ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಇಲ್ಲಿ ಈಗಿರುವುದು ಒಂದೇ ಆನೆ !

ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಆನೆಗಳ ಕುಲ ಇಂದು ಕೇವಲ ‘ಒಂದೇ ಒಂದು’ ಆನೆಗೆ ಬಂದು ನಿಂತಿದೆ ಎಂಬುದು ವಿಜ್ಞಾನ ಲೋಕದ ಅಚ್ಚರಿ ಮತ್ತು ನೋವಿನ ಸಂಗತಿ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ನೈಸ್ನಾ ಮತ್ತು ಅದರ ಸುತ್ತಮುತ್ತಲಿನ ದಟ್ಟವಾದ ಅರಣ್ಯಗಳು ಆನೆಗಳ ಪಾಲಿನ ಸ್ವರ್ಗವಾಗಿದ್ದವು.

Vishweshwar Bhat Column: ಇಲ್ಲಿ ಈಗಿರುವುದು ಒಂದೇ ಆನೆ !

-

ಸಂಪಾದಕರ ಸದ್ಯಶೋಧನೆ

ದಕ್ಷಿಣ ಆಫ್ರಿಕಾದ ಸುಪ್ರಸಿದ್ಧ ‘ಗಾರ್ಡನ್ ರೂಟ್’ ಹಾದಿಯಲ್ಲಿ ಸಾಗುವಾಗ ಸಿಗುವ ‘ನೈಸ್ನಾ’ ಅರಣ್ಯ ಪ್ರದೇಶವು ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಜಗತ್ತಿನ ಅತ್ಯಂತ ನಿಗೂಢ ಪ್ರಾಣಿ ಗಳಲ್ಲಿ ಒಂದಾದ ‘ನೈಸ್ನಾ ಆನೆ’ಯ ಕಥೆಗೂ ಪ್ರಸಿದ್ಧಿಯಾಗಿದೆ.

ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಆನೆಗಳ ಕುಲ ಇಂದು ಕೇವಲ ‘ಒಂದೇ ಒಂದು’ ಆನೆಗೆ ಬಂದು ನಿಂತಿದೆ ಎಂಬುದು ವಿಜ್ಞಾನ ಲೋಕದ ಅಚ್ಚರಿ ಮತ್ತು ನೋವಿನ ಸಂಗತಿ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ನೈಸ್ನಾ ಮತ್ತು ಅದರ ಸುತ್ತಮುತ್ತಲಿನ ದಟ್ಟವಾದ ಅರಣ್ಯಗಳು ಆನೆಗಳ ಪಾಲಿನ ಸ್ವರ್ಗವಾಗಿದ್ದವು.

ಇತಿಹಾಸಕಾರರ ಪ್ರಕಾರ, ಈ ಪ್ರದೇಶದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಆನೆಗಳು ಮುಕ್ತ ವಾಗಿ ಸಂಚರಿಸುತ್ತಿದ್ದವು. ಇವುಗಳು ದಕ್ಷಿಣ ಆಫ್ರಿಕಾದ ಇತರ ಭಾಗಗಳ ಆನೆಗಳಿಗಿಂತ ಸ್ವಲ್ಪ ಭಿನ್ನವಾಗಿದ್ದವು. ದಟ್ಟ ಕಾಡಿನಲ್ಲಿ ಬದುಕಲು ಹೊಂದಿಕೊಂಡಿದ್ದರಿಂದ ಇವುಗಳು ಹೆಚ್ಚು ಬಲಿಷ್ಠವಾಗಿದ್ದವು.

ಆದರೆ, ನಗರೀಕರಣ ಮತ್ತು ಮಾನವನ ದುರಾಸೆ ಇವುಗಳ ಅವನತಿಗೆ ಕಾರಣವಾಯಿತು. ದಂತಕ್ಕಾಗಿ ನಡೆದ ಅತಿಯಾದ ಬೇಟೆ ಮತ್ತು ಕೃಷಿಗಾಗಿ ಅರಣ್ಯ ನಾಶವಾಗಿದ್ದರಿಂದ ಆನೆಗಳ ಸಂಖ್ಯೆ ವೇಗವಾಗಿ ಕ್ಷೀಣಿಸಿತು.

ಇದನ್ನೂ ಓದಿ: Vishweshwar Bhat Column: ಸಾವಿರ ಪೇಟೆಂಟ್ʼಗಳ ಸರದಾರ

1920ರ ಹೊತ್ತಿಗೆ ಇಲ್ಲಿ 10-15 ಆನೆಗಳು ಮಾತ್ರ ಉಳಿದುಕೊಂಡಿದ್ದವು. ಕಳೆದ ಕೆಲವು ದಶಕ ಗಳಿಂದ ವಿಜ್ಞಾನಿಗಳು ಮತ್ತು ಪರಿಸರ ಪ್ರೇಮಿಗಳು ನೈಸ್ನಾ ಕಾಡಿನಲ್ಲಿ ಎಷ್ಟು ಆನೆಗಳಿವೆ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. 2000ನೇ ಇಸವಿಯ ಸುಮಾರಿಗೆ ಅಲ್ಲಿ ಒಂದು ಸಣ್ಣ ಗುಂಪು ಇರಬಹುದು ಎಂದು ಭಾವಿಸಲಾಗಿತ್ತು. ಆದರೆ, ಅತ್ಯಾಧುನಿಕ ಕೆಮರಾ ಟ್ರ್ಯಾಪ್‌ಗಳು ಮತ್ತು ಡಿಎನ್‌ಎ ಪರೀಕ್ಷೆಗಳ ನಂತರ ವಿಜ್ಞಾನಿಗಳು ಒಂದು ಆಘಾತಕಾರಿ ಸತ್ಯವನ್ನು ಹೊರಹಾಕಿದರು.

ಇಡೀ 600 ಚದರ ಕಿ.ಮೀ. ವಿಸ್ತೀರ್ಣದ ದಟ್ಟ ಕಾಡಿನಲ್ಲಿ ಇಂದು ಕೇವಲ ಒಂದೇ ಒಂದು ಹೆಣ್ಣು ಆನೆ ಉಳಿದುಕೊಂಡಿದೆ! ಇದನ್ನು ವಿಜ್ಞಾನಿಗಳು ಪ್ರೀತಿಯಿಂದ ‘ದಿ ಓಲ್ಡ್‌ ಮ್ಯಾಟ್ರಿ ಯಾರ್ಕ್’ ಎಂದು ಕರೆಯುತ್ತಾರೆ. ಆನೆಗಳನ್ನು ದಟ್ಟ ಕಾಡಿನಲ್ಲಿ ನೇರವಾಗಿ ಕಾಣುವುದು ಅಸಾಧ್ಯ. ಆದ್ದರಿಂದ ಸಂಶೋಧಕರು ‘ಸಗಣಿ’ಯನ್ನು ಸಂಗ್ರಹಿಸಿ ಅದರ ಡಿಎನ್‌ಎ ಪರೀಕ್ಷೆ ಮಾಡಿದರು. ಈ ಪರೀಕ್ಷೆಯು ಕಾಡಿನ ಬೇರೆ ಬೇರೆ ಭಾಗಗಳಲ್ಲಿ ಸಿಕ್ಕಿದ ಎಲ್ಲ ಸಗಣಿಗಳೂ ಒಂದೇ ಹೆಣ್ಣು ಆನೆಗೆ ಸೇರಿದ್ದು ಎಂದು ಸಾಬೀತುಪಡಿಸಿತು.

ಅಂದರೆ, ಆ ಒಂಟಿ ಆನೆ ಇಡೀ ಕಾಡಿನ ಉದ್ದಗಲಕ್ಕೂ ಆಹಾರ ಹುಡುಕುತ್ತಾ ಏಕಾಂಗಿ ಯಾಗಿ ಸಂಚರಿಸುತ್ತಿದೆ. ನೈಸ್ನಾ ಆನೆಯನ್ನು ನೋಡುವುದು ಲಾಟರಿ ಹೊಡೆದಂತೆ. ಇದಕ್ಕೆ ಕಾರಣಗಳು ಹಲವು. ಈ ಆನೆಗೆ ಮನುಷ್ಯರ ವಾಸನೆ ಬಹಳ ಬೇಗ ತಿಳಿಯುತ್ತದೆ. ಮನುಷ್ಯ ರು ಆ ಕಾಡಿಗೆ ಪ್ರವೇಶಿಸುತ್ತಿದ್ದಂತೆಯೇ ಅದು ದಟ್ಟವಾದ ಪೊದೆಗಳ ನಡುವೆ ಮರೆಯಾಗು ತ್ತದೆ.

ಇಷ್ಟು ದೊಡ್ಡ ಪ್ರಾಣಿಯಾಗಿದ್ದರೂ, ಅದು ಕಾಡಿನಲ್ಲಿ ಒಣ ಎಲೆಗಳ ಮೇಲೆ ನಡೆಯು ವಾಗಲೂ ಸಣ್ಣ ಶಬ್ದವನ್ನೂ ಮಾಡುವುದಿಲ್ಲ ಎಂದು ಅಲ್ಲಿನ ಅರಣ್ಯ ರಕ್ಷಕರು ಹೇಳು ತ್ತಾರೆ. ತನ್ನ ಗುಂಪಿನ ಎಲ್ಲ ಸದಸ್ಯರನ್ನು ಕಳೆದುಕೊಂಡಿರುವ ಈ ಆನೆ, ಮನುಷ್ಯರ ಬಗ್ಗೆ ಅಪಾರ ಅಪನಂಬಿಕೆ ಮತ್ತು ಭಯವನ್ನು ಹೊಂದಿದೆ. ಈ ಹೆಣ್ಣು ಆನೆಗೆ ಈಗ ಸುಮಾರು 45 ರಿಂದ 50 ವರ್ಷ ವಯಸ್ಸು ಎನ್ನಲಾಗಿದೆ.

ಸಾಮಾನ್ಯವಾಗಿ ಆನೆಗಳು ಸಾಮಾಜಿಕ ಪ್ರಾಣಿಗಳು, ಅವುಗಳು ಗುಂಪಿನಲ್ಲಿರಲು ಇಷ್ಟ ಪಡುತ್ತವೆ. ಆದರೆ ಈ ಆನೆ ಕಳೆದ 20 ವರ್ಷಗಳಿಂದ ಏಕಾಂಗಿಯಾಗಿ ಬದುಕುತ್ತಿದೆ. ವಿಜ್ಞಾನಿ ಗಳ ಪ್ರಕಾರ, ಇದು ತೀವ್ರವಾದ ಮಾನಸಿಕ ಒತ್ತಡದಲ್ಲಿರಬಹುದು. ಏಕೆಂದರೆ ಸಂವಹನ ನಡೆಸಲು ಅಥವಾ ಜತೆಗೂಡಲು ಇದಕ್ಕೆ ತನ್ನ ಜಾತಿಯ ಯಾವುದೇ ಪ್ರಾಣಿ ಅಕ್ಕಪಕ್ಕ ದಲ್ಲಿಲ್ಲ.

1994ರಲ್ಲಿ ಕ್ರೂಗರ್ ನ್ಯಾಷನಲ್ ಪಾರ್ಕ್‌ನಿಂದ ಮೂರು ಸಣ್ಣ ಆನೆಗಳನ್ನು ಈ ಕಾಡಿಗೆ ಬಿಡಲಾಗಿತ್ತು. ಆದರೆ ಆ ಪ್ರಯತ್ನ ವಿಫಲವಾಯಿತು. ಎರಡು ಆನೆಗಳು ಸಾವನ್ನಪ್ಪಿದವು ಮತ್ತು ಉಳಿದ ಒಂದು ಆನೆಯನ್ನು ವಾಪಸ್ ಕರೆದೊಯ್ಯಲಾಯಿತು. ನೈಸ್ನಾ ಕಾಡಿನ ಹವಾಮಾನ ಮತ್ತು ಅಲ್ಲಿನ ಸಸ್ಯವರ್ಗವು ಇತರ ಭಾಗಗಳ ಆನೆಗಳಿಗೆ ಒಗ್ಗಿಕೊಳ್ಳುವುದು ಕಷ್ಟ ಎಂಬುದು ಅರಿವಾಯಿತು.

ಈಗ ಉಳಿದಿರುವ ಏಕೈಕ ಆನೆ ಸತ್ತರೆ, ನೈಸ್ನಾ ಆನೆಗಳ ಇತಿಹಾಸ ಶಾಶ್ವತವಾಗಿ ಅಂತ್ಯ ಗೊಳ್ಳುತ್ತದೆ. ಇದು ಪರಿಸರ ಪ್ರೇಮಿಗಳಿಗೆ ದೊಡ್ಡ ಕಳವಳದ ವಿಷಯವಾಗಿದೆ. ಗಾರ್ಡನ್ ರೂಟ್‌ನಲ್ಲಿ ಪ್ರಯಾಣಿಸುವ ಪ್ರವಾಸಿಗರು ನೈಸ್ನಾ ಎಲಿಫೆಂಟ್ ಪಾರ್ಕ್‌ಗೆ (ಇದು ಸಂರಕ್ಷಿತ ಪ್ರದೇಶ, ಇಲ್ಲಿ ಪಳಗಿಸಿದ ಆನೆಗಳಿವೆ) ಭೇಟಿ ನೀಡುತ್ತಾರೆ. ಆದರೆ ನೈಜ ‘ಕಾಡು ಆನೆ’ಯನ್ನು ನೋಡುವ ಆಸೆ ಎಲ್ಲರಿಗೂ ಇರುತ್ತದೆ.

ರಸ್ತೆಯಲ್ಲಿ ಹೋಗುವಾಗ ಆನೆಯ ಹೆಜ್ಜೆ ಗುರುತುಗಳು ಅಥವಾ ಮುರಿದ ಕೊಂಬೆಗಳನ್ನು ಕಂಡರೆ, ಅದು ಆ ‘ಒಂಟಿ ರಾಣಿ’ಯದ್ದೇ ಇರಬಹುದು ಎಂದು ಜನ ಸಂಭ್ರಮಿಸುತ್ತಾರೆ