ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

S N Bhat Column: ಕಪಿಲ್‌ ಸಿಬಲ್‌ ಸೂತ್ರ: ಪ್ರಯೋಜನವೇನು ?

ತತ್ವಗಳನ್ನು ಬೋಧಿಸುವುದು ಸುಲಭ, ಆದರೆ ಅಧಿಕಾರದ ಹಪಾಹಪಿ ಬಂದಾಗ ಅದನ್ನು ಪಾಲಿಸು ವುದು ಕಷ್ಟ ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕೆ? ಉತ್ತರದಾಯಿತ್ವ ಶೂನ್ಯತೆಗೆ ಸಾಂವಿ ಧಾನಿಕ ಮದ್ದು ಏನು? ಕೇವಲ ಬುದ್ಧಿಜೀವಿಗಳ ಉಪನ್ಯಾಸಗಳಿಂದ ಅಥವಾ 10 ವರ್ಷಗಳ ನಿಬಂಧನೆ ಯ ಕಾಗದದ ನಿಯಮಗಳಿಂದ ರಾಜಕೀಯ ಶುದ್ಧೀಕರಣ ಸಾಧ್ಯವಿಲ್ಲ. ಅದಕ್ಕೆ ಕಠಿಣ ಸಾಂವಿಧಾನಿಕ ಶಸ್ತ್ರಸಚಿಕಿತ್ಸೆಯ ಅಗತ್ಯವಿದೆ.

ರಾಜತಂತ್ರ

ಎಸ್.ಎನ್‌.ಭಟ್

ಭಾರತೀಯ ಪ್ರಜಾಪ್ರಭುತ್ವದ ಜೀವನಾಡಿಯೇ ಜನಾದೇಶ. 5 ವರ್ಷಗಳ ಕಾಲ ದೇಶದ ಅಥವಾ ರಾಜ್ಯದ ಚುಕ್ಕಾಣಿಯನ್ನು ಯಾರ ಕೈಗೆ ಒಪ್ಪಿಸಬೇಕೆಂದು ಮತದಾರರು ಪವಿತ್ರವಾದ ಹಕ್ಕಿನ ಮೂಲಕ ತೀರ್ಪು ನೀಡುತ್ತಾರೆ. ಆದರೆ ಇತ್ತೀಚಿನ ದಶಕಗಳಲ್ಲಿ ಜನಾದೇಶವೆನ್ನುವುದು ಕೇವಲ ತೋರಿಕೆಯ ವಸ್ತುವಾಗಿ, ಚುನಾಯಿತ ಜನಪ್ರತಿನಿಧಿಗಳ ವೈಯಕ್ತಿಕ ಲಾಭ, ಅಧಿಕಾರದ ಹಪಾಹಪಿ ಹಾಗೂ ‘ಕುದುರೆ ವ್ಯಾಪಾರ’ದ ಸರಕಾಗಿ ಬದಲಾಗಿರುವುದು ಆತಂಕಕಾರಿ ಬೆಳವಣಿಗೆ.

ಇಂತಹ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಹಾಗೂ ಸಂಸದ ಕಪಿಲ್ ಸಿಬಲ್ ಅವರು, ಉತ್ತಮ ಆಡಳಿತಕ್ಕಾಗಿ ಒಬ್ಬ ಜನಪ್ರತಿನಿಧಿ ಕನಿಷ್ಠ 10 ವರ್ಷ ಒಂದೇ ಪಕ್ಷದಲ್ಲಿರಬೇಕು ಎಂಬ ಪ್ರಸ್ತಾಪ ವನ್ನು ಮುಂದಿಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಅತ್ಯಂತ ಆಕರ್ಷಕ ಸುಧಾರಣೆಯಂತೆ ಕಂಡರೂ, ಇದರ ಆಳಕ್ಕೆ ಇಳಿದಾಗ ಪ್ರಜಾಪ್ರಭುತ್ವದ ರೋಗಲಕ್ಷಣಗಳು ಮತ್ತು ನಮ್ಮ ರಾಜಕಾರಣಿಗಳ ನೈಜ ದ್ವಂದ್ವ ನಿಲುವುಗಳು ಒಟ್ಟಿಗೇ ಮುನ್ನೆಲೆಗೆ ಬರುತ್ತವೆ.

ಇತಿಹಾಸ ಕಲಿಸಿದ ಕಹಿ ಪಾಠಗಳು: ಭಾರತದಲ್ಲಿ ಪಕ್ಷಾಂತರದ ಪಿಡುಗಿಗೆ ದಶಕಗಳ ಇತಿಹಾಸ ವಿದೆ. 1967ರಲ್ಲಿ ಹರಿಯಾಣದ ಶಾಸಕ ಗಯಾಲಾಲ್ ಕೇವಲ 15 ದಿನಗಳಲ್ಲಿ 3 ಬಾರಿ ಪಕ್ಷ ಬದಲಾಯಿಸಿ ‘ಆಯಾರಾಮ್ ಗಯಾರಾಮ’ ಎಂಬ ಹೀನಾಯ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡಿದರು. ಇದನ್ನು ತಡೆಯಲು 1985ರಲ್ಲಿ ಸಂವಿಧಾನದ 10ನೇ ಶೆಡ್ಯೂಲ್ ಮೂಲಕ ‘ಪಕ್ಷಾಂತರ ನಿಷೇಧ ಕಾಯ್ದೆ’ ತರಲಾಯಿತಾದರೂ, ರಾಜಕಾರಣಿಗಳು ಅದರಲ್ಲಿನ ನ್ಯೂನತೆಗಳನ್ನು ಹುಡುಕಿ ಕೊಂಡು ಹೊಸ ದಾರಿಗಳನ್ನು ಕಂಡುಕೊಂಡಿದ್ದಾರೆ:

ಇದನ್ನೂ ಓದಿ: S N Bhat Column: ಸರಕಾರ, ಸಂವಿಧಾನ ಮತ್ತು ಸೇಫ್ಟಿ ವಾಲ್ವ್

ರಾಜೀನಾಮೆ ತಂತ್ರ ಹಾಗೂ ಆಪರೇಷನ್ ಸಂಸ್ಕೃತಿ: ಕರ್ನಾಟಕದಲ್ಲಿ 2008 ಹಾಗೂ 2019ರಲ್ಲಿ ನಡೆದ ಬೆಳವಣಿಗೆಗಳು ಇಡೀ ದೇಶದ ಗಮನ ಸೆಳೆದವು. 2019ರಲ್ಲಿ 17 ಶಾಸಕರು ಏಕಾಏಕಿ ರಾಜೀನಾಮೆ ನೀಡಿ ಮುಂಬೈನ ರೆಸಾರ್ಟ್ ಸೇರಿದಾಗ ಸಮ್ಮಿಶ್ರ ಸರ್ಕಾರ ಉರುಳಿ ಹೋಯಿತು. ಅನರ್ಹತೆಯ ಭೀತಿಯಿಂದ ತಪ್ಪಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾ ವಣೆಯಲ್ಲಿ ಮತ್ತೊಂದು ಪಕ್ಷದಿಂದ ಸ್ಪರ್ಧಿಸಿ ಮಂತ್ರಿಗಳಾಗುವ ಅತಿ ಅಪಾಯಕಾರಿ ಮಾದರಿ ಇಲ್ಲಿ ಸಾಬೀತಾಯಿತು.

ಮಧ್ಯಪ್ರದೇಶದ ಪತನ: 2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬಣದ 22 ಶಾಸಕರು ಸಾಮೂಹಿಕವಾಗಿ ಪಕ್ಷ ತೊರೆದು ಅಧಿಕಾರದಲ್ಲಿದ್ದ ಸರ್ಕಾರವನ್ನೇ ಕೆಡವಿದರು.

ಸಗಟು ವಿಲೀನ ಮತ್ತು ಮಹಾರಾಷ್ಟ್ರ ಬಿಕ್ಕಟ್ಟು: ಗೋವಾದಲ್ಲಿ 2/3 ರಷ್ಟು ಶಾಸಕರು ಒಟ್ಟಾಗಿ ಪಕ್ಷ ಬದಲಾಯಿಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡರೆ, ಮಹಾರಾಷ್ಟ್ರದಲ್ಲಂತೂ ಇಡೀ ಪಕ್ಷವನ್ನೇ ಇಬ್ಬಾಗ ಮಾಡಿ, ಅಧಿಕೃತ ಚಿಹ್ನೆಯನ್ನೇ ಕಸಿದುಕೊಂಡು ಸರ್ಕಾರವನ್ನು ಉರುಳಿಸಿದ ಪ್ರಹಸನ ನಡೆಯಿತು. ಈ ಬೆಳವಣಿಗೆಗಳು ಸಾಬೀತುಪಡಿಸುವುದು ಒಂದೇ-ಕಾನೂನಿನ ಕಣ್ಣಿಗೆ ಮಣ್ಣೆರಚಿ ಸರ್ಕಾರಗಳನ್ನು ಅಸ್ಥಿರಗೊಳಿಸಿದಾಗ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ, ದೀರ್ಘಾವಧಿಯ ನೀತಿಗಳು ಹಳ್ಳ ಹಿಡಿಯುತ್ತವೆ.

Kapil Sibal ok

ಸ್ಪೀಕರ್ ವಿಳಂಬ ನೀತಿ ಮತ್ತು ಕಾನೂನಿನ ಅಡ್ಡದಾರಿಗಳು: ಕಪಿಲ್ ಸಿಬಲ್ ಅವರು ‘10 ವರ್ಷಗಳ ಕಡ್ಡಾಯ ಬದ್ಧತೆ’ಯಂತಹ ಹೊಸ ನಿಯಮವನ್ನು ಪ್ರತಿಪಾದಿಸುವುದು ಸೈದ್ಧಾಂತಿಕ ವಾಗಿ ಸರಿ ಎನಿಸಬಹುದು; ಆದರೆ ಆ ನಿಯಮವನ್ನು ಜಾರಿಗೊಳಿಸುವ ಸಾಂವಿಧಾನಿಕ ವ್ಯವಸ್ಥೆಯೇ ನಿಷ್ಪಕ್ಷಪಾತ ವಾಗಿಲ್ಲದಿದ್ದರೆ ಅದರಿಂದ ಪ್ರಯೋಜನವೇನು ಎಂಬ ಪ್ರಶ್ನೆ ಮೂಡುತ್ತದೆ. ಈಗಿನ ಲೋಕಸಭೆಯ ವಾಸ್ತವ ಅಂಶಗಳನ್ನು ಗಮನಿಸಿದರೆ, ತೃಣಮೂಲ ಕಾಂಗ್ರೆಸ್ ಬಂಡಾಯ ಸಂಸದರ ಪ್ರಸಂಗವೇ ಇದಕ್ಕೆ ತಾಜಾ ನಿದರ್ಶನ. ಪಕ್ಷದ ವಿರುದ್ಧ ಬಂಡಾಯವೆದ್ದು ಬೇರೊಂದು ರಾಜಕೀಯ ಬಣದ ಜೊತೆ ಗುರುತಿಸಿಕೊಂಡರೂ, ಶಾಸಕ-ಸಂಸದರು ತಾಂತ್ರಿಕವಾಗಿ ರಾಜೀನಾಮೆ ನೀಡುವು ದಿಲ್ಲ.

ಇತ್ತ ಪಕ್ಷ ಅವರನ್ನು ಉಚ್ಚಾಟಿಸಿದರೆ, ಅವರು ‘ಅಸಂಯೋಜಿತ’ ಸದಸ್ಯರಾಗಿ ಉಳಿದುಕೊಂಡು ಪೂರ್ಣ ಅಧಿಕಾರ, ವೇತನ ಹಾಗೂ ಸವಲತ್ತುಗಳನ್ನು ಅನುಭವಿಸುತ್ತಾರೆ. ಇಂತಹ ನಾಯಕರ ವಿರುದ್ಧ ಅನರ್ಹತಾ ಅರ್ಜಿ ಸಲ್ಲಿಸಿದರೂ ಸ್ಪೀಕರ್ ಕಚೇರಿಯು ಆಡಳಿತ ಪಕ್ಷದ ಹಿತಾಸಕ್ತಿಗೆ ತಕ್ಕಂತೆ ತಿಂಗಳುಗಟ್ಟಲೆ ತೀರ್ಮಾನ ಕೈಗೊಳ್ಳದೆ ಕಾಲಹರಣ ಮಾಡುತ್ತದೆ.

ಸುಪ್ರೀಂ ಕೋರ್ಟ್ ಚಾಟಿ ಬೀಸಿದರೂ ಸದನದ ಅವಧಿ ಮುಗಿಯುವವರೆಗೆ ಕಡತಗಳು ಧೂಳು ತಿನ್ನುತ್ತಿರುತ್ತವೆ. ಹೀಗೆ ರಾಜಕಾರಣಿಗಳು ರಾಜೀನಾಮೆಯೂ ನೀಡದೆ, ಪಕ್ಷಾಂತರದ ಶಿಕ್ಷೆಗೂ ಗುರಿಯಾಗದೆ ಅಧಿಕಾರದಲ್ಲಿ ಮುಂದುವರಿಯುವ ತಾಂತ್ರಿಕ ಅಡ್ಡದಾರಿಗಳನ್ನು ಕಂಡುಕೊಂಡಿರು ವಾಗ, ಕೇವಲ ‘10 ವರ್ಷಗಳ ನಿಯಮ’ ರೂಪಿಸಿದರೆ ವ್ಯವಸ್ಥೆ ಸುಧಾರಿಸಲು ಹೇಗೆ ಸಾಧ್ಯ?

ಕಪಿಲ್ ಸಿಬಲ್ ಹೇಳಿಕೆಯ ಹಿಂದಿರುವ ವಿಪರ್ಯಾಸ: ಒಬ್ಬ ಜನಪ್ರತಿನಿಧಿ 10 ವರ್ಷ ಒಂದೇ ಪಕ್ಷದಲ್ಲಿದ್ದರೆ ಆಡಳಿತದಲ್ಲಿ ಸ್ಥಿರತೆ ತರಬಹುದು ಎಂಬ ವಾದ ಸೈದ್ಧಾಂತಿಕವಾಗಿ ಸರಿಯಾಗಿದ್ದರೂ, ಇದನ್ನು ಪ್ರತಿಪಾದಿಸಿದವರ ಹಿನ್ನೆಲೆಯೇ ರಾಜಕಾರಣದ ಮತ್ತೊಂದು ಮುಖವನ್ನು ಬಯಲು ಮಾಡುತ್ತದೆ. ಸಾಮಾನ್ಯ ಪ್ರಜೆಗಳಿಗೆ ಹೇಳುವುದು ಒಂದು, ಮಾಡುವುದು ಇನ್ನೊಂದು ಅನ್ವಯ ವಾಗುತ್ತದೆ; ಆದರೆ ರಾಜಕಾರಣಿಗಳಿಗೆ ಮಾತ್ರ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಕಪಿಲ್ ಸಿಬಲ್ ಅವರನ್ನೇ ಗಮನಿಸಿದರೆ, ಅವರು 3 ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಅಗ್ರ ನಾಯಕರಾಗಿ, ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿದವರು.

2022ರಲ್ಲಿ ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದ ನೆಪವೊಡ್ಡಿ ಕಾಂಗ್ರೆಸ್ ತೊರೆದ ಅವರು, ಸಂಸತ್ ಸ್ಥಾನವನ್ನೇನೂ ತ್ಯಾಗ ಮಾಡಲಿಲ್ಲ. ಬದಲಿಗೆ ಸಮಾಜವಾದಿ ಪಕ್ಷದ ಬಾಹ್ಯ ಬೆಂಬಲ ದೊಂದಿಗೆ ‘ಪಕ್ಷೇತರ’ ಮುಖವಾಡ ತೊಟ್ಟು ರಾಜ್ಯಸಭೆಗೆ ಮರುಪ್ರವೇಶ ಪಡೆದರು. ಅವರು ಹೇಳುವ 10 ವರ್ಷಗಳ ಕಡ್ಡಾಯ ಬದ್ಧತೆಯ ನಿಯಮವನ್ನು ಕಟ್ಟುನಿಟ್ಟಾಗಿ ಅನ್ವಯಿಸಿದರೆ, ತಮ್ಮ ಮೂಲ ಪಕ್ಷವನ್ನು ತ್ಯಜಿಸಿ ಬೇರೊಂದು ಪಕ್ಷದ ಹಂಗಿನಲ್ಲಿ ಅಧಿಕಾರ ಉಳಿಸಿಕೊಂಡ ಅವರೇ ಮೊದಲು ಚುನಾವಣಾ ಹಕ್ಕನ್ನು ಕಳೆದುಕೊಳ್ಳ ಬೇಕಾಗುತ್ತದೆ.

ತತ್ವಗಳನ್ನು ಬೋಧಿಸುವುದು ಸುಲಭ, ಆದರೆ ಅಧಿಕಾರದ ಹಪಾಹಪಿ ಬಂದಾಗ ಅದನ್ನು ಪಾಲಿಸು ವುದು ಕಷ್ಟ ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕೆ? ಉತ್ತರದಾಯಿತ್ವ ಶೂನ್ಯತೆಗೆ ಸಾಂವಿ ಧಾನಿಕ ಮದ್ದು ಏನು? ಕೇವಲ ಬುದ್ಧಿಜೀವಿಗಳ ಉಪನ್ಯಾಸಗಳಿಂದ ಅಥವಾ 10 ವರ್ಷಗಳ ನಿಬಂಧನೆಯ ಕಾಗದದ ನಿಯಮಗಳಿಂದ ರಾಜಕೀಯ ಶುದ್ಧೀಕರಣ ಸಾಧ್ಯವಿಲ್ಲ. ಅದಕ್ಕೆ ಕಠಿಣ ಸಾಂವಿಧಾನಿಕ ಶಸ್ತ್ರಸಚಿಕಿತ್ಸೆಯ ಅಗತ್ಯವಿದೆ.

ಚುನಾವಣಾ ಸ್ಪರ್ಧೆಗೆ ಕಠಿಣ ನಿಷೇಧ: ಯಾವುದೇ ಶಾಸಕ ಅಥವಾ ಸಂಸದ ತನ್ನ ಸ್ಥಾನಕ್ಕೆ ಅಥವಾ ಪಕ್ಷಕ್ಕೆ ಅವಧಿಪೂರ್ವ ರಾಜೀನಾಮೆ ನೀಡಿದರೆ, ಅವರು ಕನಿಷ್ಠ 5 ಅಥವಾ 6 ವರ್ಷಗಳ ಕಾಲ (ಅಥವಾ ಆ ಸದನದ ಪೂರ್ಣ ಅವಧಿ ಮುಗಿಯುವವರೆಗೆ) ಯಾವುದೇ ಚುನಾವಣೆಗೆ ಸ್ಪರ್ಧಿಸ ದಂತೆ ಮತ್ತು ಯಾವುದೇ ನಾಮನಿರ್ದೇಶಿತ ಅಥವಾ ಸಚಿವ ಸ್ಥಾನ ಪಡೆಯದಂತೆ ಕಾನೂನು ತಿದ್ದುಪಡಿಯಾಗಬೇಕು. ಆಗ ಮಾತ್ರ ರಾಜೀನಾಮೆ ಕೊಟ್ಟು ಮಂತ್ರಿಗಳಾಗುವ ರೆಸಾರ್ಟ್ ತಂತ್ರಕ್ಕೆ ಅಂತ್ಯ ಬೀಳುತ್ತದೆ.

ಮೂರನೇ ಎರಡರಷ್ಟು (2/3) ವಿನಾಯಿತಿ ರದ್ದು: 10ನೇ ಶೆಡ್ಯೂಲ್‌ನಲ್ಲಿರುವ ‘/2/3 ರಷ್ಟು ಸದಸ್ಯರು ಬೇರೆ ಪಕ್ಷ ಸೇರಿದರೆ ಅದು ವಿಲೀನ’ ಎಂಬ ನಿಯಮವೇ ಸಗಟು ಪಕ್ಷಾಂತರಕ್ಕೆ ರಾಜ ಮಾರ್ಗವಾಗಿದೆ. ಸಣ್ಣ ಜಿಗಿತವಿರಲಿ, ಸಗಟು ಪಲಾಯನವಿರಲಿ- ಪಕ್ಷಾಂತರವೆಸಗಿದ ಪ್ರತಿಯೊಬ್ಬರ ಸದಸ್ಯತ್ವವೂ ತಕ್ಷಣವೇ ರದ್ದಾಗಬೇಕು. ತಟಸ್ಥ ನ್ಯಾಯಮಂಡಳಿ: ಪಕ್ಷಾಂತರದ ಅರ್ಜಿಗಳನ್ನು ಆಡಳಿತ ಪಕ್ಷದ ಹಿತಾಸಕ್ತಿಗೆ ತಕ್ಕಂತೆ ವರ್ತಿಸುವ ಸ್ಪೀಕರ್ ಅವರ ಕೈಗೆ ಒಪ್ಪಿಸದೆ, ಕೇಂದ್ರ ಚುನಾವಣಾ ಆಯೋಗ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸ್ವತಂತ್ರ ನ್ಯಾಯ ಮಂಡಳಿಗೆ ವಹಿಸಿ, 30 ದಿನಗಳಲ್ಲಿ ಕಾಲಮಿತಿಯ ತೀರ್ಪು ಕಡ್ಡಾಯಗೊಳಿಸಬೇಕು.

ಮತದಾರರಿಗೆ ‘ವಾಪಸ್ ಕರೆಸಿಕೊಳ್ಳುವ ಹಕ್ಕು’ (Right to Recall): ಒಂದು ಸಿದ್ಧಾಂತ ಅಥವಾ ಪಕ್ಷದ ಹೆಸರಿನಲ್ಲಿ ಮತ ಪಡೆದು, ನಂತರ ವೈಯಕ್ತಿಕ ಲಾಭಕ್ಕಾಗಿ ಪಕ್ಷಾಂತರ ಮಾಡುವ ಜನಪ್ರತಿನಿಧಿಯನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ ಮತದಾರನಿಗೆ ಸಿಗಬೇಕು. ಆಡಳಿತ ಸುಧಾರಣೆ ಯೆನ್ನುವುದು ರಾಜಕಾರಣಿಗಳ ಅನುಕೂಲಸಿಂಧು ಮಾತುಗಳಿಂದ ಸಾಧ್ಯವಿಲ್ಲ.

ಎಲ್ಲಿಯವರೆಗೆ ಪಕ್ಷ ಬದಲಿಸುವ ರಾಜಕಾರಣಿಗಳಿಗೆ ಕಠಿಣ ಕಾನೂನಾತ್ಮಕ ಕತ್ತರಿ ಬೀಳುವುದಿಲ್ಲವೋ ಮತ್ತು ಮತದಾರರು ಅಂತಹವರನ್ನು ಚುನಾವಣೆಯಲ್ಲಿ ನಿರ್ದಾಕ್ಷಿಣ್ಯವಾಗಿ ಸೋಲಿಸುವು ದಿಲ್ಲವೋ, ಅಲ್ಲಿಯವರೆಗೆ ಪ್ರಜಾಪ್ರಭುತ್ವವು ರೆಸಾರ್ಟ್‌ಗಳ ದಲ್ಲಾಳಿಗಳ ಕೈಯ ನಲುಗುತ್ತಿರುತ್ತದೆ. ಕಪಿಲ್ ಸಿಬಲ್ ಅವರ ಮಾತು ಪ್ರಸ್ತುತ ಹೌದಾದರೂ, ಅದು ಕೇವಲ ಭಾಷಣದ ಸರಕಾಗದೆ ಸ್ವತಃ ರಾಜಕಾರಣಿಗಳ ಆತ್ಮಾವಲೋಕನಕ್ಕೆ ಕಾರಣವಾದಾಗ ಮಾತ್ರ ಅದಕ್ಕೊಂದು ಅರ್ಥ.