ಶಿಕ್ಷಣ
ಸುರೆಂದ್ರ ಪೈ
ಸಾಮಾಜಿಕ ಜಾಲತಾಣವೆಂಬ ಪೆಡಂಭೂತವು ಮಕ್ಕಳ ಜೊತೆ ಪಾಲಕರನ್ನು ಸಂಪೂರ್ಣ ವಾಗಿ ಆವರಿಸಿದೆ. ಮೊದಲು ಮಕ್ಕಳಲ್ಲಿರುವ ಬಹುಮುಖ ಪ್ರತಿಭೆಗೆ ವೇದಿಕೆಯಾಗಿದ್ದ ಶಾಲಾ ವಾರ್ಷಿಕೋತ್ಸವವು ಸಹ ಮೌಲ್ಯ ಕಳೆದುಕೊಂಡಿದೆ. ಕಾರಣ ಈಗ ಮಕ್ಕಳಿಗೆ ತಮ್ಮ ಪ್ರತಿಭೆ ವ್ಯಕ್ತಪಡಿಸಲು ಹತ್ತಾರು ಆನ್‌ಲೈನ್ ವೇದಿಕೆಗಳು ಅವಕಾಶ ಕಲ್ಪಿಸಿವೆ.
ಶೈಕ್ಷಣಿಕ ವರ್ಷದಲ್ಲಿ ಅಕ್ಟೋಬರ್ ರಜೆಯ ನಂತರದ ದ್ವಿತೀಯಾರ್ಧವು ಬಹು ಮಹತ್ವದ್ದು. ಕೇವಲ ವಾರ್ಷಿಕ ಪರೀಕ್ಷೆಯ ದೃಷ್ಟಿಕೋನದಿಂದ ಮಾತ್ರವಲ್ಲದೇ ಈ ಅವಧಿಯ ನವೆಂಬರ್‌ನಿಂದ ಜನವರಿ ಮಧ್ಯಭಾಗದ ನಡುವೆ ಹಮ್ಮಿಕೊಳ್ಳಲಾಗುವ ಶಾಲಾ ಶೈಕ್ಷಣಿಕ ಪ್ರವಾಸ, ವಾರ್ಷಿಕ ಕ್ರೀಡೋ ತ್ಸವ, ಶಾಲಾ ವಾರ್ಷಿಕೋತ್ಸವದಂತಹ ಹಲವು ಕಾರ್ಯಕ್ರಮಗಳು ಮಕ್ಕಳ ಬಹುಮುಖ ಪ್ರತಿಭೆಗಳ ಅನಾವರಣಕ್ಕಾಗಿ ಇರುವ ಒಂದು ವೇದಿಕೆಯಾಗಿರುತ್ತದೆ.
ಹಿಂದೆ ಇವುಗಳ ಅವಶ್ಯಕತೆ ಬಹಳಷ್ಟಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಮಕ್ಕಳ ಪ್ರತಿಭೆ ಗಾಗಿ ಮೀಸಲಾಗಿರುವ ಇಂತಹ ಅರ್ಥಪೂರ್ಣ ವೇದಿಕೆಗಳು ಅರ್ಥಹೀನವಾಗತೊಡಗಿವೆ. ಇಂದು ಅವುಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲು ಕಾರಣವನ್ನು ಅರಿಯುವ ಮುನ್ನ, ಅಂದು ಅವುಗಳು ಮಕ್ಕಳಿಗೆ ಪ್ರಮುಖ ವೇದಿಕೆಯಾಗಲು ಕಾರಣವಾಗಿದ್ದ ಪ್ರಮುಖ ಅಂಶಗಳತ್ತ ಗಮನ ಹರಿಸಬೇಕಿದೆ.
ಅದೊಂದು ಕಾಲವಿತ್ತು. ಆಗಿನ್ನೂ ಮೊಬೈಲ್ ಹಾವಳಿ, ಸಾಮಾಜಿಕ ಜಾಲತಾಣಗಳು ನಮ್ಮ ಜೀವನ ದ ಅವಿಭಾಜ್ಯ ಅಂಗವಾಗಿರಲಿಲ್ಲ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ ಮಕ್ಕಳನ್ನು ಆಕರ್ಷಿಸು ವಂತಹ ಖಾಸಗಿ ಶಾಲೆಗಳು ಅಣಬೆಯಂತೆ ಹುಟ್ಟಿಕೊಂಡಿರಲಿಲ್ಲ. ಇದ್ದ ಸರಕಾರಿ ಶಾಲೆಗಳ ವ್ಯವಸ್ಥಿತವಾದ ಗುಣಾತ್ಮಕ ಶಿಕ್ಷಣ ದೊರಕುತ್ತಿತ್ತು.
ಆಗ ಮಕ್ಕಳಿಗೆ ತಮ್ಮ ಊರು, ಹಳ್ಳಿ, ಬೆಟ್ಟ ಗುಡ್ಡ , ಕಾಡು, ನದಿಗಳೇ ಅವರ ಪಾಲಿನ ಸುಂದರ ಪ್ರಪಂಚವಾಗಿದ್ದವು. ರಜೆಯಲ್ಲಿ ಅಜ್ಜಿ ಮನೆ ಬಿಟ್ಟರೆ ಬೇರೆ ಊರಿಗೆ ಹೋಗುವುದು ಅಪರೂಪ ವಾಗಿರುತ್ತಿತ್ತು. ಆಗ ಇಂದಿನ ಹಾಗೇ ಮನೆಗೊಂದು ಕಾರು, ನಾಲ್ಕಾರು ಬೈಕ್‌ಗಳು ಇರುತ್ತಿರಲಿಲ್ಲ. ಸರಕಾರಿ ಬಸ್‌ಗಳೇ ಎಲ್ಲರ ಪ್ರಯಾಣದ ಸಂಪರ್ಕ ಸೇತುವೆಯಾಗಿತ್ತು.
ಇದನ್ನೂ ಓದಿ: Surendra Pai Column: ಮಾತು ಬೆಳ್ಳಿ, ಮೌನ ಬಂಗಾರ ಎಂದು ನೆನಪಿಸುವ ಸಮಯವಿದು !
ಹಾಗಾಗಿ ಅಂದು ಹಮ್ಮಿಕೊಳ್ಳಲಾಗುತ್ತಿದ್ದ ಶಾಲಾ ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿಗಳ ಪಾಲಿಗೆ ಹೊಸದೊಂದು ಲೋಕವನ್ನೇ ಪರಿಚಯಿಸುತ್ತಿದ್ದವು. ಪ್ರವಾಸ ಬಂತೆಂದರೆ ಸಾಕು ಕಾಗದದ ಹಾಳೆಯಲ್ಲಿ ನಮ್ಮ ಪ್ರವಾಸಕ್ಕೆ ಜಯವಾಗಲಿ ಎಂದು ಬರೆದು ಒಂದಿಷ್ಟು ಚೀಟಿಗಳನ್ನು ಸಿದ್ಧಪಡಿಸಿ ಕೊಳ್ಳುತ್ತಿದ್ದರು.
ಅವುಗಳನ್ನು ಪ್ರವಾಸದ ಮಾರ್ಗ ಮಧ್ಯದಲ್ಲಿ ಕಿಟಕಿಯಿಂದ ಹೊರಗೆಸೆಯುತ್ತಾ ಜೋರಾಗಿ ನಮ್ಮ ಪ್ರವಾಸಕ್ಕೆ ಜಯವಾಗಲಿ ಎಂದು ಬೊಬ್ಬಿಡುತ್ತಾ ಆನಂದಿಸುತ್ತಿದ್ದ ಕಾಲ ಅದಾಗಿತ್ತು. ಪ್ರವಾಸ ಕ್ಕಾಗಿಯೇ ಮನೆಯಲ್ಲಿ ಮಾಡಿದ ತಿಂಡಿಯ ಜೊತೆ ಪೇಟೆಯ ತಿಂಡಿಗಳನ್ನು ಜೋಡಿಸಿಕೊಂಡು ಅತ್ಯುತ್ಸಾಹದಲ್ಲಿ ರಾತ್ರಿಯಿಡೀ ನಿದ್ರೆಯೇ ಮಾಡದೇ ಬೆಳಗಿನ ಜಾವ ಬಸ್ ಹತ್ತುವುದಕ್ಕಾಗಿಯೇ ಕಾಯುತ್ತಿದ್ದ ದಿನಗಳವು.
ಇನ್ನು ಅಂದಿನ ಸಮಯದಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಗಳು ಹೆಚ್ಚಾಗಿ ಇರುತ್ತಿರಲಿಲ್ಲ. ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮುಂದಿದ್ದರೆ ಸಾಲದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕಲಾತ್ಮಕ ಪ್ರತಿಭೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು 2002-03ನೇ ಶೈಕ್ಷಣಿಕ ಸಾಲಿನಿಂದ ಪ್ರತಿಭಾ ಕಾರಂಜಿಯನ್ನು ಪ್ರಾರಂಭಸಿತು.
ಆ ಮೂಲಕ ವಿದ್ಯಾರ್ಥಿಗಳು ತಮ್ಮಿಷ್ಟದ ಯೋಗ, ನೃತ್ಯ, ನಾಟಕ, ರಂಗೋಲಿ, ಚಿತ್ರಕಲೆ, ಸಂಗೀತ, ಕಥೆ ಹೇಳುವುದು ಮುಂತಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಒಂದು ವೇದಿಕೆ ಲಭಿಸಿತು. ಇವುಗಳು ಶಾಲಾಮಟ್ಟದಿಂದ ಪ್ರಾರಂಭಗೊಂಡು ಕ್ಲಸ್ಟರ್, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ತನಕ ಸ್ಪರ್ಧೆಗಳು ಆಯೋಜನೆಗೊಂಡವು.
ವಿದ್ಯಾರ್ಥಿಗಳು ಶಾಲೆಯಲ್ಲಿ ಹಾಗೂ ರಜಾ ಸಮಯದಲ್ಲಿ ತಮ್ಮ ತಮ್ಮ ಗೆಳೆಯರೊಂದಿಗೆ ಕಬಡ್ಡಿ, ಉದ್ದ ಜಿಗಿತ, ಎತ್ತರ ಜಿಗಿತ, ಪೋಲ್ ವಾಲ್ಟ್, ಖೋಖೋಗಳಂತಹ ದೈಹಿಕ ಶ್ರಮಕ್ಕೆ ಹೆಚ್ಚು ಆದ್ಯತೆ ನೀಡುವ ಆಟಗಳನ್ನು ಆಡುತ್ತಿದ್ದರು. ಇಲಾಖೆಯ ವತಿಯಿಂದ ನಡೆಯುವ ಕ್ರೀಡಾಕೂಟದಲ್ಲಿ ತಾ ಮುಂದು ನಾ ಮುಂದು ಎಂದು ಭಾಗವಹಿಸುತ್ತಿದ್ದರು.
ಈಗ ಕ್ರೀಡೆಯಲ್ಲಿ ಭಾಗವಹಿಸಿದರೆ ಓದು ಹಿಂದುಳಿಯುತ್ತದೆ, ಮುಂದಿನ ವರ್ಷ ಎಸ್‌ಎಸ್‌ಎಲ್‌ಸಿ ಬೇರೆ ಯಾವ ಆಟವೂ ಬೇಡ ಎಂಬ ಕೂಗು ಪಾಲಕರದ್ದು. ಇವುಗಳ ಹೊರತಾಗಿಯೂ ಸರಕಾರಿ ಶಾಲೆಗಳು ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು.
ಪ್ರತಿಭಾ ಕಾರಂಜಿಯಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ವಿವಿಧ ಮಟ್ಟದಲ್ಲಿ ಭಾಗವಹಿಸಲು ಸಾಧ್ಯ ವಾಗದ ಕಾರಣ ವಾರ್ಷಿಕ ಸ್ನೇಹ ಸಮ್ಮೇಳನದ ನೆಪದಲ್ಲಿ ಆಸಕ್ತ ವಿದ್ಯಾರ್ಥಿಗಳು ಹಾಡು, ನೃತ್ಯ , ನಾಟಕ, ಕವನ ವಾಚನ, ಛದ್ಮವೇಷ, ಮಿಮಿಕ್ರಿ ಮುಂತಾದ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಹಿಂದೆ ಇಂತಹ ವೇದಿಕೆಗಳು ಮಕ್ಕಳಿಗೆ ಬಹು ಅನುಕೂಲಕರವಾಗಿದ್ದವು.
ಇವೆಲ್ಲವೂ ಹಳೆಯ ಮಾತು. ಕಳೆದ ಒಂದು ದಶಕದಿಂದೀಚೆಗೆ ಜಗತ್ತು ಸಂಪೂರ್ಣ ಬದಲಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ಸಾಕಷ್ಟು ಅವಕಾಶಗಳು, ವೇದಿಕೆಗಳು ಸಿಗುತ್ತಿವೆ. ಸಾಮಾಜಿಕ ಜಾಲತಾಣ ವೆಂಬ ಜಗತ್ತು ಮಕ್ಕಳ ಪಾಲಿನ ಬಹುದೊಡ್ಡ ಪ್ರತಿಭಾ ವೇದಿಕೆಯಾಗಿ ತೆರೆದುಕೊಂಡಿದೆ. ಹಾಗಾಗಿ ಮೊದಲಿದ್ದ ಶಾಲಾ ಶೈಕ್ಷಣಿಕ ಪ್ರವಾಸ, ಶಾಲಾ ಕ್ರೀಡಾಕೂಟಗಳು ಹಾಗೂ ಶಾಲಾ ವಾರ್ಷಿಕೋತ್ಸವ ಎಲ್ಲವೂ ಮಕ್ಕಳ ಪ್ರತಿಭೆಗಳಿಗೆ ಮೀಸಲಾಗಿರುವ ವೇದಿಕೆಗಿಂತಲೂ ಇಂದು ಖಾಸಗಿ ಸಂಸ್ಥೆಗಳು ತಮ್ಮ ಪ್ರತಿಷ್ಠೆ, ದೊಡ್ಡಸ್ಥಿಕೆ, ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಹೆಚ್ಚಳಕ್ಕಾಗಿ ಮಾಡಿಕೊಂಡಿ ರುವ ಪ್ರಚಾರ ವೇದಿಕೆಗಳಾಗಿ ಮಾರ್ಪಟ್ಟಿವೆ.
ಇಂದು ಪಾಲಕರು ತಮ್ಮ ಮಕ್ಕಳನ್ನು ಬಾಲ್ಯದ ಹತ್ತಾರು ಊರು, ರಾಜ್ಯಗಳನ್ನು ಸುತ್ತಾಡಿಸಿರುತ್ತಾರೆ. ಇದಕ್ಕೂ ಮೀರಿ ತಾವು ನೋಡಲಾಗದ ದೇಶ, ವಿದೇಶಗಳ ಅಪರೂಪದ ಸ್ಥಳಗಳ ವಿವರಗಳೆಲ್ಲವೂ ಯೂಟ್ಯೂಬ, ಇನ್ʼಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಸುಲಭವಾಗಿ ಸಿಗುತ್ತಿವೆ. ವೀಕೆಂಡ್ ಬಂತೆಂದರೆ ಸಾಕು ಮನೆಯವರೆ ಸೇರಿ ಚಿಕ್ಕ ಟ್ರಿಪ್ ಪ್ಲ್ಯಾನ್ ಮಾಡಿ ಆಗಿರುತ್ತದೆ.
ಹಾಗಾಗಿ ಈಗ ಮೊದಲಿದ್ದ ಹಾಗೇ ಶಾಲಾ ಪ್ರವಾಸಗಳು, ನಮ್ಮ ಪ್ರವಾಸಕ್ಕೆ ಜಯವಾಗಲಿ ಎಂಬ ಘೋಷಣೆಗಳು ಇಂದು ಔಟ್‌ಡೇಟೆಡ್ ಆಗಿಹೋಗಿವೆ. ನಾವು ಆಯೋಜಿಸುವ ಯಾವುದೋ ಒಂದು ಪ್ರವಾಸ ಸ್ಥಳಕ್ಕೆ ಮಕ್ಕಳು ಈಗಾಗಲೇ ನಾಲ್ಕಾರು ಬಾರಿ ಹೋಗಿ ಬಂದಿರುತ್ತಾರೆ.
ಇನ್ನೂ ಇಂದಿನ ಮಕ್ಕಳಿಗೆ ಮೊಬೈಲ್‌ನಲ್ಲಿನ ಆನ್ಲೈನ್ ಗೇಮ್‌ಗಳ ಮೇಲಿರುವ ಆಸಕ್ತಿ, ಅಭಿರುಚಿ ಯು ನಮ್ಮ ದೇಶೀಯ ಕ್ರೀಡೆಗಳ ಮೇಲಿಲ್ಲ. ಮೊದಲಿನ ಹಾಗೇ ಮಕ್ಕಳು ದೈಹಿಕವಾಗಿ ಸದೃಢರಿಲ್ಲ, ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಕಬಡ್ಡಿ, ಖೋಖೋನಂತಹ ಆಟಗಳನ್ನು ಆಡುವ ಉತ್ಸಾಹ ತೋರುತ್ತಿಲ್ಲ.
ಮಕ್ಕಳಿಗೆ ಉತ್ಸಾಹ ಇದ್ದರೂ ಮಕ್ಕಳು ಎಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೋ ಎಂದು ಅಂತಹ ಆಟಗಳನ್ನು ಆಡಲೂ ಬಿಡುತ್ತಿಲ್ಲ. ಆದರೂ ಸಹ ಖಾಸಗಿ ಶಾಲೆಯ ಮಕ್ಕಳಿಗೆ ಸರಕಾರಿ ಕ್ರೀಡಾ ಕೂಟದಲ್ಲಿ ಹೆಚ್ಚು ಅವಕಾಶ ಸಿಗದ ಕಾರಣ ಶಾಲಾ ಮಟ್ಟದಲ್ಲಿ ವಿವಿಧ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳನ್ನು ಆಯೋಜಿಸಿ ಮಕ್ಕಳಿಗೆ ಭಾಗವಹಿಸಲು ಪ್ರೋತ್ಸಾಹ ನೀಡಲಾಗುತ್ತದೆ.
ಆದರೂ ಸಹ ಮೊದಲಿದ್ದ ಭಾಗವಹಿಸುವಿಕೆ ಈಗಿಲ್ಲ. ಸಾಮಾಜಿಕ ಜಾಲತಾಣವೆಂಬ ಪೆಡಂಭೂತ ವು ಮಕ್ಕಳ ಜೊತೆ ಪಾಲಕರನ್ನು ಸಂಪೂರ್ಣವಾಗಿ ಆವರಿಸಿದೆ. ಮೊದಲು ಮಕ್ಕಳಲ್ಲಿರುವ ಬಹು ಮುಖ ಪ್ರತಿಭೆಗೆ ವೇದಿಕೆಯಾಗಿದ್ದ ಶಾಲಾ ವಾರ್ಷಿಕೋತ್ಸವವು ಸಹ ಮೌಲ್ಯ ಕಳೆದುಕೊಂಡಿದೆ.
ಕಾರಣ ಈಗ ಮಕ್ಕಳಿಗೆ ತಮ್ಮ ಪ್ರತಿಭೆ ವ್ಯಕ್ತಪಡಿಸಲು ಹತ್ತಾರು ಆನ್‌ಲೈನ್ ವೇದಿಕೆಗಳು ಅವಕಾಶ ಕಲ್ಪಿಸಿವೆ. ಈಗ ಮಕ್ಕಳ ಜೊತೆ ಸ್ವತಃ ಪಾಲಕರು ಸಹ ನಿತ್ಯವೂ ಒಂದೆರಡು ಸಿನಿಮಾದ ಟಪ್ಪಾಂ ಗುಚ್ಚಿ ಹಾಡಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ʼಗಾಗಿ ನಾಲ್ಕು ಹೆಜ್ಜೆ ಹಾಕುವುದು ಸಾಮಾನ್ಯವಾಗುತ್ತಿವೆ. ಹಾಡು, ಡೈಲಾಗ್, ಅಭಿನಯದ ಮೂಲಕ ಹೊಸ ಹೊಸ ರೀಲ್ಸ್‌ಗಳನ್ನು ಪೋಸ್ಟ್ ಮಾಡಿ ತಮ್ಮ ಪ್ರತಿಭೆಗೆ ಹೆಚ್ಚು ಹೆಚ್ಚು ಲೈಕ್, ಕಮೆಂಟ್‌ಗಳನ್ನು ಅಪೇಕ್ಷಿಸುವ ಕಾಲವಿದು.
ಹಾಗಂತ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಭಾಗವಹಿಸಲು ಹಿಂದೇಟು ಹಾಕುತ್ತಿಲ್ಲ. ಆದರೆ ಮೊದಲಿದ್ದ ಹಾಗೇ ನೃತ್ಯಗಳ ಮೂಲಕ ಜನಪದ, ಕಲೆ, ಸಂಸ್ಕೃತಿಯ ಅನಾವರಣವಾಗುತ್ತಿಲ್ಲ. ಈಗ ಏನಿದ್ದರೂ ರೀಮಿಕ್ಸ್ ಸಂಗೀತಕ್ಕೆ ಎರ್ರಾಬಿರ್ರಿ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸುವುದೇ ಮಕ್ಕಳಿಗೆ ಇಷ್ಟ. ಇವುಗಳ ಅಬ್ಬರದಲ್ಲಿ ಕವನ ವಾಚನ, ಹಾಡು, ನಾಟಕ, ರೂಪಕ, ಏಕಪಾತ್ರಾಭಿನಯ, ಛದ್ಮವೇಷಗಳೆಲ್ಲವೂ ವೇದಿಕೆಯಿಂದ ಸಂಪೂರ್ಣವಾಗಿ ದೂರ ಸರಿದಿವೆ.
ಅಂತಹ ಕಾರ್ಯಕ್ರಮ ಪ್ರದರ್ಶನವಾದರೂ ಸಹ ನೋಡುವ ಆಸಕ್ತಿ ಜನರಿಗಿಲ್ಲ. ಭಾಗವಹಿಸುವ ಆಸಕ್ತಿ ಮಕ್ಕಳಿಗಿಲ್ಲ. ಅದಕ್ಕೆ ಪಾಲಕರ ಪ್ರೋತ್ಸಾಹವು ಇಲ್ಲ. ಇವೆಲ್ಲವುಗಳ ನಡುವೆಯೂ ಮೌಲ್ಯ ಯುತ ಕಾರ್ಯಕ್ರಮವನ್ನು ಆಯೋಜಿಸುವ ಖಾಸಗಿ ಶಾಲೆಗಳು ಇಲ್ಲವೆಂದಲ್ಲ.
ಆದರೂ ಸಹ ಇಂದು ಬಹುತೇಕ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ದೂರಿ ಲೈಟಿಂಗ್, ಸೌಂಡ್ ಸಿಸ್ಟಮ್, ಎಲ್‌ಇಡಿ ಪರದೆಯಿರುವ ವೇದಿಕೆಯನ್ನು ಶಾಲಾ ವಾರ್ಷಿಕೋತ್ಸವಕ್ಕಾಗಿ ನಿರ್ಮಿಸುತ್ತಾರೆ. ಊರು ತುಂಬೆ ಕಾರ್ಯಕ್ರಮದ ಫ್ಲೆಕ್ಸ್ʼಗಳ ಅಬ್ಬರದ ಪ್ರಚಾರ ನಡೆಯುತ್ತವೆ.
ಕಾರ್ಯಕ್ರಮದ ಪಟ್ಟಿಯಲ್ಲಿ ಸಾಲು ಸಾಲು ರಾಜಕೀಯ ದುರೀಣರು, ಸಿನಿಮಾ ತಾರೆಯರು ಅಗ್ರಸ್ಥಾನವನ್ನು ಅಲಂಕರಿಸಿರುತ್ತಾರೆ. ಅದು ಶಾಲಾ ವಾರ್ಷಿಕೋತ್ಸವವೋ, ರಾಜಕೀಯ ಸಮಾ ವೇಶವೋ, ಸಿನಿಮಾ ಪ್ರಚಾರದ ವೇದಿಕೆಯೋ ಒಂದೂ ಅರ್ಥವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಅದರ ಬದಲಾಗಿ ಮಕ್ಕಳಲ್ಲಿ ಸಾಹಿತ್ಯ, ಸಂಗೀತ , ನಾಟಕಗಳ ಅಭಿರುಚಿಯನ್ನು ಬೆಳೆಸುವ ಸಾಹಿತಿ ಗಳು, ಲೇಖಕರು, ನಾಟಕಕಾರರು, ಸಂಗೀತಗಾರರು, ಭಾಷಣಕಾರರನ್ನು ಕರೆಯಿಸಬಹುದಲ್ಲವೇ? ಆದರೆ ಅಂತವರನ್ನು ಕರೆಯಿಸಿದರೆ ಕಾರ್ಯಕ್ರಮಕ್ಕೆ ಜನ ಬರುವುದಿಲ್ಲ, ಖರ್ಚು ಮಾಡಿದ ಲಕ್ಷಾಂ ತರ ರುಪಾಯಿ ಬಂಡವಾಳ ನಷ್ಟವಾಗುತ್ತೆ.
ಮುಖ್ಯವಾಗಿ ನಾಳೆ ಸಾಹಿತಿ, ಲೇಖಕರಿಂದ ಸಂಸ್ಥೆಯವರಿಗೆ ಯಾವ ಪ್ರಯೋಜನವು ಇಲ್ಲ. ಅದುವೇ ರಾಜಕಾರಣಿ, ಸಿನಿಮಾ ತಾರೆ ಅತಿಥಿಗಳಾಗಿ ಬಂದರೆ ಲಾಭ ಹೆಚ್ಚು. ಇವೆಲ್ಲವನ್ನೂ ನೋಡಿದಾಗ ಯಾವ ಉದ್ದೇಶಕ್ಕಾಗಿ ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸದಂತಹ ವೇದಿಕೆಗಳು ಹಿಂದೊ ಮ್ಮೆ ನಿರ್ಮಾಣವಾಗಿದ್ದವೋ ಅವುಗಳ ಅಗತ್ಯತೆ ಇಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಒಂದು ವೇಳೆ ಇದೇ ಎಂದಾದರೆ ಇಂತಹ ವೇದಿಕೆಗಳನ್ನು ಬಳಸಿಕೊಳ್ಳುವುದರ ಮೇಲೆ ಎಲ್ಲವೂ ನಿರ್ಧರಿತವಾಗುತ್ತದೆ. ಅಷ್ಟಕ್ಕೂ ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಡೆಸುವ ಶಾಲಾ ವಾರ್ಷಿ ಕೋತ್ಸವದಲ್ಲಿ ತಮ್ಮತಮ್ಮ ಮಕ್ಕಳ ಕಾರ್ಯಕ್ರಮವನ್ನು ಮಾತ್ರ ನೋಡಲು ಬರುವ ಪಾಲಕರೇ ಹೆಚ್ಚಾಗಿದ್ದಾರೆ. ಹೀಗಿರುವಾಗ ಇನ್ನು ಅದ್ದೂರಿ ಖರ್ಚು ವೆಚ್ಚದ ಶಾಲಾ ವಾರ್ಷಿಕೋತ್ಸವ ನೋಡಿ ಪಾಲಕರು ದಾಖಲಾತಿ ಮಾಡಿಸುತ್ತಾರೆ ಎಂಬುದು ಶುದ್ಧ ಭ್ರಮೆ. ಅವೆಲ್ಲವೂ ಆ ಕ್ಷಣಕ್ಕೆ ಒಂದು ಮನರಂಜನೆಯ ಸಾಧನವಷ್ಟೇ.