ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahalli Column: ನಮ್ಮ ಡೆಮಾಕ್ರಸಿಗೆ ಬೇಕಿದೆ ಮೇಜರ್‌ ಸರ್ಜರಿ !

ಕಳೆದ ಮೂರು ತಿಂಗಳಲ್ಲಿ ಆರ್‌ಬಿಐ ಮಾಡಿದ ಈ ಕೆಲಸದಿಂದ ನಮ್ಮ ಫಾರಿನ್ ರಿಸರ್ವ್ ಕಡಿಮೆ ಆಯ್ತು. ಆದರೆ ರುಪಾಯಿ ಮಾತ್ರ ಚೇತರಿಕೆ ಕಾಣಲಿಲ್ಲ. ಎರಡನೇ ಹಂತದಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳು, ಎನ್‌ಆರ್‌ಐಗಳು ಇತರೆ ಸಂಸ್ಥೆಗಳು ರುಪಾಯಿ ಕುಸಿತದ ಬಗ್ಗೆ ಟ್ರೇಡ್ ಮಾಡುವುದನ್ನು, ಹೆಡ್ಜ್ ಮಾಡುವುದನ್ನು ನಿಲ್ಲಿಸುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಅಷ್ಟರ ಮಟ್ಟಿಗೆ ಏರಿಳಿತ ಕಡಿಮೆಯಾಗುತ್ತದೆ. ಇದರಲ್ಲೂ ಫಲಿತಾಂಶ ಸಿಗಲಿಲ್ಲ.

ನಮ್ಮ ಡೆಮಾಕ್ರಸಿಗೆ ಬೇಕಿದೆ ಮೇಜರ್‌ ಸರ್ಜರಿ !

-

ವಿಶ್ವರಂಗ

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಕಡ್ಡಾಯವಾಗಿ ವೋಟ್ ಮಾಡಬೇಕು ಎನ್ನುವ ಕಾನೂನು ಇಲ್ಲದೆ ಇರುವುದು ಅತಿ ದೊಡ್ಡ ದೋಷ. ಈ ಕಾರಣದಿಂದ ವೋಟ್ ಮಾಡುವ ಜನ, ವೋಟ್ ಮಾಡದೆ ಇರುವ ಜನರ ಹಣೆಬರಹವನ್ನು ಬರೆಯುವ ಹಂತಕ್ಕೆ ಬೆಳೆದಿದ್ದಾರೆ. ಸಂಖ್ಯೆ ಮುಖ್ಯ ಎಂದಾದ ಮೇಲೆ ಒಂದು ವರ್ಗದ ಜನ ತಮ್ಮ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತ ಹೋಗುತ್ತಾರೆ. ಅವರ ವೋಟು ಇಲ್ಲದೆ ಯಾರೊಬ್ಬರೂ ಗೆಲ್ಲಲು ಸಾಧ್ಯವಿಲ್ಲ ಎಂದಾದಾಗ ಏನಾಗುತ್ತದೆ.

ನಾವು ಪ್ರಜಾಪ್ರಭುತ್ವಕ್ಕೆ ಎಷ್ಟು ಅರ್ಹರು? ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ ಹಲವಾರು ಬಾರಿ ಬಂದು ಹೋಗಿದೆ. ಕಳೆದ ಒಂದು ವಾರದಲ್ಲಿ ಈ ಪ್ರಶ್ನೆ ಮನಸ್ಸಿನಲ್ಲಿ ಹೆಚ್ಚು ಬಾರಿ ಹುಟ್ಟಿದೆ. ಇದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಮುಖ್ಯವಾದ ಮೂರು ಅಂಶಗಳನ್ನು ಹೇಳುವೆ. ಎಲ್ಲಕ್ಕಿಂತ ಮೊದಲಿಗೆ ಇವತ್ತಿಗೆ ಜಗತ್ತು ಅದೆಷ್ಟು ದೊಡ್ಡ ಮಟ್ಟದ ಸಂಕಟದಲ್ಲಿದೆನ್ನುವು ದನ್ನು ಅರಿತುಕೊಳ್ಳದೆ ವಿರೋಧಿಸಬೇಕು ಎಂದು ವಿರೋಧಿಸುವುದು ನೋಡಿದಾಗ ಹುಟ್ಟಿದ್ದು.

ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರಯಾಣ ಮಾಡಬೇಡಿ ಎಂದರು. ಹೆಚ್ಚು ತೈಲ ವನ್ನು ಬಳಸಬೇಡಿ ಎಂದರು. ವರ್ಕ್ ಫ್ರಮ್ ಹೋಮ್ ಮಾಡಿ ಎಂದರು. ಚಿನ್ನ ಖರೀದಿ ಬೇಡ ಎಂದರು. ಸಾಧ್ಯವಾದಷ್ಟು ಅಡುಗೆ ಎಣ್ಣೆಯನ್ನು ಸಹ ಕಡಿಮೆ ಬಳಸಿ ಎನ್ನುವ ಮನವಿಯನ್ನು ಮಾಡಿದರು.

ನೆನಪಿರಲಿ ಇದ್ಯಾವುದೂ ಕಡ್ಡಾಯವಲ್ಲ. ಇದೊಂದು ಮನವಿಯಾಗಿತ್ತು ಅಷ್ಟೆ. ಮೊದಲೇ ಪ್ಲಾನ್ ಮಾಡಿಕೊಂಡವರು ವಿದೇಶ ಪ್ರಯಾಣ ಮಾಡಿದ್ದಾರೆ. ಅದು ತಪ್ಪಲ್ಲ. ಹಾಗೆ ತೀರಾ ಈ ತಿಂಗಳು ಅಥವಾ ಮುಂದಿನ ತಿಂಗಳು ಮದುವೆ ಇಟ್ಟುಕೊಂಡವರು ಚಿನ್ನ ಖರೀದಿಸು ತ್ತಾರೆ. ಅದು ಕೂಡ ತಪ್ಪಲ್ಲ.

ಹಾಗೆ ಮನೆಯಿಂದ ಕೆಲಸ ಮಾಡಲಾಗದ ಕೆಲವರು ಪ್ರಯಾಣ ಮಾಡಲೇಬೇಕು! ಹೀಗಾಗಿ ಇದೂ ಕೂಡ ತಪ್ಪಲ್ಲ. ಪ್ರಧಾನಿಯವರು ಹೇಳಿದ್ದು ಸಾಧ್ಯವಾದರೆ ಎನ್ನುವ ಮಾತು, ಆದಷ್ಟೂ ಕಡಿಮೆ ಮಾಡಿ ಎನ್ನುವ ಮನವಿ. ಆದರೆ, ನಮ್ಮಲ್ಲಿ ಒಂದಷ್ಟು ಜನ ಮೋದಿ ಯವರು ಹೇಳಿದ್ದಕ್ಕೆಲ್ಲ ವಿರುದ್ಧ ಹೇಳಬೇಕು ಎನ್ನುವ ಹಪಹಪಿಗೆ ಬಿದ್ದಿರುವುದು ನೋಡಿ ದಾಗ ಇಂತಹವರಿಗೆ ಯಾವ ಮುಲಾಜು ತೋರಿಸದೆ ಹೆಡೆಮುರಿ ಕಟ್ಟಬೇಕು ಎನ್ನಿಸುತ್ತದೆ. ಆಗೆಲ್ಲಾ ‘ಪ್ರಜಾಪ್ರಭುತ್ವ’ ಇದಕ್ಕೆ ಅಡ್ಡಿ ಬರುತ್ತದೆ.

ಇದನ್ನೂ ಓದಿ: Rangaswamy Mookanahalli Column: ಹೆರುವುದು ದೈಹಿಕ ಸುಖದ ಕೊನೆ ಫಲಿತಾಂಶವಲ್ಲ !

ಮಾನ್ಯ ಪ್ರಧಾನಿಗಳು ಹೀಗೆ ಹೇಳಲು ಕಾರಣವೇನು ಗೊತ್ತೇ? ಭಾರತೀಯ ರುಪಾಯಿ ಜಾಗತಿಕ ಮಟ್ಟದಲ್ಲಿ ಕುಸಿತವನ್ನು ಕಾಣುತ್ತಿದೆ. ಕೇವಲ ಮೂರು ತಿಂಗಳಲ್ಲಿ ಭಾರತ ಮೂವತ್ತು ಶತಕೋಟಿ ಅಮೆರಿಕನ್ ಡಾಲರ್ ಕಳೆದುಕೊಂಡಿದೆ. ಭಾರತೀಯ ರುಪಾಯಿ ಕುಸಿತವನ್ನು ತಪ್ಪಿಸಲು ನಮ್ಮ ಸೆಂಟ್ರಲ್ ಬ್ಯಾಂಕ್ ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖವಾಗಿ ಮೂರು ‌ಹಂತದಲ್ಲಿ ಕಾರ್ಯಕ್ಕೆ ಇಳಿಯುತ್ತದೆ.

ಮೊದಲನೇಯದು ತನ್ನಲ್ಲಿರುವ ಡಾಲರ್ ರಿಸರ್ವ್ ಮಾರಾಟ ಮಾಡುವುದರ ಮೂಲಕ ಡಾಲರ್ ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವಿರುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಸಪ್ಲೈ ಹೆಚ್ಚಾಗುತ್ತದೆ. ಆಗ ಡಿಮ್ಯಾಂಡ್ ಕುಸಿತವಾಗುತ್ತದೆ. ಇದರ ಕಾರಣದಿಂದ ಡಾಲರ್ ಎದುರು ರುಪಾಯಿ ಚೇತರಿಕೆ ಕಾಣುತ್ತದೆ.

ಕಳೆದ ಮೂರು ತಿಂಗಳಲ್ಲಿ ಆರ್‌ಬಿಐ ಮಾಡಿದ ಈ ಕೆಲಸದಿಂದ ನಮ್ಮ ಫಾರಿನ್ ರಿಸರ್ವ್ ಕಡಿಮೆ ಆಯ್ತು. ಆದರೆ ರುಪಾಯಿ ಮಾತ್ರ ಚೇತರಿಕೆ ಕಾಣಲಿಲ್ಲ. ಎರಡನೇ ಹಂತದಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳು, ಎನ್‌ಆರ್‌ಐಗಳು ಇತರೆ ಸಂಸ್ಥೆಗಳು ರುಪಾಯಿ ಕುಸಿತದ ಬಗ್ಗೆ ಟ್ರೇಡ್ ಮಾಡುವುದನ್ನು, ಹೆಡ್ಜ್ ಮಾಡುವುದನ್ನು ನಿಲ್ಲಿಸುತ್ತದೆ. ಇದರಿಂದ ಮಾರುಕಟ್ಟೆ ಯಲ್ಲಿ ಅಷ್ಟರಮಟ್ಟಿಗೆ ಏರಿಳಿತ ಕಡಿಮೆಯಾಗುತ್ತದೆ. ಇದರಲ್ಲೂ ಫಲಿತಾಂಶ ಸಿಗಲಿಲ್ಲ.

ಮೂರನೇಯದಾಗಿ ದೊಡ್ಡ ತೈಲ ಸಂಸ್ಥೆಗಳು ಸ್ಟಾಕ್ ಮಾರ್ಕೆಟಿನಲ್ಲಿ ಡಾಲರ್ ಕೊಳ್ಳುವು ದಕ್ಕೆ ನಿರ್ಬಂಧವನ್ನು ಹೇರಲಾಗಿದೆ. ಇದರಿಂದ ಡಾಲರ್ ಡಿಮ್ಯಾಂಡ್ ಕುಸಿತ ವಾಗುತ್ತದೆ ಮತ್ತು ರುಪಾಯಿ ಚೇತರಿಕೆ ಕಾಣುತ್ತದೆ. ಆದರೆ, ಈ ತೈಲ ಸಂಸ್ಥೆಗಳಿಗೆ ಲಿಕ್ವಿಡಿಟಿ ಸಮಸ್ಯೆ ಯಾಗುತ್ತದೆ. ಈ ಕಾರಣಕ್ಕೆ ಬ್ಯಾಂಕಿನಲ್ಲಿ ಇವರಿಗೆ ಪ್ರತ್ಯೇಕ ಕ್ರೆಡಿಟ್ ಲಿಮಿಟ್ ಸೃಷ್ಟಿಸ ಲಾಗಿದೆ. ಈ ಮೂರು ಅಂಶಗಳನ್ನು ಆರ್‌ಬಿಐ ಒಮ್ಮೆಲೇ ಬಳಸಿದ ಉದಾಹರಣೆ ಬಹಳ ಕಡಿಮೆ.

ಆದರೆ ಇವತ್ತಿಗೆ ಜಾಗತಿಕ ಕಚ್ಚಾ ತೈಲದ ಸಮಸ್ಯೆ ಅದೆಷ್ಟು ದೊಡ್ಡದಾಗಿದೆ ಎಂದರೆ ನೂರು ಲೀಟರ್ ಸಿಗುವ ಜಾಗದಲ್ಲಿ ಕೇವಲ ನಲವತ್ತು ಲೀಟರ್ ಮಾತ್ರ ಸಿಗುತ್ತಿದೆ. ಸಿಗುವ ಈ ಕಡಿಮೆ ತೈಲಕ್ಕೆ ಜಗತ್ತಿನಲ್ಲಿ ಹೊಡೆದಾಟ ಶುರುವಾಗಿದೆ. ಹೀಗಾಗಿ ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ತೈಲವು ಡಾಲರಿನಲ್ಲಿ ಅಳೆಯಲಾಗುತ್ತದೆ. ಹೀಗಾಗಿ ಡಾಲರ್ ಬಲವರ್ಧನೆಯಾಗುತ್ತಿದೆ.

Screenshot_4

ರುಪಾಯಿ ಸೊರಗುತ್ತಿದೆ. ಆರ್‌ಬಿಐ ತನ್ನ ಕೈಲಿರುವ ಎಲ್ಲ ಅಸ್ತ್ರಗಳನ್ನು ಬಳಸಿದರು ಕೂಡ ರುಪಾಯಿ ಕುಸಿತ ವನ್ನು ತಡೆಯಲಾಗದೆ ಕೊನೆಯ ಅಸ್ತ್ರವಾಗಿ ಪ್ರಧಾನಿಯವರ ವರ್ಚಸ್ಸ ನ್ನು ಬಳಸಿಕೊಳ್ಳಲು ಮುಂದಾಯ್ತು. ಈ ಕಾರಣದಿಂದ ಪ್ರಧಾನಿಯವರು ದೇಶದ ಜನರಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದು.

ನಮ್ಮ ದೇಶದ ರುಪಾಯಿ ಬಲವರ್ಧನೆ ಆಗಬೇಕು ಎಂದರೆ ಹೊರಗಡೆಯಿಂದ ಬರುವ ಪದಾರ್ಥಗಳ ಮೇಲೆ ಅವಲಂಬನೆ ಕಡಿಮೆಯಾಗಬೇಕು. ನಮ್ಮ ದೇಶದ ಖಜಾನೆ ಖಾಲಿ ಮಾಡುವ ಮೂರು ಮುಖ್ಯ ಹೊರಗಿನಿಂದ ಆಮದಾಗುವ ವಸ್ತುಗಳಲ್ಲಿ ಪ್ರಥಮ ಸ್ಥಾನ ಕಚ್ಚಾ ತೈಲಕ್ಕೆ ಸಿಗುತ್ತದೆ. ಎರಡನೇಯದಾಗಿ ಚಿನ್ನ ಮತ್ತು ಮೂರನೇಯ ಸ್ಥಾನದಲ್ಲಿ ಅಡುಗೆ ಎಣ್ಣೆ ಕುಳಿತಿವೆ.

ಈ ಮೂರು ಎಷ್ಟು ಸಾಧ್ಯವೋ ಅಷ್ಟು ಬಳಕೆ ಕಡಿಮೆ ಮಾಡಿದರೆ ಅಷ್ಟರ ಮಟ್ಟಿಗೆ ರುಪಾಯಿ ಬಲವನ್ನು ಪಡೆದುಕೊಳ್ಳುತ್ತದೆ. ಇದು ನಿಜವಾದ ಕಾರಣ, ಭಾರತದ ಸದ್ಯದ ಸನ್ನಿವೇಶ. ಇದನ್ನು ಅರಿತುಕೊಳ್ಳದೆ ಸುಮ್ಮನೆ ಅರಚಾಡುವ ಸ್ವಾತಂತ್ರ್ಯ ಕೊಡುವ ಪ್ರಜಾಪ್ರಭುತ್ವ ಏಕೆ ಬೇಕು? ಜಗತ್ತಿನ ಬೇರಾವ ದೇಶದಲ್ಲೂ ದೇಶದ ಒಳಿತಿಗೆ, ಉಳಿವಿಗಾಗಿ ಮನವಿ ಮಾಡಿದಾಗ ಈ ರೀತಿಯ ಅಪಸ್ವರಗಳು ಕೇಳಿ ಬರುವುದಿಲ್ಲ. ಇಷ್ಟೊಂದು ವಾಕ್ ಸ್ವಾತಂತ್ರ್ಯದ ಅವಶ್ಯಕತೆಯಿದೆಯೇ? ಪ್ರಜಾಪ್ರಭುತ್ವ ಬೇಕು ಆದರೆ ಅದರ ರೀತಿ ಖಂಡಿತ ಬದಲಾಗಬೇಕು!

ಎರಡನೇಯದಾಗಿ ಮಾನ್ಯ ಪ್ರಧಾನಿಗಳು ವಿದೇಶ ಪ್ರವಾಸ ಮಾಡಿದ್ದಾರೆ, ಅವರು ಮಾತ್ರ ವಿದೇಶ ಪ್ರವಾಸ ಮಾಡಬಹುದು ಅಂಟಿಗೆ ಚಾಕಲೇಟ್ ಕೊಡಬಹುದು ಜನ ಸಾಮಾನ್ಯ ಮಾತ್ರ ಮಾಡುವಂತಿಲ್ಲ ಎನ್ನುವ ವಿಚಿತ್ರ, ವಿತ್ತಂಡವಾದಗಳು ಕೇಳಿ ಬರುತ್ತಿವೆ. ಮೋದಿ ಯವರ ಇತ್ತೀಚಿನ UAE, ನೆದರ್‌ಲ್ಯಾಂಡ್, ಸ್ವೀಡನ್, ನಾರ್ವೆ ಮತ್ತು ಇಟಲಿ ಪ್ರವಾಸಗಳ ಕಾರಣ ಸರಿಸುಮಾರು 40 ಶತಕೋಟಿ ಅಮೆರಿಕನ್ ಡಾಲರ್ ಅಂದರೆ ಮೂರುವರೆ ಲಕ್ಷ ಕೋಟಿ ರುಪಾಯಿ ವಿದೇಶಿ ಬಂಡವಾಳ ಹರಿದು ಬರಲಿದೆ.

ಜಾಗತಿಕ ವಿತ್ತ ಜಗತ್ತು ರಿಸೆಶನ್ ಕರಿನೆರಳಿಗೆ ತುತ್ತಾಗುವ ಸಂಭವವಿರುವ ಈ ಸಮಯ ದಲ್ಲಿ ಇದೆಷ್ಟು ದೊಡ್ಡ ಮೊತ್ತ ಎನ್ನುವ ಅರಿವಿಲ್ಲದ ತೀರಾ ಕೆಟ್ಟ ಕೊಳಕು ಮನಸ್ಸಿನ ಜನರು ಇದರಲ್ಲೂ ಹುಳುಕು ಹುಡುಕುವುದು, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಚಾಕಲೇಟ್ ನೀಡಿದಕ್ಕೆ ಕೆಟ್ಟ ಕೊಳಕು ಭಾಷೆ ಬಳಸುವುದು, ಇಲ್ಲ ಸಲ್ಲದ ಸಂಬಂಧ ಬೆಸೆಯುವುದು, ಟ್ರೋಲ್ ಮಾಡುವುದಕ್ಕೆ ಅವಕಾಶ ನೀಡುವ ಪ್ರಜಾಪ್ರಭುತ್ವ ಏಕೆ ಬೇಕು? ಸೋಶಿಯಲ್ ಮೀಡಿಯಾದಲ್ಲಿ ಯಾರ ಅಪ್ಪಣೆ ಬೇಡ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಚಿಂತನೆಗಳನ್ನು, ದಾರಿತಪ್ಪಿಸುವ ಅಂಕಿ- ಅಂಶಗಳನ್ನು ಹೇಳುವುದಕ್ಕೆ ಅಂಕುಶ ಹಾಕಲೇಬೇಕು. ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ, ಆದರೆ ಈ ಪ್ರಜಾಪ್ರಭುತ್ವಕ್ಕೆ ಸರ್ಜರಿ ಬೇಕು. ಬದಲಾವಣೆ ಖಂಡಿತ ಬೇಕೇ ಬೇಕು.

ಮೂರನೇಯದಾಗಿ ಅದ್ಯಾವುದೂ ಕಾಕ್ರೋಚ್ ಪಾರ್ಟಿಯಂತೆ! ಸೋಶಿಯಲ್ ಮೀಡಿಯಾ ಬಳಸುವ ಪುಟಾಣಿ ಮಕ್ಕಳಿಗೂ ಹಣ ನೀಡಿ ಲೈಕು, ಫಾಲೋವರ್ಸ್ ಖರೀದಿ ಮಾಡಬಹುದು ಎನ್ನುವುದು ಗೊತ್ತಿದೆ. ಎರಡು ಮೂರು ದಿನದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪಾರ್ಟಿಗಳ ಹಿಂಬಾಲಕರಿಗಿಂತ ಹೆಚ್ಚು ಹಿಂಬಾಲಕರನ್ನು ಈ ಪಾರ್ಟಿ ಪಡೆದುಕೊಳ್ಳುತ್ತದೆ ಎಂದರೆ ಸಂಶಯ ಬಾರದೆ ಇರುತ್ತದೆಯೇ? ಸಂಶಯ ನಿಜ ಕೂಡ ಆಯ್ತು.

ಇದನ್ನು ಹಿಂಬಾಲಿಸುವ ಅರ್ಧದಷ್ಟು ಜನ ಕಂಡು ಬಂದದ್ದು ಪಾಕಿಸ್ತಾನದಿಂದ ಎನ್ನು ವುದು ಸಾಬೀತಾಗಿದೆ. ಆನ್ಲೈನ್ ಮೂಲಕ ಭಾರತದಲ್ಲಿ ಅರಾಜಕತೆ ಸೃಷ್ಟಿ ಮಾಡಬಹುದು ಎನ್ನುವ ಉದ್ಧಟತನ ತೋರಿಸಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಭಾರತ ಆ ರೀತಿಯ ದಂಗೆಗೆ ತುತ್ತಾಗಲು ನೇಪಾಳ, ಬಾಂಗ್ಲಾ ಅಥವಾ ಶ್ರೀಲಂಕಾವಲ್ಲ ಎನ್ನುವುದನ್ನು ಅವರಿಗೆ ಮನದಟ್ಟು ಮಾಡಿಸಬೇಕು.

ಇವತ್ತು ಇವರು ಮಾಡಿದ ಹುಚ್ಚಾಟವನ್ನು ನಾಳೆ ಇನ್ನೊಬ್ಬರು ಮಾಡುವುದಿಲ್ಲ ಎನ್ನುವು ದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಎಲ್ಲವನ್ನೂ ಸಹಿಸಿಕೊಳ್ಳುವ ಪ್ರಜಾಪ್ರಭುತ್ವ ಬಹುಕಾಲ ಉಳಿಯುವುದಿಲ್ಲ. ಪ್ರಜಾಪ್ರಭುತ್ವ ನೀಡುವ ಅತಿಯಾದ ಸ್ವಾತಂತ್ರ್ಯವನ್ನು ಬಳಸಿಕೊಂಡು ಅದೇ ಪ್ರಜಾಪ್ರಭುತ್ವವನ್ನು ಉರುಳಿಸುವ ಹುನ್ನಾರಗಳು ನಡೆಯುತ್ತವೆ. ಅವರ ಉದ್ದೇಶವೇ ಭಾರತದಲ್ಲಿ ಅರಾಜಕತೆ ಸೃಷ್ಟಿಸುವುದು.

ಇಂತಹ ಪ್ರಚೋದನೆಗಳಿಗೆ ಅವಕಾಶ ನೀಡುವ ಪ್ರಜಾಪ್ರಭುತ್ವ ಏಕೆ ಬೇಕು? ಈಗಿರುವ ಪ್ರಜಾಪ್ರಭುತ್ವದಲ್ಲಿ ದೊಡ್ಡ ಅಂದರೆ ಅತಿ ದೊಡ್ಡ ಬದಲಾವಣೆ ಖಂಡಿತ ಅವಶ್ಯವಿದೆ. ಕೊನೆಯಾದಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪ್ರಜಾಪ್ರಭುತ್ವದಲ್ಲಿರುವ ಅತಿ ದೊಡ್ಡ ದೋಷದ ಬಗ್ಗೆ ಮಾತಾಡೋಣ.

ಇವತ್ತಿಗೆ ಯೂರೋಪಿನ ಬಹಳಷ್ಟು ದೇಶಗಳು ಕೂಡ ಈ ದೋಷದ ಕಾರಣ ನಲುಗುತ್ತಿವೆ. ಪ್ರಜಾಪ್ರಭುತ್ವವಿರುವ ಎಲ್ಲ ದೇಶಗಳ ಹಣೆಬರಹವಿದು. ಪ್ರಜಾ ಪ್ರಭುತ್ವದಲ್ಲಿ ಸಂಖ್ಯೆಗೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ಮೆಜಾರಿಟಿ ವೋಟು ಯಾರಿಗೆ ಸಿಗುತ್ತದೆ ಅವರಿಗೆ ಅಧಿಕಾರ ಸಿಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಕಡ್ಡಾಯವಾಗಿ ವೋಟ್ ಮಾಡಬೇಕು ಎನ್ನುವ ಕಾನೂನು ಇಲ್ಲದೆ ಇರುವುದು ಅತಿ ದೊಡ್ಡ ದೋಷ. ಈ ಕಾರಣದಿಂದ ವೋಟ್ ಮಾಡುವ ಜನ, ವೋಟ್ ಮಾಡದೆ ಇರುವ ಜನರ ಹಣೆಬರಹವನ್ನು ಬರೆಯುವ ಹಂತಕ್ಕೆ ಬೆಳೆದಿದ್ದಾರೆ. ಸಂಖ್ಯೆ ಮುಖ್ಯ ಎಂದಾದ ಮೇಲೆ ಒಂದು ವರ್ಗದ ಜನ ತಮ್ಮ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತ ಹೋಗುತ್ತಾರೆ.

ಅವರ ವೋಟು ಇಲ್ಲದೆ ಯಾರೊಬ್ಬರೂ ಗೆಲ್ಲಲು ಸಾಧ್ಯವಿಲ್ಲ ಎಂದಾದಾಗ ಏನಾಗುತ್ತದೆ? ಓಲೈಕೆ ರಾಜಕಾರಣ ಶುರುವಾಗುತ್ತದೆ. ಇಂಗ್ಲೆಂಡ್, ಜರ್ಮನಿ ಸಹಿತ ಯೂರೋಪಿನಲ್ಲಿ ಕೂಡ ಓಲೈಕೆ ರಾಜಕಾರಣ ಶುರುವಾಗಿದೆ. ಭಾರತದ ವಿಚಾರದಲ್ಲಿ ಇದು ದಶಕಗಳಿಂದ ಆಗುತ್ತಾ ಬರುತ್ತಿದೆ. ಭಾರತೀಯರನ್ನು ನೋಡಿ ನಗುತ್ತಿದ್ದ ಅಥವಾ ಅದು ಭಾರತದ ಸಮಸ್ಯೆ ಎನ್ನುವಂತೆ ನೋಡುತ್ತಿದ್ದ ಪಾಶ್ಚಾತ್ಯರಿಗೆ ಈಗ ಬಿಸಿ ತಟ್ಟುತ್ತಿದೆ.

ಎಲ್ಲರಿಗೂ ಒಂದು ವೋಟು ಎನ್ನುವುದು ಪ್ರಜಾಪ್ರಭುತ್ವದ ಇನ್ನೊಂದು ಅತಿ ದೊಡ್ಡ ದೋಷ. ಎಲ್ಲರೂ ಸಮಾನರು ಎನ್ನುವುದು ಸುಂದರ ಕಲ್ಪನೆ. ಆದರೆ, ಅನುಷ್ಠಾನಕ್ಕೆ ತರಲಾಗದ ಕಲ್ಪನೆ. ಆದರೆ ಇದನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಡೆಮಾಕ್ರಸಿಯ ಆಶಯ ವನ್ನು ಬುಡಮೇಲು ಮಾಡಲು ಹೊರಟ ದುಷ್ಟ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದರೆ ನಮ್ಮ ಇವತ್ತಿನ ಡೆಮಾಕ್ರಸಿಯ ರೂಪ ಬದಲಾಗಬೇಕು.

ನೂರಾರು, ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿರುವ ಉದ್ಯಮಪತಿಗೂ ಒಂದೇ ವೋಟು, ಜೀವ ಉಳಿಸುವ ವೈದ್ಯನಿಗೂ, ಜೀವತೆಗೆಯುವ ಕಿಡಿಕೇಡಿಗೂ ಒಂದೇ ವೋಟು! ಇದ್ಯಾವ ನ್ಯಾಯ? ಲಕ್ಷಾಂತರ ರುಪಾಯಿ ತೆರಿಗೆ ಕಟ್ಟುವವರಿಗೂ, ಯಾವ ತೆರಿಗೆ ಕಟ್ಟದೆ ಸರಕಾರದ ಹಣದಲ್ಲಿ ಬದುಕುವವರಿಗೂ ಒಂದೇ ವೋಟು ಇದು ಯಾವ ನ್ಯಾಯ? ನಮ್ಮ ಡೆಮಾಕ್ರಸಿಗೆ ಮೇಜರ್ ಸರ್ಜರಿ ಬೇಕಿದೆ.

ಇದ್ಯಾವುದೂ ಓಬಿರಾಯನ ಕಾಲದ ನೀತಿಗಳನ್ನು ಇಟ್ಟುಕೊಂಡು ವೇಗವಾಗಿ ಬದಲಾದ ಇವತ್ತಿನ ಕಾಲಘಟ್ಟದಲ್ಲಿ ಬದುಕುವುದು ಸಾಧ್ಯವಿಲ್ಲ. ಅವರವರ ಯೋಗ್ಯತೆಗೆ ಅನುಗುಣ ವಾಗಿ ವೇತನ ನೀಡುವುದು ಸರಿಯಾದರೆ, ಯೋಗ್ಯತೆಗೆ ತಕ್ಕಂತೆ ಸೋಶಿಯಲ್ ಪಾಯಿಂಟ್ ಸಿಸ್ಟಮ್ ಏಕೆ ಜಾರಿಗೆ ತರಬಾರದು? ಅವರವರ ಪಾಯಿಂಟಿಗೆ ತಕ್ಕಂತೆ ವೋಟಿಂಗ್ ರೈಟ್ ಕೂಡ ಜಾರಿಗೆ ಬರಲಿ. ಅದು ಕೇವಲ ಹಣದ ಆಧಾರದ ಮೇಲೆ ಆಗದೆ ಒಳ್ಳೆಯ ಗುಣ, ನಡೆತೆಗೂ ಒಂದಷ್ಟು ಪಾಯಿಂಟ್ ನೀಡಲಿ.

ಇಷ್ಟು ಪಾಯಿಂಟ್ ಪಡೆದುಕೊಂಡವರಿಗೆ ಮಾತ್ರ ವೋಟಿಂಗ್ ರೈಟ್ ಎನ್ನಿ. ಇಲ್ಲವೇ ಪ್ರತಿ ನೂರು ಪಾಯಿಂಟಿಗೆ ಒಂದು ವೋಟ್ ಎನ್ನಿ. ಪ್ರಜಾಪ್ರಭುತ್ವದಲ್ಲಿ ಬಹಳಷ್ಟು ಲೋಪ ದೋಷವಿದೆ. ಅದರಲ್ಲಿ ಅತ್ಯಂತ ದೊಡ್ಡದು ಎಲ್ಲರಿಗೂ ಒಂದು ವೋಟು ಎನ್ನುವುದು. ರಾಜಕೀಯ ಪಕ್ಷಗಳಿಗೆ, ನೇತಾರರಿಗೆ ಬೇಕಿರುವುದು ಕೇವಲ ಅಧಿಕಾರ ಮಾತ್ರ.

ಅದನ್ನು ಪಡೆಯಲು ಅವರು ಓಲೈಕೆಗೆ ಇಳಿಯುತ್ತಾರೆ. ಇವತ್ತಿನ ಪ್ರಜಾಪ್ರಭುತ್ವ ಹೇಗಿದೆ ಎಂದರೆ ಹಗಲು -ರಾತ್ರಿ, ಒಳ್ಳೆಯವರು-ಕೆಟ್ಟವರು ಎಲ್ಲರೂ ಒಂದೇ ಎನ್ನುವಂತಿದೆ. ಎಲ್ಲರೂ ಒಂದೇ ಅಲ್ಲ ಎನ್ನುವುದನ್ನು ಹೇಳುವುದಕ್ಕೆ ಇದಕ್ಕಿಂತ ಉತ್ತಮ ಸಮಯ ಬೇರಾವುದಿದೆ?