ಒಂದೊಳ್ಳೆ ಮಾತು
rgururaj628@gmail.com
ಮಹಾಭಾರತ ಯುದ್ಧದ ಹನ್ನೆರಡನೆಯ ದಿನ ಭೀಷ್ಮರು ಶರಶಯ್ಯೆಯಲ್ಲಿದ್ದರು. ಇನ್ನೇನು ಕೌರವರು ಸೋಲುವುದು ಖಚಿತ ಎಂದು ಗೊತ್ತಾಗಿ ದುರ್ಯೋಧನನಿಗೆ ಆತಂಕವಾಗಿ ಬಿಟ್ಟಿತ್ತು. ದ್ರೋಣರು ಐವರು ‘ಸಂಶಪ್ತಕ’ರನ್ನು ಕರೆಸಿ, ಮರುದಿನ ಅರ್ಜುನನಿಗೆ ಪಂಥಾಹ್ವಾನ ನೀಡುವಂತೆ ಸೂಚಿಸಿದರು.
‘ಯುದ್ಧವನ್ನು ಗೆಲ್ಲುತ್ತೇವೆ, ಇಲ್ಲವೇ ಸಾಯುತ್ತೇವೆ’ ಎಂದು ಶಪಥ ಮಾಡಿದವರನ್ನು ‘ಸಂಶಪ್ತಕರು’ ಎನ್ನುತ್ತಾರೆ. ಹದಿಮೂರನೆಯ ದಿನ ಈ ಸಂಶಪ್ತಕರು ಪಂಥಾಹ್ವಾನ ನೀಡುತ್ತಿದ್ದಂತೆ, ಕೃಷ್ಣನ ಸಾರಥ್ಯದಲ್ಲಿ ಅರ್ಜುನ ಅವರ ಬೆನ್ನಟ್ಟಿ ಹೊರಟ. ಅರ್ಜುನ ಅತ್ತ ಹೋಗುತ್ತಲೇ ಇತ್ತ ದ್ರೋಣರು ಕೌರವ ಸೇನೆಯಿಂದ ‘ಚಕ್ರವ್ಯೂಹ’ ಎಂಬ ರಣತಂತ್ರವನ್ನು ರಚಿಸಿದರು.
ಚಕ್ರಾಕಾರದಲ್ಲಿ ನಿಂತಿರುವ ಸೈನಿಕರನ್ನು ಭೇದಿಸಿ ಒಳಹೊಕ್ಕು ಯುದ್ಧ ಮಾಡುವುದು ಬಹು ಕಷ್ಟ. ಶ್ರೀಕೃಷ್ಣ, ಅವನ ಮಗ ಪ್ರದ್ಯುಮ್ನ ಹಾಗೂ ಅರ್ಜುನ- ಈ ಮೂವರಿಗೆ ಮಾತ್ರವೇ ಚಕ್ರವ್ಯೂಹವನ್ನು ಒಳಹೊಕ್ಕು ಹೊರಗೆ ಬರುವ ಬಗೆಯು ತಿಳಿದಿತ್ತು. ಅರ್ಜುನನ ಮಗ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಪ್ರವೇಶಿಸುವ ರೀತಿ ಮಾತ್ರವೇ ಗೊತ್ತಿತ್ತು.
ಇದನ್ನೂ ಓದಿ: Roopa Gururaj Column: ಕೆಟ್ಟ ನೆನಪುಗಳನ್ನು ಮರೆತಾಗಲೇ ಸಂಬಂಧ ಶಾಶ್ವತ
ಹಿಂದೊಮ್ಮೆ, ಕೃಷ್ಣನು ಚಕ್ರವ್ಯೂಹವನ್ನು ಭೇದಿಸುವ ಪರಿಯನ್ನು ತನ್ನ ತಂಗಿ ಸುಭದ್ರೆಗೆ ವಿವರಿಸು ತ್ತಿದ್ದಾಗ ಆಕೆಯ ಗರ್ಭದಲ್ಲಿದ್ದ ಭ್ರೂಣರೂಪಿ ಅಭಿಮನ್ಯು ಅದನ್ನು ಕೇಳಿಸಿಕೊಂಡಿದ್ದನಂತೆ. ಆದರೆ ಚಕ್ರವ್ಯೂಹದಿಂದ ಹೊರಬರುವ ಬಗೆಯು ಅಭಿಮನ್ಯುವಿಗೆ ತಿಳಿದಿರಲಿಲ್ಲ.
ಧರ್ಮರಾಯ, ಭೀಮ, ನಕುಲ, ಸಹದೇವ, ದ್ರುಪದ ರಾಜ, ಅವನ ಮಗ ದೃಷ್ಟದ್ಯಮ್ನ ಹೀಗೆ ಅನೇಕರು ಚಕ್ರವ್ಯೂಹವನ್ನು ಭೇದಿಸಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಆಗ ಯುವವೀರ ಅಭಿಮನ್ಯು ಮುಂದೆ ಬಂದ. ಹಿರಿಯರು ಬೇಡವೆಂದರೂ ಕೇಳದೆ, ‘ಕ್ಷಾತ್ರಧರ್ಮದ ಪರಿಪಾಲನೆ ನನ್ನ ಕರ್ತವ್ಯ’ ಎಂದು ಹೇಳಿ ಬಿಲ್ಲೇರಿಸಿ ಹೊರಟೇಬಿಟ್ಟ.
ಆನೆಗಳ ಹಿಂಡಿನ ಮೇಲೆ ಸಿಂಹ ಎರಗುವಂತೆ, ವೀರಾಧಿವೀರರ ಸೈನ್ಯದ ಮೇಲೆ ಅಭಿಮನ್ಯು ಎರಗಿದ. ಅವನ ಹಿಂದೆಯೇ ಚಕ್ರವ್ಯೂಹವನ್ನು ಪ್ರವೇಶಿಸಲು ಯತ್ನಿಸಿದ ಧರ್ಮರಾಯ, ಭೀಮ ಮುಂತಾದ ವರನ್ನು ಜಯದ್ರಥ ತಡೆದು ನಿಲ್ಲಿಸಿದ. ಅರ್ಜುನನನ್ನು ಹೊರತುಪಡಿಸಿ ಮಿಕ್ಕ ಪಾಂಡವರನ್ನು ಒಂದು ದಿನದ ಮಟ್ಟಿಗೆ ತಡೆದು ನಿಲ್ಲಿಸುವ ವರವನ್ನು ಆತ ಈಶ್ವರನಿಂದ ಪಡೆದುಕೊಂಡಿದ್ದ. ಹೀಗಾಗಿ ಅಭಿಮನ್ಯು ಒಬ್ಬನೇ ಶತ್ರುಗಳ ಚಕ್ರವ್ಯೂಹದ ಮಧ್ಯೆ ಉಳಿದುಕೊಂಡ.
ಅಭಿಮನ್ಯುವಿನ ಬಾಣಗಳ ಮಳೆಗೆ ಕೌರವ ಸೇನೆ ಕಂಗೆಟ್ಟು ಓಡಿತು. ಳಿಡುತ್ತ ಮೇಲೆರಗುವ ಮದಗಜಗಳೊಂದಿಗೆ ಮರಿಸಿಂಹವು ಹೋರಾಡುವಂತೆ ಅಭಿಮನ್ಯು ಕೌರವ ಸೈನಿಕರನ್ನು ಎದುರಿಸಿದ. ಆಗ ದ್ರೋಣರು, “ಮಹಾವೀರ ಅಭಿಮನ್ಯುವಿನ ಕವಚವನ್ನು ಭೇದಿಸುವುದು ಸಾಧ್ಯವಿಲ್ಲ. ಅವನು ಧನುಸ್ಸನ್ನು ಹಿಡಿದಾಗ ಮುಂದೆ ನಿಂತು ಯಾರೂ ಗೆಲ್ಲಲಾರರು, ಬಲ್ಲವರು ಅದನ್ನು ಕತ್ತರಿಸಿದರೆ ಮಾತ್ರ ಕೌರವರಿಗೆ ಗೆಲ್ಲುವ ಅವಕಾಶವಿದೆ. ಹಿಂದಿನಿಂದ ಅವನ ಧನುಸ್ಸನ್ನು ಕತ್ತರಿಸಿ, ರಥವನ್ನು ಮುರಿಯಬೇಕು" ಎಂದು ಸೂಚಿಸಿದರು.
ಈ ಕೆಲಸಕ್ಕೆ ಮುಂದೆ ಬಂದ ಕರ್ಣ, ಹಿಂದಿನಿಂದ ಗುರಿಯಿಟ್ಟು ಚೂಪಾದ ಬಾಣಗಳನ್ನು ಬಿಟ್ಟ. ಅವು ಅಭಿಮನ್ಯುವಿನ ಬಿಲ್ಲನ್ನು ಕತ್ತರಿಸಿದವು. ಇದೇ ವೇಳೆಗೆ, ಭೋಜ ಎಂಬುವವನು ಅಭಿಮನ್ಯು ವಿನ ಕುದುರೆಗಳನ್ನು ಕೊಂದಿದ್ದರಿಂದ, ಅವನ ರಥ ಚಲಿಸಲಾಗದಾಯಿತು. ರಥರಕ್ಷಕರನ್ನು ಕೃಪ ಹೊಡೆದುರುಳಿಸಿದ. ದ್ರೋಣ, ಕರ್ಣ, ಕೃಪ, ಅಶ್ವತ್ಥಾಮ, ಬೃಹಧ್ವಜ, ಕೃತವರ್ಮ- ಈ 6 ಮಂದಿ ಮಹಾವೀರರು ಅಭಿಮನ್ಯುವನ್ನು ಮತ್ತಿದರು.
ರಥ, ಧನುಸ್ಸು, ತನ್ನ ಕಡೆಯವರು ಹೀಗೆ ಯಾವ ನೆರವೂ ಇಲ್ಲದಿದ್ದರೂ ವೀರ ಅಭಿಮನ್ಯು ಬೆದರಲಿಲ್ಲ. ರಥದಲ್ಲಿದ್ದ ತನ್ನ ಗದೆಯನ್ನೆತ್ತಿಕೊಂಡು ಶತ್ರುಗಳ ಮೇಲೆ ಬಿದ್ದ. ನೆಲದ ಮೇಲೆ ನಿಂತು ಪ್ರಹಾರ ಮಾಡುತ್ತಿದ್ದ ಈ ವೀರನ ಏಟಿಗೆ ರಥದಲ್ಲಿದ್ದವರು ಹಿಮ್ಮೆಟ್ಟಿದರು, ದುಶ್ಯಾಸನನ ರಥ ಮತ್ತು ಕುದುರೆಗಳು ಜಜ್ಜಿ ಹೋದವು. ಆದರೆ, ಏಕಾಂಗಿಯಾಗಿ ಹೋರಾಡಿ ನಿತ್ರಾಣನಾಗಿದ್ದ ಅಭಿಮನ್ಯುವಿನ ಮೇಲೆ ದುಶ್ಯಾಸನನ ಮಗ ಗದಾಪ್ರಹಾರ ಮಾಡಿದ. ಅದರ ಘಾತವನ್ನು ತಡೆಯ ಲಾರದೆ ಅಭಿಮನ್ಯು ನೆಲಕ್ಕುರುಳಿದ.
ಯುದ್ಧದಲ್ಲಿ ಏಕಾಂಗಿಯಾಗಿದ್ದರೂ ಧೃತಿಗೆಡದೆ, ಸಂಪೂರ್ಣ ಆತ್ಮವಿಶ್ವಾಸ ಮತ್ತು ಬದ್ಧತೆಯಿಂದ ಹೋರಾಡಿದ ತರುಣ ಅಭಿಮನ್ಯು ಇಂದಿಗೂ ಶೌರ್ಯಕ್ಕೆ ಮಾದರಿಯಾಗಿದ್ದಾನೆ. ಆದರೆ, ಇಷ್ಟೆಲ್ಲಾ ಹೋರಾಡಿದರೂ ಕೌರವರು ಯುದ್ಧದಲ್ಲಿ ಗೆಲ್ಲಲಿಲ್ಲ. ಮೋಸ, ವಂಚನೆ, ಕೆಟ್ಟತನದಿಂದ ಕ್ಷಣಿಕ ಗೆಲುವು ಸಿಗಬಹುದು, ಅಷ್ಟೇ. ಜೀವನದಲ್ಲಿ ಗೆಲ್ಲಲು ಪ್ರಾಮಾಣಿಕತೆ, ಶಿಸ್ತು, ಬದ್ಧತೆ, ಎಲ್ಲಕ್ಕಿಂತ ಮುಖ್ಯವಾಗಿ ಧರ್ಮನಿಷ್ಠರಾಗಿರುವುದು ಬಹಳ ಮುಖ್ಯ.