ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Rohith Kumar H G Column: ಹಂಟಾವೈರಸ್:‌ ಸೋಂಕಿಗಿಂತ ವೇಗವಾಗಿ ಹರಡುತ್ತಿದೆ ಭಯ !

ಮೊದಲಿಗೆ ಇದು ಹೊಸ ವೈರಸ್ ಅಲ್ಲ. 1964ರಲ್ಲಿ ತಮಿಳುನಾಡಿನ ವೆಲ್ಲೂರಿನ ತೊಟ್ಟಪಾಳ್ಯಮ್ ಬಳಿ ಕೀಟಗಳನ್ನು ತಿನ್ನುವ ಸುಂಡಿಲಿಯಿಂದ ಜಗತ್ತಿನ ಮೊದಲ ಹಂಟಾವೈರಸ್‌ನ್ನು ಬೇರ್ಪಡಿಸಲಾಯಿತು. ಆ ವೈರಸ್‌ಗೆ ‘ತೊಟ್ಟಪಾಳ್ಯಮ್ ವೈರಸ್’ ಎಂದೇ ಹೆಸರಿಸಲಾಗಿತ್ತು. ಆದರೆ, ಈ ವೈರಸ್‌ನಿಂದ ಮನುಷ್ಯ ರಲ್ಲಿ ಯಾವುದೇ ರೀತಿಯ ಸಮಸ್ಯೆಗಳಾದ ಬಗ್ಗೆ ಈವರೆಗೂ ವರದಿಯಾಗಿಲ್ಲ.

ಹಂಟಾವೈರಸ್:‌ ಸೋಂಕಿಗಿಂತ ವೇಗವಾಗಿ ಹರಡುತ್ತಿದೆ ಭಯ !

-

Profile
Ashok Nayak May 18, 2026 9:01 AM

ಆರೋಗ್ಯ ಭಾಗ್ಯ

ಡಾ.ರೋಹಿತ್‌ ಕುಮಾರ್‌ ಎಚ್.ಜಿ

ಯಾವುದೇ ಹೊಸ ವೈರಸ್ ಸುದ್ದಿ ಬಂದರೂ ನಮಗೆ ಕೋವಿಡ್-19 ಸಾಂಕ್ರಾಮಿಕದ ನೆನಪುಗಳು ಮರುಕಳಿಸುತ್ತವೆ. ಮಾ, ಲಾಕ್ ಡೌನ್, ಅನಿಶ್ಚಿತತೆ ಹಾಗೂ ಸಾವು-ನೋವಿನ ಅನುಭವಗಳು, ನಾವು ಒಂದು ಸೋಂಕನ್ನು ನೋಡುವ ಬಗೆಯನ್ನೇ ಬದಲಾಯಿಸಿಬಿಟ್ಟಿವೆ. ಇತ್ತೀಚಿಗೆ ಮತ್ತೊಂದು ವೈರಸ್ ಸುದ್ದಿಯಲ್ಲಿದೆ. ಅದುವೇ ಹಂಟಾವೈರಸ್!

ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ ಹಡಗಿನಲ್ಲಿ ಕಾಣಿಸಿಕೊಂಡ ಹಂಟಾವೈರಸ್ ಮೂರು ಜನರನ್ನು ಬಲಿಪಡೆದ ಸುದ್ದಿ ಕೇಳಿ ಜನರು ಇದು ಮತ್ತೊಂದು ಕರೋನವಿರಬಹುದು ಎಂದು ಭಯಪಡುತ್ತಿದ್ದಾರೆ. ಆದರೆ, ಆತಂಕವನ್ನು ಬದಿಗೊತ್ತಿ, ಸಮಸ್ಯೆಯ ಅರಿವು ಹೊಂದುವುದು ಎಂದಿನಂತೆಯೇ ಅತ್ಯವಶ್ಯಕವಾಗಿದೆ.

ಮೊದಲಿಗೆ ಇದು ಹೊಸ ವೈರಸ್ ಅಲ್ಲ. 1964ರಲ್ಲಿ ತಮಿಳುನಾಡಿನ ವೆಲ್ಲೂರಿನ ತೊಟ್ಟಪಾಳ್ಯಮ್ ಬಳಿ ಕೀಟಗಳನ್ನು ತಿನ್ನುವ ಸುಂಡಿಲಿಯಿಂದ ಜಗತ್ತಿನ ಮೊದಲ ಹಂಟಾವೈರಸ್‌ನ್ನು ಬೇರ್ಪಡಿಸ ಲಾಯಿತು. ಆ ವೈರಸ್‌ಗೆ ‘ತೊಟ್ಟಪಾಳ್ಯಮ್ ವೈರಸ್’ ಎಂದೇ ಹೆಸರಿಸಲಾಗಿತ್ತು. ಆದರೆ, ಈ ವೈರಸ್‌ ನಿಂದ ಮನುಷ್ಯರಲ್ಲಿ ಯಾವುದೇ ರೀತಿಯ ಸಮಸ್ಯೆಗಳಾದ ಬಗ್ಗೆ ಈವರೆಗೂ ವರದಿಯಾಗಿಲ್ಲ.

ತದನಂತರ, 1951ರಿಂದ 1953ರವರೆಗೆ ಕೊರಿಯನ್ ಯುದ್ಧದ ಸಂದರ್ಭದಲ್ಲಿ 3000ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಯೋಧರು ರಕ್ತಸ್ರಾವ ಜ್ವರದಿಂದ ಬಳಲಿ, ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಆಗ ಪ್ರಾರಂಭಗೊಂಡ ಅಧ್ಯಯನದ ಫಲವಾಗಿ ಇದೇ ಜಾತಿಗೆ ಸೇರಿದ ಇನ್ನೊಂದು ಪ್ರಭೇದದ ವೈರಸ್‌ನ್ನು 1978ರಲ್ಲಿ ಮೊದಲ ಬಾರಿಗೆ ದಕ್ಷಿಣ ಕೊರಿಯಾದ ಹಂಟನ್ ನದಿಯ ಬಳಿಯಿದ್ದ ಇಲಿಯಿಂದ ಬೇರ್ಪಡಿಸಲಾಯಿತು. ಹಾಗಾಗಿ ಇದಕ್ಕೆ ‘ಹಂಟನ್‘ ಅಥವಾ ‘ಹಂಟಾ’ ಎಂಬ ಹೆಸರು ಬಂದಿತು.

ಇದನ್ನೂ ಓದಿ: Dr Rohith Kumar H G Column: ರಾಸಾಯನಿಕ ಎಂದ ಮಾತ್ರಕ್ಕೇ ವಿಷವಲ್ಲ, ಅದು ಬದುಕಿನ ಮೂಲ...

ಕೋವಿಡ್-19 ತರಹ ಹಂಟಾವೈರಸ್ ಸಾಮಾನ್ಯವಾಗಿ ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಆದರೆ, ಈ ಬಾರಿ ಹಡಗಿನಲ್ಲಿ ಪತ್ತೆಯಾಗಿರುವ ‘ಆಂಡಿಸ್’ (Andes) ತಳಿ ವಿಶೇಷ ವಾಗಿದೆ. ಇದು ಅಪರೂಪದ ಸಂದರ್ಭಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡ ಬಹುದೆಂಬ ಸಾಕ್ಷ್ಯಗಳಿವೆ.

2018-19ರಲ್ಲಿ ಅರ್ಜೆಂಟೀನಾದಲ್ಲಿ ನಡೆದ ಒಂದು ಹುಟ್ಟುಹಬ್ಬದ ಸಮಾರಂಭ ಸೂಪರ್ ಸ್ಪ್ರೆಡರ್ ಘಟನೆಯಾಗಿ ಗುರುತಿಸಲ್ಪಟ್ಟಿದ್ದು ಇದೇ ತಳಿಯಿಂದ. ಆದರೂ, ಈ ವೈರಸ್ ಸಾಮಾನ್ಯವಾಗಿ ದೀರ್ಘಕಾಲ ಸಮೀಪ ಸಂಪರ್ಕದಲ್ಲಿರುವವರಲ್ಲಿ ಮಾತ್ರ ಹರಡುವ ಅಪಾಯ ಹೆಚ್ಚು ಎಂದು ವಿeನಿಗಳು ಹೇಳುತ್ತಾರೆ.

ಪ್ರಾಣಿಜನ್ಯ ವೈರಸ್‌ಗಳು ಏಕೆ ಹೆಚ್ಚಾಗುತ್ತಿವೆ?

ಹಂಟಾವೈರಸ್ ಮೂಲತಃ ಒಂದು ಪ್ರಾಣಿಜನ್ಯ ರೋಗ. ಇದು ಸಾಮಾನ್ಯವಾಗಿ ಇಲಿ ಮತ್ತು ಹೆಗ್ಗಣ ಗಳಂತಹ ಪ್ರಾಣಿಗಳ ಮೂಲಕ ಹರಡುತ್ತದೆ. ಹಂಟಾವೈರಸ್ ಹೊಂದಿರುವ ಇಲಿಗಳ ಮಲ-ಮೂತ್ರ-ಜೊಲ್ಲು ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಈ ಸೋಂಕಿಗೆ ತುತ್ತಾಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೋವಿಡ್-19, ನಿಪಾ, ಹಕ್ಕಿ ಜ್ವರ , ಮಂಕಿಪಾಕ್ಸ್, ಕರ್ನಾಟಕದಲ್ಲಿ ಪದೇಪದೇ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಮತ್ತು ಈಗ ಹಂಟಾವೈರಸ್ ಮುಂತಾದ ಸೋಂಕುಗಳು ಪದೇಪದೇ ಸುದ್ದಿ ಯಾಗುತ್ತಿರುವುದು ಆಕಸ್ಮಿಕವಲ್ಲ. ‌

ಮನುಷ್ಯರು ಅರಣ್ಯ ಪ್ರದೇಶಗಳಿಗೆ ಹೆಚ್ಚು ನುಗ್ಗುತ್ತಿರುವುದು, ನಗರೀಕರಣ ವೇಗವಾಗಿ ನಡೆಯು ತ್ತಿರುವುದು, ಪರಿಸರ ನಾಶ, ಹವಾಮಾನ ಬದಲಾವಣೆ ಮತ್ತು ಕಾಡುಜೀವಿಗಳ ವಾಸಸ್ಥಾನಗಳ ಮೇಲೆ ಮಾನವ ಹಸ್ತಕ್ಷೇಪ ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬದಲಾವಣೆ ಗಳಿಂದ ಮನುಷ್ಯರು ಮತ್ತು ಕಾಡುಪ್ರಾಣಿಗಳ ನಡುವಿನ ಅಂತರ ಕಡಿಮೆಯಾಗುತ್ತಿದ್ದು, ಪ್ರಾಣಿ ಗಳಲ್ಲಿದ್ದ ವೈರಸ್‌ಗಳು ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚುತ್ತಿದೆ.

hantavirus ಒಕ

ಇಲಿ ಮತ್ತು ಹೆಗ್ಗಣಗಳಂತಹ ಪ್ರಾಣಿಗಳು ಮಾನವ ವಾಸಸ್ಥಳಗಳ ಸಮೀಪ ಹೆಚ್ಚು ಕಾಣಿಸಿ ಕೊಳ್ಳುತ್ತಿರುವುದು ಹಂಟಾವೈರಸ್‌ನಂತಹ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಸಮ ರ್ಪಕ ತ್ಯಾಜ್ಯ ನಿರ್ವಹಣೆ, ಅಸ್ವಚ್ಛ ಪರಿಸರ, ಪ್ರವಾಹ ಪರಿಸ್ಥಿತಿಗಳು ಮತ್ತು ಆಹಾರದ ಅವಶೇಷ ಗಳು ಇಂತಹ ಪ್ರಾಣಿಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಆಕರ್ಷಿಸುತ್ತವೆ. ಹೀಗಾಗಿ, ಇಂತಹ ಸೋಂಕುಗಳನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ನೋಡುವುದಕ್ಕಿಂತ, ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ತಪ್ಪು ಮಾಹಿತಿ ಬೇಡ

ಕೋವಿಡ್-19 ನಂತರ ಯಾವುದೇ ಹೊಸ ವೈರಸ್ ಕುರಿತು ಸುದ್ದಿ ಹೊರ ಬಂದರೂ ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಕ್ಷಣಾರ್ಧದಲ್ಲಿ ಹರಡುತ್ತದೆ. ಮತ್ತೊಂದು ಮಹಾಮಾರಿ ಬರುತ್ತಿದೆ, ಲಾಕ್ಡೌನ್ ಮತ್ತೆ ಬರಲಿದೆ ಅಥವಾ ಈ ವೈರಸ್ ಗಾಳಿಯ ಮೂಲಕ ಎಲ್ಲರಿಗೂ ಹರಡುತ್ತಿದೆ ಎಂಬಂತಹ ಪರಿಶೀಲಿಸದ ಸಂದೇಶಗಳು ಜನರಲ್ಲಿ ಅನಗತ್ಯ ಭಯ ಹುಟ್ಟಿಸುತ್ತವೆ.

ಹಂಟಾವೈರಸ್ ಕುರಿತೂ ಇದೇ ರೀತಿಯ ಹಲವು ತಪ್ಪು ಕಲ್ಪನೆಗಳು ಹರಿದಾಡುತ್ತಿವೆ. ಆದರೆ, ಪ್ರತಿಯೊಂದು ವೈರಸ್ ಕೂಡ ಕೋವಿಡ್‌ನಂತೆ ಜಾಗತಿಕ ಸಾಂಕ್ರಾಮಿಕವಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಸೋಂಕಿನ ಬಗ್ಗೆ ಸರಿಯಾದ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ಇಲಾಖೆ ಮತ್ತು ವಿಜ್ಞಾನಿಗಳಿಂದ ಪಡೆಯುವುದು ಅತ್ಯಂತ ಮುಖ್ಯ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪ್ರತಿಯೊಂದು ವಿಡಿಯೋ ಅಥವಾ ಸಂದೇಶವನ್ನು ನಂಬುವುದಕ್ಕಿಂತ, ವೈeನಿಕ ಆಧಾರವಿರುವ ಮಾಹಿತಿಯನ್ನು, ನಂಬಲರ್ಹ ಮೂಲಗಳಿಂದ ಮಾತ್ರ ಸ್ವೀಕರಿಸಬೇಕು. ಸೋಂಕಿನ ಬಗ್ಗೆ ಜಾಗೃತಿ ಅಗತ್ಯವಾದರೂ, ಭಯ ಮತ್ತು ವದಂತಿಗಳು ಸಮಾಜ ದಲ್ಲಿ ಗೊಂದಲ ಸೃಷ್ಟಿಸಬಲ್ಲವು. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಜವಾಬ್ದಾರಿಯುತ ಮಾಹಿತಿ ಹಂಚಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ರೋಗಲಕ್ಷಣಗಳೇನು?

ಸಾಮಾನ್ಯವಾಗಿ ವೈರಸ್‌ನಿಂದ ಸೋಂಕಿಗೊಳಗಾದ ಒಂದರಿಂದ ಎಂಟು ವಾರಗಳ ನಂತರ ವಿವಿಧ ಪ್ರಾಥಮಿಕ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳೆಂದರೆ, ಜ್ವರ, ಸುಸ್ತು, ಸ್ನಾಯು ನೋವು, ತಲೆನೋವು, ಚಳಿ, ವಾಂತಿ ಮತ್ತು ಹೊಟ್ಟೆ ನೋವುಗಳು. ಈ ಎಲ್ಲಾ ಲಕ್ಷಣಗಳು ವೈರಲ್ ಜ್ವರ ಅಥವಾ ಡೆಂಗ್ಯೂ ರೋಗಕ್ಕೆ ತಾಳೆಯಾಗುವುದರಿಂದ ರೋಗ ನಿರ್ಣಯ ವಿಳಂಬವಾಗಬಹುದು.

ಮುಂದಿನ ಹಂತದಲ್ಲಿ ಸಮಸ್ಯೆ ತೀವ್ರಗೊಂಡು ಕೆಮ್ಮು, ಉಸಿರಾಟ ಸಮಸ್ಯೆ, ಎದೆಯ ಬಿಗಿತ, ತ್ವರಿತ ಉಸಿರಾಟ, ಶ್ವಾಸಕೋಶದಲ್ಲಿ ನೀರು ಶೇಖರಗೊಂಡು ರಕ್ತದೊತ್ತಡ ಕಡಿಮೆಯಾಗಬಹುದು. ಇವು ಕೊನೆಗೆ ಕಿಡ್ನಿ ಮತ್ತು ಶ್ವಾಸಕೋಶದ ವೈಫಲ್ಯಕ್ಕೆ ಕಾರಣವಾಗಿ ಜೀವಹಾನಿಯಾಗುವ ಅಪಾಯ ವಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಈ ಸೋಂಕಿನ ಮರಣ ಪ್ರಮಾಣ 20%ರಿಂದ 40%ರಷ್ಟಿದೆ!

ಇಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ಜನರು ಈ ಸೋಂಕಿಗೆ ತುತ್ತಾಗುವ ಅಪಾಯದಲ್ಲಿರುತ್ತಾರೆ. ರೈತರು ಮತ್ತು ಕೃಷಿಕರು, ರಸ್ತೆ ಗುಡಿಸುವವರು, ಧಾನ್ಯ ಸಂಗ್ರಹಣಾ ಕೇಂದ್ರದಲ್ಲಿ ಕೆಲಸ ಮಾಡು ವವರು ಮುಖ್ಯವಾಗಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಹಂಟಾವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ, ಆಂಟಿವೈರಲ್ ಔಷಧ ಅಥವಾ ಲಸಿಕೆ ಇಲ್ಲ. ಹಾಗಾಗಿ, ಸೋಂಕಿಗೊಳಗಾದವರಿಗೆ ತಕ್ಷಣದ ಚಿಕಿತ್ಸೆ ನೀಡುವುದು ಅತ್ಯವಶ್ಯಕ. ತೀವ್ರ ನಿಗಾ ಘಟಕದಲ್ಲಿ ಆರೈಕೆ ನೀಡುವುದು, ಆಮ್ಲ ಜನಕ ಚಿಕಿತ್ಸೆ, ಉಸಿರಾಟದ ಸಹಾಯ ಮತ್ತು ತೀವ್ರವಾದ ಉಸಿರಾಟ ಮತ್ತು ಹೃದಯದ ತೊಂದರೆ ಗಳನ್ನು ನಿರ್ವಹಿಸಲು ರಕ್ತದೊತ್ತಡವನ್ನು ನಿಗಾವಹಿಸುವುದು ಪ್ರಮುಖ ಚಿಕಿತ್ಸಕ ಕ್ರಮಗಳಾಗಿವೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಅಡಿಯಲ್ಲಿರುವ 165 ವೈರಲ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳ ಜಾಲವನ್ನು ಸಕ್ರಿಯಗೊಳಿಸಲಾಗಿದ್ದು, ಈ ಪ್ರಯೋಗಾಲಯಗಳು ಯಾವುದೇ ಹೊಸ ರೋಗಕಾರಕಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿವೆ.

ಸೋಂಕಿನ ಮೇಲೆ ನಿಗಾ ವಹಿಸಲು ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಭಾರತವು ಕೈಜೋಡಿಸಿದೆ. ಮುಖ್ಯವಾಗಿ ಭಾರತದಲ್ಲಿ ಈ ಸೋಂಕು ಅತ್ಯಂತ ವಿರಳವಾಗಿರುವುದು ಸಮಾಧಾನಕರ ಅಂಶ. ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಹಂಟಾವೈರಸ್ ಯಾವುದೇ ರೀತಿಯ ಸಮಸ್ಯೆಯನ್ನು ತಂದೊ ಡ್ಡಿಲ್ಲ.

ಭಾರತೀಯರಿಬ್ಬರು ಹಡಗಿನಲ್ಲಿ ಸೋಂಕಿಗೆ ಒಳಗಾಗಿರುವುದು ಕಳವಳಕಾರಿಯಾಗಿದ್ದರೂ, ಆ ಇಬ್ಬರನ್ನು ನೆದರ್ಲ್ಯಾಂಡ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದ್ದು, ಅವರ ಆರೋಗ್ಯವು ಸುಸ್ಥಿತಿ ಯಲ್ಲಿದೆ. ಹಂಟಾವೈರಸ್ ಸೋಂಕಿಗೊಳಗಾಗದಂತೆ ತಡೆಗಟ್ಟಲು ಕೆಲವು ತಂತ್ರಗಳು ಹೀಗಿವೆ: ಮೊದಲಿಗೆ, ಇಲಿಗಳು ಮನೆಯ ಒಳಬರದಂತೆ ತಡೆಯಲು ಗೋಡೆಗಳಲ್ಲಿರುವ ರಂಧ್ರಗಳನ್ನು ಮುಚ್ಚಬೇಕು.

ಇಲಿಗಳ ಮಲ ಮೂತ್ರವಿರುವ ಜಾಗ ಶುಚಿಗೊಳಿಸುವಾಗ ಒಣ ಕಸದಂತೆ ಗುಡಿಸಬಾರದು. ಹೀಗೆ ಮಾಡುವುದರಿಂದ ವೈರಸ್ ಕಣಗಳು ಗಾಳಿಯಲ್ಲಿ ಹರಡಬಹುದು. ಬದಲಾಗಿ ನೀರು ಅಥವಾ ಸೋಂಕು ನಿವಾರಕವನ್ನು ಬಳಸಿ ಒದ್ದೆ ಬಟ್ಟೆಯಿಂದ ಒರೆಸಬೇಕು.

ಮನೆಯ ಒಳಗೆ ಚೆನ್ನಾಗಿ ಗಾಳಿಯಾಡುವಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತ ಆಹಾರದ ತ್ಯಾಜ್ಯ ಸುರಿಯಬಾರದು. ಇದು ಇಲಿಗಳನ್ನು ಆಕರ್ಷಿಸುತ್ತದೆ. ಇಂತಹ ಆಹಾರ ತ್ಯಾಜ್ಯಗಳನ್ನು ಮುಚ್ಚಳವಿರುವ ಲೋಹದ ಬುಟ್ಟಿಗಳಲ್ಲಿ ಹಾಕಿಡಬೇಕು. ಸ್ವಚ್ಛತಾ ಕಾರ್ಯ ಕೈಗೊಳ್ಳುವಾಗ ಮಾ ಮತ್ತು ಕೈಗವಸುಗಳನ್ನು ಧರಿಸಬೇಕು. ನಂತರ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

ಸಮತೋಲನ ಮುಖ್ಯ

ವಿಜ್ಞಾನಿಗಳು ಇಂದು ಒನ್ ಹೆಲ್ತ ಎಂಬ ಮಹತ್ವದ ಪರಿಕಲ್ಪನೆಯನ್ನು ಹೆಚ್ಚು ಒತ್ತಿ ಹೇಳುತ್ತಿದ್ದಾರೆ. ಇದರ ಅರ್ಥ, ಮನುಷ್ಯರ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರದ ಆರೋಗ್ಯ, ಈ ಮೂರೂ ಪರಸ್ಪರ ಸಂಬಂಧ ಹೊಂದಿವೆ ಎಂಬುದು. ಕಾಡುಜೀವಿಗಳ ವಾಸಸ್ಥಾನ ನಾಶವಾದಾಗ, ಪರಿಸರ ಅಸಮತೋಲನ ಉಂಟಾದಾಗ ಅಥವಾ ನಗರಗಳಲ್ಲಿ ಅಸ್ವಚ್ಛತೆ ಹೆಚ್ಚಾದಾಗ ಅದರ ಪರಿಣಾಮ ಹೊಸ ಸೋಂಕುಗಳ ರೂಪದಲ್ಲಿ ಮನುಷ್ಯರ ಮೇಲೆ ಬೀಳಬಹುದು.

ಹಂಟಾವೈರಸ್ ಸೋಂಕು ಈ ಸಂಬಂಧವನ್ನು ಮತ್ತೊಮ್ಮೆ ನೆನಪಿಸಿವೆ. ಆದ್ದರಿಂದ, ಭವಿಷ್ಯದ ಸೋಂಕುಗಳನ್ನು ತಡೆಗಟ್ಟಲು ಕೇವಲ ಆಸ್ಪತ್ರೆಗಳು ಮತ್ತು ಔಷಧಿಗಳು ಸಾಕಾಗುವುದಿಲ್ಲ. ಸ್ವಚ್ಛ ಪರಿಸರ, ಸಮರ್ಪಕ ತ್ಯಾಜ್ಯ ನಿರ್ವಹಣೆ, ಕಾಡುಜೀವಿಗಳ ಸಂರಕ್ಷಣೆ, ಪರಿಣಾಮಕಾರಿ ಆರೋಗ್ಯ ನಿಗಾವ್ಯವಸ್ಥೆ ಮತ್ತು ವೈಜ್ಞಾನಿಕ ಜಾಗೃತಿಗಳೆಲ್ಲವೂ ಸಮಾನವಾಗಿ ಮುಖ್ಯವಾಗುತ್ತವೆ.

ಸಾರ್ವಜನಿಕ ಆರೋಗ್ಯವನ್ನು ಬಲಪಡಿಸುವುದು ಎಂದರೆ ಕೇವಲ ರೋಗ ಬಂದ ನಂತರ ಚಿಕಿತ್ಸೆ ನೀಡುವುದಲ್ಲ. ಸೋಂಕುಗಳು ಉಂಟಾಗುವ ಪರಿಸ್ಥಿತಿಗಳನ್ನು ಕಡಿಮೆ ಮಾಡುವುದೂ ಇದರ ಭಾಗವಾಗಿದೆ. ಕೊನೆಯದಾಗಿ, ಹಂಟಾ ವೈರಸ್ ಮತ್ತೊಂದು ಕೋವಿಡ್ ಅಲ್ಲ. ಹಾಗಾಗಿ ಅನಗತ್ಯ ಗಾಬರಿ ಬೇಡ. ಹಾಗೆಂದು ನಿರ್ಲಕ್ಷ್ಯವೂ ಸಲ್ಲದು. ಹಂಟಾವೈರಸ್ ಹರಡುವ ರೀತಿ ಕೋವಿಡ್-19 ಗಿಂತ ಬಹಳ ಭಿನ್ನವಾಗಿದೆ.

ಇದು ಸಾಮಾನ್ಯವಾಗಿ ಗಾಳಿಯ ಮೂಲಕ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಸೋಂಕು ತಗುಲಿದವರಲ್ಲಿ ಸಾವಿನ ಪ್ರಮಾಣ ಹೆಚ್ಚಿರುವುದರಿಂದ ಆರಂಭಿಕ ಹಂತದ ಲಕ್ಷಣ ಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಹರಡುವ ಅಂತೆ-ಕಂತೆಗಳಿಗೆ ಕಿವಿಗೊಡದೆ, ವೈಜ್ಞಾನಿಕ ಮಾಹಿತಿಯನ್ನೇ ನಂಬುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗ್ರ್ಯಾಂಟ್ಸ್ ಮ್ಯಾನೇಜರ್)