ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದವು. ಈ ಅವಧಿಯಲ್ಲಿ ಕಾಂಗ್ರೆಸ್ಸಿಗರು ಇದೇ ಮೊದಲ ಬಾರಿಗೆ 13 ವರ್ಷದಿಂದ ಅಧಿಕಾರವಿಲ್ಲದೆ ವಿಲವಿಲ ಒದ್ದಾಡುತ್ತಿದ್ದಾರೆ. 1947ರಿಂದ 1977ರ ತನಕ ಮೂವತ್ತು ವರ್ಷಗಳವರೆಗೆ ಸತತವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿಗರಿಗೆ 1975ರ ತುರ್ತು ಪರಿಸ್ಥಿತಿ ಯು ಮುಳುವಾಗಿ, 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ಕಂಡರು.
ಅಧಿಕಾರಕ್ಕೆ ಬಂದ ಜನತಾ ಪಾರ್ಟಿಯ ಸರಕಾರವನ್ನು ಇಂದಿರಾ ಗಾಂಧಿಯವರು ಕೇವಲ 30 ತಿಂಗಳಲ್ಲಿ ಕೆಡವಿದರು. ಸೋಲುತ್ತಿದ್ದಂತೆ ‘ಎಲ್ಲ ಮುಗಿಯಿತು’ ಎಂದು ಅವರೆಂದೂ ಕುಗ್ಗಲೇ ಇಲ್ಲ; ಗೆಲ್ಲುವ ತಂತ್ರವನ್ನು ಕೈಗೊಂಡು 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರು. 1989ರಲ್ಲಿ ವಿ.ಪಿ.ಸಿಂಗ್ ಅವರು ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸರಕಾರವನ್ನು ರಚಿಸಿದರು. ಆದರೆ ಇದು 1977ರ ಜನತಾ ಪಕ್ಷದ ಸರಕಾರಕ್ಕಿಂತ ಅಧ್ವಾನವಾಗಿ ಎರಡೇ ವರ್ಷದಲ್ಲಿ ನೆಲಕಚ್ಚಿತು; ಸಿಂಗ್ ಅವರು ರಾಮ ರಥಯಾತ್ರಾ/ಅಯೋಧ್ಯಾ ಹೋರಾಟವನ್ನು ತುಳಿಯಲು ಮುಂದಾಗಿ ಬಹುಮತ ವನ್ನು ಕಳೆದುಕೊಂಡರು.
ರಾಜೀವ್ ಗಾಂಧಿಯವರು ಜನತಾದಳ ನಾಯಕರ ದೌರ್ಬಲ್ಯವನ್ನು ಬಳಸಿಕೊಂಡು, ಸರಕಾರವು ತನ್ನ ಭಾರಕ್ಕೆ ತಾನೇ ಕುಸಿಯುವ ಹಾಗೆ ಮಾಡಿದರು. 1991ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ರಾಜೀವ್ ಗಾಂಧಿಯವರು ಎಲ್‌ಟಿಟಿಇ ಆತ್ಮಾಹುತಿ ಬಾಂಬ್ ದಾಳಿಗೆ ಸಿಲುಕಿ ಹತರಾದಾಗ, ಅನಾರೋಗ್ಯದ ಕಾರಣ ರಾಜಕೀಯದಲ್ಲಿ ಸಕ್ರಿಯರಾಗಿರದಿದ್ದ ಪಿ.ವಿ.ನರಸಿಂಹರಾವ್ ಅವರನ್ನು ವಾಪಸ್ ಕರೆತಂದ ಕಾಂಗ್ರೆಸ್ ಪಕ್ಷವು 244 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತು.
1996ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 140 ಸ್ಥಾನಗಳನ್ನು ದಕ್ಕಿಸಿಕೊಂಡು ಸೋಲನ್ನು ಅನುಭವಿಸಿತು. ಬಿಜೆಪಿಯು ಮೊಟ್ಟ ಮೊದಲ ಬಾರಿಗೆ 160 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಯಿತು. ಯಾವ ಪಕ್ಷಕ್ಕೂ ಬಹುಮತವಿಲ್ಲದ ಕಾರಣ, ಜನತಾದಳ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಸೇರಿ ರಚಿಸಿಕೊಂಡಿದ್ದ ‘ಯುನೈಟೆಡ್ ಫ್ರಂಟ್’ ಒಕ್ಕೂಟಕ್ಕೆ ಕಾಂಗ್ರೆಸ್ ಪಕ್ಷವು ಬಾಹ್ಯ ಬೆಂಬಲ ನೀಡಿ, ದೇವೇಗೌಡರ ನೇತೃತ್ವದ ಸರಕಾರದ ರಚನೆಗೆ ಕಾರಣವಾಯಿತು.
ಇದನ್ನೂ ಓದಿ: Prakash Shesharaghavachar Column: ಯುಜಿಸಿ ಮಾಡಿರುವ ಎಡವಟ್ಟು
11 ತಿಂಗಳ ನಂತರ ಅವರನ್ನು ಕೆಳಗಿಳಿಸಿ ಐ.ಕೆ.ಗುಜ್ರಾಲರನ್ನು ಪ್ರಧಾನಿಯನ್ನಾಗಿಸಲಾಯಿತು, ಆದರೆ ಈ ಪ್ರಯೋಗ ವಿಫಲಗೊಂಡಿತು. 1998ರಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಸರಕಾರವನ್ನು ರಚಿಸಿತು. ರಾಜಕೀಯ ಬೇಡವೆಂದು 7 ವರ್ಷ ಕಾಲ ದೂರವಿದ್ದ ಸೋನಿಯಾ ಗಾಂಧಿಯವರು ಮರಳಿ ಬಂದು ಕಾಂಗ್ರೆಸ್ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.
ವಾಜಪೇಯಿ ಸರಕಾರವು ಅಲ್ಪಾಯುಷಿಯಾಗಿ ಒಂದು ವೋಟಿನಿಂದ ಒಂದೇ ವರ್ಷದಲ್ಲಿ ಪತನ ವಾಯಿತು. 1999 ರಲ್ಲಿ ಎನ್‌ಡಿಎ ಒಕ್ಕೂಟವು 303 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿತು. ಸೋನಿಯಾ ಗಾಂಧಿಯವರು ಮೊದಲ ಬಾರಿಗೆ ಪಾರ್ಲಿಮೆಂಟ್ ಪ್ರವೇಶಿಸಿ ವಿರೋಧ ಪಕ್ಷದ ನಾಯಕಿಯಾದರು.
2004ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟವು ಅಧಿಕಾರವನ್ನು ಕಳೆದುಕೊಂಡಿತು. ಯುಪಿಎ ಒಕ್ಕೂಟದ ಕೈಗೆ ಅಧಿಕಾರದ ಚುಕ್ಕಾಣಿ ಸಿಕ್ಕಾಗ, ವಿದೇಶಿ ಮೂಲದ ಮಹಿಳೆಯು ಪ್ರಧಾನಿ ಯಾಗುವುದಕ್ಕೆ ಇದ್ದ ಪ್ರಬಲ ವಿರೋಧವನ್ನು ಗಮನಿಸಿದ ಸೋನಿಯಾ, ರಾಜಕೀಯವಾಗಿ ದುರ್ಬಲ ರಾಗಿದ್ದ ಮನಮೋಹನ್ ಸಿಂಗ್ ರನ್ನು ಪ್ರಧಾನಿಯಾಗಿ ನೇಮಕ ಮಾಡಿದರು.
ಸೋನಿಯಾರ ಅಧಿಕೃತ ನಿವಾಸವು ಹತ್ತು ವರ್ಷಗಳ ಕಾಲ ಅಧಿಕಾರದ ಕೇಂದ್ರಬಿಂದುವಾಯಿತು. ರಾಹುಲ್ ಗಾಂಧಿಯವರು ತಮ್ಮ ಅಹಂನಿಂದಾಗಿ, ಸರಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿ ಸುವ ಆಡಳಿತಾನುಭವ ಪಡೆಯುವ ಸದವಕಾಶವನ್ನು ಕಳೆದುಕೊಂಡರು.
ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರನ್ನು ನಾಯಕರಾಗಲೂ ಬಿಡಲಿಲ್ಲ ಅಥವಾ ಪರ್ಯಾಯ ನಾಯಕತ್ವ ನೀಡಲೂ ಆಗಲಿಲ್ಲ. ನರೇಂದ್ರ ಮೋದಿಯವರು 2012ರಲ್ಲಿ ದೆಹಲಿ ರಾಜಕಾರಣದತ್ತ ಮುಖಮಾಡುತ್ತಿದ್ದಂತೆ, ಅವರ ಆಕ್ರಮಣಕಾರಿ ನಾಯಕತ್ವದ ಮುಂದೆ ಕಾಂಗ್ರೆಸ್ ಪಕ್ಷ ಮಂಕಾಗಿ ಹೋಯಿತು. ಅನೇಕ ಹಿರಿಯ/ಪ್ರಭಾವಿ ಮುಖಂಡರು ಪಕ್ಷವನ್ನು ತೊರೆದು ಹೋಗು ತ್ತಿದ್ದರೂ, ಅವರನ್ನು ಉಳಿಸಿ ಕೊಳ್ಳುವ ಪ್ರಯತ್ನಗಳಾಗಲಿಲ್ಲ.
ಜನಾಕರ್ಷಣೆಯ ನಾಯಕತ್ವ ಇಲ್ಲವಾಗಿ ಚುನಾವಣೆಯಿಂದ ಚುನಾವಣೆಗೆ ಪಕ್ಷವು ದುರ್ಬಲ ವಾಗುತ್ತಾ ಹೋಯಿತು. 2014ರ ನಂತರ ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾದ ರಾಹುಲ್ ಗಾಂಧಿಯವರಿಗೆ, ತಮ್ಮ ಪಕ್ಷಕ್ಕೆ ಹಳೆಯ ವೈಭವವನ್ನು ತಂದುಕೊಡಲು ಸಾಧ್ಯವಾಗಿಲ್ಲ. 2014ರಲ್ಲಿ 44 ಸ್ಥಾನ, 2019ರಲ್ಲಿ 52 ಸ್ಥಾನ, 2024ರಲ್ಲಿ 99 ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಸಮೀಪವೂ ಬರಲಾಗಿಲ್ಲ. ಕಳೆದ 12 ವರ್ಷಗಳ ಇತಿಹಾಸವನ್ನು ಕೆದಕಿದರೆ, ಕಾಂಗ್ರೆಸ್ ಪಕ್ಷವು 3 ಲೋಕಸಭಾ ಚುನಾವಣೆ ಗಳಲ್ಲಿ ಸೋತಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 3 ಬಾರಿ ಶೂನ್ಯ ಸಂಪಾದನೆ ಮಾಡಿದೆ. ಇದರದ್ದು ಪಶ್ಚಿಮ ಬಂಗಾಳದಲ್ಲೂ ‘ಶೂನ್ಯಸ್ಥಾನ’!
ಉತ್ತರ ಪ್ರದೇಶದಲ್ಲಿ 45 ಸ್ಥಾನ, ಬಿಹಾರದಲ್ಲಿ 6 ಸ್ಥಾನ ಹೀಗೆ ಅನೇಕ ರಾಜ್ಯಗಳಲ್ಲಿ ಒಂದಂಕಿಗೆ ಕುಸಿದಿರುವ ಕಾಂಗ್ರೆಸ್‌ಗೆ, ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶವನ್ನು ಹೊರತುಪಡಿಸಿ ಬೇರೆಲ್ಲೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಾಗಿಲ್ಲ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅದು ಸಂಪೂರ್ಣ ನೆಲ ಕಚ್ಚಿದೆ.
ಇತ್ತೀಚೆಗೆ ನಡೆದ ಮುಂಬಯಿ ಮಹಾನಗರಪಾಲಿಕೆ, ಅರುಣಾಚಲ ಪ್ರದೇಶ ಮತ್ತು ಗೋವಾ ಪಂಚಾಯತ್ ಚುನಾವಣೆಗಳಲ್ಲೂ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದೆ. 2019ರಲ್ಲಿ, ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ, ಮೋದಿ ಯವರನ್ನು ‘ಚೌಕಿದಾರ್ ಚೋರ್’ ಎಂದು ಅಪಪ್ರಚಾರ ಮಾಡಲಾಯಿತು ಕಾಂಗ್ರೆಸ್ ವತಿಯಿಂದ. ಆದರೆ 2014ರ ಚುನಾವಣೆಯಲ್ಲಿ ಜನರು ಮೋದಿಯವರಿಗೆ 282 ಸ್ಥಾನವನ್ನು ಕೊಟ್ಟರು,
2019ರಲ್ಲಿ 303 ಸ್ಥಾನದಲ್ಲಿ ಗೆಲ್ಲಿಸಿದರು. 2024ರ ಚುನಾವಣೆಯ ವೇಳೆ ‘ಸಂವಿಧಾನವು ಅಪಾಯ ದಲ್ಲಿದೆ’ ಎಂಬುದು ಕಾಂಗ್ರೆಸ್‌ನ ಅಪಪ್ರಚಾರವಾಗಿತ್ತು; ಆದರೆ ಈ ತಂತ್ರಗಾರಿಕೆಯು ವಿಫಲವಾಗಿ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದಿತು. 99 ಸ್ಥಾನಗಳನ್ನು ಗೆದ್ದ ನಂತರ ಕಾಂಗ್ರೆಸ್ ಪಕ್ಷವು ಚೇತರಿಕೆಯ ಹಾದಿಯನ್ನು ಹಿಡಿಯಬೇಕಿತ್ತು; ಆದರೆ ತದನಂತರ ನಡೆದ ಹರಿಯಾಣ, ಮಹಾ ರಾಷ್ಟ್ರ, ಜಮ್ಮು-ಕಾಶ್ಮೀರ ಮತ್ತು ಬಿಹಾರ ಚುನಾವಣೆಗಳಲ್ಲಿ ಅದು ಘೋರ ಪರಾಭವವನ್ನು ಅನುಭವಿಸಿತು, ಲೋಕಸಭಾ ಚುನಾವಣೆಯಲ್ಲಿನ ಲಾಭವನ್ನು ಸಂಪೂರ್ಣ ಅಳಿಸಿ ಹಾಕಿತು.
ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಅಪಾಯಕರ ಪ್ರಯತ್ನ ಮಾಡಿದರೂ ಕಾಂಗ್ರೆಸ್ಸಿಗರು ಬಿಹಾರದ ಚುನಾವಣೆಯಲ್ಲಿ ಸೋತರು. ಇನ್ನು, ‘ಬಿಜೆಪಿಯು ವಿದ್ಯುನ್ಮಾನ ಮತಯಂತ್ರವನ್ನು ತಿರುಚಿ ಚುನಾವಣೆಗಳನ್ನು ಗೆಲ್ಲುತ್ತಿದೆ’ ಎಂಬ ಕಾಂಗ್ರೆಸ್ಸಿಗರ ಆರೋಪ ಹಳಸಲಾಗಿ, ಜನರು ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಮತಪಟ್ಟಿಯಲ್ಲಿ ಕಂಡುಬಂದ ದೋಷವನ್ನು ‘ಮತಗಳ್ಳತನ’ ಎಂದು ವ್ಯಾಖ್ಯಾನಿಸಿ, ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಕಳೆಯುವ ಕಾಂಗ್ರೆಸ್ಸಿಗರ ಹುನ್ನಾರವು ಸೂಕ್ತ ಸಾಕ್ಷ್ಯವಿಲ್ಲದೆ ‘ಠುಸ್’ ಎಂದಿತು.
ಈಗ ಕಾಂಗ್ರೆಸ್ಸಿಗರು ಅರಾಜಕತೆಯನ್ನು ಹುಟ್ಟು ಹಾಕುವ ಪ್ರಯತ್ನದಲ್ಲಿದ್ದಾರೆ. ಇದರ ಭಾಗವಾಗಿ ಯೇ ಲೋಕಸಭೆಯಲ್ಲಿ ಪ್ರಧಾನಿಯವರ ಮೇಲೆ ಹಲ್ಲೆ ಮಾಡುವ ಕುತಂತ್ರಕ್ಕೆ ಮುಂದಾ ಗಿರುವುದು, ಕ್ಷುಲ್ಲಕ ಕಾರಣಕ್ಕೆ ಕಲಾಪ ನಡೆಯದಂತೆ ಗದ್ದಲವೆಬ್ಬಿಸುತ್ತಿರುವುದು. ಸಾಮಾಜಿಕ ಜಾಲತಾಣ ಗಳಲ್ಲಿ ಮನಸ್ಸಿಗೆ ತೋಚಿದಂತೆ ಟೀಕಿಸಿ, ಅವಹೇಳನಕಾರಿ ಮೀಮ್ ಗಳನ್ನು ಹರಿಬಿಟ್ಟರೆ ಜನರ ವಿಶ್ವಾಸವನ್ನು ಗಳಿಸಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ತೇಲಾಡುತ್ತಿದೆ.
‘ಸಂಸತ್ತಿನಲ್ಲಿ ಓಡಿಸಿ ಆಗಿದೆ, ಬಾಕಿ ಉಳಿದಿರುವುದು ಪ್ರಧಾನಿ ಸ್ಥಾನದಿಂದ’ ಅಂತ ಕಾಂಗ್ರೆಸ್ ವಕ್ತಾರ ಪವನ್ ಖೇರಾ ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ ಬರೆದುಕೊಳ್ಳುತ್ತಾರೆ. ಇದು ನಗರಪಾಲಿಕೆ ಚುನಾವಣೆಯಲ್ಲಿಯು ಗೆಲ್ಲಲು ವಿಫಲರಾದವರ ಠೇಂಕಾರ. ಮೋದಿಯವರನ್ನು ಮಣಿಸಲು ಕಾಂಗ್ರೆಸ್ ಬಳಿ ಯಾವುದೇ ತಂತ್ರಗಾರಿಕೆಯಿಲ್ಲ, ರಣನೀತಿ ರೂಪಿಸಲೂ ಅದಕ್ಕೆ ಸಾಧ್ಯವಾಗಿಲ್ಲ.
ಮೋದಿಯವರನ್ನು ವೈಯಕ್ತಿಕವಾಗಿ ನಿಂದಿಸಲು ಮಾತ್ರವೇ ಕಾಂಗ್ರೆಸ್‌ನ ಅಜೆಂಡಾ ಸೀಮಿತವಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ ರಾಹುಲ್ ಗಾಂಧಿಯವರು ಕೇಂದ್ರ ಸರಕಾರದ ಒಂದೇ ಒಂದು ವೈಫಲ್ಯವನ್ನು ಬಯಲಿಗೆಳೆದಿಲ್ಲ, ಸದನದಲ್ಲಿ ಕನಿಷ್ಠ 45 ನಿಮಿಷಗಳ ಕಾಲ ಮಾತನಾಡಿಲ್ಲ.
ಕೇವಲ ಅಂಬಾನಿ, ಅದಾನಿ, ವೋಟುಚೋರಿ ಮತ್ತು ಜಾತಿಗಳ ವಿಷಯಗಳಿಂದ ಸರಕಾರವನ್ನು ಕಟ್ಟಿಹಾಕಲಾಗಲಿಲ್ಲ. ವಿಪರ್ಯಾಸವೆಂದರೆ ಅವರು ‘ವಿಬಿ- ಜಿ ರಾಮ್ ಜಿ’ ಕಾಯಿದೆಯನ್ನು ಹೊರಗಡೆ ವಿರೋಧಿಸುತ್ತಾರೆ, ಸದನದಲ್ಲಿ ಅದು ಚರ್ಚೆಗೆ ಬಂದಾಗ ಜರ್ಮನಿಯಲ್ಲಿರುತ್ತಾರೆ. ಪ್ರಕಟವಾಗದ ಜನರಲ್ ನರ್ವಾಣೆ ಅವರ ಪುಸ್ತಕವನ್ನು ಮುಂದಿಟ್ಟುಕೊಂಡು ಸದನದ ಕಲಾಪ ವನ್ನು ಇವರು ಹಾಳು ಮಾಡಿದರು.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯವನ್ನು ಬಳಸಿಕೊಂಡು ಗಂಭೀರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲಿಲ್ಲ. ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತಾದ ಚರ್ಚೆಗೆ ಒತ್ತಾಯಿಸಲಿಲ್ಲ. ಪ್ರಾಯಶಃ ಅವರು ಚರ್ಚೆಗೆ ಪ್ರಸ್ತಾಪಿಸಬೇಕಾದ ವಿಷಯದ ಸ್ಪಷ್ಟತೆ ಯಿಲ್ಲದೆ, ಜನರ ಸಮಸ್ಯೆಗೆ ಪರಿಹಾರ ನೀಡುವ ವಿಷಯಗಳನ್ನು ನಿರ್ಲಕ್ಷಿಸಿ, ಕೇವಲ ಸಾಮಾಜಿಕ ಜಾಲತಾಣಗಳಿಗೆ ಮಸಾಲೆಯನ್ನು ಒದಗಿಸುವ ವಿಷಯದತ್ತ ಗಮನಹರಿಸುತ್ತಿದ್ದಾರೆ.
ನಿವೃತ್ತ ಸೇನಾಮುಖ್ಯಸ್ಥ ನರ್ವಾಣೆ ಅವರ ಪುಸ್ತಕದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ದೊರೆಯದಾದಾಗ, ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಬಹುದಾಗಿತ್ತು; ಆದರೆ ಸದನ ನಡೆಯದಂತೆ ಮಾಡುವುದು ಅವರ ದುರುದ್ದೇಶಭರಿತ ತಂತ್ರಗಾರಿಕೆಯಾಗಿತ್ತು.
‘ಎಪ್‌ಸ್ಟೀನ್ ಫೈಲ್‌ನಲ್ಲಿ ಮೋದಿಯವರ ಹೆಸರಿನ ಉಲ್ಲೇಖವಿದೆ, ಹೀಗಾಗಿ ಮೋದಿಯವರು ಟ್ರಂಪ್ ಗೆ ಹೆದರಿ ದೇಶದ ಹಿತವನ್ನು ಬಲಿಕೊಡುತ್ತಿದ್ದಾರೆ’ ಎಂದು ಅವರು ಗಾಳಿಯಲ್ಲಿ ಗುಂಡು ಹೊಡೆದಿ ದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದಲ್ಲಿ ಪ್ರಧಾನಿಗಳು ಉತ್ತರ ನೀಡದಂತೆ ಅಡ್ಡಿಪಡಿಸಲು ಲೋಕಸಭೆಯಲ್ಲಿ ಮಹಿಳಾ ಸಂಸದರ ಕೈಗೆ ಬ್ಯಾನರ್ ಕೊಟ್ಟು, ಪ್ರಧಾನಿಯವರ ಆಸನದ ಸುತ್ತ ನಿಲ್ಲಿಸಿ, ಸಂಸದೀಯ ವ್ಯವಸ್ಥೆಗೆ ಅಪಚಾರವೆಸಗುತ್ತಾರೆ. ‘ಪ್ರಧಾನಿ ಗಳು ಶರಣಾಗಿದ್ದಾರೆ, ಪ್ರಧಾನಿಗಳಿಗೆ ರಾಹುಲ್ ಗಾಂಧಿಯೆಂದರೆ ಭಯ, ಪ್ರಧಾನಿಗಳು ಅಮೆರಿಕ ದೊಂದಿಗೆ ರಾಜಿಯಾಗಿದ್ದಾರೆ’ ಇಂಥ ಕ್ಲೀಷೆಗಳನ್ನು ಪದೇ ಪದೆ ಬಳಸಿ, ಲೋಕಸಭಾ ಚುನಾವಣೆ ಯನ್ನು ಗೆದ್ದಂತೆ ಸಂಭ್ರಮಿಸುತ್ತಿರುವುದನ್ನು ಕಂಡರೆ, ಇವರ ಪ್ರಬುದ್ಧತೆಯ ಬಗ್ಗೆ ಅನಿವಾರ್ಯ ವಾಗಿ ಪ್ರಶ್ನೆ ಏಳುತ್ತದೆ. ಪಕ್ಷಕ್ಕಾಗಿರುವ ಸೋಲಿನ ಬಗ್ಗೆ ರಾಹುಲ್ ಗಾಂಧಿಯವರು ಇನ್ನಾದರೂ ಅತ್ಮಾವ ಲೋಕನ ಮಾಡಿಕೊಳ್ಳಬೇಕು. ಕೇವಲ ಗಲಾಟೆ ಹಾಗೂ ಗೊಂದಲದಿಂದ ಜನರನ್ನು ಎತ್ತಿಕಟ್ಟು ವ ರಾಜಕೀಯವನ್ನು ಕೈಬಿಟ್ಟು, ದೂರದೃಷ್ಟಿಯುಳ್ಳ ವ್ಯಕ್ತಿತ್ವವನ್ನು ರೂಢಿಸಿಕೊಳ್ಳ ದಿದ್ದರೆ ಅವರು ಬಹುಬೇಗ ಇತಿಹಾಸದ ಪುಟವನ್ನು ಸೇರುವುದು ಖಚಿತ.
(ಲೇಖಕರು ಬಿಜೆಪಿಯ ವಕ್ತಾರರು)