ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಜಪಾನಿಯರ ಪ್ರಾಮಾಣಿಕತೆ

ರಸ್ತೆಯಲ್ಲಿ ಒಂದು ನಾಣ್ಯ ಸಿಕ್ಕರೂ ಅದನ್ನು ತಕ್ಷಣ ಹತ್ತಿರದ ಕೋಬಾನ್‌ಗೆ ಒಪ್ಪಿಸಬೇಕೆಂಬ ಮೌಲ್ಯ ವನ್ನು ಬೆಳೆಸಲಾಗುತ್ತದೆ. ಹೀಗೆ ಸಿಕ್ಕ ವಸ್ತುವನ್ನು ಮರಳಿಸಿದಾಗ ಪೊಲೀಸರು ಮಕ್ಕಳಿಗೆ ಪ್ರಶಂಸಾ ಪತ್ರ ಅಥವಾ ಸಣ್ಣ ಬಹುಮಾನ ನೀಡಿ ಅವರ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುತ್ತಾರೆ. ಇದು ಜೀವನ ಪೂರ್ತಿ ಉಳಿಯುವ ಅಭ್ಯಾಸವಾಗಿ ಬದಲಾಗುತ್ತದೆ.

Vishweshwar Bhat Column: ಜಪಾನಿಯರ ಪ್ರಾಮಾಣಿಕತೆ

-

ಸಂಪಾದಕೀಯ ಸದ್ಯಶೋಧನೆ

ಪ್ರಪಂಚದ ಬಹುತೇಕ ಮಹಾನಗರಗಳಲ್ಲಿ ಪರ್ಸ್, ಮೊಬೈಲ್ ಅಥವಾ ಹಣ ಕಳೆದುಹೋದರೆ, ಆ ವ್ಯಕ್ತಿಯ ಮೊದಲ ಪ್ರತಿಕ್ರಿಯೆ ಗಾಬರಿ ಮತ್ತು ಆತಂಕ. ತಕ್ಷಣವೇ ಬ್ಯಾಂಕ್‌ಗಳಿಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್‌ʼಗಳನ್ನು ರದ್ದುಗೊಳಿಸುವುದು, ಸಿಮ್ ಕಾರ್ಡ್ ಬ್ಲಾಕ್ ಮಾಡುವುದು ಹಾಗೂ ಆ ವಸ್ತು ಇನ್ನು ಸಿಗುವುದಿಲ್ಲವೆಂದು ಕೈಚೆಲ್ಲಿ ಕುಳಿತುಕೊಳ್ಳುವುದು ಸಾಮಾನ್ಯ. ಆದರೆ ಜಪಾನ್ ದೇಶದಲ್ಲಿ ಈ ಪರಿಸ್ಥಿತಿ ಸಂಪೂರ್ಣ ಭಿನ್ನ. ಅಲ್ಲಿ ಕಳೆದುಹೋದ ಬಹುತೇಕ ವಸ್ತುಗಳು ಯಾವುದೇ ಹಾನಿಯಾಗದೆ ಮೂಲ ಮಾಲೀಕನ ಕೈ ಸೇರುತ್ತವೆ.

ಜಪಾನಿನ ಈ ಅದ್ಭುತ ಪ್ರಾಮಾಣಿಕತೆ ಮತ್ತು ಸಾಮಾಜಿಕ ಬದ್ಧತೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂಥ ಒಂದು ಅನನ್ಯ ಜೀವನ ಶೈಲಿಯಾಗಿದೆ. ಟೋಕಿಯೋದಂಥ ಬೃಹತ್ ಜನದಟ್ಟಣೆ ಯ ನಗರದಲ್ಲಿ ಬೆಲೆಬಾಳುವ ವಸ್ತುಗಳನ್ನು ಮರೆತು ಇಟ್ಟರೆ, ಅವು ಕಳೆದುಹೋಗುವ ಸಾಧ್ಯತೆ ತೀರಾ ಕಡಿಮೆ. 2018ರ ಟೋಕಿಯೋ ಮಹಾನಗರ ಪೊಲೀಸ್ ಇಲಾಖೆಯ ಅಧಿಕೃತ ವರದಿಗಳ ಪ್ರಕಾರ, ಕಳೆದುಹೋದ ಗುರುತಿನ ಚೀಟಿಗಳಲ್ಲಿ ಸುಮಾರು ಶೇ.73, ಮೊಬೈಲ್ ಫೋನ್‌ ಗಳಲ್ಲಿ ಶೇ.83 ಮತ್ತು ಹಣವಿದ್ದ ಪರ್ಸ್‌ಗಳಲ್ಲಿ ಶೇ.65 ವಸ್ತುಗಳನ್ನು ಅದೇ ದಿನವೇ ಮಾಲೀಕರಿಗೆ ಮರಳಿ ತಲುಪಿಸ ಲಾಗಿದೆ.

ಲಕ್ಷಾಂತರ ರುಪಾಯಿಗಳ ನಗದು ಹಣವಿದ್ದ ಬ್ಯಾಗ್‌ಗಳು ಕೂಡ ಅಷ್ಟೇ ಭದ್ರವಾಗಿ ಮಾಲೀಕರ ಕೈಸೇರಿದ ನೂರಾರು ನಿದರ್ಶನಗಳಿವೆ. ಈ ಬೃಹತ್ ಯಶಸ್ಸಿನ ಹಿಂದೆ ಜಪಾನಿನ ವಿಶಿಷ್ಟ ‘ಕೋಬಾನ್’ ವ್ಯವಸ್ಥೆಯಿದೆ. ಕೋಬಾನ್ ಎಂದರೆ ಪ್ರತಿಯೊಂದು ಬಡಾವಣೆ, ರೈಲ್ವೆ ನಿಲ್ದಾಣ ಮತ್ತು ಪ್ರಮುಖ ಬೀದಿಗಳಲ್ಲಿರುವ ಸಣ್ಣ ಪೊಲೀಸ್ ಚೌಕಿಗಳು.

ಇದನ್ನೂ ಓದಿ: Vishweshwar Bhat Column: ಹಾಂಗ್ ಕಾಂಗ್‌ನ ಜಲ ಸಂರಕ್ಷಣೆ

ಪಾಶ್ಚಿಮಾತ್ಯ ಮತ್ತು ಇತರ ದೇಶಗಳಂತೆ ಇಲ್ಲಿನ ಪೊಲೀಸರು ಕೇವಲ ಅಪರಾಧ ತಡೆಗೆ ಸೀಮಿತ ವಾಗಿಲ್ಲ. ಬದಲಿಗೆ ನಾಗರಿಕರೊಂದಿಗೆ ಆಪ್ತವಾಗಿ ಬೆರೆತಿರುತ್ತಾರೆ. ಜನರು ಯಾವುದೇ ಭಯವಿಲ್ಲದೆ ನೇರವಾಗಿ ಕೋಬಾನ್‌ಗೆ ತೆರಳಿ ದಾರಿ ಕೇಳಲು, ಸಹಾಯ ಪಡೆಯಲು ಅಥವಾ ದಾರಿಯಲ್ಲಿ ಸಿಕ್ಕ ಸಣ್ಣ ವಸ್ತುವನ್ನು ಒಪ್ಪಿಸಲು ಮುಕ್ತವಾಗಿ ಭೇಟಿ ನೀಡುತ್ತಾರೆ. ಜಪಾನಿನ ಪ್ರಾಮಾಣಿಕತೆಯು ಕೇವಲ ಕಾನೂನಿನ ಭಯದಿಂದ ಬಂದದ್ದಲ್ಲ, ಅದು ಅವರ ಬಾಲ್ಯದ ತರಬೇತಿಯ ಫಲ. ಜಪಾನಿನ ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಮಕ್ಕಳಿಗೆ ಅತ್ಯಂತ ಚಿಕ್ಕ ವಯಸ್ಸಿನ ಸಾಮಾಜಿಕ ಹೊಣೆಗಾರಿಕೆ ಯನ್ನು ಕಲಿಸಲಾಗುತ್ತದೆ.

ರಸ್ತೆಯಲ್ಲಿ ಒಂದು ನಾಣ್ಯ ಸಿಕ್ಕರೂ ಅದನ್ನು ತಕ್ಷಣ ಹತ್ತಿರದ ಕೋಬಾನ್‌ಗೆ ಒಪ್ಪಿಸಬೇಕೆಂಬ ಮೌಲ್ಯವನ್ನು ಬೆಳೆಸಲಾಗುತ್ತದೆ. ಹೀಗೆ ಸಿಕ್ಕ ವಸ್ತುವನ್ನು ಮರಳಿಸಿದಾಗ ಪೊಲೀಸರು ಮಕ್ಕಳಿಗೆ ಪ್ರಶಂಸಾ ಪತ್ರ ಅಥವಾ ಸಣ್ಣ ಬಹುಮಾನ ನೀಡಿ ಅವರ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸು ತ್ತಾರೆ. ಇದು ಜೀವನಪೂರ್ತಿ ಉಳಿಯುವ ಅಭ್ಯಾಸವಾಗಿ ಬದಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳ ಅಧ್ಯಯನಗಳನ್ನು ಜಪಾನಿನೊಂದಿಗೆ ಹೋಲಿಸಿದಾಗ ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಉದಾಹರಣೆಗೆ, ನ್ಯೂಯಾರ್ಕ್ ನಗರದಲ್ಲಿ ಕಳೆದುಹೋದ ಮೊಬೈಲ್ ಫೋನ್‌ಗಳಲ್ಲಿ ಕೇವಲ ಶೇ.6ರಷ್ಟು ಮಾತ್ರ ಮಾಲೀಕರಿಗೆ ಸಿಕ್ಕರೆ, ಟೋಕಿಯೋದಲ್ಲಿ ಈ ಪ್ರಮಾಣ ಬರೋಬ್ಬರಿ ಶೇ.88ಕ್ಕಿಂತ ಹೆಚ್ಚಿದೆ.

ಜನಸಾಂದ್ರತೆ ಹೆಚ್ಚಿದ್ದರೂ, ಆರ್ಥಿಕ ತಾರತಮ್ಯವಿದ್ದರೂ ಜಪಾನಿಯರು ಪರರ ವಸ್ತುವಿನ ಮೇಲೆ ಆಸೆ ಪಡುವುದಿಲ್ಲ. ಯಾವುದೇ ಆಕರ್ಷಕ ಅಥವಾ ದುಬಾರಿ ವಸ್ತುವಾಗಿದ್ದರೂ ಅದನ್ನು ಕದಿಯುವ ಪ್ರವೃತ್ತಿ ಅಲ್ಲಿನ ಜನರಲ್ಲಿ ಕಾಣಸಿಗುವುದಿಲ್ಲ. ಈ ನಡೆವಳಿಕೆಯ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತಳಹದಿಯಿದೆ. ಬೌದ್ಧ ಧರ್ಮದ ಪ್ರಭಾವದಿಂದ ಮೂಡಿಬಂದ ‘ಗಾಮನ್’ ಎಂಬ ಪರಿಕಲ್ಪನೆ ಜಪಾನಿಯರ ರಕ್ತದ ಬೆರೆತಿದೆ. ಗಾಮನ್ ಎಂದರೆ ತಾಳ್ಮೆಯಿಂದ ಕಷ್ಟಗಳನ್ನು ಎದುರಿಸುವುದು ಮತ್ತು ಸ್ವಾರ್ಥಕ್ಕಿಂತ ಹೆಚ್ಚಾಗಿ ಇತರರ ಹಿತವನ್ನು ಮೊದಲು ಯೋಚಿಸುವುದು. ಪರರ ವಸ್ತುವನ್ನು ತೆಗೆದುಕೊಂಡರೆ ಅವರು ಅನುಭವಿಸುವ ನೋವನ್ನು ಅರ್ಥಮಾಡಿಕೊಳ್ಳುವ ಸಹಾನುಭೂತಿಯೇ ಜನರನ್ನು ಪ್ರಾಮಾಣಿಕರನ್ನಾಗಿ ಮಾಡುತ್ತದೆ.

ಬೌದ್ಧ ತತ್ವಗಳ ಜತೆಗೆ, ಜಪಾನಿನ ಸ್ಥಳೀಯ ‘ಶಿಂಟೋ’ ಧರ್ಮದ ನಂಬಿಕೆಗಳೂ ಇದಕ್ಕೆ ಪ್ರಮುಖ ಕಾರಣವಾಗಿವೆ. ಪ್ರತಿಯೊಂದು ವಸ್ತು ಮತ್ತು ಜೀವಿಯಲ್ಲೂ ಆತ್ಮ ಅಥವಾ ಶಕ್ತಿ ಇರುತ್ತದೆ ಎಂದು ಶಿಂಟೋ ನಂಬುತ್ತದೆ. ಪರರ ವಸ್ತುವನ್ನು ಕದಿಯುವುದು ಆತ್ಮಸಾಕ್ಷಿಗೆ ಮತ್ತು ಪ್ರಕೃತಿಯ ನಿಯಮಕ್ಕೆ ವಿರುದ್ಧ ಎಂಬ ಭಾವನೆ ಅವರಲ್ಲಿದೆ. ಇದರ ಜತೆಗೆ, ಇಡೀ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೆಂದು ಅವರು ಭಾವಿಸು ತ್ತಾರೆ. ಜಪಾನಿಯರ ಈ ಶಿಸ್ತು ಮತ್ತು ಪ್ರಾಮಾಣಿಕತೆ ಕೇವಲ ಸಾಮಾನ್ಯ ದಿನಗಳಲ್ಲಿ ಮಾತ್ರವಲ್ಲ, ತೀವ್ರ ಸಂಕಷ್ಟದ ಸಮಯದಲ್ಲೂ ಸಾಬೀತಾಗಿದೆ.