ತಿಳಿರು ತೋರಣ
ಇದು ಕವಿ ಮುದ್ದಣನ ರಾಮಾಶ್ವಮೇಧಂ ಕಾವ್ಯದ ಸಾಲು. ಕರಿಮಣಿ ಹಾಗೂ ಹವಳ ಎರಡೂ ಸೌಂದರ್ಯ ಇರುವಂಥವೇ; ಒಟ್ಟು ಸೇರಿದಾಗ ಆ ಸೌಂದರ್ಯವು ಹೊಸದೊಂದು ಎತ್ತರಕ್ಕೇರುತ್ತದೆ; ಅನನ್ಯವೂ ಅನೂಹ್ಯವೂ ಆಗುತ್ತದೆ. ಆದ್ದರಿಂದ ಇಂದಿನ ಅಂಕಣದ ಶೀರ್ಷಿಕೆ ಹೀಗಿದ್ದರೂ ಬರೀ ಕರಿಮಣಿ-ಹವಳಗಳಿಗೆ ಅಥವಾ ಸಂಸ್ಕೃತ- ಕನ್ನಡ ಭಾಷೆಗಳ ವಿಚಾರಕ್ಕಷ್ಟೇ ಸೀಮಿತವಲ್ಲ. ಒಂದರ ಮೌಲ್ಯವು ಮತ್ತೊಂದರ ಹಿನ್ನೆಲೆಯಲ್ಲಿ ಮತ್ತಷ್ಟು ಎದ್ದು ಕಾಣುತ್ತದೆ ಎಂಬ ವಿಶಾಲ ತತ್ತ ಇವೆರಡರ ಜೋಡಣೆಯಲ್ಲಿ ಅಡಕವಾಗಿದೆ
ಅಪ್ಪಟ ಸುಂದರ ಕನ್ನಡ ನುಡಿಗಳ ನಡುವೆ ಅಗತ್ಯವಿದ್ದಾಗ ಅಥವಾ ಅಂದವನ್ನು ಹೆಚ್ಚಿಸಲೆಂದು ನಡುನಡುವೆ ಸಂಸ್ಕೃತ ಪದಗಳನ್ನು ಸೇರಿಸುತ್ತೇನೆ ಎನ್ನುತ್ತ ಕನ್ನಡಕವಿ ಮುದ್ದಣ ಈ ರೂಪಕವನ್ನು ಬಳಸಿದ್ದಾನೆ. ಶ್ರೀ ರಾಮಾಶ್ವಮೇಧಂ ಹಳಗನ್ನಡ ಕಾವ್ಯದ ಕಥಾಮುಖ ಭಾಗದಲ್ಲಿ, ಮುದ್ದಣ-ಮನೋ ರಮೆಯರ ಸಲ್ಲಾಪದಲ್ಲಿ ಬರುವ ಮಾತಿದು. ಚೆಂಬವಳ ಅಂದರೆ ಕೆಂಪು ಹವಳ. ಕೋ ಅಂದರೆ ಮಣಿ ಮೊದಲಾದುವನ್ನು ನೂಲಿನಲ್ಲಿ ಪೋಣಿಸು ಎಂದರ್ಥ. ಹೇಗೆ ಕಪ್ಪು ಮಣಿಗಳ ಕರಿಮಣಿ ಸರದಲ್ಲಿ ಅಲ್ಲಲ್ಲಿ ಕೆಂಪು ಹವಳವನ್ನು ಪೋಣಿಸಿದರೆ ಸರವು ಅತ್ಯಂತ ಆಕರ್ಷಕವಾಗಿ ಕಾಣುತ್ತದೆಯೋ, ಹಾಗೆಯೇ ಕನ್ನಡ ಗದ್ಯದ ನಡುವೆ ಅಲ್ಲಲ್ಲಿ ಬಳಕೆಯಾಗುವ ಸಂಸ್ಕೃತ ಪದಗಳು ಬರೆವಣಿಗೆಗೆ ಶೋಭೆಯನ್ನು ನೀಡುತ್ತವೆ- ಎಂದು ಮುದ್ದಣನ ಅಭಿಮತ.
ಗಂಡ ಕಥೆ ಹೇಳುವಾಗ ಅದರಲ್ಲಿ ಪದಪದವೂ ಸಂಸ್ಕೃತಮಯವಾದರೆ ತನಗೊಂದೂ ಅರ್ಥ ವಾಗದೆ ‘ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ’ ಆಗುತ್ತದಲ್ಲ ಎಂದು ಮನೋರಮೆ ಆತಂಕ ವ್ಯಕ್ತಪಡಿಸಿದ್ದು, ಮತ್ತು ಆಕೆಯ ಆತಂಕಕ್ಕೆ ಉತ್ತರವಾಗಿ ಕನ್ನಡ-ಸಂಸ್ಕೃತಗಳ ಹದವಾದ ಮಿಶ್ರಣವನ್ನು ಸಮರ್ಥಿಸುತ್ತ ಮುದ್ದಣ ಹೀಗೆಂದದ್ದು- ಎರಡೂ ಉಕ್ತಿಗಳು ಅತಿಪ್ರಖ್ಯಾತವಾದವು. ಭಾಷಣಕಾರರು, ಬರಹಗಾರರು ಆಗಾಗ ಉದ್ಧರಿಸುವಂಥವು.
ಇದನ್ನೂ ಓದಿ: Srivathsa Joshi Column: ಇದೊಂದು ರೀತಿಯಲ್ಲಿ ರಂಜನೀಯ ರಂಧ್ರಾನ್ವೇಷಣೆ
ಮುದ್ದಣನೇನೋ ಕನ್ನಡ-ಸಂಸ್ಕೃತಗಳ ಮಿಶ್ರಣವನ್ನು ಹೋಲಿಸಲಿಕ್ಕೆ ಕರಿಮಣಿ-ಹವಳಗಳನ್ನು ಉಪಮೆಯಾಗಿ ಬಳಸಿದನು. ಆತನೇನೂ ಸಂಸ್ಕೃತ ಮೇಲು ಕನ್ನಡ ಕೀಳು (ಅಥವಾ ತದ್ವಿರುದ್ಧ) ಎಂದು ತಾರತಮ್ಯ ಮಾಡಿಲ್ಲ, ಭೇದಭಾವ ತೋರಿಸಿಲ್ಲ. ಉಪಮೆಗೆ ಬಳಸಿದ ವಸ್ತುಗಳಾದರೂ ಅಷ್ಟೇ: ಕರಿಮಣಿಗೂ ತನ್ನದೇ ಆದ ಮೌಲ್ಯವಿದೆ, ಮೌಲ್ಯಕ್ಕಿಂತಲೂ ಹೆಚ್ಚಾಗಿ ತೀವ್ರವಾದ ಭಾವಾನುಬಂಧವಿದೆ.
ಮದುವೆಯಾದ ಹೆಣ್ಣು ಬರೀ ಹವಳದ್ದೇ ಸರ ಧರಿಸಿದರೆ ಅದು ಆಕರ್ಷಕವಾಗಿ ಕಂಡೀತಷ್ಟೇ ಹೊರತು ಕರಿಮಣಿ ಸರಕ್ಕೆ ಪರ್ಯಾಯ ಎಂದಿಗೂ ಆಗದು. ಆದ್ದರಿಂದ ‘ಕರಿಮಣಿ ಸರದಲ್ಲಿ ಕೆಂಪು ಹವಳ ಕೋದಂತೆ’ ಎನ್ನುವುದನ್ನು ಎರಡು ವಿಭಿನ್ನ ವಸ್ತುಗಳು ಒಟ್ಟಿಗೆ ಸೇರಿದಾಗ ಪರಸ್ಪರ ಅಂದ ವನ್ನು ಹೆಚ್ಚಿಸುವ ಸಹಜಸೌಂದರ್ಯ ಮತ್ತು ಸಾಮರಸ್ಯಕ್ಕೆ (Harmony and Contrast) ಅತ್ಯುತ್ತಮ ಉದಾಹರಣೆ ಯಾಗುತ್ತದೆ ಅಂತಷ್ಟೇ ಪರಿಗಣಿಸಬೇಕು.
ಏಕೆಂದರೆ ಎರಡೂ ಸೌಂದರ್ಯ ಇರುವಂಥವೇ; ಒಟ್ಟು ಸೇರಿದಾಗ ಆ ಸೌಂದರ್ಯವು ಹೊಸ ದೊಂದು ಎತ್ತರಕ್ಕೇರುತ್ತದೆ; ಅನನ್ಯವೂ ಅನೂಹ್ಯವೂ ಆಗುತ್ತದೆ. ಆದ್ದರಿಂದ ಇಂದಿನ ಅಂಕಣದ ಶೀರ್ಷಿಕೆ ಹೀಗಿದ್ದರೂ ಬರೀ ಕರಿಮಣಿ-ಹವಳಗಳಿಗೆ ಅಥವಾ ಸಂಸ್ಕೃತ-ಕನ್ನಡ ಭಾಷೆಗಳ ವಿಚಾರ ಕ್ಕಷ್ಟೇ ಸೀಮಿತಗೊಳಿಸದೆ, ಒಂದರ ಮೌಲ್ಯವು ಮತ್ತೊಂದರ ಹಿನ್ನೆಲೆಯಲ್ಲಿ ಮತ್ತಷ್ಟು ಎದ್ದು ಕಾಣುತ್ತದೆ ಎಂಬ ವಿಶಾಲ ತತ್ತ್ವಕ್ಕೆ ಅಳವಡಿಸಿಕೊಂಡು ನೋಡೋಣ.
“ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ..." ಎಂದು ಹಾಡಿದರು ಅಣ್ಣಾವ್ರು. ಇಲ್ಲೂ ಹಾಗೆಯೇ ಅಲ್ಲವೇ? ಹಾಲು ಕೂಡ ಮಧುರ, ಜೇನು ಕೂಡ ಮಧುರ. ಅವೆರಡೂ ಬೆರೆತಾಗಿನ ಮಾಧುರ್ಯ ಅಪರಿಮಿತ. “ನಾ ಬೆಂಕಿಯಂತೆ ನಾ ಗಾಳಿಯಂತೆ ಈ ಜೋಡಿ ಮುಂದೆ ವೈರಿ ಉಳಿಯು ವನೆ..." ಎಂದು ಪಿ.ಬಿ.ಶ್ರೀನಿವಾಸ್ ಜೊತೆಗೂಡಿ ಹಾಡಿದರು ಅಣ್ಣಾವ್ರು ಶಂಕರ್-ಗುರು ದ್ವಿಪಾತ್ರಾಭಿ ನಯನದಲ್ಲಿ. ಬೆಂಕಿಯೂ ಅಪಾಯಕಾರಿ ಗಾಳಿಯೂ ಅಪಾಯಕಾರಿ.
ಎರಡೂ ಸೇರಿದರಂತೂ ಕೇಳುವುದೇ ಬೇಡ. “ಕಣ್ಣು ರೆಪ್ಪೆ ಒಂದನೊಂದು ಮರೆವುದೇ ಅವು ಎಂದಾ ದರೂ ಅಗಲಿ ಬೇರೆ ಇರುವವೇ..." ಇನ್ನೊಂದು ಹಾಡು. ಇದೂ ಅಣ್ಣಾವ್ರದ್ದೇ, ಪರೋಪಕಾರಿ ಚಿತ್ರದ್ದು. ಕಣ್ಣುಗಳ ಸೌಂದರ್ಯವನ್ನು ಎಷ್ಟೇ ಹೊಗಳುತ್ತೇವಾದರೂ ರೆಪ್ಪೆಗಳಿಲ್ಲದ ಕಣ್ಣುಗಳನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. ಅಂದರೆ ರೆಪ್ಪೆಗಳು ಇರುವುದು ಕಣ್ಣುಗಳ ರಕ್ಷಣೆಗಷ್ಟೇ ಅಲ್ಲ, ಸೌಂದರ್ಯವರ್ಧನೆಗೂ ಅಂತಾಯ್ತು. ಅದೇ ಹಾಡಿನ ಮುಂದಿನ ಸಾಲಿನಲ್ಲಿ “ಹೂವು ಗಂಧ ಬೇರೆ ಬೇರೆ ಇರುವುದೆ ಅವು ಎಂದಾದರೂ ಒಂದನೊಂದು ಮರೆವುದೇ..." ಸಹ ಅಂಥದೇ ಅವಿನಾಭಾವ ಸಂಬಂಧದ ರೂಪಕ.
ಯೋಚಿಸುತ್ತ ಹೋದರೆ, ಕುಸುಮ ಗಂಧದ ಒಳಗೊ ಗಂಧ ಕುಸುಮದ ಒಳಗೊ ಕುಸುಮ ಗಂಧಗಳೆರಡು ಆಘ್ರಾಣದೊಳಗೋ... ಎಂದು ಅಧ್ಯಾತ್ಮದ ಆಳ-ಎತ್ತರಗಳು ತೆರೆದುಕೊಳ್ಳುತ್ತವೆ. ಇರಲಿ, ಅಧ್ಯಾತ್ಮದ ಸಂಕೀರ್ಣತೆ ಸದ್ಯಕ್ಕೆ ಬೇಡ.
ನಾನಿಲ್ಲಿ ಚಿತ್ರಗೀತೆಗಳಿಂದಲೇ ಉದಾಹರಣೆಗಳನ್ನು ಹೆಕ್ಕಿಕೊಂಡಿದ್ದಕ್ಕೆ ಒಂದು ಕಾರಣವಿದೆ. ಚಿತ್ರಗೀತೆ ಗಳಿಗೆ, ಅಥವಾ ಸಾರ್ವತ್ರೀಕರಿಸಿ ಭಾವಗೀತೆ ಭಕ್ತಿಗೀತೆ ಜನಪದಗೀತೆ ಇತ್ಯಾದಿ ಹಾಡು ಅನಿಸಿಕೊಳ್ಳುವ ಎಲ್ಲದಕ್ಕೂ ಇದೇ ಥಿಯರಿಯನ್ನು- ಒಂದರ ಮೌಲ್ಯವು ಮತ್ತೊಂದರ ಹಿನ್ನೆಲೆಯಲ್ಲಿ ಮತ್ತಷ್ಟು ಎದ್ದು ಕಾಣುತ್ತದೆ ಎಂಬುದನ್ನು- ಅನ್ವಯಿಸಲಿಕ್ಕಾಗುತ್ತದೆ. ನಾನಿದನ್ನು ಒಬ್ಬ ರೇಡಿಯೊ ಕೇಳುಗನಾಗಿ ವಿವರಿಸುತ್ತಿದ್ದೇನೆ, ಅರ್ಥ ಮಾಡಿಕೊಳ್ಳಲಿಕ್ಕೆ ನೀವೇನೂ ರೇಡಿಯೊ ಕೇಳುವವರೇ ಆಗಿರಬೇಕಂತಿಲ್ಲ.
ಬೇಕಿದ್ದರೆ ಗಮನಿಸಿ: ಆಕಾಶವಾಣಿಯಿಂದ “ಈಗ ಚಿತ್ರಗೀತೆಗಳು..." ಎಂಬ ಉದ್ಘೋಷಣೆಯೊಡನೆ ಒಂದರ್ಧ ಗಂಟೆ ಅವಧಿಯಲ್ಲಿ ಐದಾರು ಚಿತ್ರಗೀತೆಗಳನ್ನು ಪ್ರಸಾರ ಮಾಡಿದರೆನ್ನಿ. ಒಳ್ಳೊಳ್ಳೆಯ ಹಾಡುಗಳೇ. ನಮಗೆ ಗೊತ್ತಿರುವಂಥವು ಮತ್ತು ಇಷ್ಟವಾದಂಥವೇ. ಅವುಗಳನ್ನು ಆನಂದಿಸುತ್ತೇವೆ ಕೂಡ. ಆದರೆ ಅವೇ ಹಾಡುಗಳು ಆಕಾಶವಾಣಿಯಿಂದಲೇ ಯಾವುದೋ ವಿಶೇಷ ಕಾರ್ಯಕ್ರಮ ದಲ್ಲಿ, ಯಾವುದಾದರೂ ಕಲಾವಿದರ ಅಥವಾ ಸಾಧಕರ ಸಂದರ್ಶನದ ಭಾಗವಾಗಿ, ಅಥವಾ ಹಾಡಿನ ಅರ್ಥ, ಹಿನ್ನೆಲೆ, ಸಂದರ್ಭ ಮತ್ತಿತರ ಸ್ವಾರಸ್ಯಕರ ಸಂಗತಿಗಳಿರುವ ನಿರೂಪಣೆಯೊಂದಿಗೆ ಪ್ರಸಾರ ಆದುವೆನ್ನಿ ಆಗ ನಾವು ಅವುಗಳನ್ನು ಆನಂದಿಸುವ ರೀತಿಯೇ ಬೇರೆ!
ಸೈನಿಕರಿಗೆಂದೇ ವಿವಿಧ ಭಾರತಿಯಿಂದ ಪ್ರಸಾರವಾಗುವ ಜಯಮಾಲಾ ಕಾರ್ಯಕ್ರಮದಲ್ಲೂ ಹಾಗೆಯೇ. ಮಿಕ್ಕ ದಿನಗಳಲ್ಲಿ ಸೈನಿಕರ ಕೋರಿಕೆಗೀತೆಯಾಗಿ ಪ್ರಸಾರವಾಗುವ ಯಾವುದೋ ಹಾಡು, ಶನಿವಾರದಂದು ಜಾನೇ ಮಾನೇ ಹಸ್ತಿಯೊಬ್ಬರು -ಜಿಭಾಯಿಯರನ್ನು ಉದ್ದೇಶಿಸಿ ಆತ್ಮೀಯವಾಗಿ ಸುಖದುಃಖ ಹಂಚಿಕೊಳ್ಳುತ್ತ ಪ್ರಸ್ತುತಪಡಿಸುವ ‘ವಿಶೇಷ ಜಯಮಾಲಾ’ದಲ್ಲಿ ಪ್ರಸಾರವಾದರೆ ಅದರ ಮಾಧುರ್ಯವೇ ಬೇರೆ! ಇದೇ ಮಾತು ಅಮೀನ್ ಸಯಾನಿ ಪ್ರಸ್ತುತಪಡಿಸುತ್ತಿದ್ದ ಬಿನಾಕಾ ಗೀತಮಾಲಾಗೂ ಅನ್ವಯಿಸುತ್ತದೆ. ಸಮಯದ ಮಿತಿಯಿಂದಾಗಿ ಬೇಕಿದ್ದರೆ ಪಲ್ಲವಿಯನ್ನಷ್ಟೇ ಪ್ಲೇ ಮಾಡಲಿ, ಆದರೂ ಬೇರೆಡೆ ಇಡಿಯಾಗಿ ಕೇಳಿದಾಗಿನದಕ್ಕಿಂತ ಆ ಹಾಡು ಅತಿಮಧುರ ಎನಿಸಿರುತ್ತದೆ!
ತಾತ್ಪರ್ಯವೇನೆಂದರೆ ಅಂಥದೊಂದು ನಿರೂಪಣೆ ಅಥವಾ ವಿವರಣೆಯು ಹಾಡುಗಳೆಂಬ ಕರಿಮಣಿ ಸರದಲ್ಲಿ ಕೆಂಪು ಹವಳದ ಕೆಲಸವನ್ನು ಮಾಡಿರುತ್ತದೆ. ನಿರೂಪಣೆಯಿಂದಾಗಿ ಹಾಡಿನ ಮಾಧುರ್ಯ ಹೆಚ್ಚಿರುತ್ತದೆ; ಹಾಡುಗಳಿಂದಾಗಿ ನಿರೂಪಣೆಯ (ಸಂವಾದ, ಸಂದರ್ಶನ, ಒಟ್ಟಾರೆ ಯಾಗಿ ಆ ತೆರನಾದ ಮಾತುಗಾರಿಕೆಯ) ಮೆರುಗು ಹೆಚ್ಚಾಗಿರುತ್ತದೆ.
ಒಂದರ ಮೌಲ್ಯವು ಮತ್ತೊಂದರ ಹಿನ್ನೆಲೆಯಲ್ಲಿ ಮತ್ತಷ್ಟು ಎದ್ದು ಕಾಣುತ್ತದೆ. ವಾಗ್ಮಿ ಹಾಸ್ಯಪಟು ಪ್ರೊ.ಕೃಷ್ಣೇಗೌಡರು ಮತ್ತು ಗಾಯಕಿ ನಾಗಚಂದ್ರಿಕಾ ಭಟ್ ಕೆಲ ವರ್ಷಗಳ ಹಿಂದೆ ಇಲ್ಲಿ ಅಮೆರಿಕ ದಲ್ಲಿ ನಡೆಸಿಕೊಟ್ಟಿದ್ದ ‘ಭಾವಗಾನ ರಸಧಾರೆ’ ಎಂಬ ಕಾರ್ಯಕ್ರಮ ನನಗಿಲ್ಲಿ ನೆನಪಾಗುತ್ತಿದೆ.
ನಾಗಚಂದ್ರಿಕಾ ಭಟ್ ಒಂದಕ್ಕಿಂತ ಒಂದು ಚಂದದ ಕನ್ನಡ ಭಾವಗೀತೆಗಳನ್ನು ಹಾಡುತ್ತಿದ್ದರೆ ಕೃಷ್ಣೇಗೌಡರಿಂದ ಒಂದೊಂದು ಗೀತೆಗೂ ಕನಿಷ್ಠ ಎಂಟ್ಹತ್ತು ನಿಮಿಷಗಳ ರಸವತ್ತಾದ ವ್ಯಾಖ್ಯಾನ. ಕೆ.ಎಸ್ ನರಸಿಂಹಸ್ವಾಮಿಯವರ ‘ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ...’ ಭಾವಗೀತೆಯ ವ್ಯಾಖ್ಯಾನವನ್ನಂತೂ ನಾನೆಂದಿಗೂ ಮರೆಯಲಾರೆ. ಅಂತೆಯೇ ಬೇಂದ್ರೆಯವರ ‘ನೀ ಹೀಂಗ ನೋಡಬೇಡ ನನ್ನ...’ ಈಗ ನಾನು ಅವೆಲ್ಲ ಹಾಡುಗಳನ್ನು ಕೇಳಿ ಆನಂದಿಸುವ ರೀತಿಯೇ ಬೇರೆ ಸ್ತರಕ್ಕೇರಿದೆ. ಕಾರಣ, ಕರಿಮಣಿ ಸರದೊಳ್ ಚೆಂಬವಳಮಂ ಕೋದಂತೆ ಆಗಿರುವುದು.
ವಿಜಯಕರ್ನಾಟಕ ಪತ್ರಿಕೆಯಲ್ಲಿ ಮಣಿಕಾಂತ್ ಬರೆಯುತ್ತಿದ್ದ ‘ಹಾಡು ಹುಟ್ಟಿದ ಸಮಯ’ ಅಂಕಣವನ್ನೂ ಇಲ್ಲಿ ಉಲ್ಲೇಖಿಸಲೇಬೇಕು. ಭಕ್ತಕುಂಬಾರ ಚಿತ್ರದ ‘ಮಾನವ ಮೂಳೆ ಮಾಂಸದ ತಡಿಕೆ...’ ಹಾಡನ್ನು ಅದುವರೆಗೆ ಕೇಳಿದ್ದಕ್ಕೂ, “ಹುಣಸೂರು ಕೃಷ್ಣಮೂರ್ತಿಯವರು ಯೋಚನಾ ಮಗ್ನರಾಗಿ ಸಿಗರೇಟ್ ಸೇದುತ್ತಿದ್ದಾಗ ಅದು ಅವರ ಕೈಬೆರಳ ಚರ್ಮಕ್ಕೇ ಬಿಸಿ ಮುಟ್ಟಿಸಿದಾಗ ಅವರಿಗೆ ಹೊಳೆದ ಸಾಲುಗಳು ಅವು" ಎಂದು ಆ ಅಂಕಣದಲ್ಲಿ ಓದಿದ ನಂತರ ಕೇಳುತ್ತಿರುವುದಕ್ಕೂ ಗಾಢ ವ್ಯತ್ಯಾಸ.
ಹೀಗೆಯೇ ಕರಿಮಣಿ ಸರದೊಳ್ ಚೆಂಬವಳದ ಮತ್ತೊಂದು ಸ್ಮರಣೀಯ ಅನುಭವ ನನಗಾದದ್ದು ಬೆಂಗಳೂರಿನ ವೃತ್ತಿಪರ ನಾಟಕತಂಡವೊಂದು ಇಲ್ಲಿ ಪ್ರದರ್ಶಿಸಿದ ‘ಸತ್ತವರ ನೆರಳು’ ನಾಟಕವನ್ನು ವೀಕ್ಷಿಸಿದಾಗ. ಅದರಲ್ಲಿ ಕಥೆಯ ಗತಿಗೆ ತಕ್ಕಂತೆ ಪುರಂದರದಾಸರ ಕೀರ್ತನೆಗಳನ್ನು ಅಳವಡಿಸಿಕೊಳ್ಳಲಾಗಿದೆಯೋ ಅಥವಾ ಅಂಥದೊಂದು ಕಥೆಗಾಗಿಯೇ ಪುರಂದರ ದಾಸರು ಅವೆಲ್ಲ ಕೀರ್ತನೆ ಗಳನ್ನು ಸಾಲುಸಾಲಾಗಿ ರಚಿಸಿದರೋ ಈಗಲೂ ನನಗೊಂದು ಒಗಟೇ.
ನಾವು ಅಷ್ಟೇನೂ ಗಮನಿಸುವುದಿಲ್ಲ ಅನ್ನುವುದನ್ನು ಬಿಟ್ಟರೆ- ಕೇಳುವ ಕಿವಿಯಿರಲು ನೋಡುವ ಕಣ್ಣಿರಲು ಎಲ್ಲೆಲ್ಲೂ ಸಂಗೀತವೇ ಎಲ್ಲೆಲ್ಲೂ ಸೌಂದರ್ಯವೇ ಎನ್ನುವಂತೆ ಕರಿಮಣಿ ಸರದೊಳ್ ಚೆಂಬವಳಮಂ ಕೋದ ನಿದರ್ಶನಗಳು ಹೆಜ್ಜೆಹೆಜ್ಜೆಗೂ ಸಿಗುತ್ತವೆ. ಕಡುಗಪ್ಪು ಮೋಡಗಳ ಹಿನ್ನೆಲೆಯಲ್ಲಿ ಹೊಳೆಯುವ ಬಿಳಿ ಮಿಂಚು ಮೂಡಿದಾಗಿನ ದೃಶ್ಯವೈಭವದಲ್ಲಿ; ದಟ್ಟವಾದ ಹಸಿರು ಕಾಡಿನ ನಡುವೆ ಅಲ್ಲೊಂದು ಇಲ್ಲೊಂದು ಕೆಂಪು ಹೂವಿನ ಮರಗಳಲ್ಲಿ; ಹಿಮದಿಂದ ಆವೃತವಾದ ಬಿಳಿ ಬೆಟ್ಟಗಳ ಹಿನ್ನೆಲೆಯಲ್ಲಿ ಮುಂಜಾನೆಯ ಕೆಂಪು-ಕಿತ್ತಳೆ ಬಣ್ಣದ ಸೂರ್ಯನ ಕಿರಣಗಳಲ್ಲಿ; ಹಸಿರು ಬೆಟ್ಟಗಳ ಮೇಲೆ ಮಂಜಿನ ಮುಸುಕು ಕಣಿವೆಯನ್ನೆಲ್ಲ ಕವಿದಾಗ ಇಮ್ಮಡಿಗೊಳ್ಳುವ ಸೌಂದರ್ಯದಲ್ಲಿ; ಅಮಾವಾಸ್ಯೆಯ ರಾತ್ರಿಯಲ್ಲಿ ಇಡೀ ಆಕಾಶ ಕಪ್ಪಗಿದ್ದರೂ, ಅದರಲ್ಲಿ ಅಲ್ಲಲ್ಲಿ ಮಿನುಗುವ ನಕ್ಷತ್ರಗಳಲ್ಲಿ.
ಚಂದ್ರನಿರುವ ರಾತ್ರಿಗಳಾದರೂ ಅಷ್ಟೇ- ಕತ್ತಲ ರಾತ್ರಿಯಲ್ಲಿ ಕೇವಲ ಚಂದ್ರನಿಗಿಂತ ಸುತ್ತಲೂ ಮಿನುಗುವ ನಕ್ಷತ್ರಗಳಿದ್ದಾಗ ಚಂದ್ರನ ಸೌಂದರ್ಯ ಮತ್ತು ಆಕಾಶದ ಅಂದ ಹೆಚ್ಚುತ್ತದೆ. ಮೈಲಿಗಟ್ಟಲೆ ಚಾಚಿಕೊಂಡಿ ರುವ ಒಣಗಿದ, ಹಳದಿ ಬಣ್ಣದ ಮರಳಿನ ಹಿನ್ನೆಲೆಯಲ್ಲಿ, ನಡುವೆ ಕಾಣಿಸುವ ಹಸಿರು ಗಿಡಗಳು ಹಾಗೂ ನೀರಿನ ‘ಝಳಕೊಳ’(ಓಯಸಿಸ್)ದಲ್ಲಿ. ಮಳೆ ಹನಿಗಳು ಒಣಗಿದ ನೆಲಕ್ಕೆ ಬಿದ್ದಾಗ ಸೃಷ್ಟಿಯಾಗುವ ಮಣ್ಣಿನ ಸುಗಂಧದಿಂದಾಗಿ ಮಳೆಯನ್ನು ಸವಿಯುವ ಅನುಭವ ಮತ್ತಷ್ಟು ಸುಂದರ.
ಪ್ರಕೃತಿಯನ್ನು ನೋಡಿ ಕಲಿತು ಮನುಷ್ಯನು ಮಾಡಿಕೊಂಡಿರುವಂಥವೂ ಬೇಕಾದಷ್ಟಿವೆ. ಯಾವುದೇ ಒಂದು ವಸ್ತುವಿನ ನೈಜ ಸೌಂದರ್ಯ ಅಥವಾ ಮೌಲ್ಯ ತಿಳಿಯಬೇಕಾದರೆ, ತದ್ವಿರುದ್ಧ ವಾದ ಅಥವಾ ವಿಭಿನ್ನವಾದ ಹಿನ್ನೆಲೆ ಇರಬೇಕಾಗುತ್ತದೆ. ಉದಾಹರಣೆಗೆ ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಂಟ್ರಾಸ್ಟ್ ಬಣ್ಣಗಳ ಬಳಕೆ. ಸರಳವಾದ ಬಿಳಿ ಸೀರೆಗೆ ಗಾಢವಾದ ಕೆಂಪು ಅಥವಾ ಬಂಗಾರದ ಅಂಚು ಸೇರಿದಾಗ ಅದರ ಗಾಂಭೀರ್ಯವೇ ಬದಲಾಗುತ್ತದೆ. ಕೇವಲವಾದೊಂದು ರೇಖಾಚಿತ್ರಕ್ಕೆ ಸೂಕ್ತವಾದ ಬಣ್ಣಗಳು ಸೇರಿದಾಗ ಆ ಕಲಾಕೃತಿ ಜೀವಂತವಾಗಿ ಕಂಗೊಳಿಸುತ್ತದೆ. ಚಿತ್ರಕಲಾವಿದನು ದೀಪದ ಬೆಳಕನ್ನು ಗಾಢವಾಗಿ ತೋರಿಸಬೇಕಾದರೆ, ಅದರ ಸುತ್ತಲಿನ ಹಿನ್ನೆಲೆಯನ್ನು ಅತಿ ಹೆಚ್ಚು ಕಪ್ಪಾಗಿಸುತ್ತಾನೆ. ಕತ್ತಲೆಯ ಹಿನ್ನೆಲೆ ಎಷ್ಟು ಗಾಢವಾಗಿರುತ್ತದೆಯೋ, ಬೆಳಕು ಅಷ್ಟೇ ಪ್ರಖರವಾಗಿ ಕಣ್ಣಿಗೆ ಕಟ್ಟುತ್ತದೆ.
ಕಾದಂಬರಿಕಾರನು ಖಳನಾಯಕನ ಪಾತ್ರವನ್ನು ಎಷ್ಟು ಕ್ರೂರವಾಗಿಸುತ್ತಾನೋ, ನಾಯಕನ ಧರ್ಮ ಮತ್ತು ಸದ್ಗುಣಶೀಲತೆ ಅಷ್ಟೇ ಪ್ರಭಾವಶಾಲಿಯಾಗಿ ಮೂಡಿಬರುತ್ತವೆ. ಅಂತೆಯೇ ಕವಿಯು ಕಾವ್ಯದಲ್ಲಿ ಗಂಭೀರವಾದ ಸಾಲುಗಳ ನಡುವೆ ಚಮತ್ಕಾರದ ನುಡಿಗಳನ್ನು ಪೋಣಿಸುತ್ತಾನೆ. ಕರುಣ ರಸದ ನಂತರ ಬರುವ ಶೃಂಗಾರ ಅಥವಾ ಆನಂದದ ಸಾಲುಗಳು ಓದುಗನ ಮನಸ್ಸಿಗೆ ಕಚಗುಳಿ ಯಿಡುತ್ತವೆ, ಅಪಾರ ಮುದ ನೀಡುತ್ತವೆ.
ಸದಾ ಗದ್ದಲವಿರುವ ಜಾಗದಲ್ಲಿ ಮಾತಿಗೆ ಬೆಲೆ ಇರುವುದಿಲ್ಲ; ಆದರೆ ಗಂಭೀರವಾದ ಮೌನದ ಹಿನ್ನೆಲೆಯಲ್ಲಿ ಆಡುವ ಒಂದು ಸಣ್ಣ ಮಾತು ಕೂಡ ಇಡೀ ಸಭೆಯನ್ನು ಸೆರೆಹಿಡಿಯುತ್ತದೆ. ಇನ್ನು, ಪರಸ್ಪರ ಪೂರಕ ಸನ್ನಿವೇಶಗಳಲ್ಲೂ ಒಂದರ ಸೌಂದರ್ಯವನ್ನು ಇನ್ನೊಂದು ಹೆಚ್ಚಿಸಿತು ಅಂತನಿಸುವುದಿದೆ. ನೃತ್ಯಗಾರ್ತಿಯ ಮುಖಭಾವ ಹಸ್ತಮುದ್ರೆಗಳು ಆಂಗಿಕ ಅಭಿನಯದೊಡನೆ ಆಕೆಯ ಪೋಷಾಕಿನ ಸೌಂದರ್ಯ ಮತ್ತು ಗೆಜ್ಜೆಗಳ ನಾದ ಸೇರಿದಾಗ ನೃತ್ಯಕ್ಕೆ ಕಳೆ ಏರಿದಂತೆ.
ಕೇವಲ ಬರೆದ ಕವಿತೆಗಿಂತ, ಅದಕ್ಕೆ ಉತ್ತಮ ಸಂಗೀತ ಮತ್ತು ರಾಗ ಸೇರಿದಾಗ ಆ ಹಾಡು ಜನರ ಮನಸ್ಸನ್ನು ಆಳವಾಗಿ ಮುಟ್ಟಿದಂತೆ. ವ್ಯಕ್ತಿಯ ಉತ್ತಮ ನಡವಳಿಕೆ ಮತ್ತು ವಿನಯವು ವ್ಯಕ್ತಿತ್ವದ ಸೌಂದರ್ಯವನ್ನು ಇಮ್ಮಡಿಗೊಳಿಸಿದಂತೆ. ಸುಂದರವಾದ ಹೂವಿನ ಮೇಲೆ ಕುಳಿತಿರುವ ಚಿಟ್ಟೆಯಂತೆ. ರುಚಿಯಾದ ಅಡುಗೆಗೆ ಸಂಪ್ರದಾಯದ ಒಗ್ಗರಣೆ ಸೇರಿದಾಗ ಅದರ ಘಮ ಮತ್ತು ಸವಿಯಬೇಕೆಂಬ ಆಸೆಯೂ ಹೆಚ್ಚಿದಂತೆ.
ಇಷ್ಟೆಲ್ಲವೂ ನನ್ನ ಚಿತ್ತಭಿತ್ತಿಯಲ್ಲಿ ಹಾದುಹೋಗಿದ್ದು ಅಮೆರಿಕನ್ ಲೇಖಕಿ/ಸಸ್ಯಶಾಸ್ತ್ರಜ್ಞೆ ರಾಬಿನ್ ವಾಲ್ ಕಿಮ್ಮರರ್ ಎಂಬಾಕೆಯು ಬರೆದ Braiding Sweetgrass ಪುಸ್ತಕವನ್ನು, ಅದರಲ್ಲೂ Asters and Goldenrod ಎಂಬ ಚಿಕ್ಕದೊಂದು ಅಧ್ಯಾಯವನ್ನು ಓದಿದಾಗ. ಪ್ರಕೃತಿಯ ಸೌಂದರ್ಯ, ವಿಜ್ಞಾನ ಮತ್ತು ಸ್ಥಳೀಯ ಜ್ಞಾನದ ನಡುವಿನ ಸಮನ್ವಯದ ಆವಶ್ಯಕತೆಯನ್ನು ಇದು ಮನೋಜ್ಞ ವಾಗಿ ವಿವರಿಸುತ್ತದೆ.
ವಿಜ್ಞಾನ ಮತ್ತು ಸಾಂಪ್ರದಾಯಿಕ ದೃಷ್ಟಿಕೋನಗಳು ಪರಸ್ಪರ ವಿರೋಧಿಗಳಲ್ಲದೆ, ಒಟ್ಟಿಗೆ ಸೇರಿ ಪ್ರಕೃತಿ ಯನ್ನು ಮತ್ತಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ ಎಂದು ಈ ಲೇಖಕಿಯ ಪ್ರತಿಪಾದನೆ. ಈಕೆಯ ಪ್ರಗಾಢ ಚಿಂತನೆಯ ಕೆಲ ಮುಖ್ಯಾಂಶಗಳನ್ನು ಕನ್ನಡೀಕರಿಸಿ ಇಲ್ಲಿ ದಾಖಲಿಸಿದ್ದೇನೆ:
“ಆಸ್ಟರ್ಸ್ ಮತ್ತು ಗೋಲ್ಡನ್‌ರಾಡ್ ಸಸ್ಯಗಳು ಒಟ್ಟಿಗೆ ಬೆಳೆದಾಗ ಏಕೆ ಅಷ್ಟೊಂದು ಸುಂದರವಾಗಿ ಕಾಣುತ್ತವೆ ಎಂದು ತಿಳಿಯಲು ನಾನು ಸಸ್ಯಶಾಸವನ್ನು ಆರಿಸಿಕೊಂಡೆ. ಪ್ರಪಂಚವು ಏಕೆ ಇಷ್ಟೊಂದು ಸುಂದರವಾಗಿದೆ? ಇದು ಸುಲಭವಾಗಿ ಬೇರೆ ರೀತಿಯೂ ಇರಬಹುದಿತ್ತು. ಹೂವುಗಳು ನಮಗೆ ಅಸಹ್ಯವಾಗಿ ಕಂಡುಬಂದಿದ್ದರೂ ಅವು ತಮ್ಮದೇ ಆದ ಉದ್ದೇಶವನ್ನು ಪೂರೈಸಬಹುದಿತ್ತು. ಆದರೆ ಅವು ಹಾಗಿಲ್ಲ. ಚಿನ್ನದ ಬಣ್ಣದ ಗೋಲ್ಡನ್‌ರಾಡ್ ಮತ್ತು ಕಡುನೇರಳೆ ಬಣ್ಣದ ಆಸ್ಟರ್ಸ್ ಹೂವುಗಳು ಜೇನುನೊಣಗಳ ಕಣ್ಣುಗಳಿಗೆ, ಮನುಷ್ಯರ ಕಣ್ಣುಗಳಿಗೂ ಆಕರ್ಷಕವಾಗಿಯೇ ಕಾಣಿಸುತ್ತವೆ.
ಪ್ರತ್ಯೇಕವಾಗಿ ಅವು ಸುಂದರವೆಂದೇ ನಾವು ಭಾವಿಸುತ್ತೇವೆ. ಆದರೆ ಅವು ಒಟ್ಟಿಗೆ ಬೆಳೆದಾಗ ಉಂಟಾಗುವ ಅವುಗಳ ಆಕರ್ಷಕ ವ್ಯತ್ಯಾಸವು (ಕಾಂಟ್ರಾಸ್ಟ್), ಇಡೀ ಹುಲ್ಲುಗಾವಲಿನಲ್ಲಿ ಅವುಗಳನ್ನು ಅತ್ಯಂತ ಆಕರ್ಷಣೀಯ ಗುರಿಯನ್ನಾಗಿ ಮಾಡುತ್ತದೆ ಮತ್ತು ಜೇನುನೊಣಗಳಿಗೆ ದಾರಿದೀಪದಂತೆ ಕಾಣುತ್ತದೆ. ಒಟ್ಟಿಗೆ ಬೆಳೆಯುವುದರಿಂದ, ಅವು ಒಂಟಿಯಾಗಿ ಬೆಳೆದಾಗ ಸಿಗುವುದಕ್ಕಿಂತ ಹೆಚ್ಚಿನ ಪರಾಗಸ್ಪರ್ಶಕಗಳ ಭೇಟಿಯನ್ನು ಪಡೆಯುತ್ತವೆ.
ಸೆಪ್ಟೆಂಬರ್ ತಿಂಗಳಲ್ಲಿ ಆ ನೇರಳೆ ಮತ್ತು ಚಿನ್ನದ ಬಣ್ಣದ ಜೋಡಿಯು ಪರಸ್ಪರ ವಿನಿಮಯ ಭಾವದ ಜ್ವಲಂತ ಉದಾಹರಣೆಯಾಗುತ್ತದೆ. ಒಂದರ ಸೌಂದರ್ಯವು ಮತ್ತೊಂದರ ಪ್ರಕಾಶದಿಂದ ಪ್ರಖರಗೊಳ್ಳುತ್ತದೆ ಎಂಬುದೇ ಇದರ ಜಾಣ್ಮೆ. ನಾನು ಅವುಗಳ ಸಮ್ಮುಖದಲ್ಲಿದ್ದಾಗ, ಅವುಗಳ ಸೌಂದರ್ಯವು ನನ್ನಿಂದಲೂ ಅಂತಹದೇ ಆದ ಪರಸ್ಪರ ಸ್ಪಂದನವನ್ನು ಬಯಸುತ್ತದೆ. ಆ ಹೂವುಗಳಿಗೆ ಹಳದಿ-ನೇರಳೆ ಬಣ್ಣಗಳು ಪರಸ್ಪರ ಪೂರಕವಾದಂತೆ, ಪ್ರತಿಯಾಗಿ ನಾನೂ ಈ ಪ್ರಕೃತಿಗೆ ಸರಿಹೊಂದುವ ಏನೋ ಸುಂದರವಾದುದನ್ನು ಮಾಡಬೇಕು ಎಂಬ ಪ್ರೇರಣೆಯನ್ನು ನೀಡುತ್ತದೆ.
ಗೋಲ್ಡನ್‌ರಾಡ್ ಮತ್ತು ಆಸ್ಟರ್ಸ್ ಹೂವುಗಳಂತೆಯೇ ವಿಜ್ಞಾನ ಮತ್ತು ಕಲೆ, ವಸ್ತು ಮತ್ತು ಆತ್ಮ, ಸ್ಥಳೀಯ/ಆದಿವಾಸಿ ಜ್ಞಾನ ಮತ್ತು ಪಾಶ್ಚಾತ್ಯ ವಿಜ್ಞಾನ- ಇವು ಕೂಡ ಪರಸ್ಪರ ಪೂರಕವಾಗಿ ಇರಬೇಕಲ್ಲವೇ? ಪರಸ್ಪರ ವಿನಿಮಯದ ನೈತಿಕ ಒಪ್ಪಂದವು, ಪ್ರಕೃತಿಯಿಂದ ನಾವು ಪಡೆದುಕೊಂಡ ಎಲ್ಲದಕ್ಕೂ ನಮ್ಮ ಜವಾಬ್ದಾರಿಗಳನ್ನು, ನಮ್ಮ ಕರ್ತವ್ಯಗಳನ್ನು ನಮಗೆ ನೆನಪಿಸುತ್ತದೆ. ಈಗ ನಮ್ಮ ಸರದಿ. ನಿಜವಾಗಿ ಇದು ಬಹಳ ದಿನಗಳಿಂದ ಬಾಕಿ ಉಳಿದಿದೆ.
ನಾವು ಭೂಮಿತಾಯಿಗೆ ಒಂದು ಕೊಡುಗೆಯನ್ನು ನೀಡೋಣ. ಅವಳಿಗಾಗಿ ನಮ್ಮ ಹೊದಿಕೆಗಳನ್ನು ಹಾಸಿ, ನಾವು ಸ್ವತಃ ತಯಾರಿಸಿದ ಉಡುಗೊರೆಗಳನ್ನು ಅಲ್ಲಿ ರಾಶಿ ಹಾಕೋಣ. ಪುಸ್ತಕಗಳು, ವರ್ಣ ಚಿತ್ರಗಳು, ಕವಿತೆಗಳು, ಚತುರಯಂತ್ರಗಳು, ಕರುಣೆಯ ಕೆಲಸಗಳು, ಅತಿಮಾನುಷ ಆಲೋಚನೆಗಳು, ಪರಿಪೂರ್ಣ ಸಾಧನಗಳು, ನಮಗೆ ನೀಡಲಾಗಿರುವ ಎಲ್ಲದರ ತೀವ್ರ ರಕ್ಷಣೆ... ಇತ್ಯಾದೀತ್ಯಾದಿ. ಭೂಮಿತಾಯಿಗೆ ನಾವು ಅರ್ಪಿಸಬೇಕಾದ್ದು ನಮ್ಮ ಮನಸ್ಸನ್ನು, ಕೆಲಸ ಮಾಡುವ ಕೈಗಳನ್ನು, ಹೃದಯ, ಧ್ವನಿ ಮತ್ತು ದೂರದೃಷ್ಟಿ ಯನ್ನು. ನಮ್ಮ ಉಡುಗೊರೆ ಏನೇ ಇರಲಿ, ಅದನ್ನು ನೀಡಲು ಮತ್ತು ಪ್ರಪಂಚದ ನವೀಕರಣಕ್ಕಾಗಿ ಹೆಜ್ಜೆಯಿಡಲು ನಮಗೆ ಕರೆ ಬಂದಿದೆ. ನಮಗೆ ಸಿಕ್ಕಿರುವ ಉಸಿರಾಟದ ಸುಯೋಗಕ್ಕೆ ಪ್ರತಿಯಾಗಿ."