ಅಮೃತಕಾಲ
ಲೀನಾ ಜೋಶಿ
ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಒಂದು ಪ್ರಶ್ನೆ ಮತ್ತೆ ಮತ್ತೆ ಕೇಳಿ ಬರುತ್ತಿದೆ- ಇಂದಿನ ‘ಜೆನ್ ಝಿ’ ಯುವಜನಾಂಗ ನಿಜವಾಗಿಯೂ ಮೌಲ್ಯಗಳಿಂದ ದೂರವಾಗಿದೆಯೇ? ದೆಹಲಿ ಪ್ರತಿಭಟನೆಯ ಸಂದರ್ಭದಲ್ಲಿ ವೈರಲ್ ಆದ ಕೆಲವು ವಿಡಿಯೋಗಳು ಈ ಚರ್ಚೆಗೆ ಮತ್ತಷ್ಟು ವೇಗ ನೀಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಳ್ಳುತ್ತಿದ್ದಾರೆ. ಆದರೆ, ಈ ಚರ್ಚೆಯಲ್ಲಿ ಒಂದು ಮೂಲಭೂತ ಪ್ರಶ್ನೆ ಮಾತ್ರ ಕಾಣೆಯಾಗಿದೆ. ಇಂದಿನ ಮಕ್ಕಳನ್ನು ನಾವು ಯಾವ ಪರಿಸರದಲ್ಲಿ ಬೆಳೆಸುತ್ತಿದ್ದೇವೆ? ಯುವಜನರ ವರ್ತನೆಯನ್ನು ವಿಮರ್ಶಿಸುವ ಮೊದಲು, ಅವರನ್ನು ರೂಪಿಸಿದ ಸಮಾಜದ ಕಡೆಗೆ ನಾವು ಕಣ್ಣು ಹಾಯಿಸಬೇಕು.
ಸುಮಾರು 3 ವರ್ಷಗಳ ಕಾಲ ದೆಹಲಿ, ನೋಯ್ಡಾ ಮತ್ತು ಗುರುಗ್ರಾಮ್ ಪ್ರದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಅವಕಾಶ ನನಗೆ ದೊರೆತಿತ್ತು. ಅಲ್ಲಿನ ಬದುಕಿನ ವೇಗ, ಕಚೇರಿಗಳ ಸಂಸ್ಕೃತಿ, ಕುಟುಂಬಗಳ ದಿನಚರಿ ಮತ್ತು ಮಕ್ಕಳ ಬೆಳವಣಿಗೆಯ ವಾತಾವರಣವನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಅಲ್ಲಿ ಗೃಹಿಣಿಯಿರಲಿ ಅಥವಾ ಉದ್ಯೋಗಿ ಹೆಣ್ಣಿರಲಿ, ಮನೆಗೆಲಸಕ್ಕೆ ಸಾಮಾನ್ಯವಾಗಿ 2 ರಿಂದ 3 ಜನ ಇರುತ್ತಾರೆ. ಕೆಲಸಕ್ಕೆ ಬರುವವರು ಹಿಂದೂ ಹೆಸರಿಟ್ಟುಕೊಂಡ ಬಾಂಗ್ಲಾದೇಶಿಗರು.
ಅವರು ಬಾಂಗ್ಲಾದೇಶದವರು ಎಂದು ಗೊತ್ತಿದ್ದರೂ ಅವರನ್ನು ಕೆಲಸಕ್ಕಿಟ್ಟುಕೊಳ್ಳಲು ದೆಹಲಿಯ ಮಹಿಳೆಯರು ಹೇಳುವ ಕಾರಣವಿಷ್ಟೆ- ಅವರು ರಜೆ ಹಾಕುವುದಿಲ್ಲ, ತಿಂಗಳಿನಲ್ಲಿ ಪ್ರತಿದಿನವೂ ಬರುತ್ತಾರೆ! ಅಡುಗೆಗೊಬ್ಬರು, ಪಾತ್ರೆ ತೊಳೆಯಲು ಮತ್ತು ನೆಲ ಒರೆಸಲು ಮತ್ತೊಬ್ಬರು, ಧೂಳು ಒರೆಸಿ ಬಾತ್ರೂಮ್ ತೊಳೆಯಲು ಇನ್ನೊಬ್ಬರು... ಇದು ನಾನು ಕಂಡ ಮೇಲ್ಮಧ್ಯಮ ವರ್ಗದ ಪ್ರತಿಯೊಂದು ಮನೆಯ ದೃಶ್ಯ.
ಇದನ್ನೂ ಓದಿ: Leena Joshi Column: ಎಚ್‌ಎಂಟಿ ಹಾದಿಯಲ್ಲಿದೆಯೇ ಇಸ್ರೋ?
ಹಣದ ಉಳಿತಾಯ ಮತ್ತು ಬಂಗಾರದ ಮೇಲಿನ ಹೂಡಿಕೆ ದಕ್ಷಿಣ ಭಾರತದವರಿಗೆ ಹೋಲಿಸಿದರೆ ತುಂಬಾ ಕಡಿಮೆ. ಎಷ್ಟಿದ್ದರೂ ಸಂಪಾದಿಸು, ಮಜಾ ಮಾಡು, ಕುಡಿ, ಡ್ಯಾನ್ಸ್ ಮಾಡು ಎಂಬ ಧೋರಣೆ. ಇವರ ಮದುವೆಗಳೂ ಅಷ್ಟೇ ಗ್ರ್ಯಾಂಡ್. ಸಾಲ ಮಾಡಿಯಾದರೂ ಸರಿ, ತುಂಬಾ ಚೆನ್ನಾಗಿ ಹಣ ಖರ್ಚು ಮಾಡುತ್ತಾರೆ. ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳಲ್ಲಿ ನಯ-ನಾಜೂಕು ಮತ್ತು ಹಿರಿಯರ ಬಗ್ಗೆ ಇರಬೇಕಾದ ಭಯ ಸ್ವಲ್ಪ ಕಡಿಮೆಯೇ ಎನ್ನಬಹುದು.
ಹೀಗಿರುವಾಗ, ಮಕ್ಕಳ ಮನಸ್ಸಿನಲ್ಲಿ ಸಹಜವಾಗಿಯೇ ಈ ಭಾವನೆ ಮೂಡುತ್ತದೆ- ಈ ಕೆಲಸಕ್ಕೆ ಕೆಲಸದವರು ಇದ್ದಾರಲ್ಲ, ನಾನು ಯಾಕೆ ಮಾಡಬೇಕು? ಮಕ್ಕಳಿಗೆ ಊಟವಾದ ನಂತರ ತಮ್ಮ ತಟ್ಟೆಯನ್ನು ತಾವೇ ತೊಳೆದು ಇಡಲು ಹೇಳಿದರೆ, ಅನೇಕ ಮನೆಗಳಲ್ಲಿ ಕೇಳಿ ಬರುವ ಉತ್ತರ ಒಂದೇ- ನಾನು ಯಾಕೆ ಮಾಡಬೇಕು? ಕೆಲಸದವಳು ಬರುತ್ತಾಳಲ್ಲ!
ಇದು ಮಕ್ಕಳ ಅಹಂಕಾರವಲ್ಲ. ಬದಲಿಗೆ, ಅವರು ಬೆಳೆದಿರುವ ಪರಿಸರದ ಅಚ್ಚಳಿಯದ ಪ್ರತಿಬಿಂಬ. ಚಿಕ್ಕಂದಿನಿಂದಲೇ ಪ್ರತಿಯೊಂದು ಸಣ್ಣ ಕೆಲಸವನ್ನೂ ಬೇರೆ ಯಾರೋ ಮಾಡುತ್ತಿರುವುದನ್ನು ನೋಡುತ್ತಾ ಬೆಳೆದಾಗ, ಮನೆಕೆಲಸವೂ ತಮ್ಮ ಜವಾಬ್ದಾರಿಯ ಭಾಗ ಎಂಬ ಅರಿವು ಅವರಿಗೆ ಮೂಡುವುದು ಹೇಗೆ? ಎಲ್ಲ ರೀತಿಯ ಸೌಲಭ್ಯಗಳನ್ನು ಮುಂಚಿತವಾಗಿ ನೀಡಿ, ಕೊನೆಗೆ ಮಕ್ಕಳು ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ದೂರುವುದು ನ್ಯಾಯವಾಗುತ್ತದೆಯೇ? ಆ ಸೌಲಭ್ಯಗಳ ವ್ಯವಸ್ಥೆ ಯನ್ನು ನಿರ್ಮಿಸಿರುವುದು ನಾವೇ ಅಲ್ಲವೇ? ನಂತರ ಅದೇ ವ್ಯವಸ್ಥೆಯ ಪರಿಣಾಮ ಕಂಡು, ಮಕ್ಕಳದೇ ತಪ್ಪು ಎಂದು ಹಳಿಯುವುದೂ ನಾವೇ!
ನಾವು ಪ್ರತಿದಿನ ನೋಡುತ್ತಿರುವ ಮತ್ತೊಂದು ಸಾಮಾನ್ಯ ದೃಶ್ಯವೆಂದರೆ- ಶಾಲೆಯ ಬ್ಯಾಗ್ ಭಾರ ವಾಗಿದೆ ಎಂದು ಪೋಷಕರೇ ಅದನ್ನು ಹೊತ್ತುಕೊಂಡು ಶಾಲಾ ಬಸ್‌ವರೆಗೆ ಹೋಗುವುದು. ಮಕ್ಕಳಿಗೆ ಯಾವುದೇ ಕಷ್ಟವಾಗಬಾರದೆಂಬ ಕಾಳಜಿ ಸಹಜವೇ ಸರಿ. ಪ್ರತಿಯೊಂದು ತೊಂದರೆ ಯನ್ನೂ ದೊಡ್ಡವರೇ ಹೊತ್ತುಕೊಂಡರೆ, ಜೀವನದ ದೊಡ್ಡ ಸವಾಲುಗಳನ್ನು ಎದುರಿಸುವ ಮನೋಬಲ ಮಕ್ಕಳಲ್ಲಿ ಹೇಗೆ ತಾನೆ ಬೆಳೆಯುತ್ತದೆ? ತನ್ನ ಶಾಲೆಯ ಬ್ಯಾಗನ್ನೇ ತಾನು ಹೊರುವ ಅಭ್ಯಾಸವಿಲ್ಲದ ಮಗುವಿಗೆ, ಮುಂದೊಂದು ದಿನ ಜೀವನದ ದೊಡ್ಡ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುವುದು ಸಹಜ.
ಶಾಲೆಯಿಂದ ಮನೆಗೆ ಬಂದ ತಕ್ಷಣ ಮಕ್ಕಳು ಬಟ್ಟೆ ಬದಲಿಸದೆ ಸೋಫಾ, ಹಾಸಿಗೆ ಅಥವಾ ಊಟದ ಮೇಜಿನ ಬಳಿ ಬೂಟುಗಳ ಸಮೇತ ಕುಳಿತುಕೊಳ್ಳುವುದು ಅನೇಕ ಮನೆಗಳಲ್ಲಿ ಕಾಣುವ ದೃಶ್ಯ. ಇದು ಕೇವಲ ಮಗುವಿನ ತಪ್ಪಲ್ಲ. ಮನೆಯಲ್ಲಿ ಆ ಸಣ್ಣ ಶಿಸ್ತುಗಳನ್ನು ಕಲಿಸದ ದೊಡ್ಡವರ ಜವಾಬ್ದಾರಿ ಯೂ ಹೌದು. ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಬೆಳೆಸುವುದು ಪ್ರೀತಿಯ ಅಭಿವ್ಯಕ್ತಿ, ಆದರೆ ಜೀವನದಲ್ಲಿ ಪ್ರತಿಯೊಂದು ಕೆಲಸವನ್ನೂ ಯಾರೋ ಒಬ್ಬರು ಮಾಡಿಕೊಡುತ್ತಾರೆ ಎಂಬ ಭಾವನೆ ಅವರಲ್ಲಿ ಮೂಡಿದರೆ, ಅದು ಮುಂದಿನ ದಿನಗಳಲ್ಲಿ ಜವಾಬ್ದಾರಿಯ ಕೊರತೆಗೆ ನೇರವಾಗಿ ದಾರಿ ಮಾಡಿಕೊಡುತ್ತದೆ.
ಇಂದು ನಮ್ಮ ಜೀವನದ ಬಹುತೇಕ ಎಲ್ಲವೂ ‘ಔಟ್‌ಸೋರ್ಸ್’ ಆಗಿದೆ. ಮನೆಗೆಲಸಗಳಿಗೆ ಸಹಾಯಕರು, ಊಟಕ್ಕೆ ಆನ್‌ಲೈನ್ ವಿತರಣಾ ಸೇವೆಗಳು, ದಿನನಿತ್ಯದ ಅಗತ್ಯಗಳಿಗೆ ಮನೆ ಬಾಗಿಲಿಗೆ ತಲುಪುವ ತ್ವರಿತ ಸೌಲಭ್ಯಗಳು- ಇವೆಲ್ಲವೂ ನಮ್ಮ ಬದುಕನ್ನು ಅತಿ ಸುಲಭಗೊಳಿಸಿವೆ. ಈ ಸುಲಭ ಬದುಕಿನ ಮತ್ತೊಂದು ಮಗ್ಗಲನ್ನು ನಾವು ಮರೆಯುತ್ತಿದ್ದೇವೆ. ಇಂದಿನ ಮೇಲ್ಮಧ್ಯಮ ವರ್ಗದ ಮಕ್ಕಳಿಗೆ ತಾವು ಪ್ರತಿದಿನ ತಿನ್ನುವ ಆಹಾರ ಯಾವ ಯಾವ ಪದಾರ್ಥಗಳಿಂದ ತಯಾರಾಗುತ್ತದೆ ಎಂಬುದರ ಅರಿವೇ ಇರುವುದಿಲ್ಲ!
ಕೆಲವು ಸಾಮಾನ್ಯ ತರಕಾರಿಗಳನ್ನು ತೋರಿಸಿದರೆ, ಅವುಗಳ ಹೆಸರನ್ನೂ ಗುರುತಿಸಲು ಕಷ್ಟಪಡುವ ಮಕ್ಕಳಿzರೆ. ಆಹಾರವು ತಟ್ಟೆಯಲ್ಲಿ ಸಿದ್ಧವಾಗಿ ಬಂದು ಬೀಳುತ್ತದೆ. ಆದರೆ ಅದರ ಹಿಂದೆ ಇರುವ ರೈತನ ಶ್ರಮ, ಅಡುಗೆ ಮಾಡುವವರ ಪರಿಶ್ರಮ ಮತ್ತು ಆ ಆಹಾರ ತಯಾರಾಗುವ ಪ್ರಕ್ರಿಯೆಯ ಬಗ್ಗೆ ಅವರಿಗೆ ಯಾವುದೇ ಅನುಭವವಿರುವುದಿಲ್ಲ.
ಮಕ್ಕಳು ಹುಟ್ಟಿನಿಂದಲೇ ಮೌಲ್ಯರಹಿತರಾಗಿರುವುದಿಲ್ಲ. ನಾವು ಅವರಿಗೆ ಯಾವ ರೀತಿಯ ಜಗತ್ತನ್ನು ತೋರಿಸಿಕೊಡುತ್ತೇವೆಯೋ, ಅದೇ ಜಗತ್ತನ್ನು ಅವರು ತಮ್ಮದಾಗಿಸಿಕೊಳ್ಳುತ್ತಾರೆ. ಜೆನ್-ಝಿ ಯುವಕ ಯುವತಿಯರನ್ನು ದೂಷಿಸುವ ಮುನ್ನ, ನಾವು ಸೃಷ್ಟಿಸಿರುವ ಈ ಸೌಕರ್ಯದ ಗೋಪುರ ಗಳನ್ನು ಮತ್ತು ನಮ್ಮ ಪಾಲನೆಯ ವಿಧಾನಗಳನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಮಕ್ಕಳು ಬದಲಾಗಿಲ್ಲ, ಬದಲಾಗಿರುವುದು ನಮ್ಮ ಜೀವನಶೈಲಿ ಮತ್ತು ನಮ್ಮ ಸುತ್ತಲಿನ ಜಗತ್ತು!
ಇಂದು ಡಿಜಿಟಲ್ ಮನರಂಜನೆಯು ಮಕ್ಕಳ ವ್ಯಕ್ತಿತ್ವದ ಮೇಲೆ ಅತಿ ದೊಡ್ಡ ಪ್ರಭಾವ ಬೀರುತ್ತಿದೆ. ಕೆಲವು ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮಗಳಲ್ಲಿ ಅಸಭ್ಯ ಭಾಷೆಯನ್ನು ಹಾಸ್ಯದ ರೂಪದಲ್ಲಿ ಸಾಮಾನ್ಯ ಗೊಳಿಸಲಾಗುತ್ತಿದೆ. ‘ರೈಟ್ ವಿಂಗ್’ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯನ್ನು ನಿರಂತರ ವಾಗಿ ಅವಮಾನಿಸಲಾಗುತ್ತಿದೆ.
‘ಫ್ರೀಡಂ ಆಫ್ ಸ್ಪೀಚ್’ (ಮಾತಿನ ಸ್ವಾತಂತ್ರ್ಯ) ಮತ್ತು ‘ಫ್ರೀಡಂ ಆಫ್ ಒಪಿನಿಯನ್’ (ಅಭಿಪ್ರಾಯ ಸ್ವಾತಂತ್ರ್ಯ) ಮುಖವಾಡ ಧರಿಸಿ ಹರಿಯುತ್ತಿರುವ ಈ ಕಂಟೆಂಟ್ ಅನ್ನು ನಿರಂತರವಾಗಿ ನೋಡುವ ಅನೇಕ ಮಕ್ಕಳು, ಆ ಅಸಭ್ಯ ಭಾಷೆಯನ್ನೇ ಆತ್ಮವಿಶ್ವಾಸ, ಧೈರ್ಯ ಮತ್ತು ಆಧುನಿಕತೆಯ ಸಂಕೇತವೆಂದು ಭಾವಿಸಲು ಆರಂಭಿಸುzರೆ.
ಇದು ಕೇವಲ ದೆಹಲಿಯ ಸಮಸ್ಯೆಯಲ್ಲ. ವೇಗವಾಗಿ ಬದಲಾಗುತ್ತಿರುವ ನಮ್ಮ ಸಾಮಾಜಿಕ ಮತ್ತು ಡಿಜಿಟಲ್ ಸಂಸ್ಕೃತಿಯ ಕನ್ನಡಿಯಾಗಿದೆ. ಇಂದು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯು ತ್ತಿರುವುದು ಯಾರು? ಪೋಷಕರೇ? ಶಿಕ್ಷಕರೇ? ಅಥವಾ ಮೊಬೈಲ್ ಪರದೆಯೇ? ಯೂಟ್ಯೂಬ್, ಒಟಿಟಿ, ರೀಲ್ಸ್, ಸಾಮಾಜಿಕ ಜಾಲತಾಣಗಳು- ಇವು ಕೇವಲ ಮನರಂಜನೆಯ ಸಾಧನಗಳಾಗಿ ಉಳಿದಿಲ್ಲ.
ಬದಲಾಗಿ, ಇವು ಮಕ್ಕಳ ಮಾತು, ಉಡುಗೆ, ವರ್ತನೆ ಮತ್ತು ಆಲೋಚನೆಗಳನ್ನು ರೂಪಿಸುವ ಪ್ರಮುಖ ಶಕ್ತಿಗಳಾಗಿವೆ. ಇಲ್ಲಿ ನಿಜವಾದ ಸಮಸ್ಯೆ ತಂತ್ರಜ್ಞಾನದಲ್ಲಿಲ್ಲ. ಸಮಸ್ಯೆ ಇರುವುದು ಅದರಲ್ಲಿರುವ ವಿಷಯಗಳನ್ನು ಪ್ರಶ್ನಿಸದೆ ಸ್ವೀಕರಿಸುವ ಮನೋಭಾವದಲ್ಲಿ. ಅಸಭ್ಯತೆಯನ್ನು ಹಾಸ್ಯವೆಂದು, ಹಿರಿಯರ ಅವಮಾನವನ್ನು ಆತ್ಮವಿಶ್ವಾಸವೆಂದು, ಕೋಪವನ್ನು ವ್ಯಕ್ತಿತ್ವವೆಂದು ಬಿಂಬಿಸುವ ವಿಷಯಗಳನ್ನು ನಿರಂತರವಾಗಿ ನೋಡಿದಾಗ, ಮಕ್ಕಳಿಗೆ ಅದೇ ಸಹಜವೆಂದು ಕಾಣಲು ಪ್ರಾರಂಭಿಸುತ್ತದೆ.
ದೆಹಲಿಯ ಕಚೇರಿ ಜೀವನದಲ್ಲಿ ನನ್ನ ಗಮನ ಸೆಳೆದ ಒಂದು ಸಂಗತಿಯೆಂದರೆ ಭಾಷೆಯ ಬಳಕೆ. ಅಧಿಕೃತ ಸಭೆಗಳು ಇಂಗ್ಲಿಷ್‌ನಲ್ಲಿ ನಡೆದರೂ, ಅನೌಪಚಾರಿಕ ಸಂಭಾಷಣೆಗಳಲ್ಲಿ ಅಸಭ್ಯ ಪದಗಳ ಬಳಕೆ ಸಾಮಾನ್ಯವಾಗಿದೆ. ಕೆಲವೊಮ್ಮೆ ಉನ್ನತ ಹುzಗಳಲ್ಲಿರುವವರೂ ಸಹ ಅದನ್ನು ಅತ್ಯಂತ ಸಹಜವಾಗಿ ಬಳಸುತ್ತಾರೆ. ಇಂತಹ ಭಾಷೆಯನ್ನು ಮಕ್ಕಳ ಪೋಷಕರು ತಮ್ಮ ಮಕ್ಕಳ ಎದುರು ಬಳಸಿದರೆ, ಅಥವಾ ಮಕ್ಕಳು ಇಂತಹ ಮಾತುಗಳನ್ನು ದಿನನಿತ್ಯ ಕೇಳುತ್ತಾ ಬೆಳೆದರೆ, ಅವರ ಮಾತಿನ ಶೈಲಿ ಕೂಡ ಅದೇ ರೀತಿ ರೂಪುಗೊಳ್ಳುವುದರಲ್ಲಿ ಆಶ್ಚರ್ಯವೇನಿದೆ? ನೆನಪಿಡಿ, ಭಾಷೆ ಕೇವಲ ಪದಗಳ ಸಂಗ್ರಹವಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ.
ಮಕ್ಕಳು ನಮ್ಮ ಮಾತಿಗಿಂತ ನಮ್ಮ ಜೀವನವನ್ನು ಓದುತ್ತಾರೆ! ಮಕ್ಕಳು ನಾವು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ, ನಾವು ಮಾಡಿದ್ದನ್ನು ಗಮನಿಸುತ್ತಾರೆ, ನಾವು ಹಿರಿಯರನ್ನು ಹೇಗೆ ಗೌರವಿಸುತ್ತೇವೆ? ಮನೆಗೆ ಬಂದ ಕೆಲಸಗಾರರೊಂದಿಗೆ ಹೇಗೆ ಮಾತನಾಡುತ್ತೇವೆ? ಟ್ರಾಫಿಕ್‌ನಲ್ಲಿ ಹೇಗೆ ವರ್ತಿಸುತ್ತೇವೆ? ರೆಸ್ಟೋರೆಂಟ್‌ನಲ್ಲಿ ಸೇವೆ ನೀಡುವವರನ್ನು ಹೇಗೆ ಕಾಣುತ್ತೇವೆ? ನಮ್ಮಿಂದ ತಪ್ಪಾದಾಗ ಕ್ಷಮೆ ಕೇಳುತ್ತೇವೆಯೇ?
ಇವೆಲ್ಲವೂ ಮಕ್ಕಳಿಗೆ ಯಾವುದೇ ಪಠ್ಯಪುಸ್ತಕಕ್ಕಿಂತ ದೊಡ್ಡ ಪಾಠಗಳು. ಮಕ್ಕಳು ಮೊದಲು ನೋಡುತ್ತಾರೆ. ನಂತರ ಅನುಕರಿಸುತ್ತಾರೆ. ಒಂದು ಕಾಲದಲ್ಲಿ ಪ್ರತಿ ಪ್ರದೇಶಕ್ಕೂ ತನ್ನದೇ ಆದ ವಿಶಿಷ್ಟ ಜೀವನಶೈಲಿ ಇತ್ತು. ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ ದೆಹಲಿ ಅಥವಾ ಗುವಾಹಟಿ- ಎಡೆ ಮಕ್ಕಳು ಒಂದೇ ಡಿಜಿಟಲ್ ಜಗತ್ತಿನಲ್ಲಿ ಬದುಕುತ್ತಿದ್ದಾರೆ. ಒಂದೇ ತರಹದ ರೀಲ್ಸ್, ಒಂದೇ ವೆಬ್ ಸೀರೀಸ್, ಒಂದೇ ಇನ್ ಫ್ಲ್ಯುಯೆನ್ಸರ್‌ಗಳು!
ಹೀಗಾಗಿ ಸಾಂಸ್ಕೃತಿಕ ಗಡಿಗಳು ಮಾಯವಾಗುತ್ತಿವೆ. ಒಳ್ಳೆಯದು ಹೇಗೆ ವೇಗವಾಗಿ ಹರಡುತ್ತದೆಯೋ, ಕೆಟ್ಟದ್ದೂ ಅದೇ ವೇಗದಲ್ಲಿ ಎಲ್ಲರನ್ನು ತಲುಪುತ್ತಿದೆ. ನಾವು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಕೋಡಿಂಗ್, ಕ್ರೀಡೆ, ಸಂಗೀತ, ವಿದೇಶಿ ಶಿಕ್ಷಣ, ಹೊಸ ತಂತ್ರಜ್ಞಾನ- ಎಲ್ಲವನ್ನೂ ಕಲಿಸುತ್ತಿದ್ದೇವೆ. ಆದರೆ, ಇದರೊಂದಿಗೆ ನಾವು ಮೂಲಭೂತ ಮೌಲ್ಯ ಗಳು, ಗೌರವ, ಜವಾಬ್ದಾರಿ, ಸಹಾನುಭೂತಿ, ಸಂಯಮ, ತಪ್ಪೊಪ್ಪಿಕೊಳ್ಳುವ ಧೈರ್ಯ, ಇತರರ ಪರಿಶ್ರಮವನ್ನು ಗೌರವಿಸುವ ಗುಣ ಕಲಿಸುತ್ತಿದ್ದೇವೆಯೇ? ಇವುಗಳಿಲ್ಲದ ಶಿಕ್ಷಣವು ಕೇವಲ ಮಾಹಿತಿ ಯನ್ನು ನೀಡಬಹುದೇ ಹೊರತು, ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸಲಾರದು.
ಮಕ್ಕಳು ನಾಳೆಯ ಭಾರತವನ್ನು ನಿರ್ಮಿಸಲಿದ್ದಾರೆ ಎಂದು ನಾವು ಆಗಾಗ್ಗೆ ಭಾಷಣಗಳಲ್ಲಿ ಹೇಳುತ್ತೇವೆ. ಇಂದಿನ ಮಕ್ಕಳನ್ನು ನಿರ್ಮಿಸುತ್ತಿರುವವರು ಯಾರು? ಕುಟುಂಬವೇ? ಶಾಲೆಯೇ? ಸಮಾಜವೇ? ಮೊಬೈಲ್ ಪರದೆಗಳೇ?