ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಔತಣಕೂಟದಲ್ಲಿ ಜೈಲ್‌ ಸಿಂಗ್

ರಾಷ್ಟ್ರಪತಿಯವರು ಇಂಗ್ಲಿಷ್‌ನಲ್ಲಿ ಮಾತಾಡಲಾರಂಭಿಸಿದರೆ ಯಡವಟ್ಟು ತಪ್ಪಿದ್ದಲ್ಲ" ಎಂದು ಆಗಾಗ ದೂರುತ್ತಿದ್ದರು. ಜೈಲ್ ಸಿಂಗ್ ರಾಷ್ಟ್ರಪತಿ ಆಗಿದ್ದ ದಿನಗಳ ಬಗ್ಗೆ ಪುಸ್ತಕ ಬರೆದ ಹಾಗೂ ಅವರಿಗೆ ಡೆಪ್ಯುಟಿ ಸೆಕ್ರೆಟರಿ ಆಗಿದ್ದ ಕೆ.ಸಿ.ಸಿಂಗ್ ಪ್ರಕಾರ, ಇದು ಅರ್ಧ ನಿಜ ಮತ್ತು ಅರ್ಧ ಸುಳ್ಳು. ಜೈಲ್ ಸಿಂಗ್ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿರಲಿಲ್ಲ. ಅದು ಅವರಿಗೂ ಗೊತ್ತಿತ್ತು.

ಔತಣಕೂಟದಲ್ಲಿ ಜೈಲ್‌ ಸಿಂಗ್

ಸಂಪಾದಕರ ಸದ್ಯಶೋಧನೆ

ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅವರ ಸಂಪುಟದ ಕೆಲವು ಸದಸ್ಯರು “ರಾಷ್ಟ್ರಪತಿ ಜೈಲ್ ಸಿಂಗ್ ಅವರಿಗೆ ಸರಿಯಾಗಿ ಇಂಗ್ಲಿಷ್ ಮಾತಾಡಲು ಬರೋಲ್ಲ. ವಿದೇಶಿ ಗಣ್ಯರು ಬಂದಾಗ, ಕೆಟ್ಟದಾಗಿ ಏನೇನೋ ಮಾತಾಡ್ತಾರೆ. ಇಂಗ್ಲಿಷಿನಲ್ಲಿ ಮಾತಾಡಲಾರಂಭಿಸಿದರೆ ಅವರು ಗಲಿಬಿಲಿಯಾಗುತ್ತಾರೆ. ಏನು ಮಾತಾಡುತ್ತಾರೆ ಎಂಬುದೇ ಅವರಿಗೆ ಗೊತ್ತಾಗುವುದಿಲ್ಲ. ಇದರಿಂದ ವಿದೇಶಿ ಗಣ್ಯರಿಗೆ ಭಾರಿ ಮುಜುಗರವಾಗುತ್ತದೆ. ಕೆಲವರಿಗೆ ಜೈಲ್ ಸಿಂಗ್ ಇಂಗ್ಲಿಷ್ ಕೇಳಿ ನಗು ಬಂದಿದ್ದುಂಟು.

ರಾಷ್ಟ್ರಪತಿಯವರು ಇಂಗ್ಲಿಷ್‌ನಲ್ಲಿ ಮಾತಾಡಲಾರಂಭಿಸಿದರೆ ಯಡವಟ್ಟು ತಪ್ಪಿದ್ದಲ್ಲ" ಎಂದು ಆಗಾಗ ದೂರುತ್ತಿದ್ದರು. ಜೈಲ್ ಸಿಂಗ್ ರಾಷ್ಟ್ರಪತಿ ಆಗಿದ್ದ ದಿನಗಳ ಬಗ್ಗೆ ಪುಸ್ತಕ ಬರೆದ ಹಾಗೂ ಅವರಿಗೆ ಡೆಪ್ಯುಟಿ ಸೆಕ್ರೆಟರಿ ಆಗಿದ್ದ ಕೆ.ಸಿ.ಸಿಂಗ್ ಪ್ರಕಾರ, ಇದು ಅರ್ಧ ನಿಜ ಮತ್ತು ಅರ್ಧ ಸುಳ್ಳು. ಜೈಲ್ ಸಿಂಗ್ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿರಲಿಲ್ಲ. ಅದು ಅವರಿಗೂ ಗೊತ್ತಿತ್ತು.

ಆದರೆ ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಆ ಭಾಷೆ ಗೊತ್ತಿತ್ತು. ಹೀಗಾಗಿ ಅವರು ಚುಟುಕಾಗಿ ಮಾತಾಡುತ್ತಿದ್ದರು. ಅವರಿಗೆ ಅಗಾಧ ಕಾಮನ್ ಸೆನ್ಸ್ ಇತ್ತು. ಹೀಗಾಗಿ ಎಷ್ಟೇ ಕಡಿಮೆ ಮಾತಾಡಲಿ, ಆ ಪದಗಳಲ್ಲಿಯೇ ರಂಜಿಸುತ್ತಿದ್ದರು.

ಇದನ್ನೂ ಓದಿ: Vishweshwar Bhat Column: ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಧೀರರಾಗಬಾರದು

ನಗು ಮೂಡಿಸುವ ಚತುರೋಕ್ತಿಗಳಿಂದ ಗಮನ ಸೆಳೆಯುತ್ತಿದ್ದರು. ಒಮ್ಮೆ ರಾಷ್ಟ್ರಪತಿ ಭವನದಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್ ಗೌರವಾರ್ಥ ಔತಣಕೂಟ. ಜೈಲ್ ಸಿಂಗ್ ಏನಾದರೂ ಎಡವಟ್ಟು ಮಾತಾಡಿ ಮುಜುಗರವನ್ನು ಉಂಟು ಮಾಡಬಹುದೆಂದು ರಾಷ್ಟ್ರಪತಿಗಳಿಗೆ ಮಾತಾಡಲು ಅವಕಾಶ ನೀಡದೇ, ಸ್ಪೀಕರ್ ಬಲರಾಮ್ ಜಾಖಡ್ ಪದೇ ಪದೆ ಮಧ್ಯಪ್ರವೇಶಿಸುತ್ತಿದ್ದರು.

ಇದರಿಂದ ಜೈಲ್ ಸಿಂಗ್ ತುಸು ಕಸಿವಿಸಿಗೊಂಡರು. ಒಂದು ಸಂದರ್ಭದಲ್ಲಂತೂ ಜೈಲ್ ಸಿಂಗ್ ಮಾತು ಆರಂಭಿಸಿದಾಗ ಜಾಖಡ್ ಅರ್ಧಕ್ಕೆ ತುಂಡರಿಸಿ, ತಾವೇ ಮಾತಾಡಲಾರಂಭಿಸಿದರು. ಅಷ್ಟು ಹೊತ್ತು ಹೇಗೋ ಅವುಡುಗಚ್ಚಿಕೊಂಡು ಸುಮ್ಮನಿದ್ದ ಜೈಲ್ ಸಿಂಗ್, “ರಾಣಿಯವರೇ, ಬಲರಾಮ್ ಜಾಖಡ್ ಇದ್ದಾರಲ್ಲ, ಅವರು ನನಗೆ ಸಹಾಯಕ ಸಚಿವರಾಗಿದ್ದರು" ಎಂದು ಹೇಳಿ ಮುಯ್ಯಿ ತೀರಿಸಿಕೊಂಡರು.

ಜೈಲ್ ಸಿಂಗ್ ಅವರನ್ನು ಸ್ಪೀಕರ್ ಜಾಖಡ್ ಬೇಕೆಂದೇ ಅಡ್ಡಿಪಡಿಸುತ್ತಿದ್ದಾರೆ ಎಂಬುದನ್ನು ಗಮನಿಸಿದ್ದ ರಾಣಿ, ರಾಷ್ಟ್ರಪತಿ ಅವರಿಗೆ ಸಮಾಧಾನವಾಗಲಿ ಎಂದು, “ಬಹಳ ವರ್ಷಗಳಿಂದ ನನ್ನ ಉಡುಪುಗಳನ್ನು ಹೊಲಿಯುತ್ತಿದ್ದ ಟೇಲರ್ ಸಹ ಒಮ್ಮೆ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್ ಆಗಿದ್ದ" ಎಂದು ಹೇಳಿದರು. ಅದಕ್ಕೆ ಜೈಲ್ ಸಿಂಗ್ ಖುಷಿಯಿಂದ ಬಾಯ್ತುಂಬಾ ನಕ್ಕರು.‌

ಇಂದಿರಾ ಗಾಂಽ ಮತ್ತು ರಾಣಿ ಎಲಿಜಬೆತ್ ಪರಸ್ಪರ ಮಾತಾಡುವಾಗ, ಮಧ್ಯೆಮಧ್ಯೆ ಜೈಲ್ ಸಿಂಗ್ ಏನನ್ನೋ ಗೊಣಗಿ ಸುಮ್ಮನಾಗುತ್ತಿದ್ದರು. ಇದನ್ನು ಗಮನಿಸಿದ ರಾಣಿಯ ಪತಿ ಪ್ರಿನ್ಸ್ ಫಿಲಿಪ್, “ನೀವು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಿರಲ್ಲ?" ಎಂದು ಕೇಳಿದಾಗ, ಜೈಲ್ ಸಿಂಗ್, “ಈ ರೀತಿಯ ಔತಣಕೂಟದಲ್ಲಿ ಉದ್ದನೆಯ ಭಾಷಣ ಮಾಡಬಾರದು, ಬಿಸಿ ಆಹಾರ ಪದಾರ್ಥಗಳು ತಣ್ಣಗಾಗು ತ್ತವೆ" ಎಂದು ಹೇಳಿದರು.

ಅದಕ್ಕೆ ಇಬ್ಬರೂ ಜೋರಾಗಿ ನಕ್ಕರು. ಅದಕ್ಕೆ ಪ್ರಿನ್ಸ್ ಫಿಲಿಪ್, “ಯೆಸ್.. ಯೆಸ್.. ನಿಮ್ಮ ಮಾತಿಗೆ ನನ್ನ ಸಹಮತವಿದೆ. ನನಗೂ ಅನೇಕ ಸಲ ಹೀಗೆ ಅನಿಸಿದೆ" ಎಂದು ಹೇಳಿ ಮತ್ತೊಮ್ಮೆ ನಕ್ಕರು. ಅನಂತರ ಜೈಲ್ ಸಿಂಗ್ ಮತ್ತು ಪ್ರಿನ್ಸ್ ಫಿಲಿಪ್ ಬಹಳ ಹತ್ತಿರವಾದರು!