ಸಂಪಾದಕರ ಸದ್ಯಶೋಧನೆ
ದಕ್ಷಿಣ ಆಫ್ರಿಕಾದ ವನ್ಯಜೀವಿ ವೈವಿಧ್ಯದ ಬಗ್ಗೆ ಮಾತನಾಡುವಾಗ ನಮಗೆ ಮೊದಲು ನಮ್ಮ ಕಣ್ಣೆದುರು ಬರುವುದು ‘ಬಿಗ್ ಫೈವ್’ ಪ್ರಾಣಿಗಳೆಂದು ಕರೆಯಿಸಿಕೊಳ್ಳುವ ಸಿಂಹ, ಚಿರತೆ, ಆನೆ, ಆಫ್ರಿಕನ್ ಕಾಡೆಮ್ಮೆ ಮತ್ತು ಖಡ್ಗಮೃಗ. ಆದರೆ, ಇದೇ ಮಣ್ಣಿನಲ್ಲಿ ಪ್ರಕೃತಿಯ ಅತ್ಯಂತ ಸೂಕ್ಷ್ಮ ಮತ್ತು ಅದ್ಭುತ ಸೃಷ್ಟಿಯಾದ ‘ಪದ್ಲೋಪರ್ ಆಮೆ’ (Padloper Tortoise ) ಎಂಬ ಪುಟ್ಟ ಜೀವಿಯೂ ಇದೆ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಅಲ್ಲಿನ ಶುಷ್ಕ ಭೂಪ್ರದೇಶಗಳಲ್ಲಿ ವಾಸಿಸುವ ‘ಪದ್ಲೋಪರ್’ ಆಮೆಗಳು ಗಾತ್ರದಲ್ಲಿ ಮಾತ್ರ ವಲ್ಲ, ತಮ್ಮ ಬದುಕುವ ಶೈಲಿ ಮತ್ತು ವಿಕಾಸದ ಹಾದಿಯಲ್ಲೂ ವಿಶಿಷ್ಟವಾಗಿವೆ. ಇವು ಗಳನ್ನು ಸ್ಥಳೀಯವಾಗಿ ‘ಪದ್ಲೋಪರ್’ ಎಂದು ಕರೆಯಲಾಗುತ್ತದೆ, ಆಫ್ರಿಕಾ ಭಾಷೆಯಲ್ಲಿ ಇದರರ್ಥ ‘ದಾರಿಯಲ್ಲಿ ನಡೆಯುವವನು’ (Path walker) ಅಂತ.
ವಿಶ್ವದ ಅತಿ ಸಣ್ಣ ಆಮೆ ಪ್ರಭೇದವೆಂದು ಗುರುತಿಸಲ್ಪಟ್ಟಿರುವುದು ‘ಸ್ಪೆಕಲ್ಡ್ ಪದ್ಲೋಪರ್’. ಇದರ ವೈಜ್ಞಾನಿಕ ಹೆಸರು Chersobius signatus. ಪೂರ್ಣ ಬೆಳೆದ ಗಂಡು ಆಮೆಯು ಸುಮಾರು 6 ರಿಂದ 8 ಸೆಂಟಿಮೀಟರ್‌ಗಳಷ್ಟು ಮಾತ್ರ ಇರುತ್ತದೆ.
ಇದನ್ನೂ ಓದಿ: Vishweshwar Bhat Column: ಇಲ್ಲಿ ಈಗಿರುವುದು ಒಂದೇ ಆನೆ !
ಹೆಣ್ಣು ಆಮೆಗಳು ಗಂಡಿಗಿಂತ ಸ್ವಲ್ಪ ದೊಡ್ಡದಾಗಿದ್ದು, ಸುಮಾರು 10 ಸೆಂಟಿ ಮೀಟರ್ ಗಳವರೆಗೆ ಬೆಳೆಯುತ್ತವೆ. ಇವುಗಳ ತೂಕ ಕೇವಲ 95 ರಿಂದ 165 ಗ್ರಾಂಗಳು. ಅಂದರೆ, ನಮ್ಮ ಹಸ್ತದ ಮೇಲೆ ಸುಲಭವಾಗಿ ಕುಳಿತುಕೊಳ್ಳುವಷ್ಟು ಪುಟ್ಟದ್ದು. ಈ ಆಮೆಗಳ ಚಿಪ್ಪಿನ ವಿನ್ಯಾಸವು ಅತ್ಯಂತ ಆಕರ್ಷಕ. ಇವುಗಳ ಬೆನ್ನಿನ ಚಿಪ್ಪು ಚಪ್ಪಟೆಯಾಗಿದ್ದು, ಕಿತ್ತಳೆ ಅಥವಾ ಕಂದು ಬಣ್ಣದ ಮೇಲೆ ನೂರಾರು ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಈ ಚುಕ್ಕೆಗಳು ಬಂಡೆಗಳ ನಡುವೆ ಅಡಗಿಕೊಳ್ಳಲು ಇವುಗಳಿಗೆ ಸಹಾಯ ಮಾಡುತ್ತವೆ.
ಇತರ ಆಮೆಗಳಿಗಿಂತ ಭಿನ್ನವಾಗಿ, ಸ್ಪೆಕಲ್ಡ್ ಪದ್ಲೋಪರ್ ಆಮೆಗಳ ಮುಂಗಾಲಿನಲ್ಲಿ ಐದು ಉಗುರುಗಳ ಬದಲಿಗೆ ನಾಲ್ಕು ಉಗುರುಗಳು ಮಾತ್ರ ಇರುತ್ತವೆ. ಇದು ಇವುಗಳ ಪ್ರಭೇದದ ವಿಶಿಷ್ಟ ಗುರುತಾಗಿದೆ. ಈ ಆಮೆಗಳು ದಕ್ಷಿಣ ಆಫ್ರಿಕಾದ ನಾಮಕ್ವಾಲ್ಯಾಂಡ್ ಎಂಬ ಶುಷ್ಕ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ. ಈ ಭಾಗವು ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ಹವಾಮಾನವು ಅತ್ಯಂತ ಕಠಿಣ.
ಇವುಗಳು ಬಂಡೆಗಳ ಸಂದುಗಳಲ್ಲಿ ಅಥವಾ ಪೊದೆಗಳ ಅಡಿಯಲ್ಲಿ ವಾಸಿಸಲು ಇಷ್ಟಪಡು ತ್ತವೆ. ಚಿಕ್ಕ ಗಾತ್ರವಿರುವುದರಿಂದ ಇವುಗಳಿಗೆ ಬಂಡೆಗಳ ಕಿರಿದಾದ ಸಂದುಗಳಲ್ಲಿ ನುಸುಳಿ ಶತ್ರುಗಳಿಂದ ರಕ್ಷಿಸಿಕೊಳ್ಳುವುದು ಸುಲಭವಾಗುತ್ತದೆ.
ಇವು ಪ್ರಮುಖವಾಗಿ ಸಸ್ಯಾಹಾರಿಗಳು. ನಾಮಕ್ವಾಲ್ಯಾಂಡ್ ಪ್ರದೇಶದಲ್ಲಿ ಮಳೆಯ ನಂತರ ಬೆಳೆಯುವ ಸಣ್ಣ ಸಣ್ಣ ಗಿಡಗಳು, ಹೂವುಗಳು ಮತ್ತು ರಸಭರಿತ ಸಸ್ಯಗಳನ್ನು ಇವು ಆಹಾರವಾಗಿ ಸೇವಿಸುತ್ತವೆ. ಇವು ಹಗಲಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಬೆಳಗಿನ ಸೂರ್ಯನ ಶಾಖವನ್ನು ಪಡೆದು ತಮ್ಮ ದೇಹದ ಉಷ್ಣತೆಯನ್ನು ಸಮತೋಲನ ಗೊಳಿಸಿ ಕೊಳ್ಳುತ್ತವೆ.
ಬೇಸಗೆಯಲ್ಲಿ ಆಹಾರ ಮತ್ತು ನೀರಿನ ಅಭಾವ ಉಂಟಾದಾಗ, ಇವು ಬಂಡೆಗಳ ಸಂದು ಗಳಲ್ಲಿ ಸೇರಿ ದೀರ್ಘಕಾಲದವರೆಗೆ ವಿಶ್ರಾಂತಿ ಪಡೆಯುತ್ತವೆ. ಇವುಗಳ ಗಾತ್ರ ಸಣ್ಣದಾಗಿರುವು ದರಿಂದ ಸಂತಾನೋತ್ಪತ್ತಿ ಪ್ರಕ್ರಿಯೆಯೂ ವಿಶಿಷ್ಟ. ಹೆಣ್ಣು ಆಮೆಯು ಒಂದು ಬಾರಿಗೆ ಒಂದೇ ಒಂದು ಮೊಟ್ಟೆಯನ್ನು ಇಡುತ್ತದೆ.
ಆಮೆಯ ಗಾತ್ರಕ್ಕೆ ಹೋಲಿಸಿದರೆ ಈ ಮೊಟ್ಟೆಯು ದೊಡ್ಡದು. ಈ ಮೊಟ್ಟೆಯಿಂದ ಮರಿ ಹೊರಬರಲು ಸುಮಾರು 100ರಿಂದ 140 ದಿನಗಳ ಕಾಲ ಬೇಕು. ಪ್ರತಿ ವರ್ಷ ಒಂದೇ ಮೊಟ್ಟೆ ಯನ್ನು ಇಡುವುದರಿಂದ ಈ ಪ್ರಭೇದದ ಸಂತತಿ ಹೆಚ್ಚಾಗುವ ವೇಗ ಬಹಳ ಕಡಿಮೆ.
ದುರದೃಷ್ಟವಶಾತ್, ಈ ಸುಂದರ ಜೀವಿಗಳು ಇಂದು ಅಳಿವಿನ ಅಂಚಿನಲ್ಲಿವೆ. ಇವುಗಳ ಪುಟ್ಟ ಗಾತ್ರ ಮತ್ತು ಅಂದವಾದ ಚಿಪ್ಪಿನ ಕಾರಣದಿಂದಾಗಿ ಅಂತಾರಾಷ್ಟ್ರೀಯ ಸಾಕುಪ್ರಾಣಿ ಮಾರುಕಟ್ಟೆಯಲ್ಲಿ ಇವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದನ್ನು ತಡೆಯಲು ಕಠಿಣ ಕಾನೂನುಗಳಿದ್ದರೂ ಕಳ್ಳಸಾಗಾಣಿಕೆ ನಡೆಯುತ್ತಲೇ ಇರುತ್ತದೆ.
ಕೃಷಿ ಚಟುವಟಿಕೆಗಳು ಮತ್ತು ನಗರೀಕರಣದಿಂದಾಗಿ ಇವುಗಳು ವಾಸಿಸುವ ಬಂಡೆಗಳ ಪ್ರದೇಶಗಳು ನಾಶವಾಗುತ್ತಿವೆ. ಇವುಗಳು ರಸ್ತೆ ದಾಟುವಾಗ ಗಾತ್ರದಲ್ಲಿ ತುಂಬಾ ಚಿಕ್ಕದಾಗಿ ರುವುದರಿಂದ ವಾಹನ ಚಾಲಕರಿಗೆ ಕಾಣಿಸದೆ ಅಪಘಾತಕ್ಕೀಡಾಗುತ್ತವೆ. ಮಳೆ ಕಡಿಮೆ ಯಾಗುತ್ತಿರುವುದು ಇವುಗಳ ಆಹಾರದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಪರಿಸರ ವ್ಯವಸ್ಥೆಯಲ್ಲಿ ಪ್ರತಿ ಜೀವಿಯೂ ತನ್ನದೇ ಆದ ಪಾತ್ರವನ್ನು ಹೊಂದಿದೆ.
ಪದ್ಲೋಪರ್ ಆಮೆಗಳು ಸಣ್ಣ ಸಸ್ಯಗಳನ್ನು ತಿನ್ನುವ ಮೂಲಕ ಬೀಜ ಪ್ರಸರಣದಲ್ಲಿ ಸಹಾಯ ಮಾಡುತ್ತವೆ. ಅಲ್ಲದೇ, ಇವು ಭೂಮಿಯ ವಿಕಾಸದ ಹಾದಿಯಲ್ಲಿ ಉಳಿದು ಕೊಂಡಿರುವ ಅತ್ಯಂತ ಹಳೆಯ ಸರೀಸೃಪಗಳ ಕೊಂಡಿಯಾಗಿವೆ.