ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಜೇಬಲ್‌ ನಯಾಪೈಸಾ ಇಲ್ಲ ಅಂದ್ರು ಓಕೆ.. ಜೀವ್ನಾ ನಡೀತದೆ ಆಲ್‌ ಓಕೆ !

ಅಲೋಕ್ ತಾನೇ ಹಾಡು ಬರೆದು, ತಾನೇ ಪಾತ್ರವಾಗಿ, ತಾನೇ ಹಾಡಿ, ತಾನೇ ನಿರ್ದೇಶಿಸಿ ಹಾಡು ಗಳನ್ನು ಹೊರತರುತ್ತಿದ್ದಾನೆ. ಆದರೆ ಇಡೀ ಕರ್ನಾಟಕವನ್ನು ತನ್ನ ಹಾಡುಗಳಲ್ಲಿ ಒಳಗೊಳ್ಳುತ್ತಿದ್ದಾನೆ. ಮಡಿ ವಂತಿಕೆಯ ಶ್ರೋತೃಗಳಿಗೆ ಆತನ ಹಾಡು ಜೀರ್ಣವಾಗಲಿಕ್ಕಿಲ್ಲ. ಅಥವಾ ಮೊದಲ ಬಾರಿ ಕೇಳಿದಾಗ ಗದ್ದಲ ಅನಿಸಬಹುದು. ಸುಮ್ಮನೆ ಆಡ್ಕೊಳೋ ಮಾತನ್ನೆಲ್ಲ ಹಾಡಿನ ಥರ ಹಾಡಿದ್ರೆ ಅದೂ ಒಂದು ಹಾಡಾಗತ್ತಾ ಅಂತಲೂ ಅನಿಸಬಹುದು.

ಪದಸಾಗರ

ಅದೆಂಥದ್ದೇ ಒಂದು ಶಕ್ತಿಶಾಲಿ ಮಾತಿರಲಿ, ನಮ್ಮಂಥ ಜನಸಾಮಾನ್ಯರು ಬರೆದರೆ ಅದಕ್ಕೆ ಮೌಲ್ಯವೇ ಹುಟ್ಟುವುದಿಲ್ಲ. ಆದರೆ ಅದರ ಕೆಳಗೆ ಮದರ್ ಥೆರೇಸಾ, ಅಬ್ದುಲ್ ಕಲಾಮ, ಸಾಕ್ರೆಟಿಸ್, ಓಶೋ ಹೀಗೇನೋ ಬರೆದು ನೋಡಿ, ಎಲ್ಲಿಲ್ಲದ ಮೌಲ್ಯ ಬಂದುಬಿಡುತ್ತದೆ. ಕೆಲವು ವ್ಯಕ್ತಿಗಳು ಜೀವಿತಾವಧಿ ಯಲ್ಲಿ ಆಡಿದ ಮಾತುಗಳಿಗೆ ನಯಾಪೈಸ ಬೆಲೆ ಸಿಕ್ಕಿರುವು ದಿಲ್ಲ. ಆದರೆ ಸತ್ತ ಕೆಲವು ವರ್ಷಗಳ ನಂತರ ಅವಕ್ಕೆ ಫಿಲಾಸಫಿಕಲ್ ವ್ಯಾಲ್ಯೂ ಬಂದು ಬಿಡುತ್ತದೆ. ಈ ಜಗತ್ತು ಯಾಕಿಂಗೆ?

ಯಾಕಿಂಗೆ ಮಗ ಯಾಕಿಂಗೆ!

ಕಳೆದ ಕೆಲವು ದಿನಗಳಿಂದ ನನ್ನ ಯುಟ್ಯೂಬ್ ಪ್ಲೇಲಿಸ್ಟಿನ ಹಾಡುಗಳಲ್ಲಿ ಅತಿ ಹೆಚ್ಚು ಕೇಳಲ್ಪಟ್ಟಿರು ವುದು ‘ಆಲ್ ಓಕೆ’ ಎಂಬ ಆಲ್ಬಮ. ಅಲೋಕ್ ಬಾಬು ಎಂಬ ಯುವಕ ತನ್ನ ಹೆಸರನ್ನೇ ಕೊಂಚ ತಿರುಚಿ ‘ಆಲ್ ಓಕೆ’ ಅಂತ ಮಾಡಿಕೊಂಡು ಆಲ್ಬಮ್ ಲೋಕದಲ್ಲಿ ಸೆನ್ಸೇಷನ್ ಆಗಿದ್ದಾನೆ. ಆತನ ಪ್ರತಿ ಹಾಡುಗಳಲ್ಲೂ ‘ಆಲ್ ಓಕೆ’ ಎಂಬ ಪದಗಳು ಕಂಪಲ್ಸರಿಯಾಗಿ ಹರಿದಾಡುತ್ತವೆ.

ಹಾಡು ಕೇಳುತ್ತಾ ಕೇಳುತ್ತಾ ಕೇಳುಗರಿಗೂ ಆಲ್ ಓಕೆ ಎಂಬ ಭಾವ ತಂತಾನೇ ಮೂಡತೊಡಗುತ್ತದೆ. ಕನ್ನಡದ ದೊಡ್ಡ ಸಂಖ್ಯೆಯ ಯುವಸಮೂಹ ಅಲೋಕನ ಹಾಡುಗಳ ಮೂಲಕ ತಮ್ಮ ಬದುಕಿನ ಅವಲೋಕನ ಮಾಡಿಕೊಳ್ಳುತ್ತಿದ್ದಾರೆ.

ಅಲೋಕ್ ತಾನೇ ಹಾಡು ಬರೆದು, ತಾನೇ ಪಾತ್ರವಾಗಿ, ತಾನೇ ಹಾಡಿ, ತಾನೇ ನಿರ್ದೇಶಿಸಿ ಹಾಡು ಗಳನ್ನು ಹೊರತರುತ್ತಿದ್ದಾನೆ. ಆದರೆ ಇಡೀ ಕರ್ನಾಟಕವನ್ನು ತನ್ನ ಹಾಡುಗಳಲ್ಲಿ ಒಳಗೊಳ್ಳು ತ್ತಿದ್ದಾನೆ. ಮಡಿವಂತಿಕೆಯ ಶ್ರೋತೃಗಳಿಗೆ ಆತನ ಹಾಡು ಜೀರ್ಣವಾಗಲಿಕ್ಕಿಲ್ಲ. ಅಥವಾ ಮೊದಲ ಬಾರಿ ಕೇಳಿದಾಗ ಗದ್ದಲ ಅನಿಸಬಹುದು. ಸುಮ್ಮನೆ ಆಡ್ಕೊಳೋ ಮಾತನ್ನೆಲ್ಲ ಹಾಡಿನ ಥರ ಹಾಡಿದ್ರೆ ಅದೂ ಒಂದು ಹಾಡಾಗತ್ತಾ ಅಂತಲೂ ಅನಿಸಬಹುದು.

ಸಾಹಿತ್ಯಕ್ಕೆ ಅಪಚಾರ ಅಂತ ಅನಿಸಿದರೂ ಅಚ್ಚರಿ ಇಲ್ಲ. ಆದರೆ ಎಂದೋ ಒಂದು ದಿನ ಅದೇ ಜನಗಳಿಗೆ ಆ ಹಾಡು ಟಾನಿಕ್ ಆಗಿಬಿಡಬಹುದು. ಡಿಪ್ರೆಶನ್‌ನಿಂದ ಮೇಲೆತ್ತಿ ಬಿಡಬಹುದು. ಜೀವನ ವನ್ನು ನೋಡುವ ರೀತಿಯನ್ನೇ ಬದಲಿಸಿಬಿಡಬಹುದು. ಆಲ್ ಓಕೆ ಸಾಂಗ್‌ಗಳಿಗೆ ಆ ತಾಕತ್ತಿದೆ. ಜೀವನದಲ್ಲಿ ನಮ್ಮೆಲ್ಲರಿಗೂ ಹುಟ್ಟುವ ಪ್ರಶ್ನೆಗಳು ಅವನ ಯಾವುದೋ ಒಂದು ಹಾಡಿನಲ್ಲಿ ಕಾಣು ತ್ತವೆ.

ಇದನ್ನೂ ಓದಿ: Naveen Sagar Column: ಧುರಂದರನೆದುರು ಮೋದಿ ವಿರೋಧಿಗಳ ಶ್ವಾನರೋದನೆ

ಇನ್ನೊಂದು ಹಾಡಿನಲ್ಲಿ ಅಂಥ ಪ್ರಶ್ನೆಗೆ ಅವನೇ ಉತ್ತರ ಕೊಟ್ಟಿರುತ್ತಾನೆ. ಮತ್ತೊಂದು ಹಾಡಿನಲ್ಲಿ ‘ಹ್ಯಾಪಿಯಾಗಿದೀನಿ ಅಂದ್ಕೋ ಸಾಕು’ ಅಂತ ಬಹಳ ಸಿಂಪಲ್ ಸಾಲುಗಳಲ್ಲಿ ಸಮಾಧಾನ ಕೊಟ್ಟು ಬಿಟ್ಟಿರುತ್ತಾನೆ. ಆಲ್ ಓಕೆ ಗೀತೆಗಳು ಇಂದಿನ ದಿನಮಾನದ, ಈ ಜಮಾನದ ಗ್ರೇಟೆಸ್ಟ್ ಫಿಲಾಸಫಿಕಲ್ ಮತ್ತು ಪ್ರೇರಣಾದಾಯಕ ಗೀತೆಗಳು ಅಂದುಬಿಡಬಹುದು.

ನಾನು ಹೀಗೆಲ್ಲ ಹಾಡಿ ಹೊಗಳುತ್ತಿದ್ದರೆ, ಆಲ್ ಓಕೆ ಸಾಂಗ್ʼಗಳನ್ನು ಕೇಳದವರಿಗೆ ಅತಿ ಅನಿಸ‌ ಬಹುದು. ಆದರೆ ಕೇಳಿದವರು ಈ ಮಾತಿಗೆ ಸಹಮತ ಕೊಟ್ಟೇ ಕೊಡುತ್ತಾರೆ. ಈ ಜಗತ್ತು ಯಾಕೆ ಹಿಂಗೆ? ನಮಗೆ ಶಂಖದಿಂದ ಬಂದರೆ ಮಾತ್ರವೇ ಯಾಕದು ತೀರ್ಥ ಅನಿಸುತ್ತದೆ? ನಮಗೇಕೆ ಉಪದೇಶ ಅನ್ನೋದು ಯಾವುದೋ ಪೀಠಾಧಿಪತಿಯಿಂದಲೇ ಬರಬೇಕು? ನಮಗ್ಯಾಕೆ ಕೋಟ್ ಅನ್ನೋದು ಯಾವುದೋ ಪುರಾತನ ವಿದೇಶಿ ಕವಿಯದ್ದೇ, ತತ್ತ್ವಜ್ಞಾನಿಯದ್ದೇ ಆಗಿರಬೇಕು? ನಮಗ್ಯಾಕೆ ಬುದ್ಧ, ಬಸವಣ್ಣ, ಸರ್ವಜ್ಞ, ಬರ್ನಾಡ್ ಶಾ, ಸಾಕ್ರೆಟಿಸ್ ಹೇಳಿದ ಮಾತುಗಳು ಮಾತ್ರವೇ ವೇದವಾಕ್ಯ? ಬದುಕಿನ ಸಿಂಪಲ್ ಸತ್ಯಗಳನ್ನು ಹೇಳುವುದಕ್ಕೆ ತತ್ತ್ವಜ್ಞಾನಿಗಳೇ ಬೇಕಾ? ನೊಬೆಲ್ ಪುರಸ್ಕೃತರೇ ಆಗಬೇಕಾ? ಜ್ಞಾನಪೀಠಿಗಳು ಹೇಳಿದರೆ ಮಾತ್ರವೇ ಬೆಲೆಯಾ? ಹೊಸ ಡಾಕ್ಟರ್‌ಗಿಂತ ಹಳೆಯ ಪೇಶೆಂಟ್ ಅನುಭವವೇ ಹಿರಿದು ಎಂಬುದು ಎಷ್ಟೊಂದು ಬಾರಿ ನಿಜವೆನಿಸುವುದಿಲ್ಲವಾ?ಅದೆಂಥದ್ದೇ ಒಂದು ಶಕ್ತಿಶಾಲಿ ಮಾತಿರಲಿ ಅದು ಜನಸಾಮಾನ್ಯರಾದ ನಾವು ಬರೆದರೆ ಅಥವಾ ನಾವು ಹೇಳಿದರೆ ಅದಕ್ಕೆ ಮೌಲ್ಯವೇ ಹುಟ್ಟುವುದಿಲ್ಲ.

ಅದೇ ಒಂದು ಸರಳ ವಿಚಾರ ಬರೆದು ಅದರ ಕೆಳಗೆ ಮದರ್ ಥೆರೇಸಾ, ಅಬ್ದುಲ್ ಕಲಾಮ್, ಸಾಕ್ರೆಟಿಸ್, ಓಶೋ ಹೀಗೇನೋ ಬರೆದು ನೋಡಿ. ಎಲ್ಲಿಲ್ಲದ ಮೌಲ್ಯ ಬಂದುಬಿಡುತ್ತದೆ. ಕೆಲವು ವ್ಯಕ್ತಿಗಳು ಜೀವಿತಾವಧಿಯಲ್ಲಿ ಆಡಿದ ಮಾತುಗಳಿಗೆ ನಯಾಪೈೆಸೆ ಬೆಲೆ ಸಿಕ್ಕಿರುವುದಿಲ್ಲ. ಆದರೆ ಸತ್ತ ಕೆಲವು ವರ್ಷಗಳ ನಂತರ ಅವರ ಬರಹದ ಸಾಲುಗಳಿಗೆಲ್ಲ ಫಿಲಾಸಫಿಕಲ್ ವ್ಯಾಲ್ಯೂ ಬಂದು ಬಿಡುತ್ತದೆ.

Screenshot_1 ಒಕ

‘ವಾಹ್’ ಅನ್ನುತ್ತದೆ ಜಗತ್ತು. ಈ ಜಗತ್ತು ಯಾಕಿಂಗೆ? ವಿಶ್ವೇಶ್ವರ ಭಟ್ಟರ ಅಂಕಣದಲ್ಲಿ ಅಪರೂಪಕ್ಕೆ ಯೋಗಿ ದುರ್ಲಭಜೀ ಎಂಬ ಮಹಾತ್ಮರ ಮಾತುಗಳು ಕಾಣಿಸಿಕೊಳ್ಳುತ್ತಿರುತ್ತವೆ. ಓದುಗರು ಆ ಮಾತುಗಳನ್ನು, ಯೋಗಿ ದುರ್ಲಭಜೀಯ ಹಾಸ್ಯಪ್ರಜ್ಞೆಯನ್ನು ಆಹಾ ಓಹೋ ಎಂದು ಕೊಂಡಾಡು ತ್ತಿರುತ್ತಾರೆ. ಅದೇ ಮಾತು ವಿಶ್ವೇಶ್ವರಭಟ್ ಅವರದ್ದಾಗಿದ್ದರೆ ಅದನ್ನು ಜನ ರಿಸೀವ್ ಮಾಡುವ ರೀತಿ ಹೇಗಿರುತ್ತಿತ್ತು?

ಫೇಸ್ ಬುಕ್‌ನಲ್ಲಿ ಕೆಲವು ವರ್ಷಗಳ ಕಾಲ ಒಂದಷ್ಟು ಸಿಂಪಲ್ ಫಿಲಾಸಫಿಕಲ್ ಸಾಲುಗಳನ್ನು ಆಗಾಗ ನಾನೇ ಬರೆದು, ಬರಹದ ಕೊನೆಗೆ, Eennav Garsa ಎಂಬ ಹೆಸರನ್ನು ಬರೆದಿಡುತ್ತಿದ್ದೆ. ಓದುಗರು Eennav Garsa ಎಂಬಾತನನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರು. ಅವನ ಇನ್ನಿತರ ಕೋಟ್ ಹುಡುಕಲು ಯತ್ನಿಸಿದರು, ಆತ ಯಾವುದಾದರೂ ಪುಸ್ತಕ ಬರೆದಿದ್ದಾನಾ ಅಂತೆಲ್ಲ ಚೆಕ್ ಮಾಡಿದರು.

ಆತ ಯಾರು ಎಂದು ನನ್ನನ್ನೇ ಬಂದು ಕೇಳಿದ್ದೂ ಆಯ್ತು. ನಾನೇ ಅದು ಅಂತ ಹೇಳಿ ಬಿಟ್ಟರೆ ಆ ಸಾಲುಗಳ ಕಿಮ್ಮತ್ತೇ ಹೋಗಿ ಬಿಡುತ್ತಿತ್ತು. ಆತನೊಬ್ಬ ಅಜ್ಞಾತ ಗ್ರೀಕ್ ಫಿಲಾಸಫರ್ ಅಂತ ಯಾಮಾ ರಿಸುತ್ತಾ ಬಂದೆ. ಫಿಲಾಸಫಿಕಲ್ ಸಾಲುಗಳ ಜತೆ ಆ ಹೆಸರೂ ಕುತೂಹಲಕ್ಕೆ ಕಾರಣ ವಾದಾಗ, ಮಂದಿ ಡೀಕೋಡ್ ಮಾಡಲು ಪ್ರಯತ್ನಿಸಿದರು.

‘ತಿಲಕಾಷ್ಠ ಮಹಿಷಬಂಧನ’ ಎಂಬ ತೆನಾಲಿರಾಮನ ಕಾಲದ ತರಲೆಯಂತೆ ನಾನು Naveen Sagar ಎಂಬ ಹೆಸರನ್ನೇ Eennav Garsa. ಎಷ್ಟೋ ವಿಚಾರಗಳಿಗೆ ತೂಕ ಬರಲು ಅದನ್ನು ಇನ್ಯಾರೋ ಮಹಾನುಭಾವರು ಬರೆದದ್ದೆಂಬಂತೆ ಬಿಂಬಿಸುವ ಅನಿವಾರ್ಯತೆ! ನಾನು ಮತ್ತದೇ ಪ್ರಶ್ನೆ ಕೇಳು ತ್ತೇನೆ ಯಾಕಿಂಗೆ ಮಗ ಯಾಕಿಂಗೆ? ವಿಷಯಗಳು, ನೀತಿಗಳು, ಎಥಿಕ್ಸ್‌ʼಗಳು ಎಲ್ಲವೂ ಅವೇ ಆದರೂ ಪೀಳಿಗೆಯಿಂದ ಪೀಳಿಗೆಗೆ ಅದನ್ನು ಹೇಳುವ ರೀತಿ ಬದಲಾಗಲೇಬೇಕಾಗುತ್ತದೆ.

ಯಾವತ್ತಿಗೂ ಪ್ರಸ್ತುತವಾಗಿರುವ ಭಗವದ್ಗೀತೆಯನ್ನು ಕೂಡ ಇಂದಿನ ಪೀಳಿಗೆಗೆ ಅರ್ಥವಾಗುವಂತೆ ಹೇಳದೇ ಹೋದರೆ ಅಪ್ರಸ್ತುತವಾಗಿಬಿಡುತ್ತದೆ. ಅವರ ದಾರಿಗೇ ಹೋಗಿ ತಿದ್ದುವ ಮಾರ್ಗ ಅನುಸ ರಿಸದೇ ಹೋದರೆ ಗ್ಯಾಪ್ ಅನ್ನೋದು ಹಾಗೆಯೇ ಉಳಿದು ಬಿಡುತ್ತದೆ.

ಗರುಡ ಪುರಾಣವನ್ನು ಅನ್ನಿಯನ್ ಎಂಬ ಸಿನಿಮಾ ಮೂಲಕ ಇಂದಿನ ಜಗತ್ತಿಗೆ ಅಪ್‌ಡೇಟ್ ಮಾಡದೇ ಹೋಗಿದ್ದಿದ್ದರೆ ಗರುಡಪುರಾಣ ಹಲವರಿಗೆ ಅಪರಿಚಿತವಾಗಿರುತ್ತಿತ್ತು. ಆಟೋ ಹಿಂದೆ ತನಗೆ ತೋಚಿದಂತೆ ಬರೆದುಕೊಂಡ ಡ್ರೈವರ್ ಕೂಡ ಒಬ್ಬ ತತ್ತ್ವಜ್ಞಾನಿಯೇ. ಬೀದಿಬದಿಯ ತಳ್ಳು ಗಾಡಿಯ ವ್ಯಾಪಾರಿ, ಮನೆಕೆಲಸಕ್ಕೆ ಬರೋ ಹೆಂಗಸು, ಕಾರ್ಪೊರೇಷನ್ ಕಸ ಎತ್ತುವ ಪೌರಕಾರ್ಮಿಕ, ಯಾರಿಂದ ಬೇಕಾದರೂ ವಾಹ್ ಅನಿಸೋ ಸಾಲು ಬಂದುಬಿಡಬಹುದು.

ಕೇಳಿಸಿಕೊಳ್ಳುವ ಕಿವಿ ಇರಬೇಕು. ಹಂಸಲೇಖರ ಸಿನಿಮಾ ಸಾಹಿತ್ಯ ಒಂದು ತಲೆಮಾರನ್ನು ಆ ಪರಿ ಆಕರ್ಷಿಸಿದ್ದು ಆ ಕಾಲದ ನಾಡಿಮಿಡಿತ ಅರಿತು ಬರೆದಿದ್ದಕ್ಕೆ. ಬಹಳ ಸರಳವಾಗಿ ಫಿಲಾಸಫಿಯನ್ನು ದಾಟಿಸಿದ್ದಕ್ಕೆ. ‘ಅವಳ್ಯಾವಳೊ ನಕ್ಕು ವನವಾಸ ಪೊಕ್ಕು, ಕೌರವನ ಮಂಡಿ ಮುರುದ್ಲಂತೆ’ ಅಂತ ಮೂರು ಸಾಲಿನಲ್ಲಿ ಮಹಾಭಾರತದ ಸಾರ ಹೇಳುವ ಜಗತ್ತು ಇದು. ಆದರೆ ಸಾಯಲು ಹೊರಟವ ನೊಬ್ಬನಿಗೆ ’ಬಾಳಕದನದಲ್ಲಿ ಭರವಸೆಗಳು ಬೇಕು, ನಾಳೆ ನಮ್ಮದೆಂಬ ನಂಬಿಕೆಗಳು ಬೇಕು’ ಎಂಬಂಥ ಸಿಂಪಲ್ ಸಾಲಿನಿಂದ ಜೀವನೋತ್ಸಾಹ ಮರಳಿಕೊಟ್ಟ ಹಂಸಲೇಖರನ್ನು ಜಗತ್ತು ಫಿಲಾ ಸಫರ್ ಅಂತ ಒಪ್ಪುವುದೇ ಇಲ್ಲ.

‘ಜೀವನ ಟಾನಿಕ್ ಬಾಟ್ಲಿ, ಕುಡಿಯೋ ಮುಂಚೆ ಅಡ್ಸು’ ಅನ್ನೋ ಹಾಡಲ್ಲಿರೋ ಫಿಲಾಸಫಿ ಯಾವ ಸಾಕ್ರೆಟಿಸ್ ಯೋಚನೆಗಳಿಗೂ ಕಮ್ಮಿ ಇಲ್ಲ. ‘ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದುರಿ..’ ಎಂಬ ಸಾಲುಗಳನ್ನು ತುಂಬ ಕಠಿಣ ಭಾಷೆಯಲ್ಲಿ ಹೇಳಿದರೆ ತಲೆಗೆ ಹೋಗುವ ಕಾಲ ಅಲ್ಲ ಇದು.

ರವಿ ಬೆಳಗರೆ, ಯೋಗರಾಜ್ ಭಟ್, ಹಂಸಲೇಖ ಮುಂತಾದವರು ಆ ಪರಿ ಪ್ರಭಾವಿಸಿದ್ದಕ್ಕೆ ಕಾರಣ ಗಹನ ವಿಚಾರಗಳನ್ನು ಸರಳವಾಗಿ ಹೇಳಿದ್ದು. ಅವರನ್ನು ಜಗತ್ತು ಫಿಲಾಸಫರ್ಸ್ ಎಂದು ಒಪ್ಪುವು ದಿಲ್ಲ. ಒಂದೊಮ್ಮೆ ಒಪ್ಪಿದರೂ ಇಂದಿಗೆ ಐವತ್ತು ವರ್ಷಗಳ ನಂತರ ಒಪ್ಪಬಹುದೇನೋ. ಆದರೆ ಅವರ ಬರಹದ ಸಾಲುಗಳು ಮಾತ್ರ ಯಾವ ಕೋಟ್‌ಗಳಿಗೂ ಕಮ್ಮಿ ಇಲ್ಲದಂಥವು.

ಇಂದು ಪ್ರದೀಪ್ ಈಶ್ವರ್ ಎಂಬ ಒಬ್ಬ ವ್ಯಕ್ತಿ ಮೊಟಿವೇಷನಲ್ ಸ್ಪೀಕರ್ ಆಗಿ ಗೆಲುವು ಸಾಧಿಸಿದ್ದಾರೆ ಎಂದರೆ ಆತ ಹೊಸತೇನನ್ನೋ ಹೇಳುತ್ತಿzರೆ ಅಂತಲ್ಲ. ಜಗತ್ತಿನ ಸರ್ವಶ್ರೇಷ್ಠ ತತ್ತ್ವಜ್ಞಾನಿಗಳಿಗಿಂತ ಬೆಸ್ಟ್ ವಿಷಯವನ್ನೇನೋ ಹೇಳುತ್ತಿದ್ದಾರೆ ಅಂತಲೂ ಅಲ್ಲ. ಅಲ್ಲಿಲ್ಲಿ ಕೇಳಿದ, ಓದಿದ ವಿಷಯ ಗಳನ್ನೆಲ್ಲ ಸಂಗ್ರಹಿಸಿ, ಇಂದಿನ ಪೀಳಿಗೆಯ ನಾಡಿಮಿಡಿತಕ್ಕೆ ತಕ್ಕ ಹಾಗೆ ಸಮರ್ಥವಾಗಿ ದಾಟಿಸು ತ್ತಿದ್ದಾರೆ. ‌

ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್ ಮುಂತಾದವರು ಹಾಸ್ಯದ ಮೂಲಕ ಒಂದು ಕಾಲದಲ್ಲಿ ಸಂದೇಶ ರವಾನಿಸುತ್ತಲೇ, ಜೀವನ ಪಾಠವನ್ನೂ ಕಲಿಸು ತ್ತಿದ್ದರು. ಜಗತ್ತಿಗೆ ಬೇಕಿರೋದೇ ಅದು. ಆಯಾ ಕಾಲಕ್ಕೆ ತಕ್ಕಂತೆ ಹೊಸರೀತಿಯಲ್ಲಿ ಪಾಸಿಟಿವಿಟಿ ಬಿತ್ತುವುದು.

ಆಲ್ ಓಕೆ ಅಲೋಕ್ ಗೆದ್ದಿರುವುದೇ ಇಲ್ಲಿ. ಆತ Rap ಸಾಂಗ್ ಹೆಸರಲ್ಲಿ ನಗ್ನತೆ, ಮದ್ಯಪಾನ, ಧೂಮ ಪಾನ, ಪಾರ್ಟಿ ಕಲ್ಚರ್ ಇತ್ಯಾದಿಗಳನ್ನು ಪ್ರಚೋದಿಸುತ್ತಿಲ್ಲ. ಬಹಳ ಸರಳ ಸಾಲುಗಳಲ್ಲು ಇಂದಿನ ಜಗತ್ತಿಗೊಂದು ಪಾಠ, ಸಾಂತ್ವನ, ಹುರುಪು ಎಲ್ಲವನ್ನೂ ನೀಡುತ್ತಿದ್ದಾನೆ.

ಆತ ಬರೆಯೋ ಹಾಡಿನ ಒಂದು ಸ್ಯಾಂಪಲ್ ನೀವೇ ನೋಡಿಬಿಡಿ: ಏನು ಮಾಡೋದು ಮುಂದೆ ಏನು ಮಾಡೋದು ಅಂತ ಮಂಕಾಗಿ ಕೂತ್ರೆಂಗೆ.. ಆ ಸವಿಗನಸಿನ ಸಿಹಿ ಪ್ರತಿ ನಿಮಿಷವ ನಿನ್ನ ಕೈಯಾರ ಕೊಂದಂಗೆ! ಹೇಗೆ ಬಾಳೋದು ಎಲ್ಲ ನೋಡಿ ನಗುತಾರೆ ಅಂತ ಬೇಜಾರಾದ್ರೆಂಗೆ..? ನಿನ್ನ ನಗುವ ಗೆಲ್ಲಬೇಕು ಇಡೀ ಪರಪಂಚವೆತಿರುಗಿ ನೋಡಂಗೆ!

ಇಲ್ಲಿ ಕಾದು ತಿನ್ನೋ ಹಣ್ಣು ತುಂಬ ಸ್ವೀಟ್ ಮಗ, ನಿನ್ ಟೈಮ್ ಕೂಡ ಬರ್ತದ್ ಒಸಿ ತಡಿ ಮಗ, ಕೆಟ್ಟ ನೆನಪುಗಳನು ನೀ ಡಿಲೀಟ್ ಮಗ. ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ, ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಯಾರೇ ಏನೇ ಅಂದ್ರು ನಾನು ಸೂಪರಾಗಿ ಇರ್ತೀನಿ ಅನ್ಕೋ.

ತಲೆಮೇಲೆ ಕೈಯಿಟ್ ಕೂತ್ರೆ ಕೆಲ್ಸ ಆಯ್ತದ? ಹಳೆ ಪ್ರೀತಿ ಫೋಟೋ ಇಟ್ಕೊಂಡ್ ನಿದ್ದೆ ಬರ್ತದಾ? ಅಜ್ಜಿ ಕೋಳಿ ಕೂಗಿದ್ರೆನೆ ಬೆಳಕಾಗದಾ? ಬೋರ್‌ವೆಲ್ಲು ತೊಡದೇನೆ ನೀರ್ ಬತ್ತದಾ? ಹಂಗೆ ಕಹಿ ನೆನಪುಗಳ ನೀ ಮರೀಬೇಕು. ನಿನ್ನ ಅನುಭವಗಳಿಂದ ನೀ ಕಲೀಬೇಕು. ನಿನ್ನ ಹಾಸಿಗೇನ ಮೀರಿ ಕಾಲ್ ಚಾಚ್ಬೇಕು.‌

ಲೈಫ್ ಎಷ್ಟೇ ಕಷ್ಟ ಆದ್ರೂ ನೀನು ನಗಬೇಕು, ಇಲ್ಲಿ ಮಾತಾಡೋವ್ರುನಿನ್ ಇಎಂಐ ಕಟ್ತಾರಾ? ಜೀವನದಲ್ಲಿ ಸೋತಿದ್ದಾಗ ನಿನ್ ಬೆನ್ತಟ್ತಾರಾ? ಹೊಟ್ಟೆ ಹಸಿವ್ ಅಂತ ಅಂದಾಗ್ ಊಟಾ ಹಾಕ್ತಾರಾ? ಶನಿವಾರದ್ ಸಂಜೆ ಖರ್ಚಿಗ್ ಕಾಸ್ ಕೊಡ್ತಾರಾ? ನಿಂಗ್ ತುಂಬಾ ಜನ ಫ್ರೆಂಡ್ಸ್‌ ಇಲ್ಲ ಅಂದ್ರು ಓಕೆ.

ನೀನ್ ಹಾಕೋ ಪೋಸ್ಟಿಗ್ ಲೈಫ್ ಇಲ್ಲ ಅಂದ್ರು ಓಕೆ. ನಿನ್ ಜೇಬಲ್ ನಯಾ ಪೈಸಾ ಇಲ್ಲ ಅಂದ್ರು ಓಕೆ, ಜೀವ್ನಾ ನಡಿತದೆ ಆಲ್ ಓಕೆ. ನಿನ್ನ ಕಷ್ಟಕ್ ಇಲ್ಲ ನಷ್ಟಕ್ ಇಲ್ಲ ಬೇಕಾದಾಗ ಜತೆಗಿಲ್ಲ. ಅಂಥವ್ರ್ ಅಭಿಪ್ರಾಯ ಕಟ್ಕೊಂಡ್ ಏನ್ಮಾಡ್ತಿಯ ಬಾರ್ಲೆ...

ಈ ಸಾಲುಗಳನ್ನು ಇಂದಿನ ಟ್ರೆಂಡಿ ಮ್ಯೂಸಿಕ್ ಜತೆಯಲ್ಲಿ ಒಬ್ಬ ಕ್ಲೋಸ್ ಫ್ರೆಂಡ್ ಹೇಳ್ತಿರೋ ರೀತಿಯಲ್ಲಿ ಹೇಳಿದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ? ಯಾರಿಗೆ ತಾನೇ ಮನಸಿಗೆ ನಾಟಲ್ಲ? ಇಂಥ ಸಾಲುಗಳ ಮೂಲಕ ಅಲೋಕ್ ರಾಜ್ಯದ ಯುವಸಮೂಹವನ್ನು ಮಾತ್ರವಲ್ಲ, ಮನಸಲ್ಲಿ ಹುಡುಗು ತನ ಉಳಿಸಿಕೊಂಡ ನಮ್ಮಂಥವರನ್ನೂ ಗೆದ್ದಿದ್ದಾನೆ.

ಮಗುಚಿ ಬಿದ್ದ ಮೂಡನ್ನು ಛಕ್ಕನೆ ಕೈಹಿಡಿದು ಮೇಲಕ್ಕೆತ್ತೋ ತಾಕತ್ತು ಅವನ ಗೀತೆಗಳಲ್ಲಿದೆ. ಹ್ಯಾಪಿ ಯಾಗಿದೆ ಅಂದ್ಕೋ ಗೀತೆಯಲ್ಲಿ ಕನ್ನಡದ ಹಿರಿಯ ಹಾಸ್ಯನಟರನ್ನೆಲ್ಲ ಸೇರಿಸಿಕೊಂಡು ಅವರಿಂದ ಹಾಡನ್ನು ಕಳೆಗಟ್ಟಿಸಿದ್ದಾನೆ. ಇಂದಿನ ಪೀಳಿಗೆಯನ್ನು ವ್ಯರ್ಥ ಕೌನ್ಸೆಲಿಂಗ್ ಅಥವಾ ಅರ್ಥಹೀನ ಪ್ರವಚನಗಳಿಂದ ಗೆಲ್ಲಲಾಗುವುದಿಲ್ಲ. ಎಷ್ಟಂತ ಅಂದಿನ ತತ್ತ್ವಶಾಸ್ತ್ರಜ್ಞರ ಸಾಲುಗಳಿಗೇ ಜೋತು ಬೀಳೋಣ? ಕೊಂಚ ಮಡಿವಂತಿಕೆ ಬಿಟ್ಟು ನೋಡಿದರೆ ಇಂದಿನ ಹೊಸ ತಲೆಮಾರಿನ ತತ್ತ್ವಜ್ಞಾನಿ ಗಳು ಸಿಗುತ್ತಾರೆ. ಒಪ್ಪಿಕೊಳ್ಳೋಣ. ಅಪ್ಪಿಕೊಳ್ಳೋಣ. ಸಲೂಷನ್ ಎಲ್ಲಿಂದ ಸಿಕ್ಕರೂ ಸ್ವೀಕರಿಸೋಣ ಎಂಬುದು ವರ್ಷದ ಕೊನೆಯ ರೆಸಲೂಷನ್ ಆಗಲಿ.

ನವೀನ್‌ ಸಾಗರ್‌

View all posts by this author