ವೀಕೆಂಡ್ ವಿತ್ ಮೋಹನ್
ಇತಿಹಾಸದಲ್ಲಿ ಪಶ್ಚಿಮ ಬಂಗಾಳವೆಂದರೆ ನೆನಪಾಗುವುದು ಯುಗಪುರುಷರು ಮತ್ತು ಸ್ವಾತಂತ್ರ್ಯ ಹೋರಾಟಗಾರರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಸುಭಾಷ್‌ಚಂದ್ರ ಬೋಸ್, ಸೋದರಿ ನಿವೇದಿತ, ಜಗದೀಶ್‌ಚಂದ್ರ ಬೋಸ್, ರವೀಂದ್ರ ನಾಥ ಟ್ಯಾಗೋರ್, ಬಂಕಿಮಚಂದ್ರ ಚಟರ್ಜಿ ಹೀಗೆ ಪಟ್ಟಿ ದೊಡ್ಡದಾಗಿ ಬೆಳೆಯುತ್ತದೆ.
ಬ್ರಿಟಿಷರ ವಿರುದ್ಧ ಹೋರಾಡಲು ಜಾತಿ ಮತ್ತು ಧರ್ಮಗಳನ್ನೂ ಮೀರಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಂಗಾಳದ ಬಂಕಿಮಚಂದ್ರ ಚಟರ್ಜಿ ರಚಿಸಿದ ದೇಶಭಕ್ತಿ ಗೀತೆ ‘ವಂದೇ ಮಾತರಂ’. 1875ರಲ್ಲಿ ಮೊದಲ ಬಾರಿಗೆ ಈ ಗೀತೆಯನ್ನು ಪ್ರಕಟಿಸಲಾಯಿತು.
ಇದು ಕಾಂಗ್ರೆಸ್ಸಿನ ಸದಸ್ಯರು ಕೂಡ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ದೇಶಭಕ್ತಿ ಗೀತೆಯಾಗಿತ್ತು. 1896ರಲ್ಲಿ ಮೊದಲ ಬಾರಿಗೆ ರವೀಂದ್ರನಾಥ ಟ್ಯಾಗೋರರು ಕೋಲ್ಕತ್ತಾ ಕಾಂಗ್ರೆಸ್ಸಿನ ಸಮಾವೇಶದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದ್ದರು. ನಂತರ 1901 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಮತ್ತೊಂದು ಕಾಂಗ್ರೆಸ್ ಸಮಾವೇಶದಲ್ಲಿ ಡಕಿನ ಚರನ್ ಸೇನ್ ಈ ಗೀತೆಯನ್ನು ಹಾಡಿದ್ದರು.
ನಂತರ 1905ರಲ್ಲಿ ಕವಯಿತ್ರಿ ಸರಳಾದೇವಿ ಚೌಧುರಾಣಿ ಅವರು, ಬನಾರಸ್ʼನಲ್ಲಿ ನಡೆದ ಕಾಂಗ್ರೆಸ್ಸಿನ ಸಮಾವೇಶದಲ್ಲಿ ಮತ್ತು ಹೀರಾಲಾಲ್ ಸೇನ್ 1905ರಲ್ಲಿ ರಾಜಕೀಯ ಕಥೆ ಯುಳ್ಳ ಚಲನಚಿತ್ರ ನಿರ್ದೇಶಿಸಿ ಸಿನಿಮಾದ ಕೊನೆಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದ್ದರು.
ಇದನ್ನೂ ಓದಿ: Mohan Vishwa Column: ಸೋಲಿನ ಸರದಾರನ ಸುಳ್ಳಿನ ಸರಮಾಲೆ
ಲಾಲಾ ಲಜಪತ್ ರಾಯ್ ಅವರು ‘ವಂದೇ ಮಾತರಂ’ ಎಂಬ ಹೆಸರಿನ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಬ್ರಿಟಿಷರ ಗುಂಡಿಗೆ ಬಲಿಯಾದ ‘ಮಾತಂಗಿನಿ ಹಜ್ರಾ’ ಹೇಳಿದ ಕೊನೆಯ ಮಾತು ‘ವಂದೇ ಮಾತರಂ’. ದೇಶಭಕ್ತಿಯ ಪ್ರತೀಕವಾಗಿದ್ದ ‘ವಂದೇ ಮಾತರಂ’ ಗೀತೆಯನ್ನು 62 ವರ್ಷಗಳ ನಂತರ ಮೊದಲ ಬಾರಿಗೆ 1937ರಲ್ಲಿ ವಿರೋಧಿಸಿದ್ದು ಮೊಹಮ್ಮದ್ ಅಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್.
ಗೀತೆಯ ನಾಲ್ಕು ಮತ್ತು ಐದನೇ ಚರಣದಲ್ಲಿ ದುರ್ಗಾ ಮಾತೆಯ ಉಲ್ಲೇಖವಿದ್ದು ಮುಸಲ್ಮಾನರು ಅದನ್ನು ಒಪ್ಪುವುದಿಲ್ಲವೆಂದು ತಕರಾರು ತೆಗೆದಿದ್ದರು. ಅಂದು ಜಿನ್ನಾ ಮತ್ತು ಮುಸಲ್ಮಾನರನ್ನು ಓಲೈಸಲು ನೆಹರು ಮತ್ತು ಕಾಂಗ್ರೆಸ್ ಪಕ್ಷ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಹೇಳಿತ್ತು.
ಈ ಗೀತೆ ರಚನೆಯಾದ ಮೊದಲ ದಿನದಿಂದಲೂ ವಿರೋಧಿಸುತ್ತಿದ್ದೇವೆಂದು ಕೆಲವು ಮುಸ್ಲಿಂ ನಾಯಕರು ಸುಳ್ಳು ಹೇಳುತ್ತಾರೆ. ಆದರೆ 20ನೇ ಮೇ, 1906ರಲ್ಲಿ, ವಂದೇ ಮಾತರಂ ರಚನೆಯಾದ 31 ವರ್ಷಗಳ ನಂತರ ‘ಬರಿಸಾಯಿ’ (ಈಗ ಬಾಂಗ್ಲಾದೇಶದಲ್ಲಿದೆ) ನಲ್ಲಿ ಸುಮಾರು 10000ಕ್ಕೂ ಹೆಚ್ಚಿನ ಹಿಂದೂ ಮತ್ತು ಮುಸ್ಲಿಮರು, ಬ್ರಿಟಿಷರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ವಂದೇ ಮಾತರಂ ಬಾವುಟ ಪ್ರದರ್ಶಿಸಿದ್ದರು.
ಜಾತಿ ಮತ್ತು ಧರ್ಮವನ್ನೂ ಮೀರಿ ವಂದೇ ಮಾತರಂ ಗೀತೆಗೆ ಗೌರವ ಸೂಚಿಸಿದ್ದರು. ಮೊಹಮ್ಮದ್ ಅಲಿ ಜಿನ್ನಾ ವಿರೋಧಿಸಿದ್ದ ವಂದೇ ಮಾತರಂ ಗೀತೆಯ ಚರಣಗಳನ್ನು ಕಾಂಗ್ರೆಸ್ ಮತ್ತು ಭಾರತದ ಮುಸಲ್ಮಾನರು ವಿರೋಧಿಸುತ್ತಿದ್ದಾರೆ.
ಮೂರ್ತಿಪೂಜೆಯನ್ನು ವಿರೋಧಿಸುತ್ತೇವೆಂಬ ಸಬೂಬು ಹೇಳಿ ವಂದೇ ಮಾತರಂ ಗೀತೆ ವಿರೋಧಿಸುವವರು, ಮತಾಂಧ ಟಿಪ್ಪು ಸುಲ್ತಾನನನ್ನು ಮಾತ್ರ ಆರಾಧಿಸಿ ಟಿಪ್ಪು ಜಯಂತಿ ಆಚರಿಸುತ್ತಾರೆ. ಅಖಂಡ ಭಾರತ ವಿಭಜನೆಯಾದದ್ದು ಧರ್ಮದ ಆಧಾರದ ಮೇಲೆ ಎಂಬ ಸಾಮಾನ್ಯ ಜ್ಞಾನವಿಲ್ಲದವರು ಜಾತ್ಯತೀತತೆಯ ಬಗ್ಗೆ ಮಾತನಾಡುತ್ತಾರೆ.
ಕೇಂದ್ರ ಗೃಹ ಸಚಿವಾಲಯ ಜಾರಿಗೆ ತಂದಿರುವ ಸೂಚನೆಯ ಪ್ರಕಾರ ವಂದೇ ಮಾತರಂ ಗೀತೆಯ ಆರು ಚರಣಗಳನ್ನೂ ಹಾಡಬೇಕು. 2017ರಲ್ಲಿ ತಮಿಳುನಾಡು ಉಚ್ಚ ನ್ಯಾಯಾ ಲಯ ನೀಡಿದ ಆದೇಶದಲ್ಲಿ ವಂದೇ ಮಾತರಂ ಗೀತೆಯನ್ನು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಹಾಡಬೇಕೆಂದು ಹೇಳಿತ್ತು.
ಸರಕಾರಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆಯಾದರೂ ಈ ಗೀತೆ ಯನ್ನು ಹಾಡಬೇಕೆಂದು ಅದು ಹೇಳಿತ್ತು. 2022ರಲ್ಲಿ ಸರಕಾರವು, ‘ಜನಗಣ ಮನ’ ಮತ್ತು ‘ವಂದೇ ಮಾತರಂ’ ಎರಡಕ್ಕೂ ಸಮಾನವಾದ ಗೌರವ ನೀಡಬೇಕೆಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು.
24ನೇ ಜನವರಿ 1950ರಲ್ಲಿ ಸಂವಿಧಾನ ರಚನಾ ಸಮಿತಿಯು ‘ವಂದೇ ಮಾತರಂ’ ಗೀತೆ ಯನ್ನು ಭಾರತದ ರಾಷ್ಟ್ರೀಯ ಹಾಡನ್ನಾಗಿ ಪರಿಗಣಿಸಿತ್ತು. ಅಂದಿನ ರಾಷ್ಟ್ರಪತಿ ಗಳಾಗಿದ್ದ ರಾಜೇಂದ್ರ ಪ್ರಸಾದರು ‘ವಂದೇ ಮಾತರಂ’ ಮತ್ತು ‘ಜನ ಗಣ ಮನ’ ಎರಡನ್ನೂ ಸಮಾನ ವಾಗಿ ಗೌರವಿಸಬೇಕೆಂದು ಹೇಳಿದ್ದರು.
1875ರಿಂದ 1937ರವರೆಗೂ ಇಲ್ಲದ ಆಕ್ಷೇಪ, 62 ವರ್ಷಗಳ ನಂತರ ಜಿನ್ನಾ ಮೂಲಕ ಬಂದಿತ್ತು. ಅವರ ಆಕ್ಷೇಪಕ್ಕೆ ಮಣಿದು ಗೀತೆಯನ್ನು ಕೇವಲ ಎರಡು ಚರಣಕ್ಕೆ ಇಳಿಸಿದ್ದು ನೆಹರು ಮತ್ತು ಕಾಂಗ್ರೆಸ್. 1907ರಲ್ಲಿ ‘ಮೇಡಂ ಕಾಮಾ’ ಅವರು ವಿನ್ಯಾಸಗೊಳಿಸಿದ್ದ ಭಾರತದ ಧ್ವಜದ ಮಧ್ಯದಲ್ಲಿ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು.
ಇದು ಕೇವಲ ಗೀತೆಯಾಗಿರಲಿಲ್ಲ, ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚಿನ ಕಹಳೆಯಾಗಿತ್ತು. ಸಂವಿಧಾನದ ಮೂಲಪೀಠಿಕೆಯಲ್ಲಿ ಜಾತ್ಯತೀತತೆ ಪದವಿರಲಿಲ್ಲ. ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ನಂತರ ಸಂವಿಧಾನದ ಮೂಲಪೀಠಿಕೆಯನ್ನು ತಿದ್ದುಪಡಿ ಮಾಡಿ ‘ಜಾತ್ಯತೀತ’ ಪದವನ್ನು ಸೇರಿಸಿದ್ದರು. ತಿದ್ದುಪಡಿಯ ನಂತರ ಮುಸ್ಲಿಂ ಧರ್ಮದ ಓಲೈಕೆ ಯನ್ನು ಸಮರ್ಥಿಸಲು ‘ಜಾತ್ಯತೀತತೆ’ ಹೆಸರಿನಲ್ಲಿ ಸತತವಾಗಿ ರಾಜಕೀಯ ನಡೆಯುತ್ತಿದೆ.
ಇಸ್ಲಾಂ ಧರ್ಮದ ಆಚರಣೆಗಳ ಪರವಾಗಿ ವಾದಿಸಲು ಸಂವಿಧಾನದ ಜಾತ್ಯಾತೀತತೆ ಪದವನ್ನು ಮುನ್ನೆಲೆಗೆ ತರುವ ಮುಸಲ್ಮಾನರಿಗೆ, ವಂದೇ ಮಾತರಂ ಹಾಡಿನ ಚರಣದಲ್ಲಿ ಮಾತ್ರ ಜಾತ್ಯತೀತತೆ ನೆನಪಾಗುವುದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಧರ್ಮಗಳನ್ನೂ ಮೀರಿ ಬ್ರಿಟಿಷರ ವಿರುದ್ಧದ ಹೋರಾಟದ ಕಹಳೆಯಾಗಿ ರಚನೆಯಾದ ವಂದೇ ಮಾತರಂ ಗೀತೆ ಯಲ್ಲಿ ಧರ್ಮವನ್ನು ಹುಡುಕಿ, ನೈಜ ಜಾತ್ಯತೀತತೆಯ ಆಶಯಗಳನ್ನು ಗಾಳಿಗೆ ತೂರು ತ್ತಿದ್ದಾರೆ.
‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ, ಈಶ್ವರ್ ಅ ತೇರೋ ನಾಮ’ ಗೀತೆಯ ಬಗ್ಗೆ ಮುಸಲ್ಮಾನರಿಗೆ ತಕರಾರಿಲ್ಲ; ಆದರೆ ವಂದೇ ಮಾತರಂ ಗೀತೆಯಲ್ಲಿ ದುರ್ಗಾ (ಹೆಣ್ಣು ದೇವರು) ದೇವಿಯ ಹೆಸರಿನ ಬಗ್ಗೆ ತಕರಾರು. ಇಸ್ಲಾಂ ಧರ್ಮದಲ್ಲಿ ಹೆಣ್ಣಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲದ ವಿಷಯ ಅವರ ಆಚರಣೆಗಳಾದ ಬುರ್ಖಾ, ಹಿಜಾಬ್, ತ್ರಿವಳಿ ತಲಾಕ್ ಗಳಿಂದ ಈಗಾಗಲೇ ಜಗಜ್ಜಾಹೀರಾಗಿದೆ.
‘ವಂದೇ ಮಾತರಂ’ ಎಂದಿಗೂ ಒಂದು ಧರ್ಮಕ್ಕೆ ಸೀಮಿತವಾದ ಗೀತೆ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಂಗಾಳದ ಬಂಕಿಮಚಂದ್ರ ಚಟರ್ಜಿ ಅವರು ದೇಶಭಕ್ತರನ್ನು ಒಗ್ಗೂಡಿಸುವ ಸಲುವಾಗಿ ಇದನ್ನು ರಚಿಸಿದ್ದರು. ಹತ್ತು ಕೈಗಳಿರುವ ದುರ್ಗೆಯು ಸ್ವಾತಂತ್ರ್ಯ ಹೋರಾಟಗಾರರ ರಕ್ಷಣೆಗಾಗಿ ನಿಂತಿರುವಳೆಂಬ ಸಾಲುಗಳು ಎಂಥವರಿಗೂ ಸ್ವಾತಂತ್ರ್ಯದ ಕಿಚ್ಚು ಹಬ್ಬಿಸುವಂತಿದೆ.
ಕಾಂಗ್ರೆಸ್ಸಿನ ಮತಬ್ಯಾಂಕ್ ರಾಜಕಾರಣದ ಪರಮಾವಧಿಗಳಲ್ಲಿ ವಂದೇ ಮಾತರಂ ಗೀತೆಯ ಚರಣಗಳನ್ನು ತುಂಡರಿಸಿದ್ದು ಮೊಟ್ಟಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ತಮ್ಮ ಪಕ್ಷ ಮಾತ್ರವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ಸಿಗರಿಗೆ, ವಂದೇ ಮಾತರಂ ದೇಶಭಕ್ತ ಗೀತೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ.
ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಜಿನ್ನಾನ ಮಾತು ಕೇಳಿ ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್ಸಿಗರು ವಂದೇ ಮಾತರಂ ಗೀತೆಗೆ ಕತ್ತರಿ ಹಾಕಿದ್ದರು. ಮಹಾತ್ಮ ಗಾಂಧಿ ಯವರ ಹೆಸರನ್ನು ಹೈಜಾಕ್ ಮಾಡಿ, ರಾಜಕೀಯ ಮಾಡಿ ಅಧಿಕಾರದ ಗದ್ದುಗೆ ಹಿಡಿದ ನಂತರ, ಅವರ ಆದರ್ಶಗಳನ್ನು ಒಮ್ಮೆಯೂ ಪಾಲಿಸಲಿಲ್ಲ.
ಬಾಯಲ್ಲಿ ಮತ್ತು ಹೆಸರಲ್ಲಿ ಮಾತ್ರ ಗಾಂಧಿ, ಆದರೆ ನಡೆಯಲ್ಲಿ ಗಾಂಧಿ ಆದರ್ಶಗಳ ವಿರುದ್ಧ ಮತ್ತು ಓಲೈಕೆಯ ಪರಮಾವಧಿ. ಭಗತ್‌ಸಿಂಗ್, ರಾಜಗುರು, ಸುಖ್ ದೇವ್, ಚಾಪೇಕರ್ ಸಹೋದರರು, ಅಶ್ವಕು, ಖುದಿರಾಮ್ ಬೋಸ್, ಮದನ್‌ಲಾಲ್ ಧಿಂಗ್ರಾ ಹತ್ತೊಂಬತ್ತನೆಯ ವಯಸ್ಸಿನಿನಲ್ಲಿ ನೇಣಿನ ಕುಣಿಕೆಗೆ ತಮ್ಮ ಕೊರಳನ್ನು ಒಡ್ಡಿದಾಗ ಹೇಳಿದ್ದ ಮಾತು ‘ವಂದೇ ಮಾತರಂ’.
ಸ್ವಾತಂತ್ರ್ಯ ಹೋರಾಟವನ್ನು ಕೇವಲ ಒಂದು ಕುಟುಂಬ ಹೈಜಾಕ್ ಮಾಡಿ ಲಕ್ಷಾಂತರ ಯುವಕರ ಹೋರಾಟವನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಿದ್ದು ಮಾತ್ರ ವಿಪರ್ಯಾಸ. ಬ್ರಿಟಿಷರ ವಿರುದ್ಧ ಯುವಕರು ಮುಗಿ ಬೀಳುತ್ತಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬರ ನಾಲಗೆಯ ಮೇಲೆ ವಂದೇ ಮಾತರಂ ಘೋಷಣೆಗಳು ಸರಾಗವಾಗಿ ಕೇಳಿಬರುತ್ತಿದ್ದವು.
ವಂದೇ ಮಾತರಂ ಕಿವಿಯಲ್ಲಿ ಗುನುಗುವ ಸಾಮಾನ್ಯ ಗೀತೆಯಾಗಿರಲಿಲ್ಲ, ದಶಕಗಳ ಕಾಲ ಸ್ವಾತಂತ್ರ್ಯ್ರ ಹೋರಾಟದ ಕಹಳೆಯಾಗಿತ್ತು. ಸ್ವಾತಂತ್ರ್ಯ ಸಿಗುವ ಸಮಯ ಹತ್ತಿರವಾಗು ತ್ತಿದ್ದಂತೆ ಅಖಂಡ ಭಾರತ ವಿಭಜನೆಯ ಕೂಗು ಜಿನ್ನಾರ ಬಾಯಿಯಿಂದ ಕೇಳಿಬಂದಾಗ, ಆರು ದಶಕಗಳ ಕಾಲದ ಹೋರಾಟದ ಕಹಳೆಯಂತಿದ್ದ ವಂದೇ ಮಾತರಂ ಗೀತೆಯಲ್ಲಿ ಧರ್ಮವನ್ನು ಕಂಡವರ ತಾಳಕ್ಕೆ ಕುಣಿದದ್ದು ನೆಹರು.
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಲಾಠಿ ಏಟು ತಿನ್ನುವಾಗ ಲಕ್ಷಾಂತರ ಹೆಣ್ಣು ಮಕ್ಕಳ ಬಾಯಲ್ಲಿ ಕೇಳಿಬಂದ ಗೀತೆ ವಂದೇ ಮಾತರಂ; ಬ್ರಿಟಿಷರ ಗುಂಡಿಗೆ ಬಲಿಯಾದ ಸಾವಿರಾರು ಯುವಕ-ಯುವತಿಯರ ಕೊನೆಯ ಮಾತಾಗಿತ್ತು ವಂದೇ ಮಾತರಂ. ಮಾತೃ ಸ್ವರೂಪಿಣಿ ಯಾದ ಭಾರತಮಾತೆಯ ನೆನೆದು ವಂದೇ ಮಾತರಂ ಘೋಷಣೆಯ ಮೂಲಕ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕುತ್ತಿದ್ದರು ಅಂದಿನ ದೇಶಭಕ್ತರು.
ವಂದೇ ಮಾತರಂ ಗೀತೆಯು ದೇಶದ ಕಟ್ಟ ಕಡೆಯ ಹಳ್ಳಿಗಳನ್ನೂ ತಲುಪಿತ್ತು. ಅಂದಿನ ಕಾಲದಲ್ಲಿ ಇಂಟರ್‌ನೆಟ್, ಟಿ.ವಿ. ಮುಂತಾದವು ಇರಲಿಲ್ಲ. ಸರಿಯಾದ ಸಮಯದಲ್ಲಿ ದಿನಪತ್ರಿಕೆ ಸಿಗುತ್ತಿರಲಿಲ್ಲ. ಆದರೂ ವಂದೇ ಮಾತರಂ ಗೀತೆ ದೇಶವ್ಯಾಪಿ ಹರಡಿತ್ತು. ಇಂಥ ಗೀತೆಯಲ್ಲಿ ಧರ್ಮವನ್ನು ಕಂಡು 150 ವರ್ಷಗಳ ನಂತರವೂ ವಿರೋಧಿಸುವವರಿಗೆ ಸ್ವಾತಂತ್ರ್ಯ ಹೋರಾಟದ ಮಹತ್ವ ತಿಳಿದಿಲ್ಲ.
ಲಕ್ಷಾಂತರ ಯುವಕ-ಯುವತಿಯರ ಬಲಿದಾನದ ಅರಿವಿಲ್ಲ. ಬ್ರಿಟಿಷರ ಕೈಗೆ ಸಿಕ್ಕು ಜೈಲು ಗಳಲ್ಲಿ ಚಿತ್ರಹಿಂಸೆ ಅನುಭವಿಸಿದವರ ನೋವಿನ ಊಹೆಯೂ ಇಲ್ಲ. ಜಿನ್ನಾರನ್ನು ಓಲೈ ಸಲು ಅಂದು ನೆಹರು ಮಾಡಿದ ಪ್ರಮಾದದ ಫಲವಾಗಿ ಇಂದಿಗೂ ಭಾರತದ ಮುಸಲ್ಮಾ ನರು ವಂದೇ ಮಾತರಂ ಗೀತೆಯ ಸಾಲುಗಳಲ್ಲಿ ಧರ್ಮವನ್ನು ಕಂಡು ವಿರೋಧಿಸುತ್ತಾರೆ.
ಜಾತಿ, ಧರ್ಮವನ್ನೂ ಮೀರಿದ ಸ್ವಾತಂತ್ರ್ಯ ಹೋರಾಟದ ದೇಶಭಕ್ತಿಯಲ್ಲಿ 150 ವರ್ಷಗಳ ನಂತರವೂ ಇವರಿಗೆ ಧರ್ಮ ಮಾತ್ರ ಕಾಣಿಸುತ್ತಿರುವುದು ದುರಂತ.