ವಿಶ್ವರಂಗ
ನಮ್ಮದು ಸಾವಿರ ಸಮಸ್ಯೆಗಳ ಸಮಾಜ. ಓದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಜೀವನ ಚಿತ್ರಣವೇ ಬದಲಾಗುತ್ತಿದೆ. ಪ್ರಶ್ನೆ ಬದಲಾದ ಮೇಲೆ ಉತ್ತರ ವೂ ಬದಲಾಗಬೇಕಲ್ಲವೇ? ಹೀಗಾಗಿ ಇವತ್ತಿನ ಮಕ್ಕಳ ಆದ್ಯತೆ, ಯೋಚನೆ, ಬದುಕುವ ರೀತಿ ಎಲ್ಲವೂ ಬದಲಾಗಿದೆ. ಇನ್ಸ್ಟಂಟ್ ಯುಗದಲ್ಲಿ ಸಮಸ್ಯೆಗಳು ಮಾತ್ರ ಜಟಿಲವಾಗುತ್ತಿವೆ. ಸಮಸ್ಯೆಗೆ ಸಿಗುತ್ತಿದ್ದ ಸಮಾಧಾನ ಹಿಂದಿಗಿಂತ ಮಾತ್ರ ಇನ್ನಷ್ಟು ತಡವಾಗುತ್ತಿದೆ.
ಜಪಾನಿನ ಒಂದು ಗಾದೆಮಾತು into the house where joy lives, happiness will gladly come ಎನ್ನುತ್ತದೆ. ಜಾಯ್ ಮತ್ತು ಹ್ಯಾಪಿನೆಸ್ ಎರಡಕ್ಕೂ ಸಂತೋಷ ಎನ್ನುವ ಅರ್ಥ ವನ್ನು ಕನ್ನಡದಲ್ಲಿ ಯಥಾವತ್ತಾಗಿ ಹೇಳಬಹುದು. ಜಾಯ್ ಎನ್ನುವುದನ್ನು ನಾವು ಖುಷಿಯಾಗಿರುವ ಮನಸ್ಥಿತಿ ಎಂದುಕೊಳ್ಳೋಣ. ಆಗ ಸಂತೋಷ ಸದಾ ಜತೆಯಾಗುತ್ತದೆ. ಆದರೆ, ಇವತ್ತಿನ ದಿನದಲ್ಲಿ ಈ ಸಂತೋಷ ಮಾಯ ವಾಗುತ್ತಿದೆ.
ಪ್ರತಿಯೊಬ್ಬರೂ ಒಂದಲ್ಲ ಒಂದು ಚಿಂತೆಗಳಲ್ಲಿ ಬಂಧಿಗಳಾಗಿದ್ದಾರೆ. ಇರುವುದರಲ್ಲಿ ತೃಪ್ತಿಯಿಲ್ಲ. ಇರುವುದಕ್ಕೆ ಬೆಲೆಯಿಲ್ಲ. ಸದಾ ಇಲ್ಲದುದರ ಬಗ್ಗೆ ಧ್ಯಾನ. ಹತ್ತಿದ್ದ ವರಿಗೆ ಅದನ್ನು ನೂರು ಮಾಡುವ , ನೂರಿದ್ದವರಿಗೆ ಸಾವಿರ ಮಾಡುವ ಚಟ. ಸಾವಿರವಿದ್ದವರು ಲಕ್ಷ, ಕೋಟಿಗಳ ಬಗ್ಗೆ ಚಿಂತೆಯಲ್ಲಿ ಮಗ್ನ. ದುಡ್ಡಿನ ಬಗ್ಗೆ ಉದಾಸೀನ ಮಾಡುವವರ ಸಂಖ್ಯೆಯೂ ದೊಡ್ಡದಿದೆ.
ಆದರೆ, ಕಳೆದ ನಿನ್ನೆಯಲ್ಲಿ, ಕಾಣದ ನಾಳೆಯಲ್ಲಿ ದಿನ ಕಳೆಯುವವರ ಸಂಖ್ಯೆ ಮಾತ್ರ ಇಲ್ಲವೆನ್ನುವಷ್ಟು ದೊಡ್ಡದಿದೆ. ಇವತ್ತಿನ ದಿನದಲ್ಲಿ ಈ ಗಳಿಗೆಯಲ್ಲಿ ಕಳೆದಾಗ ಮಾತ್ರ ಜಾಯ್, ಹ್ಯಾಪಿನೆಸ್ಸ್ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮನ್ನು ನಾವು ಪರಾಮರ್ಶಿಸಿ ಕೊಂಡು ನೋಡಬೇಕು.
ವಿಪರ್ಯಾಸ ಎಂದರೆ ಜಗತ್ತಿನೊಡನೆ ಸಂವಹನ ಮಾಡುವ ನಮಗೆ ನಮ್ಮೊಂದಿಗೆ ಸಂವಹನ ಮಾಡುವ ವೇಳೆ ಇಲ್ಲವಾಗಿದೆ. ಹೆತ್ತವರಿಗೆ ತಾವು ಮಾಡದ್ದನ್ನು ನಮ್ಮ ಮಕ್ಕಳು ಮಾಡಲಿ, ನಮ್ಮಾಸೆ ಪೂರೈಸಲಿ ಎನ್ನುವ ಆಶಯ. ಮಕ್ಕಳಿಗೆ ಹೆತ್ತವರು ಆಸ್ತಿ ಮಾಡಿಟ್ಟಿದ್ದರೆ, ಈ ಜಗತ್ತಿನ ಗೌಜುಗಳು ನಮಗೆ ತಟ್ಟುತ್ತಿರಲಿಲ್ಲ ಎನ್ನುವ ಭಾವನೆ.
ಇದನ್ನೂ ಓದಿ:Rangaswamy Mookanahalli Column: ನಮ್ಮ ಡೆಮಾಕ್ರಸಿಗೆ ಬೇಕಿದೆ ಮೇಜರ್ ಸರ್ಜರಿ !
ಮಗ ಅಥವಾ ಮಗಳು ಡಾಕ್ಟರ್ ಆಗಲಿ ಎನ್ನುವುದು ಹೆತ್ತವರ ಆಸೆಯಾದರೆ, ಹೆತ್ತವರು ಪ್ರಶ್ನೆ ಕೇಳದೆ ಬಂಡವಾಳ ಕೊಟ್ಟರೆ ಬಿಸಿನೆಸ್ ಮಾಡಬಹುದು ಎನ್ನುವುದು ಮಕ್ಕಳ ಕನಸು. ಕುಳಿತು ಮಾತಾಡುವುದು, ಒಬ್ಬರ ಮನದ ಭಾವನೆ ಒಬ್ಬರು ಅರಿಯುವುದು ಮಾತ್ರ ಆಗುವುದೇ ಇಲ್ಲ. ಒಂದು ಸೂರಿನಡಿ ವಿರೋಧಾಭಾಸ ಮನೆ ಮಾಡಿರುತ್ತದೆ. ಮನೆಯಲ್ಲಿ ಮಾತ್ರ ಜೀವವಿರುವ, ಭಾವವಿಲ್ಲದ ಮನಸ್ಸುಗಳ ದೇಹಗಳು ಜೀವಿಸುತ್ತಿರುತ್ತವೆ.
ನನ್ನ ಪ್ರಕಾರ ಮಕ್ಕಳಿಗಾಗಿ ಆಸ್ತಿ, ಹಣ ಸಂಗ್ರಹಿಸಿಡಬಾರದು. ಈ ರೀತಿ ಮಕ್ಕಳಿಗೆ ಅಂತ ಹಣ ಸಂಗ್ರಹಿಸಿಡಬಾರದು ಎನ್ನುವುದಕ್ಕೆ ಮುಖ್ಯವಾಗಿ ಎರಡು ಕಾರಣವಿದೆ. ಒಂದು ನಿಮ್ಮ ಮಕ್ಕಳು ನಿಮ್ಮಷ್ಟೇ ಅಥವಾ ನಿಮಗಿಂತ ಬುದ್ಧಿವಂತರಾಗಿದ್ದರೆ ನಿಮ್ಮ ಹಣ ಅವರಿಗೆ ಬೇಕಿಲ್ಲ. ಎರಡು ನಿಮ್ಮ ಮಕ್ಕಳು ನಿಮ್ಮಷ್ಟು ಯೋಗ್ಯತೆ ಇಲ್ಲದವರು ಎಂದರೆ ನೀವೆಷ್ಟೇ ಹಣ ಇಟ್ಟಿದ್ದರೂ ಅದನ್ನ ಉಳಿಸಿಕೊಳ್ಳುವ ತಾಕತ್ತು ಅವರಿಗಿರುವುದಿಲ್ಲ.
ಕಾರಣ ಯಾವುದೇ ಇರಲಿ ಮಕ್ಕಳಿಗೆ ಅಂತ ಆಸ್ತಿ ಮತ್ತು ಹಣ ಮಾಡುವುದು ತಪ್ಪು. ಅವಕ್ಕೆ ಬೇಕಾದ ವಿದ್ಯಾಭ್ಯಾಸ, ಸಂಸ್ಕಾರ ಮತ್ತು ಜೀವನದ ಬಂಡಿ ಎಳೆಯಲು ಬೇಕಾಗುವ ಸಾಮಾನ್ಯಜ್ಞಾನ ಕೊಟ್ಟರೆ ಸಾಕು. ಬದುಕಿನಲ್ಲಿ ಕಷ್ಟ ಎದುರಾದಾಗ ಅದಕ್ಕೆ ಸೆಡ್ಡು ಹೊಡೆದು ನಿಲ್ಲುವುದನ್ನು ಕಲಿಸಿದರೆ ಸಾಕು ಮಿಕ್ಕದೆಲ್ಲಾ ಗೌಣ.
ಯಾರ ಸಹಾಯವೂ ಇಲ್ಲದೆ ಕೇವಲ ತನ್ನ ಬುದ್ಧಿಬಲದಿಂದ ಮೇಲೆ ಬಂದ Lawrence Joseph Ellison ಇದಕ್ಕೊಂದು ಉತ್ತಮ ಉದಾಹರಣೆ. ಲಾರಿಯ ಅಮ್ಮನಿಗೆ ಅವನನ್ನ ಸಾಕುವ ತಾಕತ್ತು ಕೂಡ ಇರಲಿಲ್ಲ. ಹೀಗಾಗಿ ಶಿಕಾಗೊದಲ್ಲಿದ್ದ ಅವನ ಚಿಕ್ಕಮ್ಮ ಮತ್ತು ಚಿಕ್ಕಪ್ಪನಿಗೆ ದತ್ತು ಕೊಟ್ಟು ಬಿಡುತ್ತಾಳೆ. ಚಿಕ್ಕಮ್ಮ ಒಳ್ಳೆಯ ಹೆಂಗಸು ಲಾರಿಯನ್ನು ಪ್ರೀತಿಯಿಂದ ಕಾಣುತ್ತಾಳೆ. ಚಿಕ್ಕಪ್ಪ ಸ್ವಲ್ಪ ಒರಟು.ಬಾಲಕ ಲಾರಿಯ ಕಂಡರೆ ಅಷ್ಟಕಷ್ಟೇ. ಚಿಕ್ಕಮ್ಮ ಇರುವವರೆಗೆ ಜೀವನ ಸುಗಮವಾಗಿತ್ತು.
ಚಿಕ್ಕಮ್ಮ ಸತ್ತ ನಂತರ ಮನೆಯಲ್ಲಿ ಇನ್ನೇನು ಉಳಿದಿಲ್ಲ ಅನ್ನಿಸಿ ಶಿಕಾಗೊ ಇಂದ ಕ್ಯಾಲಿಫೋರ್ನಿಯಾಗೆ ಹೋಗುತ್ತಾನೆ. ಮುಂದಿನ ಎಂಟು ವರ್ಷ ಹೊಟ್ಟೆಪಾಡಿಗೆ, ಜೀವನದ ಬಂಡಿ ನಿಲ್ಲದೆ ಸಾಗಿಸಲು ಎದುರಾಗುವ ಚಿಕ್ಕಪುಟ್ಟ ಕೆಲಸಗಳನ್ನ ಮಾಡುತ್ತಾನೆ. 1977ರಲ್ಲಿ ಇಬ್ಬರು ಸ್ನೇಹಿತರ ಸೇರಿಸಿಕೊಂಡು ಕಟ್ಟಿದ ಕಂಪನಿಯ ಹೆಸರು ‘ಸಾಫ್ಟ್ʼವೇರ್ ಡೆವಲ ಪ್ಮೆಂಟ್ ಲ್ಯಾಬೊರೇಟರೀಸ್.’ 1979ರಲ್ಲಿ ಅದೇ ಕಂಪನಿಯ ಹೆಸರು ‘ರಿಲೇಶನಲ್ ಸಾಫ್ಟ್ʼ ವೇರ್ ಐಎನ್‌ಸಿ’ ಎಂದು ಮರುನಾಮಕರಣ ಹೊಂದುತ್ತದೆ.
1982ರಲ್ಲಿ ಇದು ‘ಒರಾಕಲ್ ಸಿಸ್ಟಮ್ಸ್ ಕಾರ್ಪೋರೇಶನ್’ ಎನ್ನುವ ಹೆಸರು ಪಡೆಯುತ್ತದೆ. ಇಂದು ಒರಾಕಲ್ ಹೆಸರು ಕೇಳದವರು ಯಾರು? ನೆನಪಿರಲಿ ವೈ? ಎಂದರೆ ಅಲ್ಲಿಗೆ ಮುಗಿಯಿತು!! ಅದೇ ವೈ ನಾಟ್? ಎಂದರೆ ಅಲ್ಲಿ ಸಾವಿರಾರು ಅವಕಾಶಗಳು ತೆರೆದು ಕೊಳ್ಳುತ್ತವೆ.
ಯಾವ ಗಾಡ್ ಫಾದರ್ ಇಲ್ಲದೆ ಜೀವನದಲ್ಲಿ ಉನ್ನತಿಯ ಕಡೆಗೆ ಸಾಗಿದ ಇಂತಹ ನೂರಾರು ಜನರನ್ನು ನಾವು ಉದಾಹರಣೆ ಕೊಡಬಹುದು. ಅದೇ ಸಮಯದಲ್ಲಿ ಎಲ್ಲವೂ ಇದ್ದವರ ಮನೆಯಲ್ಲಿ ಜನಿಸಿದ, ಬದುಕಿನಲ್ಲಿ ಯಾವ ಗುರುತನ್ನು ಉಳಿಸಲಾಗದ ಕೋಟ್ಯಂತರ ಜನರನ್ನು ಕೂಡ ಉದಾಹರಿಸಬಹುದು. ಅರ್ಥವಿಷ್ಟೆ ಮಕ್ಕಳ್ಳನ್ನು ಹೆತ್ತ ಮಾತ್ರಕ್ಕೆ ಅವರ ಹಣೆಬರಹ ಬರೆಯಲಾಗುವುದಿಲ್ಲ. ಮಕ್ಕಳೂ ಅಷ್ಟೇ ಸ್ವ ಪ್ರಯತ್ನವಿಲ್ಲದಿದ್ದರೆ ಅದೆಷ್ಟೇ ದೊಡ್ಡ ಮನೆತನದಲ್ಲಿ ಹುಟ್ಟಿದರೂ ಅದರಿಂದ ಪ್ರಯೋಜನವಂತೂ ಇಲ್ಲ.
ಪ್ರತಿ ಭಾನುವಾರ ಬಂದರೆ ಸಾಕು ವಿಶ್ವವಾಣಿಯ ಅಂಕಣ ಬರಹಕ್ಕೆ ಏನು ಬರೆಯುವುದು? ಎನ್ನುವ ಚಿಂತನೆಯೊಂದಿಗೆ ಬೆಳಗಿನ ನಡಿಗೆ ಸಾಗುತ್ತದೆ. ಹೆಚ್ಚುತ್ತಿರುವ ಜನರೇಷನ್ ಗ್ಯಾಪ್ ಬಗ್ಗೆ, ಆಸಕ್ತಿ ಬದಲಾಗುತ್ತಿರುವುದರ ಬಗ್ಗೆ, ಬದಲಾಗುತ್ತಿರುವ ಆದ್ಯತೆಗಳ ಬಗ್ಗೆ ಬರೆಯು ವುದು ಎಂದುಕೊಂಡು ಮೇಲಿನ ಸಾಲುಗಳನ್ನು ಮನಸ್ಸಿನಲ್ಲಿ ಜೋಡಿಸಿ ಕೊಳ್ಳುತ್ತಿದೆ.
ಇವತ್ತು ನಮ್ಮ ಮುಂದೆ ಗಂಡ ಹೆಂಡತಿ ಜತೆಗೊಬ್ಬ 8/10 ವರ್ಷದ ಹುಡುಗ (ಅವರ ಮಗ ಎನ್ನುವುದು ಆಮೇಲೆ ಗೊತ್ತಾಯ್ತು) ಸಾಗುತ್ತಿದ್ದರು. ಆ ಹುಡುಗ ಮುಂದಕ್ಕೆ ಹೆಜ್ಜೆ ಹಾಕುವ ಬದಲು ಹಿಂದಕ್ಕೆ ದೇಹವನ್ನ ವಾಲಿಸುತ್ತಿದ್ದ. ಲೆಥರ್ಜಿ ಎಂದರೇನು ಎನ್ನುವುದನ್ನ ಆ ಹುಡುಗನ ಹಾವಭಾವ ನೋಡಿದರೆ ಸಾಕು ಬೇರೆ ಹೇಳುವ ಅವಶ್ಯಕತೆಯಿಲ್ಲ ಎನ್ನುವ ಮಟ್ಟದ ಸೋಂಬೇರಿತನ!
ಎದುರಿನಿಂದ ಬಂದ ಅಜ್ಜಿಯೊಂದು ‘ಪಾಪ ಮಗುವನ್ನ ಮಲಗಲು ಬಿಡದೆ ಎಬ್ಬಿಸಿ ಕೊಂಡು ಬಂದಿದ್ದೀರ, ಅದಕ್ಕೆ ಅವನಿಗೆ ನಡೆಯಲು ಆಗುತ್ತಿಲ್ಲ’ ಎನ್ನುವ ಅಣಿಮುತ್ತು ಉದುರಿಸಿ ಹೋಯ್ತು! ಪಕ್ಕದ ಹೆಜ್ಜೆ ಹಾಕುತ್ತಿದ್ದ ಮಹಿಳೆಯೊಬ್ಬರು ‘ಬೇಸಿಗೆ ರಜಾ ಪೂರ್ತಿ ಕೈಗೆ ಮೊಬೈಲ್ ಕೊಟ್ಟು ಕೂರಿಸಿದ್ರಿ ಅನ್ನಿಸುತ್ತೆ, ನಾಳೆ ಶಾಲೆ ಶುರು ಅದಕ್ಕೆ ಕರೆದುಕೊಂಡು ಬಂದಿದ್ದೀರ ಅನ್ನಿಸುತ್ತೆ. ಅವನಿಗೆ ನೀವು ಹೊರಗಡೆ ಆಟ ಆಡಲು ಬಿಡಬೇಕಿತ್ತು.
ನೀವೇ ನೋಡಿ ಅವನಿಗೆ ಆಗಲೇ ಹೊಟ್ಟೆ ಬಂದಿದೆ.’ ಎನ್ನುವ ಚುಚ್ಚುವ ಮಾತನ್ನಾಡಿದರು. ಆ ಹುಡುಗನ ಅಪ್ಪ ಈ ಎಲ್ಲ ಮಾತುಗಳಿಂದ ಸ್ವಲ್ಪ ವಿಚಲಿತರಾದರು ‘ನೋಡು ಎಲ್ಲರೂ ನಿನ್ನ ಬಗ್ಗೆ ಹೇಗೆ ಮಾತನಾಡುತ್ತಾರೆ, ಬೇಗ ಬೇಗ ನಡಿಯುವುದು ಕಲಿ. ವಾಕಿಂಗ್ ಆರೋಗ್ಯ ಕ್ಕೆ ಬಹಳ ಒಳ್ಳೆಯದು. ನಡೀಬೇಕು. ನೋಡು.. ಇಲ್ಲದಿದ್ದರೆ ಅಂಕಲ್(ನನ್ನ ಕಡೆ ಕೈ ತೋರಿಸುತ್ತ) ಕೂಡ ನಿನ್ನ ಬಯ್ಯುತ್ತಾರೆ ಎಂದರು.
ಅಯ್ಯೋ ದೇವರೇ, ಇದೊಳ್ಳೆ ಪಜೀತಿ ಆಯ್ತಲ್ಲ ಎಂದು ಕೊಂಡೆ. ನಾನು ಮತ್ತು ರಮ್ಯ ನಮ್ಮ ವೇಗ ತಗ್ಗಿಸದೆ ನಮ್ಮ ಪಾಡಿಗೆ ನಾವು ಎಲ್ಲ ಮಾತುಗಳನ್ನ ಕೇಳಿಸಿಕೊಂಡು ಹೋಗುತ್ತಿದ್ದೆವು ಅಷ್ಟೇ, ಈಗ ಬೇಡವೆಂದರೂ ಕಾಮೆಂಟ್ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಯ್ತು.’
ಪುಟ್ಟಾ ಮೊದಲ ದಿನಗಳಲ್ಲಿ ಎಲ್ಲರಿಗೂ ಹೀಗೆ ಆಗುತ್ತೆ, ಹತ್ತು ದಿನ ಬಿಡದೆ ವಾಕ್ ಮಾಡು ಆಮೇಲೆ ನಿನಗೆ ಇಷ್ಟ ಆಗುತ್ತೆ’ ಎನ್ನುವ ಮಾತು ಹೇಳಿ ಮುಂದಕ್ಕೆ ಹೊರಟೆವು. ಆ ಹುಡುಗ ಮುಂದಕ್ಕೆ ಹೆಜ್ಜೆ ಇಡುವ ಬದಲು ದೇಹವನ್ನ ಹಿಂದಕ್ಕೆ ಜಗ್ಗುವುದು ಮಾತ್ರ ನಿಲ್ಲಿಸಲಿಲ್ಲ. ಹತ್ತು ದಿನ ಮಾಡುವುದು ದೂರದ ಮಾತು. ಇವತ್ತಿನ ತಲೆಮಾರಿನ ಮಕ್ಕಳಿಗೆ ಹತ್ತು ನಿಮಿಷ ಕೂಡ ಒಂದು ವಿಷಯವನ್ನು ಗಮನವಿಟ್ಟು ನೋಡುವುದಕ್ಕೆ, ಮನಸ್ಸನ್ನು ಕೇಂದ್ರೀ ಕರಿಸುವುದಕ್ಕೆ ಆಗುವುದಿಲ್ಲ. ಹೇಳಿಕೇಳಿ ಇದು ರೀಲ್ಸ್ ಯುಗ.
ಪ್ರತಿ ಮೂವತ್ತು ಅಥವಾ ಅರವತ್ತು ಸೆಕೆಂಡುಗಳಿಗೆ ಟಾಪಿಕ್ ಚೇಂಜ್! ಏಕಾಗ್ರತೆ ಎಲ್ಲಿಂದ ಬಂದೀತು?ರಜಾ ಬಂದರೆ ಸಾಕು ಮೂರುಹೂತ್ತು ರಸ್ತೆಯಲ್ಲಿ, ಗಲ್ಲಿಯಲ್ಲಿ, ಎಲ್ಲಿ ಜಾಗ ಸಿಕ್ಕರಲ್ಲಿ ಆಟ ಆಡುತ್ತಾ ಸಮಯ ಕೆಳೆಯುತ್ತಿದ್ದ ನನ್ನ ಬಾಲ್ಯ ಬೇಡವೆಂದರೂ ನೆನಪಿಗೆ ಬಂದಿತು. ಏನಾಗಿದೆ ಇವತ್ತಿನ ಮಕ್ಕಳಿಗೆ? ಎಲ್ಲದರಲ್ಲೂ ನಿರಾಸಕ್ತಿ.
ಮೊಬೈಲ್ ಮತ್ತು ಅದರಲ್ಲಿರುವ ಗೇಮ್ಸ್ ಮಕ್ಕಳ ಅತಿ ದೊಡ್ಡ ಶತ್ರು. ಡಯಾಬಿಟಿಸ್ ಎನ್ನುವುದು ಹೇಗೆ ಬಡವ, ಶ್ರೀಮಂತ ಎನ್ನದೆ ಎಲ್ಲರನ್ನೂ ಆವರಿಸಿದೆ ಮತ್ತು ಅದಕ್ಕೆ ವಯಸ್ಸಿನ ಹಂಗು ಕೂಡ ಇಲ್ಲ. ಥೇಟ್ ಹಾಗೆ ಮೊಬೈಲ್ ಮತ್ತು ಗೇಮಿಂಗ್ ವ್ಯಸನ ಎಲ್ಲ ಮಕ್ಕಳನ್ನೂ ಆವರಿಸಿದೆಕೊಂಡಿದೆ.
ಅದು ಅಡಿಕ್ಷನ್ ಆಗುವ ಮುಂಚೆ ಪೋಷಕರು ಎಚ್ಚರಗೊಳ್ಳಬೇಕು. ಬಡವರ ಅಥವಾ ಕೊರತೆ ಇರುವವರ ಮನೆಯ ಮಕ್ಕಳಲ್ಲಿ ಹಸಿವು ಹೆಚ್ಚಾಗಿರುತ್ತದೆ, ಏನಾದರೂ ಸಾಧಿಸು ತ್ತಾರೆ ಎನ್ನುವ ಮಾತನ್ನ ರಮ್ಯಳ ಬಳಿ ಹೇಳುತ್ತಿದ್ದೆ. ಮನುಷ್ಯನ ಬದುಕಿಗೆ ಒಂದಷ್ಟು ಕೊರತೆ ಅಗತ್ಯ. ಆ ಕೊರತೆಯನ್ನು ನೀಗಿಸಿಕೊಳ್ಳುವ ಉಮೇದಿನಿಂದ ಕೆಲಸವನ್ನು ಮಾಡುತ್ತಾರೆ ಎನ್ನುವುದನ್ನು ನಾನು ಬಲವಾಗಿ ನಂಬಿದ್ದವನು. ಆದರೆ, ಇದೀಗ ಅದೂ ಕೂಡ ಪೂರ್ಣ ಸತ್ಯವಲ್ಲ ಎನ್ನುವ ಅನುಭವವಾಗುತ್ತಿದೆ.
ಜಗತ್ತು ವೇಗವಾಗಿ ಬದಲಾಗುತ್ತಿದೆ. ಮುಂದಿನ ಹತ್ತಿಪ್ಪತ್ತು ವರ್ಷದಲ್ಲಿ ಜಗತ್ತು ನಾವು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಮಟ್ಟಿಗೆ ಬದಲಾಗುತ್ತದೆ. ಆದರೆ, ನಮ್ಮ ಯುವ ಜನತೆ ಮಾತ್ರ ಸೋಶಿಯಲ್ ಮೀಡಿಯಾ ಮೂಲಕ ಸಮಾಜವನ್ನು ಬದಲಾಯಿಸುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಅಥವಾ ಅವರನ್ನು ಬಳಸಿಕೊಂಡು ಬದಲಾಯಿಸುವ ಭ್ರಮೆಯಲ್ಲಿ ಹಲವು ನಾಯಕರಿದ್ದಾರೆ.
ಇವತ್ತಿನ ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅರೆಕ್ಷಣ ಭವಿಷ್ಯವನ್ನು ನೆನೆದು ಭಯ ಉಂಟಾಗುತ್ತದೆ. ಯಾವುದೇ ಸೋಶಿಯಲ್ ಮೀಡಿಯಾ ಹಾವಳಿಗೆ, ಮೊಬೈಲ್ ಗೀಳಿಗೆ ಬೀಳದೆ ಎಂಜಿನಿಯರಿಂಗ್ ಅದರಲ್ಲೂ ಕಂಪ್ಯೂಟರ್ ಸೈನ್ಸ್ ಮಾಡಿದಮಕ್ಕಳಿಗೆ ಕೆಲಸವೇ ಸಿಗುತ್ತಿಲ್ಲ. ಈ ವಿಚಾರ ಎತ್ತಿದ ತಕ್ಷಣ ಈ ಮಕ್ಕಳಲ್ಲಿ ಕೆಲಸಕ್ಕೆ ಬೇಕಾದ ಸ್ಕಿಲ್ ಇಲ್ಲ. ಅವರು ಕಷ್ಟಪಟ್ಟು ದುಡಿಯಲು ಮನಸ್ಸಿಲ್ಲ. ಅವರಿಗೆ ಹೆಚ್ಚಿನ ಹಣದ ಆಸೆ ಇತ್ಯಾದಿ ಹೇಳಲು ಶುರು ಮಾಡುತ್ತಾರೆ.
ಇವೆಲ್ಲವೂ ಪೂರ್ಣ ಸುಳ್ಳಲ್ಲ. ಪೂರ್ಣ ಸತ್ಯವೂ ಅಲ್ಲ. ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ತನ್ನ ಓದು ಮುಗಿಸಲು ತಿಂಗಳಿಗೆ 25 ಸಾವಿರ ರುಪಾಯಿ ಖರ್ಚು ಮಾಡುವುದು ಅತಿ ಸಾಮಾನ್ಯವಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಂತೂ ಆಗುವುದಿಲ್ಲ.
ವಸ್ತುಸ್ಥಿತಿ ಹೀಗಿರುವಾಗ ಓದು ಮುಗಿಸಿದ ಮೇಲೆ ತಿಂಗಳಿಗೆ ಹತ್ತು ಸಾವಿರ ವೇತನ ಎಂದರೆ? ಅಥವಾ ತಿಂಗಳಿಗೆ ಇಪ್ಪತ್ತೈದು ಸಾವಿರ ವೇತನ ಎಂದರೆ? ಟೈಮ್ ವ್ಯಾಲ್ಯೂ ಆಫ್ ಮನಿ ಲೆಕ್ಕಾಚಾರದಲ್ಲಿ ಅವರು ಖರ್ಚು ಮಾಡಿದ್ದಕ್ಕಿಂತ ಗಳಿಸುತ್ತಿರುವ ಹಣ ಬಹಳ ಕಡಿಮೆ ಯಾಯ್ತು. ಇಂತಹ ಉದಾಹರಣೆಗಳು ಬಂದಾಗ ಕಷ್ಟ ಪಟ್ಟು ಓದುವುದಾದರೂ ಏಕೆ? ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆಗೆಲ್ಲಾ ಬದುಕಿನಲ್ಲಿ ಆದ್ಯತೆ ಬದಲಾಗುವುದು ಸಹಜ. ನಮ್ಮದು ಸಾವಿರ ಸಮಸ್ಯೆಗಳ ಸಮಾಜ. ಓದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಜೀವನ ಚಿತ್ರಣವೇ ಬದಲಾಗುತ್ತಿದೆ.
ಪ್ರಶ್ನೆ ಬದಲಾದ ಮೇಲೆ ಉತ್ತರವೂ ಬದಲಾಗಬೇಕಲ್ಲವೇ? ಹೀಗಾಗಿ ಇವತ್ತಿನ ಮಕ್ಕಳ ಆದ್ಯತೆ, ಯೋಚನೆ, ಬದುಕುವ ರೀತಿ ಎಲ್ಲವೂ ಬದಲಾಗಿದೆ. ಇನ್ಸ್ಟಂಟ್ ಯುಗದಲ್ಲಿ ಸಮಸ್ಯೆಗಳು ಮಾತ್ರ ಜಟಿಲವಾಗುತ್ತಿವೆ. ಸಮಸ್ಯೆಗೆ ಸಿಗುತ್ತಿದ್ದ ಸಮಾಧಾನ ಹಿಂದಿಗಿಂತ ಮಾತ್ರ ಇನ್ನಷ್ಟು ತಡವಾಗುತ್ತಿದೆ.
ಭಾರತೀಯ ಸಮಾಜ ಸಂಕ್ರಮಣ ಸ್ಥಿತಿಯಲ್ಲಿದೆ. ಇಲ್ಲಿ ಪೋಷಕರು ಮತ್ತು ಮಕ್ಕಳು ಇಬ್ಬರೂ ನಡೆಯುವ ಹಾದಿಯಲ್ಲಿ ಸಾಗುತ್ತಿರುವ ಗಮ್ಯ ಮರೆತ್ತಿದ್ದಾರೆ ಎನ್ನುವುದು ಮಾತ್ರ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಡಿವಿಜಿಯವರು ಕಗ್ಗದಲ್ಲಿ ಹೇಳಿರುವ ‘ನಾವು ಕೇಳಿದ್ದೆಲ್ಲಾ ಭಗವಂತ ಕೊಡುತ್ತಾನೆ ಎನ್ನುವ ಗ್ಯಾರಂಟಿ ಇಲ್ಲ. ಆದರೆ, ನಮಗೆ ಏನು ಕೇಳಬೇಕು ಎನ್ನುವ ನಿಖರತೆಯಿಲ್ಲ’ ಎನ್ನುವ ಮಾತು ನಿತ್ಯ ಸತ್ಯ ಎನ್ನಿಸುತ್ತಿದೆ. ಇದರೊಂದಿಗೆ ನನ್ನ ಹಲವು ನಂಬಿಕೆಗಳು ಕೂಡ ಅಲ್ಲಾಡುತ್ತಿವೆ.