ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಈ ದೇಶಗಳು ತೆರೆದುಕೊಂಡ ರೀತಿ ಅಚ್ಚರಿದಾಯಕ

ರುವಾಂಡಾ ( RWANDA) ಎನ್ನುವುದು ಮಧ್ಯ-ಪೂರ್ವ ಆಫ್ರಿಕಾದಲ್ಲಿನ ಒಂದು ದೇಶ. ಇದೊಂದು ‘ಲ್ಯಾಂಡ್-ಲಾಕ್ಡ್’ ದೇಶ. ಅಂದರೆ ಇದಕ್ಕೆ ನೀರಿನ ದಾರಿಯಿಲ್ಲ, ಇತರ ದೇಶಗಳಿಂದ ಸುತ್ತುವರಿದ ದೇಶ ವಾಗಿದೆ. ಉಗಾಂಡಾ, ಬುರುಂದಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ತಾಂಜಾನಿಯ ದೇಶಗಳನ್ನ ಅಕ್ಕಪಕ್ಕದ ದೇಶಗಳನ್ನಾಗಿ ಇದು ಪಡೆದಿದೆ. ‌

ವಿಶ್ವರಂಗ

mookanahalli@gmail.com

ಯುರೋಪಿನ ಒಂದೊಂದು ದೇಶವೂ ಜಗತ್ತಿನ ಬೇರೆ ಬೇರೆ ದೇಶಗಳನ್ನು ವಸಾಹತು ಮಾಡಿ ಕೊಂಡು ಲೂಟಿ ಮಾಡಿರುವುದು ಜಗತ್ತಿಗೇ ತಿಳಿದಿರುವ ಇತಿಹಾಸ. ರುವಾಂಡಾ ದೇಶವನ್ನು ಬೆಲ್ಜಿಯಂ ವಸಾಹತು ಮಾಡಿಕೊಂಡಿದ್ದ ಕಾಲಘಟ್ಟದಲ್ಲಿ ಮೈನಾರಿಟಿ ಟುಟ್ಸಿಗಳನ್ನು ಸರಕಾರ ದಲ್ಲಿ ಸೇರಿಸಿಕೊಂಡು ರುವಾಂಡಾವನ್ನು ನಿಯಂತ್ರದಲ್ಲಿಟ್ಟು ಕೊಂಡಿದ್ದರು. ಸರಕಾರದ, ಅಧಿಕಾರದ ಎಲ್ಲಾ ಹಂತದಲ್ಲಿ ಟುಟ್ಸಿಗಳ ಸಂಖ್ಯೆ ಹೆಚ್ಚಾಗಿತ್ತು. ಇದು ಮೆಜಾರಿಟಿ ಹುಟುಗಳಲ್ಲಿನ ಅಸಮಾಧಾನಕ್ಕೆ ಮೂಲ ಕಾರಣ. 1922ರಿಂದ 1962ರ ವರೆಗಿನ ಬೆಲ್ಜಿಯಂ ಆಳ್ವಿಕೆಯಲ್ಲಿ ಬಿತ್ತಿದ ವಿಷಬೀಜ 1994ರಲ್ಲಿ ಮಾರಣ ಹೋಮಕ್ಕೆ ಕಾರಣವಾಯಿತು.

ರುವಾಂಡಾ ( RWANDA) ಎನ್ನುವುದು ಮಧ್ಯ-ಪೂರ್ವ ಆಫ್ರಿಕಾದಲ್ಲಿನ ಒಂದು ದೇಶ. ಇದೊಂದು ‘ಲ್ಯಾಂಡ್-ಲಾಕ್ಡ್’ ದೇಶ. ಅಂದರೆ ಇದಕ್ಕೆ ನೀರಿನ ದಾರಿಯಿಲ್ಲ, ಇತರ ದೇಶಗಳಿಂದ ಸುತ್ತುವರಿದ ದೇಶವಾಗಿದೆ. ಉಗಾಂಡಾ, ಬುರುಂದಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ತಾಂಜಾನಿಯ ದೇಶಗಳನ್ನ ಅಕ್ಕಪಕ್ಕದ ದೇಶಗಳನ್ನಾಗಿ ಇದು ಪಡೆದಿದೆ. ‌

2023ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ ಒಂದೂವರೆ ಕೋಟಿಗೂ ಕಡಿಮೆ. ರುವಾಂಡಾ ದೇಶದ ಇತಿಹಾಸ ಸದಾ ರಕ್ತದಿಂದ ಕೂಡಿದೆ. ಎರಡನೇ ಮಹಾಯುದ್ಧಕ್ಕೆ ಮೊದಲಿನಿಂದಲೂ ಇಲ್ಲಿನ ಟುಟ್ಸಿ ಮತ್ತು ಹುಟು ಎನ್ನುವ ಎರಡು ಜನಾಂಗೀಯ ಕಲಹವನ್ನ ನಾವು ಕಾಣಬಹುದು. ಟುಟ್ಸಿ ಎನ್ನುವುದು ಮೈನಾರಿಟಿ ಜನಾಂಗ. ಹುಟು ಎನ್ನುವ ಜನಾಂಗ ಇಲ್ಲಿನ ಮೆಜಾರಿಟಿ. ಒಂದು ಕೋಮಿನವರನ್ನ ಕಂಡರೆ ಇನ್ನೊಂದು ಕೋಮಿನವರಿಗೆ ಆಗುವುದಿಲ್ಲ. ಆಶ್ಚರ್ಯವೇನು ಗೊತ್ತೇ? ಎರಡೂ ಜನಾಂಗದ ನಂಬಿಕೆ, ಧರ್ಮಶ್ರದ್ಧೆ ಮಾತ್ರ ಒಂದೇ!

ಅನಿಮಿಸಮ್ ಮತ್ತು ಕ್ರಿಶ್ಚಿಯಾನಿಟಿ ಎರಡೂ ಟ್ರೈಬ್ ಅನುಸರಿಸುವ ಧರ್ಮ. ಹುಟು ಟ್ರೈಬ್ ನವರು ಧವಸ-ಧಾನ್ಯಗಳನ್ನ ಬೆಳೆಯುತ್ತಿದ್ದರು. ಟುಟ್ಸಿಗಳು ಮೂಲತಃ ಪಶುಸಾಕಣಿಕೆಯಲ್ಲಿ ತೊಡಗಿಕೊಂಡವರು. ಆದರೂ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗುವುದಿಲ್ಲ. ಇದಕ್ಕೆ ಕಾರಣವೇನಿರ ಬಹುದು? ಯುರೋಪಿನ ಒಂದೊಂದು ದೇಶವೂ ಜಗತ್ತಿನ ಬೇರೆ ಬೇರೆ ದೇಶಗಳನ್ನ ವಸಾಹತು ಮಾಡಿಕೊಂಡು ಲೂಟಿ ಮಾಡಿರುವುದು ಜಗತ್ತಿಗೇ ತಿಳಿದಿರುವ ಇತಿಹಾಸ. ಬೆಲ್ಜಿಯಂ ದೇಶವು ರುವಾಂಡಾ ದೇಶವನ್ನ ವಸಾಹತು ಮಾಡಿಕೊಂಡಿದ್ದ ಕಾಲಘಟ್ಟದಲ್ಲಿ ಮೈನಾರಿಟಿ ಟುಟ್ಸಿ ಗಳನ್ನ ಸರಕಾರದಲ್ಲಿ ಸೇರಿಸಿಕೊಂಡು ರುವಾಂಡಾ ದೇಶವನ್ನ ನಿಯಂತ್ರದಲ್ಲಿಟ್ಟುಕೊಂಡಿದ್ದರು.

ಇದನ್ನೂ ಓದಿ: Rangaswamy Mookanahalli Column: ಸಿನೆಮಾ ವೀಕ್ಷಣೆಯ ಹಲವು ಮುಖಗಳು !

ಸರಕಾರದ, ಅಧಿಕಾರದ ಎಲ್ಲಾ ಹಂತದಲ್ಲಿ ಟುಟ್ಸಿಗಳ ಸಂಖ್ಯೆ ಹೆಚ್ಚಾಗಿತ್ತು. ಇದು ಮೆಜಾರಿಟಿ ಹುಟುಗಳಲ್ಲಿನ ಅಸಮಾಧಾನಕ್ಕೆ ಮೂಲ ಕಾರಣ. 1922ರಿಂದ 1962ರವರೆಗಿನ ಬೆಲ್ಜಿಯಂ ಆಳ್ವಿಕೆಯಲ್ಲಿ ಬಿತ್ತಿದ ವಿಷಬೀಜ 1994ರಲ್ಲಿ ಮಾರಣ ಹೋಮಕ್ಕೆ ಕಾರಣವಾಗುತ್ತದೆ.

6ನೇ ಏಪ್ರಿಲ್ 1994, ಅಂದಿನ ರುವಾಂಡಾ ಪ್ರೆಸಿಡೆಂಟ್ ಹಾಬ್ಯಾರಿಮಾನ ಅವರು ಪಯಣಿಸುತ್ತಿದ್ದ ವಿಮಾನವನ್ನ ಮಿಸೈಲ್ ಮೂಲಕ ಹೊಡೆದುರುಳಿಸಲಾಗುತ್ತದೆ. ಆತ ಹುಟು ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಇಂದಿಗೂ ಮಿಸೈಲ್ ಹಾರಿಸಿದವರು ಯಾರು ಎನ್ನುವುದರ ಬಗ್ಗೆ ಅನೇಕ ಊಹಾಪೋಹಗಳಿವೆ.

ಆದರೆ ಹುಟು ಸಮುದಾಯದವರು ಇದು ಟುಟ್ಸಿಗಳ ಕೆಲಸ ಎಂದು ನಿರ್ಧಾರಕ್ಕೆ ಬರುತ್ತಾರೆ. ಈ ಹಿಂದೆ ಉಂಗಾಡದಲ್ಲಿ ಕುಳಿತು ಒಂದಷ್ಟು ಟುಟ್ಸಿಗಳು ರುವಾಂಡಾ ಪೇಟ್ರಿಯಾಟಿಕ್ ಫ್ರಂಟ್- RPF ಕಟ್ಟಿಕೊಂಡಿರುತ್ತಾರೆ. ಆಗಾಗ್ಗೆ ಇವರಿಂದ ದಾಳಿಗಳು ಕೂಡ ಆಗಿರುತ್ತವೆ. ಕಿಗಾಲಿ ಎನ್ನುವುದು ರುವಾಂಡಾ ರಾಜಧಾನಿ. ಪ್ರೆಸಿಡೆಂಟ್‌ರನ್ನ ಹೊಡೆದುರುಳಿಸಿದಾಗ ಕಿಗಾಲಿಯಲ್ಲಿ ಶುರುವಾದ ಮಾರಣಹೋಮ ದೇಶದ ಉದ್ದಗಲಕ್ಕೂ ಬಹುಬೇಗ ಹರಡುತ್ತದೆ.

ಮುಂದಿನ ನೂರು ದಿನ ದೇಶದ ಉದ್ದಗಲಕ್ಕೂ ಒಬ್ಬ ಟುಟ್ಸಿಯನ್ನ ಕೂಡ ಉಳಿಸಬಾರದು ಎನ್ನುವ ನಿರ್ಧಾರಕ್ಕೆ ಹುಟು ಸಮುದಾಯ ಬರುತ್ತದೆ. ಮಾರಣಹೋಮ ನೂರು ದಿನ ನಡೆಯುತ್ತದೆ. ದೇಶದ ರೇಡಿಯೋದಲ್ಲಿ ಎಲ್ಲಿ ಟುಟ್ಸಿಗಳು ಇದ್ದಾರೆ ಎನ್ನುವುದನ್ನ ಹುಟುಗಳಿಗೆ ಪ್ರಸಾರ ಮಾಡಲಾಗುತ್ತದೆ. ಕಿಗಾಲಿಯಲ್ಲಿ ಟುಟ್ಸಿಗಳು ಇದ್ದ ಕಾಲೋನಿಗಳಲ್ಲಿ ಹೆಣ ಎತ್ತಲು ಕೂಡ ಜನರಿಲ್ಲವಾಗುತ್ತಾರೆ. ಪ್ರತಿಯೊಬ್ಬರನ್ನ ಹುಡುಕಿ ಕೊಲ್ಲಲಾಗುತ್ತದೆ. ಇಡೀ ನಗರ ವಾರದಲ್ಲಿ ಹೆಣಗಳ ವಾಸನೆಯಿಂದ ತುಂಬಿ ಹೋಗಿತ್ತಂತೆ!

ಅಂದಿಗೆ 70 ಲಕ್ಷ ಜನಸಂಖ್ಯೆಯ ರುವಾಂಡಾದಲ್ಲಿ 85 ಪ್ರತಿಶತ ಹುಟುಗಳು, 14 ಪ್ರತಿಶತ ಟುಟ್ಸಿಗಳು ಮತ್ತು 1 ಪ್ರತಿಶತ ‘ತ್ವಾ’ ಎನ್ನುವ ಜನರಿದ್ದರು. ಅಂದರೆ ಟುಟ್ಸಿಗಳ ಜನಸಂಖ್ಯೆ ಹತ್ತಿರತ್ತಿರ 1 ಮಿಲಿಯನ್- ಹತ್ತು ಲಕ್ಷ. ಅಂದಾಜಿನ ಪ್ರಕಾರ 100 ದಿನದಲ್ಲಿ 8 ಲಕ್ಷ ಟುಟ್ಸಿಗಳನ್ನ ಕೊಲ್ಲಲಾಗು ತ್ತದೆ. ಕೆಲವು ಸಮೀಕ್ಷೆಗಳ ಪ್ರಕಾರ ಇದು 9 ಲಕ್ಷವಿದೆ.

ಅಂದರೆ ಆಲ್ಮೋ ಎಲ್ಲರನ್ನೂ ಕೊಂದಂತೆ. ಇವುಗಳ ನಡುವೆ ಸಾಕಷ್ಟು ಹುಟುಗಳು ಕೂಡ ಟುಟ್ಸಿಗಳನ್ನ ರಕ್ಷಿಸಲು ಹೋಗಿ ಸತ್ತಿದ್ದಾರೆ. ಇಂಥ ಘಟನೆಗಳು ನಡೆದಾಗ ಸುಲಭವಾಗಿ ತೊಂದರೆಗೆ ಸಿಲುಕುವವರು ಹೆಂಗಸರು ಮತ್ತು ಮಕ್ಕಳು. ಐದು ಲಕ್ಷ ಹೆಣ್ಣು ಮಕ್ಕಳ ಮಾನಹರಣವಾಗಿದೆ ಎನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆ.

ಇದೇನೂ 18 ಶತಮಾನದಲ್ಲಿ ಆಗಿರುವ ಘಟನೆಯಲ್ಲ. 1994ರಲ್ಲಿ ನಡೆದ ಘಟನೆ. ಇಡೀ ವಿಶ್ವ ಇದನ್ನ ನೋಡುತ್ತಾ ಸುಮ್ಮನಿತ್ತು. 100 ದಿನದಲ್ಲಿ ಯಾವ ದೇಶವೂ ಇದನ್ನ ತಡೆಯುವ ಪ್ರಯತ್ನ ಮಾಡಲಿಲ್ಲ. ಶ್ರೇಷ್ಠ, ನಿಕೃಷ್ಟ ಎನ್ನುವ ಮನೋಭಾವ ಎಷ್ಟೆ ಅವಘಡಗಳಿಗೆ ಕಾರಣವಾಗುತ್ತದೆ ಅಂತ ಮನಸ್ಸು ಪಿಚ್ಚೆನ್ನಿಸಿತು.

ಇವತ್ತಿಗೆ ರುವಾಂಡಾ ಆಫ್ರಿಕಾದ ನೆದರ್ಲ್ಯಾಂಡ್ ಎನ್ನಿಸಿಕೊಂಡಿದೆ. ಟೂರಿಸಂ ಚೆನ್ನಾಗಿದೆ. ಹುಟು, ಟುಟ್ಸಿಗಳು ಮತ್ತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೂ ಮನುಷ್ಯನ ಮನಸ್ಸು ಇಷ್ಟೇ ಎಂದು ಹೇಳಲಾಗದು. ಇಲ್ಲಿನ ಜನಾಂಗೀಯ ಸಮಸ್ಯೆ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡ. ನಾವು ಮನುಷ್ಯರು ಹೀಗೇಕೆ? ಸರಿ ತಪ್ಪುಗಳನ್ನ ವಿವೇಚನೆಯಿಂದ ಮಾತನಾಡಿ ಪರಿಹರಿಸಿಕೊಳ್ಳಲು ನಮಗೇಕೆ ಬರುವು ದಿಲ್ಲ? ಎಲ್ಲಕ್ಕೂ ಹೊಡೆದಾಟ, ಸಾವು ಪರಿಹಾರವೇ? ಜಗತ್ತು ಮಾತ್ರ ಇತಿಹಾಸದಿಂದ ಪಾಠ ಕಲಿಯುವ ಸೂಚನೆ ಕಾಣುತ್ತಿಲ್ಲ.

ಇವತ್ತಿನ ಭಾರತದಲ್ಲಿನ ಸನ್ನಿವೇಶಗಳನ್ನು ಕಂಡಾಗ ಮನಸ್ಸು ತಲ್ಲಣಗೊಳ್ಳುವುದು ಸುಳ್ಳಲ್ಲ. ಈ ನೆಲ ಆ ರೀತಿಯ ನೆತ್ತರು ನೋಡುವುದು ಮಾತ್ರ ಬೇಡ. ಸೌದಿ ಅರೇಬಿಯಾ ಎನ್ನುವ ಕಟ್ಟರ್ ಮುಸ್ಲಿಂ ದೇಶ ಬದಲಾಗುತ್ತಿದೆ. ಅಲ್ಲಿನ ಕ್ರೌನ್ ಪ್ರಿ ಮೊಹಮದ್ ಬಿನ್ ಸಲ್ಮಾನ್ ಕನಸು ಸೌದಿಯನ್ನ ಬದಲಾಯಿಸುವುದು. ಅದರಲ್ಲಿ ಇಂದಿಗೆ ‘ಕಚ್ಚಾತೈಲಾಧಾರಿತ ಇಕಾನಮಿ’ ಎನ್ನುವ ಹಣೆಪಟ್ಟಿ ಯನ್ನ ತೊರೆದು ಹೊರಬರುವುದು ಪ್ರಮುಖವಾಗಿದೆ.

ಎರಡನೆಯದಾಗಿ ಇಡೀ ಇಸ್ಲಾಂ ಜಗತ್ತಿಗೆ ಹೃದಯದ ಸ್ಥಾನವನ್ನ ಅಲಂಕರಿಸುವುದು, ಮೂರನೆಯ ದಾಗಿ ಜಾಗತಿಕ ಹೂಡಿಕೆದಾರರ ಪವರ್ ಹೌಸ್ ಎನ್ನಿಸಿಕೊಳ್ಳುವುದು. ಆಫ್-ಯುರೇಷ್ಯಾ ಬೆಸೆಯುವ ಕೊಂಡಿಯಂತೆ ಕೆಲಸ ನಿರ್ವಹಿಸುವುದು ಮತ್ತು ಜಗತ್ತಿನ ಅತ್ಯುತ್ತಮ ಟೂರಿ ಡೆಸ್ಟಿನೇಷನ್ ಆಗಿ ದೇಶವನ್ನ ಬದಲಾಯಿಸುವುದು ಪ್ರಮುಖವಾಗಿವೆ. ‌

ಸೌದಿ ತನ್ನ ಕಟ್ಟರ್ ನಿರ್ಬಂಧಗಳಿಂದ ಹೊರಬರುತ್ತಿದೆ. ಅದು ಜಗತ್ತಿಗೆ ತನ್ನನ್ನ ತಾನು ತೆರೆದು ಕೊಳ್ಳುತ್ತಿದೆ. ಈ ಬದಲಾವಣೆಗೆ ಕಾರಣವೇನು? ಸೌದಿಯ ಕಣ್ಣಿಗೆ ತನಗಿಂತ ಎಲ್ಲಾ ತರಹದಲ್ಲೂ ಕಡಿಮೆ ಎನ್ನಿಸುವ ದುಬೈ ಮತ್ತು ಕತಾರ್ ವಿಶ್ವದಲ್ಲಿ ಪಡೆದುಕೊಂಡಿರುವ ಸ್ಥಾನ ಹುಬ್ಬೇರುವಂತೆ ಮಾಡಿದೆ. ಸ್ವಲ್ಪ ಪ್ರಯತ್ನದಿಂದ ಜಾಗತಿಕವಾಗಿ ಆ ಎರಡೂ ದೇಶಗಳಿಗಿಂತ ತಾನು ಪ್ರಬಲನಾಗ ಬಹುದು ಎನ್ನುವ ಜ್ಞಾನೋದಯ ಅದ್ಕಕಾಗಿದೆ.

ಜಾಗತಿಕವಾಗಿ ಪೂರ್ಣ ಇಸ್ಲಾಂ ಜಗತ್ತಿಗೆ ನಾಯಕನಾಗಬೇಕು ಎನ್ನುವ ಆಸೆ ಸೌದಿಯಲ್ಲಿ ಚಿಗುರಿದೆ. ಇಂಥ ಬದಲಾವಣೆ 100 ಪ್ರತಿಶತ ಇಸ್ಲಾಮಿಕ್ ಆಚರಣೆಯಿಂದ ಆಗುವುದಲ್ಲ ಎನ್ನುವುದು ಕೂಡ ಅದಕ್ಕೆ ಗೊತ್ತಾಗಿದೆ. ಮೆಕ್ಕಾ ಮತ್ತು ಮದೀನಾದಂಥ ಅತ್ಯಂತ ಪವಿತ್ರ ಸ್ಥಳ ಮತ್ತು ಒಂದಷ್ಟು ಕಿಲೋಮೀಟರ್ ಜಾಗವನ್ನ ಮುಸ್ಲಿಮೇತರರು ಪ್ರವೇಶಿಸುವಂತಿಲ್ಲ ಎನ್ನುವುದನ್ನ ಕಡ್ಡಾಯ ಮಾಡಿ ಉಳಿದ ಕಡೆಯೆ ಎಲ್ಲರೂ ಸಂಚರಿಸಬಹುದು ಎನ್ನುವ ಮಟ್ಟಿಗೆ ಸೌದಿ ಬದಲಾಗಿದೆ, ಬದಲಾಗುತ್ತಿದೆ.

ಇನ್ನೊಂದು ಕಾರಣ ಜಗತ್ತು ಸದ್ದಿಲ್ಲದೇ ಕಚ್ಚಾತೈಲದ ಮೇಲಿನ ಅವಲಂಬನೆಯನ್ನ ನಿಧಾನವಾಗಿ ಕಡಿಮೆ ಮಾಡಿಕೊಳ್ಳುತ್ತಿದೆ. ಪರ್ಯಾಯ ಇಂಧನ ಮೂಲಕ್ಕೆ ಜಗತ್ತು ತೆರೆದುಕೊಳ್ಳುತ್ತಿದೆ. ಮಿಥೇನ್, ಇಲೆಕ್ಟ್ರಿಕ್, ಹೈಡ್ರೋಜನ್ ಹೀಗೆ ಬೇರೆ ಬೇರೆ ಇಂಧನ ಮೂಲಗಳನ್ನ ಜಗತ್ತು ಅಪ್ಪಿಕೊಳ್ಳುತ್ತಿದೆ. ಸಹಜವಾಗೇ ಇನ್ನೊಂದು ದಶಕದಲ್ಲಿ ಜಗತ್ತು ಇಂದಿನ ಕಚ್ಚಾತೈಲದ ಮೇಲಿನ ಅವಲಂಬನೆಯನ್ನ ಬಹಳಷ್ಟು ಕಡಿಮೆ ಮಾಡಿಕೊಳ್ಳುತ್ತದೆ.

ಜಾಗತಿಕ ಆಟದಲ್ಲಿ ಸೌದಿಯ ತಾಕತ್ತು ಖಂಡಿತ ಕುಸಿಯುತ್ತದೆ. ಜಗತ್ತಿನಲ್ಲಿ ತನ್ನ ಸ್ಥಾನವನ್ನ ಉಳಿಸಿ ಕೊಳ್ಳುವುದು ಮಾತ್ರವಲ್ಲ, ಇನ್ನಷ್ಟು ಬಲವನ್ನ ಹೆಚ್ಚಿಸಿಕೊಳ್ಳುವುದು ಸೌದಿಗೆ ಇಂದು ಆಯ್ಕೆಯಾಗಿ ಉಳಿದಿಲ್ಲ, ಅದು ಮಾಡಲೇಬೇಕಾದ ಕೆಲಸವಾಗಿದೆ. ಸರಿ, ಇಷ್ಟೆ ಬದಲಾವಣೆಗಳು ವಿಶ್ವದಲ್ಲಿ ಆಗುವಾಗ ತನ್ನಲ್ಲಿ ಬದಲಾವಣೆ ಅವಶ್ಯಕತೆ ಇದೆ ಎಂದು ಮನಗಂಡು ‘ವಿಷನ್-2030’ ಎನ್ನುವ ಕಾರ್ಯಸೂಚಿಯನ್ನ ಸೌದಿ ಹಾಕಿಕೊಂಡಿದೆ.

ಸೌದಿ 2030ರ ವೇಳೆಗೆ ಅಮೂಲಾಗ್ರವಾದ ಬದಲಾವಣೆಯನ್ನ ಕಾಣಲಿದೆ. 2030ರ ವೇಳೆಗೆ 7 ಮೆಗಾ ಪ್ರಾಜೆPಗಳನ್ನ ಮುಗಿಸಲು ಅದು ಕೆಲಸವನ್ನ ಮಾಡುತ್ತಿದೆ. ದಿ ಲೈನ್, ಟ್ರೋಜೆನ್, ಸಿಂದಲಹ್, ಒಕ್ಸಾಗೊನ್, ಅಮಲಾ, ದಿ ರೆಡ್ ಸೀ ಪ್ರಾಜೆಕ್ಟ್, ದಿರಿಯಾಹ್ ಗೇಟ್ ಎನ್ನುವ 7 ಪ್ರಾಜೆಕ್ಟ್‌ಗಳ ಮೇಲೆ ಕೆಲಸ ಮಾಡುತ್ತಿದೆ. ಒಕ್ಸಾಗೊನ್ ಎನ್ನುವುದು ಜಗತ್ತಿನ ಅತಿ ದೊಡ್ಡ ಫ್ಲೋಟಿಂಗ್ (ತೇಲಾಡುವ ) ‌ನಗರವಾಗಿರಲಿದೆ.

ಇಲ್ಲಿನ ಹೊಣೆಯನ್ನ ಹೊತ್ತಿರುವ ಅಧಿಕಾರಿಗಳು ಹೇಳುವ ಪ್ರಕಾರ ಇದು ಅಮೆರಿಕ ದೇಶದ ನ್ಯೂಯಾರ್ಕ್ ನಗರಕ್ಕಿಂತ 33 ಪಟ್ಟು ದೊಡ್ಡದಾಗಿರಲಿದೆ ಮತ್ತು ಅರ್ಧ ನಗರ ನೀರಿನಲ್ಲಿ ತೇಲು ವಂತಿರುತ್ತದೆ. ಜನವರಿ 2021ರಲ್ಲಿ ಶುರುಮಾಡಿರುವ ಈ ಕಾರ್ಯ 2030ರಲ್ಲಿ ಮುಗಿಯುವ ಸಂಭಾವ್ಯತೆ ಕೂಡ ಹೆಚ್ಚಾಗಿದೆ.

ದಿರಿಯಾಹ್ ಗೇಟ್ ಎನ್ನುವುದು ಸೌದಿಯ ಹೆರಿಟೇಜ್ ಬಿಂಬಿಸುವ ಯುನೆಸ್ಕೋ ಮಾನ್ಯತೆ ಪಡೆದಿರುವ ಸ್ಥಳಗಳನ್ನ ಹೋಲುವಂಥದು; ಅಲ್ಲಿಂದ ಪ್ರೇರಣೆ ಪಡೆದು ಇದನ್ನು ಹೊಸದಾಗಿ ನಿರ್ಮಿಸಲು ಅಣಿಯಾಗುತ್ತಿದ್ದಾರೆ. ಸೌದಿಯ ಚರಿತ್ರೆಯನ್ನ ಹೇಳುವ ನೂರು ಕಥೆ, ಥೀಮ್‌ಗಳ ಸುತ್ತ ಈ ನಗರವನ್ನ ನಿರ್ಮಿಸಲಾಗುತ್ತಿದೆ.

ಅಮಲಾ ಎನ್ನುವ ಪ್ರಾಜೆಕ್ಟ್‌ ನಲ್ಲಿ ಸರಿಸುಮಾರು 3 ಸಾವಿರ ಹೋಟೆಲ್ ರೂಮ್, 900 ಐಷಾರಾಮಿ ವಿಗಳು, ಅಪಾರ್ಟ್‌ ಮೆಂಟ್ ಮತ್ತು ಎಸ್ಟೇಟ್ ಹೋಮ್‌ಗಳನ್ನ ಕಟ್ಟಲಾಗುತ್ತದೆ. ಇದರಲ್ಲಿ 1300 ರೂಮುಗಳು 2024ರ ಮಧ್ಯದಲ್ಲಿ ಸಿದ್ಧವಾಗುತ್ತವೆ, 2027ರ ವೇಳೆಗೆ ಇವು ಜಗತ್ತಿಗೆ ತೆರೆದುಕೊಳ್ಳಲಿವೆ.

ಒಟ್ಟಾರೆ ಸೌದಿ 2030ಕ್ಕೆ ಹೊಸ ರೂಪವನ್ನ ಪಡೆದುಕೊಳ್ಳಲಿದೆ. ಜಗತ್ತಿನ ಜನರನ್ನ ಟೂರಿಸಂಗೆ ಕೈ ಬೀಸಿ ಕರೆಯಲಿದೆ. ಅದು ಹೂಡಿಕೆದಾರರಿಗೆ, ಹೊಸ ಉದ್ದಿಮೆಗಳನ್ನ ತೆರೆಯುವರಿಗೆ, ಹೊಸ ಅವಕಾಶವನ್ನ ನೀಡುತ್ತಿದೆ. ಧರ್ಮವನ್ನ ತನ್ನ ಒಡಲಲ್ಲಿ ಇಟ್ಟುಕೊಂಡು, ಅದನ್ನೂ ಪೋಷಿಸುತ್ತಾ ಜಗತ್ತಿಗೆ ತೆರೆದುಕೊಳ್ಳುವ ಸಾಹಸವನ್ನ ಸೌದಿ ಮಾಡುತ್ತಿದೆ.

ಕೆಲವೊಂದು ಪ್ರಾಜೆಕ್ಟ್‌ ಗಳು 2016ರಿಂದಲೇ ಕಾರ್ಯ ಆರಂಭಿಸಿವೆ. ಹೊಸ ಕನಸಿನೊಂದಿಗೆ, ಹೊಸ ಹುರುಪಿನೊಂದಿಗೆ, ಹೊಸ ಜಗತ್ತಿಗೆ ಸೌದಿ ತೆರೆದುಕೊಳ್ಳುತ್ತಿದೆ. ಸೌದಿ ತನ್ನ ಕಾರ್ಯದಲ್ಲಿ ಯಶಸ್ಸು ಕಾಣಲಿದೆ. ಅದಕ್ಕೆ ಬೇಕಾದ ಸಿದ್ಧತೆ ಮತ್ತು ಬದ್ಧತೆ ಅದಾಗಲೇ ಮುಕ್ಕಾಲು ಪಾಲು ಮುಗಿಯಲು ಬಂದ ಯೋಜನೆಗಳಲ್ಲಿ ಕಾಣಿಸುತ್ತಿದೆ.

ಕಟ್ಟರ್ ಮನಸ್ಥಿಯಿಂದ ಹೊರಬಂದು ಈ ಎರಡೂ ದೇಶಗಳೂ ಜಗತ್ತಿಗೆ ತೆರೆದುಕೊಂಡ ರೀತಿ ಅಚ್ಚರಿದಾಯಕ. ನಮಗೂ ಮಾದರಿ. ನಾವು? ಭಾರತೀಯರು, ನಮಗೆ ಕನಸು ಬೇಡವೇ? ನಾವು ಮಾತ್ರ ಹಿಂದಕ್ಕೆ ಚಲಿಸುತ್ತಿದ್ದೇವೆ ಎನ್ನಿಸುತ್ತದೆ. ಎಲ್ಲದಕ್ಕೂ ಪರ-ವಿರೋಧ, ಎಲ್ಲರೂ ಮನಸ್ಸಿಗೆ ಬಂದದ್ದ ಹೇಳುವವರೇ, ದೇಶದ ವಿರುದ್ಧ, ದೇಶದ ಅಭಿವೃದ್ಧಿ ಕಾರ್ಯಗಳು, ಸಾಧನೆಯನ್ನ ಕೂಡ ಲೇವಡಿ ಮಾಡುವ ನಾಗರಿಕರಿರುವವರೆಗೆ ಕಂಡ ಕನಸುಗಳು ನನಸಾಗುವುದಾದರೂ ಹೇಗೆ? ಕೊನೆ ಪಕ್ಷ 2030ರ ವೇಳೆಗೆ ನಾವು ಹೇಗಿರಬೇಕು ಎನ್ನುವ ಸಣ್ಣ ಆಲೋಚನೆಯಾದರೂ ನಮ್ಮಲಿರ ಬೇಕು.

ಭಾರತ ಕೂಡ 2030ರ ವೇಳೆಗೆ ಇಂದಿಗಿಂತ ಬಲಶಾಲಿ ರಾಷ್ಟ್ರವಾಗಿರುತ್ತದೆ. ಅದರಲ್ಲಿ ಸಂಶಯ ವಿಲ್ಲ. ಆದರೆ ಜನರ ಕಣ್ಣಲ್ಲಿ ಕನಸು, ನನ್ನದು ಎನ್ನುವ ಭಾವನೆ ಬಾರದೆ ಹೋದರೆ, ನನ್ನ ದೇಶ ಎನ್ನುವ ಗರ್ವ ಬಾರದೆ ಹೋದರೆ, ಎಲ್ಲವೂ ಇದ್ದೂ ಏನೂ ಇಲ್ಲದಂತೆಯೇ ಸರಿ. ನಾಗರಿಕರಲ್ಲಿ ‘ಸೆಲ್ಫ್ ಪ್ರೈಡ್’ ಬೆಳೆಸುವ ಕೆಲಸ ಜರೂರಾಗಿ ಆಗಲೇಬೇಕಾಗಿದೆ.

ರಂಗಸ್ವಾಮಿ ಎಂ

View all posts by this author