ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಸರಕಾರದ ಕೆಲಸವನ್ನು ಸರಕಾರವೇ ಮಾಡಿದರೆ ಚೆನ್ನ

ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ಮಾಡಿ ಲಾಭಗಳಿಸುವ ಎಲ್ಲ ಸಂಸ್ಥೆಗಳೂ, ತಮ್ಮ ಲಾಭದ ಒಂದಿಷ್ಟು ಭಾಗವನ್ನು ಸಮಾಜಕ್ಕೇ ತಿರುಗಿ ನೀಡುವ ರೂಢಿಯಿಟ್ಟು ಕೊಂಡಿವೆ. ಹೀಗೆ, ಕಾರ್ಪೊರೇಟ್ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ (ಸಿಎಸ್‌ಆರ್) ನೀಡುವ ಹಣ, ಸರಕಾರಕ್ಕೆ ಕೊಡುವ ತೆರಿಗೆ ಮುಂತಾದ ಪಾವತಿಗಳ ಹೊರತಾಗಿರುತ್ತದೆ.

ವಿದ್ಯಮಾನ

ಬಯೋಕಾನ್ ಸಂಸ್ಥಾಪಕಿಯಾದ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನಲ್ಲಿನ ಕಳಪೆ ರಸ್ತೆಗಳು ಮತ್ತು ಕಸ ನಿರ್ವಹಣೆಯ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. “ನಾನು ಬಯೋಕಾನ್ ಪಾರ್ಕ್‌ಗೆ ಸಾಗರೋತ್ತರ ಸಂದರ್ಶಕರೊಬ್ಬರನ್ನು ಕರೆದುಕೊಂಡು ಹೋಗಿದ್ದೆ, ‘ಇಲ್ಲಿ ರಸ್ತೆಗಳು ಏಕೆ ತುಂಬಾ ಕೆಟ್ಟದಾಗಿವೆ ಮತ್ತು ಸುತ್ತಲೂ ಏಕೆ ತುಂಬಾ ಕಸವಿದೆ? ಇಲ್ಲಿನ ಸರಕಾರ ಹೂಡಿಕೆಗೆ ಬೆಂಬಲ ನೀಡಲು ಬಯಸುವುದಿಲ್ಲವೇ?’ ಎಂದು ನನ್ನ ಅತಿಥಿಗಳು ಕೇಳಿದರು.

ನಾನು ಈಗಷ್ಟೇ ಚೀನಾದಿಂದ ಬಂದಿದ್ದೇನೆ, ಔದ್ಯಮಿಕ ವಾತಾವರಣ ಭಾರತಕ್ಕೆ ಅನುಕೂಲ ವಾಗಿರುವಾಗ, ಸರಕಾರಗಳು ತಮ್ಮ ಕಾರ್ಯವನ್ನು ಸರಿಯಾಗಿ ಮಾಡಿ ಉದ್ದಿಮೆಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಲು ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಇನ್ಫೋಸಿಸ್‌ನ ಮಾಜಿ ಅಧಿಕಾರಿ, ಚಿಂತಕ ಮೋಹನ್ ದಾಸ್ ಪೈ ಅವರು ಕಿರಣ್ ಮಜುಂದಾರ್ ಶಾ ಅವರಿಗೆ ಬೆಂಬಲವಾಗಿ ನಿಂತರು. ಈಗ ಅಂತ ಅಲ್ಲ, ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಅವರು ಈ ತರಹದ ವಿಷಯದಲ್ಲಿ ಸರಕಾರದ ಕಿವಿ ಹಿಂಡುವ ಕೆಲಸವನ್ನು ಮೊದಲಿ ನಿಂದಲೂ ಮಾಡಿಕೊಂಡು ಬಂದಿದ್ದಾರೆ. ಆಗಿದ್ದು ಇಷ್ಟೇ, ಸರಕಾರದ ಮಂತ್ರಿ ಮಹೋದಯರೆಲ್ಲ ನಿದ್ದೆಯಿಂದ ಎದ್ದವರಂತೆ ಒಬ್ಬರಾದ ಮೇಲೆ ಒಬ್ಬರಂತೆ ಸಮರ್ಥನೆ ಗಿಳಿದರು.

ಇದನ್ನೂ ಓದಿ: V‌inayaka V Bhat Column: ಸಂಘದ ಶತಮಾನೋತ್ಸವಕ್ಕೆ ಮೆರುಗು ತಂದ ಪ್ರಿಯಾಂಕ್

ಕಾಂಗ್ರೆಸ್ ಆಡಳಿತದಲ್ಲಿ ನಗರದ ಮೂಲಸೌಕರ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕಾಗಿ, ‘ಅವರಿಗೆ ರಾಜ್ಯ ಸರಕಾರದ ವಿರುದ್ಧ ವೈಯಕ್ತಿಕ ಕಾರ್ಯಸೂಚಿ ಇದೆ’ ಎಂದು ಆರೋಪಿಸ ಲಾಯಿತು. ‘ಅದೆಲ್ಲ ಸುಳ್ಳು, ನಾವು ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರಕಾರಗಳಿದ್ದಾಗಲೂ ನಮ್ಮ ನಗರದಲ್ಲಿ ಹದಗೆಡುತ್ತಿರುವ ಮೂಲಸೌಕರ್ಯಗಳ ಕುರಿತು ಟೀಕಿಸಿದ್ದೇವೆ.

ನಮ್ಮ ಕಾರ್ಯಸೂಚಿ ಸ್ಪಷ್ಟವಾಗಿದೆ, ಬೆಂಗಳೂರನ್ನು ಸ್ವಚ್ಛಗೊಳಿಸುವುದು ಮತ್ತು ರಸ್ತೆಗಳನ್ನು ರಿಪೇರಿ ಮಾಡುವುದಷ್ಟೇ ನಮ್ಮ ಕಾಳಜಿಯಾಗಿದೆ’ ಎಂದು ಶಾ ಮತ್ತು ಮೋಹನ್ ದಾಸ್ ಪೈ ಪ್ರತಿಕ್ರಿಯಿಸಿದರು. “ಇಲ್ಲಿ ವ್ಯಾಪಾರ ಆರಂಭಿಸಿದವರು ಬೆಳೆದಿದ್ದಾರೆ. ದೊಡ್ಡದಾಗಿ ಬೆಳೆದ ನಂತರ, ತಾವು ಯಾವ ಹಂತದಿಂದ ಈಗ ಯಾವ ಹಂತಕ್ಕೆ ಬೆಳೆದಿದ್ದೇವೆ ಎಂಬುದನ್ನು ಮರೆತಿದ್ದಾರೆ. ನೀವು ಬೇರನ್ನು ಮರೆತರೆ ಹಣ್ಣು ಸಿಗುವುದಿಲ್ಲ, ಆದರೆ ಕೆಲವರು ಇದನ್ನೆಲ್ಲ ಮರೆತಿದ್ದಾರೆ ಮತ್ತು ಟ್ವೀಟ್ ಮಾಡುವ ಮೂಲಕ ಈಗ ಸರಕಾರವನ್ನು ಟೀಕಿಸುತ್ತಿದ್ದಾರೆ" ಎಂದು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ತಮ್ಮ ಪ್ರತಿಕ್ರಿಯೆ ನೀಡಿದರು.

“ನಾವು ಎಲ್ಲಾ ಟೀಕೆಗಳನ್ನು ಸ್ವಾಗತಿಸುತ್ತೇವೆ, ಟೀಕೆಗಳು ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚಿಸುತ್ತವೆ. ಆದರೆ ಕೆಲವರು ಅದನ್ನು ಅತಿಯಾಗಿ ಮಾಡುತ್ತಿದ್ದಾರೆ" ಎಂದು ಟೀಕಾಕಾರರನ್ನು ತಿವಿದರು. ಗೃಹ ಸಚಿವ ಜಿ.ಪರಮೇಶ್ವರ್ ಅವರು ನಗರದ ಮೂಲ ಸೌಕರ್ಯಗಳ ಕುರಿತಾದ ಉದ್ದಿಮೆದಾರರ ಹೇಳಿಕೆಗಳ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

“ಟೀಕಿಸಬೇಡಿ ಎಂದು ನಾವು ಹೇಳುತ್ತಿಲ್ಲ, ಏಕೆಂದರೆ ಅವರು ನಮ್ಮನ್ನು ಎಚ್ಚರಿಸುವ ಹಕ್ಕನ್ನು ಹೊಂದಿರುತ್ತಾರೆ, ಆದರೆ ಅದರ ಪರಿಣಾಮ ಏನು ಎಂದು ಅವರು ಯೋಚಿಸಬೇಕು. ಡಾ.ಕಿರಣ್ ಮಜುಂದಾರ್ ಶಾ ಅವರ ಹೇಳಿಕೆಯು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ಸುಕ ರಾಗಿರುವವರಿಗೆ ಯಾವ ಸಂದೇಶವನ್ನು ರವಾನಿಸುತ್ತದೆ ಎಂಬುದು ನಮ್ಮ ಕಳವಳವಾಗಿದೆ" ಎಂದು ಅವರು ಹೇಳಿದರು.

Kiran and Pai

ಸಚಿವ ಪ್ರಿಯಾಂಕ್ ಖರ್ಗೆ, “ಕಿರಣ್ ಶಾ ಅವರ ವಿದೇಶಿ ಅತಿಥಿಗಳು ಬೆಂಗಳೂರಿನ ಯಾವ ಭಾಗ ವನ್ನು ನೋಡಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೋ ತಿಳಿಯದು, ಬೆಂಗಳೂರಿನ ಸಂಪೂರ್ಣ ಚಿತ್ರವನ್ನು ಅವರು ನೋಡದಿರಬಹುದು; ಆದರೆ, ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ" ಎಂದು ತಮ್ಮ ದನಿ ಸೇರಿಸಿದರು.

ಕೆಲವು ನೆಟ್ಟಿಗರು ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಬಗ್ಗೆ ವಿವಾದ ಪ್ರಾರಂಭ ವಾದಾಗಿನಿಂದ ಅವರ ‘ಗುಜರಾತಿ’ ಮತ್ತು ‘ಕೊಂಕಣಿ’ ಮೂಲದ ಬಗ್ಗೆ ಪದೇ ಪದೆ ಉಲ್ಲೇಖಿಸಿದರು. “ನಾವಿಬ್ಬರೂ ಬೆಂಗಳೂರಿನಲ್ಲಿಯೇ ಜನಿಸಿ, ಇಲ್ಲಿಯೇ ಬೆಳೆದವರಾಗಿದ್ದೇವೆ. ನಮ್ಮ ಪ್ರೀತಿಯ ಬೆಂಗಳೂರು ನಗರವನ್ನು ಉಳಿಸಲು, ಬೆಳೆಸಲು ಸಾಕಷ್ಟು ಸಹಾಯ ಮಾಡಿದ್ದೇವೆ.

ನಮ್ಮನ್ನೇ ಹೊರಗಿನವರು ಎಂದು ಕರೆಯುವುದಾದರೆ, ನಿಜವಾದ ಬೆಂಗಳೂರಿಗರು ಯಾರು?" ಎಂದು ಮೋಹನ್ ದಾಸ್ ಪೈ ಕೇಳಿದರು. “ಇದು ಅನಾರೋಗ್ಯದ ಮನಸ್ಥಿತಿಯನ್ನು ತೋರಿಸುತ್ತವೆ. ಬೆಂಗಳೂರು ನಮ್ಮ ನಗರ, ಈ ನಗರದ ಅಭಿವೃದ್ಧಿಗಾಗಿ ನಾವು ಏನು ಮಾಡಿದ್ದೇವೆ ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ" ಎಂದರು.

ಕಿರಣ್ ಮಜುಂದಾರ್ ಶಾ ಅವರು ತಮ್ಮನ್ನು ‘ಗುಜರಾತಿ’ ಎಂದು ಕರೆದಿರುವ ಪೋಸ್ಟ್‌ ಗಳಿಗೆ ಪ್ರತಿಕ್ರಿಯಿಸುತ್ತಾ “ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ನಾನು ಕನ್ನಡಿಗಳಾಗಿದ್ದೇನೆ, ನಾನು ಈ ಮಣ್ಣಿನ ಹೆಮ್ಮೆಯ ಮಗಳು, ನಾನು ಬೆಂಗಳೂರಿನಲ್ಲಿಯೇ ಜನಿಸಿದ್ದು, ನನ್ನ ಊರಿನ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಬರೆದುಕೊಂಡಿದ್ದಾರೆ.

ಸಮಾಜದ ಹಲವಾರು ಪ್ರಮುಖ ವ್ಯಕ್ತಿಗಳು, ಉದ್ಯಮದ ಮುಂದಾಳುಗಳು ಹಾಗೂ ಮಾಧ್ಯಮಗಳು, ಕಿರಣ್ ಶಾ ಮತ್ತು ಮೋಹನ್ ದಾಸ್ ಪೈ ಇಬ್ಬರಿಗೂ ಬೆಂಬಲವಾಗಿ ನಿಂತರು. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ಸಿಗರು ಮತ್ತು ಪಕ್ಷದ ಬೆಂಬಲಿಗರು ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ಸುಧಾ ಮೂರ್ತಿ ಅವರ ಮೇಲೆ ದಾಳಿ ನಡೆಸುತ್ತಿದ್ದಾರೆ, ಬಯೋಕಾನ್ 16500 ಉದ್ಯೋಗಗಳನ್ನು ಸೃಷ್ಟಿಸಿದೆ. ಇನೋಸಿಸ್ 323000 ಉದ್ಯೋಗಗಳನ್ನು ಸೃಷ್ಟಿಸಿದೆ.

ಉದ್ಯೋಗ ಸೃಷ್ಟಿಕರ್ತರಿಗೆ ಸರಕಾರ ಕೃತಜ್ಞನಾಗಿರಬೇಕು, ಅವರನ್ನು ದ್ವೇಷಿಸಬೇಡಿ ಅಥವಾ ಅಪಹಾಸ್ಯ ಮಾಡಬೇಡಿ ಎಂದು ಅನೇಕ ಜನ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಮತ ಹಂಚಿಕೊಂಡರು. ಈ ಎಲ್ಲ ‘ಹಮಾರಿ-ತುಮಾರಿ’ಗಳ ನಡುವೆ, ‘ಅವಕಾಶ- ಅನುಮತಿ ಕೊಟ್ಟರೆ ನಾವೇ ರಸ್ತೆಗಳನ್ನು ನಿರ್ಮಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ’ ಎಂದು ಕಿರಣ್ ಮಜುಂದಾರ್ ಶಾ ಹೇಳಿಕೆ ನೀಡಿದರು.

“ಅವರು ಹೊಸ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಯಸಿ ನಮ್ಮನ್ನು ಬಂದು ಕೇಳಿದರೆ ನಾವು ಅವರಿಗೆ ರಸ್ತೆಗಳನ್ನು ಸೂಚಿಸುತ್ತೇವೆ, ಅವರಿಗೆ ಸರಕಾರದಿಂದ ಸಂಪೂರ್ಣ ಸಹಕಾರ ಸಿಗಲಿದೆ" ಎಂದು ಸರಕಾರದ ಪರವಾಗಿ ಹೇಳಲು ಶಿವಕುಮಾರ್ ತಡಮಾಡಲಿಲ್ಲ. ಈ ಕಥೆ ಕೇಳುವಾಗ ನನಗೆ ಕನ್ನಡದ ಎರಡು ನಾಣ್ಣುಡಿಗಳು ನೆನಪಿಗೆ ಬರುತ್ತವೆ.

ಮೊದಲನೆಯದು, ‘ಕಳೆದು ಹೋದ ಶಾನುಭೋಗರ ಎಮ್ಮೆ ಕಂಡರೂ ಹೇಳಬಾರದು’ ಎನ್ನುವುದು. ಮೊದಲು ಪ್ರತಿ ಗ್ರಾಮದಲ್ಲಿ ‘ಶಾನುಭೋಗ’ ಎನ್ನುವ ಸರಕಾರಿ ಹುದ್ದೆ ಇರುತ್ತಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಹುದ್ದೆ ಅದು. ಗ್ರಾಮ ದಲ್ಲಿ ಶಾನುಭೋಗರನ್ನು ಕಂಡರೆ ಎಲ್ಲರಿಗೂ ಗೌರವ. ಊರ ಜನರ ಎಲ್ಲ ಸ್ಥಿರಾಸ್ತಿಗಳ ವಿವರ ಅವರ ಕೈಯಲ್ಲಿರುತ್ತಿತ್ತು. ಆಸ್ತಿ ಕರವನ್ನೂ ಅವರೇ ಸಂಗ್ರಹಿಸುತ್ತಿದ್ದರು.

ಹಾಗಾಗಿ, ಶಾನುಭೋಗರ ಮಾತು ಅಂದ್ರೆ ಹಳ್ಳಿಯಲ್ಲಿ ಸುಗ್ರೀವಾಜ್ಞೆ ಇದ್ದ ಹಾಗೆ ಇರುತ್ತಿತ್ತು. ಊರ ಜನರಿಗೆ ತಹಶೀಲ್ದಾರನೂ, ಡಿ.ಸಿ.ಯೂ ಎಲ್ಲವೂ ಶಾನುಭೋಗರೇ ಆಗಿರುತ್ತಿದ್ದರು. ಸಾಮಾನ್ಯವಾಗಿ ಹಳ್ಳಿಯ ವಾಸಮಾಡುತ್ತಿದ್ದ ಶಾನುಭೋಗರ ಮನೆಯ ಎಮ್ಮೆ ಒಮ್ಮೆ ಕಾಣೆಯಾಯಿತು. ದೂರದ ಊರಿಂದ ಬಂದ ಒಬ್ಬ, “ನಿಮ್ಮ ಎಮ್ಮೆಯನ್ನು ಅ ನೋಡಿದ ಹಾಗಾಯಿತು" ಎಂದ; ಆತ ಆಷ್ಟು ಹೇಳಿದ್ದೇ ತಡ, “ಹಾಗಾದರೆ ನೀನೇ ಒಂಚೂರು ಹೋಗಿ ತಂದು ನಮ್ಮನೆ ಕೊಟ್ಟಿಗೆಯಲ್ಲಿ ಕಟ್ಟಿಬಿಡು" ಎನ್ನುವ ಆeಯಾಯಿತು ಶಾನುಭೋಗರಿಂದ.

ಅಲ್ಲಿಂದ ‘ಶಾನುಭೋಗರ ಎಮ್ಮೆ ನೋಡಿದ್ದೆ ಎಂದು ಹೇಳಿದ್ದೇ ತಪ್ಪಾಯಿತು’ ಎನ್ನುವ ನಾಣ್ಣುಡಿ ಬಂದಿರಬೇಕು. ಇದೇ ಧಾಟಿಯ ಇನ್ನೊಂದು ನಾಣ್ಣುಡಿಯಿದೆ- ‘ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಆಗು ಅಂದ’ ಅಂತ. ಏನೋ ಕಾಳಜಿಯಿಂದ ಆಕೆ ಹೇಳುವ ಮಾತು, “ವಯಸ್ಸಾಗ್ತಾ ಬಂತು, ನೀನು ಮದುವೆ ಯಾಕೆ ಮಾಡ್ಕೋಬಾರ್ದು?" ಅಂತ.

ಅದಕ್ಕೆ ಆತ ಹೇಳಿದ ಮಾತು, “ಹೌದಲ್ವ! ನೀನೇ ಯಾಕೆ ನನಗೆ ಹೆಂಡತಿಯಾಗಬಾರದು?" ಅಂತ. ಅಯ್ಯೋ ದೇವ್ರೇ! ಈತನಿಗೆ ನಾನು ಮದುವೆಯಾಗು ಎಂದು ಹೇಳಿದ್ದೇ ತಪ್ಪಾಯ್ತಲ್ಲ ಅನಿಸಿರಬೇಕು ಆಕೆಗೆ. ನೀವು ರಸ್ತೆ ಮಾಡುವುದಾದರೆ ನಮ್ಮ ಸಹಕಾರವಿದೆ ಎನ್ನುವ ಸರಕಾರದ ಮಾತು ಈ ನಾಣ್ಣುಡಿಗಳಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ.

ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ಮಾಡಿ ಲಾಭಗಳಿಸುವ ಎಲ್ಲ ಸಂಸ್ಥೆಗಳೂ, ತಮ್ಮ ಲಾಭದ ಒಂದಿಷ್ಟು ಭಾಗವನ್ನು ಸಮಾಜಕ್ಕೇ ತಿರುಗಿ ನೀಡುವ ರೂಢಿ ಯಿಟ್ಟುಕೊಂಡಿವೆ. ಹೀಗೆ, ಕಾರ್ಪೊರೇಟ್ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ (ಸಿಎಸ್‌ಆರ್) ನೀಡುವ ಹಣ, ಸರಕಾರಕ್ಕೆ ಕೊಡುವ ತೆರಿಗೆ ಮುಂತಾದ ಪಾವತಿಗಳ ಹೊರತಾಗಿರು ತ್ತದೆ.

ಈ ಕುರಿತು ಕಂಪನಿಗಳ ಕಾಯ್ದೆ 1956ಕ್ಕೆ ಬದಲಾವಣೆ ತಂದು, ಪ್ರತ್ಯೇಕವಾದ ನಿಯಮಗಳನ್ನೂ ರೂಪಿಸಲಾಗಿದೆ. ಹಾಗಾಗಿ, ಸಂಸ್ಥೆಗಳಿಗೆ ಈ ಕೊಡುಗೆಗಳು ಈಗ ಐಚ್ಛಿಕವಾಗಿ ಉಳಿದಿಲ್ಲ, ಕಡ್ಡಾಯವೇ ಆಗಿದೆ. ಅದರಂತೆ, ವರ್ಷಂಪ್ರತಿ ಇಂಥ ಸಂಸ್ಥೆಗಳಿಂದ ಸಾವಿರಾರು ಕೋಟಿಗಳಷ್ಟು ಬಹಳ ದೊಡ್ಡ ಪ್ರಮಾಣದ ಹಣ ಸಮಾಜ ಸುಧಾರಣೆಗಾಗಿ ಹರಿದುಬರುತ್ತದೆ.

1500 ಕಂಪನಿಗಳಿಂದ, ಸುಮಾರು ಒಂದೂವರೆ ಸಾವಿರ ಕೋಟಿ ರುಪಾಯಿಗಳಷ್ಟು ಹಣ ಪ್ರತಿವರ್ಷ ಕರ್ನಾಟಕದಲ್ಲಿ ವ್ಯಯಿಸಲ್ಪಡುತ್ತದೆ. ರಾಜ್ಯದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನೋಸಿಸ್, ಕರ್ನಾಟಕದಲ್ಲಿ ಪ್ರಮುಖವಾಗಿ ಸಿಎಸ್‌ಆರ್ ವೆಚ್ಚ ಮಾಡುವ ಸಂಸ್ಥೆಯಾಗಿದೆ. ಇದರ ಸಿಎಸ್‌ಆರ್ ಅಂಗ ಸಂಸ್ಥೆಯಾದ ಸುಧಾ ಮೂರ್ತಿಯವರ ನೇತೃತ್ವದ ‘ಇನೋಸಿಸ್ ಫೌಂಡೇಶನ್’, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಯ ಉಪಕ್ರಮಗಳ ಮೇಲೆ ಕೊಡುಗೆ ನೀಡುತ್ತದೆ.

ಮತ್ತೊಂದು ಪ್ರಮುಖ ಐಟಿ ದೈತ್ಯ ವಿಪ್ರೊ, ಕರ್ನಾಟಕದಲ್ಲಿ ಬಲವಾದ ಸಿಎಸ್‌ಆರ್ ಉಪಸ್ಥಿತಿ ಯನ್ನು ಹೊಂದಿದೆ ಹಾಗೂ ಶಿಕ್ಷಣಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ. ವಿಶೇಷವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅದು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಕಂಪನಿಯು ಸಮುದಾಯ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮಗಳನ್ನು ಹೊಂದಿರುವ, ರಾಜ್ಯದ ಅಗ್ರಗಣ್ಯ ಸಿಎಸ್‌ಆರ್ ಕೊಡುಗೆದಾರ ಎಂದು ಗುರುತಿಸಲ್ಪಟ್ಟಿದೆ. ‌

ಹೀಗೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಅನೇಕ ಕಂಪನಿಗಳು, ಸಮಾಜದ ವಿವಿಧ ಸ್ತರಗಳಲ್ಲಿ ಬಹಳ ದೀರ್ಘಕಾಲೀನ ಅಥವಾ ಶಾಶ್ವತ ಬದಲಾವಣೆಗಳನ್ನು ತರಲು ತಮ್ಮ ಹಣವನ್ನು ಸತತ ವಾಗಿ ವಿನಿಯೋಗಿಸುತ್ತಿವೆ. ದೇಶಾದ್ಯಂತ ಸೇವೆ ಸಲ್ಲಿಸುತ್ತಿರುವ ‘ಟಾಟಾ ಟ್ರಸ್ಟ್’ ಬಗ್ಗೆಯಂತೂ ಹಿಂದೆ ‘ದುಡಿಯಲೊಂದು ಕೈ, ದಾನಕ್ಕೊಂದು ಕೈ- ಟಾಟಾ ಮಾದರಿ’ ಎನ್ನುವ ಅಂಕಣ ಬರಹದಲ್ಲಿ ನಾನು ವಿಸ್ತೃತವಾಗಿ ಬರೆದಿದ್ದೆ.

ಕಾರ್ಪೊರೇಟ್ ಕಂಪನಿಗಳು ವ್ಯಯಿಸುವ ಸಾವಿರಾರು ಕೋಟಿ ಹಣ, ಹೆಚ್ಚಾಗಿ ಶಿಕ್ಷಣ, ಪರಿಸರ ಸಂರಕ್ಷಣೆ, ನೀರಿನ ಮೂಲಗಳ ಪುನರುತ್ಥಾನ, ವೈದ್ಯಕೀಯ ನೆರವು ಮುಂತಾದ ಕ್ಷೇತ್ರಗಳ ಕಡೆಗೆ ಹೋಗುತ್ತವೆ. ರಾಜ್ಯದಲ್ಲಿ ಬಿದ್ದು ಹೋಗಲಿದ್ದ ಅನೇಕ ಸರಕಾರಿ ಶಾಲೆಗಳನ್ನು ಈ ಸಂಸ್ಥೆಗಳು ಎದ್ದುನಿಲ್ಲಿಸಿವೆ.

ಶಾಲೆಗಳಲ್ಲಿ ಪಾಯಿಖಾನೆಗಳನ್ನು ನಿರ್ಮಿಸಲಾಗಿದೆ, ರಾಜ್ಯಾದ್ಯಂತ ನೂರಾರು ಕೆರೆಗಳಿಗೆ ಮರು ಜೀವ ನೀಡಲಾಗಿದೆ, ಗ್ರಾಮೀಣ ಭಾಗದ ಅನೇಕ ಆಸ್ಪತ್ರೆಗಳಿಗೆ ಕಾಯಕಲ್ಪ ಒದಗಿಸಲಾಗಿದೆ. ಹಳ್ಳಿಯ ಅನೇಕ ಶಾಲೆಗಳು ಕಂಪ್ಯೂಟರ್‌ಗಳನ್ನು ಕಾಣುವಂತಾಗಿದೆ.

ಇದೇ ರೀತಿ ಕಿರಣ್ ಶಾ ಅವರು ಮುನ್ನಡೆಸುತ್ತಿರುವ ಬಯೋಕಾನ್ ಸಂಸ್ಥೆಯವರೂ ಬೆಂಗಳೂರಿನ ಹಾಗೂ ಇತರ ಸ್ಥಳಗಳ ಅಭಿವೃದ್ಧಿಗೆ ಬಹಳ ದೊಡ್ಡ ಪ್ರಮಾಣದ ನೆರವನ್ನು ನೀಡುತ್ತಾ ಬಂದಿದ್ದಾರೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಆದರೆ ಅವರು, “ನಾನೇ ಕೆಲವು ರಸ್ತೆಗಳನ್ನು ನಿರ್ಮಾಣಮಾಡಿ ನಿರ್ವಹಿಸುತ್ತೇನೆ" ಎಂದಿರುವುದು ಯಾಕೋ ಸರಿಯೆನಿಸುತ್ತಿಲ್ಲ.

ಹೀಗೆ ರಸ್ತೆ ನಿರ್ಮಾಣ-ನಿರ್ವಹಣೆ, ನೀರಿನ ಪೂರೈಕೆ ಮುಂತಾದ, ಸರಕಾರ ಮಾಡಲೇಬೇಕಾದ ಕೆಲಸವನ್ನೂ ಖಾಸಗಿ ಕಂಪನಿಗಳು ಮಾಡಲು ಶುರುಮಾಡಿದರೆ, ಸರಕಾರ ನಡೆಸುವ ವರಿಗಿಂತ ಸಂತೋಷ ಪಡುವವರು ಯಾರಿರುತ್ತಾರೆ ಹೇಳಿ? ಹೀಗೆ ಎಲ್ಲವನ್ನೂ ಖಾಸಗಿ ಸಂಸ್ಥೆಗಳೇ ಮಾಡುತ್ತಾ ಸಾಗಿದರೆ, ನಾಳೆ ಸರಕಾರಿ ನೌಕರರಿಗೆ ಸಂಬಳ ನೀಡುವ ಕೆಲಸವನ್ನೂ ಸಿಎಸ್ ಆರ್ ಯೋಜನೆಯ ಅಡಿಯಲ್ಲಿ ಸರಕಾರಗಳು ತಂದರೂ ಆಶ್ಚರ್ಯಪಡಬೇಕಿಲ್ಲ.

ಅಷ್ಟೇ ಅಲ್ಲದೆ, ಕಾರ್ಪೊರೇಷನ್‌ಗಳು ಅಥವಾ ಸರಕಾರಗಳು ಮಾಡಬೇಕಾದ ಕೆಲಸಗಳಲ್ಲಿ ಖಾಸಗಿ ಕಂಪನಿಗಳು ತಮ್ಮ ಹಣ ವಿನಿಯೋಗಿಸಲು ಶುರುವಿಟ್ಟುಕೊಂಡರೆ, ತೆರಿಗೆಯಿಂದ ಬಂದ ಹಣವನ್ನು ಸರಕಾರ ಪುಕ್ಕಟೆ ಗ್ಯಾರಂಟಿಗಳಂಥ ಮತ ವ್ಯಾಪಾರದ ಯೋಜನೆಗಳಿಗೆ ಸುಲಭವಾಗಿ ವಿನಿಯೋಗಿಸಬಹುದಾದ ಸಾಧ್ಯತೆಯಿದೆ.

ಅಲ್ಲದೇ, ಬಯೋಕಾನ್ ಕಂಪನಿಯನ್ನು ಉದಾಹರಣೆಯಾಗಿಟ್ಟುಕೊಂಡು, ಈ ತರಹದ ಕೆಲಸ ವನ್ನು ನೀವೂ ಮಾಡಿ ಎಂದು ಇತರ ಸಂಸ್ಥೆಗಳ ಮೇಲೆ ಸರಕಾರ ಒತ್ತಡ ತರುವ ಸಾಧ್ಯತೆಯೂ ಇರುತ್ತದೆ. ಕಿರಣ್ ಶಾ ಅವರ ಸಂಸ್ಥೆಗಿರುವ ಹಣಕಾಸಿನ ಸುಸ್ಥಿತಿ ಉಳಿದ ಕಂಪನಿಗಳಿಗೂ ಇರಬೇಕಲ್ಲ.

ಹಾಗಾಗಿ, ನಿಮ್ಮ ಸಮಾಜ ಸೇವೆಯನ್ನು ನೀವು ಮುಂದುವರಿಸಿ, ಆದರೆ ಸರಕಾರದ ಕೆಲಸವನ್ನು ಸರಕಾರವೇ ಮಾಡಲು ಬಿಡಿ ಎನ್ನುವುದು ಕಿರಣ್ ಮುಜುಂದಾರ್ ಶಾ ಅವರಿಗೆ ನನ್ನ ವಿನಂತಿ. ಒಮ್ಮೆ ಸರಕಾರಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದಾಗ, ಎಂದಿನಂತೆ ನೀವೆಲ್ಲ ಸೇರಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮುಂದುವರಿಸಬಹುದಂತೆ. ಬದಲಿಗೆ, ಸರಕಾರದ ಕೆಲಸವನ್ನು ನಾವೇ ಮಾಡುತ್ತೇವೆ ಎನ್ನುವ ಹೊಸ ಪರಿಪಾಠಕ್ಕೆ ನಾಂದಿಹಾಡುವುದು ಬೇಡವೇನೋ ಎನ್ನುವುದು ನನ್ನ ಅನಿಸಿಕೆ.

ಹೀಗೆ ನನೆಗುದಿಗೆ ಬಿದ್ದಿರುವ ಸರಕಾರದ ಎಷ್ಟು ಕೆಲಸಗಳನ್ನು ಅಂತ ನೀವುಗಳು ಪೂರೈಸಲು ಸಾಧ್ಯ, ಅಲ್ವಾ? ಇನ್ನು ಸರಕಾರಕ್ಕೆ ಒಂದು ಮಾತು ಹೇಳಲೇಬೇಕು- ಈ ಎಲ್ಲ ದಿಗ್ಗಜ ವಾಣಿಜ್ಯ ಸಂಸ್ಥೆಗಳು, ದಶಕಗಳ ಹಿಂದೆಯೇ ಬೆಂಗಳೂರಿನಲ್ಲಿ ಹೂಡಿಕೆಮಾಡಿ ಬೆಂಗಳೂರಿನ ಹಣೆಬರಹವನ್ನೇ ದಲಿಸಿವೆ. ಬೆಂಗಳೂರಿಗೆ ಒಂದು ‘ಬ್ರ್ಯಾಂಡ್’ ಬರುವಂತೆ ಮಾಡಿವೆ.

ರಾಜ್ಯದಲ್ಲಿ ಲಕ್ಷಾಂತರ ನೇರ ಅಥವಾ ಪರೋಕ್ಷ ಉದ್ಯೋಗ ಸೃಷ್ಟಿ ಮಾಡಿವೆ, ರಾಜ್ಯದಲ್ಲಿ ಹೆಚ್ಚಿನ ಹೂಡಿಕೆಯಾಗುವಂತೆ ಇತರರನ್ನು ಉತ್ತೇಜಿಸುತ್ತಿವೆ. ಹಾಗಾಗಿ ಅವರನ್ನು ಎಲ್ಲರೂ ಗೌರವಿಸಬೇಕು, ಸರಕಾರಗಳು ಹೆಚ್ಚು ಗೌರವಿಸಬೇಕು. ಹೀಗೆ ಸಮಾಜದ ಅಭಿವೃದ್ಧಿಗೆ ದೊಡ್ಡಮಟ್ಟದಲ್ಲಿ ಕೊಡುಗೆ ನೀಡುತ್ತಿರುವ ಈ ಸಂಸ್ಥೆಗಳ ಸ್ಥಾಪಕರುಗಳು ಬೃಹಸ್ಪತಿಗಳಲ್ಲದಿರಬಹುದು; ಆದರೆ, ಸಂಪತ್ತನ್ನು ಸೃಜಿಸಿ ರಾಜ್ಯದ ಬೊಕ್ಕಸ ತುಂಬುತ್ತಿರುವ ಕುಬೇರಂತೂ ಹೌದು ಎನ್ನುವುದನ್ನು ಕೃತಜ್ಞತಾ ಪೂರ್ವಕವಾಗಿ ಸರಕಾರವು ಸ್ಮರಿಸಬೇಕು ಮತ್ತು ಇನ್ನೂ ಹೆಚ್ಚು ಕೊಡುಗೆ ನೀಡುವ ವಾತಾವರಣ ವನ್ನು ನಿರ್ಮಾಣ ಮಾಡುವುದು ರಾಜ್ಯಸರಕಾರದ ಕರ್ತವ್ಯವಾಗುತ್ತದೆ.

ವಿನಾಯಕ ವೆಂ ಭಟ್ಟ

View all posts by this author