Prakash Shesharaghavachar Column: ಯುಜಿಸಿ ಮಾಡಿರುವ ಎಡವಟ್ಟು
ಕಾಲೇಜುಗಳ ಆಡಳಿತ ಮಂಡಳಿಯು ಪ್ರವೇಶ ಪ್ರಕ್ರಿಯೆ, ಮೌಲ್ಯಮಾಪನ, ಹಾಸ್ಟೆಲ್ ಹಂಚಿಕೆ ಮತ್ತು ಸ್ಕಾಲರ್‌ಶಿಪ್ ನೀಡುವಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿರುವುದಿಲ್ಲ; ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯೂ ತನ್ನ ಆವರಣದಲ್ಲಿ ‘ಸಮಾನ ಅವಕಾಶಗಳ ಕೇಂದ್ರ’ವನ್ನು ಸ್ಥಾಪಿಸುವುದು ಕಡ್ಡಾಯವಾಗಿರುತ್ತದೆ. ಈ ಕೇಂದ್ರವು ಹಿಂದುಳಿದ ವರ್ಗಗಳ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಹಿತರಕ್ಷಣೆಯ, ಅವರಿಗೆ ಶೈಕ್ಷಣಿಕ ಮತ್ತು ಆರ್ಥಿಕ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.
-
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಸಹಪಾಠಿಗಳನ್ನು ಗೋಳು ಹೊಯ್ದು ಕೊಳ್ಳುವ, ಅವಹೇಳನ ಮಾಡುವ ಮತ್ತು ಅವರ ಅವಕಾಶಗಳಿಗೆ ಅಡ್ಡಿಯುಂಟು ಮಾಡುವ ಹೀನ ಪ್ರವೃತ್ತಿಯು ಹಲವಾರು ಕ್ಯಾಂಪಸ್‌ಗಳಲ್ಲಿ ಕಂಡುಬಂದಿದೆ. ಈ ಅಮಾನವೀಯ ನಡವಳಿಕೆ ಯಿಂದಾಗಿ ನೂರಾರು ವಿದ್ಯಾರ್ಥಿಗಳು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ.
ಈ ಪೈಕಿ ಕೆಲವರು ತಮ್ಮ ಓದನ್ನು ಅರ್ಧಕ್ಕೇ ತೊರೆದು ಹೋಗಿದ್ದಾರೆ. ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ, ಆದಿವಾಸಿ ಸಮುದಾಯಕ್ಕೆ ಸೇರಿದ್ದ ಡಾ.ಪಾಯಲ್ ತಡ್ವಿಯನ್ನು ಆಕೆಯ ವರು ಸಹೋದ್ಯೋಗಿಗಳು ನಿರಂತರ ಬೆದರಿಸುತ್ತಿದ್ದುದರಿಂದ ಮತ್ತು ಆಕೆಯ ವಿಷಯದಲ್ಲಿ ಜಾತಿ ತಾರತಮ್ಯವನ್ನು ಮಾಡುತ್ತಿದ್ದುದರಿಂದ, 2019ರ ಮೇ ತಿಂಗಳಲ್ಲಿ ಆಕೆ ಆತ್ಮಹತ್ಯೆಗೆ ಶರಣಾದರು.
ಈ ಪ್ರಕರಣವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾಣ ಬರುವ ಜಾತಿವಾದಕ್ಕೆ ಪುರಾವೆಯಾಗಿ, ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯಿತು. ಜತೆಗೆ, ಅತೀವ ನಿಷ್ಠುರವಾಗಿರುವ ‘ಛೇಡನೆ ವಿರೋಧಿ ನೀತಿ’ಗೆ ಆಗ್ರಹ ಹೆಚ್ಚಾಯಿತು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಾದ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಮತ್ತು ಮೇಲೆ ಉಲ್ಲೇಖಿಸಿರುವ ಪಾಯಲ್ ತಡ್ವಿ ಅವರ ಆತ್ಮಹತ್ಯೆ ಎರಡಕ್ಕೂ ‘ಜಾತಿ ತಾರತಮ್ಯ’ವೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಕೊನೆಗಾಣಿಸಲು ಕಠಿಣ ವ್ಯವಸ್ಥೆಯನ್ನು ರೂಪಿಸುವಂತೆ ಕೋರಿ, ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರಾದ ರಾಧಿಕಾ ವೇಮುಲಾ ಮತ್ತು ಅಬೇದಾ ಸಲೀಂ ತಡ್ವಿ ಅವರು 2019ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಸುಪ್ರೀಂಕೋರ್ಟ್, ‘ಯುಜಿಸಿ ಇಕ್ವಿಟಿ ರೆಗ್ಯುಲೇಷನ್ 2012’ ನಿಯಮಕ್ಕೆ ತಿದ್ದುಪಡಿ ತಂದು ಅದನ್ನು ಬಲಪಡಿಸಲು ಆದೇಶಿಸಿತು. ನ್ಯಾಯಾಲಯದ ಆದೇಶದ ಪ್ರಕಾರ ಈ ನಿಯಮಾ ವಳಿಗೆ ಆಮೂಲಾಗ್ರ ಬದಲಾವಣೆಯನ್ನು ತಂದು ಅತ್ಯಂತ ಕಠಿಣ ಕಾಯ್ದೆಯಾಗಿಸಲಾಯಿತು,
2026ರ ಜನವರಿ 12ರಂದು ಹೊಸ ರೆಗ್ಯುಲೇಷನ್ ಅನ್ನು ಬಿಡುಗಡೆ ಮಾಡಲಾಯಿತು. ಈ ಹೊಸ ನಿಯಮಾವಳಿಗಳ ಅನ್ವಯ, ಯಾವುದೇ ವಿದ್ಯಾರ್ಥಿಯು ಜಾತಿ, ಧರ್ಮ, ಲಿಂಗ, ಜನ್ಮಸ್ಥಳ, ಅಂಗ ವೈಕಲ್ಯ ಅಥವಾ ಭಾಷೆಯ ಆಧಾರದ ಮೇಲೆ, ಯಾವ ವಿದ್ಯಾರ್ಥಿಯ ವಿರುದ್ಧವೂ ತಾರತಮ್ಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಕಾಲೇಜುಗಳ ಆಡಳಿತ ಮಂಡಳಿಯು ಪ್ರವೇಶ ಪ್ರಕ್ರಿಯೆ, ಮೌಲ್ಯಮಾಪನ, ಹಾಸ್ಟೆಲ್ ಹಂಚಿಕೆ ಮತ್ತು ಸ್ಕಾಲರ್‌ಶಿಪ್ ನೀಡುವಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿರುವುದಿಲ್ಲ; ಪ್ರತಿ ಯೊಂದು ಉನ್ನತ ಶಿಕ್ಷಣ ಸಂಸ್ಥೆಯೂ ತನ್ನ ಆವರಣದಲ್ಲಿ ‘ಸಮಾನ ಅವಕಾಶಗಳ ಕೇಂದ್ರ’ವನ್ನು ಸ್ಥಾಪಿಸುವುದು ಕಡ್ಡಾಯವಾಗಿರುತ್ತದೆ. ಈ ಕೇಂದ್ರವು ಹಿಂದುಳಿದ ವರ್ಗಗಳ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಹಿತರಕ್ಷಣೆಯ, ಅವರಿಗೆ ಶೈಕ್ಷಣಿಕ ಮತ್ತು ಆರ್ಥಿಕ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಇಕ್ವಿಟಿ ಕಮಿಟಿಗೆ ಸಂಸ್ಥೆಯ ಮುಖ್ಯಸ್ಥರ ನೇತೃತ್ವದಲ್ಲಿ ಅಧಿಕಾರಿಗಳ ನೇಮಕವಾಗಬೇಕು. ಇದರಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು, ಮಹಿಳೆಯರು ಮತ್ತು ಅಂಗವಿಕಲರಿಗೆ ಕಡ್ಡಾಯವಾಗಿ ಪ್ರಾತಿನಿಧ್ಯ ಇರಬೇಕು. 2012ರ ಸಂದರ್ಭದಲ್ಲಿ ಸಮಿತಿಯಲ್ಲಿ ಎಲ್ಲಾ ವರ್ಗಗಳ ಪ್ರಾತಿನಿಧ್ಯದ ಬಗ್ಗೆ ಕಟ್ಟುನಿಟ್ಟಿನ ನಿಯಮವಿರಲಿಲ್ಲ; ಆದರೆ ಈಗ ಸಮಿತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯ ದವರು ಮತ್ತು ಮಹಿಳಾ ಪ್ರತಿನಿಧಿಗಳು ಇರುವುದು ಕಡ್ಡಾಯ.
ಹೊಸ ನಿಯಮಗಳ ಪ್ರಕಾರ, ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಸಮಿತಿಯು ಸಭೆ ಸೇರ ಬೇಕು ಮತ್ತು ನಿಗದಿತ ಅವಧಿಯೊಳಗೆ (ಉದಾಹರಣೆಗೆ 15-60 ದಿನಗಳು) ಪರಿಹಾರ ನೀಡಬೇಕು. 2026ರ ತಿದ್ದುಪಡಿಯಲ್ಲಿ, ಕ್ಯಾಂಪಸ್‌ನ ಆಯಕಟ್ಟಿನ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ಯನ್ನು ಅಥವಾ ತಾರತಮ್ಯವನ್ನು ತಡೆಗಟ್ಟಲು ‘ಇಕ್ವಿಟಿ ಸ್ಕ್ವಾಡ್’ಗಳು ಕಾಲೇಜಿನ ಆವರಣದಲ್ಲಿ ಸತತವಾಗಿ ನಿಗಾ ಇರಿಸಬೇಕಾಗುತ್ತದೆ.
ಈ ನಿಯಮಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನೀಡುವ ಅನುದಾನವನ್ನು ಸ್ಥಗಿತ ಗೊಳಿಸಬಹುದು ಅಥವಾ ಅಂಥ ಸಂಸ್ಥೆಗಳ ಮಾನ್ಯತೆಯನ್ನು ರದ್ದುಪಡಿಸಬಹುದು. 2012ರ ನಿಯಮಾವಳಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ಈ ವರ್ಗದ ವಿದ್ಯಾರ್ಥಿಗಳು ಬಹುತೇಕ ಸಂದರ್ಭಗಳಲ್ಲಿ ಹೆಚ್ಚಿನ ತಾರತಮ್ಯಕ್ಕೆ ಗುರಿಯಾಗುವ ಸಾಧ್ಯತೆಯಿರುವ ಕಾರಣ, ಕಾಯಿದೆಯು ಅವರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಿತ್ತು.
ಹೊಸ ನಿಯಮದಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳೊಂದಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನೂ ಸೇರ್ಪಡೆ ಮಾಡಲಾಯಿತು, ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಮಾತ್ರ ಇದರಿಂದ ಹೊರಗಿಡಲಾಯಿತು.
2012ರ ನಿಯಮಾವಳಿಯ ಅನ್ವಯ, ವೈಯಕ್ತಿಕ ವೈಷಮ್ಯವನ್ನಿಟ್ಟುಕೊಂಡು ಸುಳ್ಳುದೂರು ನೀಡುವವರ ಆರೋಪಗಳು ಸಾಬೀತಾಗದಿದ್ದರೆ, ಅಂಥ ದೂರುದಾರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿತ್ತು. ಆದರೆ, ಹೊಸ ನಿಯಮದಡಿಯಲ್ಲಿ ಸುಳ್ಳು ದೂರುಗಳ ಮೇಲಿನ ದಂಡನೆಯನ್ನು ಸಡಿಲಿಸಲಾಗಿದೆ. ಇದರಿಂದ ವೈಯಕ್ತಿಕ ದ್ವೇಷಕ್ಕಾಗಿ ಅಥವಾ ಕಾರಣವೇ ಇಲ್ಲದೆ ವಿದ್ಯಾರ್ಥಿಗಳು ಅಥವಾ ಅಧ್ಯಾಪಕರನ್ನು ಸಂಕಷ್ಟದಲ್ಲಿ ಸಿಲುಕಿಸಲು ಈ ನಿಯಮಗಳು ದುರುಪಯೋಗ ವಾಗುವ ಆತಂಕ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲಿದೆ. ಸುಳ್ಳು ದೂರುಗಳಿಗೆ ನೀಡಿರುವ ರಿಯಾಯಿತಿಯು ವಿದ್ಯಾರ್ಥಿಗಳ ನಡುವೆ ವಿಷಬೀಜವನ್ನು ಬಿತ್ತಿ, ಕಾಲೇಜಿನ ಸೌಹಾರ್ದಯುತ ವಾತಾವರಣವನ್ನು ಹಾಳುಗೆಡಹುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಹೊಸ ನಿಯಮಾವಳಿಯನ್ನು ವಿರೋಧಿಸುತ್ತಿರುವವರು, ‘ಇದು ಸಾಮಾನ್ಯ ವರ್ಗದ ವಿದ್ಯಾರ್ಥಿ ಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ ಮತ್ತು ಇದರಿಂದಾಗಿ ಸಾಮಾನ್ಯ ವರ್ಗದವರು ಕಿರುಕುಳ ನೀಡುವವರು, ತಾರತಮ್ಯ ಮಾಡುವವರು ಎಂಬ ಹಣೆಪಟ್ಟಿಯನ್ನು ಹೊರುವಂತಾಗಿದೆ’ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯ ವರ್ಗದವರೂ ಕ್ಯಾಂಪಸ್‌ನಲ್ಲಿ ಕಿರುಕುಳಕ್ಕೆ ಅಥವಾ ತಾರತಮ್ಯಕ್ಕೆ ಒಳಗಾಗುವ ಸಾಧ್ಯತೆ ಯಿದೆ ಎಂಬ ಅಂಶವನ್ನು ನಿಯಮಾವಳಿಯನ್ನು ರೂಪಿಸುವಾಗ ನಿರ್ಲಕ್ಷಿಸಲಾಗಿದೆ. ಹೀಗಾಗಿ ಅವರು, ‘ನಮಗೆ ರಕ್ಷಣೆ ಇಲ್ಲದಂತಾಗಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ’ ಎಂದು ಆತಂಕ ವನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೊಸ ನಿಯಮದ ಅಗತ್ಯವನ್ನು ಸಮರ್ಥಿಸುತ್ತಿರುವವರು, ‘ಕಳೆದ ಐದು ವರ್ಷದಲ್ಲಿ ತಾರತಮ್ಯ ವನ್ನು ಅನುಭವಿಸಿರುವ ಕುರಿತಾದ ದೂರುಗಳ ಸಂಖ್ಯೆ 178ರಿಂದ 378ಕ್ಕೆ ಹೆಚ್ಚಳವಾಗಿದೆ’ ಎಂದು ವಾದ ಮಾಡುತ್ತಾರೆ. ಕಲಿಕೆಗೆ ಮತ್ತು ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಬರುವ ವಿದ್ಯಾರ್ಥಿಯೊಬ್ಬನು ಶೋಷಣೆಗೆ ಗುರಿಯಾಗಬಾರದು ಎಂಬುದೇ ಸರ್ವೋಚ್ಚ ನ್ಯಾಯಾಲಯದ ಆಶಯವಾಗಿತ್ತು.
ದೇಶದ ಕಾನೂನು ಪ್ರತಿಯೊಬ್ಬ ನಾಗರಿಕರಿಗೂ ಸಮನಾಗಿ ಅನ್ವಯವಾಗಬೇಕಿರುವುದು ಸಂವಿ ಧಾನದ ಮೂಲತತ್ವ. ಆದರೆ ಯುಜಿಸಿ ರೂಪಿಸಿರುವ ಹೊಸ ನಿಯಮವು ಇದಕ್ಕೆ ಅಪವಾದ ವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ದಲಿತ ಸಮುದಾಯಕ್ಕೆ ವಿಶೇಷ ರಕ್ಷಣೆಯ ಅಗತ್ಯವಿರುವುದನ್ನು ಯಾರೂ ಪ್ರಶ್ನಿಸುತ್ತಿಲ್ಲ.
ಹಾಗೆಯೇ ಹಿಂದುತ್ವದ ಸಿದ್ಧಾಂತದ ತಳಹದಿಯನ್ನು ನಂಬಿರುವವರಿಗೆ, ಜಾತಿ ತಾರತಮ್ಯ ಮತ್ತು ಸಮುದಾಯಗಳ ನಡುವೆ ಕಂದಕ ನಿರ್ಮಿಸುವ ನೀತಿಯನ್ನು ಒಪ್ಪಲಾಗದು. ಆದರೆ, ಸಾಮಾನ್ಯ ವರ್ಗದವರಿಗೂ ತಾರತಮ್ಯದ ಕಹಿ ಅನುಭವವಾಗುವುದು ಎಂಬ ವಾದವನ್ನು ಯುಜಿಸಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹಾಗೆ ನೋಡಿದರೆ, ತಾರತಮ್ಯ ನಿವಾರಣೆಗೆಂದು ರಚಿಸುವ ಸಮಿತಿಯೇ ಸಾಮಾನ್ಯ ವರ್ಗದವರಿಗೆ ತಾರತಮ್ಯವನ್ನು ಮಾಡಿದೆ; ಇದರಿಂದಾಗಿ ಯುಜಿಸಿ ಅಧಿಕಾರಿಗಳ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನಿಸುವಂತಾಗಿದೆ.
ಈ ಹೊಸ ನಿಯಮಾವಳಿಗೆ ಕಾಲೇಜುಗಳ ಆಡಳಿತ ಮಂಡಳಿಗಳು ಕಕ್ಕಾಬಿಕ್ಕಿಯಾಗಿವೆ. ಕಾರಣ, ಇದರ ಅನುಷ್ಠಾನಕ್ಕಾಗಿ ನೇಮಕ ಮಾಡಬೇಕಾಗಿಬರುವ ಸಿಬ್ಬಂದಿಗಳ ಬಾಬತ್ತಿನ ಹೆಚ್ಚುವರಿ ವೆಚ್ಚವು ಹೊರೆಯಾಗಲಿದೆ ಎಂಬುದು ಅವುಗಳ ಕೊರಗು; ಕೊಂಚ ಏಮಾರಿದರೂ ಭಾರಿ ದಂಡ ವನ್ನು ತೆರಬೇಕಾಗುವ ಅಥವಾ ಮಾನ್ಯತೆಯನ್ನು ಕಳೆದುಕೊಳ್ಳಬೇಕಾದ ಆತಂಕವು ಅವುಗಳನ್ನು ಕಾಡುತ್ತಿದೆ.
2026ರ ನಿಯಮಾವಳಿಯು ಬಿಜೆಪಿ ಸರಕಾರವು ಏಕಾಏಕಿ ಕೈಗೊಂಡ ಸ್ವಯಂಪ್ರೇರಿತ ಬದಲಾವಣೆ ಯಲ್ಲ; ಬದಲಿಗೆ ಇದು ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ರೂಪಿಸಿದ ಹೊಸ ಕಠಿಣ ನಿಯಮಾ ವಳಿ. ಇದನ್ನು ರಚಿಸಿದ ಅಧಿಕಾರಿಗಳು ತಾರತಮ್ಯ ನಿವಾರಣೆಯ ಹೆಸರಿನಲ್ಲಿ ಒಂದು ವರ್ಗವನ್ನು ಬಲಿಪಶು ಮಾಡುವ ಹಾಗೆ ನಡೆದುಕೊಂಡು ಬಹುದೊಡ್ಡ ತಪ್ಪು ಮಾಡಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸದರಿ ವಿವಾದದ ಕಿಚ್ಚು ಹಬ್ಬಿದ ಕೂಡಲೇ, ‘ಈ ನಿಯಮಾವಳಿಯಲ್ಲಿ ಯಾರ ವಿರುದ್ಧವೂ ತಾರತಮ್ಯ ಮಾಡುವು ದಿಲ್ಲ ಹಾಗೂ ಕಾಯಿದೆಯ ದುರುಪಯೋಗ ಆಗುವುದಿಲ್ಲ’ ಎಂದು ಸ್ಪಷ್ಟನೆ ಕೊಟ್ಟರು.
ವಾಸ್ತವವಾಗಿ ಹೇಳುವುದಾದರೆ, ಈ ದೇಶದಲ್ಲಿ ದುರುಪಯೋಗವಾಗದ ಕಾನೂನು ಇಲ್ಲವೇ ಇಲ್ಲ. ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗವಾಗಿ ಸರ್ವೋಚ್ಚ ನ್ಯಾಯಾ ಲಯವು ಮಧ್ಯ ಪ್ರವೇಶಿಸಬೇಕಾಯಿತು. ವರದಕ್ಷಿಣೆ ನಿಷೇಧ ಕಾಯಿದೆಯಂತೂ ವೈಯಕ್ತಿಕ ‘ಲೆಕ್ಕಾ ಚಾರ’ಗಳನ್ನು ತೀರಿಸಿಕೊಳ್ಳಲು ದುರುಪಯೋಗವಾಗಿ, ಅಂತಿಮವಾಗಿ ಅನೇಕ ಕಠಿಣ ನಿಬಂಧನೆ ಗಳನ್ನು ಸಡಿಲಗೊಳಿಸಲಾಯಿತು.
ಭಯೋತ್ಪಾದನಾ-ವಿರೋಧಿ ಕಾಯಿದೆಯ ದುರುಪಯೋಗವಾಗುತ್ತಿದೆ ಎಂದು ಬದಲಾವಣೆ ಮಾಡಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಕಾಯಿದೆಯ ದುರುಪಯೋಗ ಆಗುವುದಿಲ್ಲ ಎಂದು ಯಾರೂ ಖಾತ್ರಿ ನೀಡಲು ಸಾಧ್ಯವಿಲ್ಲ.
ವಿದ್ಯಾರ್ಥಿಗಳಲ್ಲಿ ಪೈಪೋಟಿ, ಭಿನ್ನಾಭಿಪ್ರಾಯ ಮುಂತಾದವು ಅತ್ಯಂತ ಸಹಜ ವರ್ತನೆಗಳು. ಇದು ತಿಳಿಯದ ವಿಷಯವೇನಲ್ಲ. ಈ ಸೂಕ್ಷ್ಮವನ್ನು ಗಮನದಲ್ಲಿರಿಸಿಕೊಂಡು ನಿಯಮಗಳು ರೂಪಿತವಾಗ ಬೇಕು. ಶೈಕ್ಷಣಿಕ ಪರಿಸರವು ಆತಂಕದಿಂದ ಮುಕ್ತವಾಗಿ, ವಿದ್ಯಾರ್ಥಿಗಳ ಗಮನವು ಅಧ್ಯಯನ, ಜ್ಞಾನ ಸಂಪಾದನೆಯತ್ತ ನೆಡುವಂಥ ವಾತಾವರಣವು ಕಾಲೇಜುಗಳಲ್ಲಿ ಇರುವಂತಾಗುವುದರ ಕಡೆಗೆ ಗಮನ ಕೊಡಬೇಕಿತ್ತು.
ನ್ಯಾಯಾಲಯವನ್ನು ಓಲೈಸಲು ರಚಿಸಿದ ನಿಯಮಾವಳಿಯ ವಿರುದ್ಧ ತಡೆ ಕೋರಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕೂಡಲೇ ಅದನ್ನು ತುರ್ತಾಗಿ ಪರಿಗಣಿಸಿದ ನ್ಯಾಯಾಲಯ, ‘ಇದು ಜಾತಿಜಾತಿಗಳ ನಡುವೆ ವಿಷ ಬಿತ್ತುವ ನಿಯಮಾವಳಿ’ ಎಂದು ಸರಕಾರವನ್ನು ತರಾಟೆಗೆ ತೆಗೆದು ಕೊಂಡು ಇದರ ಜಾರಿಗೆ ತಡೆ ನೀಡಿದೆ.
ಜಾತ್ಯತೀತ ನೀತಿಯನ್ನು ನಂಬಿರುವ ನಾವು ಕೇವಲ ಕೆಲವು ವರ್ಗಗಳನ್ನು ಓಲೈಸಲು ತೆಗೆದು ಕೊಳ್ಳುವ ನಿರ್ಧಾರಗಳು ನಮ್ಮ ನಂಬಿಕೆಯ ಬುಡವನ್ನೇ ಅಲ್ಲಾಡಿಸಿ ಬಿಡುತ್ತವೆ, ನಮ್ಮ ಬೇರು ಗಳನ್ನು ನಾವೇ ಕತ್ತರಿಸಿದಂತೆ ಆಗುತ್ತದೆ. ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆಯ ಲಾಭ ವನ್ನು ಪಡೆದು, ಸಂಭವಿಸಿರುವ ಪ್ರಮಾದವನ್ನು ಯಾರಿಗೂ ನೋವಾಗದ ಹಾಗೆ ಸರಿಪಡಿಸಿಕೊಳ್ಳ ಬೇಕು; ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದೆಂದೇ ಸದ್ಯದ ಪರಿಸ್ಥಿತಿಯಲ್ಲಿ ಉಳಿದಿರುವ ದಾರಿ...
(ಲೇಖಕರು ಬಿಜೆಪಿಯ ವಕ್ತಾರರು)