Vishweshwar Bhat Column: ಜಪಾನಿಯರ ವ್ಯವಹಾರ ಬುದ್ದಿ
ಜಪಾನಿಯರು ಮಹಾ ಸಂಪ್ರದಾಯವಾದಿಗಳು. ಅವರು ಜಪಾನಿಯೇತರರನ್ನು ಮತ್ತು ವಿದೇಶಿ ಯರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಅವರು ಬೇರೆಯವರನ್ನು ಸರಳ ವಾಗಿ ಒಳಗೆ ಬಿಟ್ಟುಕೊಳ್ಳುವುದೂ ಇಲ್ಲ. ಬಿಜಿನೆಸ್ ವಿಷಯದಲ್ಲಿ ತುಸು ಜಿಗುಟು. ತಮ್ಮ ಮಾತೇ ಅಂತಿಮ ಎಂಬ ಜಾಯಮಾನದವರು. ಇದನ್ನು ಜಪಾನಿಯರು ‘ಸಕೊಕು ಪ್ರಿಸಂ’ ಅಂತ ಕರೆಯುತ್ತಾರೆ. ಇದಕ್ಕೆ ಐತಿಹಾಸಿಕ ಕಾರಣಗಳೂ ಉಂಟು.


ಸಂಪಾದಕರ ಸದ್ಯಶೋಧನೆ
ಜಪಾನಿಯರು ಮಹಾ ಸಂಪ್ರದಾಯವಾದಿಗಳು. ಅವರು ಜಪಾನಿಯೇತರರನ್ನು ಮತ್ತು ವಿದೇಶಿ ಯರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಅವರು ಬೇರೆಯವರನ್ನು ಸರಳವಾಗಿ ಒಳಗೆ ಬಿಟ್ಟುಕೊಳ್ಳುವುದೂ ಇಲ್ಲ. ಬಿಜಿನೆಸ್ ವಿಷಯದಲ್ಲಿ ತುಸು ಜಿಗುಟು. ತಮ್ಮ ಮಾತೇ ಅಂತಿಮ ಎಂಬ ಜಾಯಮಾನದವರು. ಇದನ್ನು ಜಪಾನಿಯರು ‘ಸಕೊಕು ಪ್ರಿಸಂ’ ಅಂತ ಕರೆಯುತ್ತಾರೆ. ಇದಕ್ಕೆ ಐತಿಹಾಸಿಕ ಕಾರಣಗಳೂ ಉಂಟು. ‘ಸಕೊಕು’ ಎಂಬುದು ಟೋಕುಗಾವಾ ಶೋಗುನೇಟು ಆಡಳಿತದ ಅವಧಿಯಲ್ಲಿ ಜಪಾನ್ ಅನುಸರಿಸಿದ ರಾಷ್ಟ್ರೀಯ ಪ್ರತ್ಯೇಕತಾ ನೀತಿ ಯಾಗಿತ್ತು. ಈ ನೀತಿಯು 1630ರ ದಶಕದಲ್ಲಿ ಟೋಕುಗಾವಾ ಇಯೆಮಿತ್ಸು ಅವರ ಆಡಳಿತದಲ್ಲಿ ಜಾರಿಗೆ ಬಂದು, ಸುಮಾರು 220 ವರ್ಷಗಳ ಕಾಲ ಜಪಾನನ್ನು ಬಾಹ್ಯ ಪ್ರಭಾವಗಳಿಂದ ದೂರವಿಟ್ಟಿತ್ತು.
16ನೇ ಶತಮಾನದಲ್ಲಿ ಯುರೋಪಿಯನ್ ದೇಶಗಳು ಜಪಾನಿನೊಂದಿಗೆ ವ್ಯಾಪಾರ ಮತ್ತು ಧರ್ಮ ಪ್ರಚಾರವನ್ನು ಆರಂಭಿಸಿದವು. ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಮಿಷನರಿಗಳು ಕ್ರೈಸ್ತ ಧರ್ಮ ವನ್ನು ಹರಡಲು ಪ್ರಯತ್ನಿಸಿದರು. ಆದರೆ, ಈ ಧರ್ಮಪ್ರಚಾರವು ಸ್ಥಳೀಯ ಆಡಳಿತಕ್ಕೆ ಆತಂಕ ವನ್ನುಂಟು ಮಾಡಿತು. ಟೋಕುಗಾವಾ ಇಯೆಮಿತ್ಸು 1635ರಲ್ಲಿ ಸಕೊಕು ಆದೇಶವನ್ನು ಹೊರಡಿಸಿದರು. ಇದರಿಂದ ಜಪಾನಿಯರು ವಿದೇಶಗಳಿಗೆ ಹೋಗುವುದು ಅಥವಾ ವಿದೇಶದಿಂದ ಮರಳುವುದು ನಿಷಿದ್ಧವಾಯಿತು.
ಇದನ್ನೂ ಓದಿ: Vishweshwar Bhat Column: ನನ್ನ ಜೀವನದ ದೊಡ್ಡ ರೋಲ್ ಮಾಡೆಲ್ ಅಂದ್ರೆ ಜಿರಳೆ !
ಜತೆಗೆ ಕ್ರೈಸ್ತ ಧರ್ಮವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಯಿತು. ಪೋರ್ಚುಗೀಸ್ ವ್ಯಾಪಾರಿಗಳನ್ನು 1639ರಲ್ಲಿ ಸಂಪೂರ್ಣವಾಗಿ ಹೊರಗಿಡಲಾಯಿತು. ಹಾಗಾದರೆ ಸಕೊಕು ನೀತಿಯ ಪ್ರಮುಖ ಅಂಶ ಗಳಾದರೂ ಏನು? ಜಪಾನಿಯರು ವಿದೇಶಗಳಿಗೆ ಪ್ರಯಾಣಿಸುವಂತಿಲ್ಲ. ಈ ನಿಯಮ ಉಲ್ಲಂಘಿಸಿ ದರೆ ಮರಣದಂಡನೆ ವಿಧಿಸುವುದು. ವಿದೇಶಿಯರು ಕೂಡ ಜಪಾನಿಗೆ ಬರುವಂತಿಲ್ಲ. ಅನಧಿಕೃತ ಪ್ರವೇಶಕ್ಕೆ ಗಂಭೀರ ಶಿಕ್ಷೆ ವಿಧಿಸುವುದು.
ಕ್ರೈಸ್ತ ಧರ್ಮವನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು. ಕ್ರೈಸ್ತ ಮಿಷನರಿಗಳು ಮತ್ತು ಅನು ಯಾಯಿಗಳು ಕಣ್ತಪ್ಪಿಸಿ ಬಂದರೆ ಅವರಿಗೆ ಶಿಕ್ಷೆ ವಿಧಿಸುವುದು. ಡಚ್ ಮತ್ತು ಚೀನಿ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡುವುದು. ಹಾಗಾದರೆ ಸಕೊಕು ನೀತಿಯಿಂದ ಆದ ಪರಿಣಾಮಗಳಾದರೂ ಏನು? ಈ ನೀತಿಯು ಜಪಾನಿನ ರಾಜಕೀಯ ಸ್ಥಿರತೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕಾಯ್ದು ಕೊಳ್ಳಲು ಸಹಾಯಕವಾಯಿತು. ಆದರೆ, ಈ ನೀತಿಯು ಜಪಾನಿನ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಹಿಮ್ಮೆಟ್ಟಿಸಿತು.
ವ್ಯಾಪಾರದ ನಿರ್ಬಂಧದಿಂದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಯಿತು. 19ನೇ ಶತಮಾನದಲ್ಲಿ ಪಶ್ಚಿಮ ದೇಶಗಳು ಜಪಾನಿನೊಂದಿಗೆ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಲು ಒತ್ತಾಯಿಸ ತೊಡಗಿ ದವು. 1853ರಲ್ಲಿ ಅಮೆರಿಕದ ಕಾಮೊರ್ಡೋ ಮೆಥ್ಯೂ ಪೆರಿ ಜಪಾನಿಗೆ ಬಂದ. ಜಪಾನನ್ನು ಬಾಹ್ಯ ಜಗತ್ತಿಗೆ ತೆರೆಯಲು ಒತ್ತಾಯಿಸಿದ. ಇದರಿಂದ 1854ರಲ್ಲಿ ಕನಗಾವಾ ಒಪ್ಪಂದದ ಮೂಲಕ ಜಪಾನ್ ತನ್ನ ಬಂದರುಗಳನ್ನು ವಿದೇಶಿಯರಿಗೆ ತೆರೆಯಿತು.
ಇದರಿಂದ ಸಕೊಕು ನೀತಿಯ ಅಂತ್ಯವಾಯಿತು. ಜಪಾನಿಯರು ಮೇಲ್ನೋಟಕ್ಕೆ ಸಹಜವಾಗಿ ಕಂಡರೂ, ನಿಮ್ಮ ಪ್ರತಿ ಮಾತನ್ನೂ ಒರೆಗಲ್ಲಿಗೆ ಹಚ್ಚುತ್ತಾರೆ. ಜಪಾನಿಯರು ನಿರ್ಧಾರಗಳನ್ನು ಕೈಗೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ನಾವು ಅವರೊಂದಿಗೆ ತಿಂಗಳುಗಳಿಂದ ಮಾತುಕತೆ ನಡೆಸುತ್ತಿದ್ದರೂ, ಅವರು ನಮ್ಮೊಂದಿಗೆ ವ್ಯವಹಾರಕ್ಕೆ ಒಪ್ಪಿದ್ದಾರಾ, ಇಲ್ಲವಾ ಎಂಬು ದನ್ನು ತಿಳಿಯುವುದು ಅಸಾಧ್ಯ. ಅವರು ಸರಳವಾದ ವಿಷಯಗಳನ್ನು ಮತ್ತೆ ಮತ್ತೆ ಹೇಳುತ್ತಾರೆ.
ಅವರೊಂದಿಗೆ ವ್ಯವಹರಿಸುವಾಗ ನಿಜವಾಗಿಯೂ ಅವರು ನಮ್ಮ ಮಾತುಗಳಿಗೆ ಸಹಮತ ವ್ಯಕ್ತ ಪಡಿಸಿದ್ದಾರೆ ಎಂದೇ ಅನಿಸುತ್ತದೆ. ಆದರೆ ಕೊನೆಯಲ್ಲಿ ಅವರು ಯಾವುದೇ ವಿವರಣೆಯಿಲ್ಲದೆ ನಮ್ಮನ್ನು ತಿರಸ್ಕರಿಸಿರುತ್ತಾರೆ. ನಾವು ತುಂಬಾ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ, ಆದರೆ ಅವರು ಗುಟ್ಟು ಬಿಟ್ಟುಕೊಡುವುದಿಲ್ಲ. ಮಾತುಕತೆಗಳ ಸಮಯದಲ್ಲಿ, ವಿದೇಶಿಯರು ಸಾಮಾನ್ಯವಾಗಿ ಜಪಾನಿನ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ತಕ್ಷಣದ ಆರ್ಥಿಕ ಲಾಭದ ಬಗ್ಗೆ ಯೋಚಿಸುತ್ತಾರೆ, ಆದರೆ ಜಪಾನಿಯರು ಒಪ್ಪಂದದ ಐದು ಅಥವಾ ಹತ್ತು ವರ್ಷಗಳ ನಂತರ ಏನಾಗುತ್ತದೆ ಎಂದು ಯೋಚಿಸುತ್ತಾರೆ.