ಸತ್ವಪರೀಕ್ಷೆ
ಡಾ.ರವೀಶ್ ಎನ್ ಎಸ್
ಚೀನಾದಂತಹ ಅಪಾರ ಜನಸಂಖ್ಯೆ ಹೊಂದಿರುವ ದೇಶಕ್ಕೆ ರಾಷ್ಟ್ರೀಯ ಪರೀಕ್ಷೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆಯನ್ನು ನಿರ್ವಹಿಸಲು ಸಾಧ್ಯವಾಗುವುದಾದರೆ, ಭಾರತದಲ್ಲಿ ಅದು ಯಾಕೆ ಸಾಧ್ಯ ವಾಗಬಾರದು? ಇಲ್ಲಿ ಸಮಸ್ಯೆ ಜನಸಂಖ್ಯೆಯದ್ದಲ್ಲ. ಆಡಳಿತಾತ್ಮಕ ದೃಢತೆ ಯಲ್ಲಿ, ರಾಜಕೀಯ ಇಚ್ಛಾಶಕ್ತಿಯಲ್ಲಿ ಮತ್ತು ಶಿಕ್ಷಣವನ್ನು ರಾಷ್ಟ್ರದ ಭವಿಷ್ಯವೆಂದು ನೋಡುವ ಉದಾತ್ತ ಮನೋಭಾವದಲ್ಲಿ.
ಕ್ರಿ. ಶ.427ರಲ್ಲಿ ಗುಪ್ತ ಸಾಮ್ರಾಟ ಕುಮಾರಗುಪ್ತನ ಆಶ್ರಯದಲ್ಲಿ ಸ್ಥಾಪಿತಗೊಂಡ ನಳಂದ ವಿಶ್ವ ವಿದ್ಯಾನಿಲಯವು ಕೇವಲ ಭಾರತದಷ್ಟೇ ಅಲ್ಲ, ಇಡೀ ಜಗತ್ತಿನ ಮೊದಲ ವಸತಿ ಆಧಾರಿತ ಮಹಾ ವಿದ್ಯಾಪೀಠವೆಂದು ಗುರುತಿಸಲ್ಪಟ್ಟಿತ್ತು. ಸುಮಾರು 800 ವರ್ಷ ನಿರಂತರವಾಗಿ ಜ್ಞಾನ ದೀಪ ಬೆಳಗಿಸಿದ ಆ ಮಹಾನ್ ವಿದ್ಯಾಕೇಂದ್ರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗುರುಗಳು ಮತ್ತು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು.
ಚೀನಾ, ಜಪಾನ್, ಕೊರಿಯಾ, ಟಿಬೆಟ್, ಮಂಗೋಲಿಯಾ, ಶ್ರೀಲಂಕಾ ಹಾಗೂ ದಕ್ಷಿಣ ಏಷ್ಯಾದ ಅನೇಕ ಭಾಗಗಳಿಂದ ಪಂಡಿತರು ಮತ್ತು ವಿದ್ಯಾರ್ಥಿಗಳು ನಳಂದದತ್ತ ಹರಿದು ಬರುತ್ತಿದ್ದರು. ಜ್ಞಾನಕ್ಕಾಗಿ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದ ಆ ಯುಗದಲ್ಲಿ, ಭಾರತವು ಕೇವಲ ಭೌಗೋಳಿಕ ರಾಷ್ಟ್ರವಾಗಿರಲಿಲ್ಲ; ಅದು ಜಗತ್ತಿನ ಬೌದ್ಧಿಕ ರಾಜಧಾನಿಯಾಗಿತ್ತು.
ಆದರೆ ನಳಂದದ ಬಾಗಿಲು ಎಲ್ಲರಿಗೂ ಸುಲಭವಾಗಿ ತೆರೆಯುತ್ತಿರಲಿಲ್ಲ. ವಿಶ್ವವಿದ್ಯಾನಿಲಯದ ಪ್ರವೇಶ ದ್ವಾರಗಳ ಮಹಾಪಂಡಿತರನ್ನು ನೇಮಿಸಲಾಗುತ್ತಿತ್ತು. ಅವರನ್ನು Gate Scholars ಎಂದು ಕರೆಯಲಾಗುತ್ತಿತ್ತು. ಇವರು ಕೇವಲ ಕಾವಲುಗಾರರಲ್ಲ; ಜ್ಞಾನದ ದ್ವಾರಪಾಲಕರು.
ವಿದ್ಯಾರ್ಥಿ ಒಳಗೆ ಪ್ರವೇಶಿಸುವ ಮೊದಲು, ತತ್ವಶಾಸ, ತರ್ಕ, ವ್ಯಾಕರಣ, ಧರ್ಮ, ವಿಜ್ಞಾನ ಮತ್ತು ಸಂವಾದ ಸಾಮರ್ಥ್ಯದ ಕುರಿತು ಪ್ರಶ್ನೆ ಕೇಳಲಾಗುತ್ತಿತ್ತು. ಕೇವಲ ಕಂಠಪಾಠದಿಂದ ಅಲ್ಲ, ಆಳವಾದ ಚಿಂತನೆ, ತಾರ್ಕಿಕ ಮನಸ್ಸು ಮತ್ತು ಜ್ಞಾನಪಿಪಾಸೆಯಿಂದ ಮಾತ್ರ ನಳಂದದ ದ್ವಾರಗಳು ತೆರೆಯು ತ್ತಿದವು.
ಇದನ್ನೂ ಓದಿ: Dr Rohith Kumar H G Column: ಹಂಟಾವೈರಸ್: ಸೋಂಕಿಗಿಂತ ವೇಗವಾಗಿ ಹರಡುತ್ತಿದೆ ಭಯ !
ಚೀನಾದ ಪ್ರವಾಸಿಗ ಹ್ಯೂಯನ್ ತ್ಸಾಂಗ್ ತನ್ನ ಬರಹಗಳಲ್ಲಿ ಹೇಳುವಂತೆ, ಹತ್ತು ಮಂದಿಯಲ್ಲಿ ಏಳು-ಎಂಟು ಮಂದಿ ಈ ಜ್ಞಾನ ಸಂವಾದದ ವಿಫಲರಾಗುತ್ತಿದ್ದರು. ಅಲ್ಲಿನ ಶಿಕ್ಷಣ ಪದ್ಧತಿ ಇನ್ನೂ ವಿಶಿಷ್ಟವಾಗಿತ್ತು. ಪೂರ್ವಪಕ್ಷ ಎಂಬ ಸಂವಾದ ಪರಂಪರೆ ಅಲ್ಲಿ ಜೀವಂತವಾಗಿತ್ತು. ಯಾರಾದರೂ ಒಂದು ವಿಚಾರವನ್ನು ವಿರೋಧಿಸುವ ಮೊದಲು, ಮೊದಲು ಎದುರಾಳಿಯ ವಾದವನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿತ್ತು.
ಎದುರಾಳಿಯ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ವಾದಿಸಿದರೆ, ಆ ಸಂವಾದದ ಸೋತಂತೆ ಪರಿಗಣಿಸಲಾಗುತ್ತಿತ್ತು. ಅಂದರೆ ಅಲ್ಲಿ ವಾದ ಗೆಲ್ಲುವುದಕ್ಕಿಂತ ಸತ್ಯ ಅರಿಯುವುದು ಮುಖ್ಯವಾಗಿತ್ತು. ಅದಕ್ಕಾಗಿಯೇ ನಳಂದ, ತಕ್ಷಶಿಲಾ ಮತ್ತು ವಿಕ್ರಮಶಿಲೆಯಂತಹ ಭಾರತೀಯ ವಿದ್ಯಾಕೇಂದ್ರಗಳು ವಿಶ್ವದ ಅತ್ಯಂತ ಶ್ರೇಷ್ಠ ಜ್ಞಾನಪೀಠಗಳಾಗಿ ಬೆಳಗಿದ್ದವು.
ಇಂದಿನ ಜಾಗತಿಕ ಸಂದರ್ಭದಲ್ಲಿ ‘ಎಲ್ಲ ಒಳ್ಳೆಯ ವಿಚಾರಗಳು ಜಗತ್ತಿನ ಎಲ್ಲ ಕಡೆಗಳಿಂದ ಬರಲಿ’ ಎಂಬ ಉದಾತ್ತ ಮನೋಭಾವವೇ ಭಾರತಕ್ಕೆ ಅತ್ಯಂತ ಅಗತ್ಯವಾಗಿದೆ. ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಗಳ ವಿಚಾರದಲ್ಲಿ ನಾವು ಕೇವಲ ನಮ್ಮದೇ ಆದ ಹಳೆಯ ಚೌಕಟ್ಟಿನೊಳಗೆ ಸುತ್ತಾಡದೆ, ವಿಶ್ವದ ವಿವಿಧ ರಾಷ್ಟ್ರಗಳ ಯಶಸ್ವಿ ಅನುಭವಗಳಿಂದ ಕಲಿಯಬೇಕಾಗಿದೆ.
ಫಿನ್‌ಲ್ಯಾಂಡಿನ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ, ಜಪಾನ್‌ನ ನೈತಿಕ ಶಿಕ್ಷಣ ಪದ್ಧತಿ, ದಕ್ಷಿಣ ಕೊರಿಯಾದ ತಂತ್ರಜ್ಞಾನ ಆಧಾರಿತ ಪರೀಕ್ಷಾ ಭದ್ರತೆ, ಉರುಗ್ವೆಯ ಸಮಾನ ಅವಕಾಶದ ಶಿಕ್ಷಣ ಮಾದರಿ, ಅಮೆರಿಕಾದ ವಿಶ್ಲೇಷಣಾತ್ಮಕ ಮೌಲ್ಯಮಾಪನ ವಿಧಾನ, ಬ್ರಿಟನ್ನ ಆಪ್ಟಿಟ್ಯೂಡ್ ಪರೀಕ್ಷಾ ವ್ಯವಸ್ಥೆ, ಮತ್ತು ಚೀನಾದ ಕಟ್ಟುನಿಟ್ಟಿನ ಪರೀಕ್ಷಾ ಶಿಸ್ತು - ಇವೆಲ್ಲವನ್ನು ಆಳವಾಗಿ ಅಧ್ಯಯನ ಮಾಡಿ ಭಾರತದ ಇಂದಿನ ಸಾಮಾಜಿಕ ಪರಿಸ್ಥಿತಿಗೆ ತಕ್ಕ ಸುಧಾರಣೆಗಳನ್ನು ತರಬೇಕಾಗಿದೆ.
ಈ ನಿಟ್ಟಿನಲ್ಲಿ ನಾವು ಚೀನಾದಲ್ಲಿ ನಡೆಯುವ Gaokao ಎಂಬ ರಾಷ್ಟ್ರೀಯ ಪ್ರವೇಶ ಪರೀಕ್ಷೆ ಯನ್ನು ಒಮ್ಮೆ ಗಮನಿಸಬೇಕು. ಕೋಟ್ಯಾಂತರ ವಿದ್ಯಾರ್ಥಿಗಳು ಭಾಗವಹಿಸುವ ಆ ಪರೀಕ್ಷೆ ಯನ್ನು ವಿಶ್ವದ ಅತ್ಯಂತ ಕಠಿಣ ಮತ್ತು ಶಿಸ್ತಿನ ಪರೀಕ್ಷಾ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಪ್ರಶ್ನೆ ಪತ್ರಿಕೆಯ ಪಾವಿತ್ರ್ಯವನ್ನು ರಾಷ್ಟ್ರದ ಗೌರವದಂತೆ ಕಟುವಾಗಿ ಕಾಪಾಡಲಾಗುತ್ತದೆ.
ಎಐ ಆಧಾರಿತ ತಂತ್ರಜ್ಞಾನದ ಮೇಲ್ವಿಚಾರಣೆ, ಬಯೋಮೆಟ್ರಿಕ್ ನಿಯಂತ್ರಣ, ಎಲೆಕ್ಟ್ರಾನಿಕ್ ಭದ್ರತಾ ವಲಯ, ಕಟ್ಟುನಿಟ್ಟಿನ ಲಾಜಿಸ್ಟಿಕ್ಸ್ ಮತ್ತು ಕ್ಷಿಪ್ರ ಕಾನೂನು ಕ್ರಮಗಳ ಮೂಲಕ ಅವರು ಪರೀಕ್ಷೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ.
ಚೀನಾದಂತಹ ಅಪಾರ ಜನಸಂಖ್ಯೆ ಹೊಂದಿರುವ ರಾಷ್ಟ್ರಕ್ಕೆ ಇಷ್ಟೊಂದು ಶಿಸ್ತು ಮತ್ತು ಪಾರ ದರ್ಶಕತೆಯನ್ನು ನಿರ್ವಹಿಸಲು ಸಾಧ್ಯವಾಗುವುದಾದರೆ, ಇತಿಹಾಸ ಪ್ರಸಿದ್ಧ ಭಾರತದಲ್ಲಿ ಅದು ಯಾಕೆ ಸಾಧ್ಯವಾಗಬಾರದು? ಇಲ್ಲಿ ಸಮಸ್ಯೆ ಜನಸಂಖ್ಯೆಯದ್ದಲ್ಲ; ಸಮಸ್ಯೆ ಇರುವುದು ಆಡಳಿತಾ ತ್ಮಕ ದೃಢತೆಯಲ್ಲಿ, ರಾಜಕೀಯ ಇಚ್ಛಾಶಕ್ತಿಯಲ್ಲಿ ಮತ್ತು ಶಿಕ್ಷಣವನ್ನು ರಾಷ್ಟ್ರದ ಭವಿಷ್ಯವೆಂದು ನೋಡುವ ಉದಾತ್ತ ಮನೋಭಾವದಲ್ಲಿ.
ಇಂದು ನಮ್ಮ ದೇಶದಲ್ಲಿ ನಡೆದಿರುವ ಅತ್ಯಂತ ದೊಡ್ಡ ದುರಂತವೆಂದರೆ, ಇಡೀ ಶಿಕ್ಷಣ ವ್ಯವಸ್ಥೆ ಯನ್ನು ಸಂಪೂರ್ಣವಾಗಿ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯ ಕೈಗೆ ಒಪ್ಪಿಸಿರುವುದು. ಜೆಇಇ, ನೀಟ್, ಸಿಇಟಿ, ಯುಪಿಎಸ್‌ಸಿ, ಕೆಎಎಸ್, ಐಬಿಪಿಎಸ್, ಸಿಎ, ಸಿಎಸ್, ಸಿಎಂಎ ಯಂತಹ ರಾಷ್ಟ್ರ ಮಟ್ಟದ ಪರೀಕ್ಷೆಗಳು ಪ್ರತಿಭೆಯನ್ನು ಅಳೆಯುವ ಆರೋಗ್ಯಕರ ಸಾಧನಗಳಾಗಬೇಕಿತ್ತೇ ಹೊರತು ಇಡೀ ಶಿಕ್ಷಣವನ್ನೇ ನುಂಗಿ ನೀರು ಕುಡಿಯುವ ವ್ಯವಸ್ಥೆಯಾಗಬಾರದಿತ್ತು.
ದುರದೃಷ್ಟವಶಾತ್, ಇವು ನಿಧಾನವಾಗಿ ಶಾಲೆ, ಪಿಯುಸಿ ಹಾಗೂ ಪದವಿ ಶಿಕ್ಷಣಗಳ ಮೂಲ ಮಹತ್ವ ವನ್ನೇ ಕುಗ್ಗಿಸಿ ಬಿಟ್ಟಿವೆ. ಇಂದಿನ ಪಿಯು-ಪದವಿ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠ ಕೇಳುವುದಕ್ಕಿಂತ ಕೋಚಿಂಗ್ ಸೆಂಟರ್‌ಗಳ ಟೈಮ್ ಟೇಬಲ್‌ಗೆ ಹೆಚ್ಚು ಮಹತ್ವ ಕೊಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀಟ್ ಮತ್ತು ಜೆಇಇ ಪರೀಕ್ಷೆಗಳ ಅಬ್ಬರ ಶುರುವಾದ ದಿನದಿಂದ, ಪಿಯು ಶಿಕ್ಷಣವನ್ನು ನಿಷ್ಠೆಯಿಂದ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಪ್ರಾಮಾಣಿಕವಾಗಿ ಬೋಧಿಸುತ್ತಿರುವ ಉಪನ್ಯಾಸಕರ ಕಠಿಣ ಪರಿಶ್ರಮವನ್ನು ಈ ಒಟ್ಟು ವ್ಯವಸ್ಥೆಯು ಮೌಲ್ಯ ಹೀನಗೊಳಿಸಿ ಮೂಲೆಗೆ ತಳ್ಳಿರುವಂತಿದೆ. ಈ ಕರಾಳ ಸ್ಥಿತಿ ಇಂದು ನಮ್ಮ ಉನ್ನತ ಪದವಿ ಶಿಕ್ಷಣ ವನ್ನೂ ತಲುಪಿದೆ. ಸ್ಪರ್ಧಾತ್ಮಕ ಪರೀಕ್ಷೆಯಂತಹ ದೊಡ್ಡ ವ್ಯವಸ್ಥೆಗಳ ಬೆನ್ನಟ್ಟುವ ಧಾವಂತದಲ್ಲಿ, ಅನೇಕ ವಿದ್ಯಾರ್ಥಿಗಳು ಪದವಿಯನ್ನು ಜ್ಞಾನಾರ್ಜನೆಯ ಅಮೂಲ್ಯ ಹಂತವಾಗಿ ನೋಡುತ್ತಲೇ ಇಲ್ಲ; ಬದಲಿಗೆ ಅದನ್ನೊಂದು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಕಾಗದದ ಅರ್ಹತೆಯಾಗಿ ಮಾತ್ರ ನೋಡುತ್ತಿದ್ದಾರೆ.
ಇದರಿಂದಾಗಿ ನಮ್ಮ ಹೆಮ್ಮೆಯ ವಿಶ್ವವಿದ್ಯಾಲಯಗಳ ಶಿಕ್ಷಣದ ಸತ್ವವೇ ಕಳೆಗುಂದಿದೆ. ಪರೀಕ್ಷಾ ವ್ಯವಸ್ಥೆಯ ಸುತ್ತ ನಿರ್ಮಾಣವಾಗಿರುವ ಈ ಕೋಚಿಂಗ್ ಕೇಂದ್ರೀಕೃತ ಮಾದರಿಯು ಸಮಾಜದಲ್ಲಿ ದೊಡ್ಡದೊಂದು ಆರ್ಥಿಕ ಮತ್ತು ಸಾಮಾಜಿಕ ಅಸಮತೋಲನವನ್ನು ಸೃಷ್ಟಿಸಿದೆ.
ದುಬಾರಿ ಕೋಚಿಂಗ್ ಪಡೆಯಲು ಶಕ್ತರಾಗಿರುವ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸೌಲಭ್ಯ ಸಿಕ್ಕರೆ, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಮತ್ತೊಂದು ರೀತಿಯ ಕವಲು ಹಾದಿ ನಿರ್ಮಾಣವಾಗುತ್ತಿದೆ. ಶಾಲೆ-ಕಾಲೇಜುಗಳ ಮೂಲ ಬೋಧನೆಗಿಂತ ಕೋಚಿಂಗ್ ಸೆಂಟರ್‌ಗಳ ಶಾರ್ಟ್‌ಕಟ್ ಎಕ್ಸಾಮ್ ಟ್ರಿಕ್ಸ್ʼಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿರುವುದು ಇಡೀ ಶಿಕ್ಷಣದ ದಿಕ್ಕನ್ನೇ ತಪ್ಪಿಸುತ್ತಿದೆ.
ಇದಲ್ಲದೆ ಇಂದು ಪೋಷಕರು ಮಾಡುತ್ತಿರುವ ಅತ್ಯಂತ ದೊಡ್ಡ ತಪ್ಪೆಂದರೆ, ತಮ್ಮ ಮಕ್ಕಳನ್ನು ದಾಖಲಿಸುವ ಪಿಯುಸಿ ಅಥವಾ ಪದವಿ ಕಾಲೇಜುಗಳ ಗುಣಮಟ್ಟವನ್ನು ಕೇವಲ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಅಳೆಯುತ್ತಿರುವುದು. ಇದರ ನೇರ ಪರಿಣಾಮವಾಗಿ, ಇತ್ತೀಚಿನ ದಿನಗಳಲ್ಲಿ ಮೂಲ ಕಾಲೇಜುಗಳ ಆವರಣದ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು (ಕೋಚಿಂಗ್) ನೀಡುವ ಕರಾಳ ಸಂಸ್ಕೃತಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಇದರಿಂದ ಕಾಲೇಜಿನ ಮೂಲ ಉದ್ದೇಶವೇ ಸಂಪೂರ್ಣವಾಗಿ ಕುಂಠಿತವಾಗುತ್ತಿದೆ.
ಇಂದು ಕೆಲವು ಕಡೆಗಳಲ್ಲಿ ಕಾಲೇಜುಗಳು ಶಿಕ್ಷಣ ಸಂಸ್ಥೆಗಳಂತೆ ಅಲ್ಲ, ಕೇವಲ ಕೋಚಿಂಗ್ ಉದ್ಯಮ ಗಳ ಶಾಖೆಗಳಂತೆ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗ ಸತ್ಯ. ಅಕ್ಷರದ ಪಾವಿತ್ರ್ಯವನ್ನು ವ್ಯಾಪಾರದ ಮಾರುಕಟ್ಟೆಗೆ ಎಳೆದುಕೊಂಡು ಬಂದಿರುವ ಈ ವ್ಯವಸ್ಥೆಯಲ್ಲಿ, ವಿದ್ಯಾರ್ಥಿಗಳ ಕನಸುಗಳೇ ಈಗ ಮಾರಾಟವಾಗುವ ವಸ್ತುಗಳಾಗಿವೆ. ಸಾವಿರಾರು ಕೋಟಿಗಳ ಈ ಕೋಚಿಂಗ್ ಜಾಲದಲ್ಲಿ ವಿದ್ಯಾರ್ಥಿಯೊಬ್ಬನ ಆತಂಕ, ಪೋಷಕರ ಭಯ ಮತ್ತು ಸಮಾಜದ ನಿರೀಕ್ಷೆಗಳನ್ನೇ ಹಣ ಮಾಡುವ ನಿರ್ದಯ ಉದ್ಯಮ ಬೆಳೆಯುತ್ತಿದೆ.
ಇಂದು ಕೆಲವು ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ನೀಡುವುದಕ್ಕಿಂತ ರಿಸಲ್ಟ್ ಉತ್ಪಾದಿಸುವ ಕಾರ್ಖಾನೆ ಗಳಾಗಿ ಬದಲಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಶಿಕ್ಷಣ ಸೇವೆಯಾಗಿರುವ ಜಾಗ ದಲ್ಲಿ ವ್ಯಾಪಾರ ನಿಂತಾಗ, ಅಲ್ಲಿ ಮೌಲ್ಯಗಳು ಸಾಯುತ್ತವೆ. ನಿಯತ್ತು ಹಾಳಾದಾಗ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯೂ ಭ್ರಷ್ಟಗೊಳ್ಳುತ್ತದೆ.
ಕೋಚಿಂಗ್ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯ ಪೂರಕವಾಗಿರಬೇಕಿತ್ತು; ಆದರೆ ಈಗ ಅವೇ ಶಿಕ್ಷಣದ ಮೇಲೆಯೇ ಆಧಿಪತ್ಯ ಸಾಧಿಸಲು ಮುಂದಾಗಿವೆ. ಇದು ಕೇವಲ ಶಿಕ್ಷಣದ ಮೇಲಿನ ದಾಳಿ ಅಲ್ಲ; ಸಮಾಜದ ಬೌದ್ಧಿಕ ಸ್ವಾತಂತ್ರ್ಯದ ಮೇಲಿನ ದಾಳಿ. ಶಿಕ್ಷಣದ ದಿಕ್ಕನ್ನು ಗುರುಗಳು ನಿರ್ಧರಿಸಬೇಕೇ ಹೊರತು ಮಾರುಕಟ್ಟೆ ಅಲ್ಲ.
ಆದರೆ, ನಮ್ಮಲ್ಲಿ ಸಮಸ್ಯೆ ಕೇವಲ ತಾಂತ್ರಿಕ ವ್ಯವಸ್ಥೆಯದ್ದಲ್ಲ, ಅದಕ್ಕಿಂತ ಮಿಗಿಲಾಗಿ ಸಮಸ್ಯೆ ಇರುವುದು ಆಂತರಿಕ ನಿಯತ್ತಿನಲ್ಲಿ. ಇಂದು ಪರೀಕ್ಷಾ ಅಕ್ರಮಗಳಿಗೆ ಶಿಕ್ಷೆ ನೀಡುವಂತಹ ಕಠಿಣ ಕಾನೂನುಗಳಿವೆ, ತನಿಖಾ ಸಂಸ್ಥೆಗಳಿವೆ, ಹತ್ತಾರು ನಿಯಮಾವಳಿಗಳಿವೆ. ಆದರೂ ಕಾನೂನಿನ ಕಣ್ಣಿಗೆ ಮಣ್ಣೆರಚಿ, ಅಲ್ಲಿನ ಒಳಗುಟ್ಟುಗಳ ಬಳಸಿಕೊಂಡು ಅಕ್ರಮ ಎಸಗುವ ಮಾಫಿಯಾಗಳು ಮತ್ತು ಜಾಲಗಳು ವ್ಯವಸ್ಥೆಯ ಒಳಗೇ ಬಲವಾಗಿ ಬೇರೂರಿವೆ.
ಪ್ರಶ್ನೆಪತ್ರಿಕೆ ಸೋರಿಕೆ, ಒಳಗಿನ ಮಹತ್ವದ ಮಾಹಿತಿ ಮಾರಾಟ, ಸಿಬ್ಬಂದಿಗಳ ಶಾಮೀಲಾತಿ, ಪರೀಕ್ಷಾ ಕೇಂದ್ರಗಳ ದುರುಪಯೋಗ- ಇವೆಲ್ಲವೂ ಕೇವಲ ಕಾಯ್ದೆಯ ಸಮಸ್ಯೆಗಳಲ್ಲ, ಇವು ನಮ್ಮ ಆಡಳಿತಾತ್ಮಕ ಮತ್ತು ನೈತಿಕ ವೈಫಲ್ಯದ ಸ್ಪಷ್ಟ ಸೂಚನೆಗಳಾಗಿವೆ.
ಪರೀಕ್ಷಾ ಅಕ್ರಮಗಳ ಮೂಲದಲ್ಲಿರುವುದು ಹಣದ ಅತಿಯಾಸೆ. ಶಿಕ್ಷಣ ಇಂದು ಕೆಲವರ ಕೈಯಲ್ಲಿ ಹಣದ ಯಂತ್ರ ಆಗಿ ಬದಲಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಶಿಕ್ಷಣವನ್ನು ರಾಷ್ಟ್ರ ನಿರ್ಮಾಣದ ಪವಿತ್ರ ಕ್ಷೇತ್ರವೆಂದು ನೋಡುವ ಬದಲು, ಹಣ ಮುದ್ರಿಸುವ ಉದ್ಯಮವಾಗಿ ನೋಡುವ ಮನೋಭಾವವೇ ಇಂತಹ ಅಕ್ರಮಗಳ ನಿಜವಾದ ಬೇರು.
ಇಂತಹ ಆತಂಕಕಾರಿ ಸನ್ನಿವೇಶದಲ್ಲಿ, ಸರ್ಕಾರಗಳು ಮತ್ತು ಶಿಕ್ಷಣ ಇಲಾಖೆಯು ಈ ಕೋಚಿಂಗ್ ಆಧಾರಿತ ಕಾಲೇಜುಗಳ ಧೋರಣೆಯ ಬಗ್ಗೆ ಕಟ್ಟುನಿಟ್ಟಾದ ನಿಲುವಿಗೆ ಬರಬೇಕಾಗಿರುವುದು ಇಂದಿನ ಅಗತ್ಯ. ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿಕೊಂಡು, ನಿಯಮಬಾಹಿರವಾಗಿ ಕಾಲೇಜುಗಳ ಒಳಗೆ ಕೋಚಿಂಗ್ ಮಾಫಿಯಾವನ್ನು ಪೋಷಿಸುತ್ತಿರುವ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ.
ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಸಾಗಿಸುವ ಇಡೀ ಪ್ರಕ್ರಿಯೆ ಅತ್ಯುನ್ನತ ಡಿಜಿಟಲ್ ಎನ್ಕ್ರಿಪ್ಷನ್ ಭದ್ರತೆಯ ಅಡಿಯಲ್ಲಿರಬೇಕು. ಸ್ವತಂತ್ರ ಪರೀಕ್ಷಾ ಭದ್ರತಾ ಘಟಕಗಳು ನಿರ್ಮಾಣವಾಗಬೇಕು ಹಾಗೂ ಹೊರಗಿನ ಖಾಸಗಿ ಏಜೆನ್ಸಿಗಳ ಮೇಲಿನ ಅವಲಂಬನೆ ಸಂಪೂರ್ಣವಾಗಿ ನಿಲ್ಲಬೇಕು. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಕೋಚಿಂಗ್ ಸಂಸ್ಥೆಗಳ ಮಾನ್ಯತೆಯನ್ನು ಮುಲಾಜಿಲ್ಲದೆ ಶಾಶ್ವತವಾಗಿ ರದ್ದುಪಡಿಸುವಂತಹ ಉಗ್ರ ಕ್ರಮಗಳು ಜಾರಿಗೆ ಬರಲೇಬೇಕಿದೆ.
ಇದರೊಂದಿಗೆ, ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಯನ್ನು ಹೆಚ್ಚಿಸಲು ನಮ್ಮ ಮೂಲ ಶಾಲೆ, ಕಾಲೇಜು ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾವು ತಳಮಟ್ಟದಿಂದ ಬಲಪಡಿಸ ಬೇಕಾ ಗಿದೆ. ತರಗತಿಯಲ್ಲಿ ಕೇವಲ eನದ ಬೋಧನೆಗೆ ಮತ್ತು ಸಮಗ್ರ ಕಲಿಕೆಗೆ ಮಾತ್ರ ಪ್ರಥಮ ಪ್ರಾಮುಖ್ಯತೆ ಕೊಡಬೇಕೇ ಹೊರತು ಸ್ಪರ್ಧಾತ್ಮಕ ಪರೀಕ್ಷೆಯ ಸರಿ-ತಪ್ಪುಗಳಿಗಲ್ಲ.
ತರಗತಿಯ ನಿರಂತರ ಅಧ್ಯಯನ ಮತ್ತು ಪ್ರಾಮಾಣಿಕ ಮೌಲ್ಯಮಾಪನಕ್ಕೂ ರಾಷ್ಟ್ರೀಯ ಪರೀಕ್ಷೆ ಗಳಷ್ಟೇ ಸಮಾನವಾದ ಮಹತ್ವ ಸಿಗಬೇಕು; ಆಗಲೇ ಪಿಯುಸಿ ಮತ್ತು ಪದವಿಯ ಅಂಕಗಳಿಗೆ ನಿಜವಾದ ಗೌರವ ಮರಳಿ ಸಿಗಲು ಸಾಧ್ಯ. ಶಿಕ್ಷಕ ತರಬೇತುದಾರನಾಗಿ ಬದಲಾಗಬಾರದು. ಶಿಕ್ಷಕ ಎಂದರೆ ಕೇವಲ ಶಾರ್ಟ್‌ಕಟ್ ಟ್ರಿಕ್ಸ ಹೇಳಿಕೊಡುವ ವ್ಯಕ್ತಿಯಲ್ಲ; ಜ್ಞಾನವನ್ನು ಪಸರಿಸುವ, ಜ್ಞಾನ ವನ್ನು ಉತ್ಥಾನಗೊಳಿಸುವ, ವಿದ್ಯಾರ್ಥಿಗಳಲ್ಲಿ ಓದಿನ ಮೇಲೆ ಪ್ರೀತಿ ಹುಟ್ಟಿಸುವ ವ್ಯಕ್ತಿಯಾಗಬೇಕು.
ವಿದ್ಯಾರ್ಥಿಯನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದ ಮೆಟ್ಟಿಲಾಗಿ ನೋಡುವ ವ್ಯವಸ್ಥೆಯ ನೀತಿ ಬದಲಾಗದಿದ್ದರೆ, ಭಾರತದ ಭವಿಷ್ಯದ ನೀತಿಯೂ ಬದಲಾಗುವುದಿಲ್ಲ. ಶಿಕ್ಷಕ ನನ್ನು ರಿಸಲ್ಟ್ ಮಷಿನ್ ಆಗಿ ಕುಗ್ಗಿಸುವ ಸಮಾಜ ಕೊನೆಗೆ ತನ್ನದೇ ಜ್ಞಾನ ಪರಂಪರೆಯನ್ನು ಕಳೆದುಕೊಳ್ಳುತ್ತದೆ.
ನಿಜವಾಗಿಯೂ ಬದಲಾಗಬೇಕಾಗಿರುವುದು ಪರೀಕ್ಷಾ ಪದ್ಧತಿಯೇ? ಖಂಡಿತ ಇಲ್ಲ. ಕಾಲೇಜಿನ ಯೋಗ್ಯತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶಗಳ ಮೇಲೆ ನಿರ್ಧರಿಸುವುದು ನಿಲ್ಲಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಒಂದು ನಿರ್ದಿಷ್ಟ ಉದ್ಯೋಗ ಅಥವಾ ಸೀಟನ್ನು ಪಡೆಯಲು ಇರುವ ತಾತ್ಕಾಲಿಕ ಅಳತೆಗೋಲುಗಳಷ್ಟೇ; ಆದರೆ ಕಾಲೇಜಿನ ಬೋಧನೆಯು ವಿದ್ಯಾರ್ಥಿಯ ಇಡೀ ಬದುಕಿಗೆ ದಾರಿದೀಪವಾಗುವ ನಿರಂತರ ಪ್ರಕ್ರಿಯೆ.
ಇಲ್ಲಿ ಬದಲಾಗಬೇಕಾಗಿರುವುದು ವ್ಯವಸ್ಥೆಯ ಒಳಗಿರುವ ಪ್ರತಿಯೊಬ್ಬರ ನಿಯತ್ತು. ಪರೀಕ್ಷಾ ವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರಿಗಳ, ಕೋಟಿಗಳ ವ್ಯವಹಾರ ಮಾಡುವ ಕೋಚಿಂಗ್ ಸೆಂಟರ್‌ಗಳ, ದೊಡ್ಡ ಕನಸು ಕಾಣುವ ಪೋಷಕರ ಮತ್ತು ವಿದ್ಯಾರ್ಥಿಗಳ ನಿಯತ್ತು ಮೊದಲು ಬದಲಾಗಬೇಕಿದೆ.
ಯಾಕೆಂದರೆ, ನಾವು ಇಂದು ಕೇವಲ ಕಂಪ್ಯೂಟರ್ ಪರದೆಯ ಮೇಲಿನ ಪರೀಕ್ಷಾ ಫಲಿತಾಂಶ ಗಳನ್ನು ರೂಪಿಸುತ್ತಿಲ್ಲ, ಬದಲಿಗೆ ಈ ದೇಶದ ಅಮೂಲ್ಯ ಮಕ್ಕಳ ಜೀವಂತ ಕನಸುಗಳನ್ನು ರೂಪಿಸುತ್ತಿದ್ದೇವೆ. ಶಿಕ್ಷಣ ಎನ್ನುವುದು ಕೇವಲ ಬದುಕಿನ ಓಟದ ಸ್ಪರ್ಧೆಯಲ್ಲ; ಅದು ನಮ್ಮ ರಾಷ್ಟ್ರ ನಿರ್ಮಾಣದ ಗಟ್ಟಿ ಅಡಿಪಾಯ.