ವಿಶ್ವರಂಗ
ನಾವು ಯುದ್ಧಕ್ಕಿಂತ ಭೀಕರವಾದ ಸನ್ನಿವೇಶವನ್ನು ಪ್ರವೇಶಿಸುತ್ತಿದ್ದೇವೆ. ಅದೇ ಲೀಡರ್ ಲೆಸ್ ಪವರ್, ಲೀಡರ್‌ಲೆಸ್ ವರ್ಲ್ಡ್! ಇಂಥ ಸನ್ನಿವೇಶವನ್ನು ‘ಕಿಂಡ್ಲ್ ಬರ್ಗರ್ ಟ್ರ್ಯಾಪ್’ ಎನ್ನಲಾಗುತ್ತದೆ. ಹಳೆಯ ಶಕ್ತಿಶಾಲಿ ದೇಶಕ್ಕೆ ಜಗತ್ತನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಸ ಶಕ್ತಿಗಳಿಗೆ, ಹಳೆಯ ಸುಪ್ರೀಂ ಪವರ್ ಬದಲಿಗೆ ತಾವು ಆ ಸ್ಥಾನದಲ್ಲಿ ಕೂರಲು ಆಗುವುದಿಲ್ಲ. ಆಗ ‘ಟ್ರೇಡ್ ರೂಲ್ಸ್’ ಮುರಿದು ಹೋಗುತ್ತದೆ. ಜಾಗತಿಕ ವ್ಯವಸ್ಥೆಯಲ್ಲಿ ಬಿರುಕು ಮೂಡಲು ಆರಂಭ ವಾಗುತ್ತದೆ.
ಇವತ್ತಿನ ಭೂ-ರಾಜಕೀಯದ ಅತ್ಯಂತ ಅಪಾಯಕಾರಿ ಅಂಶ ಯುದ್ಧ ಅಲ್ಲವೇ ಅಲ್ಲ. ನಾವಂದುಕೊಂಡಂಥ ದೊಡ್ಡ ಯುದ್ಧ, ಮೂರನೇ ವಿಶ್ವಯುದ್ಧ ಆಗುವ ಸಂಭಾವ್ಯತೆ ಬಹಳ ಕಡಿಮೆ. ಹಾಗಾದರೆ ಇವತ್ತಿನ ದಿನದ ಅತ್ಯಂತ ಅಪಾಯಕಾರಿ ಅಂಶ ಯಾವುದು? ಅದು ರಾಜನಿಲ್ಲದ ಅರಮನೆ, ನಾವಿಕನಿಲ್ಲದ ದೋಣಿ, ಅಮ್ಮನಿಲ್ಲದ ಮಕ್ಕಳ ಕಥೆ, ಶಿಕ್ಷಕರೇ ಇಲ್ಲದ ಶಾಲೆಯ ಕಥೆ!
ಅರ್ಥಾತ್ ಖಾಲಿತನ. ದಾರಿ ತೋರಿಸುವ ಹಿರಿಯ ಜೀವವಿಲ್ಲದ ಸೂತಕದ ಛಾಯೆಯ ಸನ್ನಿವೇಶ ಇದೆಯಲ್ಲ ಅದು ಯುದ್ಧಕ್ಕಿಂತ ಭಯಾನಕ. ನಾಳೆಯ ಬಗ್ಗೆ ಭರವಸೆ ಕಳೆದು ಕೊಂಡುಬಿಟ್ಟರೆ? ನಂಬಿಕೆ ಎನ್ನುವುದೇ ಇಲ್ಲವಾದರೆ? ಮನೆ ನಡೆಯಲು ಒಂದು ವ್ಯವಸ್ಥೆ ಬೇಕಲ್ಲವೇ, ಥೇಟ್ ಹಾಗೆ ವಿಶ್ವವ್ಯವಸ್ಥೆ ಬೇಕು.
ಅಮೆರಿಕ ವಿಶ್ವವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಾಗಿ ಉಳಿದಿಲ್ಲ. ಇದರರ್ಥ ಬೇರೆ ದೇಶ ಗಳಿಗೆ ಆ ಶಕ್ತಿ ಬಂದಿದೆ ಎನ್ನುವುದೂ ಅಲ್ಲ. ಚೀನಾ, ಭಾರತ ಅಥವಾ ರಷ್ಯಾ ಯಾವೊಂದು ದೇಶಕ್ಕಾದರೂ ವಿಶ್ವವನ್ನು ಮುನ್ನಡೆಸುವ ಶಕ್ತಿ ಇದ್ದಿದ್ದರೆ ಈ ವೇಳೆಗೆ ಶಕ್ತಿ ಹಸ್ತಾಂತರ ಸುಲಭವಾಗಿ ಆಗಿ ಬಿಡುತ್ತಿತ್ತು. ಆದರೆ ಇವತ್ತಿನ ದಿನದ ವಿಪರ್ಯಾಸ ನೋಡಿ.
ಅಮೆರಿಕದ ಬಳಿ ಮೊದಲಿನ ಶಕ್ತಿ ಇಲ್ಲ. ಬೇರಾವ ದೇಶಕ್ಕೂ ಅದನ್ನು ಬದಿಗಿಟ್ಟು ನಾಯಕತ್ವ ವಹಿಸಿಕೊಳ್ಳುವ ತಾಕತ್ತು ಇಲ್ಲ. ಹೀಗಾಗಿ ಇನ್ನು ಮುಂದೆ ಜಗತ್ತು ಒಡೆದಮನೆ. ಚೀನಾ ತನ್ನ ಕೈಲಾದಷ್ಟು ದೇಶಗಳನ್ನು ನಿಯಂತ್ರಿಸುತ್ತದೆ, ಭಾರತ ತನ್ನದೇ ಒಕ್ಕೂಟವನ್ನು ಕಟ್ಟಿಕೊಳ್ಳುತ್ತದೆ.
ರಷ್ಯಾ, ಅಮೆರಿಕ, ಯುರೋಪು, ಜಪಾನ್ ಹೀಗೆ ಎಲ್ಲಾ ದೇಶಗಳೂ ತಮ್ಮ ತಮ್ಮ ಕೈಲಾ ದಷ್ಟು ನಿಯಂತ್ರಿಸಲು ತೊಡಗುತ್ತವೆ. ಜಗತ್ತು ಒಗ್ಗೂಡುವುದು ಅಸಾಧ್ಯ. ಎಲ್ಲಾ ದೇಶಗಳೂ ತಮ್ಮ ತಮ್ಮ ಲಾಭಕ್ಕೆ ಕೆಲಸಮಾಡಲು ತೊಡಗುತ್ತವೆ.
ಇದನ್ನೂ ಓದಿ: Rangaswamy Mookanahalli Column: ನಮ್ಮಲ್ಲಿರುವುದು ದೂರ ಹೋದಾಗ ಅದರ ಮೌಲ್ಯ ತಿಳಿಯುತ್ತದೆ !
ಕಳೆದ 70 ವರ್ಷದಿಂದ ಅಮೆರಿಕ ಎನ್ನುವ ಹಿರಿಯಣ್ಣನ ಬಗೆಗಿನ ಗೌರವ, ಭಯ ಇವರೆಡರ ಮಿಶ್ರಣವು ಜಾಗತಿಕ ರಾಜಕೀಯ, ಆರ್ಥಿಕತೆ, ಅಭಿವೃದ್ಧಿ ಇವುಗಳನ್ನು ಒಂದು ಚೌಕಟ್ಟಿ ನಲ್ಲಿ ಹಿಡಿದಿಟ್ಟಿತ್ತು. ಎರಡನೇ ಮಹಾಯುದ್ಧದ ನಂತರ ಜಗತ್ತು ನಾಯಕನಿಗಾಗಿ ಹುಡುಕಾಟದಲ್ಲಿತ್ತು. ಅಮೆರಿಕ ಆ ಜಾಗವನ್ನು ಸುಲಭವಾಗಿ ತುಂಬಿತು. ಅಮೇಲಿನದು ನಮಗೆ ಗೊತ್ತಿರುವ ಕಥೆ.
ತನ್ನ ಹಿರಿಯಣ್ಣನ ಸ್ಥಾನವನ್ನು ಅಮೆರಿಕ ತನ್ನ ಒಳಿತಿಗಾಗಿ ಬಳಸಿಕೊಂಡಿತು, ಬಲಿಷ್ಠವಾಗಿ ಬೆಳೆಯಿತು. ಶಕ್ತಿಶಾಲಿ ದೇಶದ ಮುಂದೆ ಬೇರೆ ದೇಶಗಳೂ ಹೆಚ್ಚು ಮಾತಾಡದೆ ಆಜ್ಞೆಯನ್ನು ಪಾಲಿಸುತ್ತಿದ್ದವು. ಇಂದು ವ್ಯವಸ್ಥೆ ಸೃಷ್ಟಿಯಾಗಿತ್ತು. ಅದು ಬಹಳ ಚೆನ್ನಾಗಿ ನಡೆದು ಕೊಂಡು ಕೂಡ ಬಂದಿತ್ತು.
ಅಮೆರಿಕದ ಬಂಡವಾಳಶಾಹಿಗಳಿಗೆ ಅಮೆರಿಕದಲ್ಲಿ ಆದ ಅಭಿವೃದ್ಧಿ ಕಥೆಯನ್ನು ವಿಶ್ವದೆಡೆ ರಿಲೀಸ್ ಮಾಡುವ ಹುಮ್ಮಸ್ಸು ಹೆಚ್ಚಾಯ್ತು. ಮನುಷ್ಯ ಒಂದಂಶ ಮರೆತು ಬಿಡುತ್ತಾನೆ- ಅದೆಷ್ಟೇ ಎತ್ತರಕ್ಕೆ ಏರಿರಲಿ ಅದು ಇಳಿಯಲೇಬೇಕು, ಅದು ಪ್ರಕೃತಿಧರ್ಮ. ಅಭಿವೃದ್ಧಿ ಕಥೆಗಾಗಿ ಕೈಮೀರಿದ ಸಾಲವನ್ನು ಮಾಡಿಕೊಳ್ಳುತ್ತ ಹೋದದ್ದು ಇವತ್ತಿನ ಪರಿಸ್ಥಿತಿಗೆ ಕಾರಣವಾಗಿದೆ.
ಅಮೆರಿಕದ ನಾಯಕತ್ವದಲ್ಲಿ ನಡೆದುಕೊಂಡು ಬಂದ ‘ವರ್ಲ್ಡ್ ಆರ್ಡರ್’ನಲ್ಲಿ ಎಲ್ಲವೂ ನ್ಯಾಯಯುತವಾಗಿತ್ತು ಎಂದು ಹೇಳುವುದು ಇಲ್ಲಿನ ಉದ್ದೇಶವಲ್ಲ. ಅಥವಾ ಎಲ್ಲವೂ ಅನ್ಯಾಯವೇ ಆಗಿದೆ ಎಂದು ಹಲುಬುವುದು ಕೂಡ ಅಲ್ಲ. ಅದೊಂದು ಆಡಳಿತಾತ್ಮಕ ವ್ಯವಸ್ಥೆಯಾಗಿತ್ತು. ಎಪ್ಪತ್ತು ವರ್ಷದಲ್ಲಿ ಬಹಳಷ್ಟು ಬದಲಾವಣೆಯಾಗಿದೆ.
ಕಳೆದ ಮೂವತ್ತು ವರ್ಷದಲ್ಲಿ ಅಮೆರಿಕವನ್ನು ಚಾಲೆಂಜ್ ಮಾಡುವ ಮಟ್ಟಕ್ಕೆ ಚೀನಾ ಬೆಳೆದಿದೆ. ಆದರೆ ಅಮೆರಿಕವನ್ನು ಬದಲಿಸಿ ಆ ಜಾಗವನ್ನು ತುಂಬುವ ಮಟ್ಟಕ್ಕೆ ಬೆಳೆದಿಲ್ಲ. ಎರಡನೇ ಮಹಾಯುದ್ಧದ ನಂತರ ಅಮೆರಿಕ ನಾಯಕತ್ವ ವಹಿಸಿಕೊಂಡಾಗ ಎಲ್ಲಾ ದೇಶ ಗಳೂ ಅದನ್ನು ಒಪ್ಪಿಕೊಂಡವು.
ಇವತ್ತಿನ ಪರಿಸ್ಥಿತಿ ಬೇರೆಯದಿದೆ. ಚೀನಾವನ್ನು ಎಲ್ಲಾ ದೇಶಗಳೂ ಒಪ್ಪಿಕೊಳ್ಳುವುದಿಲ್ಲ. ಜಗತ್ತಿನ ತೂಕವನ್ನು ಹೊರುವ ಶಕ್ತಿಯನ್ನು ಚೀನಾ ಕೂಡ ಬೆಳೆಸಿಕೊಂಡಿಲ್ಲ. ಅಮೆರಿಕ ವನ್ನು ನಾವೆಷ್ಟೇ ‘ವಿಲನ್’ ಎಂದರೂ, ಜಗತ್ತಿನ ತೂಕವನ್ನು ಅದು ಹೊತ್ತುಕೊಂಡು ಬಂದದ್ದು ಮಾತ್ರ ಸುಳ್ಳಲ್ಲ.
ಇನ್ನು ಯುರೋಪು ತನ್ನ ಒಳಜಗಳ, ಆಂತರಿಕ ಸಮಸ್ಯೆಗಳಿಂದ ತುಂಬಿದೆ. ಅಲ್ಲಿ ಒಂದು ದೇಶವನ್ನು ಇನ್ನೊಂದು ನಾಯಕನೆಂದು ಒಪ್ಪಿಕೊಳ್ಳುವುದು ಬಹಳ ಕಷ್ಟ. ಒಂದು ದೇಶ ವಾಗಿ ರಷ್ಯಾ ಶಕ್ತಿಶಾಲಿ, ಪುಟಿನ್ ಸಮರ್ಥ ನಾಯಕ. ಆದರೆ ರಷ್ಯಾ ಮತ್ತು ಪುಟಿನ್ ಜಗತ್ತನ್ನು ಮುನ್ನಡೆಸುವಷ್ಟು ಬೆಳೆದಿಲ್ಲ. ಉಳಿದಂತೆ ಜಪಾನ್, ಭಾರತ, ಬ್ರೆಝಿಲ್, ದಕ್ಷಿಣ ಆಫ್ರಿಕಾ ದೇಶಗಳು ತಮ್ಮ ನೆಲೆಯಲ್ಲಿ ಶಕ್ತಿಶಾಲಿ ದೇಶಗಳಾಗಿವೆ. ಆದರೆ ಯಾವ ದೇಶಕ್ಕೂ ಜಗತ್ತನ್ನು ಮುನ್ನಡೆಸುವ ಶಕ್ತಿಯಿಲ್ಲ. ನಾವು ಯುದ್ಧಕ್ಕಿಂತ ಭೀಕರವಾದ ಸನ್ನಿವೇಶಕ್ಕೆ ಪ್ರವೇಶ ಮಾಡುತ್ತಿದ್ದೇವೆ. ಅದೇ ಲೀಡರ್ ಲೆಸ್ ಪವರ್, ಲೀಡರ್‌ಲೆಸ್ ವರ್ಲ್ಡ್!
ಜಾಗತಿಕ ರಾಜಕೀಯ ವಿಶ್ಲೇಶಕರು ಇಂಥ ಸನ್ನಿವೇಶವನ್ನು ‘ಕಿಂಡ್ಲ್‌ಬರ್ಗರ್ ಟ್ರ್ಯಾಪ್’ ಎನ್ನುತ್ತಾರೆ. ಹಳೆಯ ಶಕ್ತಿಶಾಲಿ ದೇಶಕ್ಕೆ ಜಗತ್ತನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಸ ಶಕ್ತಿಗಳಿಗೆ, ಹಳೆಯ ಸುಪ್ರೀಂ ಪವರ್ ಬದಲಿಗೆ ತಾವು ಆ ಸ್ಥಾನದಲ್ಲಿ ಕೂರಲು ಆಗುವುದಿಲ್ಲ. ಆಗ ‘ಟ್ರೇಡ್ ರೂಲ್ಡ್’ ಮುರಿದುಹೋಗುತ್ತದೆ. ಜಾಗತಿಕ ವ್ಯವಸ್ಥೆಯಲ್ಲಿ ಬಿರುಕುಮೂಡಲು ಆರಂಭವಾಗುತ್ತದೆ.
ಸಣ್ಣ ಸಣ್ಣ ಶಕ್ತಿಶಾಲಿ ದೇಶಗಳು ಸ್ವತಂತ್ರವಾಗಿ ವರ್ತಿಸಲು ಶುರುಮಾಡುತ್ತವೆ. ಯಾವ ದೇಶವೂ ಇನ್ನೊಂದು ದೇಶಕ್ಕೆ ‘ಹೀಗೆ ಮಾಡು’ ಎನ್ನುವ ಅರ್ಹತೆ, ವಿಶ್ವಾಸ ಉಳಿಸಿ ಕೊಳ್ಳುವುದಿಲ್ಲ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅವು ಗುಂಪುಗಳನ್ನು ಕಟ್ಟಿಕೊಳ್ಳುತ್ತವೆ. ಅಂಥ ಗುಂಪುಗಳಲ್ಲಿ ಕೂಡ ಹೊಂದಾಣಿಕೆ ಎನ್ನುವುದು ಮರೀಚಿಕೆಯಾಗುತ್ತದೆ.
ಎಲ್ಲವನ್ನೂ ಲಾಭ ಮತ್ತು ನಷ್ಟದ ಆಧಾರದ ಮೇಲೆ ಮಾತ್ರ ನೋಡಲಾಗುತ್ತದೆ. ಇಂಥ ಎಲ್ಲಾ ಲಕ್ಷಣಗಳನ್ನೂ ನೀವು ಈಗ ಜಾಗತಿಕವಾಗಿ ಗಮನಿಸಬಹುದು. ಭಾರತ, ರಷ್ಯಾ ಮತ್ತು ಚೀನಾ ದೇಶಗಳು ಅಮೆರಿಕದ ಆದೇಶವನ್ನು ತಿರಸ್ಕರಿಸುವ ಮಟ್ಟಕ್ಕೆ ಮುಟ್ಟಿವೆ, ತಿರಸ್ಕರಿಸಿವೆ. ಆದರೆ ಇವುಗಳು ಅಮೆರಿಕವನ್ನು ‘ರಿಪ್ಲೇಸ್’ ಮಾಡುವ ಸಾಮರ್ಥ್ಯ ಹೊಂದಿಲ್ಲ.
ಇದರ ಜತೆಗೆ ಒಕ್ಕೂಟಗಳಲ್ಲಿ ಮೊದಲಿನ ಒಗ್ಗಟ್ಟು ಕೂಡ ಇಲ್ಲವಾಗಿದೆ. ನ್ಯಾಟೋ ಒಕ್ಕೂಟ, ಯೂರೋಪಿಯನ್ ಒಕ್ಕೂಟ ಅಥವಾ ಬ್ರಿಕ್ಸ್ ಒಕ್ಕೂಟಗಳನ್ನು ಗಮನಿಸಿ ನೋಡಿ; ಇಲ್ಲಿ ಎಲ್ಲಾ ಸದಸ್ಯ ದೇಶಗಳೂ ಹೆಸರಿಗಷ್ಟೇ ‘ಸದಸ್ಯ ದೇಶಗಳು’, ಅವೆಲ್ಲವೂ ತಮ್ಮ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುತ್ತಿವೆ.
ಒಕ್ಕೂಟದ ಧ್ಯೇಯ ಮತ್ತು ಉದ್ದೇಶ ಪ್ರಮುಖ ಎಂದು ಇವುಗಳಿಗೆ ಅನ್ನಿಸುವುದೇ ಇಲ್ಲ. ಗಮನಿಸಿ ನೋಡಿ, ಮೇಲಿನ ಸನ್ನಿವೇಶ ಏಕೆ ಉಂಟಾಗುತ್ತದೆ? ಯಾವಾಗ ಎಲ್ಲಾ ದೇಶಗಳಿ ಗಿಂತ ಪ್ರಬಲವಾದ ದೇಶ ಇರುವುದಿಲ್ಲ ಆಗೆ ಇಂಥ ಸನ್ನಿವೇಶ ಉಂಟಾಗುತ್ತದೆ. ಇವತ್ತಿನ ದಿನದಲ್ಲಿ ಜಗತ್ತಿನ ಐದಾರು ದೇಶಗಳು ಸಮಬಲ ಹೊಂದಿವೆ.
ಸಮಬಲ ಅಲ್ಲದಿದ್ದರೂ ಒಂದನ್ನು ಇನ್ನೊಂದು ಅಪೋಶನ ತೆಗೆದುಕೊಳ್ಳುವ ಅಥವಾ ಸುಮ್ಮನಾಗಿಸುವ ಶಕ್ತಿಯನ್ನು ಹೊಂದಿಲ್ಲ. ಹೀಗಾಗಿ ಇವತ್ತು ಜಗತ್ತು ಒಡೆದಮನೆ. ಇದು ದ್ವೇಷ ಮತ್ತು ಅಸಹ್ಯ ಪೈಪೋಟಿಗೆ ಕಾರಣವಾಗುತ್ತದೆ. ಮೊದಲ ಸಾಲುಗಳನ್ನು ಮತ್ತೆ ಈಗ ಓದಿ.
ವಿಶ್ವ ಯುದ್ಧ ಆಗುವುದಿಲ್ಲ. ಏಕೆಂದರೆ ಎಲ್ಲರೂ ಅವರವರ ಲಾಭ-ನಷ್ಟದ ಲೆಕ್ಕಾಚಾರ ದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಯುದ್ಧ ಎನ್ನುವುದು ನಿಲ್ಲುವುದೇ ಇಲ್ಲ. ಇರಾನ್, ಇಸ್ರೇಲ್, ಅಮೆರಿಕ ಮತ್ತು ಕೊಲ್ಲಿ ದೇಶಗಳಲ್ಲಿನ ಸಂಘರ್ಷ ನಿಂತ ತಕ್ಷಣ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಡಬಹುದು.
ತೈವಾನ್ ದೇಶದ ಮೇಲೆ ಚೀನಾ ದಾಳಿ ಮಾಡುತ್ತದೆ. ಉಕ್ರೇನ್ ದೇಶವನ್ನು ರಷ್ಯಾ ಪೂರ್ಣ ವಾಗಿ ಅಪೋಶನ ತೆಗೆದುಕೊಳ್ಳುತ್ತದೆ. ಆಟದಲ್ಲಿ ಇಲ್ಲ ಎಂದುಕೊಂಡಿರುವ ಜಪಾನ್ ಕೂಡ ‘ನನಗೂ ತೈವಾನ್ ಬೇಕು’ ಎಂದು ಸಂಘರ್ಷಕ್ಕೆ ಇಳಿಯುವ ಸಾಧ್ಯತೆಯನ್ನು ತಳ್ಳಿಹಾಕು ವಂತಿಲ್ಲ.
ಒಟ್ಟಾರೆ ದೊಡ್ಡ ಮಟ್ಟದ ಯುದ್ಧ ಆಗದಿದ್ದರೂ ಜಗತ್ತಿನ ಒಂದಲ್ಲ ಒಂದು ಭಾಗದಲ್ಲಿ ಯುದ್ಧದ ಕರಿನೆರಳು ಇದ್ದೇ ಇರುತ್ತದೆ. ಎಲ್ಲಿಯವರೆಗೆ ಗ್ಲೋಬಲ್ ಲೀಡರ್ ಉಗಮ ವಾಗುವುದಿಲ್ಲವೋ ಅಲ್ಲಿಯವರೆಗೆ ಈ ನೋವು ತಪ್ಪಿದ್ದಲ್ಲ.
ಯಾವೊಂದು ದೇಶವೂ ‘ಕ್ಲಿಯರ್ ಲೀಡರ್’ ಆಗಿ ಹೊರಹೊಮ್ಮಲು ಸಾಧ್ಯವಾಗದೆ ಇರುವು ದಕ್ಕೆ ಕಾರಣ ನಮ್ಮ ಇಂದಿನ ಹಣಕಾಸು ಪರಿಸ್ಥಿತಿ. ಅಮೆರಿಕವು ತಾನೇ ಸೃಷ್ಟಿಸಿದ ಹಣಕಾಸು ಮತ್ತು ಅಭಿವೃದ್ಧಿ ಆಟದಲ್ಲಿ ಚೀನಾ, ಭಾರತ ಮತ್ತು ಇತರ ದೇಶಗಳ ಎದುರು ನಿಧಾನವಾಗಿ ಮಂಡಿಯೂರುತ್ತಿದೆ.
ತೀರಿಸಲಾಗದ ಸಾಲ ಅದರ ಬಲವನ್ನು ಕ್ಷೀಣಿಸುವಂತೆ ಮಾಡಿದೆ. ಚೀನಾ ಕೂಡ ಹಣಕಾಸಿನ ವಿಷಯದಲ್ಲಿ ಅದ್ಬುತ ಎನ್ನುವಂಥ ಪರಿಸ್ಥಿತಿಯಲಿಲ್ಲ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಕೈ ಬರಿದು ಮಾಡಿಕೊಂಡಿದೆ. ಯುರೋಪಿಯನ್ ಒಕ್ಕೂಟದಲ್ಲಿ ‘ಗ್ರೋತ್ ರೇಟ್’ ಇಲ್ಲವೆನ್ನವಷ್ಟು ಕಡಿಮೆ. ಅವರು ಸಮಸ್ಥಿತಿ ಕಾಯ್ದುಕೊಂಡರೆ ಸಾಕು ಎನ್ನುವಂಥ ಸ್ಥಿತಿಯಲ್ಲಿದ್ದಾರೆ.
ಇದೆಲ್ಲವೂ ಸರಿ, ಮೇಲೆ ಉಲ್ಲೇಖಿಸಿರುವುದು ಇವತ್ತು ಜಗತ್ತಿನಲ್ಲಿ ಆಗುತ್ತಿರುವುದನ್ನು ಗ್ರಹಿಸಿ ಹೇಳಿರುವಂಥದ್ದು. ಆದರೆ ಈ ಪರಿಸ್ಥಿತಿ ಯಾವಾಗ ಬದಲಾಗುತ್ತದೆ? ಯಾವಾಗ ಹೊಸ ವಿಶ್ವ ವ್ಯವಸ್ಥೆ ಸಿದ್ಧವಾಗುತ್ತದೆ, ಯಾವಾಗ ಯುದ್ಧಗಳು ನಿಲ್ಲುತ್ತವೆ, ಯಾವಾಗ ಶಾಂತಿ ನೆಲೆಸು ತ್ತದೆ, ಯಾವಾಗ ಮತ್ತೆ ಅಭಿವೃದ್ಧಿಯ ಓಟ ಶುರುವಾಗುತ್ತದೆ? ಇವೆ ಪ್ರಶ್ನೆಗಳಿಗೆ ಉತ್ತರವಿದೆ ಯಲ್ಲ ಅದು ಮಾತ್ರ ಎಂಥವರನ್ನೂ ಚಿಂತೆಗೆ ತಳ್ಳುತ್ತದೆ.
ಏಕೆಂದರೆ ಸದ್ಯಕ್ಕೆ ಅಂದರೆ ಮುಂದಿನ ಕನಿಷ್ಠ ಹತ್ತು ವರ್ಷಗಳ ಕಾಲ ಜಗತ್ತು ಹೀಗೆ ಛಿದ್ರವಾಗಿರಲಿದೆ. ಒಂದು ದೇಶವನ್ನು ನಾಯಕನೆಂದು ಒಪ್ಪಲು ಯಾರೂ ಸಿದ್ಧರಿಲ್ಲ. ಮುಂದಿನ ಹತ್ತು ವರ್ಷದಲ್ಲಿ ಆರ್ಥಿಕವಾಗಿ ಎಷ್ಟು ಬಲಿಷ್ಠರಾಗಿರುತ್ತೇವೆ ಎನ್ನುವುದರ ಆಧಾರದ ಮೇಲೆ, ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಮೇಲೆ ಎಷ್ಟು ಹಿಡಿತ ಸಾಧಿಸಿರು ತ್ತೇವೆ ಎನ್ನುವುದರ ಮೇಲೆ ಮತ್ತು ಯಾವ ದೇಶ ಉತ್ಪಾದನಾ ಕ್ಷೇತ್ರದಲ್ಲಿ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತದೆ, ಯಾವ ದೇಶ ಜಗತ್ತಿನ ಇತರ ದೇಶಗಳಿಗಿಂತ ಕಡಿಮೆ ಅವಲಂಬನೆ ಯನ್ನು ಹೊಂದಿರುತ್ತದೆ ಎನ್ನುವುದರ ಮೇಲೆ, ಆ ದೇಶ ನಾಯಕನಾಗುವ ಸಾಧ್ಯತೆಗಳಿವೆ.
ಇವೆಲ್ಲವೂ ಇದ್ದು ಕೂಡ ಜಗತ್ತು ಚೀನಾವನ್ನು ನಾಯಕನೆಂದು ಒಪ್ಪಿಕೊಳ್ಳದೆ ಹೋಗಬಹುದು. ಒಂದು ದೇಶ ಅಶಕ್ತವಾಗಿದ್ದು ಅಲಿಪ್ತ ನೀತಿಯನ್ನು ಅನುಸರಿಸಿದರೆ ಆ ದೇಶವನ್ನು ಜಗತ್ತು ‘ದುರ್ಬಲ’ ಎಂದು ನೋಡುತ್ತದೆ. ಅದೇ ದೇಶ ಸಶಕ್ತವಾಗಿದ್ದು ಅಲಿಪ್ತ ನೀತಿಯನ್ನು ಅನುಸರಿಸಿದರೆ ಅದು ‘ಡಿಪ್ಲೊಮಸಿ’ ಎನ್ನಿಸಿಕೊಳ್ಳುತ್ತದೆ. ಭಾರತ ಬಹಳ ಹಿಂದಿನಿಂದ ಅಲಿಪ್ತ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಆದರೆ ಭಾರತವನ್ನು ಅಂದಿಗೆ ‘ದುರ್ಬಲ’ ಎನ್ನುವಂತೆ ನೋಡಲಾಗುತ್ತಿತ್ತು.
ಇವತ್ತು ಅಮೆರಿಕದ ಆದೇಶವನ್ನು ನಿರ್ಲಕ್ಷಿಸುವ ಹಂತಕ್ಕೆ ಭಾರತ ಬೆಳೆದಿದೆ. ಹೀಗಿದ್ದೂ ಅದು ನೇರವಾಗಿ ಯುದ್ಧದಲ್ಲಿ ಭಾಗಿಯಾಗಿಲ್ಲ. ಇವತ್ತಿಗೆ ಭಾರತದ ವಿದೇಶಾಂಗ ನೀತಿ ಯನ್ನು, ಡಿಪ್ಲೊಮ್ಯಾಟಿಕ್ ಶಕ್ತಿಯನ್ನು ಜಗತ್ತು ಕೊಂಡಾಡುತ್ತಿದೆ. ನಿಜ ಹೇಳಬೇಕೆಂದರೆ ಭಾರತ ಮಾಡುತ್ತಿರುವುದು ಅದೇ ಅಲಿಪ್ತ ನೀತಿಯ ಮುಂದುವರಿಕೆ!
ಆದರೆ ಕಳೆದ 10-12 ವರ್ಷದಲ್ಲಿ ಭಾರತ ಆರ್ಥಿಕವಾಗಿ ಬೆಳೆದುದರ ಫಲವಾಗಿ ಅದಕ್ಕೆ ವಿಶ್ವ ಮಾನ್ಯತೆ ದಕ್ಕಿದೆ. ಸದ್ಯದ ಸಮಯದಲ್ಲಿ ಚೀನಾ, ಭಾರತ, ರಷ್ಯಾ, ಜಪಾನ್, ಯುರೋಪಿ ಯನ್ ಒಕ್ಕೂಟದ ದೇಶಗಳು ಈಗಿರುವ ವ್ಯವಸ್ಥೆಯನ್ನು ಒಡೆಯುವ ಶಕ್ತಿಯನ್ನು ಗಳಿಸಿಕೊಂಡಿವೆ.
ಅಮೆರಿಕದ ನಾಯಕತ್ವ ಈ ನಿಟ್ಟಿನಲ್ಲಿ ಕೊನೆಯಾಗಿದೆ. ಆದರೆ ಯಾವೊಂದು ದೇಶಕ್ಕೂ ಹೊಸ ವಿಶ್ವ ವ್ಯವಸ್ಥೆಯನ್ನು ಕಟ್ಟುವ ಮತ್ತು ಅದನ್ನು ಮುನ್ನಡೆಸುವ ಶಕ್ತಿಯಿಲ್ಲ. ಹೀಗಾಗಿ ಜಾಗತಿಕವಾಗಿ ಇದು ಬಹಳ ಕೆಟ್ಟ ಸಮಯ. ಈ ಕೆಟ್ಟ ಸಮಯ ಮುಗಿಯಲು ಎಷ್ಟು ಸಮಯ ಬೇಕು ಎನ್ನುವುದೇ ಇವತ್ತಿನ ಉತ್ತರವಿಲ್ಲದ ಪ್ರಶ್ನೆ.
ಐದರಿಂದ ಹತ್ತು ವರ್ಷದವರೆಗೂ ಜಗತ್ತು, ರೆಫರಿ, ಅಂಪೈರ್ ಇಲ್ಲದ ಆಟ ಆಡಬೇಕಿದೆ. ಮೇಷ್ಟ್ರಿಲ್ಲದ ಶಾಲೆ, ಅಮ್ಮನಿಲ್ಲದ ಮಕ್ಕಳ ಕಥೆ ನಮ್ಮದಾಗುತ್ತದೆ. ಮನೆಯಲ್ಲಿನ ವ್ಯವಸ್ಥೆ ಕಾಪಾಡಲು ಅಪ್ಪ ಬೇಕಾದಂತೆ ಜಗತ್ತಿಗೊಬ್ಬ ಹಿರಿಯಣ್ಣ ಬೇಕೇಬೇಕು. ಅಮೆರಿಕದ ಜಾಗದಲ್ಲಿ ಯಾರು? ಎನ್ನುವ ಪ್ರಶ್ನೆಗಿರುವ ಉತ್ತರಕ್ಕೆ ನಾವು ಬಹಳ ಕಾಯಬೇಕಾಗುತ್ತದೆ.