ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Surendra Pai Column: ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಇಲ್ಲವೇ ?

ಹಿಂದಿ ವಿಷಯ ಮಾತ್ರವಲ್ಲ, ಅದರೊಟ್ಟಿಗೆ ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ಭಾಷಾ ವಿಷಯಗಳಿಗೂ ಗ್ರೇಡ್ ನೀಡಲಾಗುತ್ತದೆ ಹಾಗೂ ಅವುಗಳ ಅಂಕವನ್ನು ಒಟ್ಟು ಅಂಕಗಳ ಜತೆಗೆ ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ ಸಚಿವರು. ಆದರೆ, ಇಲ್ಲೊಂದು ಗೊಂದಲವೂ ಇದೆ.

Surendra Pai Column: ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಇಲ್ಲವೇ ?

-

Profile
Ashok Nayak Mar 30, 2026 7:01 AM

ಒಡಲಾಳ

ಸುರೇಂದ್ರ ಪೈ, ಭಟ್ಕಳ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 18ರಿಂದ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಿವೆ. ಇನ್ನೇನು 3 ವಿಷಯಗಳ ಪರೀಕ್ಷೆಯನ್ನು ಬರೆದರೆ ಪರೀಕ್ಷಾ ಪ್ರಕ್ರಿಯೆಯೇ ಮುಗಿದು ಹೋಗುತ್ತಿತ್ತು. ಇಂಥ ಸಮಯದಲ್ಲಿ ಶಿಕ್ಷಣ ಸಚಿವರಿಂದ ದಿಢೀರ್ ಎಂದು ಹೊಮ್ಮಿದ ಘೋಷಣೆಯೊಂದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರಲ್ಲಿ ಸಾಕಷ್ಟು ಗೊಂದಲವನ್ನೂ ನಿರಾಶೆಯನ್ನೂ ಹುಟ್ಟು ಹಾಕಿದೆ.

ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಯ ಮುಂದೂಡಿಕೆ, ಮೌಲ್ಯಮಾಪನ ಪ್ರಕ್ರಿಯೆಯ ಬದಲಾವಣೆ ಸೇರಿದಂತೆ ಹಲವು ಅನಗತ್ಯ ಸುಳ್ಳು ಸುದ್ದಿಗಳು ಹರಡುವುದು ಸಾಮಾನ್ಯ. ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು.

ಆದರೆ, ಪ್ರಸ್ತುತ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಹಿಂದಿ ವಿಷಯದ ಪರೀಕ್ಷೆಗೆ 3 ದಿನ ಬಾಕಿ ಇರುವಾಗಲೇ ‘ಈ ಪರೀಕ್ಷೆಗೆ ಮನ್ನಣೆ ಇಲ್ಲ’ ಎಂದು ಸ್ವತಃ ಶಿಕ್ಷಣ ಸಚಿವರೇ ಘೋಷಿಸಿದರು. ಇದು ತರವೇ? ಹಾಗೆ ನೋಡಿದರೆ, ಪರೀಕ್ಷಾ ನೀತಿಯಲ್ಲಿನ ಬದಲಾವಣೆಯ ಕುರಿತಂತೆ ಶಿಕ್ಷಣ ಸಚಿವರು ಶೈಕ್ಷಣಿಕ ವರ್ಷದ ಆರಂಭದಲ್ಲೇ ಆದೇಶವನ್ನು ಹೊರಡಿಸ ಬೇಕು. ಅದು ಸಾಧ್ಯವಾಗದಿದ್ದರೆ, ಕೊನೆಯ ಪಕ್ಷ ಅಕ್ಟೋಬರ್ ತಿಂಗಳ ಅರ್ಧವಾರ್ಷಿಕ ಪರೀಕ್ಷೆಯ ಸಮಯದಲ್ಲಾದರೂ ಇಂಥ ಕ್ರಮಕ್ಕೆ ಮುಂದಾಗಿ ಎಲ್ಲ ತೆರನಾದ ಗೊಂದಲ ವನ್ನು ಪರಿಹರಿಸಬೇಕು. ಆದರೆ ಅದನ್ನು ಬಿಟ್ಟು, ಪರೀಕ್ಷೆ ನಡೆಯುತ್ತಿರುವಾಗಲೇ ಹೊಸ ನೀತಿಯನ್ನು ಘೋಷಿಸುವುದು ಮಕ್ಕಳ ಪರಿಶ್ರಮಕ್ಕೆ ಬಗೆದ ದ್ರೋಹವೆಂದರೆ ತಪ್ಪಾಗಲಾರದು.

ಏಕೆಂದರೆ, ಈಗಾಗಲೇ ಶಿಕ್ಷಕರು ವರ್ಷಪೂರ್ತಿ ಮಕ್ಕಳಿಗೆ ಪಾಠ ಮಾಡಿ ಪರೀಕ್ಷಾ ಸಿದ್ಧತೆ ಯನ್ನು ನಡೆಸಿರುತ್ತಾರೆ. ಒಂದಲ್ಲ ಎರಡಲ್ಲ ಮೂರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಮಾಡಲಾಗಿರುತ್ತದೆ. ಆದರೀಗ, ‘ಹಿಂದಿ ಪರೀಕ್ಷೆಯ ಅಂಕಗಳನ್ನು ಗ್ರೇಡ್ ಆಗಿ ಪರಿಗಣಿಸ ಲಾಗುತ್ತದೆ ಹಾಗೂ ಇದಕ್ಕೆ ನಿಗದಿಯಾಗಿದ್ದ 100 ಅಂಕಗಳನ್ನು ಹೊರತುಪಡಿಸಿ, 625ಕ್ಕೆ ಬದಲಾಗಿ 525 ಅಂಕಗಳಿಗೆ ಮಾತ್ರ ಮೌಲ್ಯಾಂಕ ನೀಡಲಾಗುತ್ತದೆ’ ಎಂದು ಘೋಷಣೆ ಯಾಗಿದೆ. ಇದರರ್ಥ, ಇನ್ನು ಮುಂದೆ ಹಿಂದಿ ವಿಷಯವು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತೆ!

ಹಿಂದಿ ವಿಷಯ ಮಾತ್ರವಲ್ಲ, ಅದರೊಟ್ಟಿಗೆ ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ಭಾಷಾ ವಿಷಯಗಳಿಗೂ ಗ್ರೇಡ್ ನೀಡಲಾಗುತ್ತದೆ ಹಾಗೂ ಅವುಗಳ ಅಂಕವನ್ನು ಒಟ್ಟು ಅಂಕಗಳ ಜತೆಗೆ ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ ಸಚಿವರು. ಆದರೆ, ಇಲ್ಲೊಂದು ಗೊಂದಲವೂ ಇದೆ.

ತೃತೀಯ ಐಚ್ಛಿಕ ವಿಷಯದಲ್ಲಿ ಕನ್ನಡವೂ ಒಂದಾಗಿದ್ದು, ವಿದ್ಯಾರ್ಥಿಗಳು ಒಂದೊಮ್ಮೆ ಕನ್ನಡವನ್ನು ತೃತೀಯ ಭಾಷೆಯನ್ನಾಗಿ ಆಯ್ಕೆಮಾಡಿಕೊಂಡರೆ ಅವರಿಗೂ ಇದೇ ನಿಯಮ ಅನ್ವಯವಾಗುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟೀಕರಣವಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಂಥದೊಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲು ಇದು ಸಕಾಲವಾಗಿರಲಿಲ್ಲ ಮತ್ತು ಪರೀಕ್ಷೆಯು ನಡೆಯುತ್ತಿರುವಾಗಲೇ ಅದನ್ನು ಕೈಗೊಳ್ಳುವ ಮನಸ್ಥಿತಿಯೂ ಸರಿಯಲ್ಲ. ಇದಕ್ಕೆ ಬದಲಾಗಿ, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು, ಪಾಲಕರು ಹಾಗೂ ಪ್ರತಿಪಕ್ಷಗಳು ಹೀಗೆ ಎಲ್ಲರೊಂದಿಗೆ ಚರ್ಚಿಸಿ, ಎಲ್ಲಿಯೂ ಗೊಂದಲಕ್ಕೆ ಅವಕಾಶ ವಿಲ್ಲದಂತೆ ಸುತ್ತೋಲೆಯನ್ನು ಹೊರಡಿಸಬೇಕಿತ್ತು.

ಆದರೆ ಶಿಕ್ಷಣ ಸಚಿವರು ಹಾಗೆ ಮಾಡದೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ, ಯಾವ ಅಂಕ ಬಂದರೆ ಯಾವ ಗ್ರೇಡ್ ನೀಡಬೇಕು? ಒಂದೊಮ್ಮೆ ವಿದ್ಯಾರ್ಥಿಗಳು ಹಿಂದಿ ಅಥವಾ ಮತ್ತಾವುದೇ ತೃತೀಯ ಐಚ್ಛಿಕ ಭಾಷಾ ವಿಷಯದ ಪರೀಕ್ಷೆಗೆ ಗೈರಾದರೆ ಅವರಿಗೆ ಗ್ರೇಡ್ ನೀಡಬೇಕೇ? ಗ್ರೇಡ್ ಸುಧಾರಿಸಲು ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಅವಕಾಶವಿದೆಯೇ? ಎಂಬ ಗೊಂದಲಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೂ ಕಾಡುತ್ತಿದೆ.

ಗ್ರೇಡ್ ಇರುವುದರಿಂದ, ಒಟ್ಟು 525 ಅಂಕಗಳಿಗೆ ಪ್ರತಿಯಾಗಿ ವಿದ್ಯಾರ್ಥಿಯು ಪಡೆದ ಅಂಕಗಳಿಗೆ ಶೇಕಡಾವಾರು ಫಲಿತಾಂಶ, ರ‍್ಯಾಂಕ್ ನೀಡುವುದರಿಂದ ಮುಂಬರುವ ಶೈಕ್ಷಣಿಕ ವರ್ಷದಿಂದ ಹಿಂದಿ ವಿಷಯವನ್ನು ವಿದ್ಯಾರ್ಥಿಗಳು ಏಕೆ ಕಲಿಯಬೇಕು? ಇಂಥ ಅವೈಜ್ಞಾ ನಿಕ ನೀತಿಯಿಂದ ಮುಂಬರುವ ದಿನಗಳಲ್ಲಿ ತೃತೀಯ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಅಧ್ಯಯನ ಮಾಡಲು ಆಸಕ್ತಿಯನ್ನು ತಳೆಯುವುದಾದರೂ ಹೇಗೆ? ಹಿಂದಿ ಶಿಕ್ಷಕರ ಕಥೆಯೇನು? ಇಂಥ ಹತ್ತಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ.

ಈ ಯಾವುದಕ್ಕೂ ಶಿಕ್ಷಣ ಇಲಾಖೆಯ ಬಳಿ ಸದ್ಯಕ್ಕೆ ಉತ್ತರವಿದ್ದಂತಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ, ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿಸಲು ಮುಂದಾದರಂತೆ’ ಎಂಬ ಗಾದೆ ಮಾತು ನೆನಪಾಗುತ್ತದೆ. ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡು, ನಂತರ ಅಪಾಯದ ಅರಿವಾಗಿ ಪರಿಹಾರವನ್ನು ಹುಡುಕುವ ಯತ್ನವೇಕೆ? ಇಂಥ ಕ್ರಮಗಳಿಂದ ಯಾವುದೇ ಪ್ರಯೋಜನವಿಲ್ಲ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಅವರನ್ನು ಆತ್ಮನಿರ್ಭರ ರನ್ನಾಗಿಸಬೇಕಾದವರೇ ನಿರ್ಲಕ್ಷ್ಯದಿಂದ ವರ್ತಿಸಿ, ಸೂಕ್ತ ಯೋಜನೆಯಿಲ್ಲದೆ, ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಕಟ್ಟುನಿಟ್ಟಾಗಿ ಪಾಲಿಸದೆ ಯಾವುದೋ ಪ್ರಭಾವಕ್ಕೊಳಗಾಗಿ ಅದನ್ನು ಮನಬಂದಂತೆ ಬದಲಾಯಿಸಿದರೆ ಯಾರನ್ನು ದೂರಬೇಕು? ‘ತಿರುವಿನ ಘಟ್ಟ’ ಎಂದೇ ಕರೆಸಿಕೊಳ್ಳುವ ಎಸ್‌ಎಸ್‌ಎಲ್ ಸಿಯಂಥ ಪರೀಕ್ಷೆಯ ನಿರ್ವಹಣೆಯು ಹುಡು ಗಾಟಿಕೆಯ ಬಾಬತ್ತಾಗಬಾರದು; ಇಂಥ ವೇಳೆ ವಿದ್ಯಾರ್ಥಿಗಳ ಮನಸ್ಥಿತಿ ಅದೆಷ್ಟು ಸೂಕ್ಷ್ಮವಾಗಿರುತ್ತದೆ ಎಂಬುದನ್ನು ಸಂಬಂಧಪಟ್ಟವರು ಅರಿತಿರಬೇಕು.

ಆದರೆ ಈಗ ಹೊಮ್ಮಿರುವಂಥ ಘೋಷಣೆಯಿಂದಾಗಿಯೇ ರಾಜ್ಯದ ಶಿಕ್ಷಣ ಇಲಾಖೆಯು ಪಾಲಕರ ಭರವಸೆಯನ್ನು ಕಳೆದುಕೊಳ್ಳುತ್ತಿದೆ ಹಾಗೂ ಸಿಬಿಎಸ್‌ಇ ಪಠ್ಯಕ್ರಮವಿರುವ ಶಾಲೆಗೆ ಮಕ್ಕಳನ್ನು ಸೇರಿಸಲು ಅವರು ಒಲವು ತೋರುವಂತಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅದರದ್ದೇ ಆದ ಒಂದು ಘನತೆಯಿದೆ; ಆದರೆ ಸರಕಾರ/ಶಿಕ್ಷಣ ಇಲಾಖೆ ಅದನ್ನು ತಗ್ಗಿಸುವ ಯತ್ನದಲ್ಲಿರುವುದು ಬೇಸರದ ಸಂಗತಿ.

ಇಂಥ ದಿಢೀರ್ ನಿರ್ಧಾರದಿಂದ ಪ್ರಯೋಜನವೇನು? ಇದರಿಂದಾಗಿ ಮಕ್ಕಳ ವರ್ಷ ಪೂರ್ತಿಯ ಪರಿಶ್ರಮವು ನೀರಲ್ಲಿ ಹೋಮ ಮಾಡಿದಂತಾಗದೇ? ಹಿಂದಿ ವಿಷಯವನ್ನು ತಾವು ಕಲಿಯಬೇಕೇ ಬೇಡವೇ ಎಂದು ನಿರ್ಧರಿಸುವ ಹಕ್ಕು ಮಕ್ಕಳಿಗಿಲ್ಲವೇ? ಇದು ಮಕ್ಕಳ ಶೈಕ್ಷಣಿಕ ಹಕ್ಕಿಗೆ ಧಕ್ಕೆ ತರುವುದಿಲ್ಲವೇ? ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಇರಬೇಕು ಎಂದಾದರೆ, ಇರಲಿ.

ಆದರೆ, ಯಾರೆಲ್ಲಾ ವಿದ್ಯಾರ್ಥಿಗಳಿಗೆ ಹಿಂದಿ ಸೇರಿದಂತೆ, ತೃತೀಯ ಐಚ್ಛಿಕ ಭಾಷೆಯ ವ್ಯಾಪ್ತಿ ಗೆ ಬರುವಂಥವನ್ನು ಕಡ್ಡಾಯ ವಿಷಯದ ಬದಲಾಗಿ ಐಚ್ಛಿಕ ಆಯ್ಕೆಯಾಗಿ ಕಲಿಯಲು ಅವಕಾಶ ನೀಡಬೇಕು. ಕೇವಲ ಹಿಂದಿಯ ಮೇಲೆ ಈ ಕ್ರಮವೇಕೆ? ಹಾಗೆ ನೋಡಿದರೆ, ಇಂಗ್ಲಿಷ್ ಕೂಡ ನಮ್ಮ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರುತ್ತಿದೆ.

ಎಲ್ಲಾ ಕಡೆ ವ್ಯವಹಾರ ಭಾಷೆಯಾಗಿ ಇಂಗ್ಲಿಷ್ ಬಳಕೆಯೇ ಹೆಚ್ಚು. ಕೇವಲ ಕನ್ನಡ ಭಾಷೆಯೇ ಮುಖ್ಯ ಎಂದು ಪರಿಗಣಿಸುವುದಾದರೆ, ಇನ್ನು ಮುಂದೆ ಕನ್ನಡವನ್ನು ಕಡ್ಡಾಯ ಗೊಳಿಸಿ ಉಳಿದವನ್ನು ಐಚ್ಛಿಕ ಆಯ್ಕೆಯ ವಿಷಯವನ್ನಾಗಿಸುವುದೇ ಒಳಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾದ ಮೇಲೆ ಹಾಗೂ ಆ ಪೈಕಿ ಕೆಲವು ವಿಷಯದ ಪರೀಕ್ಷೆ ಮುಗಿದ ನಂತರ, ಹೀಗೆ ದಿಢೀರನೆ ‘ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸ ಲಾಗುವುದು’ ಎಂದು ಘೋಷಿಸುವುದು ತರವಲ್ಲ.

ಸಂಬಂಧಪಟ್ಟವರಿಗೆ ಸದರಿ ಪರೀಕ್ಷೆಗಿರುವ ಮಹತ್ವದ ಕುರಿತು ಅರಿವಿಲ್ಲ ಎಂಬುದನ್ನೂ, ಅವರ ಬೇಜವಾಬ್ದಾರಿತನವನ್ನೂ ಇಂಥ ನಡೆಯು ತೋರಿಸುತ್ತದೆ. ವಾರ್ಷಿಕ ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಪರಿಶ್ರಮ ಮತ್ತು ಸಮಾಜದ ನಂಬಿಕೆಯ ಸಂಕೇತ. ಇದನ್ನು ನಿರ್ಲಕ್ಷಿಸುವುದು, ತುಳಿಯುವುದು ವಿಷಾದನೀಯ ವರ್ತನೆ ಎನಿಸಿಕೊಳ್ಳುತ್ತದೆ.

ರಾಜಕೀಯ ಪ್ರಯೋಗಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಯಾವ ಹಕ್ಕೂ ಇಂಥವರಿ ಗಿಲ್ಲ. ವರ್ಷಪೂರ್ತಿ ಓದಿದ ವಿಷಯವನ್ನು ವಾರ್ಷಿಕ ಪರೀಕ್ಷೆಯ ಮಧ್ಯದಲ್ಲೇ ‘ಅಪ್ರಸ್ತುತ’ ಎಂದು ಘೋಷಿಸುವುದು ಆಳುಗರ ದೌರ್ಬಲ್ಯವಷ್ಟೇ ಅಲ್ಲ, ಅದು ವಿದ್ಯಾರ್ಥಿಗಳ ಭವಿಷ್ಯ ವನ್ನು ತಮಾಷೆಯ ವಿಷಯವಾಗಿ ಪರಿಗಣಿಸುವ ಅಪಾಯಕಾರಿ ಮನೋಭಾವದ ದ್ಯೋತಕವೂ ಆಗಿದೆ.

ಈ ತೀರ್ಮಾನದಲ್ಲಿ ಯಾವುದೇ ಶೈಕ್ಷಣಿಕ ದೃಷ್ಟಿಕೋನವಿಲ್ಲ, ಇದು ಸಂರ್ಪೂಣವಾಗಿ ರಾಜಕೀಯ ಪ್ರೇರಿತ, ಅಸ್ಥಿರ ಆಡಳಿತದ ಪ್ರತೀಕ. ಶಿಕ್ಷಣ ವ್ಯವಸ್ಥೆಯನ್ನು ಹೀಗೆ ಅಸ್ಥಿರ ಗೊಳಿಸುವುದು ವಿದ್ಯಾರ್ಥಿಗಳಲ್ಲಿ ಅಪನಂಬಿಕೆ ಮತ್ತು ಆತಂಕವನ್ನು ಹೆಚ್ಚಿಸುವುದರ ಜತೆಗೆ, ಅದು ರಾಜ್ಯದ ಶೈಕ್ಷಣಿಕ ಮಾನದಂಡಗಳನ್ನೇ ಹಾಳು ಮಾಡುವ ಕೆಲಸವಾಗಿ ಬಿಡುತ್ತದೆ.

ಶಿಕ್ಷಣ ಸಚಿವರ ಇಂಥ ನಿರ್ಧಾರದಿಂದಾಗಿ ಇನ್ನು ಮುಂದೆ ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ತಪ್ಪಿತು, ಇದರಿಂದಾಗಿ ಕೋಟ್ಯಂತರ ರುಪಾಯಿ ವೆಚ್ಚವು ಉಳಿಯಿತು. ಈಗಾಗಲೇ ಇರುವ ಹಿಂದಿ ಶಿಕ್ಷಕರಿಗೆ ಬೇರೆ ವಿಷಯವನ್ನು ಪಾಠ ಮಾಡಲು ವಹಿಸಿ, ಪ್ರಸ್ತುತ ಇರುವ ಶಿಕ್ಷಕರ ಕೊರತೆಯನ್ನು ಸರಿದೂಗಿಸಲು ಅವಕಾಶ ಸಿಕ್ಕಂತಾಯಿತು. ಆದರೆ ಮಕ್ಕಳಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ, ಶಿಕ್ಷಣ ವ್ಯವಸ್ಥೆಯ ಮೇಲಿದ್ದ ನಂಬಿಕೆ ಹಾಳಾ ಯಿತು.

ಒಟ್ಟಿನಲ್ಲಿ, ದ್ವಿಭಾಷಾ ಹಾಗೂ ತ್ರಿಭಾಷಾ ಸೂತ್ರಗಳ ಜಗಳದಲ್ಲಿ ಮಕ್ಕಳ ಜೀವನ ಮಾತ್ರ ಸೂತ್ರವಿಲ್ಲದ ಗಾಳಿಪಟದಂತಾಯಿತು. ಇದು ವ್ಯವಸ್ಥೆಯ ದೌರ್ಭಾಗ್ಯವಲ್ಲದೆ ಮತ್ತೇನು?!

(ಲೇಖಕರು ಶಿಕ್ಷಕರು)