ಅರ್ಥಲೋಕ
ಕೆ.ವಿ.ಚಂದ್ರಮೌಳಿ
ಒಬ್ಬ ಶ್ರೇಷ್ಠ ಶಿಕ್ಷಕ ತನ್ನ ಜೀವಿತಾವಧಿಯಲ್ಲಷ್ಟೇ ಅಲ್ಲ, ತಾನು ರೂಪಿಸಿದ ಸಾವಿರಾರು ವಿದ್ಯಾರ್ಥಿ ಗಳ ಮೂಲಕ ಪೀಳಿಗೆಗಳವರೆಗೆ ಬದುಕುತ್ತಾನೆ.ಈ ಮಾತು ಅಕ್ಷರಶಃ ಅನ್ವಯಿಸುವ ವ್ಯಕ್ತಿತ್ವಗಳಲ್ಲಿ ಪ್ರೊ.ಡಾ.ಕೆ. ವೆಂಕಟಗಿರಿ ಗೌಡರು ಪ್ರಮುಖರು. ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಸರು ಎತ್ತಿ ಹಿಡಿದ ಕೆಲವೇ ಕೆಲವು ವಿದ್ವಾಂಸರಲ್ಲಿ ಪ್ರೊ.ಡಾ.ಕೆ.ವೆಂಕಟ ಗಿರಿ ಗೌಡರು ಅತ್ಯಂತ ಗೌರವದ ಸ್ಥಾನವನ್ನು ಪಡೆದಿದ್ದಾರೆ. ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಜೊತೆಗೆ ಚಿಂತಕ, ಸಂಶೋಧಕ, ನೀತಿ ವಿಶ್ಲೇಷಕ, ಲೇಖಕ, ಸಂಸದ ಮತ್ತು ಸಾರ್ವಜನಿಕ ಹಿತಾಸಕ್ತಿಯ ಹೋರಾಟಗಾರರಾಗಿದ್ದರು.
1923ರ ಜೂನ್ 26ರಂದು ಬೆಂಗಳೂರು ಸಮೀಪದ ಬೈರಪಟ್ಟಣದಲ್ಲಿ ಕೃಷ್ಣದಾಸೇಗೌಡ ಹಾಗೂ ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ ವೆಂಕಟಗಿರಿ ಗೌಡರು ಬಾಲ್ಯದಿಂದಲೇ ಅಸಾಮಾನ್ಯ ಪ್ರತಿಭೆ ತೋರಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ʼನಲ್ಲಿ ಉನ್ನತ ಅಧ್ಯಯನ ಮುಂದುವರಿಸಿದರು.
1956ರಲ್ಲಿ ಅವರು ಹಣಕಾಸು ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಆ ಕಾಲದಲ್ಲಿ ಭಾರತೀಯರು ವಿದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಸಂಶೋಧನೆ ನಡೆಸುವುದೇ ಅಪರೂಪ ವಾಗಿತ್ತು. ಕುಟುಂಬದ ದಾಖಲೆಗಳ ಪ್ರಕಾರ, ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ʼನಿಂದ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪಡೆದ ಮೊದಲ ಏಷ್ಯನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಜೊತೆಗೆ ಎಲ್‌ಎಸ್‌ಇಯ ಹೆಸರಾಂತ ಭಾರತೀಯ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರೆಂದು ಗುರುತಿಸ ಲ್ಪಟ್ಟಿದ್ದಾರೆ. ಜಗತ್ತಿನ ಅತ್ಯುತ್ತಮ ಸಾಮಾಜಿಕ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾದ ಎಲ್‌ಎಸ್‌ಇ ಯಲ್ಲಿ ಅಧ್ಯಯನ ಮಾಡಿದವ ರಲ್ಲಿ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು, ನೊಬೆಲ್ ಪುರಸ್ಕೃತರು, ಕೇಂದ್ರ ಬ್ಯಾಂಕ್ ಮುಖ್ಯಸ್ಥರು, ಜಾಗತಿಕ ಆರ್ಥಿಕ ತಜ್ಞರು ಮತ್ತು ಪ್ರಸಿದ್ಧ ಚಿಂತಕರು ಸೇರಿದ್ದಾರೆ. ಅಂತಹ ಸಂಸ್ಥೆಯಲ್ಲಿ ಸಾಧನೆ ಮಾಡುವುದು ಕರ್ನಾಟಕಕ್ಕೂ ದೇಶಕ್ಕೂ ಹೆಮ್ಮೆ.
ಇದನ್ನೂ ಓದಿ: K V Vasu Column: ಸಂಪುಟ ರಚನೆಯ ಕಸರತ್ತು
ಕೇನ್ಸ್ ಚಿಂತನೆಯ ಪ್ರಭಾವ
ವೆಂಕಟಗಿರಿ ಗೌಡರು ವ್ಯಾಸಂಗ ಮಾಡಿದ ಕಾಲವು ಜಗತ್ತಿನ ಆರ್ಥಿಕ ಚಿಂತನೆಯ ಮಹತ್ವದ ಘಟ್ಟವಾಗಿತ್ತು. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೇನ್ಸ್ ಅವರ ವಿಚಾರಧಾರೆ ವಿಶ್ವದ ಆರ್ಥಿಕ ನೀತಿಗಳ ಮೇಲೆ ಅಪಾರ ಪ್ರಭಾವ ಬೀರಿತ್ತು. ಕೇನ್ಸ್ ಹೇಳಿದ ಪ್ರಸಿದ್ಧ ಮಾತು ಹೀಗಿದೆ: The difficulty lies not so much in developing new ideas as in escaping from old ones. ಅಂದರೆ, ಹೊಸ ಆಲೋಚನೆಗಳನ್ನು ರೂಪಿಸುವುದಕ್ಕಿಂತ ಹಳೆಯ ಆಲೋಚನೆಗಳಿಂದ ಹೊರಬರುವುದು ಹೆಚ್ಚು ಕಷ್ಟ.
ಈ ಚಿಂತನೆ ವೆಂಕಟಗಿರಿ ಗೌಡರ ಜೀವನದಲ್ಲೂ ಸ್ಪಷ್ಟವಾಗಿ ಕಾಣುತ್ತದೆ. ಅವರು ಯಾವುದೇ ಒಂದು ಆರ್ಥಿಕ ಸಿದ್ಧಾಂತದ ಅಂಧ ಅನುಯಾಯಿಯಾಗಿರಲಿಲ್ಲ. ಭಾರತದ ಸಾಮಾಜಿಕ, ಕೃಷಿ ಹಾಗೂ ಆರ್ಥಿಕ ವಾಸ್ತವತೆಗಳಿಗೆ ಅನುಗುಣವಾಗಿ ಸ್ವತಂತ್ರ ಆಲೋಚನೆಗಳನ್ನು ರೂಪಿಸುವುದೇ ನಿಜವಾದ ಅರ್ಥಶಾಸ್ತ್ರಜ್ಞನ ಕರ್ತವ್ಯ ಎಂದು ನಂಬಿದ್ದರು. ಕೇನ್ಸ್ ಅವರ ಮತ್ತೊಂದು ಅಮರ ವಾಕ್ಯ: ‘ಅರ್ಥ ಶಾಸ್ತ್ರಜ್ಞರು ಮತ್ತು ರಾಜಕೀಯ ತತ್ತ್ವಜ್ಞಾನಿಗಳ ಆಲೋಚನೆಗಳು ಜನರು ಊಹಿಸುವುದಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿವೆ.’ ಈ ಮಾತನ್ನು ವೆಂಕಟಗಿರಿ ಗೌಡರು ತಮ್ಮ ಜೀವನದ ಮೂಲಕವೇ ಸಾಬೀತು ಪಡಿಸಿದರು. ಉತ್ತಮ ಆರ್ಥಿಕ ಚಿಂತನೆಗಳು ದೇಶದ ಭವಿಷ್ಯವನ್ನು ರೂಪಿಸಬಲ್ಲವು ಎಂಬುದು ಅವರ ದೃಢ ನಂಬಿಕೆಯಾಗಿತ್ತು.
ಅನೇಕ ಭಾರತೀಯ ಮೇಧಾವಿಗಳು ವಿದೇಶದ ನೆಲೆಸಿದ ಕಾಲದಲ್ಲಿ, ವೆಂಕಟಗಿರಿ ಗೌಡರು ಭಾರತಕ್ಕೆ ಮರಳಿದರು. ವಿಕೆಆರ್‌ವಿ ರಾವ್, ಡಿ.ಎಂ.ನಂಜುಂಡಪ್ಪ, ಪಿ.ಆರ್.ಬ್ರಹ್ಮಾನಂದ, ಸುಖಮಯ್ ಚಕ್ರವರ್ತಿ, ಡಿ.ಟಿ.ಲಕ್ಷ್ಡಾವಾಲಾ ಹಾಗೂ ಎ.ಕೆ.ದಾಸಗುಪ್ತ ಅವರಂತೆಯೇ ಅವರು ತಮ್ಮ ಪ್ರತಿಭೆ ಯನ್ನು ಭಾರತದ ಅಭಿವೃದ್ಧಿಗೆ ಅರ್ಪಿಸಿದರು. ಜ್ಞಾನವು ವೈಯಕ್ತಿಕ ಯಶಸ್ಸಿಗೆ ಮಾತ್ರವಲ್ಲ, ಸಮಾಜದ ಪ್ರಗತಿಗೆ ಬಳಸಿದಾಗಲೇ ಅದರ ನಿಜವಾದ ಮೌಲ್ಯ ಸಿಗುತ್ತದೆ ಎಂಬುದು ಅವರ ಜೀವನದ ಧ್ಯೇಯವಾಗಿತ್ತು.
ಬೆಂಗಳೂರು ವಿವಿಯ ಸುವರ್ಣಯುಗ
ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಅವರು ದಾಖಲೆಯ ಅವಧಿಯ ಸೇವೆ ಸಲ್ಲಿಸಿದರು. ಅವರ ನಾಯಕತ್ವದಲ್ಲಿ ವಿಭಾಗವು ದೇಶದ ಪ್ರಮುಖ ಅರ್ಥಶಾಸ್ತ್ರ ಅಧ್ಯಯನ ಕೇಂದ್ರಗಳಲ್ಲಿ ಒಂದಾಗಿ ಬೆಳೆಯಿತು. ಸಾವಿರಾರು ವಿದ್ಯಾರ್ಥಿಗಳು ಅವರಿಂದ ಶಿಕ್ಷಣ ಪಡೆದು ಮುಂದೆ ಭಾರತೀಯ ಆಡಳಿತ ಸೇವೆ, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕ ಆಡಳಿತದಲ್ಲಿ ಉನ್ನತ ಸ್ಥಾನ ಅಲಂಕರಿಸಿದರು.
ಅವರ ತರಗತಿಗಳು ಕೇವಲ ಪಾಠಪುಸ್ತಕಗಳ ವ್ಯಾಖ್ಯಾನವಾಗಿರಲಿಲ್ಲ. ಕೃಷಿ, ಹಣದುಬ್ಬರ, ಉದ್ಯೋಗ, ಸಾರ್ವಜನಿಕ ಹಣಕಾಸು, ಬಡತನ, ಅಭಿವೃದ್ಧಿ ಯೋಜನೆಗಳು, ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ, ವಿದೇಶಿ ವಿನಿಮಯ, ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಗಳು- ಇವೆಲ್ಲವನ್ನೂ ಭಾರತದ ನೆಲೆಯ ವಿಶ್ಲೇಷಿಸುತ್ತಿದ್ದರು. ಅವರ ಗಂಭೀರ ಧ್ವನಿ, ಸ್ಪಷ್ಟಿತರ್ಕ, ವಿಶಾಲ ಓದು ಮತ್ತು ಆಳವಾದ ವಿಷಯeನ ವಿದ್ಯಾರ್ಥಿಗಳಲ್ಲಿ ಗೌರವ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತಿತ್ತು.
ಲೇಖಕರಾಗಿ ಅಪೂರ್ವ ಕೊಡುಗೆ
ಪ್ರೊ.ವೆಂಕಟಗಿರಿ ಗೌಡರು ಸಮೃದ್ಧ ಲೇಖಕರೂ ಆಗಿದ್ದರು. ಅವರ ಬರಹಗಳು ದೇಶದ ಆರ್ಥಿಕ ನೀತಿಗಳ ಕುರಿತು ಗಂಭೀರ ಚಿಂತನೆಗೆ ದಾರಿ ತೋರಿದ ಕೃತಿಗಳಾಗಿದ್ದವು.ಅವರ ಪ್ರಮುಖ ಕೃತಿಗಳಲ್ಲಿ: ಫಿಸ್ಕಲ್ ರೆವೊಲ್ಯೂಶನ್ ಆಫ್ ಇಂಡಿಯಾ, ಫಿಸ್ಕಲ್ ಪಾಲಿಸಿ ಆಂಡ್ ಇನ್‌ಪ್ಲೇಶನ್ ಇನ್ ಪೋಸ್ಟ್ ವಾರ್ ಇಂಡಿಯಾ, ಅಪ್ರಿಸಿಯೇಶನ್ ಆಫ್ ಇಂಡಿಯನ್ ರುಪೀ, ಯುರೋಡಾಲರ್ ಫ್ಲೋಸ್ ಆಂಡ್ ಇಂಟರ್‌ನ್ಯಾಷನಲ್ ಮಾನೆಟರಿ ಸ್ಟೆಬಿಲಿಟಿ, ಇಂಟರ್‌ನ್ಯಾಷನಲ್ ಕರೆನ್ಸಿ ಪ್ಲಾನ್ಸ್ ಆಂಡ್ ಎಕ್ಸ್ ಪಾನ್ಷನ್ ಆಫ್ ವರ್ಲ್ಡ್ ಟ್ರೇಡ್, ದಿ ಯುರೋಪಿಯನ್ ಕಾಮನ್ ಮಾರ್ಕೆಟ್ ಆಂಡ್ ಇಂಡಿಯಾ, ನ್ಯೂ ಡೈಮೆನ್ಷನ್ ಫಾರ್ ಇಂಡಿಯನ್ ಪ್ಲಾನಿಂಗ್, ಪೆರೆಸ್ತೋಯ್ಕಾ ಆಂಡ್ ಗ್ಲಾಸನೋಸ್ತ್ ಫಾರ್ ಇಂಡಿಯಾ ಹಾಗೂ ಸುಪ್ರಸಿದ್ಧ ಪೆಟ್ರೋ ಡಾಲರ್ಸ್ ಕೃತಿ ಪ್ರಮುಖವಾಗಿವೆ.
1970ರ ದಶಕದಲ್ಲಿ ಅರಬ್ ರಾಷ್ಟ್ರಗಳಲ್ಲಿ ಸಂಗ್ರಹವಾದ ಪೆಟ್ರೋ ಡಾಲರ್ಸ್ ಕುರಿತು ಅವರು ಬರೆದ ವಿಶ್ಲೇಷಣೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಅಪಾರ ಮೆಚ್ಚುಗೆ ಗಳಿಸಿತು. ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಭವಿಷ್ಯದ ಮೇಲೆ ಅದರ ಪರಿಣಾಮವನ್ನು ಅವರು ಅಸಾಧಾರಣ ದೂರದೃಷ್ಟಿ ಯಿಂದ ವಿಶ್ಲೇಷಿಸಿದ್ದರು.
ಕುಟುಂಬದ ದಾಖಲೆಗಳ ಪ್ರಕಾರ, ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ವಿನಂತಿಯ ಮೇರೆಗೆ ಅವರು Perestroika and Glasnost for India: New Strategy for India and the Third World ಕೃತಿಯನ್ನು ರಚಿಸಿದರು. ಸೋವಿಯತ್ ಒಕ್ಕೂಟದಲ್ಲಿ ಆರಂಭವಾದ ಸುಧಾರಣಾ ಚಳವಳಿಯ ಹಿನ್ನೆಲೆಯಲ್ಲಿ ಭಾರತವೂ ಆಡಳಿತ, ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಧೈರ್ಯಶಾಲಿ ಸುಧಾರಣೆ ಗಳನ್ನು ಕೈಗೊಳ್ಳಬೇಕೆಂದು ಪ್ರತಿಪಾದಿಸಿದರು. ನಂತರ ಭಾರತದಲ್ಲಿ ಜಾರಿಗೆ ಬಂದ ಅನೇಕ ಆರ್ಥಿಕ ಸುಧಾರಣೆಗಳ ದಿಕ್ಕನ್ನು ಈ ಕೃತಿ ಬಹಳ ಹಿಂದೆಯೇ ಸೂಚಿಸಿತ್ತು.
ಚಿಂತನೆಯ ಪ್ರಭಾವ
ವೆಂಕಟಗಿರಿ ಗೌಡರ ಸಂಶೋಧನೆಗಳು ವಿಶ್ವವಿದ್ಯಾಲಯದ ಗೋಡೆಗಳೊಳಗೆ ಸೀಮಿತವಾಗಿರಲಿಲ್ಲ. ಅವರ ಆರ್ಥಿಕ ವಿಶ್ಲೇಷಣೆಗಳು ಕರ್ನಾಟಕ ಹಾಗೂ ರಾಷ್ಟ್ರಮಟ್ಟದ ನೀತಿ ಚರ್ಚೆಗಳ ಮೇಲೂ ಪ್ರಭಾವ ಬೀರಿದ್ದವು. ಅವರ ಸಮಕಾಲೀನರ ನೆನಪುಗಳ ಪ್ರಕಾರ, ಕರ್ನಾಟಕದ ಕೆಲವು ಹಣಕಾಸು ಸಚಿವರ ಬಜೆಟ್ ಭಾಷಣಗಳ ರೂಪುರೇಷೆಗಳಲ್ಲಿ ಅವರ ಸಲಹೆಗಳ ಪ್ರಭಾವ ಸ್ಪಷ್ಟವಾಗಿತ್ತು. ಕೇಂದ್ರದ ಒಬ್ಬ ಹಣಕಾಸು ಸಚಿವರ ಬಜೆಟ್ ಭಾಷಣದಲ್ಲಿಯೂ ಅವರ ಆರ್ಥಿಕ ಚಿಂತನೆಗಳ ಪ್ರತಿಧ್ವನಿ ಕೇಳಿಬಂದಿತ್ತೆಂದು ಹೇಳಲಾಗುತ್ತದೆ. ಅವರು ಬರೆಯುತ್ತಿದ್ದದ್ದು ಆಡಳಿತದ ದಿಕ್ಕು ಬದಲಿಸುವ ಉದ್ದೇಶದಿಂದಲೇ.
ಅವರ ಪುಸ್ತಕಗಳನ್ನು ನೀತಿ ರೂಪಿಸುವವರು, ಆಡಳಿತಗಾರರು ಹಾಗೂ ಅರ್ಥಶಾಸ್ತ್ರಜ್ಞರು ಅಪಾರ ಆಸಕ್ತಿಯಿಂದ ಓದುತ್ತಿದ್ದರು. ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದವರೂ ಅವರ ಬರಹ ಗಳನ್ನು ನಿರ್ಲಕ್ಷ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವರ ಪ್ರತಿಯೊಂದು ಅಭಿಪ್ರಾಯ ವೂ ಅಂಕಿಅಂಶ, ಸಂಶೋಧನೆ ಮತ್ತು ತಾರ್ಕಿಕ ವಿಶ್ಲೇಷಣೆಯ ಮೇಲೆ ನಿಂತಿತ್ತು.
ಸಂಸದರಾಗಿ ರಾಷ್ಟ್ರಸೇವೆ
ಅರ್ಥಶಾಸ್ತ್ರ ತರಗತಿಯಲ್ಲಿ ಮಾತ್ರ ಉಳಿಯಬಾರದು; ಅದು ರಾಷ್ಟ್ರದ ನೀತಿಗಳಲ್ಲಿ ಪ್ರತಿ-ಲಿಸಬೇಕು ಎಂಬ ನಂಬಿಕೆಯಿಂದ ಪ್ರೊ.ವೆಂಕಟಗಿರಿ ಗೌಡರು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು. 1991ರಲ್ಲಿ ಲೋಕಸಭೆಗೆ ಆಯ್ಕೆಯಾಗಿ ರಾಷ್ಟ್ರದ ಜನತಾಂತ್ರಿಕ ವ್ಯವಸ್ಥೆಯಲ್ಲಿ ತಮ್ಮ ಸೇವೆ ಸಲ್ಲಿಸಿದರು. ಸಂಸತ್ತಿನಲ್ಲಿ ಅವರ ಭಾಷಣಗಳು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಅರ್ಥಶಾಸ್ತ್ರೀಯ ತರ್ಕ, ಸಾರ್ವಜನಿಕ ಹಣಕಾಸಿನ ಶಿಸ್ತು, ಅಭಿವೃದ್ಧಿ ಮತ್ತು ಜನಕಲ್ಯಾಣದ ಮೇಲೆ ಕೇಂದ್ರೀಕೃತ ವಾಗಿದ್ದವು. ಪಕ್ಷಕ್ಕಿಂತ ರಾಷ್ಟ್ರ, ಜನಪ್ರಿಯತೆಯಿಗಿಂತ ವಾಸ್ತವಾಂಶ ಮತ್ತು ಭಾವೋದ್ರೇಕಕ್ಕಿಂತ ವೈಜ್ಞಾನಿಕ ವಿಶ್ಲೇಷಣೆಗೆ ಅವರು ಹೆಚ್ಚಿನ ಮಹತ್ವ ನೀಡುತ್ತಿದ್ದರು.
ಅವರು ಯಾವುದೇ ರಾಜಕೀಯ ಪಕ್ಷದ ಅಂಧ ಬೆಂಬಲಿಗರಾಗಿರಲಿಲ್ಲ. ರಾಷ್ಟ್ರದ ಹಿತಾಸಕ್ತಿ ಎಲ್ಲಕ್ಕಿಂತ ಶ್ರೇಷ್ಠ ಎಂಬ ನಿಲುವು ಅವರದು. ಉತ್ತಮ ನೀತಿಯನ್ನು ಯಾವ ಪಕ್ಷ ಅನುಸರಿಸಿದರೂ ಅದನ್ನು ಮುಕ್ತವಾಗಿ ಶ್ಲಾಘಿಸುತ್ತಿದ್ದರು; ರಾಷ್ಟ್ರಹಿತಕ್ಕೆ ವಿರುದ್ಧವಾದ ಕ್ರಮವನ್ನು ಯಾರೇ ಕೈಗೊಂಡರೂ ನಿರ್ಭಯವಾಗಿ ಟೀಕಿಸುತ್ತಿದ್ದರು.
ಗೌಡರ ವಿದ್ವತ್ತಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗೌರವವಿತ್ತು. ಕುಟುಂಬದವರು ಸಂರಕ್ಷಿಸಿ ರುವ ಅಪರೂಪದ ಛಾಯಾಚಿತ್ರಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯೂ. ಬುಷ್ ಅವರೊಂದಿಗೆ ನಡೆಸಿದ ಭೇಟಿಯ ಚಿತ್ರವೂ ಸೇರಿದೆ. ಇದು ಅವರ ಅಂತಾರಾಷ್ಟ್ರೀಯ ಸಂಪರ್ಕ ಮತ್ತು ಮಾನ್ಯತೆಯ ಸಂಕೇತ. ಆದರೆ ಅವರಿಗೆ ವಿದೇಶಿ ಪ್ರಶಂಸೆಗಿಂತ ಭಾರತದಲ್ಲಿ ಆರ್ಥಿಕ ಸುಧಾರಣೆಗಳನ್ನು ಕಾಣುವ ಆಸೆ ಹೆಚ್ಚಾಗಿತ್ತು. ಭಾರತವು ತನ್ನ ಆರ್ಥಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂಬುದು ಅವರ ಜೀವನಪರ್ಯಂತದ ಕನಸಾಗಿತ್ತು.
ಭ್ರಷ್ಟಾಚಾರದ ವಿರುದ್ಧ ಹೋರಾಟ
ವೆಂಕಟಗಿರಿ ಗೌಡರ ವ್ಯಕ್ತಿತ್ವದ ಅತ್ಯಂತ ವಿಶಿಷ್ಟ ಗುಣವೆಂದರೆ ಅವರ ನಿಷ್ಕಳಂಕ ಪ್ರಾಮಾಣಿಕತೆ. ಭ್ರಷ್ಟಾಚಾರವನ್ನು ಅವರು ಭಾರತದ ಆರ್ಥಿಕ ಅಭಿವೃದ್ಧಿಗೆ ಅತಿದೊಡ್ಡ ಶತ್ರು ಎಂದು ಪರಿಗಣಿಸು ತ್ತಿದ್ದರು. ಅವರು ವ್ಯಕ್ತಿಯನ್ನು ದ್ವೇಷಿಸುತ್ತಿರಲಿಲ್ಲ; ಆದರೆ ಭ್ರಷ್ಟಾಚಾರವನ್ನು ಮಾತ್ರ ನಿರ್ದಾಕ್ಷಿಣ್ಯ ವಾಗಿ ವಿರೋಧಿಸುತ್ತಿದ್ದರು. ಅಧಿಕಾರದಲ್ಲಿರುವವರು, ರಾಜಕೀಯ ನಾಯಕರು, ಶ್ರೀಮಂತರು ಅಥವಾ ಪ್ರಭಾವಶಾಲಿಗಳೆಂಬ ಕಾರಣಕ್ಕೆ ಅವರು ಯಾರನ್ನೂ ಬಿಡುತ್ತಿರಲಿಲ್ಲ.
ರಾಜೀವ್ ಗಾಂಧಿಯವರ ಕಾಲದಲ್ಲಿ ನಡೆದ ಸಮೀಕ್ಷೆಯನ್ನು ಉಲ್ಲೇಖಿಸುತ್ತಾ ಅವರು ಅನೇಕ ಬಾರಿ ಹೇಳುತ್ತಿದ್ದ ಮಾತು ಅವರ ವಿದ್ಯಾರ್ಥಿಗಳಿಗೆ ಇನ್ನೂ ನೆನಪಿದೆ: ‘ಸಾರ್ವಜನಿಕ ಹಣದ ಸೋರಿಕೆ ಯನ್ನು ತಡೆಯಲು ಸಾಧ್ಯವಾದರೆ ದೇಶದ ಬಡತನವನ್ನು ಗಣನೀಯವಾಗಿ ಕಡಿಮೆ ಮಾಡ ಬಹುದು.’ ಈ ಮಾತು ಅವರ ನೈತಿಕ ನಂಬಿಕೆಯಾಗಿತ್ತು. ಭ್ರಷ್ಟಾಚಾರದ ವಿರುದ್ಧ ಅವರು ಅನೇಕ ನ್ಯಾಯಾಂಗ ಹೋರಾಟ ಗಳನ್ನೂ ನಡೆಸಿದರು. ರಾಜಕೀಯ ಪ್ರಭಾವ, ಅಧಿಕಾರ ಅಥವಾ ಸಂಪತ್ತು ಅವರಿಗೆ ಎಂದಿಗೂ ಭಯ ಹುಟ್ಟಿಸಲಿಲ್ಲ.
ವೆಂಕಟಗಿರಿ ಗೌಡರನ್ನು ಕಂಡವರು ಅವರ ಬಗ್ಗೆ ಒಂದು ವಿಷಯವನ್ನು ತಪ್ಪದೆ ಹೇಳುತ್ತಾರೆ-ಅವರು ಅತ್ಯಂತ ಶಿಸ್ತಿನ ವ್ಯಕ್ತಿಯಾಗಿದ್ದರು. ಯಾವಾಗಲೂ ಅಚ್ಚುಕಟ್ಟಾಗಿ ಉಡುಗೆ ಧರಿಸುತ್ತಿದ್ದರು. ಸ್ವಚ್ಛತೆ ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆಡಂಬರವನ್ನು ತೀವ್ರವಾಗಿ ವಿರೋಧಿಸು ತ್ತಿದ್ದರು. ಅವರ ಸಹೋದ್ಯೋಗಿಗಳು ಅವರನ್ನು ದೂರದೃಷ್ಟಿಯ, ಧೈರ್ಯಶಾಲಿ, ವಿನಯಶೀಲ, ಅಪಾರ ಜ್ಞಾನಸಂಪನ್ನ ವ್ಯಕ್ತಿ ಎಂದು ವರ್ಣಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಅವರು ಕಟ್ಟುನಿಟ್ಟು. ಆದರೆ ಅವರ ಮೇಲಿನ ಪ್ರೀತಿ ಮತ್ತು ಕಾಳಜಿ ಅಪಾರವಾಗಿತ್ತು. ಅವರ ತರಗತಿಯಲ್ಲಿ ಕುಳಿತ ಅನೇಕ ವಿದ್ಯಾರ್ಥಿಗಳು ನಂತರ ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರು. ಇಂದಿಗೂ ಹಣಕಾಸು ಅರ್ಥಶಾಸ್ತ್ರದ ಬಗ್ಗೆ ಪ್ರೊ. ವೆಂಕಟಗಿರಿ ಗೌಡರ ಅಭಿಪ್ರಾಯವೇ ಅಂತಿಮ ಪ್ರಮಾಣ ಎಂದು ಹಲವರು ಗೌರವದಿಂದ ನೆನಪಿಸಿ ಕೊಳ್ಳುತ್ತಾರೆ.
ಸಾಮಾಜಿಕ ದೃಷ್ಟಿಕೋನ
ಜಾತಿ, ಧರ್ಮ ಅಥವಾ ರಾಜಕೀಯ ವಿಭಜನೆಗಳನ್ನು ಅವರು ಎಂದಿಗೂ ಒಪ್ಪಿಕೊಂಡಿರಲಿಲ್ಲ. ಜಾತಿ ವ್ಯವಸ್ಥೆ ಭಾರತದ ಅಭಿವೃದ್ಧಿಗೆ ಅಡ್ಡಿಯಾಗಿರುವ ಪ್ರಮುಖ ಸಾಮಾಜಿಕ ಸಮಸ್ಯೆ ಎಂದು ಸ್ಪಷ್ಟ ವಾಗಿ ಹೇಳುತ್ತಿದ್ದರು. ತಮ್ಮ ಶೈಶವದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ತಮಗೆ ತಾಯಿ ಯಂತೆ ಹಾಲುಣಿಸಿ ಬೆಳೆಸಿದ ವಿಚಾರವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು. ಅವರ ದೃಷ್ಟಿ ಯಲ್ಲಿ ಧರ್ಮವೆಂದರೆ ನ್ಯಾಯ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ರಾಷ್ಟ್ರಸೇವೆ.
ಕರ್ನಾಟಕ ಅನೇಕ ಶ್ರೇಷ್ಠ ಅರ್ಥಶಾಸ್ತ್ರಜ್ಞರನ್ನು ದೇಶಕ್ಕೆ ನೀಡಿದೆ. ಆದರೆ ವೆಂಕಟಗಿರಿ ಗೌಡರ ಸ್ಥಾನ ವಿಶಿಷ್ಟವಾಗಿದೆ. ಕಾರಣಗಳು ಸ್ಪಷ್ಟವಾಗಿವೆ. ಅವರು ವಿಶ್ವದ ಶ್ರೇಷ್ಠ ಸಂಸ್ಥೆಯಲ್ಲಿ ಉನ್ನತ ವಿದ್ಯಾ ಭ್ಯಾಸ ಮಾಡಿ ಭಾರತಕ್ಕೆ ಮರಳಿದರು. ಸುದೀರ್ಘಕಾಲ ಬೆಂಗಳೂರು ವಿಶ್ವವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗವನ್ನು ಮುನ್ನಡೆಸಿದರು. ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದರು. ದೇಶದ ಹಣಕಾಸು, ಯೋಜನೆ, ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ ಹಾಗೂ ಅಭಿವೃದ್ಧಿ ಕುರಿತು ಮೂಲಭೂತ ಕೃತಿಗಳನ್ನು ರಚಿಸಿದರು. ಸಾರ್ವಜನಿಕ ಜೀವನದಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದರು. ಭ್ರಷ್ಟಾಚಾರದ ವಿರುದ್ಧ ನಿರಂತರ ಧ್ವನಿ ಎತ್ತಿದರು. ನೀತಿ ರೂಪಿಸುವವರ ಮೇಲೆ ಚಿಂತನೆಯ ಪ್ರಭಾವ ಬೀರಿದರು. ವಿದೇಶದಲ್ಲಿ ಸುಖಜೀವನ ನಡೆಸುವ ಅವಕಾಶಗಳಿದ್ದರೂ, ತಮ್ಮ ಸಂಪೂರ್ಣ ಪ್ರತಿಭೆಯನ್ನು ಭಾರತ ಮತ್ತು ಕರ್ನಾಟಕದ ಸೇವೆಗೆ ಸಮರ್ಪಿಸಿದರು.
ವೆಂಕಟಗಿರಿ ಗೌಡರ ಸ್ಮರಣಾರ್ಥ ಸ್ಥಾಪಿತವಾಗಿರುವ ಡಾ.ಕೆ.ವೆಂಕಟಗಿರಿ ಗೌಡ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ಆಯೋಜಿಸುವ ದತ್ತಿ ಉಪನ್ಯಾಸ ಜ್ಞಾನ, ಪ್ರಾಮಾಣಿಕತೆ, ರಾಷ್ಟ್ರಸೇವೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ವೇದಿಕೆ. ಈ ವರ್ಷದ, ‘ಕೃಷಿಯ ಆಧುನೀಕರಣದಲ್ಲಿ ಸರಕಾರದ ಪಾತ್ರ’ ಎಂಬ ವಿಷಯದ ಉಪನ್ಯಾಸವೂ ಅವರ ಚಿಂತನೆಯನ್ನೇ ಪ್ರತಿಬಿಂಬಿಸುತ್ತದೆ. ಕೃಷಿ, ಅಭಿವೃದ್ಧಿ ಮತ್ತು ಸಾರ್ವಜನಿಕ ನೀತಿ ಕುರಿತು ಅವರು ತೋರಿದ ದೂರದೃಷ್ಟಿಗೆ ಇದು ಅತ್ಯಂತ ಸೂಕ್ತವಾದ ಗೌರವ. ಇಂದು ದೇಶಕ್ಕೆ ಕೇವಲ ಆರ್ಥಿಕ ಬೆಳವಣಿಗೆ ಸಾಕಾಗುವುದಿಲ್ಲ; ನೈತಿಕತೆ, ದೂರದೃಷ್ಟಿ ಮತ್ತು ವೈಜ್ಞಾನಿಕ ಚಿಂತನೆಯುಳ್ಳ ನಾಯಕತ್ವವೂ ಅಗತ್ಯ. ಅಂತಹ ನಾಯಕತ್ವ ವನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ವನ್ನು ಪ್ರೊ.ವೆಂಕಟಗಿರಿ ಗೌಡರು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದರು.