ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಟೀಕಿಸುವುದರಿಂದ ಹೆಗಲೇರುವ ಕರ್ಮಫಲ

’ಯಾರನ್ನಾದರೂ ನ್ಯಾಯವಾಗಿ ಟೀಕಿಸಿದರೆ, ಅವರ ದುಷ್ಟಕರ್ಮದ ಅರ್ಧ ಭಾಗ ನಿಮಗೆ ಸೇರುತ್ತದೆ ಎಂದು ನಮ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಅದೇ ಯಾರನ್ನಾದರೂ ಅನ್ಯಾಯವಾಗಿ ಟೀಕಿಸಿದರೆ, ಅವರ ಸಂಪೂರ್ಣ ದುಷ್ಟಕರ್ಮ ನಮಗೇ ಸೇರುತ್ತದೆ, ವಿಶೇಷವಾಗಿ ಭಕ್ತರ ಕುರಿತು ನಮ್ಮ ಆಲೋಚನೆಗಳು ಮತ್ತು ಮಾತುಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಮೇಲಿನ ಕಥೆಯಿಂದ ನಾವು ಮನಗಾಣ ಬಹುದು.

Roopa Gururaj Column: ಟೀಕಿಸುವುದರಿಂದ ಹೆಗಲೇರುವ ಕರ್ಮಫಲ

-

ಒಂದೊಳ್ಳೆ ಮಾತು

ಒಮ್ಮೆ ಒಬ್ಬ ರಾಜನು ಬ್ರಾಹ್ಮಣರಿಗೆ ಉದಾರವಾಗಿ ಅನ್ನದಾನ ಮಾಡುತ್ತಿದ್ದ. ಒಂದು ದಿನ ಅವನು ಬ್ರಾಹ್ಮಣರಿಗೆ ಆಹಾರ ವಿತರಿಸುತ್ತಿರುವಾಗ, ಮೇಲಿಂದ ಹಾರುತ್ತಿದ್ದ ಗಿಡುಗವೊಂದು ತನ್ನ ಕೊಕ್ಕಿನಲ್ಲಿ ಸತ್ತ ಹಾವೊಂದನ್ನು ಹಿಡಿದುಕೊಂಡಿತ್ತು. ಆ ಸತ್ತ ಹಾವಿನ ಬಾಯಿಂದ ವಿಷದ ಒಂದು ಹನಿ ರಾಜನು ವಿತರಿಸುತ್ತಿದ್ದ ಆಹಾರಕ್ಕೆ ಬಿದ್ದಿತು.

ಯಾರಿಗೂ ಇದು ಗಮನಕ್ಕೆ ಬರಲಿಲ್ಲ. ರಾಜನು ಎಂದಿನಂತೆ ಅನ್ನದಾನ ಮುಂದುವರಿಸಿದನು. ಅನಾಯಾಸವಾಗಿ ವಿಷಮಿಶ್ರಿತ ಆಹಾರವನ್ನು ಸ್ವೀಕರಿಸಿದ ಒಬ್ಬ ಬ್ರಾಹ್ಮಣನು ಮರಣ ಹೊಂದಿ ದನು. ಈ ಘಟನೆ ರಾಜನಿಗೆ ಅಪಾರ ದುಃಖವನ್ನುಂಟು ಮಾಡಿತು. ಕರ್ಮವನ್ನು ಹಂಚುವ ಜವಾಬ್ದಾರಿಯಲ್ಲಿದ್ದ ಯಮರಾಜನ ದೂತನಿಗೆ ದೊಡ್ಡ ದ್ವಂದ್ವ ಎದುರಾಯಿತು.

ಆ ಬ್ರಾಹ್ಮಣನ ಮರಣದ ಕರ್ಮವನ್ನು ಯಾರಿಗೆ ನೀಡಬೇಕು? ಗಿಡುಗವು ತನ್ನ ಆಹಾರವನ್ನು ಹೊತ್ತುಕೊಂಡು ಹಾರಿದ್ದುದರಲ್ಲಿ ತಪ್ಪಿಲ್ಲ, ಸತ್ತ ಹಾವಿನದೂ ತಪ್ಪಿಲ್ಲ. ವಿಷ ಬಿದ್ದ ವಿಷಯವನ್ನು ತಿಳಿಯದೇ ಅನ್ನದಾನ ಮಾಡಿದ ರಾಜನದ್ದೂ ತಪ್ಪಿಲ್ಲ. ಈ ಕರ್ಮಫಲವನ್ನು ಯಾರ ಖಾತೆಗೆ ಹಾಕಬೇಕು ಎಂದು ತಿಳಿಯದ ಯಮರಾಜನ ದೂತನು ಮೌನವಾಗಿ ಮುಂದೇನಾಗುತ್ತದೆ ನೋಡೋಣ ಎಂದು ಸಮಯಕ್ಕೆ ಅದನ್ನು ಬಿಟ್ಟುಬಿಟ್ಟಿದ್ದ.

ಇದನ್ನೂ ಓದಿ: Roopa Gururaj Column: ಶ್ರೇಷ್ಠ ದಾನಿ ಕರ್ಣನ ಗುಣಗಾನ ಮಾಡಿದ ಶ್ರೀಕೃಷ್ಣ

ಆದರೆ ಒಂದು ದಿನ ಕೆಲ ಬ್ರಾಹ್ಮಣರು ರಾಜನನ್ನು ಭೇಟಿಯಾಗಲು ರಾಜ್ಯಕ್ಕೆ ಬಂದರು. ಅವರು ದಾರಿಯಲ್ಲಿದ್ದ ಒಬ್ಬ ಮಹಿಳೆಯನ್ನು ಅರಮನೆಯ ದಾರಿ ಕೇಳಿದರು. ಆಕೆ ದಾರಿಯನ್ನು ತೋರಿಸಿ, ಜೊತೆಗೆ ಸುಮ್ಮನಿರಲಾರದೆ, ‘ಜಾಗ್ರತೆ ಇರಲಿ, ಈ ರಾಜನು ಬ್ರಾಹ್ಮಣರನ್ನು ಕೊಲ್ಲುವವನು!’ ಎಂದು ಕಠೋರವಾದ ಆರೋಪವೊಂದನ್ನು ಮಾಡಿದಳು.

ಆ ಕ್ಷಣದಲ್ಲೇ ಯಮರಾಜನ ದೂತನು ನಿರ್ಧಾರ ಕೈಗೊಂಡನು. ಆಕೆ ಅನ್ಯಾಯವಾಗಿ ರಾಜನನ್ನು ಟೀಕಿಸಿದ್ದ ಕಾರಣ, ಬ್ರಾಹ್ಮಣನ ಮರಣದ ಸಂಪೂರ್ಣ ಕರ್ಮವನ್ನು ಆಕೆಗೆ ನೀಡಲಾಯಿತು.

ನಹಂ ವಿಸಂಕೆ ಸುರ ರಾಜ ವಜ್ರನ್ ನ ತ್ರ್ಯಾಕ್ಷ ಸುಲನ್, ನಾ ಯಮಸ್ಯ ದಂಡತ್ ನಗ್ನೇ ಅರ್ಕ ಸೋಮಾನಿಲ ವಿಟ್ಟಪಸ್ತ್ರಾಕ್ ಚಂಕೆ ಬ್ರಿಸಮ್, ಬ್ರಾಹ್ಮ ಕುಲವಮನಾತ್ ಎಂದು ಶ್ರೀಮದ್ಭಾಗ ವತದಲ್ಲಿ ಹೇಳಿದ್ದಾರೆ ಅಂದರೆ ‘ಇಂದ್ರನ ವಜ್ರಾಸ್ತ್ರಕ್ಕೂ, ಶಿವನ ತ್ರಿಶೂಲಕ್ಕೂ, ಯಮರಾಜನ ದಂಡಕ್ಕೂ ನಾನು ಭಯಪಡುವುದಿಲ್ಲ.

ಅಗ್ನಿ, ಸುಡುವ ಸೂರ್ಯ, ಚಂದ್ರ, ಗಾಳಿ, ಕುಬೇರನ ಅಸ್ತ್ರಗಳು ಇವು ಯಾವುದಕ್ಕೂ ನನಗೆ ಭಯ ವಿಲ್ಲ, ಆದರೆ ಬ್ರಾಹ್ಮಣನನ್ನು ಅವಮಾನ ಮಾಡುವುದಕ್ಕೆ ಮಾತ್ರ ನಾನು ಅತ್ಯಂತ ಭಯಪಡು ತ್ತೇನೆ.

’ಯಾರನ್ನಾದರೂ ನ್ಯಾಯವಾಗಿ ಟೀಕಿಸಿದರೆ, ಅವರ ದುಷ್ಟಕರ್ಮದ ಅರ್ಧ ಭಾಗ ನಿಮಗೆ ಸೇರುತ್ತದೆ ಎಂದು ನಮ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಅದೇ ಯಾರನ್ನಾದರೂ ಅನ್ಯಾಯವಾಗಿ ಟೀಕಿಸಿದರೆ, ಅವರ ಸಂಪೂರ್ಣ ದುಷ್ಟಕರ್ಮ ನಮಗೇ ಸೇರುತ್ತದೆ, ವಿಶೇಷವಾಗಿ ಭಕ್ತರ ಕುರಿತು ನಮ್ಮ ಆಲೋ ಚನೆಗಳು ಮತ್ತು ಮಾತುಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಮೇಲಿನ ಕಥೆಯಿಂದ ನಾವು ಮನಗಾಣಬಹುದು.

ನಾವು ಕೂಡ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನೇಕರ ಬಗ್ಗೆ ನಾಲಿಗೆ ಹರಿಯ ಬಿಡುತ್ತಿರುತ್ತೇವೆ, ಅದು ನಮಗೆ ಸಂಬಂಧಪಟ್ಟ ವಿಷಯವಾಗಿರಬಹುದು ಅಥವಾ ಸಂಬಂಧಪಡದ ವಿಷಯವಾಗಿರ ಬಹುದು. ಕೆಲವೊಮ್ಮೆಯಂತೂ ನಾವು ಅದನ್ನು ಎದುರಿಗಿದ್ದು ಕಂಡಿದ್ದೇವೆ ಎನ್ನುವ ರೀತಿ ಪುಂಕಾನುಪುಂಕವಾಗಿ ಕಥೆಗಳನ್ನು ಹೆಣೆಯುತ್ತಾ ಹೋಗುತ್ತೇವೆ.

ಇದಕ್ಕೆ ಆ ಕ್ಷಣದ ಕೇಳುಗರು ಇರಬಹುದು, ಅದು ಅವರನ್ನು ರಂಜಿಸಲುಬಹುದು, ಆದರೆ ಇದರಿಂದ ಆಗುವ ಅನಾಹುತಗಳ ಬಗ್ಗೆ ನಾವು ಎಂದೂ ಯೋಚಿಸುವುದಿಲ್ಲ. ಕೆಲವೊಮ್ಮೆ ಇಂತಹ ಮಾತು ಗಳಿಂದ ಅನೇಕರ ಜೀವನವೇ ಹಾಳಾಗಿ ಹೋಗುತ್ತದೆ.

ಗಾಳಿ ಸುದ್ದಿ, ಗಾಳಿಮಾತುಗಳಿಗೆ ನಾವು ಎಲ್ಲಿಯವರೆಗೆ ಜೀವ ತುಂಬುತ್ತೇವೆಯೋ, ಅದು ಮತ್ತೊ ಬ್ಬರ ತೇಜೋವಧೆ ಮಾಡುತ್ತಲೇ ಇರುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇದು ನಮ್ಮ ಸಣ್ಣತನವನ್ನು ಜಗತ್ತಿನ ಮುಂದೆ ತೆರೆದಿಡುತ್ತಾ ಹೋಗುತ್ತದೆ.

ಒಮ್ಮೆ ಯೋಚಿಸಿ, ನಾವು ಇಂತಹ ವಿಷಯಗಳಿಗೆ ಹಗುರಾಗಿ ಮಾತನಾಡಿ ಅದರ ಕರ್ಮಫಲವನ್ನು ಅನುಭವಿಸುವ ಬದಲು, ಮತ್ತಷ್ಟು ಜವಾಬ್ದಾರಿಯುತ ನಾಗರೀಕರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಅಂತ:ಕರಣವಿರುವ ಮನುಷ್ಯರಾಗಿ ಬದುಕಿದರೆ ಚಂದವಲ್ಲವೇ?