ್ಯರ eನದ ಧಾರೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆಯಾ ಎಂದು ನೋಡೋಣ...

ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ನಮ್ಮ ದಿನಚರಿ ಮತ್ತು ಆಹಾರದಲ್ಲಿ ಆಗುವ ವ್ಯತ್ಯಾಸವೇ ನಮ್ಮ ಸ್ವಾಸ್ಥ್ಯ ಹಾಳಾಗಲು ಮುಖ್ಯ ಕಾರಣ. ಈ ವಿಷಯದಲ್ಲಿ ಹಬ್ಬದ ದಿನ ನಾವು ಪಾಲಿಸಬಹು ದಾದ ಕೆಲ ನಿಯಮಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕಾಗಿರು ವುದು ಆಯುರ್ವೇದದ ಮೊದಲ ನಿಯಮ. ಹಬ್ಬದ ದಿನ ವಂತೂ ಇದನ್ನು ಪಾಲಿಸಲೇಬೇಕು.

ಬ್ರಾಹ್ಮಿ ಮುಹೂರ್ತ ಎಂದರೆ ಸೂರ್ಯೋದಯಕ್ಕೆ ಒಂದೂವರೆ ಗಂಟೆಯ ಮುಂಚಿನ ಸಮಯ. ಈ ಸಮಯದಲ್ಲಿ ಏಳುವುದು ನಮ್ಮ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ವಿಶೇಷವಾಗಿ ಹಬ್ಬದ ದಿನ ಈ ಮುಹೂರ್ತದಲ್ಲಿ ಎದ್ದು ಧ್ಯಾನ-ಜಪಗಳಲ್ಲಿ ತೊಡಗಿದರೆ ಬಹಳ ಶ್ರೇಷ್ಠ. ಕಾರಣ, ಈ ಸಮಯದ ಪ್ರಶಾಂತ ವಾತಾವರಣದಲ್ಲಿ ಹೆಚ್ಚು ಪ್ರಯತ್ನವಿಲ್ಲದೆಯೇ ನಮ್ಮ ಶರೀರ-ಇಂದ್ರಿಯ-ಮನಸ್ಸು ಗಳನ್ನು ಪರಮಾತ್ಮನ ಚಿಂತನೆಯಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಪ್ರಾಣದ ಅಂಶವು ನೈಸರ್ಗಿಕವಾಗಿ ಹೆಚ್ಚಾಗಿರುವುದರಿಂದ ಬಹಳ ಸಹಜವಾಗಿಯೇ ನಮ್ಮ ಶರೀರದಲ್ಲಿರುವ ಪ್ರಾಣಶಕ್ತಿ ಯು ವೃದ್ಧಿಯಾಗಿ ಇಡೀ ದಿನ ಲವಲವಿಕೆಯಿಂದ ಇರಲು ಸಹಕಾರಿಯಾಗುತ್ತದೆ.

ಬೆಳಗ್ಗೆ ಬೇಗ ಏಳಬೇಕಾಗಿರುವುದರಿಂದ ಹಿಂದಿನ ದಿನದ ಕೆಲಸವನ್ನು ಬೇಗ ಮುಗಿಸಿ ರಾತ್ರಿ ಬೇಗ ಮಲಗುವುದು ಆರೋಗ್ಯವನ್ನು ಮತ್ತಷ್ಟು ಕಾಪಾಡುತ್ತದೆ. ಸಾಮಾನ್ಯವಾಗಿ ರಾತ್ರಿ ನಿದ್ದೆಗೆಡುವುದು, ಮುಂದಿನ ದಿನ ಹಬ್ಬದ ಊಟ ಮಾಡಿ ಗಡzದ ನಿzಯನ್ನು ಮಾಡುವುದು ಬಹಳಷ್ಟು ಅನಾರೋಗ್ಯ ಕ್ಕೆ ಕಾರಣ. ಆದ್ದರಿಂದ ಹಬ್ಬದ ಸಮಯದಲ್ಲಿ ಸ್ವಾಸ್ಥ್ಯ ಪರಿಪಾಲನೆಗೆ ನಮ್ಮ ನಿದ್ದೆಯನ್ನು ಸರಿದೂಗಿಸಿಕೊಳ್ಳುವುದು ಬಹಳ ಅವಶ್ಯಕ.

ಆಯುರ್ವೇದದ ಪ್ರಕಾರ ಹಗಲು ನಿzಯು ಅನಾರೋಗ್ಯಕರ. ಕಾರಣ, ಇದು ಮೂರು ದೋಷ ಗಳನ್ನು ಅಂದರೆ ವಾತ, ಪಿತ್ತ, ಕಫಗಳನ್ನು ಹಾಳು ಮಾಡಿ ವಿವಿಧ ರೀತಿಯ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಉದಾಹರಣೆಗೆ- ಉಬ್ಬಸ, ಕೆಮ್ಮು, ತಲೆ ಭಾರ, ಪದೇಪದೆ ನೆಗಡಿ, ಆಹಾರದಲ್ಲಿ ರುಚಿ ಕಡಿಮೆ ಎನಿಸುವುದು, ಜೀರ್ಣಶಕ್ತಿ ಕುಂದುವುದು, ಅಂಗಗಳ ಮಾಂಸ ದುಷ್ಟಿ, ಮೇದಸ್ಸಿನ ದುಷ್ಟಿ, ಸ್ಥೌಲ್ಯ, ಮಧು ಮೇಹ, ಪದೇ ಪದೆ ಜ್ವರ ಬರುವುದು, ಹುಳಿತೇಗು, ಎದೆ ಉರಿ, ಪಿತ್ತ ವಾಂತಿ ಇತ್ಯಾದಿ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹಬ್ಬದ ಸಮಯ ಹಗಲು ನಿದ್ದೆಯನ್ನು ವರ್ಜಿಸಿ ರಾತ್ರಿ ನಿದ್ದೆ ಯನ್ನು ಪಾಲಿಸಿ- ಇದರಿಂದ ಮಾತ್ರ ಆರೋಗ್ಯದ ರಕ್ಷಣೆ ಸಾಧ್ಯ. ನಂತರ, ಹಬ್ಬದ ದಿನ ಮಾಡಲೇ ಬೇಕಾದ ಕೆಲಸ- ಅಭ್ಯಂಗ . ಇದನ್ನು ಸ್ನಾನ ಮಾಡುವ ಮುನ್ನ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಎಣ್ಣೆ/ತುಪ್ಪ/ಬೆಣ್ಣೆ ಮುಂತಾದ ಸ್ನೇಹಯುಕ್ತ, ಜಿಡ್ಡಿನಿಂದ ಕೂಡಿದ ದ್ರವ್ಯಗಳನ್ನು ಅನುಲೋಮ ವಾಗಿ, ಅಂದರೆ ಲೋಮಕ್ಕೆ ಅನುಗುಣವಾಗಿ/ಕೆಳಮುಖವಾಗಿ, ಸುಸ್ಥಿತಿಯಲ್ಲಿ ಇರಿಸಿದ ದೇಹದ ಭಾಗಕ್ಕೆ ಹಚ್ಚುವುದೇ ‘ಅಭ್ಯಂಗ’. ಬೆಚ್ಚಗಿನ ಎಣ್ಣೆಯನ್ನು (ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ) ಅಂಗೈ ತುಂಬುವಷ್ಟು ತೆಗೆದುಕೊಂಡು ಮೊದಲು ನೆತ್ತಿ ನೆನೆಯುವಷ್ಟು ಹಾಕಬೇಕು.

ಸಮಯವಿದ್ದರೆ ತಲೆಗೆ ಪೂರ್ತಿಯಾಗಿ ಸವರಿಕೊಳ್ಳಬಹುದು. ನಂತರ ಬೆಚ್ಚಗಿನ ಎಣ್ಣೆಯ ಹನಿ ಗಳನ್ನು ಎರಡೂ ಕಿವಿಗಳಿಗೆ ಹಾಕಬೇಕು. ಇದಾದ ಮೇಲೆ, ಎಣ್ಣೆಯನ್ನು ನಿಧಾನವಾಗಿ ಮುಖಕ್ಕೆ ಸವರಿಕೊಂಡು, ಮೂಗಿಗೂ ಎರಡು ಹನಿ ಎಣ್ಣೆಯನ್ನು ಬಿಟ್ಟುಕೊಳ್ಳಬೇಕು. ಅಥವಾ, ಕಿರುಬೆ ರಳನ್ನು ಎಣ್ಣೆಯಲ್ಲಿ ಅದ್ದಿ ಮೂಗಿನ ಹೊಳ್ಳೆಗಳ ಒಳಗೆ ಸವರಿಕೊಳ್ಳುವುದು. ನಂತರ ಕತ್ತು, ಕೈಗಳು, ಎದೆ, ಹೊಟ್ಟೆ, ಬೆನ್ನು ಪೃಷ್ಠ, ಕಾಲುಗಳಿಗೆ ನಂತರ ಪಾದಗಳಿಗೆ, ಅಭಿಮುಖವಾಗಿ ಮೇಲಿನಿಂದ ಕೆಳಮುಖವಾಗಿ ಅಂಗಾಂಗಗಳನ್ನು ಸ್ಥಿರವಾಗಿ ಇರಿಸಿ ಹಚ್ಚುವುದು.

ನೆನಪಿಡಿ, ಯಾವಾಗಲೂ ಮೇಲಿನಿಂದ ಕೆಳಗೆ ಹಚ್ಚಬೇಕೇ ಹೊರತು ಕೆಳಗಿನಿಂದ ಮೇಲೆ ಉಜ್ಜಬೇಡಿ. ವಿಶೇಷವಾಗಿ ಕೆನ್ನೆ, ಹೊಟ್ಟೆ ಹಾಗೂ ಸಂಧಿ ಭಾಗಗಳಲ್ಲಿ ವರ್ತುಲಾಕಾರವಾಗಿ ಹಚ್ಚಬೇಕು. ಹೀಗೆ ಹಚ್ಚಿದ ಎಣ್ಣೆಯನ್ನು ಸುಮಾರು ಐದು ನಿಮಿಷಗಳ ಕಾಲ ಬಿಟ್ಟರೆ ಸಾಕು, ದೇಹವು ಚೆನ್ನಾಗಿ ಹೀರಿಕೊಳ್ಳುತ್ತದೆ. ಹಚ್ಚುವುದಕ್ಕೆ ಐದು ನಿಮಿಷ, ನೆನೆಯುವುದಕ್ಕೆ ಐದು ನಿಮಿಷ, ಒಟ್ಟು 10 ನಿಮಿಷ ದಲ್ಲಿ ಮುಗಿಸಬಹುದು ನಿತ್ಯಾಭ್ಯಂಗವನ್ನು. ಇದು ಯಾರಿಗೂ ಕಷ್ಟದ ಕೆಲಸವಲ್ಲ!

ತೈಲಾಭ್ಯಾಂಜನದ ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಹೊರ ಬಂದಾಗ ಸಿಗುವಷ್ಟು ಆನಂದ, ಆರಾಮ ಮತ್ತೆಲ್ಲೂ ಇಲ್ಲ! ಅದರಲ್ಲೂ ಹಬ್ಬದ ಓಡಾಟಕ್ಕೆ ಇದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇನ್ನು ಆಹಾರದ ವಿಷಯಕ್ಕೆ ಬರೋಣ. ಸಾಮಾನ್ಯವಾಗಿ ನಮ್ಮೆಲ್ಲರ ಆಹಾರ ಕಾಲಗಳು ಮೂರು- ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ. ಹಬ್ಬದಲ್ಲಿಯೂ ಈ ಆಹಾರ ಕಾಲದ ವ್ಯತ್ಯಾಸ ಮಾಡದಿರುವುದೇ ಒಳಿತು.

ನಮ್ಮ ಜೈವಿಕ ಗಡಿಯಾರವನ್ನು ಗಮನಿಸಿ ಅದನ್ನು ರಕ್ಷಿಸುವುದು ಸಹ ಒಂದು ರೀತಿಯ ಪೂಜೆ. ಹಾಗಾಗಿ ಹಬ್ಬದ ಸಮಯದಲ್ಲಿ ಇದನ್ನು ಭಂಗಗೊಳಿಸುವುದು ಆರೋಗ್ಯಕ್ಕೆ ದೊಡ್ಡ ಪೆಟ್ಟನ್ನೇ ನೀಡುತ್ತದೆ. ಹಬ್ಬದ ಸಮಯದಲ್ಲಿ ಪ್ರಸಾದದ ಹೆಸರಿನಲ್ಲಿ ತಿನಿಸುಗಳನ್ನೆಲ್ಲ ಆಗಾಗ್ಗೆ ಮೆಲ್ಲುವುದು, ಪದೇ ಪದೆ ಕರುಂಕುರುಂ ಎಂದು ಚಪ್ಪರಿಸುವುದು ಸಾಮಾನ್ಯದ ವಿಷಯ. ಈ ಅಭ್ಯಾಸದಿಂದಲೇ ಅಜೀರ್ಣ, ವಾಂತಿ, ಬೇಧಿ, ಜ್ವರ, ತಲೆನೋವು ಕಾಣಿಸಿಕೊಂಡು ಹಬ್ಬದ ಆನಂದಕ್ಕೆ ಧಕ್ಕೆ ಉಂಟಾಗು ತ್ತದೆ.

ಹಾಗಾಗಿ ಹಬ್ಬಕ್ಕಾಗಿ ತಯಾರಿಸಿದ ಎಲ್ಲಾ ಖಾದ್ಯಗಳನ್ನು ಸಹ ನಿಗದಿತ ಆಹಾರ ಸಮಯದಲ್ಲಿ, ಹಸಿವಿಗೆ ತಕ್ಕಷ್ಟು ಸೇವಿಸುವುದರಿಂದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ವಿವಿಧ ಬಗೆಯ ಕರಿದ ತಿಂಡಿಗಳನ್ನು, ಸಿಹಿ ತಿನಿಸುಗಳನ್ನು ಸೇವಿಸುವ ಆಹಾರದೊಟ್ಟಿಗೆ ಜೀರ್ಣಕಾರಿ ಪಾನಿಯ ಗಳನ್ನು ಸೇವಿಸುವುದು ಉಪಯುಕ್ತ.

ಉದಾಹರಣೆಗೆ- ಹಸಿ ಶುಂಠಿ, ಜೀರಿಗೆ, ಸೋಂಪು, ಏಲಕ್ಕಿ, ಲವಂಗ, ಧನಿಯ- ಹೀಗೆ ಯಾವುದಾದರೂ ಒಂದು ದ್ರವ್ಯವನ್ನು ಸ್ವಲ್ಪ ಪ್ರಮಾಣದಲ್ಲಿ ನೀರಿನೊಂದಿಗೆ ಕುದಿಸಿ ಬಿಸಿ ಬಿಸಿಯಾಗಿ ಆಹಾರ ದೊಂದಿಗೆ ಹೀರುವುದು ಜೀರ್ಣಕಾರಿ. ಇದರಿಂದ ಹಬ್ಬದ ಅಡುಗೆಗಳ ಪೋಷಣೆ ಸಂಪೂರ್ಣ ಶರೀರಕ್ಕೆ ಲಭ್ಯವಾಗಿ ಅಜೀರ್ಣದ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಹಬ್ಬಗಳ ಬಹಳ ಮುಖ್ಯವಾದ ಆಚರಣೆ ‘ಉಪವಾಸ’. ಹಲವಾರು ಜನ ಹಸಿವೆಯನ್ನು ಕಟ್ಟಿ ಕೊಂಡು, ಒಂದು ಹನಿ ನೀರನ್ನು ಸಹ ಕುಡಿಯದೆ ಅಥವಾ ಕೇವಲ ಫಲಗಳನ್ನು/ಹಾಲನ್ನು ಮಾತ್ರ ಸೇವಿಸುವ ಉಪವಾಸವನ್ನು ಪಾಲಿಸುತ್ತಾರೆ. ಹಾಗಾದರೆ, ಉಪವಾಸವೆಂದರೆ ಕೇವಲ ನಿರಾಹಾರ ರಾಗಿ ಇರುವುದಷ್ಟೆಯಾ ಅಥವಾ ಇದಕ್ಕೂ ಮಿಗಿಲಾದ ವಿಷಯವಿದೆಯಾ ಅನ್ನುವುದರ ಬಗ್ಗೆ ತಿಳಿದು ಕೊಳ್ಳೋಣ.

ಆಯುರ್ವೇದದ ಪ್ರಕಾರ ಆಹಾರ ಸೇವನೆ ಒಂದು ರೀತಿಯ ಹವನ. ಇದನ್ನು ಪೂಜೆ ಎಂದರೂ ತಪ್ಪಾಗಲಾರದು. ಹಸಿವೆ ಮತ್ತು ಬಾಯಾರಿಕೆಗಳಂಥ ಸಹಜ ಶಾರೀರಿಕ ಕ್ರಿಯೆಗಳನ್ನು ತಡೆದು ಯಾವಾಗಲೋ ಏನೇನನ್ನೋ ತಿನ್ನುವುದು ಆರೋಗ್ಯವನ್ನು ಏರುಪೇರು ಮಾಡುತ್ತದೆಯೇ ಹೊರತು ಇದು ಉಪವಾಸ ಎನಿಸುವುದಿಲ್ಲ. ಈ ರೀತಿಯ ಕ್ರಮವಿಲ್ಲದ ಆಚರಣೆಯು ನಮ್ಮೊಳಗೆ ಜಠರಾಗ್ನಿಯ ರೂಪದಲ್ಲಿರುವ ಭಗವಂತನಿಗೆ ಮಾಡುವ ಅಪಮಾನವೇ ಸರಿ.

ಆಯುರ್ವೇದ ಶಾಸದಲ್ಲಿ ಹೇಳಿರುವ ಪ್ರಕಾರ, ‘ಉಪ’ ಎಂದರೆ ಸಮೀಪ, ‘ವಾಸ’ ಎಂದರೆ ಇರುವುದು. ‘ಉಪವಾಸ’ವೆಂದರೆ ಸದಾ ಸತ್ವ ಗುಣದೊಟ್ಟಿಗೆ ಇರುವುದು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳನ್ನು ಕಾಯಾ-ವಾಚಾ-ಮನಸ್ಸಿನ ಮೂಲಕ ಮಾಡದೆ ಇರುವುದು. ಎಲ್ಲರ ಒಳಗೂ ಚೈತನ್ಯದ ರೂಪದಲ್ಲಿ ನೆಲೆಸಿರುವ ಆ ಪರಮಾತ್ಮನ ಇರುವಿಕೆಯನ್ನು ತನ್ನೊಳಗೆ ಅರಿತು ಅವನ ಸಮೀಪವಾಗುವ ಪ್ರಯತ್ನವೇ ಉಪವಾಸ. ಈ ಸೂಕ್ಷ್ಮತರವಾದ ಅನುಭವಕ್ಕೆ ಅತಿಯಾದ ಆಹಾರಸೇವನೆಯು ಅಡ್ಡಿಯಾಗದಿರಲಿ ಎಂಬುದು ಉದ್ದೇಶವೇ ಹೊರತು ಉಪವಾಸವೆಂದರೆ ಶರೀರದ ಶೋಷಣೆಯಂತೂ ಅಲ್ಲವೇ ಅಲ್ಲ.

ಹಾಗಾಗಿ ಹಸಿವೆಯನ್ನು ಗೌರವಿಸದೆ, ಜಠರಾಗ್ನಿಗೆ ಆಹಾರದ ಮೂಲಕ ಆಹುತಿಯನ್ನು ನೀಡದೆ ಅದನ್ನು ಹಾಳು ಮಾಡುವ ಪ್ರಕ್ರಿಯೆಯನ್ನು ಆಯುರ್ವೇದವು ಎಂದಿಗೂ ಉಪವಾಸ ಎಂದು ಪರಿಗಣಿಸುವುದಿಲ್ಲ. ಹಾಗಾಗಿ ಉಪವಾಸದ ಹೆಸರಿನಲ್ಲಿ ಹಸಿವೆಯನ್ನು ತಡೆಗಟ್ಟಿ, ನಂತರ ಒಮ್ಮೆಲೇ ಜೀರ್ಣಕ್ಕೆ ಜಡವಾಗುವ ಊಟವನ್ನು ಮಾಡಿದರೆ ಆರೋಗ್ಯ ಕೆಡುವುದರಲ್ಲಿ ಸಂಶಯವೇ ಇಲ್ಲ.

ಹಸಿವೆಯನ್ನು ತಡೆಯುವುದು ಆಯುರ್ವೇದದ ಪ್ರಕಾರ ಸರಿಯಲ್ಲ. ಹಾಗಾಗಿ ಆಹಾರ ಕಾಲದಲ್ಲಿ ಲಘು, ಸಾತ್ತ್ವಿಕ ಆಹಾರವನ್ನು ಸೇವಿಸಿ, ದೈವದ ಉಪಾಸನೆಯಲ್ಲಿ ಇಂದ್ರಿಯ-ಮನಸ್ಸುಗಳನ್ನು ತೊಡಗಿಸಿಕೊಂಡು ಒಳ್ಳೆಯ ಚಿಂತನೆಯನ್ನು ಮಾಡಿ ಪರಮಾತ್ಮನ ಸಮೀಪವಾಗುವ ಪ್ರಯತ್ನ ವನ್ನು ಮಾಡುವುದೇ ಹಬ್ಬದ ದಿನ ನಾವು ಮಾಡಬೇಕಾದ ನಿಜವಾದ ಮತ್ತು ಸರಿಯಾದ ಉಪವಾಸ. ಇದು ಮಾತ್ರ ಆಯುರ್ವೇದ ಸಮ್ಮತವಾದ ಉಪವಾಸವಾಗುತ್ತದೆ.

ಸ್ನೇಹಿತರೆ, ನಮ್ಮ ಪಾರಂಪರಿಕ ಆಚರಣೆಗಳು ಮತ್ತು ಹಬ್ಬಗಳು ನಮ್ಮ ಆಹಾರ-ವಿಹಾರ- ವಿಚಾರ ಗಳನ್ನು ಅವಲೋಕಿಸಿ, ಅವುಗಳನ್ನು ಶೋಧಿಸಿ, ಅವುಗಳಲ್ಲಿ ದೈವೀಕತೆಯನ್ನು ಜಾಗೃತ ಗೊಳಿಸುವ ಸದವಕಾಶಗಳು. ಇವು ದೇಹವನ್ನು ದಂಡಿಸಿಕೊಂಡು ರೋಗಗ್ರಸ್ತರಾಗುವ ಶೋಚನೀಯ ಸಂದರ್ಭ ಗಳಾಗದಿರಲಿ. ನಮ್ಮ ಆರೋಗ್ಯ, ಆಯುಷ್ಯ ಮತ್ತು ಸಂಪತ್ತುಗಳು ವೃದ್ಧಿಯಾಗಿ ಎಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ ನಾವು ಆಚರಿಸುವಂಥ ಹಬ್ಬಗಳು ಎಂಬುದು ಆಯುರ್ವೇದದ ಆಶಯ. ಲೋಕಾಃ ಸಮಸ್ತಾಃ ಸುಖಿನೋ ಭವಂತು ಸಮಸ್ತ ಸನ್ಮಂಗಲಾನಿ ಭವಂತು...

ಡಾ. ಸಾಧನಾಶ್ರೀ ಪಿ,

View all posts by this author