Raghava Sharma Nidle Column: ಕಾಲ ಮಿಂಚಿಲ್ಲ, ಆತ್ಮಾವಲೋಕನಕ್ಕಿದು ಸಕಾಲ!
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಮತ್ತು 21 ವಿದ್ಯಾರ್ಥಿಗಳ ಆತ್ಮಹತ್ಯೆಗೆ ನ್ಯಾಯ ಕೇಳುತ್ತಾ ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತ ಆರಂಭಿಕ ದಿನಗಳಲ್ಲಿ ಕೇಂದ್ರ ಸರಕಾರ ಆ ಧರಣಿಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಲಡಾಖ್‌ನ ಸೋನಂ ವಾಂಗ್ಚುಕ್ ಆಗಮಿಸಿ ಆಮರಣಾಂತ ಉಪವಾಸ ಕುಳಿತು, 21 ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾದ ಬಳಿಕ ಹಾಗೂ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗು ತ್ತಿದ್ದಂತೆಯೇ ಜಂತರ್ ಮಂತರ್ ಹೋರಾಟ ಹೊಸ ತಿರುವು ಪಡೆದುಕೊಂಡಿತು.
-
ದೆಹಲಿಯ ಜಂತರ್ ಮಂತರ್ ಈಗ ಶಾಂತವಾಗಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದರಿಂದ ಪ್ರತಿಭಟನಾ ನಿರತ ಯುವ ವರ್ಗ ಜಂತರ್ ಮಂತರ್‌ನಿಂದ ಜಾಗ ಖಾಲಿ ಮಾಡಿದೆ. ಪ್ರಧಾನ್ ರಾಜೀನಾಮೆ ಪಡೆಯಲು ಯಶಸ್ವಿಯಾದೆವು ಎಂದು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಯುವಕರು ಮತ್ತು ಕೆಲವೊಂದಿಷ್ಟು ಬೆಂಬಲಿಗರು ಫೈವ್ ಸ್ಟಾರ್ ಹೊಟೇಲ್ ನಲ್ಲೂ ಗ್ಲಾಸ್ ಏರಿಸಿ ಕುಣಿದಾಡಿರುವುದನ್ನೂ ನಾವೀಗ ನೋಡಿದ್ದೇವೆ.
ಬಹುಶಃ ಜೆನ್-ಝೀ ಇರುವುದೇ ಹೀಗೆ ಅನಿಸುತ್ತದೆ. ಏತನ್ಮಧ್ಯೆ, ತನಗೆ ಟೈಫಾಯ್ಡ್ ಇದೆ ಎಂದು ಪ್ರಧಾನ್ ರಾಜೀನಾಮೆಯ ಮುನ್ನಾಾದಿನ ಹೇಳಿಕೊಂಡಿದ್ದ ಸಿಜೆಪಿ ಅಭಿಜಿತ್ ದೀಪ್ಕೆ ಕೂಡ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಬಹುಶಃ ಸಚಿವರ ರಾಜೀನಾಮೆ ಸುದ್ದಿ ಅವರನ್ನು ಟೈಫಾಯ್ಡ್ʼ ನಿಂದ ಗುಣಮುಖರನ್ನಾಗಿಸಿರಬಹುದು. ಇರಲಿ, ಸದ್ಯಕ್ಕೆ ಎಲ್ಲವೂ ಸುಖಾಂತ್ಯವಾಯಿತು ಎನ್ನುವುದಷ್ಟೇ ಸಮಾಧಾನ.
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಮತ್ತು 21 ವಿದ್ಯಾರ್ಥಿಗಳ ಆತ್ಮಹತ್ಯೆಗೆ ನ್ಯಾಯ ಕೇಳುತ್ತಾ ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತ ಆರಂಭಿಕ ದಿನಗಳಲ್ಲಿ ಕೇಂದ್ರ ಸರಕಾರ ಆ ಧರಣಿಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಲಡಾಖ್‌ನ ಸೋನಂ ವಾಂಗ್ಚುಕ್ ಆಗಮಿಸಿ ಆಮರಣಾಂತ ಉಪವಾಸ ಕುಳಿತು, 21 ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾದ ಬಳಿಕ ಹಾಗೂ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗು ತ್ತಿದ್ದಂತೆಯೇ ಜಂತರ್ ಮಂತರ್ ಹೋರಾಟ ಹೊಸ ತಿರುವು ಪಡೆದುಕೊಂಡಿತು.
ಇದನ್ನೂ ಓದಿ: Raghava Sharma Nidle Column: ಅಡಿಕೆ ಕ್ಷೇತ್ರಕ್ಕೆ ವರದಾನವಾಗುವುದೇ ಚೀನಾ ಸಂಶೋಧನೆ?
ಸಂಸತ್ತಿನ ಮುತ್ತಿಗೆ ಹಾಕುವ ಯುವಕರ ಯತ್ನವನ್ನು ಪೊಲೀಸರು ಹಾಗೂ ರಕ್ಷಣಾ ಪಡೆಗಳು ತಡೆದದ್ದರಿಂದ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿ, ಅದು ಹೋರಾಟಗಾರರ ಕೆಚ್ಚನ್ನು ಹೆಚ್ಚಿಸಿತು. ವಿಪಕ್ಷಗಳೂ ಧರಣಿ ಕುಳಿತ ಯುವಕರಿಗೆ ಕೈಜೋಡಿಸಿದ್ದರಿಂದ ಕೇಂದ್ರ ಸರಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿತು. ಹಾಗಂತ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯುವುದು ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ ಲೆಕ್ಕಾಚಾರದಲ್ಲಿರಲಿಲ್ಲ. ಆದರೆ, ಯಾವಾಗ ಯುವಕರ ಪ್ರತಿಭಟನೆ ತಮ್ಮ ಹಾಗೂ ಸರಕಾರದ ವರ್ಚಸ್ಸಿಗೆ ತೀವ್ರ ಹಾನಿ ಮಾಡುತ್ತಿದೆ ಎಂಬುದು ಅರಿವಿಗೆ ಬಂತೋ ಆಗ ಪ್ರಧಾನಿ ಮೋದಿ ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆಗೆ ಸಮ್ಮತಿಸಿದರು. ಪ್ರಧಾನ್ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದರೋ ಅಥವಾ ರಾಜೀನಾಮೆ ಪಡೆದುಕೊಳ್ಳಲಾಯಿತೋ ಮುಖ್ಯವಲ್ಲ. ಯುವಕರ ಆಕ್ರೋಶಕ್ಕೆ ಸರಕಾರ ತಲೆಬಾಗಿತು ಎನ್ನುವುದು ಇಲ್ಲಿ ಮುಖ್ಯ.
ಯಾವುದೇ ಸರಕಾರವಿರಲಿ, ಸಂವಾದಕ್ಕೆ ಆಸ್ಪದ ನೀಡಬೇಕು. ಬಾಹ್ಯ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತದೋ ಇಲ್ಲವೋ..ಆದರೆ, ಅಭಿಪ್ರಾಯ ಕೇಳುತ್ತದೆ ಎಂಬ ವಾತಾವರಣ ಇರಬೇಕು. ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕಪಾಲ್ ವಿಧೇಯಕ ಕ್ಕಾಗಿ ಇದೇ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆದಿತ್ತು.
ಹೋರಾಟಕ್ಕೆ ಮಣಿದಿದ್ದ ಯುಪಿಎ ಸರಕಾರ, ಕೇಂದ್ರ ಸರಕಾರದ ಪ್ರತಿನಿಧಿಗಳು ಮತ್ತು ಲೋಕಪಾಲ್ ಹೋರಾಟಗಾರ ರನ್ನೊಳಗೊಂಡ ಸಮಿತಿ ರಚನೆ ಮಾಡಿ, ಅವರ ಬೇಡಿಕೆಗಳ ಕುರಿತು ಹಲವು ಸುತ್ತಿನ ಮಾತುಕತೆ- ಸಂವಾದಗಳನ್ನು ನಡೆಸಿತ್ತು. ದೆಹಲಿಯ ನಾರ್ಥ್ ಬ್ಲಾಕ್‌ನಲ್ಲೇ ಈ ಸಭೆಗಳು ನಡೆಯುತ್ತಿದ್ದವು ಮತ್ತು ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಅವರೂ ಈ ಸಮಿತಿ ಸದಸ್ಯರಾಗಿದ್ದರು. ವಿಪಕ್ಷಗಳು ಹಾಗೂ ರಾಜಕೀಯ ಪಂಡಿತರು ಹೇಳುವ ಪ್ರಕಾರ, ಹಾಲಿ ಎನ್‌ಡಿಎ ಸರಕಾರ ಕಳೆದ 12 ವರ್ಷಗಳಲ್ಲಿ ಇಂತಹಾ ಸಂವಾದಗಳನ್ನು ನಡೆಸಿದ್ದು ಕಡಿಮೆ.
ರಾಜಕೀಯವಾಗಿ ವಿಪಕ್ಷಗಳ ಬೆನ್ನುಮೂಳೆ ಮುರಿಯುವುದೇ ಸರಕಾರದ ಆದ್ಯತೆಯಾಯಿತೇ ವಿನಃ ಚರ್ಚೆ-ಸಂವಾದಗಳಿಗೆ ಪ್ರಾಶಸ್ತ್ಯ ಸಿಗಲೇ ಇಲ್ಲ ಎನ್ನುವ ಗುರುತರ ಆರೋಪವನ್ನು ಈ ಸರಕಾರ ಎದುರಿಸುತ್ತಲೇ ಬಂತು. ಹಾಗಿದ್ದರೂ, ಜನಾದೇಶ ಎನ್‌ಡಿಎ ಪರ ಇದ್ದುದರಿಂದ ಈ ಆಕ್ಷೇಪಣೆಗಳಿಗೆ ಹೆಚ್ಚು ಮೌಲ್ಯವೂ ಸಿಗಲಿಲ್ಲ. ಆದರೆ, ಹಾಲಿ ಸಿಜೆಪಿ ಹೋರಾಟ ಸರಕಾರದ ವರ್ತನೆಯನ್ನು ತಕ್ಕಮಟ್ಟಿಗೆ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ.
ಜಂತರ್ ಮಂತರ್‌ನಲ್ಲಿ ಕಾಣಿಸಿಕೊಂಡ ಎಲ್ಲಾ ಯುವಕರು ಒಳ್ಳೆಯ ಉದ್ದೇಶವನ್ನೇ ಹೊಂದಿದ್ದರು ಎಂದು ನಾನು ಹೇಳಲಾರೆ. ಆದರೆ, ಕೆಲ ಯುವಕರಲ್ಲಿದ್ದ ಪ್ರಾಮಾಣಿಕ ಕಾಳಜಿ, ನೋವು, ಹತಾಶೆಗೆ ಸರಕಾರದ ಸ್ಪಂದನೆ ಅತ್ಯಗತ್ಯವಾಗಿ ಬೇಕಿತ್ತು. ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ಬಗ್ಗೆ ಮಕ್ಕಳು ಹಾಗೂ ಹೆತ್ತವರ ಜತೆ ಮಾತನಾಡಿದರೆ ಅವರ ನೋವು ಅರ್ಥವಾಗುತ್ತದೆ. ಕೊನೆಗೂ ಅದನ್ನು ಸರಕಾರ ಅರ್ಥ ಮಾಡಿಕೊಂಡು, ತಡವಾಗಿಯಾದರೂ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸಿರು ವುದು ಸ್ವಾಗತಾರ್ಹ ಬೆಳವಣಿಗೆ. ಪ್ರಜಾಪ್ರಭುತ್ವದ ಸೌಂದರ್ಯವಿರುವುದು ಕೂಡ ಇಂತಹಾ ನಡೆಗಳಲ್ಲಿಯೇ.
ಸರಕಾರಕ್ಕೆ ಮೊದಲೇ ಜ್ಞಾನೋದಯವಾಗಿ, ಯುವಕರೊಂದಿಗೆ ಮಾತನಾಡಿದ್ದರೆ ಬಹುಶಃ ಇಂಥದ್ದೊಂದು ದೊಡ್ಡ ಮುಜುಗರ ಎದುರಿಸುವ ಸನ್ನಿವೇಶವೇ ಸೃಷ್ಟಿಯಾಗುತ್ತಿರಲಿಲ್ಲವೇನೋ. ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆಯಾಗಿ ನಮ್ಮದೇ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಾಗ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎನ್ನುವುದೂ ಯುವಕರ ಆಕ್ರೋಶ ದುಪ್ಪಟ್ಟು ಮಾಡಿತ್ತು. ಆದರೆ, ಜಂತರ್ ಮಂತರ್ ಹೋರಾಟದಿಂದ ಕೇಂದ್ರದ ಮೇಲೆ ಒತ್ತಡ ಹೆಚ್ಚಾದ ಮೇಲಷ್ಟೇ ಅವರು ಸಾಮಾಜಿಕ ಮಾಧ್ಯಮದ ಮುಂದೆ ಬಂದು ಕಠಿಣ ಕಾನೂನಿನ ಪ್ರಸ್ತಾಪ ಮಾಡಿದರು. ಇವೆಲ್ಲದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ.
ಹಾಗೆ ನೋಡಿದರೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರದ ಬಗ್ಗೆ ವಿರೋಧವಿದ್ದದ್ದು ಸಿಜೆಪಿಗೆ ಮಾತ್ರವಲ್ಲ. ಬಿಜೆಪಿ ಬೆಂಬಲಿಸುತ್ತಿದ್ದ ಯುವ ಸಮೂಹ ಕೂಡ ಮೋದಿ ಸರಕಾರದ ಮೌನದ ಬಗ್ಗೆ ಕುದಿಯುತ್ತಲೇ ಇತ್ತು. ಕೆಲ ತಿಂಗಳ ಹಿಂದೆ ಕೇಂದ್ರ ಶಿಕ್ಷಣ ಇಲಾಖೆ ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ-2026 ಎಂಬ ವಿವಾದಾತ್ಮಕ ನಿಯಮ ಜಾರಿ ಮಾಡಲು ಮುಂದಾಗಿತ್ತು.
ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳಿಗಷ್ಟೇ ಅನುಕೂಲ ಮಾಡುವ ಮತ್ತು ಸಾಮಾನ್ಯ ವರ್ಗದವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಈ ನಿಯಮವನ್ನು ವಿರೋಧಿಸಿ ಬಿಜೆಪಿ ಬೆಂಬಲಿಸುವ ಯುವಕರೇ ಬೀದಿಗಿಳಿದಿದ್ದರು. ಆದರೆ, ಅವರ ಆಕ್ರೋಶ ಹಾಗೂ ಆತಂಕದ ದನಿಯನ್ನು ಕೇಳುವ ಕೆಲಸವನ್ನು ಕೇಂದ್ರ ಸರಕಾರ ಮಾಡಲಿಲ್ಲ. ಕೊನೆಗೆ, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಿಂದ ಅಲ್ಲಿ ನಿಯಮಕ್ಕೆ ಮಧ್ಯಂತರ ತಡೆ ನೀಡಲಾಯಿತು.
ವಿವಾದಿತ ಯುಜಿಸಿ ನಿಯಮಕ್ಕೆ ಸಂಬಂಧಿಸಿ ಬೀದಿಗಿಳಿದಿದ್ದವರೊಂದಿಗೆ ಸಂವಾದ ನಡೆಸಬೇಕು ಎಂದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು (ಬಹುಪಾಲು ಮಂದಿ ಬಿಜೆಪಿ ಬೆಂಬಲಿಗರೇ ಆಗಿದ್ದರು) ನಿರೀಕ್ಷೆ ಮಾಡಿದ್ದರು. ಆದರೆ, ನಿರೀಕ್ಷೆ ಸುಳ್ಳಾಯ್ತು. ಇದೀಗ ನೀಟ್ ವಿಷಯದಲ್ಲಿ ಸೈದ್ಧಾಂತಿಕವಾಗಿ ಬಿಜೆಪಿಯನ್ನು ವಿರೋಧಿಸುವವರೇ ಹೆಚ್ಚು ತುಂಬಿಕೊಂಡಿದ್ದ ಸಿಜೆಪಿ ಮತ್ತು ಯುವ ಪ್ರತಿಭಟನಾ ಕಾರರ ಆಕ್ರೋಶ ಹಾಗೂ ಅವರ ಸೋಷಿಯಲ್ ಮೀಡಿಯಾ ಪ್ರಚಾರದ ಪ್ರಭಾವಕ್ಕೆ ತಲೆಬಾಗಿದ ಸರಕಾರ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದುಕೊಂಡಿದ್ದಲ್ಲದೆ, ಯುವಕರ ವಿರುದ್ಧ ದಾಖಲು ಮಾಡಲಾದ ಎಲ್ಲಾ ಕೇಸುಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಭರವಸೆ ನೀಡಿದೆ.
ನೀಟ್ ಪತ್ರಿಕೆ ಲೀಕ್‌ಗೆ ಧರ್ಮೇಂದ್ರ ಪ್ರಧಾನ್ರನ್ನು ಹೊಣೆ ಮಾಡಿ, ರಾಜೀನಾಮೆ ಪಡೆದುಕೊಳ್ಳಲು ಸರಕಾರ ಬಯಸಿರಲಿಲ್ಲ. ಕೊನೆಕ್ಷಣದವರೆಗೂ ಅವರನ್ನೇ ಖಾತೆಯಲ್ಲಿ ಮುಂದುವರಿಸಲು ಸರಕಾರ ಬಯಸಿತ್ತು. ಸಿಜೆಪಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು 2ನೇ ಸುತ್ತಿನ ಮಾತುಕತೆ ನಡೆಸಿದ್ದಾಗ, ಪ್ರಧಾನ್ ರಾಜೀನಾಮೆ ನೀಡುವುದಿಲ್ಲ. ಅವರನ್ನು ಬೇರೆ ಖಾತೆಗೆ ವರ್ಗಾಯಿಸು ತ್ತೇವೆ ಎಂದು ತಿಳಿಸಿದ್ದರು. ಈ ಪ್ರಸ್ತಾವವನ್ನು ತಿರಸ್ಕರಿಸಿದ್ದ ಸಿಜೆಪಿ ಪ್ರತಿನಿಧಿ ಗಳು, ರಾಜೀನಾಮೆ ನೀಡದಿದ್ದರೆ ನಾವು ಸುಮ್ಮನಿರುವವರಲ್ಲ ಎಂದು ಸ್ಪಷ್ಟಪಡಿಸಿದ್ದ ರಿಂದ ಪ್ರಧಾನ್ ರಾಜೀನಾಮೆ ಅನಿವಾರ್ಯವಾಯ್ತು.
2014ರ ಲೋಕಸಭೆ ಚುನಾವಣೆಯಿಂದ ಹಿಡಿದು ಪ್ರತಿ ಚುನಾವಣೆಯಲ್ಲೂ ಪಕ್ಷದ ಪ್ರಮುಖ ರಣನೀತಿಕಾರ ನಾಗಿ ಕೆಲಸ ಮಾಡಿರುವ ಧರ್ಮೇಂದ್ರ ಪ್ರಧಾನ್, ಹಲವು ರಾಜ್ಯ ವಿಧಾನಸಭೆ ಚುನಾವಣೆಗಳ ಗೆಲುವಿಗೆ ಶ್ರಮ ಹಾಕಿದವರು. ಕಳೆದ ವರ್ಷದ ಬಿಹಾರ ಚುನಾವಣೆ ಗೆಲುವಿನ ಹಿಂದೆ ಪ್ರಧಾನ್ ಕೊಡುಗೆ ಮಹತ್ವದ್ದು. 2021ರ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ನಾನು ಪ್ರಧಾನ್‌ರನ್ನು ಭೇಟಿ ಮಾಡಿ, ಸಂದರ್ಶನ ಮಾಡಿದ್ದೆ. ಆ ಚುನಾವಣೆ ಯುದ್ದಕ್ಕೂ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ, ಸುವೇಂದು ಅಧಿಕಾರಿ ಅವರ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದರು ಪ್ರಧಾನ್. ಬಹುಶಃ ಅವರಿಗೆ ತಲೆನೋವು ಉಂಟು ಮಾಡಿದ್ದರೆ ಅದು ಕರ್ನಾಟಕ ಬಿಜೆಪಿ ಉಸ್ತುವಾರಿ ಹುದ್ದೆ ಮಾತ್ರ ಇದ್ದಿರ ಬಹುದು. ಬಿಜೆಪಿ ಪಕ್ಷದ ನೋ-ನಾನ್ಸೆನ್ಸ್ ರಾಜಕಾರಣಿಯಾಗಿ, ಸಂಘಟಕನಾಗಿ, ಪ್ರಖರ ಕಾರ್ಯ ತಂತ್ರನಾಗಿದ್ದರೂ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಅವರ ಇಲಾಖೆಯ ವೈಫಲ್ಯಕ್ಕಾಗಿ ಬೆಲೆ ತೆತ್ತಿದ್ದಾರೆ.
ಇವೆಲ್ಲದರ ನಡುವೆ, ಜಂತರ್ ಮಂತರ್ ಪ್ರತಿಭಟನೆಗಳು ಈಗಿನ ಜೆನ್-ಝೀ ಹುಡುಗರ ಹುಚ್ಚು ಮುಖಗಳನ್ನೂ ಬಯಲು ಮಾಡಿದ್ದು ಸುಳ್ಳಲ್ಲ. ಪ್ರಧಾನಮಂತ್ರಿ ವಿರುದ್ಧ ಮಾಧ್ಯಮಗಳ ಮುಂದೆಯೇ ಸೊಂಟದ ಕೆಳಗಿನ ಪದ ಪ್ರಯೋಗಿಸಿ ಬೈಯುವುದು, ಭಾರತವನ್ನು ಮತ್ತೊಂದು ನೇಪಾಳ, ಶ್ರೀಲಂಕಾ ಮಾಡುತ್ತೇವೆ, ಸಂಸತ್ತನ್ನೂ ನಾಶ ಮಾಡುತ್ತೇವೆ ಎಂದು ಧಮಕಿ ಹಾಕುತ್ತಿದ್ದ ಯುವಕರು ನಿರಾತಂಕವಾಗಿ ಅಲ್ಲಲ್ಲಿ ಅಡ್ಡಾಡುತ್ತಿದ್ದರು. ಟುಕ್ಡೇ ಗ್ಯಾಂಗ್, ಎಡ ಬುದ್ಧಿಜೀವಿಗಳೂ ತೆರೆಯ ಹಿಂದಿನಿಂದ ಮಾರ್ಗದರ್ಶನ ಮಾಡುತ್ತಲೇ ಇದ್ದರು. ಬಿಜೆಪಿಯ ಸೈದ್ಧಾಂತಿಕ ವಿರೋಧಿ ಗಳು, ವಿಪಕ್ಷಗಳು ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಲೇ ಇದ್ದವು. ವಿದೇಶದಲ್ಲಿದ್ದ ಭಾರತ ವಿರೋಧಿ ಶಕ್ತಗಳೂ ಸಿಕ್ಕಿದ್ದೇ ಅವಕಾಶ ಎಂಬಂತೆ ಟೂಲ್‌ಕಿಟ್ ತಯಾರಿಸಿದ್ದರು.
ಸಿಜೆಪಿ ಹೋರಾಟ ನೀಟ್‌ಗೆ ಸೀಮಿತ ಎಂದು ಆ ಪಕ್ಷದ ಪ್ರತಿನಿಧಿಗಳು ಪ್ರತಿಪಾದಿಸುತ್ತಿದ್ದರೂ, ಸಂಸತ್ ಸುತ್ತಮುತ್ತ ಕಲ್ಲುತೂರಾಟ ಮಾಡಲು ಕಲ್ಲುಗಳನ್ನು ತಂದುಕೊಟ್ಟವರು ಯಾರು? ವಿದೇಶದಿಂದ ಆನ್‌ಲೈನ್ ಆರ್ಡರ್ ಮಾಡಿ ಆಹಾರ ಪೂರೈಕೆ ಮಾಡುತ್ತಿದ್ದವರು ಯಾರು? ಸಿಜೆಪಿಗೆ ಫಂಡಿಂಗ್ ಬಂದಿದ್ದು ಎಲ್ಲಿಂದ? ವಿದೇಶದಿಂದ ಫಂಡಿಂಗ್ ಆಗಿದೆಯೇ ಎಂಬೆಲ್ಲಾ ಸಂಶಯಗಳಿಗೆ ಬಹುಶಃ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು. ನಮ್ಮವರ ವಿರುದ್ಧ ಸುಳ್ಳು ಕೇಸುಗಳನ್ನು ಪೊಲೀಸರು ದಾಖಲು ಮಾಡಿದ್ದಾರೆ ಎಂದು ಸಿಜೆಪಿಯವರು ಏನೇ ಆರೋಪ ಮಾಡಿದರೂ, ಜು.20ರಂದು ಪೊಲೀಸರು ಮತ್ತು ರಕ್ಷಣಾ ಪಡೆ ಬಿಗಿ ಕ್ರಮ ಕೈಗೊಳ್ಳದೇ ಇದ್ದಿದ್ದರೆ ಬಹುಶಃ ಸಂಸತ್ ಸುತ್ತಮುತ್ತಲಿನ ಪರಿಸ್ಥಿತಿ ಊಹಿಸಲೂ ಸಾಧ್ಯವಾಗು ತ್ತಿರಲಿಲ್ಲವೇನೋ. ಹೀಗಾಗಿ, ಪ್ರತಿಭಟನೆಯ ಕಾವು ಕಡಿಮೆ ಮಾಡಲು ಕೇಂದ್ರ ಸರಕಾರ ವ್ಯವಸ್ಥಿತವಾಗಿ ಒಂದು ಹೆಜ್ಜೆಯನ್ನು ಹಿಂದಕ್ಕಿಟ್ಟು, ಯುವಕರಿಗೆ ಶರಣಾಗಿದೆ. ಪರಿಸ್ಥಿತಿ ಈಗ ಶಾಂತವಾಗಿದ್ದರೂ, ಭವಿಷ್ಯದಲ್ಲಿ ಇಂತಹಾ ಸವಾಲು ಗಳನ್ನು ಹೇಗೆ ಎದುರಿಸಬೇಕು ಎಂಬುದನ್ನರಿಯಲು ಕೇಂದ್ರಕ್ಕೆ ಇದೊಂದು ಪಾಠವಾಗಬಹುದು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಗಲಿಲ್ಲ. ಹೀಗಾಗಿ, ಮಿತ್ರಪಕ್ಷ ಗಳ ಮಾತುಗಳನ್ನು ಕೇಳಲೇಬೇಕಾಗುತ್ತದೆ. ಜಂತರ್ ಮಂತರ್ ಹೋರಾಟದ ವಿಷಯದಲ್ಲಿ ಮಿತ್ರ ಪಕ್ಷಗಳ ಒತ್ತಡವೂ ಕೇಂದ್ರದ ಪ್ರತಿಷ್ಠೆಯನ್ನು ತಗ್ಗಿಸಿರಬಹುದು. ವಾಸ್ತವದಲ್ಲಿ, ಆನೆ ನಡೆದದ್ದೇ ದಾರಿ ಎಂದುಕೊಳ್ಳದೆ, ಅಗತ್ಯ ಸಂದರ್ಭಗಳಲ್ಲಿ ತಲೆತಗ್ಗಿಸಿ ನಡೆಯುವುದನ್ನೇ ಪ್ರಜೆಗಳು ಬಯುಸು ತ್ತಾರೆ. ಜಂತರ್ ಮಂತರ್‌ನಲ್ಲಿ ಜೆನ್-ಝೀಗಳು ಹಚ್ಚಿದ ಕಿಚ್ಚು, ಸಂವಾದದ ರಾಜಕಾರಣ ಮತ್ತು ಆಡಳಿತಕ್ಕೆ ನಾಂದಿ ಹಾಡಿ, ರಾಜಕಾರಣದ ಹೊಸ ಬದಲಾವಣೆಗೆ ಮುನ್ನುಡಿ ಬರೆಯುವಂತಾಗಲಿ.