ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Leena Joshi Column: ಎಚ್‌ಎಂಟಿ ಹಾದಿಯಲ್ಲಿದೆಯೇ ಇಸ್ರೋ?

14 ಜುಲೈ 2026ರಂದು ಹೊರಡಿಸಲಾದ ಕಚೇರಿ ಜ್ಞಾಪನಾ (Office Memorandum) ಪತ್ರದ ಪ್ರಕಾರ, ಸೈಂಟಿ/ಇಂಜಿನಿರ್ಯ- ಎಸ್‌ಜಿ ಹಂತದವರೆಗಿನ ಹಿರಿಯ ಸಿಬ್ಬಂದಿಯ ರಾಜೀನಾಮೆಗಳನ್ನು ಸ್ವತಂತ್ರ ವಾಗಿ ಅಂಗೀಕರಿಸಲು ಇಸ್ರೋ ಕೇಂದ್ರದ ನಿರ್ದೇಶಕರಿಗೆ ಅಧಿಕಾರ ನೀಡಿದ್ದ 2020ರ ಆಡಳಿತಾತ್ಮಕ ನೀತಿಯನ್ನು ಈ ಹೊಸ ಆದೇಶವು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ಹಿಂದೆ ಸಂಬಂಧಿತ ಇಸ್ರೋ ಕೇಂದ್ರಗಳ ಉನ್ನತ ಆಡಳಿತವೇ ರಾಜೀನಾಮೆ ಅಂಗೀಕರಿಸುವ ಅಧಿಕಾರ ಹೊಂದಿತ್ತು. ಈಗ ಆ ಪ್ರಕ್ರಿಯೆ ಯಲ್ಲಿ ತಿದ್ದುಪಡಿ ಮಾಡಲಾಗಿದೆ.

Leena Joshi Column: ಎಚ್‌ಎಂಟಿ ಹಾದಿಯಲ್ಲಿದೆಯೇ ಇಸ್ರೋ?

-

Profile
Ashok Nayak Jul 25, 2026 6:00 AM

ಅಮೃತಕಾಲ

- ಲೀನಾ ಜೋಶಿ

ಚಂದ್ರಯಾನ, ಮಂಗಳಯಾನ, ಆದಿತ್ಯ-ಎಲ್1, ನಾವಿಕ್, ನೂರಾರು ಉಪಗ್ರಹಗಳ ಉಡಾವಣೆ- ಇವೆಲ್ಲವೂ ಇಸ್ರೋವನ್ನು ವಿಶ್ವದ ಅತ್ಯಂತ ವಿಶ್ವಾಸಾರ್ಹ ಬಾಹ್ಯಾಕಾಶ ಸಂಸ್ಥೆಗಳ ಸಾಲಿನಲ್ಲಿ ನಿಲ್ಲಿಸಿವೆ. ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಫಲಿತಾಂಶ ನೀಡುವ ಸಂಸ್ಥೆ ಎಂಬ ಗೌರವವನ್ನು ಇಸ್ರೋ ಗಳಿಸಿದೆ. ಆದರೆ ಈ ಯಶಸ್ಸಿನ ಹಿಂದಿರುವ ನಿಜವಾದ ಶಕ್ತಿ ರಾಕೆಟ್‌ಗಳಲ್ಲ, ಕಟ್ಟಡಗಳಲ್ಲ; ಸಾವಿರಾರು ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ತಂತ್ರಜ್ಞರ ಪರಿಶ್ರಮ.

ಇತ್ತೀಚೆಗೆ ಇಸ್ರೋದಿಂದ ಸುಮಾರು 120 ಮಂದಿ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಇವರಲ್ಲಿ ಹೆಚ್ಚಿನವರು ಬೆಂಗಳೂರಿನ ಕೇಂದ್ರಗಳಿಂದ, ಉಳಿದವರು ತಿರುವನಂತ ಪುರದ ಕೇಂದ್ರಗಳಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಸುಮಾರು 15-16 ಸಾವಿರ ಉದ್ಯೋಗಿಗಳಿರುವ ಸಂಸ್ಥೆಯಲ್ಲಿ 120 ಎಂಬ ಸಂಖ್ಯೆ ದೊಡ್ಡದಾಗಿ ಕಾಣಿಸದೇ ಇರಬಹುದು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಖ್ಯೆಗಳಿಗಿಂತ ಪ್ರತಿಭೆ ಯ ಮೌಲ್ಯವೇ ದೊಡ್ಡದು. ಒಬ್ಬ ಅನುಭವಿ ವಿಜ್ಞಾನಿಯನ್ನು ಕಳೆದುಕೊಳ್ಳುವುದು ಎಂದರೆ ವರ್ಷ ಗಳ ಅನುಭವ, ಸಂಶೋಧನಾ ದೃಷ್ಟಿ ಮತ್ತು ತಾಂತ್ರಿಕ ಸಾಮರ್ಥ್ಯ ಸಂಸ್ಥೆಯಿಂದ ಹೊರ ಹೋಗುವುದೆಂದೇ ಅರ್ಥ.

ಈ ಬೆಳವಣಿಗೆಯ ನಡುವೆ ಮತ್ತೊಂದು ಮಹತ್ವದ ಆಡಳಿತಾತ್ಮಕ ಬದಲಾವಣೆ ಕೂಡ ಗಮನ ಸೆಳೆಯುತ್ತಿದೆ. ಇಸ್ರೋದಲ್ಲಿ ವಿಜ್ಞಾನಿಗಳು ಭಾರಿ ಪ್ರಮಾಣದಲ್ಲಿ ರಾಜೀನಾಮೆ ನೀಡುತ್ತಿರುವುದನ್ನು ತಡೆಯಲು ಬಾಹ್ಯಾಕಾಶ ಇಲಾಖೆಯು (DoS) ನಿರ್ಗಮನ ಅನುಮೋದನೆ (Resignation Accep tance) ಪ್ರಕ್ರಿಯೆಯನ್ನು ಕೇಂದ್ರೀಕರಿಸುವ ಮೂಲಕ ನಿಯಮಗಳನ್ನು ಕಠಿಣಗೊಳಿಸಿದೆ.

ಇದನ್ನೂ ಓದಿ: Leena Joshi Column: ಅಧಿಕಾರಕ್ಕೂ ಎಕ್ಸ್‌ಪೈರಿ ಡೇಟ್ ಇದೆ!

14 ಜುಲೈ 2026ರಂದು ಹೊರಡಿಸಲಾದ ಕಚೇರಿ ಜ್ಞಾಪನಾ (Office Memorandum) ಪತ್ರದ ಪ್ರಕಾರ, ಸೈಂಟಿ/ಇಂಜಿನಿರ್ಯ- ಎಸ್‌ಜಿ ಹಂತದವರೆಗಿನ ಹಿರಿಯ ಸಿಬ್ಬಂದಿಯ ರಾಜೀನಾಮೆಗಳನ್ನು ಸ್ವತಂತ್ರವಾಗಿ ಅಂಗೀಕರಿಸಲು ಇಸ್ರೋ ಕೇಂದ್ರದ ನಿರ್ದೇಶಕರಿಗೆ ಅಧಿಕಾರ ನೀಡಿದ್ದ 2020ರ ಆಡಳಿತಾತ್ಮಕ ನೀತಿಯನ್ನು ಈ ಹೊಸ ಆದೇಶವು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ಹಿಂದೆ ಸಂಬಂಧಿತ ಇಸ್ರೋ ಕೇಂದ್ರಗಳ ಉನ್ನತ ಆಡಳಿತವೇ ರಾಜೀನಾಮೆ ಅಂಗೀಕರಿಸುವ ಅಧಿಕಾರ ಹೊಂದಿತ್ತು. ಈಗ ಆ ಪ್ರಕ್ರಿಯೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ ಕೇವಲ ರಾಜೀನಾಮೆ ಅಂಗೀಕರಿಸುವ ವಿಧಾನವನ್ನು ಬದಲಾಯಿಸುವು ದರಿಂದ ಸಮಸ್ಯೆಯ ಮೂಲ ಕಾರಣ ಪರಿಹಾರ ವಾಗುವುದಿಲ್ಲ. ಪ್ರತಿಭಾವಂತ ವಿಜ್ಞಾನಿಗಳು ರಾಜೀನಾಮೆ ನೀಡುವ ಪರಿಸ್ಥಿತಿಯೇ ಏಕೆ ನಿರ್ಮಾಣ ವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಇನ್ನೂ ಮುಖ್ಯ.

ಈ ರಾಜೀನಾಮೆಗಳ ಹಿಂದೆ ಕೇಳಿ ಬರುತ್ತಿರುವ ಕಾರಣಗಳಲ್ಲಿ ಪ್ರಮುಖವಾದದ್ದು ಅತಿಯಾದ ಕೆಲಸದ ಒತ್ತಡ. ಬಾಹ್ಯಾಕಾಶ ಕಾರ್ಯಕ್ರಮಗಳು ಸಮಯದ ವಿರುದ್ಧದ ಓಟ. ಒಂದು ಸಣ್ಣ ತಪ್ಪು ಹಲವು ವರ್ಷಗಳ ಪರಿಶ್ರಮವನ್ನು ವ್ಯರ್ಥಗೊಳಿಸಬಹುದು. ಆದ್ದರಿಂದ ಒತ್ತಡ ಸಹಜ. ಆದರೆ ಆ ಒತ್ತಡ ನಿರಂತರವಾಗಿ ಹೆಚ್ಚಾದರೆ, ಅತ್ಯುತ್ತಮ ಪ್ರತಿಭೆಯೂ ಬೇರೆ ಅವಕಾಶಗಳತ್ತ ಮುಖ ಮಾಡು ತ್ತದೆ. ವಿಜ್ಞಾನಿಗಳಿಂದ ಅತ್ಯುತ್ತಮ ಸಾಧನೆ ನಿರೀಕ್ಷಿಸುವುದಾದರೆ, ಅವರಿಗೆ ಉತ್ತಮ ಕೆಲಸದ ವಾತಾವರಣವೂ ದೊರಕಬೇಕು.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಬಾಹ್ಯಾಕಾಶ ವಲಯವು ಈ ವಲಸೆಗೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಖಾಸಗಿ ಸ್ಟಾರ್ಟಪ್‌ಗಳು ಮತ್ತು ಏರೋಸ್ಪೇಸ್ ಕಂಪನಿಗಳು ಸರಕಾರದ ಕಟ್ಟುನಿಟ್ಟಾದ ವೇತನ ಶ್ರೇಣಿಗೆ ಹೋಲಿಸಿದರೆ ಹೆಚ್ಚಿನ ಸಂಬಳ, ಸ್ಟಾಕ್ ಆಯ್ಕೆಗಳು (ಷೇರುಗಳು) ಮತ್ತು ವೇಗದ ವೃತ್ತಿಜೀವನದ ಬೆಳವಣಿಗೆಯನ್ನು ನೀಡುತ್ತಿವೆ.

71 ಋ

ಭಾರತ ಸರಕಾರದ ಸುಧಾರಣೆಗಳು ಮತ್ತು ಬಾಹ್ಯಾಕಾಶ ನೀತಿ 2023ರ ಪ್ರೋತ್ಸಾಹದಿಂದಾಗಿ ದೇಶದಲ್ಲಿ ಖಾಸಗಿ ಬಾಹ್ಯಾಕಾಶ ಕ್ಷೇತ್ರವು (Space Tech) ಭಾರಿ ಪ್ರಮಾಣದಲ್ಲಿ ಬೆಳೆಯುತ್ತಿದೆ. ಪ್ರಸ್ತುತ ಭಾರತದಲ್ಲಿ ಹಲವಾರು ಬಾಹ್ಯಾಕಾಶ ಸ್ಟಾರ್ಟಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, 500 ಮಿಲಿಯನ್ ಡಾಲರ್‌ಗೂ ಅಧಿಕ ಹೂಡಿಕೆಯನ್ನು ಆಕರ್ಷಿಸಿವೆ. ಸರಕಾರವು ದೇಶದ ಬಾಹ್ಯಾಕಾಶ ಆರ್ಥಿಕತೆಯನ್ನು ಉತ್ತೇಜಿಸಲು ಸ್ಥಾಪಿಸಿರುವ 1000 ಕೋಟಿ ವೆಂಚರ್ ಕ್ಯಾಪಿಟಲ್ ನಿಧಿಗೆ ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಅಧಿಕೃತ ಅನುಮೋದನೆ ನೀಡಿದೆ. ಇದು ದೇಶದ ಬಾಹ್ಯಾಕಾಶ ತಂತ್ರಜ್ಞಾನ (Space Tech) ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಜ್ಜಾಗಿದೆ. ಬಾಹ್ಯಾ ಕಾಶ ಇಲಾಖೆಯ (DoS) ಅಡಿಯಲ್ಲಿ ಬರುವ ಇನ್-ಸ್ಪೇಸ್ (IN-SPAce) ಸಂಸ್ಥೆಯು ಈ ನಿಧಿಯನ್ನು ನಿರ್ವಹಿಸಲಿದೆ.

ಇಸ್ರೋದ ಅನುಭವಿ ವಿಜ್ಞಾನಿಗಳನ್ನು ಆಕರ್ಷಿಸುತ್ತಿರುವ ಮತ್ತು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯು ತ್ತಿರುವ ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್‌ಗಳು- ಸ್ಕೈರೂಟ್ ಏರೋ ಸ್ಪೇಸ್, ಪಿಕ್ಸೆಲ್, ಅಗ್ನಿಕುಲ್ ಕಾಸ್ಮೋಸ್, ಧ್ರುವ ಸ್ಪೇಸ್, ಬೆಲ್ಲಾಟ್ರಿಕ್ಸ್ ಏರೋಸ್ಪೇಸ್. ಈ ಕಂಪನಿಗಳ ಬಹುಪಾಲು ಉದ್ಯೋಗಿಗಳು ಇಸ್ರೋನಿಂದ ಹೊರಹೋದವರೆ ಎಂಬುದು ಗಮನಾರ್ಹ! ಜುಲೈ 18ರಂದು ತನ್ನ ಮೊದಲ ಆರ್ಬಿಟಲ್ ರಾಕೆಟ್ ಆದ ವಿಕ್ರಮ-1 ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ, ಸ್ಕೈರೂಟ್ ಏರೋಸ್ಪೇಸ್ ಕಂಪೆನಿ.

ಇನ್ನೊಂದು ದೊಡ್ಡ ಪ್ರಶ್ನೆ ಹೊಸ ಪ್ರತಿಭೆಯನ್ನು ಆಕರ್ಷಿಸುವುದು. ದೇಶದ ಅತ್ಯುತ್ತಮ ವಿದ್ಯಾರ್ಥಿ ಗಳು ಐಐಟಿ, ಐಐಎಸ್ಸಿ ಮತ್ತು ಇತರ ಪ್ರಮುಖ ಸಂಸ್ಥೆಗಳಿಂದ ಹೊರಬರುತ್ತಿದ್ದಾರೆ. ಆದರೆ ಅವರಲ್ಲಿ ಅನೇಕರು ಇಸ್ರೋಗಿಂತ ಖಾಸಗಿ ಕಂಪನಿಗಳು ಅಥವಾ ವಿದೇಶಿ ಸಂಶೋಧನಾ ಸಂಸ್ಥೆ ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಕಾರಣ ಕೇವಲ ವೇತನವಲ್ಲ. ಉತ್ತಮ ಸಂಶೋಧನಾ ಸೌಲಭ್ಯ ಗಳು, ವೇಗವಾದ ವೃತ್ತಿ ಬೆಳವಣಿಗೆ, ಜಾಗತಿಕ ಮಟ್ಟದ ಪ್ರಯೋಗಾಲಯಗಳು ಮತ್ತು ಹೊಸ ಆಲೋಚನೆಗಳನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ್ಯ- ಇವೆಲ್ಲವೂ ಅವರನ್ನು ಆಕರ್ಷಿಸುತ್ತಿವೆ. ರಾಷ್ಟ್ರದ ಅತ್ಯಂತ ಮಹತ್ವದ ವೈಜ್ಞಾನಿಕ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಭಾವಂತ ಯುವಕ ತನ್ನ ಭವಿಷ್ಯವನ್ನು ಖಾಸಗಿ ಕಂಪನಿಯಲ್ಲಿ ಹೆಚ್ಚು ಸುರಕ್ಷಿತವೆಂದು ಏಕೆ ಭಾವಿಸಬೇಕು? ಈ ಪ್ರಶ್ನೆಗೆ ಉತ್ತರ ಹುಡುಕದೆ ಹೋದರೆ, ಭವಿಷ್ಯದಲ್ಲಿ ಪ್ರತಿಭೆಯ ಕೊರತೆ ಇನ್ನಷ್ಟು ಗಂಭೀರವಾಗಬಹುದು.

ಚೀನಾ ಕೆಲವು ದಶಕಗಳ ಹಿಂದೆ ಇದೇ ಸಮಸ್ಯೆಯನ್ನು ಎದುರಿಸಿತ್ತು. ಅಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಅಮೆರಿಕ ಮತ್ತು ಯುರೋಪಿಗೆ ತೆರಳಿ ಅಲ್ಲಿಯೇ ನೆಲೆಸುತ್ತಿದ್ದರು. ನಂತರ ಚೀನಾ ಸರಕಾರ ಈ ಪ್ರತಿಭಾ ಪಲಾಯನ (brain drain) ತಡೆಯಲು ದಿಟ್ಟ ಕ್ರಮಗಳನ್ನು ಕೈಗೊಂಡಿತು. ಜಾಗತಿಕ ಮಟ್ಟದ ಸಂಶೋಧನಾ ಅನುದಾನ, ಸ್ಪರ್ಧಾತ್ಮಕ ವೇತನ, ವಿದೇಶದಿಂದ ಮರಳುವ ವಿeನಿಗಳಿಗೆ ವಿಶೇಷ ಯೋಜನೆಗಳು ಮತ್ತು ಸಂಶೋಧನೆಯ ಜೊತೆಗೆ ಸ್ಟಾರ್ಟಪ್ ಆರಂಭಿಸಲು ಅವಕಾಶ- ಇವೆಲ್ಲವು ಅನೇಕ ವಿಜ್ಞಾನಿಗಳನ್ನು ಮರಳಿ ಕರೆತಂದವು. ಇಂದು ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಕ್ವಾಂಟಂ ತಂತ್ರಜ್ಞಾನ ಮತ್ತು ಜೈವಿಕ ವಿಜ್ಞಾನಗಳಲ್ಲಿ ಚೀನಾ ವೇಗವಾಗಿ ಮುನ್ನಡೆ ಯುತ್ತಿರುವುದಕ್ಕೆ ಇದೂ ಒಂದು ಕಾರಣ.

ಭಾರತವೂ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳ ಪರಿಣಾಮ ಇನ್ನೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಪ್ರತಿಭೆಯನ್ನು ಉಳಿಸಿಕೊಳ್ಳಲು ಕೇವಲ ದೇಶಭಕ್ತಿ ಸಾಕಾಗುವುದಿಲ್ಲ. ಪ್ರತಿಭೆಗೆ ಗೌರವ, ಸ್ವಾತಂತ್ರ್ಯ, ಸಂಶೋಧನೆಗೆ ಅಗತ್ಯ ಸಂಪನ್ಮೂಲಗಳು ಮತ್ತು ಸ್ಪರ್ಧಾತ್ಮಕ ಅವಕಾಶಗಳು ಕೂಡ ಅಗತ್ಯ. ಇಸ್ರೋ ತನ್ನ ಮುಂದಿನ ಹಂತದ ಬೆಳವಣಿಗೆಯನ್ನು ಮರು ಪರಿಶೀಲಿಸುವ ಸಮಯ ಬಂದಿದೆ. ಉತ್ಪಾದನೆ, ಉಪಗ್ರಹ ನಿರ್ಮಾಣ ಮತ್ತು ಉಡಾವಣೆಗಳಷ್ಟೇ ಅಲ್ಲ, ಮೂಲಭೂತ ಸಂಶೋಧನೆಗೂ ಹೆಚ್ಚಿನ ಆದ್ಯತೆ ನೀಡಬೇಕು.

ಯುವ ವಿಜ್ಞಾನಿಗಳಿಗೆ ಹೊಸ ಆಲೋಚನೆಗಳನ್ನು ಪರೀಕ್ಷಿಸುವ ಅವಕಾಶ, ವಿಶ್ವವಿದ್ಯಾಲಯ ಗಳೊಂದಿಗೆ ಹೆಚ್ಚು ಸಹಯೋಗ, ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗೆ ಸಂಯುಕ್ತ ಯೋಜನೆ ಗಳು ಹಾಗೂ ಆಡಳಿತಾತ್ಮಕ ಸರಳೀಕರಣ-ಇವು ಸಂಸ್ಥೆಯನ್ನು ಇನ್ನಷ್ಟು ಆಕರ್ಷಕವಾಗಿಸ ಬಹುದು.

ವೇತನದ ಪ್ರಶ್ನೆಯನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ರಾಷ್ಟ್ರಸೇವೆಯ ಹೆಸರಿನಲ್ಲಿ ಪ್ರತಿಭೆಯಿಂದ ಎಲ್ಲವನ್ನೂ ನಿರೀಕ್ಷಿಸಿ, ಪ್ರತಿಫಲದ ವಿಷಯದಲ್ಲಿ ಹಿಂಜರಿದರೆ ಅದು ದೀರ್ಘಕಾಲದ ಪರಿಹಾರ ವಾಗುವುದಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ ಭಾರತೀಯ ವಿಜ್ಞಾನಿಗಳಿಗೆ ಅಪಾರ ಬೇಡಿಕೆಯಿದೆ. ಅವರಿಗೆ ಉತ್ತಮ ಅವಕಾಶಗಳು ಎಲ್ಲಿದ್ದರೂ ಅವರು ಅಲ್ಲಿಗೆ ಹೋಗುವುದು ಸಹಜ. ಆದ್ದರಿಂದ ಪ್ರತಿಭೆಯನ್ನು ಉಳಿಸಿಕೊಳ್ಳುವ ನೀತಿಗಳು ವಾಸ್ತವಿಕವಾಗಿರಬೇಕು.

ಇಸ್ರೋದ ಇತಿಹಾಸವೇ ನಮಗೆ ಒಂದು ಪಾಠ ಕಲಿಸುತ್ತದೆ. ವಿಕ್ರಂ ಸಾರಾಭಾಯಿ, ಸತೀಶ್ ಧವನ್, ಯು.ಆರ್. ರಾವ್, ಕಸ್ತೂರಿರಂಗನ್, ಕೆ.ಶಿವನ್, ಎಸ್.ಸೋಮನಾಥ್ ಅವರಂತಹ ನಾಯಕರು ಸಂಸ್ಥೆಯನ್ನು ಕಟ್ಟಿದ್ದು ಕಟ್ಟಡಗಳಿಂದಲ್ಲ; ಪ್ರತಿಭಾವಂತ ವಿಜ್ಞಾನಿಗಳ ತಂಡವನ್ನು ಬೆಳೆಸುವ ಮೂಲಕ. ಮುಂದಿನ 25 ವರ್ಷಗಳಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಾಶಕ್ತಿಯಾಗ ಬೇಕಾದರೆ, ಹೊಸ ರಾಕೆಟ್‌ಗಗಿಂತ ಮೊದಲು ಹೊಸ ತಲೆಮಾರಿನ ವಿಜ್ಞಾನಿಗಳನ್ನು ಬೆಳೆಸಬೇಕು.

120 ಮಂದಿ ಹೊರಹೋದರು ಎಂಬುದು ಒಂದು ಅಂಕಿ-ಅಂಶ ಮಾತ್ರ. ಆದರೆ ಅದರ ಹಿಂದೆ ಇರುವ ಸಂದೇಶವನ್ನು ಗಂಭೀರವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ರಾಜೀನಾಮೆ ಅಂಗೀಕರಿ ಸುವ ಪ್ರಕ್ರಿಯೆ ಯಲ್ಲಿ ಬದಲಾವಣೆ ತರುವುದು ಒಂದು ಆಡಳಿತಾತ್ಮಕ ಕ್ರಮವಾಗಿರಬಹುದು. ಆದರೆ ಪ್ರತಿಭೆಯನ್ನು ಉಳಿಸಿಕೊಳ್ಳುವ ನಿಜವಾದ ಪರಿಹಾರ ಎಂದರೆ ಉತ್ತಮ ಸಂಶೋಧನಾ ವಾತಾ ವರಣ, ಸ್ಪರ್ಧಾತ್ಮಕ ವೇತನ, ಕೆಲಸ-ಜೀವನ ಸಮತೋಲನ ಮತ್ತು ವಿಜ್ಞಾನಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದಾಗಿದೆ. ಇಸ್ರೋದ ನಿಜವಾದ ಬಂಡವಾಳ ಅದರ ರಾಕೆಟ್‌ಗಳಲ್ಲ; ಅದರ ವಿಜ್ಞಾನಿಗಳು. ಆ ಬಂಡವಾಳವನ್ನು ಉಳಿಸಿಕೊಳ್ಳುವುದು ಇಂದಿನ ಭಾರತದ ಅತ್ಯಂತ ಮಹತ್ವದ ರಾಷ್ಟ್ರೀಯ ಆದ್ಯತೆಯಾಗಬೇಕು.

ಇಲ್ಲಿ ಇನ್ನೊಂದು ಇತಿಹಾಸದ ಪಾಠವನ್ನು ನೆನಪಿಸಿಕೊಳ್ಳಬೇಕು. ಒಂದು ಕಾಲದಲ್ಲಿ ಭಾರತದ ಹೆಮ್ಮೆಯ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದ ಎಚ್‌ಎಂಟಿ (HMT) ಕೈಗಡಿಯಾರ ಮಾರುಕಟ್ಟೆ ಯಲ್ಲಿ ಅಗ್ರಸ್ಥಾನ ದಲ್ಲಿತ್ತು. ಆದರೆ ಕಾಲ ಬದಲಾದಂತೆ ತಂತ್ರeನ, ಮಾರುಕಟ್ಟೆ ಮತ್ತು ಉದ್ಯೋಗಿ ಗಳ ನಿರೀಕ್ಷೆಗಳೂ ಬದಲಾದವು. ಆ ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿ ಕೊಳ್ಳುವಲ್ಲಿ ಎಚ್‌ಎಂಟಿ ವಿಫಲವಾಯಿತು. ಪರಿಣಾಮವಾಗಿ ಅದರ ಅನೇಕ ಅನುಭವಿ ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಟೈಟನ್ ಸೇರಿದಂತೆ ಖಾಸಗಿ ಕಂಪನಿಗಳತ್ತ ವಲಸೆ ಹೋದರು.

ಪ್ರತಿಭೆಯ ನಿರಂತರ ನಷ್ಟ ಮತ್ತು ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗದೆ ಎಚ್‌ಎಂಟಿ ತನ್ನ ವೈಭವವನ್ನು ಕಳೆದುಕೊಂಡಿತು ಮತ್ತು ಮಾರುಕಟ್ಟೆಯಿಂದ ಮಾಯವಾಯಿತು. ಇಸ್ರೋ ಮತ್ತು ಎಚ್‌ಎಂಟಿಯ ಕಾರ್ಯಕ್ಷೇತ್ರಗಳು ಸಂಪೂರ್ಣ ಭಿನ್ನವಾಗಿದ್ದರೂ, ಪ್ರತಿಭೆಯನ್ನು ಕಳೆದುಕೊಳ್ಳುವ ಅಪಾಯವನ್ನು ನಿರ್ಲಕ್ಷಿಸಿದರೆ ಯಾವುದೇ ಸಂಸ್ಥೆಯೂ ದುರ್ಬಲವಾಗಬಹುದು ಎಂಬ ಪಾಠ ಮಾತ್ರ ಎಲ್ಲ ಸಂಸ್ಥೆಗಳಿಗೂ ಅನ್ವಯಿಸುತ್ತದೆ.

ಆದ್ದರಿಂದ ಇಸ್ರೋದ ವಿಜ್ಞಾನಿಗಳು ಕೇವಲ ಹೆಚ್ಚಿನ ವೇತನಕ್ಕಾಗಿ ಖಾಸಗಿ ಬಾಹ್ಯಾಕಾಶ ಸಂಸ್ಥೆ ಗಳತ್ತ ತೆರಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅದೇ ಸಮಯದಲ್ಲಿ, ಇಸ್ರೋ ಕೂಡ ತನ್ನ ಪ್ರತಿಭಾವಂತ ವಿeನಿಗಳು ಹೊರಹೋಗದಂತೆ ಅವರಿಗೆ ಉತ್ತಮ ಸಂಶೋಧನಾ ಸ್ವಾತಂತ್ರ್ಯ, ಸ್ಪರ್ಧಾ ತ್ಮಕ ವೇತನ, ವೃತ್ತಿ ಬೆಳವಣಿಗೆ ಮತ್ತು ಗೌರವಯುತ ಕೆಲಸದ ವಾತಾವರಣವನ್ನು ಕಲ್ಪಿಸಬೇಕು. ಇಸ್ರೋ ಭಾರತದ ವೈಜ್ಞಾನಿಕ ಆತ್ಮವಿಶ್ವಾಸದ ಸಂಕೇತ. ಎಚ್‌ಎಂಟಿಯ ಅನುಭವ ಇತಿಹಾಸದ ಪಾಠವಾಗಿರಬೇಕು; ಇಸ್ರೋದ ಭವಿಷ್ಯವಾಗಬಾರದು.