ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

K V Vasu Column: ಸಂಪುಟ ರಚನೆಯ ಕಸರತ್ತು

ಡಿ.ದೇವರಾಜ ಅರಸು ಸೇರಿದಂತೆ, ಅಧಿಕಾರದಿಂದ ನಿರ್ಗಮಿಸಿರುವ ಸಿದ್ದರಾಮಯ್ಯ ಒಳಗೊಂಡಂತೆ, ಅನೇಕ ಮುಖ್ಯಮಂತ್ರಿಗಳು ಇದರ ಬಿಸಿಯನ್ನು ಸಾಕಷ್ಟು ಅನುಭವಿಸಿದ್ದಾರೆ. ಸಚಿವರಾಗಲು ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯದ ಜೊತೆಗೆ ಇನ್ನೂ ಹಲವಾರು ಮಾನ ದಂಡಗಳಿವೆ. ಇಷ್ಟೇ ಇದ್ದರೂ ದೆಹಲಿಯಲ್ಲಿ ಕುಳಿತಿರುವ ವರಿಷ್ಠರ ಕೃಪೆ ಇಲ್ಲದೆ ಹೋದರೆ ಸಚಿವರಾಗುವುದು ಸಾಧ್ಯವಿಲ್ಲ

K V Vasu Column: ಸಂಪುಟ ರಚನೆಯ ಕಸರತ್ತು

-

Profile
Ashok Nayak Jun 1, 2026 9:02 AM

ಪ್ರಸ್ತುತ

ಕೆ.ವಿ.ವಾಸು

ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಕೆಲವರು ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಯಾವುದೇ ಮುಖ್ಯಮಂತ್ರಿಗೆ ಸಂಪುಟ ರಚನೆ ಹಾಗೂ ಪುನರ್ರಚನೆ ಕಠಿಣವಾದ ಕೆಲಸ ಎನ್ನಬಹುದು.

ಡಿ.ದೇವರಾಜ ಅರಸು ಸೇರಿದಂತೆ, ಅಧಿಕಾರದಿಂದ ನಿರ್ಗಮಿಸಿರುವ ಸಿದ್ದರಾಮಯ್ಯ ಒಳಗೊಂಡಂತೆ, ಅನೇಕ ಮುಖ್ಯಮಂತ್ರಿಗಳು ಇದರ ಬಿಸಿಯನ್ನು ಸಾಕಷ್ಟು ಅನುಭವಿಸಿ ದ್ದಾರೆ. ಸಚಿವರಾಗಲು ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯದ ಜೊತೆಗೆ ಇನ್ನೂ ಹಲವಾರು ಮಾನದಂಡಗಳಿವೆ. ಇಷ್ಟೇ ಇದ್ದರೂ ದೆಹಲಿಯಲ್ಲಿ ಕುಳಿತಿರುವ ವರಿಷ್ಠರ ಕೃಪೆ ಇಲ್ಲದೆ ಹೋದರೆ ಸಚಿವರಾಗುವುದು ಸಾಧ್ಯವಿಲ್ಲ. ಹಣ ಬಲ, ಜಾತಿ ಬಲ, ವರಿಷ್ಠರ ಬೆಂಬಲ, ಇಷ್ಟೇ ಇದ್ದರೂ ಅನೇಕರಿಗೆ ಬೇರೆ ಬೇರೆ ಕಾರಣಗಳಿಂದ ಮಂತ್ರಿಯಾಗುವ ಯೋಗವೇ ಒದಗಿ ಬರುವುದಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಮಾಡಿ ದಾಗಲೂ ಭಿನ್ನಮತ ಸ್ಪೋಟಗೊಂಡು, ಮುಖ್ಯ ಮಂತ್ರಿಯ ಬುಡಕ್ಕೆ ಬಂದರೂ ಬರಬಹುದು.

ಹೀಗಾಗಿಯೇ ಮುಖ್ಯಮಂತ್ರಿಯಾದವರು, ಒಂದ ಒಂದು ನೆಪ ಒಡ್ಡಿ ಸಂಪುಟ ವಿಸ್ತರಣೆ ಯನ್ನು ಮುಂದಕ್ಕೆ ಹಾಕುತ್ತಾ ಸಮಯ ತಳ್ಳುತ್ತಿರುತ್ತಾರೆ. ಆದರೂ ಸಂವಿಧಾನದ ರೀತಿ ನೀತಿಗಳಿಗೆ ಅನುಸಾರವಾಗಿ ಸಚಿವ ಸಂಪುಟ ವಿಸ್ತರಣೆ ಆಗಲೇಬೇಕು. 60ರ ದಶಕದಲ್ಲಿ ಕಾಮರಾಜ್ ಸೂತ್ರ ಜಾರಿಯಲ್ಲಿತ್ತು.

ಇದನ್ನೂ ಓದಿ: K V Vasu Column: ಹೊಸವರ್ಷವು ನಿಮಗೆ ಚೇತೋಹಾರಿಯಾಗಲಿ

ಸರಳತೆಗೆ ಮತ್ತೊಂದು ಹೆಸರಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ.ಕಾಮರಾಜ್ ಈ ಸೂತ್ರವನ್ನು ರೂಪಿಸಿ, ಅಂದಿನ ಪ್ರಧಾನಿ ನೆಹರೂ ಅವರಿಗೆ 1963ರಲ್ಲಿ ಸಲ್ಲಿಸಿದ್ದರು. ಈ ಸೂತ್ರವನ್ನು ಅಂಗೀಕರಿಸಿ, 1962ರ ಆಗ ತಿಂಗಳಲ್ಲಿ ಜಾರಿಗೆ ತರಲಾಯಿತು. ಇದರ ಅನ್ವಯ ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಅಂದಿನ ಕೇಂದ್ರ ಸಚಿವ ಸಂಪುಟದ ಹಲವಾರು ಸದಸ್ಯರು ತಮ್ಮ ಪದವಿಗೆ ರಾಜಿನಾಮೆ ನೀಡಿದ್ದರು.

ಸಂಪುಟದ ಪುನರ್ರಚನೆ ಸಂದರ್ಭ ಬಂದಾಗ ಇದನ್ನು ಪ್ರಯೋಗಿಸಲಾಗುತ್ತಿತ್ತು. ಅಂತಹ ಸಂಧರ್ಭದಲ್ಲಿ, ಸಂಪುಟದ ಎಲ್ಲಾ ಸದಸ್ಯರು ಸಾಮೂಹಿಕವಾಗಿ ಪ್ರಧಾನ ಮಂತ್ರಿ (ಕೇಂದ್ರ ಸಂಪುಟ) ಅಥವಾ ಮುಖ್ಯಮಂತ್ರಿ (ರಾಜ್ಯ ಸಚಿವ ಸಂಪುಟ) ಗಳಿಗೆ ರಾಜಿನಾಮೆ ಸಲ್ಲಿಸಬೇಕು.

ನಂತರ, ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿ ತಮಗೆ ಬೇಕಾದ ಸಚಿವರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಈ ಕಾಮರಾಜ್ ಯೋಜನೆಯಡಿಯಲ್ಲಿ ಯಾರನ್ನೂ ರಾಜಿನಾಮೆ ನೀಡಿ ಎಂದು ಬಲವಂತವಾಗಿ ಕೇಳಬೇಕಾದ ಅಗತ್ಯವಿರುವುದಿಲ್ಲ. ಇದು ಸ್ವಲ್ಪ ಕಾಲ ಮಾತ್ರ ಜಾರಿಯಲ್ಲಿತ್ತು.

ಎಲ್ಲಾ ಶಾಸಕರು ಮಂತ್ರಿಗಳಾಗಲು ಸಾಧ್ಯವಿಲ್ಲ. ವಿಧಾನ ಸಭೆಯ ಒಟ್ಟು ಶಾಸಕರ ಪೈಕಿ, ಮುಖ್ಯಮಂತ್ರಿ ಸೇರಿದಂತೆ ಶೇಕಡಾ 15ರಷ್ಟು ಮಾತ್ರ ಸಚಿವರಾಗಬಹುದು. ಈ ಕೋಟಾದ ವಿಧಾನ ಪರಿಷತ್ ಸದಸ್ಯರೂ ಬರುತ್ತಾರೆ. ಉಳಿದ ಅರ್ಹ ಶಾಸಕರಿಗೆ ನಿಗಮ, ಮಂಡಳಿ ಮುಂತಾದ ಬಿಳಿ ಆನೆಗಳು ಇದ್ದೇ ಇರುತ್ತದೆ.

ಸಂಪುಟ ರಚನೆಯಲ್ಲಿ ಅನೇಕ ವೇಳೆ ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತದೆ. ಪಕ್ಷಕ್ಕಾಗಿ ಹತ್ತಾರು ವರ್ಷ ದುಡಿದವರನ್ನು ಬಿಟ್ಟು ಪ್ರಥಮ ಬಾರಿಗೆ ಶಾಸಕರಾದವರಿಗೆ ಅಥವಾ ಬಕೆಟ್ ಹಿಡಿಯುವವರಿಗೆ ಮಣೆ ಹಾಕುವ ಸಂಪ್ರದಾಯ ಕೂಡ ಇದೆ. ಆದರೆ, ಸಚಿವ ಸಂಪುಟದಲ್ಲಿ ಸಮತೋಲನ ಇರಬೇಕು. ಸಂಪುಟ ಹೊಸಬರು, ಹಳಬರು, ಹಿರಿಯರು, ಅನುಭವಿಗಳು, ಮಹಿಳೆಯರು ಎಲ್ಲರನ್ನೂ ಒಳಗೊಂಡ ಸಮಗ್ರ ಹಾಗೂ ಸಮತೋಲನದಿಂದ ಕೂಡಿರಬೇಕು. ಆದರೆ, ಪ್ರಸಕ್ತ ಸನ್ನಿವೇಶದಲ್ಲಿ, ಇವೆಲ್ಲವೂ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ನೂತನ ಸಿಎಂ ಡಿ.ಕೆ.ಶಿವಕುಮಾರ್ ಈ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಸಮರ್ಥ ಸಂಪುಟ ರಚಿಸುತ್ತಾರೆಂದು ಆಶಿಸೋಣ.