Vishweshwar Bhat Column: ಇದು ತಾಳಮದ್ದಳೆಯ ʼಐಟಮ್ ಸಾಂಗ್ ಡಾನ್ಸರ್ʼಗಳಂತೆ ಇರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ !
ಯಕ್ಷಗಾನ ಮತ್ತು ತಾಳಮದ್ದಳೆಗಳೆರಡೂ ಕರ್ನಾಟಕದ ಸಾಂಸ್ಕೃತಿಕ ಕಲಾರತ್ನಗಳು. ಇವೆರಡೂ ಒಂದೇ ತಾಯಿ ಬೇರಿನಿಂದ ಬಂದಿದ್ದರೂ, ಪ್ರದರ್ಶನದ ದೃಷ್ಟಿಯಿಂದ ಒಂದಕ್ಕೊಂದು ಭಿನ್ನ. ಯಕ್ಷಗಾನ ಒಂದು ಸಂಪೂರ್ಣ ರಂಗಕಲೆ. ಇಲ್ಲಿ ಗಾಯನ, ವಾದನ, ನೃತ್ಯ ಮತ್ತು ಮಾತುಗಾರಿಕೆ ಎಂಬ ನಾಲ್ಕೂ ಪ್ರಕಾರಗಳ ಸಂಗಮವಿರುತ್ತದೆ.
-
ನೂರೆಂಟು ವಿಶ್ವ
ತಾಳಮದ್ದಳೆಯ ಶ್ರೇಷ್ಠತೆ ಇರುವುದು ಶಬ್ದಗಳನ್ನು ಬಳಸುವ ವೈಖರಿಯಲ್ಲಿ. ಒಬ್ಬ ಶ್ರೇಷ್ಠ ಅರ್ಥಧಾರಿ ಸಾಮಾನ್ಯ ಪದಕ್ಕೂ ಅಸಾಮಾನ್ಯ ಅರ್ಥವನ್ನು ತರುವಂತೆ, ಅಷ್ಟೇ ಅನರ್ಥ ವನ್ನೂ ತರಬಲ್ಲ ಎಂಬುದನ್ನು ಈಗಿನ ಅರ್ಥಧಾರಿಗಳು ಅರಿತುಕೊಳ್ಳಬೇಕಾಗಿದೆ. ಕಲೆಯನ್ನು ಗೌರವಿಸದೇ ಅರ್ಥಧಾರಿಗಳಿಗೆ ಅರ್ಥವೂ ಇಲ್ಲ, ಗೌರವವೂ ಇಲ್ಲ. ಕಲೆಯನ್ನು ಮೀರಿ ಕಲಾವಿದನಿಲ್ಲ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿದವರು ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಕಷ್ಟ. ನಮ್ಮ ಚಿಂತನೆ, ಆಲೋಚನೆಗಳಲ್ಲಿ ಆ ಕಲೆ, ಪಾತ್ರ ಸನ್ನಿವೇಶಗಳು, ಚಂಡೆ-ಮೃದಂಗಗಳ ಸದ್ದು ಸಮ್ಮಿಳಿತಗೊಂಡು ವ್ಯಕ್ತಿತ್ವದ ಮುಖ್ಯ ಧಾತುವಾಗಿ ಆವರಿಸಿಕೊಳ್ಳುವುದುಂಟು.
ಯಕ್ಷಗಾನ ಮತ್ತು ತಾಳಮದ್ದಳೆಗಳೆರಡೂ ಕರ್ನಾಟಕದ ಸಾಂಸ್ಕೃತಿಕ ಕಲಾರತ್ನಗಳು. ಇವೆರಡೂ ಒಂದೇ ತಾಯಿ ಬೇರಿನಿಂದ ಬಂದಿದ್ದರೂ, ಪ್ರದರ್ಶನದ ದೃಷ್ಟಿಯಿಂದ ಒಂದಕ್ಕೊಂದು ಭಿನ್ನ. ಯಕ್ಷಗಾನ ಒಂದು ಸಂಪೂರ್ಣ ರಂಗಕಲೆ. ಇಲ್ಲಿ ಗಾಯನ, ವಾದನ, ನೃತ್ಯ ಮತ್ತು ಮಾತುಗಾರಿಕೆ ಎಂಬ ನಾಲ್ಕೂ ಪ್ರಕಾರಗಳ ಸಂಗಮವಿರುತ್ತದೆ.
ಕಲಾವಿದರು ರಂಗಸ್ಥಳದ ಮೇಲೆ ಕಥೆಗೆ ತಕ್ಕಂತೆ ಕುಣಿಯುತ್ತಾ, ಅಭಿನಯಿಸುತ್ತಾ ಪಾತ್ರವನ್ನು ನಿರ್ವಹಿಸುತ್ತಾರೆ. ಇಲ್ಲಿ ವೇಷಭೂಷಣ, ಮಾತು ನರ್ತನಕ್ಕೆ ಹೆಚ್ಚಿನ ಪ್ರಾಮುಖ್ಯ. ಪಾತ್ರಗಳಿಗೆ ತಕ್ಕಂತೆ ಬಣ್ಣದ ಮುಖವರ್ಣಿಕೆ, ಕಿರೀಟ, ಗೆಜ್ಜೆ, ಭುಜಕೀರ್ತಿ ಮತ್ತು ಆಭರಣಗಳನ್ನು ಧರಿಸಲಾಗುತ್ತದೆ. ನೋಡುಗರಿಗೆ ಇದು ದೃಶ್ಯವೈಭವವನ್ನು ನೀಡುತ್ತದೆ. ಇಲ್ಲಿ ಸಂಭಾಷಣೆಗಳು ಪಾತ್ರದ ಅಭಿನಯ ಮತ್ತು ಕುಣಿತಕ್ಕೆ ಪೂರಕವಾಗಿರುತ್ತವೆ. ಕಥೆಯ ಓಘಕ್ಕೆ ತಕ್ಕಂತೆ ಮಾತುಗಳು ಸಾಗುತ್ತವೆ. ಇಲ್ಲಿ ಚಂಡೆ ಮತ್ತು ಮದ್ದಳೆಯ ನಾದವು ಕುಣಿತಕ್ಕೆ ವೇಗ ಮತ್ತು ಚೈತನ್ಯ ನೀಡಿದರೆ, ಭಾಗವತರ ಹಾಡಿಗೆ ತಕ್ಕಂತೆ ಪಾತ್ರಧಾರಿಗಳು ಅಭಿನಯಿಸುತ್ತಾರೆ.
ಇದು ಕಣ್ಣಿಗೆ ಹಬ್ಬ. ಇಲ್ಲಿ ಕಲ್ಪನೆಗಿಂತ ಹೆಚ್ಚಾಗಿ ದೃಶ್ಯಗಳು ಕಣ್ಣೆದುರು ತೆರೆದುಕೊಳ್ಳುತ್ತವೆ. ತಾಳಮದ್ದಲೆ ಕೇವಲ ‘ವಾಚಿಕ‘ ಕಲೆ ಅಥವಾ ಬೌದ್ಧಿಕ ಸಂವಾದ. ಇಲ್ಲಿ ಕುಣಿತ ಅಥವಾ ನೃತ್ಯ ಇರುವುದಿಲ್ಲ. ಕಲಾವಿದರು ಕುಳಿತು ಕೇವಲ ಸಂಭಾಷಣೆಯ ಮೂಲಕವೇ ಕಥೆಯನ್ನು ಬೆಳೆಸು ತ್ತಾರೆ. ಇದೊಂದು ‘ಬೈಠಕ್’ ಶೈಲಿಯ ಕಲೆ. ಇಲ್ಲಿ ಯಾವುದೇ ವೇಷಭೂಷಣ ಇರುವುದಿಲ್ಲ. ಕಲಾವಿದರು ಸಾಮಾನ್ಯ ಉಡುಪಿನಲ್ಲಿ (ಪಂಚೆ, ಅಂಗಿ ಅಥವಾ ಶಾಲಿನೊಂದಿಗೆ) ಕುಳಿತಿರುತ್ತಾರೆ. ಇಲ್ಲಿ ಬಣ್ಣಕ್ಕಿಂತ ‘ಬೌದ್ಧಿಕ ಕಸರತ್ತು ‘ಮತ್ತು ‘ಮಾತಿನ ಬಣ್ಣ’ಕ್ಕೆ ಹೆಚ್ಚು ಬೆಲೆ.
ಇಲ್ಲಿ ಮಾತುಗಾರಿಕೆಯೇ ಜೀವಾಳ. ಪಾತ್ರಧಾರಿಗಳನ್ನು ಇಲ್ಲಿ ‘ಅರ್ಥಧಾರಿಗಳು‘ ಅಂತಾರೆ. ಪುರಾಣದ ಘಟನೆಗಳನ್ನು ತರ್ಕಬದ್ಧವಾಗಿ ವಿಶ್ಲೇಷಿಸುತ್ತಾ, ಒಬ್ಬರಿಗೊಬ್ಬರು ವಾದ-ವಿವಾದಗಳಲ್ಲಿ ತೊಡಗುತ್ತಾರೆ. ಇದು ಗಂಟೆಗಟ್ಟಲೆ ನಡೆಯುವ ಪ್ರೌಢ ಸಂವಾದ. ಮದ್ದಳೆ ಮತ್ತು ಭಾಗವತರ ಹಾಡುಗಾರಿಕೆ ಪ್ರಧಾನ. ಭಾಗವತರು ಹಾಡಿದ ಪದ್ಯದ ಸಾಲುಗಳನ್ನು ಅರ್ಥಧಾರಿಗಳು ವಿವರಿಸುತ್ತಾ ಹೋಗುತ್ತಾರೆ.
ಇದು ಕಿವಿಗೆ ಮತ್ತು ಮಿದುಳಿಗೆ ಹಬ್ಬ. ಇಲ್ಲಿ ಪ್ರೇಕ್ಷಕನು ಅರ್ಥಧಾರಿಗಳ ಮಾತಿನ ಮೂಲಕ ಪಾತ್ರ ಗಳನ್ನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬೇಕು. ಇದು ಸಾಹಿತ್ಯಾಭಿಮಾನಿಗಳು ಮತ್ತು ವಿದ್ವಾಂಸರಿಗೆ ಹೆಚ್ಚು ಪ್ರಿಯವಾದದ್ದು. ಯಕ್ಷಗಾನವು ಕಣ್ಣಿಗೆ ಕಾಣುವ ‘ದೃಶ್ಯ ಕಾವ್ಯ’ವಾದರೆ, ತಾಳಮದ್ದಲೆಯು ಕಿವಿಗೆ ಕೇಳುವ ‘ಶ್ರವ್ಯ ಕಾವ್ಯ’. ಯಕ್ಷಗಾನದಲ್ಲಿ ಶರೀರಕ್ಕೆ ಶ್ರಮವಿದ್ದರೆ, ತಾಳಮದ್ದಲೆಯಲ್ಲಿ ಬುದ್ಧಿಗೆ ಕಸರತ್ತು.
ತಾಳಮದ್ದಳೆ ಎನ್ನುವುದು ಕೇವಲ ಒಂದು ಕಲೆಯಷ್ಟೇ ಅಲ್ಲ, ಅದು ಕನ್ನಡದ ಮಣ್ಣಿನ ವ್ಮಾಯ ಪರಂಪರೆಯ ಅತ್ಯಂತ ಶ್ರೀಮಂತ, ಪ್ರೌಢವಾದ ಬೌದ್ಧಿಕ ಕಸರತ್ತು. ಯಕ್ಷಗಾನದ ಆಂಗಿಕ ಅಬ್ಬರ ಗಳನ್ನು ಕಳೆದು, ಕೇವಲ ಮಾತು ಮತ್ತು ಭಾವಗಳ ಮೂಲಕ ಕಟ್ಟಿಕೊಡುವ ಬೌದ್ಧಿಕ ಶ್ರೇಷ್ಠತೆ ಮೆರೆಯುವ ಒಂದು ಅಪರೂಪದ ಶಾಸ್ತ್ರ ಮತ್ತು ವಿಶಿಷ್ಟ ಕಲೆ. ತಾಳಮದ್ದಳೆಯ ಬೇರುಗಳು ಯಕ್ಷಗಾನದಷ್ಟೇ ಪುರಾತನವಾದವು. ಇದರ ಉಗಮದ ಹಿಂದೆ ಪ್ರಕೃತಿ ಮತ್ತು ಮನುಷ್ಯನ ಸೃಜನ ಶೀಲತೆಯ ಒಂದು ಸುಂದರ ಹೊಂದಾಣಿಕೆಯಿದೆ.
ಹಿಂದಿನ ಕಾಲದಲ್ಲಿ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಮಳೆಗಾಲ ಎಂದರೆ ಹಗಲಿರುಳು ‘ಧೋ’ ಎಂದು ಸುರಿಯುವ ಮಳೆ. ಮೂರ್ನಾಲ್ಕು ತಿಂಗಳು ಸುರಿಯುವ ಮಳೆಯಲ್ಲಿ ಯಕ್ಷಗಾನ ಪ್ರಸಂಗಗಳನ್ನು ಆಯೋಜಿಸುವುದು ಅಸಾಧ್ಯವಾಗಿತ್ತು. ಕಲಾವಿದರು ತಮ್ಮ ಕಲಾದಾಹವನ್ನು ತಣಿಸಿಕೊಳ್ಳಲು ಆರಿಸಿಕೊಂಡ ಮಾರ್ಗವೇ ಈ ತಾಳಮದ್ದಳೆ.
ಮನೆಯ ಪಡಸಾಲೆಯ ಅಥವಾ ದೇವಸ್ಥಾನದ ಒಳಾಂಗಣದ ಕುಳಿತು, ದೀಪದ ಬೆಳಕಿನಲ್ಲಿ ಭಾಗವತರು ಹಾಡಿದ ಪ್ರಸಂಗಕ್ಕೆ ಅರ್ಥ ಹೇಳಲು ಶುರು ಮಾಡಿದರು. ಇದು ಕುಣಿತದಿಂದ ಬೈಠಕ್ ಕಡೆಗೆ ನಡೆದ ಸ್ಥಿತ್ಯಂತರ. ತಾಳಮದ್ದಳೆಯಲ್ಲಿ ಬರೀ ಮಾತು. ಭಾಗವತರು ಪದ್ಯ ಹಾಡಿದರೆ, ಅರ್ಥಧಾರಿಗಳು ಆ ಪದ್ಯದ ಗರ್ಭದೊಳಗೆ ಅಡಗಿರುವ ಸಾವಿರಾರು ಅರ್ಥಗಳನ್ನು ಬಿಡಿಸಿಡುತ್ತಾರೆ.
‘ತಾಳ’ ಎಂದರೆ ಭಾಗವತರು ಬಳಸುವ ಕಂಚಿನ ತಾಳಗಳು ಮತ್ತು ‘ಮದ್ದಳೆ’ ಎಂದರೆ ಹಿಮ್ಮೇಳದ ಪ್ರಧಾನ ವಾದ್ಯ. ಕೇವಲ ಈ ಎರಡು ಪರಿಕರಗಳ ಪ್ರಧಾನ ಅಡತೆಯಲ್ಲಿ ಇಡೀ ಪ್ರಸಂಗ ನಡೆಯುವು ದರಿಂದ ಇದಕ್ಕೆ ‘ತಾಳಮದ್ದಳೆ‘ ಎಂಬ ಹೆಸರು. ಇಲ್ಲಿ ಪಾತ್ರಧಾರಿಗಳು ಅಂದ್ರೆ ಅರ್ಥಧಾರಿಗಳು. ಕಿರೀಟಗಳ ಭಾರವಿಲ್ಲ, ಕೇವಲ ಶಬ್ದಗಳ ಭಾರವಷ್ಟೇ. ಆರಂಭದಲ್ಲಿ ಇದು ಕೇವಲ ಪದ್ಯಗಳ ವಾಚನ ಮತ್ತು ಸರಳ ಅರ್ಥ ವಿವರಣೆಯಾಗಿತ್ತು.
ಆದರೆ ಕಾಲಕ್ರಮೇಣ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದಲ್ಲಿ ಪಾಂಡಿತ್ಯವಿದ್ದ ಕಲಾವಿದರು ಇದನ್ನು ಪ್ರವೇಶಿಸಿದ ಮೇಲೆ, ಇದೊಂದು ‘ತಾರ್ಕಿಕ ವಾಗ್ವಾದ’ದ ವೇದಿಕೆಯಾಗಿ ಬೆಳೆಯಿತು. ಇಂದು ಇದು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುವ ವಿಶಿಷ್ಟ ಸಂವಹನ ಕಲೆಯಾಗಿ, ಒಂದು ಭವ್ಯ ಪರಂಪರೆಯಾಗಿ ಬೆಳೆದು ನಿಂತಿದೆ.
ತಾಳಮದ್ದಳೆಯ ಅಸಲಿ ಸೊಬಗು ಇರುವುದೇ ‘ಸಂವಾದ’ದಲ್ಲಿ. ತಾಳಮದ್ದಳೆಯನ್ನು ಬೌದ್ಧಿಕ ಕ್ರೀಡೆ ಎಂದು ಕರೆಯಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ಕಲ್ಪನಾ ಲೋಕ ( The World of Imagination). ಯಕ್ಷಗಾನದಲ್ಲಿ ರಾವಣ ಬಂದಾಗ ಅವನ ವೇಷ, ಕಿರೀಟ ನಮಗೆ ಕಾಣಿಸುತ್ತದೆ. ಆದರೆ ತಾಳಮದ್ದಳೆಯಲ್ಲಿ ರಾವಣನ ಹತ್ತು ತಲೆಗಳು, ಅವನ ಅಟ್ಟಹಾಸ ಮತ್ತು ಅವನ ಪರಾಕ್ರಮವನ್ನು ನಾವು ಅರ್ಥಧಾರಿಗಳ ‘ಮಾತಿನ’ ಮೂಲಕವೇ ಕಲ್ಪಿಸಿಕೊಳ್ಳಬೇಕು.
ಅರ್ಥಧಾರಿ ‘ನಾನು ಲಂಕೇಶ್ವರ’ ಎಂದು ಹೇಳುವ ಆ ಗಾಂಭೀರ್ಯದಲ್ಲಿ ಪ್ರೇಕ್ಷಕನ ಕಣ್ಣೆದುರು ಲಂಕೆಯ ಭವ್ಯತೆ ಅನಾವರಣಗೊಳ್ಳಬೇಕು. ಇದು ಪ್ರೇಕ್ಷಕನ ಕಲ್ಪನಾಶಕ್ತಿಗೆ ನೀಡುವ ಸವಾಲು. ಇಲ್ಲಿ ಶಬ್ದವೇ ಚಿತ್ರವಾಗುತ್ತದೆ, ಧ್ವನಿಯೇ ದೃಶ್ಯವಾಗುತ್ತದೆ.
ಎರಡನೆಯದು, ತತ್ಕ್ಷಣದ ಆಶು ಸ್ಪೂರ್ತಿ ( Extempore / Non-scripted). ಇದು ತಾಳ ಮದ್ದಳೆಯ ಅತ್ಯಂತ ಕಠಿಣ ಮತ್ತು ಭವ್ಯವಾದ ಭಾಗ. ಇಲ್ಲಿ ಕಲಾವಿದರಿಗೆ ಮೊದಲೇ ಬರೆದು ಕೊಟ್ಟ ಸಂಭಾ ಷಣೆಗಳಿಲ್ಲ. ಎದುರಾಳಿ ಅರ್ಥಧಾರಿ ಯಾವ ಪ್ರಶ್ನೆ ಕೇಳುತ್ತಾನೋ ಅಥವಾ ಯಾವ ತರ್ಕ ಮಂಡಿಸು ತ್ತಾನೋ ಅದಕ್ಕೆ ತಕ್ಕಂತೆ ಸ್ಥಳದ ಉತ್ತರ ಸಿದ್ಧಪಡಿಸಬೇಕು.
ಇಲ್ಲಿ ಅರ್ಥಧಾರಿಗೆ ಪುರಾಣಗಳ ಅರಿವು, ಸಾಹಿತ್ಯದ ಜ್ಞಾನ ಮತ್ತು ಲೋಕಾನುಭವ ಇರಬೇಕು. ಒಬ್ಬ ಶ್ರೇಷ್ಠ ಅರ್ಥಧಾರಿ ಎದುರಾಳಿಯನ್ನು ಮಾತಿನ ಕಟ್ಟಿ ಹಾಕಬೇಕು, ಆದರೆ ಎಲ್ಲೂ ಪಾತ್ರದ ಮರ್ಯಾದೆ ಅಥವಾ ಕಲೆಯ ಸಂಪ್ರದಾಯವನ್ನು ಮೀರಿ ನಡೆಯಬಾರದು. ಈ ‘ತತ್ಕ್ಷಣದ ಸ್ಪೂರ್ತಿ’ಯು ಕಲಾವಿದನ ಪಾಂಡಿತ್ಯಕ್ಕೆ ಹಿಡಿದ ಕನ್ನಡಿ.
ಇದನ್ನೂ ಓದಿ: Vishweshwar Bhat Column: ತನ್ನ ಕೃತಿಯನ್ನು ಟೀಕಿಸಿದ್ದಕ್ಕಾಗಿ ಆತ ವಿಮರ್ಶಕನ ಮುಖಕ್ಕೆ ಉಗಿದಿದ್ದ !
ತಾಳಮದ್ದಳೆಯು ಕೇವಲ ಒಂದು ಪ್ರದರ್ಶನ ಕಲೆಯಾಗಿ ಉಳಿಯದೇ, ಒಂದು ಶಿಕ್ಷಣ ಮಾಧ್ಯಮ ವಾಗಿ ಬೆಳೆದಿದೆ. ಇಲ್ಲಿನ ಕನ್ನಡ ಬಳಕೆ ಅತ್ಯಂತ ಸಮೃದ್ಧ. ಹಳೆಯ ಕನ್ನಡದ ಪದಪ್ರಯೋಗಗಳು, ನುಡಿಗಟ್ಟುಗಳು ಇಲ್ಲಿ ಜೀವಂತ. ಜೀವನದ ಸರಿ-ತಪ್ಪುಗಳು, ಧರ್ಮ-ಅಧರ್ಮಗಳ ಬಗ್ಗೆ ಇಲ್ಲಿ ನಡೆಯುವ ಚರ್ಚೆಗಳು ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುತ್ತವೆ. ಗಂಟೆಗಟ್ಟಲೆ ನಡೆಯುವ ಈ ವಾಗ್ವಾದವನ್ನು ಶಾಂತವಾಗಿ ಕೇಳಿಸಿಕೊಳ್ಳುವುದು ಕೇಳುಗನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಹೀಗಾಗಿ ತಾಳಮದ್ದಳೆ ಎನ್ನುವುದು ಮೌನ ಮತ್ತು ಮಾತಿನ ನಡುವಿನ ಒಂದು ಸೇತುವೆ. ಕಣ್ಣಿಗೆ ಕಾಣುವ ಹೊಳೆಯುವ ಬಣ್ಣಗಳಿಲ್ಲದಿದ್ದರೂ, ಕಿವಿಗಿಂಪಾದ ಶಬ್ದಗಳ ಮೂಲಕ ಮನಸ್ಸಿನ ಆಳಕ್ಕೆ ಇಳಿಯುವ ಶಕ್ತಿ ಇದಕ್ಕಿದೆ. ತಾಳಮದ್ದಳೆಯ ಅನೇಕ ದಿಗ್ಗಜರು ಬೆಳೆಸಿದ ಈ ಪರಂಪರೆ ಇಂದು ಆಧುನಿಕ ಯುಗದಲ್ಲೂ ತನ್ನ ಚೈತನ್ಯವನ್ನು ಕಳೆದುಕೊಂಡಿಲ್ಲ. ಇದು ಕನ್ನಡಿಗರ ಹೆಮ್ಮೆಯ ‘ಮಾತಿನ ಮಂಟಪ’.
ತಾಳಮದ್ದಳೆ ಲೋಕದಲ್ಲಿ ತಮ್ಮ ಅದ್ಭುತ ವಾಕ್ಚಾತುರ್ಯ, ಅಪ್ರತಿಮ ಪಾಂಡಿತ್ಯ ಮತ್ತು ತೀಕ್ಷ್ಣ ತರ್ಕಬದ್ಧ ಮಾತುಗಾರಿಕೆಯಿಂದ ಕನ್ನಡ ವ್ಮಾಯ ಲೋಕವನ್ನು ಬೆರಗುಗೊಳಿಸಿದ ದಿಗ್ಗಜರು ಈ ಕಲೆಗೆ ಮರ್ಯಾದೆ, ಗೌರವ, ಘನತೆ ಹಾಗೂ ಉನ್ನತ ಸ್ಥಾನಮಾನವನ್ನು ದೊರಕಿಸಿಕೊಟ್ಟಿದ್ದಾರೆ.
ಅಂಥವರಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪುಂಡಿತ್ತೂರು ವೆಂಕಟರಾಜ ಪುಣಿಂಚಿತ್ತಾಯ, ಕುಂಬ್ಳೆ ಸುಂದರ ರಾವ್, ಪೊಳಲಿ ಶಾಸ್ತ್ರಿಗಳು (ರಾಮಕೃಷ್ಣ ಶಾಸ್ತ್ರಿ), ಗೇರುಕಟ್ಟೆ ಗಂಗಾಧರ ಶಾಸ್ತ್ರಿ, ಕವಿ ಮುದ್ರೆ ಲಕ್ಷ್ಮೀನಾರಾಯಣ ಭಟ್, ಪೆರ್ಲ ಕೃಷ್ಣ ಭಟ್, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್, ಪೇರಾಜೆ ರಾಮಕೃಷ್ಣ ಭಟ್, ಜಬ್ಬಾರ್ ಸುಮೊ, ಕೆ.ಗೋವಿಂದ ಭಟ್, ಕೆರೆಮನೆ ವೆಂಕಟಾಚಲ ಭಟ್, ಮಲ್ಪೆ ಶಂಕರನಾರಾ ಯಣ ಸಾಮಗ (ದೊಡ್ಡ ಸಾಮಗರು), ರಾಮದಾಸ ಸಾಮಗ, ರಾಧಾಕೃಷ್ಣ ಕಲ್ಪಾ ಚಾರ್, ಪಾವಂಜೆ ಗೋವಿಂದ ಭಟ್, ಬಂಟ್ವಾಳ ಜಯರಾಮ ಆಚಾರ್ಯ, ಭಾಸ್ಕರ ರೈ ಕುಕ್ಕುವಳ್ಳಿ, , ಕೆರೆಮನೆ ಶಿವರಾಮ ಹೆಗಡೆ, ಗೌರಿಶಂಕರ ಶಾಸ್ತ್ರಿಗಳು, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಎಂ.ಪ್ರಭಾಕರ ಜೋಶಿ... ಹೀಗೆ ಹಲವು ದಿಗ್ಗಜರನ್ನು ಹೆಸರಿಸಬಹುದು.
ಇವರು ತಾಳಮದ್ದಳೆ ಪ್ರಕಾರಕ್ಕೆ ಕಳಶಪ್ರಾಯರಾಗಿದ್ದರು. ಇವರು ಹಾಕಿಕೊಟ್ಟ ಭದ್ರಬುನಾದಿ, ಶಿಸ್ತು, ಅಚ್ಚುಕಟ್ಟುತನ, ವಿದ್ವತ್ತು, ಗಾಂಭೀರ್ಯ ತಾಳಮದ್ದಳೆಯನ್ನು ಇನ್ನಷ್ಟು ಔನ್ನತ್ಯಕ್ಕೆ ಏರಿಸಿದ್ದು ವಾಸ್ತವ. ತಾಳಮದ್ದಳೆಯಲ್ಲಿ ‘ಕೃಷ್ಣ ಸಂಧಾನ’ ಪ್ರಸಂಗ ನಡೆಯುವಾಗ, ಅರ್ಥಧಾರಿ ಗಳು ಬಳಸುವ ರಾಜತಾಂತ್ರಿಕ ಪಟ್ಟುಗಳು ಮತ್ತು ತರ್ಕಗಳನ್ನು ಕೇಳಿದರೆ, ಅದು ಇವತ್ತಿನ ಯಾವ ಇಂಟರ್‌ನ್ಯಾಷನಲ್ ಡಿಪ್ಲೊಮಸಿಗಿಂತಲೂ ಶ್ರೇಷ್ಠವಾದುದು!
ತಾಳಮದ್ದಳೆಯಲ್ಲಿ ಶ್ರೇಷ್ಠ ಅರ್ಥಧಾರಿ ಕೇವಲ ಮಾತು ಗಾರನಾಗಿದ್ದರೆ ಸಾಲದು, ಆತ ಒಬ್ಬ ದೊಡ್ಡ ಸಂಶೋಧಕನಾಗಿರಬೇಕು. ಉದಾಹರಣೆಗೆ, ವಾಲಿ ವಧೆಯ ಪ್ರಸಂಗ ನಡೆಯುತ್ತಿದೆ ಅಂದು ಕೊಳ್ಳಿ. ಅಲ್ಲಿ ರಾಮನ ಪಾತ್ರಧಾರಿ ತಾನು ಮಾಡಿದ್ದು ಸರಿ ಅಂತ ವಾದ ಮಾಡಬೇಕು, ಇತ್ತ ವಾಲಿ ತನ್ನನ್ನು ಕೊಂದದ್ದು ತಪ್ಪು ಅಂತ ನ್ಯಾಯ ಕೇಳಬೇಕು.
ಇವರಿಬ್ಬರ ನಡುವೆ ನಡೆಯುವ ಆ ವಾಗ್ಯುದ್ಧ ಇದೆಯಲ್ಲ, ಅದು ಸುಪ್ರೀಂ ಕೋರ್ಟ್‌ನ ಲಾಯರ್ ಗಳ ವಾದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಶಕ್ತಿಯುತವಾಗಿರುತ್ತದೆ. ಅಲ್ಲಿ ರಾಮಾಯಣದ ಕಥೆಯ ಜತೆಜತೆಗೆ ಮನುಷ್ಯನ ನೀತಿಶಾಸ್ತ್ರದ ಚರ್ಚೆಯೂ ನಡೆಯುತ್ತದೆ. ಈಗಿನ ಸಾಫ್ಟ್ʼವೇರ್ ಆಫೀಸಿನಲ್ಲಿ ಕುಳಿತು ‘ಕ್ರಿಟಿಕಲ್ ಥಿಂಕಿಂಗ್’ ಅಂತ ಯಾವುದನ್ನು ಕರೆಯುತ್ತಾರೋ, ಅದರ ಅಸಲಿ ರೂಪ ಇರೋದೇ ಈ ತಾಳಮದ್ದಳೆಯಲ್ಲಿ!
ಆದರೆ ಇತ್ತೀಚಿನ ವರ್ಷಗಳಲ್ಲಿ ತಾಳಮದ್ದಳೆ ತನ್ನ ಹಿಂದಿನ ಘನತೆ, ವರ್ಚಸ್ಸು ಮತ್ತು ಪಾವಿತ್ರ್ಯ ವನ್ನು ಉಳಿಸಿಕೊಂಡಿಲ್ಲ. ಕೆಲವೇ ಕೆಲವು ಉದ್ಧಟ, ಅವಿವೇಕಿ, ಅಧಿಕ ಪ್ರಸಂಗಿ, ಬಾಯಿ ಚಪಲದ ತಿರಸಟ್ಟು ಅರ್ಥಧಾರಿಗಳಿಂದ ಅದು ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕ ಮೂಡುತ್ತಿರುವುದು ಸುಳ್ಳಲ್ಲ.
ಇವರು ಇಡೀ ತಾಳಮದ್ದಳೆಗೆ ಕೆಟ್ಟ ಹೆಸರನ್ನು ತರುತ್ತಿದ್ದಾರೆ. ಕೆಲವರಿಗೆ ಇದು ಹೊಟ್ಟೆಪಾಡು, ಇನ್ನು ಕೆಲವರಿಗೆ ಹೆಗಲೇರಿದ ಕೀರ್ತಿಶನಿ ಕಾಟ. ಅಂಥವರಿಗೆ ತಮ್ಮ ಉಗುಳನ್ನೇ ಅರ್ಥವೆಂದು ಮನ್ನಿಸಬೇಕೆಂಬ ವಾಂಛೆ. ಇನ್ನು ಕೆಲವರಿಗೆ ತಮ್ಮ ಶುಷ್ಕ ಪಾಂಡಿತ್ಯವನ್ನು ಪ್ರದರ್ಶಿಸುವ ತೀಟೆ. ಐದು-ಹತ್ತು ನಿಮಿಷಗಳಲ್ಲಿ ಹೇಳಬಹುದಾದ ಅರ್ಥವನ್ನು ತಾಸುಗಟ್ಟಲೇ ಎಳೆಯುವ ತಲುಬು. ಕನ್ನಡ ಟಿವಿ ಧಾರಾವಾಹಿಗಳನ್ನು ಮೀರಿಸುವ ರೀತಿಯಲ್ಲಿ ಎಳೆದಿದ್ದನ್ನೇ ಎಳೆಯುವುದು, ಜಗಿದದ್ದನ್ನೇ ಜಗಿಯುವುದು.
ಪ್ರಸಂಗಕ್ಕೆ ಬೇಕೋ ಬೇಡವೋ, ಆ ಪಾತ್ರ ಬಯಸುವುದೋ, ಇಲ್ಲವೋ, ಪ್ರೇಕ್ಷಕರ ಮುಂದೆ ತಾನೊಬ್ಬ ಉದ್ದಾಮ ಪಂಡಿತ ಎಂದು ಕರೆಯಿಸಿಕೊಳ್ಳಬೇಕು, ಅಷ್ಟೇ ತೆವಲು. ಅಂಥವರಿಗೆ ಮಾತಾಡುವುದೆಂದರೆ ಹಲುಬುವ ಶೀಕು, ಪಿತ್ತ ವಾಚಾಳಿತನ. ತಾಳಮದ್ದಳೆಯ ಅರ್ಥಧಾರಿಗಳಿಗೆ ಇಂಥದೇ ಪಾತ್ರವಿರಬೇಕು ಎಂದಿಲ್ಲ.
ಯಾವ ಪಾತ್ರವಾದರೂ ಅಸಂಬದ್ಧವಾಗಿ ಹರಟುವುದು, ತಮ್ಮ ವಾಕ್ಪಟುತ್ವವನ್ನು ಪ್ರದರ್ಶಿಸಲು ಶಬ್ದಾಡಂಬರವನ್ನು ಪ್ರದರ್ಶಿಸುವುದು, ಈ ಹಲುಬಾಟವನ್ನೇ ಪಾಂಡಿತ್ಯವೆಂಬಂತೆ ತಮ್ಮಷ್ಟಕ್ಕೇ ಭಾವಿಸುವುದು, ವಿಚಿತ್ರವೆಂದರೆ ಇದನ್ನೇ ಒಂದು ಅದ್ಭುತ ಕಲೆ ಎಂದು ಭ್ರಮಿಸುವುದು,
ಸಂಬಂಧವಿಲ್ಲದ ವಿಷಯಗಳನ್ನು ತಂದು ಕಾಲಕ್ಷೇಪ ಮಾಡುವುದು, ಬೇರೆಯವರನ್ನು ಹೀಗಳೆ ಯುವುದು, ಮೂದಲಿಸುವುದು, ವ್ಯಂಗ್ಯವಾಡುವುದು, ಸಂಬಂಧವಿಲ್ಲದ ಸಂಗತಿಗಳನ್ನು ಎಳೆದು ಎಳೆದು ಇದನ್ನೇ ಬೇರೆಯವರು ಪಾಂಡಿತ್ಯವೆಂದು ತಿಳಿಯಬಹುದೆಂದು ಅಂದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕೆಲವು ಅರ್ಥಧಾರಿಗಳಿಗೆ ಹಿಡಿದ ಅಂಟುರೋಗವಾಗಿದೆ.
ಇದು ಇತರರಿಗೂ ಹಬ್ಬುತ್ತಿರುವುದು ಅಪಾಯದ ಗಡಿ ಮೀರುವಂತಿದೆ. ಪುರಾಣದ ಪಾತ್ರ-ಸನ್ನಿವೇಶ ಕುರಿತು ಅರ್ಥ ಹೇಳುವಾಗ ಅದಕ್ಕೆ ಹೋಲುವ ಸಮಕಾಲೀನ ವಿದ್ಯಮಾನವನ್ನು ಪ್ರಸ್ತಾಪಿಸುವುದು, ತಮ್ಮ ವೈಯಕ್ತಿಕ ವಿಷಯಗಳನ್ನು ತಂದು ಲೆಕ್ಕ ಚುಕ್ತಾ ಮಾಡುವ ಹಪಾಹಪಿತನ ಅರ್ಥಧಾರಿಗಳ ಕೀಳು ಅಭಿರುಚಿಯ ಪರಾಕಾಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ.
‘ಕೃಷ್ಣ ಸಂಧಾನ’ದಂಥ ಪೌರಾಣಿಕ ಪ್ರಸಂಗದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರಿಗೆ ಅನ್ವಯಿಸುವಂತೆ ಕುಚೋದ್ಯ ಮಾಡುವುದು, ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಹೊಡೆಯು ವುದು, ಅದನ್ನೇ ಹಾಸ್ಯವೆಂದು ಭಾವಿಸಿ ಅಪಹಾಸ್ಯಕ್ಕೀಡಾಗುವುದು ಕೆಲವು ಅರ್ಥಧಾರಿ ಗಾಳಿಗೆ ಹಿಡಿದ ಜಾಡ್ಯ. ಮತ್ತೊಬ್ಬರಿಗೆ ಅನ್ವಯಿಸಿ ಟಾಂಗ್ ಕೊಡುವುದು lowest form of wit ಎಂಬುದು ಘನಂದಾರಿ ಅರ್ಥಧಾರಿಗಾಳಿಗೆ ಇನ್ನೂ ಮನನವಾಗದಿರುವುದು ದುರ್ದೈವ.
ಐದು ತಿಂಗಳ ಹಿಂದೆ, ಎಡನೀರು ಮಠದಲ್ಲಿ ನಡೆದ ‘ಸುಭದ್ರ ಕಲ್ಯಾಣ’ ಪ್ರಸಂಗವೊಂದರಲ್ಲಿ ಅರ್ಥ ಧಾರಿಗಳಿಬ್ಬರ ಮಾತಿನ ತೀಟೆ ಎಲ್ಲಿಗೆ ಹೋಯಿತೆಂದರೆ, ಪ್ರೇಕ್ಷಕರು ಎದ್ದು ಹೊಡೆಯುವುದೊಂದೇ ಬಾಕಿ. ಕೊನೆಗೆ ಒಬ್ಬ ಅರ್ಥಧಾರಿ ‘ಅಂಬೋ’ ಎಂದು ಕ್ಷಮೆ ಕೇಳಬೇಕಾಯಿತು.
ಮಾಣಿಮಠದಲ್ಲಿ ನಡೆದ ತಾಳಮದ್ದಳೆ ಪ್ರಸಂಗವೊಂದರಲ್ಲಿ ಸಂಘಟಕರೊಬ್ಬರಿಗೆ ಅನ್ವಯಿಸು ವಂತೆ ಪೌರಾಣಿಕ ಪಾತ್ರಧಾರಿ ವ್ಯಂಗ್ಯವಾಗಿ ಮಾತಾಡಿದ್ದಕ್ಕೆ ಪ್ರೇಕ್ಷಕರು ಆ ಅರ್ಥಧಾರಿಯೊಬ್ಬನಿಗೆ ‘ಧರ್ಮದೇಟು’ ಕೊಡುವ ತನಕ ಪರಿಸ್ಥಿತಿ ಕೈಮೀರಿ ಹೋಯಿತು. ತಮಗೆ ಆಗದವರ ಕುರಿತು ಚುಚ್ಚು ಮಾತುಗಳನ್ನು ಹೇಳಲು, ಹೀನಾಯವಾಗಿ ಟೀಕಿಸಲು ತಾಳಮದ್ದಳೆ ವೇದಿಕೆ ದುರ್ಬಳಕೆ ಯಾಗುತ್ತಿರುವುದು ಈ ಕಲೆಗೆ ಹಿಡಿದ ಕಳಂಕವೇ.
ಇಂಥ ಅರ್ಥಧಾರಿಗಳು ಕಲೆಗೆ ಶಾಪವಾಗಿ ಪರಿಣಮಿಸಿರುವುದು ಸದ್ಯದ ದುರಂತ. ಒಬ್ಬ ಅರ್ಥಧಾರಿ ಅಂದ್ರೆ ಆತ ಮಾತಾಡುವ ವಿಶ್ವಕೋಶವಿದ್ದಂತೆ. ಆತ ಮಾತು ಶುರು ಮಾಡಿದರೆ, ಎದುರಾಳಿ ಕಲಾವಿದ ಆತನ ಶಬ್ದಗಳ ಸುಳಿಯಲ್ಲಿ ಸಿಕ್ಕಿ ಒದ್ದಾಡಬೇಕು. ಆದರೆ ಅಲ್ಲಿ ಅಹಂಕಾರ ಇರಬಾರದು. ಬದಲಾಗಿ ವಿನಯದ ಜತೆಗೆ ಜ್ಞಾನದ ಹರಿವಿರಬೇಕು. ಆತ ಮೊದಲು ಎದುರಾಳಿ ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು.
ಆಮೇಲೆ ಆ ಮಾತಿನ ನಡುವೆ ಇರುವ ಸಣ್ಣ ಜಾಡನ್ನು ಹಿಡಿದು ತನ್ನ ವಾದವನ್ನ ಕಟ್ಟಬೇಕು. ಶೇಣಿ ಗೋಪಾಲಕೃಷ್ಣ ಭಟ್ಟರು ಮಾಡುತ್ತಿದ್ದುದು ಅದನ್ನೇ. ಅವರು ಪಾತ್ರದ ಒಳಗೆ ಎಷ್ಟರ ಮಟ್ಟಿಗೆ ಇಳಿಯುತ್ತಿದ್ದರು ಅಂದ್ರೆ, ಅವರು ಮಾತಾಡುತ್ತಿದ್ದರೆ, ನಮಗೆ ಶೇಣಿ ಕಾಣಿಸುತ್ತಿರಲಿಲ್ಲ, ಸಾಕ್ಷಾತ್ ಕರ್ಣನೋ ಅಥವಾ ಕೃಷ್ಣನೋ ಕಣ್ಣೆದುರು ನಿಂತಿzನೆ ಅನ್ನಿಸುತ್ತಿತ್ತು.
ಅದೇ ಅಸಲಿ ಅರ್ಥಧಾರಿಯ ಲಕ್ಷಣ! ಅರ್ಥಧಾರಿಯಾಗಿ ಕುಳಿತಲ್ಲಿಯೇ ತನ್ನ ಪಾತ್ರವನ್ನು ಆವಾಹಿಸಿಕೊಳ್ಳುತ್ತಿದ್ದರು. ತಾನು ಅರ್ಜುನನಾಗಿ ಮಾತಾಡುತ್ತಿದ್ದರೆ ಅವರ ದನಿಯಲ್ಲಿ ಕ್ಷಾತ್ರ ತೇಜಸ್ಸು ಇರುತ್ತಿತ್ತು, ಧರ್ಮರಾಯನಾದರೆ ಶಾಂತಿ ಇರುತ್ತಿತ್ತು. ಪಾತ್ರದ ಚೌಕಟ್ಟು ಮೀರಿ ವೈಯಕ್ತಿಕವಾಗಿ ಮಾತಾಡುತ್ತಿರಲಿಲ್ಲ.
ಒಂದೇ ಅರ್ಥ ನೀಡುವ ಹತ್ತಾರು ಪದಗಳು ಅವರಿಗೆ ಗೊತ್ತಿತ್ತು. ಸಂಸ್ಕೃತ ಶ್ಲೋಕಗಳನ್ನು ಬಳಸು ವಾಗ ಅದರ ವ್ಯಾಕರಣಬದ್ಧ ಅರ್ಥ ಮತ್ತು ತಾತ್ಪರ್ಯವನ್ನು ವಿವರಿಸುವ ಪಾಂಡಿತ್ಯವಿರುತ್ತಿತ್ತು. ಅವರ ಮಾತಿನಲ್ಲಿ ಅವರು ವಿಜೃಂಭಿಸುತ್ತಾ ತಾಳಮದ್ದಳೆ ಕಲೆಯ ಘನತೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದರು. ಇಂಥ ಹತ್ತಾರು ಅರ್ಥಧಾರಿಗಳನ್ನು ನಾನು ಇಲ್ಲಿ ಹೆಸರಿಸಬಹುದು. ಅವರಿಂದಾಗಿ ತಾಳಮದ್ದಳೆಯ ಗೌರವವೂ ಹೆಚ್ಚಾಯಿತು. ಇವರು ಕಲೆಗೆ ಭೂಷಣರಾದವರು, ‘ಕಸ್ತೂರಿ’ಗೆ ‘ಸುಗಂಧ’ವನ್ನಿಟ್ಟವರು.
ಇತ್ತೀಚಿನ ದಿನಗಳಲ್ಲಂತೂ ಕೆಲವು ಅರ್ಥಧಾರಿಗಳಿಗೆ ಹಲುಬುವ ಕಾಯಿಲೆ ಹದ್ದು ಮೀರಿ ಹೋದಂತಿದೆ. ಡಬಲ್ ಮೀನಿಂಗುಗಳ ಭರಾಟೆ, ವ್ಯರ್ಥ ಕಾಲ ಲೋಪ, ವೈಯಕ್ತಿಕ ವೈಭವಗಳನ್ನೇ ಅರ್ಥಧಾರಿಕೆ ಎಂದು ಭಾವಿಸಿದಂತಿದೆ. ದುರ್ದೈವ ಅಂದ್ರೆ ಇಂಥ ಅರ್ಥಧಾರಿಗಳನ್ನು ಸಿನಿಮಾದ ‘ಐಟಮ್ ಸಾಂಗ್ ಡಾನ್ಸರ್’ಗಳಂತೆ ಬಳಸಿಕೊಳ್ಳುತ್ತಿರುವುದು.
ತಮ್ಮನ್ನು ಕರೆದಿರುವುದೇ ಐಟಮ್ ಸಾಂಗ್‌ಗೆ ಎಂದ ಮೇಲೆ ಮೈಕಾಣಿಸದಿದ್ದರೆ ಹೇಗೆ? ಈ ಅರ್ಥಧಾರಿಗಳೂ ತಮ್ಮನ್ನು ಹಾಗೇ ಎಂದು ಭಾವಿಸಿ, ಅರ್ಥಧಾರಿಕೆಗೆ ಕೀಳು ಅಭಿರುಚಿಯ ಲೇಪ ಮೆತ್ತುತ್ತಿರುವುದು ಈ ಕಲೆಗೆ ಬಗೆಯುತ್ತಿರುವ ಅಪಚಾರ. ಕೆಲವು ಉತ್ತಮ ಅರ್ಥಧಾರಿಗಳೂ ತಮ್ಮನ್ನು ‘ಐಟಮ್ ಸಾಂಗ್ ಡಾನ್ಸರ್’ ಎಂದೇ ಭಾವಿಸಿ, ಕೀಳು ಅಭಿರುಚಿಯ ಪ್ರೇಕ್ಷಕರನ್ನು ರಂಜಿಸಲು ಅಸಂಬದ್ಧ ಮಾತುಗಾರಿಕೆಯಲ್ಲಿ ತೊಡಗುವುದು ಸಾಮಾನ್ಯವಾಗಿ ಬಿಟ್ಟಿದೆ.
ಬಹಳ ವರ್ಷಗಳ ಹಿಂದೆ, ಒಂದು ಪ್ರಸಂಗ. ಶಂಭು ಹೆಗಡೆ ಅವರ ಕರ್ಣ ತನ್ನ ಮಗ ವೃಷಸೇನ ಅಳಿದ ಶೋಕದ ಅಭಿನಯವನ್ನು ಶೇಣಿ ಗೋಪಾಲಕೃಷ್ಣ ಅವರು, ‘ಮಗನ ಹೆಣದ ಮುಂದೆ ಅಷ್ಟೆಲ್ಲ ಅಭಿನಯ ಮಾಡಿದರೆ ಹೆಣ ಏನಾಗಬೇಕು’ ಎಂದಿದ್ದರು. ಆಗ ಶಂಭು ಹೆಗಡೆಯವರು, ‘ಹೌದು, ಆದರೆ ಮಗನ ಹೆಣದ ಮುಂದೆ ಕುಳಿತು ಮೂರು ತಾಸು ಮಾತಾಡುತ್ತೀರಲ್ಲ, ಆಗ ಹೆಣ ಕೊಳೆತು ಹೋಗುವುದಿಲ್ಲವೇ?’ ಎಂದು ಉತ್ತರಿಸಿದ್ದು ನೆನಪಾಗುತ್ತದೆ.
ಒಬ್ಬ ಶ್ರೇಷ್ಠ ಅರ್ಥಧಾರಿ ತನ್ನ ವಾದವನ್ನು ಎಷ್ಟು ಸಮರ್ಥವಾಗಿ ಮಂಡಿಸುತ್ತಾನೋ, ಅಷ್ಟೇ ಗೌರವದಿಂದ ಎದುರಾಳಿಯ ವಾದವನ್ನೂ ಕೇಳಿಸಿಕೊಳ್ಳಬೇಕು. ಇಲ್ಲಿ ಎದುರಾಳಿಯನ್ನು ಸೋಲಿಸು ವುದು ಎಂದರೆ ಅವನನ್ನು ಅವಮಾನಿಸುವುದಲ್ಲ, ಅವನ ತರ್ಕವನ್ನು ತನ್ನ ಜ್ಞಾನದಿಂದ ಮೀರಿಸುವುದು. ಜೀವನದ ಜಟಿಲ ಸಮಸ್ಯೆ ಗಳಿಗೆ ಪುರಾಣದ ಮೂಲಕ ಪರಿಹಾರ ಹುಡುಕುವುದು ಅರ್ಥಧಾರಿಯ ಅತಿ ದೊಡ್ಡ ಲಕ್ಷಣ.
‘ಭೀಷ್ಮ ವಿಜಯ’ದಲ್ಲಿ ಅಂಬೆಯ ಪ್ರಶ್ನೆಗೆ ಭೀಷ್ಮ ಉತ್ತರಿಸುವಾಗ, ತನ್ನ ಭೀಷ್ಮ ಪ್ರತಿಜ್ಞೆ ಮತ್ತು ಅಂಬೆಯ ನ್ಯಾಯಸಮ್ಮತ ಬೇಡಿಕೆಯ ನಡುವೆ ಸಿಲುಕುತ್ತಾನೆ. ಅಲ್ಲಿ ಅರ್ಥಧಾರಿ ‘ನಾನು ಪ್ರತಿಜ್ಞೆ ಮಾಡಿದ್ದೇನೆ, ಅದಕ್ಕೇ ಮದುವೆಯಾಗಲ್ಲ’ ಅಂತ ಮುಗಿಸಿಬಿಡುವುದಿಲ್ಲ. ಬದಲಾಗಿ, ‘ವೈಯಕ್ತಿಕ ಸುಖ ಮತ್ತು ಸಾರ್ವಜನಿಕ ಸತ್ಯದ ನಡುವೆ ಒಬ್ಬ ಮನುಷ್ಯ ಹೇಗೆ ಬಲಿಪಶುವಾಗುತ್ತಾನೆ’ ಎನ್ನುವು ದನ್ನು ಇಂದಿನ ಕಾಲದ ಕಷ್ಟಗಳಿಗೆ ಹೋಲಿಸಿ ವಿವರಿಸುತ್ತಾನೆ.
ತಾಳಮದ್ದಳೆಯ ಶ್ರೇಷ್ಠತೆ ಇರುವುದು ಅರ್ಥಧಾರಿಯ ಬುದ್ಧಿಶಕ್ತಿ (Intellect) ಮತ್ತು ವಾಕ್ಚಾತು ರ್ಯದ ( Elocution) ಪರಮಾವಧಿಯಲ್ಲಿ. ಇಲ್ಲಿ ಗೆದು ಕಲಾವಿದನಲ್ಲ, ಆದರೆ ಆತ ಮಂಡಿಸುವ ತರ್ಕ. ತನ್ನ ಮಾತಿನ ಮೂಲಕ ಅರ್ಥಧಾರಿ, ನಮ್ಮನ್ನು ದ್ವಾಪರ ಯುಗಕ್ಕೆ ಕರೆದುಕೊಂಡು ಹೋಗುತ್ತಾನಲ್ಲ, ಅದೇ ಈ ಕಲೆಯ ಶ್ರೇಷ್ಠತೆ. ‘ಕರ್ಣ ಪರ್ವ’ ಪ್ರಸಂಗದಲ್ಲಿ ಕರ್ಣನ ಪಾತ್ರಧಾರಿ ತನ್ನ ಅಸಹಾಯಕತೆಯನ್ನು ವಿವರಿಸುವಾಗ - ‘ನಾನು ಹುಟ್ಟಿದಾಗ ತಾಯಿ ಬಿಟ್ಟಳು, ವಿದ್ಯೆ ಕಲಿಯುವಾಗ ಗುರು ಶಪಿಸಿದ, ರಥದ ಚಕ್ರ ಹೂತಾಗ ಧರ್ಮ ನನ್ನನ್ನು ಕೈಬಿಟ್ಟಿತು’ ಎಂದು ಗದ್ಗದಿತ ಧ್ವನಿಯಲ್ಲಿ ಹೇಳಿದರೆ, ಪ್ರೇಕ್ಷಕನಿಗೆ ಎದುರಿಗಿರುವ ಕಲಾವಿದ ಕಾಣಿಸುವುದಿಲ್ಲ. ಬದಲಾಗಿ ಕುರುಕ್ಷೇತ್ರದ ರಣಾಂಗಣದಲ್ಲಿ ಏಕಾಂಗಿಯಾಗಿ ನಿಂತಿರುವ ಸೂರ್ಯಪುತ್ರ ಕರ್ಣ ಕಣ್ಣೆದುರು ಬಂದು ನಿಲ್ಲುತ್ತಾನೆ!
ಮೊದಲೇ ಬರೆದಿಟ್ಟ ಸಂಭಾಷಣೆ ಇಲ್ಲದಿದ್ದರೂ, ಶಾಸ್ತ್ರಗಳ ಆಧಾರದ ಮೇಲೆ ಎದುರಾಳಿಯ ಸವಾಲನ್ನು ಮೆಟ್ಟಿ ನಿಲ್ಲುವುದು ಈ ಕಲೆಯ ಬೌದ್ಧಿಕ ಶ್ರೇಷ್ಠತೆ. ಶೇಣಿ ಗೋಪಾಲಕೃಷ್ಣ ಭಟ್ಟರ ಜೀವನದ ಸತ್ಯ ಘಟನೆಯನ್ನು ಹೇಳಬೇಕು. ಒಮ್ಮೆ ಪ್ರಸಂಗದಲ್ಲಿ ರಾಮನ ಪಾತ್ರಧಾರಿ ವಾಲಿ ಯನ್ನು ಮರೆಯಿಂದ ಕೊಂದದ್ದನ್ನು ಸಮರ್ಥಿಸಿಕೊಳ್ಳುತ್ತಾ, ‘ನಾನು ದೇವರು, ನಾನು ಮಾಡಿದ್ದೆಲ್ಲ ಸರಿ’ ಎಂಬ ಅರ್ಥ ಬರುವಂತೆ ಮಾತನಾಡಿದಾಗ, ವಾಲಿ ಪಾತ್ರಧಾರಿ (ಶೇಣಿ) ತಡೆದು ನಿಲ್ಲಿಸಿ ಕೇಳಿದರು - ‘ರಾಮ, ನೀನು ಮರೆಯಿಂದ ಹೊಡೆದದ್ದು ಸರಿ ಇರಬಹುದು, ಆದರೆ ನಿನಗೆ ನಿನ್ನ ಶೌರ್ಯದ ಮೇಲೆ ನಂಬಿಕೆ ಇರಲಿಲ್ಲವೇ? ಅಥವಾ ನಿನ್ನ ಬಾಣದ ಮೇಲೆಯೇ ನಿನಗೆ ಸಂಶಯ ವಿತ್ತೇ?’ ಈ ಪ್ರಶ್ನೆಗೆ ರಾಮನ ಪಾತ್ರಧಾರಿ ತತ್ತರಿಸಿಹೋಗಬೇಕಿತ್ತು.
ಆದರೆ ಆತ ನೀಡಿದ ಉತ್ತರ - ‘ವಾಲಿ, ನನ್ನ ಶೌರ್ಯದ ಮೇಲೆ ನನಗೆ ನಂಬಿಕೆ ಇತ್ತು, ಆದರೆ ಸುಗ್ರೀವನ ಭಯದ ಮೇಲೆ ನಂಬಿಕೆ ಇರಲಿಲ್ಲ. ಆತ ನನ್ನ ಹಿಂದೆ ಬಂದು ನಿಂತಿದ್ದ, ಶರಣಾಗತ ನಾದವನನ್ನು ರಕ್ಷಿಸುವುದು ನನ್ನ ಮೊದಲ ಧರ್ಮ!’ ಈ ತರ್ಕ ಇದೆಯಲ್ಲ... ಇದು ಇಡೀ ಸನ್ನಿವೇಶಕ್ಕೆ ಬೇರೆಯದೇ ಅರ್ಥವನ್ನು ನೀಡುತ್ತದೆ.
ತಾಳಮದ್ದಳೆಯ ಶ್ರೇಷ್ಠತೆ ಇರೋದೇ ಅದರ ‘ಸೌಮ್ಯ ಶಕ್ತಿ’ಯಲ್ಲಿ. ಅಲ್ಲಿ ಕಿರುಚಾಟವಿಲ್ಲ, ಅಬ್ಬರ ವಿಲ್ಲ. ಕೇವಲ ಭಾಗವತರ ತಾಳದ ಲಯಕ್ಕೆ ತಕ್ಕಂತೆ ಪದಗಳ ನರ್ತನವಿರುತ್ತದೆ. ಒಬ್ಬ ಅರ್ಥಧಾರಿ ಅಂದ್ರೆ ಆತ ಆ ಕ್ಷಣಕ್ಕೆ ಒಬ್ಬ ಫಿಲಾಸಫರ್, ಒಬ್ಬ ಲಾಯರ್ ಮತ್ತು ಒಬ್ಬ ಸೈಕಾಲಜಿಸ್ಟ್ ಮೂರೂ ಆಗಿರುತ್ತಾನೆ ಹಾಗೂ ಇನ್ನೂ ಹೆಚ್ಚು.
ಅರ್ಥಧಾರಿಗಳು ಅಂದ್ರೆ ಅವರು ಬರಿ ಮಾತುಗಾರರಲ್ಲ, ಅವರು ಸಮಾಜದ ಮೂರನೇ ಕಣ್ಣು ಇದ್ದಂತೆ. ಆತ ಮದ್ದಳೆಯ ಏಟಿಗೆ ತಕ್ಕಂತೆ ತನ್ನ ಮಿದುಳಿನ ನರಗಳನ್ನು ಮೀಟಬೇಕು. ಅಲ್ಲಿ ಸುಳ್ಳು ಹೇಳಲು ಜಾಗವಿಲ್ಲ, ಯಾಕಂದರೆ ಎದುರಿಗೆ ಕುಳಿತಿರುವವನು ಅಷ್ಟೇ ದೊಡ್ಡ ಪಂಡಿತ!
ತಾಳಮದ್ದಳೆಯ ಶ್ರೇಷ್ಠತೆ ಇರುವುದು ಶಬ್ದಗಳನ್ನು ಬಳಸುವ ವೈಖರಿಯಲ್ಲಿ. ಒಬ್ಬ ಶ್ರೇಷ್ಠ ಅರ್ಥ ಧಾರಿ ಸಾಮಾನ್ಯ ಪದಕ್ಕೂ ಅಸಾಮಾನ್ಯ ಅರ್ಥವನ್ನು ತರುವಂತೆ, ಅಷ್ಟೇ ಅನರ್ಥವನ್ನೂ ತರಬಲ್ಲ ಎಂಬುದನ್ನು ಈಗಿನ ಅರ್ಥಧಾರಿಗಳು ಅರಿತುಕೊಳ್ಳಬೇಕಾಗಿದೆ. ಕಲೆಯನ್ನು ಗೌರವಿಸದೇ ಅರ್ಥಧಾರಿಗಳಿಗೆ ಅರ್ಥವೂ ಇಲ್ಲ, ಗೌರವವೂ ಇಲ್ಲ.
ಕಲೆಯನ್ನು ಮೀರಿ ಕಲಾವಿದನಿಲ್ಲ. ಈ ಮಿತಿಯನ್ನು ಅರ್ಥಧಾರಿ ಅರಿತುಕೊಂಡಷ್ಟೂ ಕಲೆಗೆ ಭೂಷಣ, ಕಲಾವಿದನಿಗೂ. ತಾಳಮದ್ದಳೆಗೆ ಒಂದು ಭವ್ಯ ಪರಂಪರೆ ಇದೆ. ಕಾಲ ಎಷ್ಟೇ ಆಧುನಿಕ ವಾದರೂ ಈ ಭವ್ಯ ಪರಂಪರೆಯ ಬುನಾದಿ ಗೊಂದು ದಿವ್ಯ ನಮನವನ್ನು ಸಲ್ಲಿಸಿಯೇ ಮಾತಿ ಗಿಳಿಯಬೇಕು. ಇದು ಅರ್ಥಧಾರಿಯ ಈರ್ಷೆ, ಮತ್ಸರ, ದ್ವೇಷ, ಬಾಯ್ತೀಟೆ ತೀರಿಸಿಕೊಳ್ಳುವ ಜಗುಲಿಯಲ್ಲ. ಇದೊಂದು ಪ್ರೌಢ ಮನಸ್ಸುಗಳ ಮಂಟಪ. ಇಲ್ಲಿ ಮೆರೆಯಬೇಕಾಗಿದ್ದು ಸಜ್ಜನಿಕೆ, ವಿನಯವಂತಿಕೆ ಮತ್ತು ಕಲಾವಂತಿಕೆ. ಪ್ರೇಕ್ಷಕ ಬಯಸುವ ದತ್ತಫಲವೂ ಅದೇ.
ತಾಳಮದ್ದಳೆಯ ‘ಐಟಮ್ ಸಾಂಗ್ ಡಾನ್ಸರ್’ಗಳಿಂತಿರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ. ಕೊನೆಯಲ್ಲಿ, ನಾನು ಉದ್ದೇಶಪೂರ್ವಕವಾಗಿ ತಾಳಮದ್ದಳೆಯ ‘ಐಟಮ್ ಸಾಂಗ್ ಡಾನ್ಸರ್’ಗಳ ಹೆಸರನ್ನು ಬರೆದಿಲ್ಲ. ತಿಳಿಯುವ ಆಸಕ್ತಿಯಿದ್ದರೆ ಕೊಡಬಹುದೇನೋ?