Vishweshwar Bhat Column: ಕೆಲವೊಮ್ಮೆ ಅಗೋಚರವಾಗಿರುವುದೇ ಲೇಸು !
‘ಶ್ರೀಕೃಷ್ಣ ಪರಮಾತ್ಮ ನಾನು ಅಂದುಕೊಂಡಷ್ಟು ಸುಂದರವಾಗಿಲ್ಲ. ಬಹಳ ಕಪ್ಪಿದ್ದಾನೆ. ಅವನ ಕೈಯಲ್ಲಿ ಕೊಳಲು ಇರಲಿಲ್ಲ. ಆತ ತನ್ನ ತಲೆಯಲ್ಲಿ ನವಿಲು ಗರಿ ಸಿಕ್ಕಿಸಿಕೊಂಡಿರಲಿಲ್ಲ. ಅವನ ಬಗ್ಗೆ ನನ್ನ ಕಲ್ಪನೆಯೇ ಬೇರೆಯಾಗಿತ್ತು. ನಾನು ಕಲ್ಪಿಸಿಕೊಂಡ ಶ್ರೀಕೃಷ್ಣ ಪರಮಾತ್ಮನೇ ಬೇರೆ, ನಾನು ಭೇಟಿಯಾದಾಗ ಕಂಡ ಶ್ರೀಕೃಷ್ಣನೇ ಬೇರೆ.
-
ವಿಶ್ವೇಶ್ವರ ಭಟ್
Nov 6, 2025 7:29 AM
ನೂರೆಂಟು ವಿಶ್ವ
ಕೆಲವು ವರ್ಷದ ಹಿಂದೆ ನಮ್ಮ ಪತ್ರಿಕೆಯ ಅಂಕಣಕಾರ, ಅಮೆರಿಕ ನಿವಾಸಿ ಶ್ರೀವತ್ಸ ಜೋಶಿ ಅವರ ಬರಹಗಳ ಅಭಿಮಾನಿಯಾದ ಓದುಗರೊಬ್ಬರು ಫೋನ್ ಮಾಡಿ, ಅವರ ಅಂಕಣ ವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಆ ಸಂದರ್ಭದಲ್ಲಿ ಜೋಶಿ ಅವರು ಬೆಂಗಳೂರಿ ನಲ್ಲಿಯೇ ಇದ್ದರು. ಅಲ್ಲದೇ ಆಗ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಹ ಆಯೋಜಿತ ವಾಗಿತ್ತು.
‘ನೀವು ಆ ಕಾರ್ಯಕ್ರಮಕ್ಕೆ ಆಗಮಿಸಿದರೆ ಅವರನ್ನು ಭೇಟಿ ಮಾಡಬಹುದು. ನಿಮಗೆ ಅವರನ್ನು ಪರಿಚಯಿಸುತ್ತೇನೆ, ಬನ್ನಿ’ ಎಂದು ಆಮಂತ್ರಿಸಿದೆ. ಅವರು ಹೂಂ ಅಥವಾ ಹಾಂ ಎನ್ನಲಿಲ್ಲ. ಕಾರ್ಯಕ್ರಮಕ್ಕೂ ಬರಲಿಲ್ಲ. ನಾನು ಅಲ್ಲಿಗೆ ಸುಮ್ಮನಾದೆ. ಬಳಿಕ ನನಗೆ ಅವರು ಪುನಃ ಫೋನ್ ಮಾಡಿ, ಜೋಶಿ ಬರೆದ ಅಂಕಣದ ಬಗ್ಗೆ ಪ್ರಸ್ತಾಪಿಸುತ್ತಾ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಆಗ ನಾನು,‘ನೀವು ಹೆಚ್ಚು ಕಮ್ಮಿ ಪ್ರತಿವಾರವೂ ಅವರ ಅಂಕಣ ಬರಹಗಳನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದೀರಿ. ಬಹಳ ಸಂತೋಷ. ಒಂದು ಕೆಲಸ ಮಾಡಿ, ನಾನು ನಿಮಗೆ ಅವರ ಫೋನ್ ನಂಬರ್ ಕೊಡ್ತೇನೆ. ನೀವೇ ಅವರಿಗೆ ಫೋನ್ ಮಾಡಿ, ನಿಮ್ಮ ಮೆಚ್ಚುಗೆ ತಿಳಿಸಿ.
ಜೋಶಿ ಅವರಿಗೆ ಇದರಿಂದ ಹೆಚ್ಚು ಖುಷಿ ಆಗುತ್ತದೆ. ನೀವು ಕರೆ ಮಾಡಿದರೆ ಅವರು ಮಾತಾಡುತ್ತಾರೆ. ಆದರೆ, ಇಲ್ಲಿಗೂ ಅಲ್ಲಿಗೂ ಹನ್ನೊಂದು ತಾಸು ಸಮಯ ವ್ಯತ್ಯಾಸವಿರು ತ್ತದೆ ಎಂಬುದು ತಿಳಿದು ಫೋನ್ ಮಾಡಿ. ಇಲ್ಲವೇ ಅವರಿಗೆ ಮೆಸೇಜ್ ಮಾಡಿ. ಅದಕ್ಕೂ ಅವರು ಪ್ರತಿಕ್ರಿಯಿಸುತ್ತಾರೆ.
ಇದನ್ನೂ ಓದಿ: Vishweshwar Bhat Column: ಇಸ್ರೇಲ್ ಮತ್ತು ಇಸ್ರೇಲಿಗರ ಕುರಿತ ಹತ್ತು ತಪ್ಪು ಕಲ್ಪನೆಗಳು
ಅಮೆರಿಕದಲ್ಲಿದ್ದರೂ ಇಲ್ಲಿನ, ಅಲ್ಲಿನ ಓದುಗರ ಜತೆ ಸದಾ ಸಂಪರ್ಕದಲ್ಲಿರುವ ಏಕೈಕ ಕನ್ನಡಿಗ ಎಂಬ ‘ಕುಖ್ಯಾತಿ’ ಪಡೆದಿದ್ದಾರೆ. ಅವರ ನಂಬರ್ ಕೊಡಲಾ?’ ಎಂದು ಕೇಳಿದೆ. ಅದಕ್ಕೆ ಅವರು ‘ಆಗಬಹುದು, ಕೊಡಿ’ ಎಂದು ಹೇಳಬಹುದು ಎಂದು ನಿರೀಕ್ಷಿಸಿದ್ದ ನನಗೆ ಸಣ್ಣ ಅಸಮಾಧಾನವಾಯಿತು.
‘ಸಾರ್, ಅವರ ನಂಬರ್ ಬೇಡ ಬೇಡ. ಅವರನ್ನು ಭೇಟಿ ಮಾಡುವ ಮನಸ್ಸಿದ್ದಿದ್ದರೆ, ಬೆಂಗಳೂರಿನಲ್ಲಿಯೇ ನಡೆದ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನಾನು ಬರುತ್ತಿದ್ದೆ. ಅವರನ್ನು ಭೇಟಿ ಮಾಡುತ್ತಿದ್ದೆ. ನಾನು ಅವರ ದೊಡ್ಡ ಅಭಿಮಾನಿ ನಿಜ, ಆದರೆ, ನನಗೆ ಅವರನ್ನು ಭೇಟಿ ಮಾಡುವ ಮನಸ್ಸಿಲ್ಲ’ ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಇಂಥ ‘ಅಭಿಮಾನಿ ದೇವರು’ ಅದೇ ಮೊದಲ ಬಾರಿಗೆ ನನ್ನ ಅನುಭವಕ್ಕೆ ಬಂದಿದ್ದು!
ನಾನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ಅ, ಜೋಶಿ ಅವರ ಬರಹಗಳನ್ನು ಅಷ್ಟು ಇಷ್ಟ ಪಡುತ್ತೀರಿ. ಅವರ ದೊಡ್ಡ ಅಭಿಮಾನಿ ಅಂತೀರಿ. ಅವರನ್ನು ಭೇಟಿ ಆಗಬೇಕು, ಮಾತನಾಡ ಬೇಕು ಎಂದು ನಿಮಗೆ ಅನಿಸುವುದಿಲ್ಲವೇ?’ ಎಂದು ಕೇಳಿದೆ. ಅದಕ್ಕೆ ಅವರು ನಿರ್ದಾಕ್ಷಿಣ್ಯ ವಾಗಿ ‘ಇಲ್ಲ’ ಎಂದರು.
ನನಗೆ ಸಣ್ಣ ಸೋಜಿಗವಾಯಿತು. ಅದಕ್ಕೆ ಅವರು ಹೇಳಿದರು - ‘ನಿಜ, ನಾನು ಅವರ ಬರಹಗಳ ದೊಡ್ಡ ಅಭಿಮಾನಿ. ಒಬ್ಬ ಓದುಗನಾಗಿ ಜೋಶಿ ಅವರ ಬಗ್ಗೆ ನಾನು ಬಹಳ ಕಲ್ಪನೆಗಳನ್ನು ಇಟ್ಟುಕೊಂಡಿದ್ದೇನೆ. ಅವರನ್ನು ನನ್ನಿಷ್ಟದಂತೆ ನನ್ನ ಮನಸ್ಸಿನಲ್ಲಿ ಚಿತ್ರಿಸಿಕೊಂಡಿದ್ದೇನೆ. ಅವರನ್ನು ಭೇಟಿಯಾದರೆ, ನಾನು ಈಗ ಕಲ್ಪಿಸಿಕೊಂಡ ಚಿತ್ರಿಕೆಗಳು ಘಾಸಿಯಾಗಬಹುದು.
ನನ್ನ ಕಲ್ಪನೆಗಳು ವ್ಯತ್ಯಯ ಆಗಬಹುದು. ಆಗ ನನಗೆ ಭ್ರಮನಿರಸನ ಆಗಬಹುದು. ಹೀಗಾಗಿ ನನಗೆ ಭೇಟಿ ಆಗಲು ಮನಸ್ಸಿಲ್ಲ. ನಾನು ಚಿತ್ರಿಸಿಕೊಂಡ ಕಲ್ಪನೆಗಳು ನನ್ನ ಮನಸ್ಸಿನಲ್ಲಿ ಸುಕ್ಕಾಗದಂತೆ ಭದ್ರವಾಗಿರಲಿ.’
ಹೌದಲ್ಲವಾ? ಅವರು ಹೇಳುತ್ತಿರುವುದು ಎಷ್ಟು ನಿಜ ಎಂದು ನನಗನಿಸಿತು. ಒಬ್ಬ ಅಭಿಮಾನಿಯಾಗಿ ನಮಗೆ ಇಷ್ಟವಾದ ನಟರು, ನಟಿಯರು, ನಾಯಕರು, ಬರಹಗಾರರು, ಸಾಹಿತಿಗಳು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಹೀಗೆ ಯಾರನ್ನೇ ಆಗಲಿ, ಭೇಟಿ ಮಾಡಿದ ನಂತರ ನಮ್ಮ ಅಭಿಮಾನ ಸ್ವಲ್ಪ ಕಡಿಮೆ ಆಗುವುದಂತೆ. ನಾವು ಅವರ ಬಗ್ಗೆ ಅಂದುಕೊಂಡಿದ್ದಕ್ಕಿಂತ ಅವರು ಸ್ವಲ್ಪ ಕಡಿಮೆಯಾಗಿ ತೋರುತ್ತಾರಂತೆ. ಅಂದರೆ ನಾವು ಅವರು ಇರುವುದಕ್ಕಿಂತ ಹೆಚ್ಚಾಗಿ ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಕೆತ್ತಿಕೊಂಡಿರುತ್ತೇವೆ.
ಇದರಿಂದ ಸಹಜವಾಗಿ ಭ್ರಮನಿರಸ ಆಗುತ್ತದೆ. ಈ ಕಾರಣದಿಂದ ಜೋಶಿ ಅವರ ಜತೆ ಮಾತನಾಡಲು ಅವರು ಬಯಸದಿರುವುದು ಒಂದು ರೀತಿಯಿಂದ ‘ಅತಿ ಕಾಳಜಿಯ ಅಭಿಮಾನ’ ಎಂದೆನಿಸಿತು.
ನನಗೆ ಆಗ ನನ್ನ ಮನಸ್ಸಿನಲ್ಲಿ ಒಮ್ಮೆ ವಿಜಯ ಸಂಕೇಶ್ವರ ಅವರು ಹೇಳಿದ ಒಂದು ಪ್ರಸಂಗ ನೆನಪಿಗೆ ಬಂದಿತು. ಸಂಕೇಶ್ವರ ಅವರಿಗೆ ‘ತರಂಗ’ ಪತ್ರಿಕೆಯ ಸಂಪಾದಕರಾಗಿದ್ದ ಸಂತೋಷ ಕುಮಾರ ಗುಲ್ವಾಡಿ ಅವರ ಬಗ್ಗೆ ಎಲ್ಲಿಲ್ಲದ ಅಭಿಮಾನ. ತಾನು ಅವರ ಅಭಿಮಾನಿ ಎಂದು ಅವರು ಹೇಳಿಕೊಳ್ಳುತ್ತಿದ್ದರಂತೆ.
ಜೀವನದಲ್ಲಿ ಒಂದು ಸಲವಾದರೂ, ಗುಲ್ವಾಡಿ ಅವರ ಜತೆ ಕುಳಿತು, ಅರ್ಧ ಗಂಟೆ ಕಾಫಿ ಕುಡಿಯುತ್ತಾ, ಹರಟೆ ಹೊಡೆಯಬೇಕು ಎಂಬುದು ಅವರ ಆಸೆಯಾಗಿತ್ತಂತೆ. ಅಂಥ ಅಭಿಮಾನ! ಸಂಕೇಶ್ವರರು ‘ವಿಜಯ ಕರ್ನಾಟಕ’ ಪತ್ರಿಕೆ ಆರಂಭಿಸಿದಾಗ, ಪತ್ರಿಕೋದ್ಯಮದ ತಮ್ಮ ಆರಾಧ್ಯ ದೈವ ಗುಲ್ವಾಡಿ ಅವರ ಮೇಲಿನ ಅಭಿಮಾನದಿಂದಲೇ, ‘ನೂತನ’ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು.
ಅದಕ್ಕೆ ಗುಲ್ವಾಡಿ ಅವರನ್ನು ಸಂಪಾದಕರನ್ನಾಗಿ ನೇಮಿಸಿದರು. ಅದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ಒಂದು ಕಾಲದಲ್ಲಿ ತಾವು ಯಾರನ್ನು ಇಷ್ಟಪಡುತ್ತಿದ್ದಾನೋ ಅಂಥವರು ತಮ್ಮ ಪತ್ರಿಕೆಯ ಸಂಪಾದಕರಾಗುವುದು ಯಾರಿಗೆ ಅಗ್ಗಳಿಕೆಯ, ಹೆಚ್ಚುಗಾರಿಕೆಯ ಸಂಗತಿ ಅಲ್ಲ? ಆದರೆ, ಗುಲ್ವಾಡಿ ಅವರ ಬಗ್ಗೆ ಇದ್ದ ಅಭಿಮಾನ ನಿಧಾನವಾಗಿ ಕರಗಲಾರಂಭಿಸಿತು.
ಪ್ರತಿ ಭೇಟಿಯ ನಂತರ ಅವರಿಗೆ ಭ್ರಮನಿರಸನವಾಗಲಾರಂಭಿಸಿತು. ಗುಲ್ವಾಡಿ ಎಂಬ ಅಭಿಮಾನದ ಗುಳ್ಳೆಗಳು ಕ್ರಮೇಣ ಒಡೆಯಲಾರಂಭಿಸಿದವು. ತಮ್ಮ ಮನಸ್ಸಿನಲ್ಲಿ ಮೂಡಿಸಿ ಕೊಂಡಿದ್ದ ಚಿತ್ರಿಕೆಗಳು ಭಗ್ನವಾಗತೊಡಗಿದವು. ಕೊನೆಗೆ ಎಂಥ ಸ್ಥಿತಿ ಬಂತೆಂದರೆ, ಗುಲ್ವಾಡಿಯವರನ್ನು ಮನೆಗೆ ಕಳಿಸಲು ಸಂಕೇಶ್ವರರು ಒಂದು ಉಪಾಯ ಮಾಡಿದರು.
‘ನೂತನ’ ವಾರಪತ್ರಿಕೆಯನ್ನು ನಿಲ್ಲಿಸುವ ಮನಸ್ಸು ಮಾಡಿದರು. ಅಲ್ಲಿಗೆ ಅವರ ಅಭಿಮಾನದ ಮುಕುಟಮಣಿ ಕುಸಿದುಬಿದ್ದಿತ್ತು. ಒಂದು ವೇಳೆ ಅವರನ್ನು ಭೇಟಿ ಮಾಡದಿದ್ದರೆ, ಅವರ ಜತೆ ಕುಳಿತು ಅರ್ಧ ಗಂಟೆ ಕಾಫಿ ಕುಡಿಯದಿದ್ದರೆ, ‘ನೂತನ’ ಪತ್ರಿಕೆ ಆರಂಭಿಸಿರದಿದ್ದರೆ, ಗುಲ್ವಾಡಿ ಎಂಬ ‘ಅಭಿಮಾನದ ವಿಗ್ರಹ’ಕ್ಕೆ ಸದಾ ಆರತಿ ಬೆಳಗುತ್ತಾ ಇರುತ್ತಿದ್ದರೇನೋ?!
ನಾವು ದೂರದಿಂದಲೇ ಇಷ್ಟಪಡುವ, ಮನದ ಆರಾಧಿಸುವವರನ್ನು ಭೇಟಿ ಮಾಡಿದ ನಂತರ ಅವರ ಬಗ್ಗೆ ನಮ್ಮ ಅಭಿಪ್ರಾಯ ಸ್ವಲ್ಪವಾದರೂ ಬದಲಾಗುತ್ತದೆ ಅಥವಾ ಮುಕ್ಕಾಗುತ್ತದೆ. ದಿನವೂ ನಾವು ಪೂಜಿಸುವ ಆ ಭಗವಂತನೇ ಸಾಕ್ಷಾತ್ ನಮ್ಮ ಎದುರೇ ಬಂದರೂ, ಅವನ ಬಗ್ಗೆ ನಮ್ಮ ಅಭಿಪ್ರಾಯ ಬದಲಾಗಬಹುದು.
‘ಶ್ರೀಕೃಷ್ಣ ಪರಮಾತ್ಮ ನಾನು ಅಂದುಕೊಂಡಷ್ಟು ಸುಂದರವಾಗಿಲ್ಲ. ಬಹಳ ಕಪ್ಪಿದ್ದಾನೆ. ಅವನ ಕೈಯಲ್ಲಿ ಕೊಳಲು ಇರಲಿಲ್ಲ. ಆತ ತನ್ನ ತಲೆಯಲ್ಲಿ ನವಿಲು ಗರಿ ಸಿಕ್ಕಿಸಿ ಕೊಂಡಿರ ಲಿಲ್ಲ. ಅವನ ಬಗ್ಗೆ ನನ್ನ ಕಲ್ಪನೆಯೇ ಬೇರೆಯಾಗಿತ್ತು. ನಾನು ಕಲ್ಪಿಸಿಕೊಂಡ ಶ್ರೀಕೃಷ್ಣ ಪರಮಾತ್ಮನೇ ಬೇರೆ, ನಾನು ಭೇಟಿಯಾದಾಗ ಕಂಡ ಶ್ರೀಕೃಷ್ಣನೇ ಬೇರೆ.
ಇಷ್ಟು ದಿನ ನಾನು ಭಕ್ತಿಯಿಂದ ಪೂಜಿಸಿದ, ಆರಾಧಿಸಿದ ಶ್ರೀಕೃಷ್ಣ ಇವನೇನಾ ಎಂದು ಅನಿಸಿತು, ಯಾಕೋ ನಾನು ಅವನನ್ನು ಭೇಟಿ ಮಾಡದೆ ಇದ್ದರೇ ಒಳ್ಳೆಯದಿತ್ತೇನೋ?’ ಎಂಬ ಭಾವನೆ ಮನಸ್ಸಿನಲ್ಲಿ ಆವರಿಸಿದರೆ ಅಚ್ಚರಿ ಇಲ್ಲ.
ನರಹಂತಕ, ದಂತಚೋರ ವೀರಪ್ಪನ್ ಬಗ್ಗೆ ಕೂಡ ಇದೇ ಮಾತನ್ನು ಹೇಳಬಹುದು. ಮೊದಲು ಆತನನ್ನು ಯಾರೂ ನೋಡದೇ ಇದ್ದರಿಂದ ಅವನ ಬಗ್ಗೆ ಹಲವಾರು ದಂತಕತೆ ಗಳು ಹುಟ್ಟಿಕೊಂಡವು. ವೀರಪ್ಪನ್ ಕತೆ ಹೇಳಿದರೆ ಮನೆಯಲ್ಲಿ ಮಕ್ಕಳು ಭಯಪಡು ತ್ತಿದ್ದರು. ಆದರೆ, ಯಾವಾಗ ಅವನ ಪೀಚು ಶರೀರ ನೋಡಿದ ಮೇಲೆ ಇವನು ಇಷ್ಟೇನಾ ಎಂದು ಎಲ್ಲರಿಗೂ ಅನಿಸಲಾರಂಭಿಸಿತು.
ಇಷ್ಟು ದಿನ ಎರಡೂ ರಾಜ್ಯಗಳ ಸರಕಾರಗಳಿಗೆ ಸಿಂಹಸಪ್ನನಾಗಿದ್ದ ವ್ಯಕ್ತಿ ಇದೇ ಪೀಚು ಶರೀರವಾ ಎಂದು ಎಲ್ಲರೂ ಅಂದುಕೊಂಡರು. ನಮ್ಮ ಮನಸ್ಸಿನಲ್ಲಿ ದಾವೂದ್ ಇಬ್ರಾಹಿಂ ಬಗ್ಗೆ ಭಯಂಕರ ವಾದ ಇಮೇಜ್ ಇದೆ. ಆತ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ, ಪಾಕಿಸ್ತಾನದಲ್ಲಿಯೇ ಕುಳಿತು ಇಡೀ ಮುಂಬೈ ನಗರವನ್ನು ನಿಯಂತ್ರಿಸುವ ಭೂಗತ ಲೋಕದ ಪಾತಕಿ, ತನ್ನ ಕಾರ್ಯಸಾಧನೆಗೆ ರಾಜಕಾರಣಿಗಳನ್ನು ಸಾಕಿಕೊಂಡಿರುವ ಚಾಣಾಕ್ಷ, ಭಾರತ ಸರಕಾರ ಕಾಲು ಶತಮಾನದಿಂದ ಪ್ರಯತ್ನಿಸುತ್ತಿದ್ದರೂ, ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಭೂಗತ ದೊರೆ... ಇತ್ಯಾದಿ ಇಮೇಜುಗಳು ಅವನ ಬಗ್ಗೆ ಇದೆ.
ದಾವೂದ್ ಹೆಸರಿನಲ್ಲಿ ಫೋನ್ ಬಂದರೆ ಎಂಥವರಾದರೂ ನಡುಗುತ್ತಾರೆ. ಇದಕ್ಕೆ ಕಾರಣ ದಾವೂದ್ ಇಬ್ರಾಹಿಂನನ್ನ ಯಾರೂ ನೋಡದೇ ಇರುವುದು. ಆತ ಯಾರ ಕಣ್ಣಿಗೂ ಬೀಳದೇ ಇರುವುದು. ಒಂದು ವೇಳೆ ಆತನನ್ನ ನೀವು ಭೇಟಿ ಮಾಡಿದರೆ, ಅವನ ಹೆಗಲ ಮೇಲೆ ಕೈಹಾಕಿ ಸೆಲಿ ತೆಗೆಸಿಕೊಂಡರೆ, ಇದೇ ರೀತಿ ಇತರರಿಗೂ ಆತನ ಭೇಟಿ ಸಾಧ್ಯವಾದರೆ, ಅವನಿಗೆ ಯಾರೂ ಕಿಮ್ಮತ್ತು ಕೊಡುವುದಿಲ್ಲ.
ನಾನೇನೋ ದಾವೂದ್ ಅಂದರೆ ಆರಡಿ ಎತ್ತರದ ಕಟ್ಟುಮಸ್ತಾದ ವ್ಯಕ್ತಿ ಅಂದುಕೊಂಡಿದ್ದೆ, ನೋಡಿದರೆ ಫೋರ್ ಅಂಡ್ ಹಾಫ್ ಇದ್ದಾನೆ, ಇವನ ಬಗ್ಗೆನಾ ನಾನು ಇಷ್ಟೆ ಹೆದರಿದ್ದು ಎಂದೆನಿಸುತ್ತದೆ. ದಾವೂದ್ ಹೆಸರಿನಲ್ಲಿ ಫೊನ್ ಬಂದರೆ ಸಾಕು, ಗಡಗಡ ನಡುಗುತ್ತಿದ್ದ ವರು, ‘ಕಂಡಿದೀನಿ... ಇಡಯ್ಯ’ ಎಂದು ಹೇಳಲು ಆರಂಭಿಸುತ್ತಾರೆ.
ದಾವೂದ್ ತಾಕತ್ತು ಇರುವುದು ಅವನು ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ ಇರುವುದರಲ್ಲಿ. ಯಾರನ್ನೂ ಭೇಟಿಯಾಗದೇ ಇರುವುದರಲ್ಲಿ. ಆತ ಎಲ್ಲರಿಗೂ ಸಿಗುತ್ತಾನೆ ಅಂತಾದರೆ ಅವನ ಬಗ್ಗೆ ಯಾರೂ ಹೆದರುವುದಿಲ್ಲ. ಆತ ನಮ್ಮ ಮುತ್ತಪ್ಪ ರೈ ಥರ ಆಗಿ ಬಿಡುತ್ತಾನೆ. ಮುತ್ತಪ್ಪ ರೈ ಭೂಗತ ಲೋಕದ ನಂಟು ಮತ್ತು ಅಂಟನ್ನು ಬಿಡಿಸಿಕೊಳ್ಳುವ ತನಕ, ಅವರ ಬಗ್ಗೆ ಒಂದು ರೀತಿಯ ಭಯ ಇತ್ತು. ಅವರು ಯಾವಾಗ ಜನರೊಂದಿಗೆ ಬೆರೆಯಲಾರಂಭಿಸಿ ದರೋ, ಅವರ ಬಗ್ಗೆ ಇದ್ದ ಭಯ ಹೊರಟುಹೋಯಿತು.
ಮೊದಲಾಗಿದ್ದರೆ ಬೆದರುಗೊಂಬೆ ಮಾಡಿ ಅದಕ್ಕೆ ಮುತ್ತಪ್ಪ ರೈ ಎಂದು ಹೆಸರಿಟ್ಟರೂ ಜನ ಹೆದರುತ್ತಿದ್ದರು. ನಂತರ ಸ್ವತಃ ಅವರೇ ಬಂದರೂ ಯಾರೂ ಕ್ಯಾರೇ ಅನ್ನಲ್ಲಿಲ್ಲ. ಇದು ಅವರ ತಪ್ಪಲ್ಲ. Like familiarity, acquaintance also breeds contempt ಅನ್ನೋದು ಅದಕ್ಕೆ. ನೀವು ಯಾವುದಾದರೂ ಸಿನಿಮಾ ನಟ, ನಟಿಯರ ನೆಗೆ ಹೋಗಿ. ನಿಮ್ಮ ಭೇಟಿಗೆ ಅವರು ತಕ್ಷಣ ಹೊರಬರುವುದಿಲ್ಲ. ನೀವು ಬರುವುದನ್ನು ತಿಳಿಸಿ ಹೋದರೆ, ಅವರು ಮಿರಿಮಿರಿ ಮಿಂಚುತ್ತಿರುತ್ತಾರೆ.
ಹೇಳದೇ ಕೇಳದೇ ಹಾಗೆ ಹೋದರೆ, ನಿಮ್ಮನ್ನು ಸ್ವಲ್ಪ ಹೊತ್ತು ಕಾಯಿಸುತ್ತಾರೆ. ಶೃಂಗಾರ ಮಾಡಿಕೊಂಡು ಬರಲು ಕನಿಷ್ಠ ಹತ್ತು-ಹದಿನೈದು ನಿಮಿಷಗಳಾದರೂ ಆಗುತ್ತದೆ. ಅವರು ಮೇಕಪ್ ಮಾಡಿಕೊಳ್ಳದೇ ಹಾಗೆ ಬಂದರೆ, ನಿಮಗೆ ಅವರ ಬಗ್ಗೆ ಇದ್ದ ಇಮೇಜು ಹೊರಟು ಹೋಗುತ್ತದೆ. ಮೇಕಪ್ ಮಾಡದ ನಟಿ ಸರೋಜಾದೇವಿ, ಜಯಂತಿ, ಜಯಮಾಲಾ, ಭಾರತಿ ಮುಂತಾದ ನಟಿಯರನ್ನು ಯಾರೂ ನೋಡಿಲ್ಲ. ಅವರು ಮೇಕಪ್ ಮಾಡಿಕೊಂಡು ಬಂದರೇ ಒಳ್ಳೆಯದು ಮತ್ತು ನೀವು ಕಾಯುವುದು ಇನ್ನೂ ಒಳ್ಳೆಯದು. ಅವರ ಬಗ್ಗೆ ಇರುವ ನಿಮ್ಮ ಕಲ್ಪನೆ ಭದ್ರವಾಗಿರುತ್ತದೆ.
ಇಂದು ತಮಾಷೆಯ ಪ್ರಸಂಗ ನೆನಪಿಗೆ ಬರುತ್ತದೆ. ವಾಹನಗಳ ಸುಂಕ ಸಂಗ್ರಹಿಸುತ್ತಿದ್ದ ಕಾಲದಲ್ಲಿ, ಸುಂಕದಕಟ್ಟೆಯಲ್ಲಿ ಒಬ್ಬ ಗಿರಿಜಾ ಮೀಸೆ ಬಿಟ್ಟ, ಕಟ್ಟುಮಸ್ತಾದ ಮಧ್ಯ ವಯಸ್ಕ ವ್ಯಕ್ತಿ ಎತ್ತರದ ಕಟ್ಟೆ ಮೇಲೆ ಕುಳಿತು, ವಾಹನ ಚಾಲಕರಿಗೆ, ‘ಬೇಗ ಬೇಗ ಸುಂಕ ಕೊಡಿ, ಚೌಕಾಶಿ ಮಾಡಿದರೆ ಒದ್ದು ವಸೂಲು ಮಾಡುತ್ತೇನೆ’ ಎಂದು ಎಲ್ಲರನ್ನೂ ದಬಾಯಿಸುತ್ತಿದ್ದನಂತೆ.
ಅವನ ಈ ಅರಚಾಟ, ದಬಾವಣೆಗೆ ಹೆದರಿ ಎಲ್ಲರೂ ಮರು ಮಾತಾಡದೇ ಸುಂಕ ಕೊಟ್ಟು ಹೋಗುತ್ತಿದ್ದರಂತೆ. ಒಂದು ದಿನ ವಾಹನ ಚಾಲಕನೊಬ್ಬ, ಆತ ಎತ್ತರದ ಕಟ್ಟೆಯೇರಲು ಹರಸಾಹಸಪಡುವುದನ್ನು ನೋಡಿದನಂತೆ. ಸರಿ, ಸುಂಕದಕಟ್ಟೆ ಬಳಿ ಬಂದಾಗ ಸುಂಕ ವಸೂಲಿ ಮಾಡುವ ಆ ಕಟ್ಟುಮಸ್ತಾದ ವ್ಯಕ್ತಿ, ‘ಎಲ್ಲಿ ಸುಂಕ ತೆಗಿ’ ಎಂದು ಗದರಿಸಿದನಂತೆ.
ಆ ಚಾಲಕ, ‘ನೀವು ಹೇಳಿದಷ್ಟು ಸುಂಕ ಕೊಡಲು ಆಗೊಲ್ಲ’ ಎಂದು ತಿರುಗುತ್ತರ ನೀಡಿದನಂತೆ. ಆಗ ಸುಂಕದವ, ‘ನಾನು ಹೇಳಿದಷ್ಟು ಸುಂಕ ಕೊಡದಿದ್ದರೆ, ನಿನಗೆ ಒದ್ದು ವಸೂಲು ಮಾಡುತ್ತೇನೆ’ ಎಂದು ಹೇಳಿದನಂತೆ. ‘ನಿನಗೆ ಸಾಧ್ಯವಾಗುವುದಾದರೆ ನನಗೆ ಒದಿ ನೋಡೋಣ’ ಎಂದು ಚಾಲಕ ಹೇಳಿದನಂತೆ.
ನೋಡಿದರೆ ಸುಂಕದವನಿಗೆ ಕಾಲೇ ಇಲ್ಲ. ಈ ಪ್ರಸಂಗ ಎಡೆ ಪ್ರಚಾರವಾಗಿ ಸುಂಕದವನಿಗೆ ಯಾರೂ ಹೆದರದ ಸ್ಥಿತಿ ನಿರ್ಮಾಣವಾಯಿತಂತೆ. ಇದಕ್ಕೆ ಕಾರಣ ಅವನಿಗೆ ಕಾಲೇ ಇಲ್ಲ ಎಂಬುದು ಒಬ್ಬ ವಾಹನ ಚಾಲಕನಿಗೆ ಗೊತ್ತಾಗಿದ್ದು. ಅದನ್ನು ಯಾರೂ ನೋಡದಂತೆ ಆತ ಅಷ್ಟು ದಿನ ಗೌಪ್ಯ ಕಾಪಾಡಿಕೊಂಡಿದ್ದ.
ನಾನು ಗೌರವಿಸುವ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ತಮ್ಮ ಫೋಟೋವನ್ನು ಪತ್ರಿಕೆಯಲ್ಲಿ ಪ್ರಕಟಿಸಲೇಕೂಡದು ಎನ್ನುವ ನಿಯಮ ಮಾಡಿದ್ದರು. ‘ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಬರೆಯುವ ತನಕ ಅವರ ಅಂಕಣದ ಜತೆಗೆ ಅವರ ಫೋಟೋ ಮಾತ್ರ ಪ್ರಕಟವಾಗಲಿಲ್ಲ. ಒಮ್ಮೆ ಈ ಬಗ್ಗೆ ಮತ್ತಷ್ಟು ಕೆದಕಿದಾಗ ಅವರು ಹೇಳಿದ್ದರು - ‘ಓದುಗರಿಗೆ ಅಂಕಣಕಾರರ ಬಗ್ಗೆ ಒಂದು ಕುತೂಹಲ ಇರಬೇಕು,
ಹಾಗೆಯೇ ಅಂಕಣಕಾರರಿಗೂ ಒಂದಷ್ಟು ಖಾಸಗಿತನನಬೇಕು. ಅಂಕಣಕಾರರ ಫೋಟೋ ಪ್ರಕಟಿಸಿದರೆ ಓದುಗರು ಬರಹಕ್ಕಿಂತ ಹೆಚ್ಚಾಗಿ ಅಂಕಣಕಾರರ ತೋರ್ಪಡಿಕೆಯಿಂದ ಪ್ರಭಾವಿತರಾಗುತ್ತಾರೆ. ಅವರ ಬಗ್ಗೆ ಹೊಸತೊಂದು ಇಮೇಜುಗಳನ್ನು ಸೃಷ್ಟಿಸಿಕೊಳ್ಳು ತ್ತಾರೆ. ಅಲ್ಲದೆ ಅಂಕಣಕಾರರಿಗೂ ಅವರ ಖಾಸಗಿತನ ಕಸಿದುಕೊಂಡಂತಾಗುತ್ತದೆ.
ಗಾಂಧಿ ಬಜಾರಿನಲ್ಲಿ ಫುಟ್ ಪಾತ್ ಮೇಲೆ ನಿಂತು ದೋಸೆ ತಿನ್ನಲು ಆಗುವುದಿಲ್ಲ. ಮಾವಿನ ಹಣ್ಣನ್ನು ಗೊರಟು ಸಮೇತ ಕೈ ನೆಕ್ಕುತ್ತಾ ತಿನ್ನಲು ಆಗುವುದಿಲ್ಲ. ತನ್ನ ಓದುಗರು ನೋಡು ತ್ತಿರಬಹುದು ಎಂಬ ಅಂಜಿಕೆಯಲ್ಲಿ, ಮಾವಿನ ಹಣ್ಣನ್ನು ನೀಟಾಗಿ ಕತ್ತರಿಸಿ, ಫೋರ್ಕ್ ಬಳಸಿ ತಿನ್ನಬೇಕಾಗುತ್ತದೆ.’ ರೇಡಿಯೋದಲ್ಲಿ ವಾರ್ತೆ ಓದುವವರನ್ನು, ಕಾರ್ಯಕ್ರಮ ಉದ್ಘೋಷಕರನ್ನು ನಾವು ಎಂದೆಂದೂ ನೋಡಿರುವುದಿಲ್ಲ. ಅವರ ದನಿಯಿಂದಲೇ ಅವರ ಬಗ್ಗೆ ಒಂದು ಇಮೇಜು ಕಟ್ಟಿಕೊಂಡಿರುತ್ತೇವೆ.
ಅವರ ಅಭಿಮಾನಿಗಳಾಗಿರುತ್ತೇವೆ. ಸಂಸ್ಕೃತ ವಾರ್ತೆ ಓದುತ್ತಿದ್ದ ಬಲದೇವಾನಂದ ಸಾಗರ, ಕನ್ನಡ ವಾರ್ತೆ ಓದುತ್ತಿದ್ದ ರಂಗರಾವ್, ಪ್ರದೇಶ ಸಮಾಚಾರ ಓದುತ್ತಿದ್ದ ನಾಗೇಶ ಶಾನಭಾಗ, ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಹೇಳುತ್ತಿದ್ದ ನರೋತ್ತಮ ಪುರಿ ಇವರೆಲ್ಲ ತಮ್ಮ ದನಿಯಿಂದಲೇ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಂತವರು.
ಇಂದಿಗೂ ನೆನಪಾಗಿ ಕಾಡುವವರು. ಇವರನ್ನು ನಾವು ನೋಡಿದ್ದರೆ, ಭೇಟಿ ಮಾಡಿದ್ದರೆ ಇವರೆಲ್ಲರ ಬಗ್ಗೆ ನಮ್ಮ ಅಭಿಪ್ರಾಯ ಹೇಗಿರುತ್ತಿತ್ತು? ಹೀಗಾಗಿ ನೀವು ಎಲ್ಲರನ್ನೂ ಭೇಟಿ ಮಾಡಬಾರದು. ಈ ವಿಷಯದಲ್ಲಿ ಕಾಳಜಿವಹಿಸಬೇಕು. (ಆದರೆ ಈ ಮಾತು ನನಗೆ ಅನ್ವಯಿ ಸುವುದಿಲ್ಲ!)