ಒಡಲಾಳ
ಸುರೇಂದ್ರ ಪೈ, ಭಟ್ಕಳ
ರಾಜ್ಯದಲ್ಲಿ ಈಗಾಗಲೇ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ತೃತೀಯ ಭಾಷೆಯ ಅಂಕಗಳಿಗೆ ಪ್ರತಿಯಾಗಿ ಗ್ರೇಡ್ ನೀಡುವ ಘೋಷಣೆಯಾಗಿದೆ. ಹಿಂದಿ ಕಲಿಕೆಯು ಕಡ್ಡಾಯ ವಾಗಬಾರದು ಎಂಬ ನಿಟ್ಟಿನಲ್ಲಿ ದ್ವಿಭಾಷಾ ನೀತಿಗೆ ಇಂಬು ನೀಡುವ ಕ್ರಮ ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ, ಪ್ರಸ್ತುತ ವರ್ಷದಿಂದಲೇ ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸದಿರುವ ವಿಷಯದಲ್ಲಿ ಕೊಂಚ ಭಿನ್ನಾಭಿಪ್ರಾಯವಿದೆ. ಅದು ಸಹ ವಿದ್ಯಾರ್ಥಿಗಳ ವರ್ಷಪೂರ್ತಿ ಪರಿಶ್ರಮ ಹಾಗೂ ತರಾತುರಿಯ ನಿರ್ಧಾರದ ಕುರಿತಾದ ಕಾಳಜಿಯೇ ವಿನಃ ಹಿಂದಿ ಭಾಷೆಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿದ್ದರ ವಿರುದ್ಧದ ಮನಸ್ಥಿತಿಯಲ್ಲ ಎಂಬ ಸೂಕ್ಷ್ಮತೆ ಮನಗಾಣಬೇಕಿದೆ.
ರಾಜ್ಯದಲ್ಲಿ ಪ್ರಸುತ್ತ ಪರೀಕ್ಷಾ ನೀತಿಯ ಬದಲಾವಣೆಗೆ ಅಂದರೆ ತೃತೀಯ ಹಿಂದಿ ವಿಷಯ ಅಂಕಗಳ ಬದಲಿಗೆ ಗ್ರೇಡ್ ನೀಡುವುದು ಹಾಗೂ 675ರ ಬದಲು 525 ಅಂಕಗಳನ್ನು ಪರಿಗಣಿಸುವುದರ ಹಿಂದಿನ ಮೂರು ಪ್ರಮುಖ ಕಾರಣವನ್ನು ಒಮ್ಮೆ ಗಮನಿಸೋಣ.
ಮಕ್ಕಳ ತೃತೀಯ ಭಾಷೆಯ ಮೇಲಿನ ಕಲಿಕಾ ಹೊರೆಯನ್ನು ಇಳಿಸುವುದು. ಇದರೊಂದಿಗೆ ಕಳೆದ ವರ್ಷ 90510 ವಿದ್ಯಾರ್ಥಿಗಳು ತೃತೀಯ ಹಿಂದಿ ಭಾಷೆಯಲ್ಲಿ ಅನುತೀರ್ಣ ರಾಗಿದ್ದರು. ಹಾಗಾಗಿ ಒಂದು ವಿಷಯದಲ್ಲಿ ಫೇಲ್ ಆದ ಕಾರಣ ಮತ್ತೆ ಮರುಪರೀಕ್ಷೆ ಎದುರಿಸಬೇಕಾದ ಅನಿವಾರ್ಯತೆ. ಇದರಿಂದ ಮಕ್ಕಳ ಒಂದು ಕಲಿಕಾ ವರ್ಷ ಹಾಳಾಗುತ್ತದೆ ಎಂಬ ಕಾಳಜಿ.
ಕೊನೆಯದಾಗಿ ಕರ್ನಾಟಕದಲ್ಲಿ ದ್ವಿಭಾಷಾ ನೀತಿಯ ಅನುಷ್ಠಾನ ಹಾಗೂ ಹಿಂದಿ ಭಾಷೆಯ ಹೇರಿಕೆಯ ವಿರೋಧ. ಈಗಾಗಲೇ ಬ್ಯಾಂಕ್, ರೈಲ್ವೇ ಇಲಾಖೆ, ಪೋಸ್ಟ್ ಆಫೀಸ್ ಇನ್ನಿತರ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಹಿಂದಿ ಭಾಷಿಗರಿಗೆ ನೀಡಲಾಗುವ ಆದ್ಯತೆ ಹಾಗೂ ಕನ್ನಡವನ್ನು ಗೌಣವನ್ನಾಗಿಸಿದ್ದರ ಕುರಿತಾದ ಅಸಮಾಧಾನ. ಈ ಮೂರು ಅಂಶಗಳು ನಿಜಕ್ಕೂ ಗಂಭೀರವಾಗಿ ಪರಿಗಣಿಸಲೇಬೇಕಿತ್ತು.
ಇದನ್ನೂ ಓದಿ: Surendra Pai Column: ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಇಲ್ಲವೇ ?
ಆ ನಿಟ್ಟಿನಲ್ಲಿ ಪ್ರಸುತ್ತ ಶಿಕ್ಷಣ ಇಲಾಖೆ ಹಾಗೂ ಕನ್ನಡಪರ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳ ಹೋರಾಟಕ್ಕೆ ಜಯ ಸಿಕ್ಕಿದ್ದು ಸಂತಸದ ಸಂಗತಿ. ಆದರೆ, ಈ ಸಂತಸದ ನಡುವೆಯೇ ನಾವು ಎರಡು ಪ್ರಮುಖ ಅಂಶಗಳನ್ನು ಕನ್ನಡ ಭಾಷೆಯ ಉಳಿವಿಗಾಗಿ ಈ ಕ್ಷಣದಿಂದಲೇ ಅತ್ಯಂತ ಗಂಭೀರವಾಗಿ ಚಿಂತಿಸಬೇಕಿದೆ.
ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಪರೀಕ್ಷಾ ಪದ್ಧತಿ ಮಾತ್ರವಲ್ಲ ಶಿಕ್ಷಣ ಪದ್ಧತಿಯಲ್ಲೂ ಬದಲಾವಣೆಗೆ ಮುನ್ನುಡಿ ಬರೆಯುವ ಕೆಲಸವಾಗ ಬೇಕಿದೆ. ಪ್ರಸುತ್ತ ತೃತೀಯ ಐಚ್ಛಿಕ ಭಾಷೆಯ ಅಂಕಗಳನ್ನು ಕೈಬಿಟ್ಟ ಸಮಯದಲ್ಲಿ ಬೇರೆ ರಾಜ್ಯದವರು ಹಾಗೂ ಯಾರೆ ಕನ್ನಡವನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿ ಕೊಂಡು ಪ್ರೀತಿಯಿಂದ ಕಲಿಯುತ್ತಿದ್ದರೋ ಅವರಿಗೆ ಕನ್ನಡ ಕಲಿಯಲು ಅವಕಾಶ ನೀಡುವ ಒಂದು ಯೋಜನೆ ರೂಪಿಸಬೇಕಿದೆ.
ಅದು ಸಾಧ್ಯವನ್ನಾಗಿಸಲು ದೊಡ್ಡ ಬದಲಾವಣೆಯೇನು ಮಾಡಬೇಕಿಲ್ಲ. ಪ್ರಸುತ್ತ ಶಿಕ್ಷಣ ಸಚಿವರ ಘೋಷಣೆಯಂತೆ ವಿದ್ಯಾರ್ಥಿಗಳು ಎರಡು ಕಡ್ಡಾಯ ಭಾಷಾ ವಿಷಯ ಅಂದರೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲೀಷ್ ಅಥವಾ ಇವೆರಡರಲ್ಲಿ ಒಂದನ್ನು ಪ್ರಥಮ ಭಾಷೆಯನ್ನಾಗಿ, ಇನ್ನೊಂದನ್ನು ದ್ವಿತೀಯ ಭಾಷೆಯನ್ನಾಗಿ ಕಲಿಯಬೇಕು.
ಇದರೊಂದಿಗೆ ಕಡ್ಡಾಯ ಮುಖ್ಯ ವಿಷಯಗಳಾದ ಗಣಿತ, ವಿಜ್ಞಾನ ಹಾಗೂ ಸಮಾಜ-ವಿಜ್ಞಾನವನ್ನು ಕಲಿಯಬೇಕು. ಅಲ್ಲಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 5 ಕಡ್ಡಾಯ ವಿಷಯಗಳು. ಆದರೆ, ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ 8,42,173 ವಿದ್ಯಾರ್ಥಿಗಳಲ್ಲಿ ಕೇವಲ 5,24,984, ಶೇ.62.34 ಪ್ರತಿಶತ ಪಾಸ್ ಆಗಿದ್ದಾರೆ.
ಇನ್ನು 3,17,189 ಶೇ.37.66 ಮಕ್ಕಳು ಅನುತೀರ್ಣರಾಗಿದ್ದರು. ಅದರಲ್ಲಿ ಅತಿ ಹೆಚ್ಚು ಪ್ರಥಮ ಭಾಷೆ ಕನ್ನಡದಲ್ಲಿ 1,65,080 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಭಾಷೆ ಇಂಗ್ಲೀಷ್‌ನಲ್ಲಿ ಶೇ.20 ರಷ್ಟು ವಿದ್ಯಾರ್ಥಿಗಳಿದ್ದರು. ಅವರೆ ಮೂರು ಬಾರಿ ಪರೀಕ್ಷೆ ಬರೆದರೂ ಸಹ 1,67,289 ವಿದ್ಯಾರ್ಥಿಗಳು ಫೇಲಾದರು. ಅವರಲ್ಲಿ 90,334 ವಿದ್ಯಾರ್ಥಿಗಳು ಮಾತ್ರ ಈ ಬಾರಿ ಪರೀಕ್ಷೆಗೆ ನೋಂದಣಿಯಾಗಿದ್ದಾರೆ.
ಅಂದರೆ ಕಳೆದ ವರ್ಷ ಮೂರು ಪರೀಕ್ಷೆಯಲ್ಲೂ ಫೇಲ್ ಆದವರ ಪೈಕಿ ಬರೋಬ್ಬರಿ 70,955 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಣಿ ಮಾಡಿಸಿಲ್ಲ. ಅರ್ಥಾತ್ ತಮ್ಮ ಕಲಿಕೆಯನ್ನು ಕೈಬಿಟ್ಟಿದ್ದಾರೆ. ಇನ್ನೂ 2023-24ನೇ ಸಾಲಿನಲ್ಲಿ 8,59,967 ವಿದ್ಯಾರ್ಥಿ ಗಳ ಪೈಕಿ 6,31,204 ಶೇ.73.40ರಷ್ಟು ಪಾಸಾಗಿದ್ದರು. ಇನ್ನುಳಿದ 2,28,763 ಮಕ್ಕಳು ಫೇಲಾ ಗಿದ್ದರು. ಈ ಅಂಕಿಅಂಶಗಳು ಪ್ರತಿವರ್ಷವೂ ಪರೀಕ್ಷೆಯ ಫಲಿತಾಂಶ ಬಂದಾಗ ಕಾಣ ಸಿಗುತ್ತದೆ.
ಅದೆಷ್ಟೋ ಮಕ್ಕಳು ಭಾಷಾ ವಿಷಯದ, ಮುಖ್ಯ ವಿಷಯದ ಫೇಲಾಗಿ ತಮ್ಮ ಶಿಕ್ಷಣವನ್ನು ಅರ್ಧದ ಮೊಟಕುಗೊಳಿಸುತ್ತಾರೆ. ಹೀಗೆ ಪ್ರತಿ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಫೇಲಾದರೂ ಸಹ ಅವರ ಭವಿಷ್ಯದ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಇಲಾಖೆಯ ಯಾವೊಬ್ಬ ಸಚಿವರು ಸೂಕ್ತ ಪರೀಕ್ಷಾ ನೀತಿ ಹಾಗೂ ಶಿಕ್ಷಣ ನೀತಿಯ ಬದಲಾವಣೆಗೆ ಯಾವ ಕ್ರಮ ವನ್ನು ಕೈಗೊಂಡಿಲ್ಲ. ಇದರ ಬಗ್ಗೆ ಸರಳವಾದ ಪರಿಹಾರ ಮಾರ್ಗವನ್ನು ಅಳವಡಿಸಿ ಕೊಳ್ಳುವ ಅವಕಾಶ ಇದ್ದರೂ ಸಹ ಅದರ ಬಗ್ಗೆ ಚಿಂತಿಸಿಲ್ಲ.
ಪ್ರಸ್ತುತ ಹಿಂದಿ ವಿಷಯದ ಅಂಕ ಲೆಕ್ಕಕ್ಕಿಲ್ಲದ ಕಾರಣ 2-3ಲಕ್ಷದಲ್ಲಿ ಒಂದಿಷ್ಟು ಸಾವಿರ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಫೇಲ್ ಆಗುವ ಭಯದಿಂದ ಪಾರಾದರು. ಆದರೆ, ಇನ್ನುಳಿದ ಲಕ್ಷಾಂತರ ವಿದ್ಯಾರ್ಥಿಗಳು ಒಂದೊಮ್ಮೆ ಕನ್ನಡ, ಇಂಗ್ಲೀಷ್ ಭಾಷಾ ವಿಷಯ ಗಳ ಪೈಕಿ ಒಂದನ್ನು ಅಥವಾ ಗಣಿತ, ವಿಜ್ಞಾನ, ಸಮಾಜ-ವಿಜ್ಞಾನ ಮುಖ್ಯ ವಿಷಯಗಳ ಪೈಕಿ ಒಂದನ್ನು ಫೇಲ್ ಆದರೆ ಅದಕ್ಕೆ ಕ್ರಮವೇನು? ಈ ಬಾರಿ ಏನೋ ಒಟ್ಟಾರೆ 33 ಪಾಸ್ ಅಂಕ ನಿಯಮ ಜಾರಿಗೆ ಬಂದ ಕಾರಣ 35-40 ಸಾವಿರ ಜನರು ಪಾಸ್ ಆಗಬಹದು. ಆದರೂ ಒಂದೂವರೆ -ಎರಡು ಲಕ್ಷ ವಿದ್ಯಾರ್ಥಿಗಳ ಕಥೆ ಏನು?ಈ ಪ್ರಶ್ನೆಗೆ ಇದೀಗ ಸೂಕ್ತ ನಿರ್ಣಯ ಕೈಗೊಳ್ಳುವ ಸಕಾಲ ಒದಗಿ ಬಂದಿದೆ.
ಇದಕ್ಕೆ ಸುಲಭವಾದ ವಿದ್ಯಾರ್ಥಿ ಸ್ನೇಹಿ ಒಂದು ಮಾರ್ಗವಿದೆ. ಯಾರೆ ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್ ಕಡ್ಡಾಯ ಭಾಷಾ ವಿಷಯದಲ್ಲಿ ಫೇಲ್ ಆಗುತ್ತಾರೋ ಅವರು ಒಂದು ವೇಳೆ ತೃತೀಯ ಭಾಷೆಯ ಐಚ್ಛಿಕ ವಿಷಯದಲ್ಲಿ ಉತ್ತೀರ್ಣರಾಗಿದ್ದರೆ ಆ ಅಂಕಗಳನ್ನು ಫೇಲ್ ಆದ ಒಂದು ಕಡ್ಡಾಯ ಭಾಷಾ ವಿಷಯದೊಂದಿಗೆ ಸಬ್ಟ್ಸಿಟ್ಯೂಟ್ ಮಾಡುವುದು.
ಉದಾಹರಣೆಗೆ ಕನ್ನಡದಲ್ಲಿ ವಿದ್ಯಾರ್ಥಿ ಫೇಲ್ ಆಗಿ ಇಂಗ್ಲೀಷ್‌ನಲ್ಲಿ ಪಾಸಾಗಿದ್ದರೆ, ಆತನ್ನು ಫೇಲ್ ಎಂದು ಘೋಷಿಸುವ ಬದಲು, ಆತ ಒಂದು ವೇಳೆ ಏನಾದರೂ ತೃತೀಯ ಭಾಷೆ ಯಲ್ಲಿ ಒಂದು (ಆತನ ಆಯ್ಕೆಯ) ಸಂಸ್ಕೃತದಲ್ಲಿ ಪಾಸಾಗಿದ್ದರೆ ಆ ಅಂಕಗಳನ್ನು ಕನ್ನಡ ಅಂಕದೊಂದಿಗೆ ಬದಲಿಸಿ ಪಾಸ್ ಎಂದು ಘೋಷಣೆ ಮಾಡುವುದು.
ಆಗ ಕೆಲವೊಂದಿಷ್ಟು (ಸಂಸ್ಕೃತ, ತುಳು, ಕೊಂಕಣಿ, ಕನ್ನಡ, ಮರಾಠಿ, ಹಿಂದಿ) ವಿಷಯ ಗಳನ್ನು 6ನೇ ಐಚ್ಛಿಕ ವಿಷಯವನ್ನಾಗಿ ಕಲಿಯಲು ವಿದ್ಯಾರ್ಥಿಗಳಿಗೆ ಆಯ್ಕೆ ನೀಡಬೇಕು. ಹಾಗೆಯೇ ವಿದ್ಯಾರ್ಥಿ ಕಡ್ಡಾಯ ಮುಖ್ಯ ವಿಷಯವಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಪೈಕಿ ಒಂದನ್ನು ಫೇಲ್ ಆದರೆ ಅಂತಹ ವಿದ್ಯಾರ್ಥಿ ಒಂದೊಮ್ಮೆ 7ನೇ ಐಚ್ಛಿಕ ಭಾಷೆಯಾಗಿ ಸ್ಕೀಲ್ ಸಬ್ಜೆಕ್ಟ್ ಅಂದರೆ ಕೌಶಲ್ಯಾಧಾರಿತ ವಿಷಯಗಳಾದ ಸೆಕ್ಯೂರಿಟಿ, ಕಂಪ್ಯೂಟರ್ ಅಪ್ಲಿಕೇಶನ್, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹಣಕಾಸು, ಕೃಷಿ, ಆಹಾರ, ಆರೋಗ್ಯ, ಮಾರ್ಕೆಟಿಂಗ್, ಮಲ್ಟಿಮೀಡಿಯಾ ಹೀಗೆ ವಿದ್ಯಾರ್ಥಿ ಆಯ್ಕೆ ಮಾಡಿ ಕೊಂಡ ಒಂದು ವಿಷಯದಲ್ಲಿ ಪಾಸ್ ಆಗಿದ್ದರೆ ಆ ಅಂಕಗಳನ್ನು ಫೇಲ್ ಆಗಿರುವ ಒಂದು ಕಡ್ಡಾಯ ಮುಖ್ಯ ವಿಷಯದೊಂದಿಗೆ ಸಬ್ಟ್ಸಿಟ್ಯೂಟ್ ಮಾಡುವುದು.
ಈ ವಿಷಯಕ್ಕೆ 80 ಅಂಕದ ಬದಲು 50 ಅಂಕ ನಿಗದಿಪಡಿಸಿ ಇನ್ನುಳಿದ 50 ಅಂಕವನ್ನು ಪ್ರಾಯೋಗಿಕ ಅಂಕವನ್ನಾಗಿ ನಿಗದಿ ಪಡಿಸುವುದು. ಇದರಿಂದ ವಿದ್ಯಾರ್ಥಿಗಳು ಒಂದೊಮ್ಮೆ ವಾರ್ಷಿಕ ಪರೀಕ್ಷೆಯಲ್ಲಿ ಒಂದು ಭಾಷಾ ವಿಷಯ ಹಾಗೂ ಒಂದು ಕಡ್ಡಾಯ ವಿಷಯದಲ್ಲಿ ಫೇಲ್ ಆದರೂ ಸಹ ಆ ವಿದ್ಯಾರ್ಥಿ 6 ಐಚ್ಛಿಕ ಹಾಗೂ 7ನೇ ಸ್ಕೀಲ್ ವಿಷಯವನ್ನು ಆಯ್ಕೆ ಮಾಡಿಕೊಂಡ ಕಾರಣ ಪಾಸಾಗಿದ್ದರೆ ಎಂದರೆ ಅಂತಹ ಲಕ್ಷಾಂತರ ಮಕ್ಕಳು ಫೇಲ್ ಅಗುವುದು ತಪ್ಪುತ್ತದೆ.
ಹೀಗೆ ಮಾಡುವುದರಿಂದ ರಾಜ್ಯ ಶಿಕ್ಷಣ ಇಲಾಖೆಯ ಗುಣಮಟ್ಟದ ಶಿಕ್ಷಣಕ್ಕಾಗಲಿ, ವಿದ್ಯಾರ್ಥಿಯ ಕಲಿಕಾ ವಿಷಯದ ಜ್ಞಾನ ಹಾಗೂ ಆಯ್ಕೆಗಾಗಲಿ ಯಾವುದೇ ಧಕ್ಕೆ ಬರುವುದಿಲ್ಲ. ಏಕೆಂದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 5 ಕಡ್ಡಾಯ ವಿಷಯ ಇದ್ದರೂ ಸಹ 6ನೇ ಭಾಷಾ ವಿಷಯ ಹಾಗೂ 7ನೇ ಸ್ಕೀಲ್ ಸಬ್ಜೆಕ್ಟ್ ಆಯ್ಕೆ ಕಡ್ಡಾಯವಾಗಬಾರದು.
ಅದು ವಿದ್ಯಾರ್ಥಿಯ ಆಯ್ಕೆ ಮಾತ್ರ ಆಗಿರಬೇಕು. ಅದು ವಿದ್ಯಾರ್ಥಿ ಸ್ನೇಹಿ ಆಗಿರಬೇಕು. ಜತೆಗೆ ಫೇಲ್ ಪ್ರಮಾಣ ಕಡಿಮೆ ಆಗುವ ಹಾಗೂ ಹೊಸದೊಂದು ವಿಷಯವನ್ನು ಕಲಿಯುವ ವೇದಿಕೆಯಾಗಿರಬೇಕು. ಇಲ್ಲಿ ಸರಕಾರ ಯಾವ ವಿಷಯಗಳು 6ನೇ ಐಚ್ಛಿಕ ಭಾಷಾ ವಿಷಯ ಇರಬೇಕು ಹಾಗೂ 7ನೇ ಸ್ಕೀಲ್ ಸಬ್ಜೆಕ್ಟ್ ಇರಬೇಕೆಂದು ತಜ್ಞರೊಂದಿಗೆ ಚರ್ಚಿಸಿ, ಪ್ರಸುತ್ತ ಲಭ್ಯವಿರುವ ಮಾನವ ಸಂಪನ್ಮೂಲ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಿ. ಇಲ್ಲೂ ಸಹ ಹಿಂದಿ ಹೇರಿಕೆಯ ಮಾತೇ ಇಲ್ಲ.
ಬದಲಾಗಿ ನಮ್ಮ ರಾಜ್ಯದ ಇತರ ಭಾಷೆಯ ಕಲಿಕೆಗೆ ಮಾನ್ಯತೆ ದೊರಕುತ್ತದೆ. ಜತೆಗೆ ವಿದ್ಯಾರ್ಥಿ 8ನೇ ತರಗತಿಯಿಂದಲೇ ಒಂದೊಂದು ಕೌಶಲ ವಿಷಯ ಕಲಿಯುವುದರಿಂದ ಭವಿಷ್ಯದಲ್ಲಿ ಮಕ್ಕಳಿಗೂ ಅಗಾಧ ಉದ್ಯೋಗಾವಕಾಶವು ಲಭಿಸುತ್ತದೆ. ಶಿಕ್ಷಣ ಇಲಾಖೆಯ ಫಲಿತಾಂಶವು ಹೆಚ್ಚುತ್ತದೆ.
ಇದನ್ನು ಕಡ್ಡಾಯ ಮಾಡದೇ, ಆಸಕ್ತಿ ಇರುವ ಶಾಲೆಯವರು ತಮ್ಮ ಮಕ್ಕಳಿಗೆ ಕಲಿಸು ವಂತಾಗಬೇಕು. ಸರಕಾರಿ ಶಾಲೆಗೆ ಇದನ್ನು ಕಡ್ಡಾಯಗೊಳಿಸಲು ಇರುವ ಬಹುದೊಡ್ಡ ತೊಡಕು ಶಿಕ್ಷಕರ ನೇಮಕಾತಿ.
ಅಂತಹ ಸಂದರ್ಭದಲ್ಲಿ ಅತಿಥಿ ಶಿಕ್ಷಕರಿಂದ ಬೋಧನೆ ಮಾಡಿಸಬಹುದು. ಇಷ್ಟು ಸರಳ ಪರಿಹಾರವನ್ನು ರಾಜ್ಯ ಶಿಕ್ಷಣ ಇಲಾಖೆ ಮುಂದಿನ ವರ್ಷದಿಂದಾದರೂ ಅನುಷ್ಠಾನಕ್ಕೆ ತಂದರೆ ಖಂಡಿತವಾಗಿಯೂ ರಾಜ್ಯ ಶಿಕ್ಷಣ ದೇಶದ ಕ್ರಾಂತಿ ಮಾಡುವುದರಲ್ಲಿ ಎರಡು ಮಾತಿಲ್ಲ.
ಕೊನೆಯದಾಗಿ ಕನ್ನಡಪರ ಸಂಘಟನೆಗಳು ಸೇರಿದಂತೆ ಎಲ್ಲರ ಒಕ್ಕೊರಲಿನ ಮಾತು ಕೇಂದ್ರ ಸರಕಾರದ ಬಹುತೇಕ ಎಲ್ಲಾ ಹುದ್ದೆಗಳಲ್ಲೂ ಹಿಂದಿಯವರಿಗೆ ಹೆಚ್ಚು ಅವಕಾಶ ಎಂದು. ನಿಜ ಎಡೆ ಅವರೇ ತುಂಬಿದ್ದಾರೆ ಹೌದು. ಒಮ್ಮೆ ಯೋಚಿಸಿ ಕೆಪಿಎಸ್‌ಇ ವತಿಯಿಂದ ನಡೆಯುವ ನೇಮಕಾತಿಯಲ್ಲಿ ನಮ್ಮ ರಾಜ್ಯದವರಿಗೆ ಮಾತ್ರ ಅವಕಾಶ. ಆಯಾಯ ಹುದ್ದೆಗೆ ಬೇಕಾದ ಒಂದಿಷ್ಟು ತರಬೇತಿ ಕೇಂದ್ರಗಳು ಅಂದು, ಇಂದು ಕಾಣಬಹುದು.
ಆದರೆ, ಕೇಂದ್ರ ಸರಕಾರದ ಹಲವು ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಹತೆ ಯೇ ಶೈಕ್ಷಣಿಕ ಮಾನದಂಡ. ಆದರೆ, ನಾವು ಮಾತ್ರ ನಮ್ಮ ಮಕ್ಕಳಿಗೆ ಹುಟ್ಟುವಾಗಲೇ ಡಾಕ್ಟರ್, ಎಂಜಿನಿಯರ್ ಮಾತ್ರ ಆಗಬೇಕು. ಅದಕ್ಕೆ ಪೂರಕವಾಗಿ 6ನೇ ತರಗತಿಯಿಂದಲೇ ಕೋಚಿಂಗ್ ನೀಡಬೇಕೆಂಬ ಧೋರಣೆ ಹೊಂದಿದ್ದೇವೆ.
ಆ ನಿಟ್ಟಿನಲ್ಲಿ ಅಷ್ಟೇ ಪ್ರಯತ್ನಿಸುತ್ತಿದ್ದೇವೆ. ಆದರೆ, ಉತ್ತರ ಭಾರತದಲ್ಲಿ ಹತ್ತನೇ ತರಗತಿ ಯಿಂದಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್ ನೀಡಲಾಗುತ್ತದೆ. ನಾವಿಲ್ಲಿ ಹೇಗೆ ನೀಟ್, ಸಿಇಟಿ ಪರೀಕ್ಷೆಗೆ ಹೆಚ್ಚು ಒತ್ತು ನೀಡುತ್ತೇವೋ ಅದೇ ರೀತಿ ಅಲ್ಲಿ ಕೇಂದ್ರ ಸರಕಾರದ ಎಲ್ಲಾ ಸ್ಪರ್ಧಾತ್ಮಕ ಹುದ್ದೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ. ಅಲ್ಲಿಯ ಗಲ್ಲಿ-ಗಲ್ಲಿಯಲ್ಲೂ ಕೋಚಿಂಗ್ ಸೆಂಟರ್ ಇದೆ. ಶಾಲೆಯಲ್ಲೂ ವಿಶೇಷ ತರಬೇತಿ ನೀಡು ತ್ತಾರೆ. ಪಕ್ಕದ ತೆಲಂಗಾಣ, ಆಂಧ್ರಪ್ರದೇಶದಲ್ಲಿ ನೋಡಿ ಅಲ್ಲೂ ಸಾವಿರಾರು ಬ್ಯಾಕಿಂಗ್ ಪರೀಕ್ಷಾ ಕೋಚಿಂಗ್ ಸೆಂಟರ್ ಇವೆ. ಇಂದು ನಮ್ಮ ರಾಜ್ಯದಲ್ಲಿರುವ ಬಹುತೇಕ ಬ್ಯಾಂಕ್ ಉದ್ಯೋಗಿಗಳಲ್ಲಿ ನಮ್ಮ ಅಕ್ಕ ಪಕ್ಕದ ರಾಜ್ಯದವರೇ ಹೆಚ್ಚು. ನಮ್ಮ ಮಕ್ಕಳು ಸಹ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಗೆ ತಯಾರಿ ನಡೆಸಲು ಅ ಹೋಗಬೇಕು.
ಹಾಗಾಗಿ ನಮ್ಮ ರಾಜ್ಯದಲ್ಲಿ ಕನ್ನಡಿಗರು ಅಂತಹ ಹುದ್ದೆಗಳನ್ನು ಪಡೆಯಲು ಸೋಲು ತ್ತಿದ್ದಾರೆ. ಅಬ್ಬಬ್ಬಾ ಎಂದು ಲೆಕ್ಕ ಹಾಕಿದರೂ 3-4 ಪ್ರಮಾಣೀಕೃತ ಕೋಚಿಂಗ್ ಸೆಂಟರ್ ಬಿಟ್ಟರೆ ನಮ್ಮ ರಾಜ್ಯದಲ್ಲಿ ಎಲ್ಲಾ ಮಕ್ಕಳಿಗೂ ಕಡಿಮೆ ಖರ್ಚಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುವ ಕೇಂದ್ರವಿಲ್ಲ.
ನಮ್ಮ ಪಾಲಕರಿಗೂ, ಸರಕಾರಕ್ಕೂ, ಸಂಘಟನೆಗಳಿಗೂ ಇದರ ಬಗ್ಗೆ ಉತ್ಸಾಹವಿಲ್ಲ. ಕನ್ನಡಿ ಗರು ಕೇಂದ್ರ ಸರಕಾರದ ಹುದ್ದೆಗೆ ಅರ್ಜಿ ಹಾಕುವ ಪ್ರಮಾಣ ಹಾಗೂ ತೇರ್ಗಡೆಯಾಗುವ ಪ್ರಮಾಣವನ್ನೊಮ್ಮೆ ಅವಲೋಕಿಸಿದಾಗ ನಾವೆಲ್ಲಿ ಏಡವುತ್ತಿದ್ದೇವೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ.
ಇನ್ನಾದರೂ ಸರಕಾರ ಹಾಗೂ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಇಂತಹ ಸರಳ ಬದಲಾವಣೆ ಯನ್ನು ಪಕ್ಷಾತೀತವಾಗಿ ಚಿಂತಿಸಿ, ಚರ್ಚಿಸಿ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿದರೆ ಕನ್ನಡ ವನ್ನು ಮಾತ್ರವಲ್ಲ ಕನ್ನಡಿಗರನ್ನು ಸುಭದ್ರವನ್ನಾಗಿಸಲು ಸಾಧ್ಯ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದು ಕಾರ್ಯರೂಪಕ್ಕೆ ಬಂದರೆ ಇಷ್ಟು ದಿನದ ಹೋರಾಟಕ್ಕೆ ನಿಜವಾದ ಜಯ ಸಿಕ್ಕಂತೆ. ಯೋಚಿಸಿ!
(ಲೇಖಕರು ಹವ್ಯಾಸಿ ಬರಹಗಾರರು)