ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rangaswamy Mookanahalli Column: ನಮ್ಮಲ್ಲಿರುವುದು ದೂರ ಹೋದಾಗ ಅದರ ಮೌಲ್ಯ ತಿಳಿಯುತ್ತದೆ !

ಪ್ರಥಮ ಬಾರಿಗೆ ಶ್ರೀಲಂಕಾದಲ್ಲಿ ‘ಮುದ್ದಾದ ನವಿಲುಗಳು ಇದ್ದಾವೆ, ಎಚ್ಚರ’ ಎನ್ನುವ ಬೋರ್ಡ್ ನೋಡಿದೆ. ನನ್ನ ಸಾರಥಿ ಪ್ರಭಾತ್ ರತ್ನಾಯಕೆಯನ್ನು “ಇದೇನು ಮಾರಾಯ?" ಎಂದು ಕೇಳಿದೆ. ಆತ “ಇದು ಕಡಿದಾದ ಕಾಡು ಇದ್ದ ಜಾಗ, ಅದನ್ನು ಕಡಿದು ನಾವು ಹೈ ವೇ ಮಾಡಿದ್ದೇವೆ. ಇದು ಅವುಗಳ ಜಾಗ, ನಾವು ಇಂಟ್ರುಡ್ ಮಾಡಿದ್ದೇವೆ.

ನಮ್ಮಲ್ಲಿರುವುದು ದೂರ ಹೋದಾಗ ಅದರ ಮೌಲ್ಯ ತಿಳಿಯುತ್ತದೆ !

-

ವಿಶ್ವರಂಗ

ಬಡತನ ಮತ್ತು ಸಿರಿತನ ಎನ್ನುವುದು ಇಂದಿನ ದಿನದ ಚರ್ಚೆಯಲ್ಲ, ಮನುಕುಲದ ಉದಯದ ದಿನದಿಂದ ಅದು ಇದ್ದೇ ಇದೆ. ಆದರೆ ಇವತ್ತಿನ ದಿನದಲ್ಲಿ ಪ್ರಕೃತಿಯಲ್ಲಿ ಲಭ್ಯ ವಿರುವ, ಆದರೆ ಅದಕ್ಕೆ ಪ್ರಕೃತಿ ಎಂದೂ ಶುಲ್ಕ ವಿಧಿಸದ ಅಂಶಗಳ ಮೇಲೆ ನಾವು ಅಧಿಪತ್ಯ ಸಾಧಿಸಿ ಅದಕ್ಕೂ ಶುಲ್ಕ ವಿಧಿಸಲು ಶುರು ಮಾಡಿದ ಮೇಲೆ ಈ ರೀತಿ ಯ ಹುಚ್ಚಾಟ ಶುರುವಾಯ್ತು ಎನ್ನುವುದು ನನ್ನ ಅನಿಸಿಕೆ.

ಮನುಷ್ಯನಷ್ಟು ಕ್ರೂರಪ್ರಾಣಿ ಈ ಜಗದಲ್ಲಿ ಇಲ್ಲ. ಕೋತಿ, ಕರಡಿ, ಹಾವು, ಹೆಬ್ಬಾವು, ಗಿಣಿ, ನಾಯಿ, ಬೆಕ್ಕು ಜತೆಗೆ ಮೊಸಳೆಯ ಮರಿಗಳನ್ನು ಕೂಡ ಸಾಕುವುದು ಮಾರುವುದು ಮಾಡು ತ್ತಿದ್ದಾನೆ. ಇವುಗಳನ್ನು ಕುಣಿಸಿ, ತೋರಿಸಿ ಹೊಟ್ಟೆ ಕೂಡ ಹೊರೆಯುತ್ತಿದ್ದಾನೆ. ಪ್ರಾಣಿಗಳು ನೆಮ್ಮದಿಯಾಗಿದ್ದ ಕಡೆಯೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋಗಿದ್ದಾನೆ.

ಭಗವಂತನ ದಯೆಯಿಂದ ಜಗತ್ತಿನ ಹಲವಾರು ದೇಶಗಳನ್ನು ನೋಡುವ ಸೌಭಾಗ್ಯ ನನ್ನದು. ಬಹಳಷ್ಟು ಕಡೆ ಜಿಂಕೆ, ಕರಡಿ, ನರಿ, ಆನೆ, ಕೊನೆಗೆ ‘ಬಾತುಕೋಳಿ ರಸ್ತೆ ಕ್ರಾಸ್ ಮಾಡುತ್ತದೆ, ಹುಷಾರು’ ಎನ್ನುವ ಬೋರ್ಡ್ ನೋಡಿದ್ದೆ.

ಪ್ರಥಮ ಬಾರಿಗೆ ಶ್ರೀಲಂಕಾದಲ್ಲಿ ‘ಮುದ್ದಾದ ನವಿಲುಗಳು ಇದ್ದಾವೆ, ಎಚ್ಚರ’ ಎನ್ನುವ ಬೋರ್ಡ್ ನೋಡಿದೆ. ನನ್ನ ಸಾರಥಿ ಪ್ರಭಾತ್ ರತ್ನಾಯಕೆಯನ್ನು “ಇದೇನು ಮಾರಾಯ?" ಎಂದು ಕೇಳಿದೆ. ಆತ “ಇದು ಕಡಿದಾದ ಕಾಡು ಇದ್ದ ಜಾಗ, ಅದನ್ನು ಕಡಿದು ನಾವು ಹೈ ವೇ ಮಾಡಿದ್ದೇವೆ. ಇದು ಅವುಗಳ ಜಾಗ, ನಾವು ಇಂಟ್ರುಡ್ ಮಾಡಿದ್ದೇವೆ.

ನಿತ್ಯವೂ ಕನಿಷ್ಠ ಹತ್ತಾರು ನವಿಲುಗಳು ರಸ್ತೆಯಲ್ಲಿ ಕಾರಿಗೆ, ಬಸ್ಸಿಗೆ ಸಿಕ್ಕಿ ಸಾಯುತ್ತವೆ" ಎಂದರು. ನನಗೆ ನಂಬಿಕೆ ಬರಲಿಲ್ಲ. ನಮ್ಮೂರಲ್ಲಿ ರಸ್ತೆಯಲ್ಲಿ ನಾಯಿ ಸಾಯುವುದು ಕಾಮನ್. ಅದನ್ನು ಎತ್ತದಿರುವುದು ಇನ್ನೂ ಕಾಮನ್. ದುರ್ನಾತ ಸೇವಿಸುತ್ತಾ, ಬಯ್ದು ಕೊಂಡು ಹೋಗುವುದು ಮತ್ತಷ್ಟು ಕಾಮನ್.

ಇಲ್ಲಿ ನಮ್ಮ ಪ್ರಭಾತ್‌ಗೆ ನವಿಲು ರಸ್ತೆಯಲ್ಲಿ ಸಾಯುವುದು ಕಾಮನ್. ಆದರೆ ನನಗೆ ಕಾಮನ್ ಅಲ್ಲದ ಕಾರಣ ನಂಬಿಕೆ ಬರಲಿಲ್ಲ. ಒಂದು ತಾಸು ಹೈ ವೇಯಲ್ಲಿ ಸಾಗುವುದರಲ್ಲಿ ಐದು ನವಿಲಿನ ಹೆಣ ಕಂಡ ಮೇಲೆ ನಂಬಿಕೆ ಬಂತು. ಪ್ರಭಾತ್ ರತ್ನಾಯಕೆ ‘ನಾನು ಹೇಳಲಿಲ್ಲವೇ?’ ಎನ್ನುವಂತೆ ನನ್ನ ಮುಖ ನೋಡಿದರು.

ಇದನ್ನೂ ಓದಿ: Rangaswamy Mookanahalli Column: ಹೊಸ ಅವಕಾಶಗಳ ಭಂಡಾರ ತೆರೆಯಲಿದೆ ʼಎಐʼ !

ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ “ಅಲ್ಲ ಇವಕ್ಕೆ ರೆಕ್ಕೆಯಿದೆ ಹಾರಬಲ್ಲವು, ಆದರೂ ಅದು ಹೇಗೆ ವಾಹನಕ್ಕೆ ಸಿಕ್ಕಿ ಸಾಯುತ್ತವೆ?" ಎಂದು ಪ್ರಶ್ನಿಸಿದೆ. ಆತ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ಅಯ್ಯೋ ಮಂಕೆ ಸ್ವಲ್ಪ ತಾಳು, ನಮ್ಮ ಪ್ರಯಾಣ ಮುಗಿಯುವುದರಲ್ಲಿ ಒಂದು ಲೈವ್ ಅಪಘಾತ ನೋಡಬಹುದು ನೀನು ಎಂದುಕೊಂಡಿರ ಬೇಕು ಆತ.

ಹದಿನೈದು ನಿಮಿಷದಲ್ಲಿ ನಮ್ಮ ಮುಂದಿನ ಟೊಯೋಟಾ ಗಾಡಿಗೆ ಧಡ್ ಎಂದು ನವಿಲು ಬಡಿಯಿತು ಆಕಾಶಕ್ಕೆ ಹಾರಿ ಧೊಪ್ಪನೆ ನೆಲಕ್ಕೆ ಬಿದ್ದಿತು. ಪ್ರಭಾತ್ ಊಹಿಸಿ ಗಾಡಿಯನ್ನು ಬೇರೆ ಟ್ರಾಕ್‌ಗೆ ಎಳೆದುಕೊಳ್ಳದಿದ್ದರೆ ನಮ್ಮ ವಾಹನದ ಮೇಲೆ ಬೀಳುತ್ತಿತ್ತು. ನವಿಲುಗಳು ಹಾರುತ್ತವೆ, ಆದರೆ ಹೆಚ್ಚು ಎತ್ತರಕ್ಕೆ ಹಾರುವುದಿಲ್ಲ, ಹೀಗಾಗಿ ಅವು ಹಾರಿದ ಎತ್ತರದಿಂದ ಚಕ್ರಕ್ಕೆ ಸಿಲುಕುವುದರಿಂದ ಬಚಾವಾಗುತ್ತವೆ. ಆದರೆ ವಾಹನದ ಯಾವುದೋ ಒಂದು ಭಾಗಕ್ಕೆ ಬಡಿದು, ವೇಗದ ಕಾರಣ ನೆಲಕ್ಕೆ ಬೀಳುತ್ತವೆ. ಮುಕ್ಕಾಲು ಪಾಲು ಹಿಂದಿನಿಂದ ವೇಗವಾಗಿ ಬರುವ ವಾಹನಗಳ ಚಕ್ರಕ್ಕೆ ಆಹುತಿಯಾಗುತ್ತವೆ.

ಭಾರತದ ರಾಷ್ಟ್ರೀಯ ಪಕ್ಷಿಯು ಶ್ರೀಲಂಕಾದಲ್ಲಿ ನಿತ್ಯವೂ ರಸ್ತೆಯಲ್ಲಿ ಸಾವಿಗೀಡಾಗುತ್ತಿದೆ. ಭಾರತದಲ್ಲಿ ಮನುಷ್ಯನ ಆಸೆಯು ಬೇಟೆಯ ರೂಪವನ್ನು ತಾಳಿ, ಹಸಿರು ನವಿಲು ಅಳಿವಿನ ಅಂಚಿಗೆ ಬಂದು ನಿಂತಿದೆ. ನಮಗೆ ಅದ್ಯಾವುದೂ ಬೇಸರ ತರಿಸುವುದಿಲ್ಲ. ಭೂಮಿಯ ಮೇಲೆ ಕೇವಲ ನನ್ನದೇ ಅಧಿಪತ್ಯ ಇದ್ದರೆ ಸಾಕು ಎನ್ನುವ ಮನುಷ್ಯನ ಹೀನಗುಣಕ್ಕೆ ಏನು ಹೇಳುವುದು? ನವಿಲುಗಳ ಸಾವಿಗೆ ನಾವು ಪ್ರವಾಸಿಗರೂ ಕಾರಣ ಎನ್ನಿಸಿತು.

ಪ್ರವಾಸೋದ್ಯಮ ಬೆಳೆಯದಿದ್ದರೆ ಅವರು ಹೈ ವೇ ಮಾಡುತ್ತಿರಲಿಲ್ಲ ಅಲ್ಲವೇ? ಕಲುತರ ದಿಂದ ಉದ್ದವಳವೇ ನ್ಯಾಷನಲ್ ಪಾರ್ಕ್‌ವರೆಗೆ ಹಿಂದೆ ಕ್ರಮಿಸಲು ನಾಲ್ಕೂವರೆ ತಾಸು ಹಿಡಿಯುತ್ತಿತ್ತು. ಇದೀಗ, ಎರಡು ಗಂಟೆಯಲ್ಲಿ ಪ್ರಯಾಣ ಮುಗಿಯುತ್ತದೆ. ಪ್ರವಾಸಿಗರಿಗೆ ಸಮಯ ಉಳಿಯಿತು. ಸರಕಾರ ಟೋಲ್ ಹೆಸರಲ್ಲಿ ಹಣವನ್ನು ಗಳಿಸಿತು.

Screenshot_3 R

ಮಧ್ಯದಲ್ಲಿ ಟ್ಯಾಕ್ಸಿ ಮಾಲೀಕರು ಕೂಡ ಸಿರಿವಂತರಾದರು. ಪ್ರೊಟೆ ಮಾಡಲು ಬಾರದ ಪಾಪದ ನವಿಲುಗಳು ಮಾತ್ರ ರಸ್ತೆಯಲ್ಲಿ ಹೆಣವಾಗುತ್ತಿವೆ. ಶ್ರೀಲಂಕಾದಲ್ಲಿ ಕೂಡ ಇವುಗಳು ಅಳಿವಿನ ಅಂಚಿಗೆ ಬರುವವರೆಗೆ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಕೇವಲ ಹತ್ತಾರು ಉಳಿದಿವೆ ಎಂದಾಗ ಅದಕ್ಕೊಂದು ಸಮಿತಿ ನೇಮಿಸಿ, ಹತ್ತಾರು ಕೋಟಿ ಬಜೆಟ್ʼನಲ್ಲಿ ಹಣವನ್ನು ತೆಗೆದಿರಿಸಿ ‘ನಾವೆಷ್ಟು ಪರಿಸರ ಪ್ರೇಮಿ, ಪ್ರಾಣಿ-ಪಕ್ಷಿ ಪ್ರೇಮಿ ಸರಕಾರ ನೋಡಿ’ ಎಂದು ಹತ್ತಾರು ನ್ಯೂಸ್ ಪೇಪರ್‌ಗಳಲ್ಲಿ ಪುಟಗಟ್ಟಲೆ ಜಾಹೀರಾತು ಕೊಡುವುದು ಮಾಡಬೇಕಲ್ಲ!

ಜೀವಸಂಕುಲಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ. ಈ ಭೂಮಿ ಕೇವಲ ನಮ್ಮ ಸ್ವತ್ತಲ್ಲ. ಅದು ಇಲ್ಲಿನ ಎಲ್ಲಾ ಜೀವಜಂತುಗಳಿಗೆ ಸೇರಿದ್ದು ಎನ್ನುವುದನ್ನು ಮನುಷ್ಯ ಪ್ರಾಣಿ ಬೇಗ ಅರಿತುಕೊಂಡರೆ ಒಳಿತು. ಇಲ್ಲವಾದಲ್ಲಿ ಅದು ಮನುಷ್ಯನ ಅಳಿವಿಗೂ ಮುನ್ನುಡಿಯಾದೀತು ಎಚ್ಚರ!

ಇಂದಿನ ಗದ್ದಲದ ಯುಗದಲ್ಲಿ, ಜಿಡಿಪಿ ಅಬ್ಬರದ ಸದ್ದಿನಲ್ಲಿ ಇದೆ ಆತನಿಗೆ ಹೇಗೆ ಕೇಳಿಸೀತು? ಬದುಕಿಗೆ ಹಣ ಬೇಕು, ಅದೇ ಪ್ರಮುಖವಾಗಬಾರದು ಎನ್ನುವ ವಿವೇಚನೆ ಆತನಿಗೆ ಬರುವು ದೆಂದು? ಅಭಿವೃದ್ಧಿಯ ಹೆಸರಿನಲ್ಲಿ ಕಂಡದ್ದೆಲ್ಲಾ ಕಬಳಿಸುತ್ತಾ, ನಾನು ಇನ್ನಷ್ಟು ಮತ್ತಷ್ಟು ಬಲಶಾಲಿ, ಶ್ರೀಮಂತನಾದೆನು ಎಂದು ಉಬ್ಬುವ ಮನುಷ್ಯನಿಗೆ ತಾನು ಅದಕ್ಕಾಗಿ ಕಳೆದುಕೊಳ್ಳುತ್ತಿರುವುದರ ಮೌಲ್ಯ ಮಾತ್ರ ಅರಿವಿಗೆ ಬಾರದೇ ಹೋಗುತ್ತಿರುವುದು ವಿದ್ಯಾ ವಂತ ನಾಗರಿಕ ಸಮಾಜದ ಅಣಕ.

‘ನಾವು ನಮ್ಮ ಅನುಭವಗಳ ಮೊತ್ತ ಅಷ್ಟೇ. ನಾವೇನೇ ಬರೆದರೂ, ಹೇಳಿದರೂ ಅದ್ಯಾ ವುದೂ ತಪ್ಪು ಸರಿಗಳ ಬೌಂಡರಿಯಲ್ಲಿ ನಿಲುಕಲು ಸಾಧ್ಯವಿಲ್ಲ. ಏಕೆಂದರೆ ಒಬ್ಬಬ್ಬರ ಅನುಭವ ಒಂದೊಂದು ತರಹ’ ಎಂದು ಯೋಚಿಸುತ್ತಿದ್ದಾಗ ಮನಸ್ಸಿನಲ್ಲಿ ವೀರಪ್ಪನ್ ಸುಳಿದು ಹೋದ. ರೀತಿ ಬೇರೆಯದಿದ್ದರೂ, ಸನ್ನಿವೇಶ ಬೇರೆಯದಿದ್ದರೂ ಆತ ಜೀವ ಸಂಕುಲಗಳನ್ನು ಇಲ್ಲವಾಗಿಸಿದ್ದು, ಅವುಗಳಿಗೆ ಮಾರಕವಾಗಿದ್ದು ಮಾತ್ರ ಸತ್ಯ. ಮನುಷ್ಯ ಪ್ರಾಣಿಗೆ ಸಿರಿವಂತಿಕೆಯ ಹುಚ್ಚು ಹಿಡಿದ ಮೇಲೆ ಹೀಗಾಯ್ತು ಎಂದು ನೀವು ಅಂದು ಕೊಂಡರೆ ಅದು ತಪ್ಪು.

ಬಡತನ ಮತ್ತು ಸಿರಿತನ ಎನ್ನುವುದು ಇಂದಿನ ದಿನದ ಚರ್ಚೆಯಲ್ಲ, ಮನುಕುಲದ ಉದಯದ ದಿನದಿಂದ ಅದು ಇದ್ದೇ ಇದೆ. ಆದರೆ ಇವತ್ತಿನ ದಿನದಲ್ಲಿ ಪ್ರಕೃತಿಯಲ್ಲಿ ಲಭ್ಯ ವಿರುವ, ಆದರೆ ಅದಕ್ಕೆ ಪ್ರಕೃತಿ ಎಂದೂ ಶುಲ್ಕ ವಿಧಿಸದ ಅಂಶಗಳ ಮೇಲೆ ನಾವು ಅಧಿಪತ್ಯ ಸಾಧಿಸಿ ಅದಕ್ಕೂ ಶುಲ್ಕ ವಿಧಿಸಲು ಶುರು ಮಾಡಿದ ಮೇಲೆ ಈ ರೀತಿಯ ಹುಚ್ಚಾಟ ಶುರುವಾಯ್ತು ಎನ್ನುವುದು ನನ್ನ ಅನಿಸಿಕೆ.

ಯಾವಾಗ ಒಂದಷ್ಟು ಜನ ಈ ಆಟದಲ್ಲಿ ತೊಡಗಿಕೊಂಡರೋ ಮತ್ತು ಅದರಿಂದ ಹಣಗಳಿಸಿ ಶ್ರೀಮಂತರಾಗಲು ಶುರುಮಾಡಿದರೋ, ನೋಡಿ ಆಗ ಇನ್ನಷ್ಟು ಜನರಿಗೆ ಹುರುಪು ಬಂತು. ಅವರೂ ನೆಲ, ಜಲ, ಹೀಗೆ ಪ್ರಕೃತಿಯಲ್ಲಿ ಲಭ್ಯವಿರುವ ವಸ್ತುಗಳನ್ನು ತನ್ನದು ಎಂದು ಮುದ್ರೆ ಒತ್ತಲು ಶುರು ಮಾಡಿದರು. ಹಣ ಗಳಿಕೆಯ ಉದ್ದೇಶದಿಂದ ಅವುಗಳನ್ನು ಮಾರಾಟಕ್ಕೂ ಇಟ್ಟರು. ವರ್ಷದಿಂದ ವರ್ಷಕ್ಕೆ ಅವುಗಳ ಬೆಲೆ ಏರುವುದನ್ನು ನೋಡಿ ಜನ ಅವನ್ನು ಕೊಳ್ಳಲು ಮುಗಿಬಿದ್ದರು.

ಇದೊಂದು ರೀತಿಯ ಹುಚ್ಚಾಟ. ಎಲ್ಲರೂ ಲಾಭಗಳಿಸುತ್ತಿದ್ದಾರೆ, ಶ್ರೀಮಂತರಾಗುತ್ತಿದ್ದಾರೆ, ನಾನು ಮಾತ್ರ ಹಿಂದುಳಿದುಬಿಟ್ಟರೆ? ಎನ್ನುವ ಭಾವನೆಗೆ ‘ಫಿಯರ್ ಆಫ್ ಮಿಸ್ಸಿಂಗ್ ಔಟ್’ ಎನ್ನುತ್ತಾರೆ. ಶಾರ್ಟ್ ಆಗಿ ಇದಕ್ಕೆ ‘ಫೋಮೊ’ *(FOMO)* ಎನ್ನುವ ನಾಮಕರಣ ಕೂಡ ಮಾಡಿದ್ದಾರೆ. ‌

ಒಮ್ಮೆ ಮನುಷ್ಯನ ಮನಸ್ಸಿನಲ್ಲಿ ಇದು ಹೊಕ್ಕಿಬಿಟ್ಟರೆ ಮುಗಿಯಿತು. ಅದನ್ನು ಕೊಳ್ಳದೆ ಆತ ಬಿಡುವುದಿಲ್ಲ. ಬೆಂಗಳೂರು ಸುತ್ತಮುತ್ತಲಿನ ರೈತರ ಮನಸ್ಸಿನಲ್ಲೂ ಈ ಫೋಮೊ ಬಿತ್ತಲಾಯಿತು. ಅವರು ತಮ್ಮ ನೆಲವನ್ನು ಮಾರಿ ಕೈತುಂಬಾ ದುಡ್ಡು ಮಾಡಿಕೊಂಡರು. ಅಷ್ಟೇ ವೇಗವಾಗಿ ಅದನ್ನು ಕಳೆದುಕೊಂಡು, ಏರ್‌ಪೋರ್ಟ್‌ನಲ್ಲಿ ಕ್ಲೀನಿಂಗ್ ಕೆಲಸದಲ್ಲಿ, ಕ್ಯಾಬ್ ಡ್ರೈವರ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಅಂದು, ಇಂದು ಅಪವಾದಗಳು ಇರಬಹುದು. ಮೆಜಾರಿಟಿ ಜನರು ಕೈಗೆ ಬಂದ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಅರಿವಿಲ್ಲದೆ ವೇಗವಾಗಿ ಕಳೆದುಕೊಂಡು ಮತ್ತೆ ಬರಿಗೈ ದಾಸರಾಗಿದ್ದಾರೆ. ಇದೇ ಮಾತನ್ನು ದೆಹಲಿ ಸಮೀಪದ ಗುರುಗ್ರಾಮಕ್ಕೂ ಹೋಲಿಸಬಹುದು. ಅಲ್ಲಿನ ರೈತರು, ಜಮೀನು ಹೊಂದಿದ್ದವರು ಆಡಿದ ಆಟವನ್ನೇ ನಮ್ಮ ಊರಿನ ರೈತರು ಕೂಡ ಆಡಿದ್ದಾರೆ. ಹೀಗಾಗಿ ಮತ್ತೆ ಹಿಂದಿನ ಸ್ಥಿತಿಗೆ ಮರಳಿದ್ದಾರೆ.

ಮನುಷ್ಯ ಪ್ರಾಣಿಯು ಸೃಷ್ಟಿ ಮಾಡಿಕೊಂಡ ಹಣ ಮತ್ತು ಅಭಿವೃದ್ಧಿಯ ಈ ಆಟದಲ್ಲಿ ಸದ್ದಿಲ್ಲದೇ ಈ ಜಾಗಗಳಲ್ಲಿ ವಾಸವಿದ್ದ ಜೀವಸಂಕುಲಗಳು ಇನ್ನಷ್ಟು ದೂರ ವಲಸೆ ಹೋಗಿವೆ. ಬೆಂಗಳೂರಿನಲ್ಲಿ ಗುಬ್ಬಚ್ಚಿ ಮಾಯವಾಗಿ ದಶಕಗಳು ಕಳೆದಿವೆ. ಹೀಗೆ ನಾವು ಇನ್ನೆಷ್ಟು ಒತ್ತುವರಿ ಮಾಡಿಕೊಳ್ಳಬಹುದು? ಎಲ್ಲಿಯ ತನಕ ನಮ್ಮ ಸಾಮ್ರಾಜ್ಯವನ್ನು ವಿಸ್ತರಿಸಬಹುದು? ಎಲ್ಲಾ ಆರಂಭಕ್ಕೂ ಒಂದು ಅಂತ್ಯ ಇರಲೇಬೇಕಲ್ಲವೇ? ಸಾವಿರಾರು ವರ್ಷಗಳ ಕಾಲ ನಮ್ಮ ನಾಗರಿಕತೆ ನೆಮ್ಮದಿಯಾಗಿ ಜೀವನ ನಡೆಸಿದ ಉದಾಹರಣೆ ನಮ್ಮ ಮುಂದಿದೆ.

ಆಫ್‌ʼಕೋರ್ಸ್ ಯುದ್ಧಗಳು, ರೋಗಗಳು, ಪ್ರಕೃತಿ ವೈಪರೀತ್ಯಗಳು ಎಲ್ಲಾ ಕಾಲದಲ್ಲೂ ಇದ್ದವು. ಅವುಗಳನ್ನು ಮೀರಿ ಕೂಡ ಒಂದೊಳ್ಳೆ ಆರೋಗ್ಯಕರ ಜೀವನವನ್ನು ನಮ್ಮ ಪೂರ್ವಜರು ನಡೆಸಿದ್ದರು. ಇವತ್ತೇನಾಗಿದೆ? ಅಭಿವೃದ್ಧಿಯ ಹೆಸರಿನಲ್ಲಿ ಗಳಿಸಿದ ಹಣವನ್ನು ಆರೋಗ್ಯಕ್ಕಾಗಿ ಮತ್ತೆ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ ಎನ್ನುವಲ್ಲಿಗೆ ನಾವು ಆಡಿದ ಇಷ್ಟೂ ಆಟಕ್ಕೂ ಯಾವುದೇ ಅರ್ಥವಿಲ್ಲ ಎಂದಾಯ್ತು. ಕಳೆದುಕೊಂಡ ಮೇಲೆ ಮಾತ್ರ ನಮಗೆ ಅದರ ನಿಜವಾದ ಮೌಲ್ಯ ತಿಳಿಯುತ್ತದೆ. ಅದು ತಿಳಿಯುವ ವೇಳೆಗೆ ಸಮಯ ಮೀರಿರುತ್ತದೆ.

ಕಳೆದ ಒಂದು ವಾರದಿಂದ ಆಲಸ್ಯ. ಮೈಭಾರ, ಜತೆಗೆ ಯಾವುದರಲ್ಲೂ ಮೊದಲಿನ ಖುಷಿ, ತನ್ಮಯತೆ ಸಿಗುತ್ತಿರಲಿಲ್ಲ. ಮನೆಯ ಹತ್ತಿರದ ವೈದ್ಯರ ಬಳಿ ಹೋಗಿ ಪ್ರವರ ಹೇಳಿಕೊಂಡೆ. ಅವರು, “ಇವತ್ತಿನ ದಿನದಲ್ಲಿ ಇದು ನಾರ್ಮಲ್ ಕಣ್ರೀ, ಎಲ್ಲರಿಗೂ ಜ್ವರ, ಮೈಕೈ ನೋವು ಶುರುವಾಗಿದೆ. ಐದು ದಿನ ಈ ಮಾತ್ರೆ ಸೇವಿಸಿ, ಹುಷಾರಾಗುವಿರಿ" ಎಂದು ಮಾತ್ರೆ ಬರೆದು ಕೊಟ್ಟರು.

ಎಲ್ಲದಕ್ಕೂ ಹತ್ತಾರು ಪ್ರಶ್ನೆ ಕೇಳುವ ನಾನು ವೈದ್ಯರ ಮುಂದೆ ಮಾತ್ರ ಕೈಕಟ್ಟಿ ಒಂದನೇ ತರಗತಿ ವಿದ್ಯಾರ್ಥಿಯಂತೆ ನಿಂತು ಬಿಡುತ್ತೇನೆ. ಅವರು ಕೊಟ್ಟ ಮಾತ್ರೆಯನ್ನು ಐದು ದಿನ ತಪ್ಪದೆ ಸೇವಿಸಿದೆ. ಫಲಿತಾಂಶ ಮಾತ್ರ ಸೊನ್ನೆ. ಮೈಕೈ ನೋವು, ತಲೆನೋವು ಕಡಿಮೆ ಯಾಗುವ ಲಕ್ಷಣ ಕಾಣಲಿಲ್ಲ. ಆಮೇಲೆ ಹತ್ತಾರು ಪರೀಕ್ಷೆ ಮಾಡಿದರು. ವೈದ್ಯರು “ಶರ್ಟು, ಬನಿಯನ್ ತೆಗೆದು ಬೆಡ್ ಮೇಲೆ ಮಲಗು" ಎಂದಾಗ ‘ನೀವ್ಯಾರೇ ಆಗಿರಿ, ಆಸ್ಪತೆಯಲ್ಲಿ ನೀವೊಬ್ಬ ರೋಗಿ ಅಷ್ಟೇ’ ಎನ್ನುವ ಸರಳ ಸತ್ಯ ರಿಂಗಣಿಸಿದಂತಾಯಿತು!

ವೈದ್ಯರು, ಮೂರು ಜನ ದಾದಿಯರು ಬೆಡ್ ಅನ್ನು ಸುತ್ತುವರಿದ್ದಿದ್ದರು. ಅವರ ಮುಖ ಗಳನ್ನು ನೋಡುತ್ತಾ ನಿಧಾನಕ್ಕೆ ಕಣ್ಣು ಮುಚ್ಚಿದೆ. ನೀನೆಷ್ಟೇ ಕೂಗಾಡಿದರೂ ಇದೇ ನೋಡು ನಿಜವಾದ ‘ಔಕಾತ್’ ಎಂದದ್ದು ಜ್ವರದ ಅಮಲಿನ ಭ್ರಮೆಯಲ್ಲ, ವಾಸ್ತವ ಎನ್ನುವುದು ಅರಿವಾಯ್ತು. ಜತೆಗೆ ಅದು ಈ ವಾರದ ಅಂಕಣ ಬರಹಕ್ಕೆ ಆಹಾರವೂ ಆಯ್ತು. ಕಳೆದುಕೊಳ್ಳುವ ಮುಂಚೆ ಉಳಿಸಿಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಿದೆ...