Srivathsa Joshi Column: ಇದೊಂದು ರೀತಿಯಲ್ಲಿ ರಂಜನೀಯ ರಂಧ್ರಾನ್ವೇಷಣೆ
ಸದಾ ಗೊಣಗುವುದು, ವ್ಯಂಗ್ಯವಾಡುವುದು, ಸಣ್ಣಪುಟ್ಟ ತಪ್ಪುಗಳನ್ನೂ ಭೂತಗನ್ನಡಿ ಹಿಡಿದು ನೋಡುವುದು, ನೆಗೆಟಿವ್ ಆಗಿ ವಿಮರ್ಶಿಸುವುದು ಅವರ ಜಾಯಮಾನ. ಮೈಮನವೆಲ್ಲ ತುಂಬಿ ತುಳುಕುವ ಸಿನಿಕತನ. ‘ಕೂಟವನ್ನು ಕೊಲ್ಲುವುದು ಹೇಗೆ?’ ಎಂಬ ಹಾಸ್ಯಲೇಖನವೊಂದರಲ್ಲಿ ಅಮೆರಿಕ ನ್ನಡಿಗ ಲೇಖಕ ಡಾ.ಮೈ.ಶ್ರೀ ನಟರಾಜ ಇದನ್ನು ಚೆನ್ನಾಗಿ ಲೇವಡಿ ಮಾಡಿದ್ದಾರೆ.
-
ತಿಳಿರುತೋರಣ
ಅರ್ಥ ಬಿಡಿಸಿ ಹೇಳುವುದಾದರೆ- ರಂಧ್ರ ಎಂದರೆ ದೋಷ ಅಥವಾ ಏನೋ ಒಂದು ನ್ಯೂನತೆ; ಅನ್ವೇಷಣೆ ಎಂದರೆ ಹುಡುಕುವುದು. ಇತರರ ಕೆಲಸದಲ್ಲಿ, ಮಾತಿನಲ್ಲಿ, ಅಥವಾ ವ್ಯಕ್ತಿತ್ವದಲ್ಲಿ ಬೇಕಂತಲೇ ತಪ್ಪು ಗಳನ್ನು ಹುಡುಕುವ, ಹುಳುಕು ಕಂಡುಹಿಡಿಯುವ ಪ್ರವೃತ್ತಿ. ಅಂತಹ ಸ್ವಭಾವ ವುಳ್ಳವರನ್ನು ರಂಧ್ರಾನ್ವೇಷಿ ಎಂದು ಕರೆಯುವುದಿದೆ. ಅವರು ಯಾವುದರಲ್ಲೂ ಒಳ್ಳೆಯದನ್ನು ಕಾಣಲಾರರು.
ಸದಾ ಗೊಣಗುವುದು, ವ್ಯಂಗ್ಯವಾಡುವುದು, ಸಣ್ಣಪುಟ್ಟ ತಪ್ಪುಗಳನ್ನೂ ಭೂತಗನ್ನಡಿ ಹಿಡಿದು ನೋಡುವುದು, ನೆಗೆಟಿವ್ ಆಗಿ ವಿಮರ್ಶಿಸುವುದು ಅವರ ಜಾಯಮಾನ. ಮೈಮನವೆಲ್ಲ ತುಂಬಿ ತುಳುಕುವ ಸಿನಿಕತನ. ‘ಕೂಟವನ್ನು ಕೊಲ್ಲುವುದು ಹೇಗೆ?’ ಎಂಬ ಹಾಸ್ಯಲೇಖನವೊಂದರಲ್ಲಿ ಅಮೆರಿಕನ್ನಡಿಗ ಲೇಖಕ ಡಾ.ಮೈ.ಶ್ರೀ ನಟರಾಜ ಇದನ್ನು ಚೆನ್ನಾಗಿ ಲೇವಡಿ ಮಾಡಿದ್ದಾರೆ.
“ಕೂಟದವರು ಕಾರ್ಯಕ್ರಮವೊಂದನ್ನು ಏರ್ಪಡಿಸಿದರೆ, ಖಂಡಿತ ಹೋಗಿ. ಆದರೆ, ಬಿಟ್ಟಿ ಕೂಳಿದ್ದರೆ ಮಾತ್ರ. ಊಟದ ಸಮಯಕ್ಕೆ ಸರಿಯಾಗಿ ಹೋಗಿ, ಬೇರಾವ ಕಾರ್ಯಕ್ರಮದಲ್ಲೂ ನಿಮ್ಮ ಅಮೂಲ್ಯವಾದ ವೇಳೆಯನ್ನು ಹಾಳು ಮಾಡಿಕೊಳ್ಳದೇ ಉಪಾಯವಾಗಿ ಜಾರಿಕೊಳ್ಳಿ. ನಂತರ, ಬಿಸಿಬೇಳೆಭಾತ್ ಗೆ ಉಪ್ಪು ಕಮ್ಮಿ ಎಂತಲೋ ಬೋಂಡ ವಿಪರೀತ ಎಣ್ಣೆ ಕುಡಿದಿತ್ತು ಅಂತಲೋ, ಲಡ್ಡುವಿನಲ್ಲಿ ಲವಂಗ ಇರಲಿಲ್ಲ ವೆಂತಲೋ ಟೀಕಿಸುತ್ತಾ ಢರ್ರೆಂದು ತೇಗಿ." ಎಂದು ಬರೆದಿದ್ದಾರೆ.
ಅಂಥವರ ಚಿತ್ರಣ ಕಣ್ಮುಂದೆ ಬರಲು ಬಹುಶಃ ಇದಕ್ಕಿಂತ ಬೇರೆ ಬಣ್ಣನೆ ಬೇಕಿಲ್ಲ. ಒಂದು ವೇಳೆ ಬೇಕಂತಾ ದರೂ ಕಾಸಿಗೊಂದು ಕೊಸರಿಗೆರಡು ಸಿಗುವ ಮೋದಿದ್ವೇಷಿಗಳು ಇದ್ದಾರಲ್ಲ ಪಕ್ಕಾ ಉದಾಹರಣೆ. ಅವರಲ್ಲಿ ಒಬ್ಬೊಬ್ಬರೂ ಬೈ ಡೀ-ಲ್ಟ್ ರಂಧ್ರಾನ್ವೇಷಿಗಳೇ. ಅಂದಹಾಗೆ ‘ರಂಧ್ರಾ ನ್ವೇಷಣ’ ಪದ ಇತ್ತೀಚೆಗೆ ಬಳಕೆಗೆ ಬಂದದ್ದೇನಲ್ಲ. ಅದಕ್ಕೆ ಸುಸಂಸ್ಕ ತ ಇತಿಹಾಸವಿದೆ. ಕಾಳಿದಾ ಸನು ರಘುವಂಶ ಮಹಾಕಾವ್ಯದಲ್ಲಿ ಅದನ್ನು ಪ್ರಯೋಗಿಸಿದ್ದಾನೆ.
ಇದನ್ನೂ ಓದಿ: Srivathsa Joshi Column: ಅನಂತನಾಗ್ ಪಠಿಸಿದ ಆದಿಶಂಕರರ ಸಾಧನಾಪಂಚಕ
ತೀರ ಸಿನಿಕತನ ಪ್ರದರ್ಶಿಸುವವರ ಬಗ್ಗೆಯಲ್ಲ, ಕಾಳಿದಾಸ ಆ ಪದ ಬಳಸಿದ್ದು ಶತ್ರುಗಳನ್ನು ಕುರಿತಾಗಿ, “ವಿಪ್ರೋಷಿತಕುಮಾರಂ ತದ್ರಾಜ್ಯಮಸ್ತಮಿ ತೇಶ್ವರಮ್| ರಂಧ್ರಾನ್ವೇಷಣದಕ್ಷಾಣಾಂ ದ್ವಿಷಾಮಾಮಿಷತಾಂ ಯಯೌ|" ಎಂಬ ಶ್ಲೋಕದಲ್ಲಿ. ದಶರಥನು ಕೊನೆಯುಸಿರೆಳೆದ ಸಂದರ್ಭ ದಲ್ಲಿ ರಾಮ-ಲಕ್ಷ್ಮಣರು ವನವಾಸದಲ್ಲಿದ್ದರು, ಭರತ-ಶತ್ರುಘ್ನರೂ ಅವರ ಮಾವನ ಮನೆಯಲ್ಲಿ ದ್ದರು. ಅಂತಹ ಪರಿಸ್ಥಿತಿಯಲ್ಲಿ ಆಯೋಧ್ಯೆಯು ರಂಧ್ರಾನ್ವೇಷಣ ಧುರೀಣ ಶತ್ರುಗಳಿಗೆ ಕೊಳ್ಳೆ ಹೊಡೆಯಲಿಕ್ಕೆ ತೆರೆದ ಬಾಹುಗಳಿಂದ ಮುಕ್ತ ಆಹ್ವಾನ ನೀಡಿದಂತಿತ್ತು- ಎಂದು ಆ ಶ್ಲೋಕದ ಭಾವಾರ್ಥ.
ಶತ್ರುಗಳೆಂದರೆ ಹಾಗೆಯೇ ತಾನೆ? ಇಲಿ ಹೆಗ್ಗಣ ಜಿರಳೆಗಳಂತೆ ಎಲ್ಲಿ ನುಸುಳಲಿಕ್ಕೆ ಸಾಧ್ಯವಿದೆ ಯೆಂದು ಬಿರುಕುಗಳನ್ನು ಹುಡುಕುತ್ತ ಹೊಂಚುಹಾಕುತ್ತ ಇರುತ್ತಾರೆ. ಮೇಲೆ ಮೊದಲ ಪ್ಯಾರಗ್ರಾಫ್ʼ ನ ಕೊನೆಯಲ್ಲಿ ಪ್ರಸ್ತಾವವಾದವರೂ ಅಂಥವರೇ, ಜಿರಳೆಗಳಿಗೆ ಜೈಕಾರ ಹಾಕುವವರೇ ಎಂದು ನಮಗೆಲ್ಲ ಇತ್ತೀಚೆಗೆ ಗೊತ್ತಾಗಿದೆ. ಇರಲಿ, ರಂಧ್ರಾನ್ವೇಷಣೆಯ ನಿಜಾರ್ಥದ ವ್ಯಾಖ್ಯಾನ ಅಷ್ಟು ಸಾಕು. ಏಕೆಂದರೆ ನಾನಿಂದು ಹರಟಲಿಕ್ಕೆ ಹೊರಟಿದ್ದು ಆ ಬಗ್ಗೆಯಲ್ಲ. ಬದಲಿಗೆ ಬಹಳ ಉಪಯುಕ್ತತೆ ಯುಳ್ಳ ಆದರೆ ನಾವು ಅಷ್ಟಾಗಿ ಗಮನಿಸದೆ ಉಪೇಕ್ಷಿಸುವ ಕೆಲವು ಅತಿಸಾಮಾನ್ಯ ಅತಿವಿಶಿಷ್ಟ ರಂಧ್ರಗಳ ಬಗ್ಗೆ. ಆದ್ದರಿಂದಲೇ ಶೀರ್ಷಿಕೆಯಲ್ಲಿ ಇದೊಂದು ರಂಜನೀಯ ರಂಧ್ರಾನ್ವೇಷಣೆ ಎಂದಿ ದ್ದೇನೆ. ಅಂತೆಯೇ ಈ ಟಾಪಿಕ್ ನನಗೆ ಹೇಗೆ ಹೊಳೆಯಿತು ಎಂಬುದನ್ನೂ ವಿವರಿಸುತ್ತೇನೆ. ತನ್ಮೂಲಕ “ನಿಮಗೆ ಅಂಕಣಕ್ಕೆ ವಿಷಯಗಳು ಎಲ್ಲಿಂದ ಹೇಗೆ ಸಿಗುತ್ತವೆ?" ಎಂಬ ನಿತ್ಯಹರಿದ್ವರ್ಣ ಪ್ರಶ್ನೆಗೆ ಮತ್ತೊಮ್ಮೆ ಉತ್ತರಿಸುವ ಪ್ರಯತ್ನವನ್ನೂ ಮಾಡಿದಂತಾಗುತ್ತದೆ.
ಸರಿ, ಈಗ ಈ ಕೆಳಗಿನ ಪ್ಯಾರಗ್ರಾಫ್ ಅನ್ನು, ನನ್ನ ಸನ್ಮಿತ್ರರೊಬ್ಬರು ಮೊನ್ನೆ ನನಗೆ ಕಳುಹಿಸಿದ ಒಂದು ವಾಟ್ಸ್ಯಾಪ್ ಸಂದೇಶವನ್ನು ಯಥಾವತ್ತಾಗಿ ಅದರ ವರ್ಜಿನಲ್ ತ್ರಿಭಾಷಾ ಸ್ವರೂಪದಲ್ಲಿ ನಿಮ್ಮ ದೇಖಾವೆಗೆ ಒದಗಿಸಿದ್ದೇನೆ ಎಂಬ ಅರಿವಿನೊಂದಿಗೆ ಓದಿಕೊಳ್ಳಿ: “ಪ್ರತಿ ತಿಂಗಳು ಮೊದಲ ತೇದಿಯಂದು ನಾನು ಧನ್ಯವಾದ ಅರ್ಪಿಸುವುದು ಕೇಶವ ಕೃಷ್ಣ ಮೆಹೆಂದಳೆಯವರ ಮುಂದಾ ಲೋಚನೆಗೆ- ಹಿಂದಿನ ತಿಂಗಳ ಪಾನು ತಿರುವಿ ಕ್ಯಾಲೆಂಡರ್ ಅನ್ನು ಸರಿಯಾಗಿ ಜೋತು ಹಾಕಲು ಮಾಡಿದ ರಂಧ್ರ ವ್ಯವಸ್ಥೆಗೆ. ಈಗ ಎಷ್ಟು ಸುಲಭ!
ವರ್ಷಗಟ್ಟಲೆ ನಾನು ಅಲ್ಲಿಲ್ಲಿ ಹುಡುಕುತ್ತ ಯೋಗ್ಯ ಉಪಕರಣ ಸಿಗದೆ ಫೋರ್ಕಿನಿಂದ ಹಿಡಿದು ಸಿಕ್ಕ ಮೊಂಡ-ಚೂಪಾದ ಮೊಳೆಯಿಂದ ಪ್ರಯತ್ನ ಮಾಡಿ, ಕೈ ಚುಚ್ಚಿಸಿಕೊಂಡು ಸದ್ದಾಮುದ್ದಾ ತೂತು ಹೊಡೆದು ಹೇಗ್ಹೇಗೋ ಜಮಾಯಿಸುತಿದ್ದೆ, ಈ ಕೃಷ್ಣಾವತಾರ ಆಗುವವರೆಗೆ. ಅದಕ್ಕೆ ಅವರಿಗೆ ‘ರಂಧ್ರ ಧುರಂಧರ’ ಎನ್ನುವ ಬಿರುದು ಕೊಡಬೇಕೆಂದು ಲೆಸ್ಟರ್ ಕಮಿಟಿ ರೆಕಮೆಂಡ್ ಮಾಡಿದೆ!
ಪಂಚುಯೇಶನಿನಿಂದ ಪೇಪರ್‌ಪಂಚ್ ಕಡೆ ಲಕ್ಷ್ಯ ಹೊರಳಿದಾಗ- ಒಂದು ಲೋಟ ಪಂಚ್ ಕುಡಿದು ಬಿಡೋಣ ಎನಿಸಿತು. Thinking of it, even the Mokshagundam installed (I think so) ಬೆಂಗಳೂರು ಮುದ್ರಣಾಲಯ calendars (I buy every year or get it from someone) don’t have a hole even though the hanging loop is provided. I turn over every month and ditto above! ಚಿಕ್ಕವರಿದ್ದಾಗ ಪ್ರಸಿದ್ಧ ಹಿಂದಿ ಸಿನಿಮಾ ಹಾಡೊಂದಿತ್ತು: ಜೀವನ್‌ಮೇ ಏಕ ಬಾರ್ ಜಾನಾ ಸಿಂಗಾಪೂರ.
ಈಗ ತಾನೇ ಪಕ್ಕದ ಬಾಲಿಯಿಂದ ಬಂದಿದ್ದೇನೆ. ಈ ಕ್ಯಾಲೆಂಡರ್ ರಂಧ್ರದ ಗುಂಗಿನಲ್ಲಿ ಕಟ್ಟೇವು ಒಂದು ಧ್ಯೇಯವಾಕ್ಯ: ಬರಸ್ ಮೇ ಏಕ ಬಾರ್ ಡಾಲನಾ ಇಕ ಛೇದ!" ಈಗ ಇದನ್ನು ಪ್ರಥಮ ಭಾಷೆ ಕನ್ನಡ ಪರೀಕ್ಷೆಯಲ್ಲಿ ಐದು ಅಂಕಗಳಿಗೆ ಸಂದರ್ಭ ಸಹಿತ ವಿವರಿಸಿ ಪ್ರಶ್ನೆಗೆ ಉತ್ತರಿಸಿದಂತೆ ವಿವರಿಸುತ್ತೇನೆ. ಮೇಲಿನ ವಾಟ್ಸ್ಯಾಪ್ ಮೆಸೇಜನ್ನು ನನಗೆ ಕಳುಹಿಸಿದವರು ಡಾ.ಶ್ರೀವತ್ಸ ದೇಸಾಯಿ.
ಮೂಲತಃ ಯುಕೆ (ಉತ್ತರ ಕರ್ನಾಟಕ) ಪ್ರದೇಶದವರು, ಪ್ರಸ್ತುತ ಯುಕೆ (ಯುನೈಟೆಡ್ ಕಿಂಗ್ ಡಮ್) ನಿವಾಸಿ. ದೇಸಾಯಿ ಎಂದು ಸರಿಯಾಗಿ ಉಚ್ಚರಿಸಲಾರದ ಬ್ರಿಟಿಷ್ ಪ್ರಜೆಗಳ ‘ದಿಸ್ ಐ’ (ಮತ್ತು ದ್ಯಾಟ್ ಐ) ಎಡ-ಬಲ ಕಣ್ಣುಗಳೆರಡನ್ನೂ ತಪಾಸಿಸಿ, ಕುರುಡಿದ್ದರೆ ಸರಿಪಡಿಸಿ, ಕ್ಷೇಮವಾಗಿರಿಸಿ ನಿವೃತ್ತರಾದ ನೇತ್ರ ವೈದ್ಯರು. ಪ್ರವೃತ್ತಿಯಿಂದ ಅಕ್ಷರಮೋಹಿತರು. ನನಗೆ ವಿಚಿತ್ರಾನ್ನ ಕಾಲ (ಕಾಲಂ) ದಿಂದಲೂ ಪರಿಚಿತ ಹಿರಿಯಹಿತೈಷಿ. ನನ್ನ ಅಂಕಣಬರಹಗಳಲ್ಲೂ ಆಗಾಗ ಕಂಡು ಬಂದಿರುವವರೇ. ಅವರು ಈ ಮೆಸೇಜಿನಲ್ಲಿ ಬರೆದಿದ್ದು ತಿಳಿರುತೋರಣ ಅಂಕಣದ ಮೂಲಕವೇ ಮೂರು ವರ್ಷಗಳ ಹಿಂದೆ ಅವರಿಗೆ ಪರಿಚಯವಾಗಿ, ಈಗ ಪ್ರತಿವರ್ಷವೂ ಕೊಂಡುಕೊಳ್ಳುವ ‘ಭಾರತೀಯ ಪಂಚಾಂಗ ಕ್ಯಾಲೆಂಡರ್’ ಬಗ್ಗೆ. ಕೇಶವ ಕೃಷ್ಣ ಮೆಹೆಂದಳೆ ಆ ಕ್ಯಾಲೆಂಡರ್‌ನ ಕರ್ತೃ. ಮೂಲತಃ ನಮ್ಮೂರು ಮಾಳದವರು, ಈಗ ಉಡುಪಿ ನಿವಾಸಿ.
ಆ ಕ್ಯಾಲೆಂಡರ್‌ನಲ್ಲಿ ಗೋಡೆಗೆ ತೂಗು ಹಾಕಲಿಕ್ಕಿರುವ ನೂಲಿನ ಕೆಳಗಡೆ ವ್ಯವಸ್ಥಿತವಾಗಿ ಒಂದು ರಂಧ್ರ ಇರುವುದರಿಂದ ಪ್ರತಿ ತಿಂಗಳೂ ಪುಟ ತಿರುಗಿಸುವಾಗ ರಂಧ್ರದ ಮೂಲಕ ನೂಲಿನ ಉರುಳನ್ನು ಪೋಣಿಸಿ ಸರಿಯಾಗಿ ಬಳಸಲಿಕ್ಕೆ ಸುಲಭವಾಗಿದೆ ಎಂದು ದೇಸಾಯಿಯವರಿಗೆ ಖುಷಿ. ಅದನ್ನವರು ನನ್ನೊಡನೆ ಹಂಚಿಕೊಂಡ ರೀತಿಯಿದು. ಉಳಿದಂತೆ ಇದರಲ್ಲಿ ಬರುವ ಪಂಚುಯೇ ಶನ್ ವಿಷಯ ಮೂರು ವಾರಗಳ ಹಿಂದಿನ ಅಂಕಣದಲ್ಲಿ ಕಾಣಿಸಿಕೊಂಡಿದ್ದ ಹೂವಾಡಗಿತ್ತಿ ಬಾಲೆಯ ಕಾಮ; ಬಾಲಿ ಎಂದರೆ ಮೊನ್ನೆಯಷ್ಟೇ ತನ್ನ ಸಂಬಂಧಿಕರೊಬ್ಬರ ‘ಡೆಸ್ಟಿನೇಷನ್ ವೆಡ್ಡಿಂಗ್’ಗೆಂದು ಇಂಡೋನೇಷ್ಯಾದ ಬಾಲಿಗೆ ದೇಸಾಯಿಯವರು ಹೋಗಿಬಂದುದರ ಉಲ್ಲೇಖ.
“ರಂಧ್ರ ಧುರಂಧರ ಬಿರುದು ಕೊಡಬೇಕೆಂದಿರುವ ಸಮಾಚಾರವನ್ನು ಕೇಶವ ಮೆಹೆಂದಳೆಯವರಿಗೆ ನೀವೇ ತಿಳಿಸುತ್ತೀರೋ ಅಥವಾ ನಾನು ತಿಳಿಸಲೇ?" ಎಂದು ಕೇಳಿದ್ದಕ್ಕೆ “ನೀವೇ ತಿಳಿಸಿ" ಎಂದರು ದೇಸಾಯಿ. ಒಂದೆರಡು ಸಲ ಜ್ಞಾಪಿಸಿದರು ಕೂಡ. “ಆಯ್ತು, ಒಳ್ಳೇ ಸ್ಟೆ ಲ್‌ನಲ್ಲಿ ತಿಳಿಸೋಣ" ಎಂದಿದ್ದೆ. ಆ ಸ್ಟೈಲ್ ಏನೆಂದು ಈಗ ನಿಮಗೂ ತಿಳಿಯಿತು!
ಕ್ಯಾಲೆಂಡರ್‌ನಲ್ಲಿ ರಂಧ್ರ ವ್ಯವಸ್ಥೆ ಎಂದಾಗ ನನಗೆ ಇನ್ನೂ ಒಂದು ವಿಚಾರ ನೆನಪಾಯಿತು. ವರ್ಷಗಳ ಹಿಂದೆ ವಿಜಯಕರ್ನಾಟಕದಲ್ಲಿ ಪರಾಗಸ್ಪರ್ಶ ಅಂಕಣದಲ್ಲಿ ಒಂದು ಲೇಖನ ‘ಗೋಡೆಗೆ ನೇತುಹಾಕಲು ಪಂಚಾಂಗಕ್ಕೆ ತೂತು’ ಎಂಬ ಶೀರ್ಷಿಕೆಯೊಂದಿಗೆ ಬರೆದಿದ್ದೆ. ಊರಲ್ಲಿ ನಮ್ಮ ಮನೆಯಲ್ಲಿ ಹಿಂದಿನ ಕಾಲದಿಂದಲೂ ಪ್ರತಿ ವರ್ಷ ಕೊಳ್ಳುವ ‘ದಾತೆ ಪಂಚಾಂಗ’ (ಸೋಲಾಪುರ ದಿಂದ ಪ್ರಕಟವಾಗುವ ಮರಾಠಿ ಪಂಚಾಂಗ) ಮತ್ತು ‘ಶಾಸ್ತ್ರಸಿದ್ಧ ಶ್ರೀಕೃಷ್ಣ ಪಂಚಾಂಗ’ (ಉಡುಪಿ ಯಿಂದ ಪ್ರಕಟವಾಗುವ ಕನ್ನಡ ಪಂಚಾಂಗ), ನಮ್ಮನೆಯ ಹಜಾರದಲ್ಲಿ ಕಂಬಕ್ಕೆ ನೇತುಹಾಕ ಲಿಕ್ಕೆಂದು ಆ ಪಂಚಾಂಗಗಳಿಗೆ ದಬ್ಬಣದಿಂದ ತೂತು ಕೊರೆದು ದಾರ ಪೋಣಿಸಿ ಮಾಡಿಕೊಳ್ಳುತ್ತಿದ್ದ ವ್ಯವಸ್ಥೆಯನ್ನು ಆ ಲೇಖನದಲ್ಲಿ ನೆನಪಿಸಿಕೊಂಡಿದ್ದೆ.
ಇಲ್ಲಿ ಅಮೆರಿಕದಲ್ಲಿ ಬಹುಪ್ರಖ್ಯಾತವಾದ The Old Farmer's Almanac ಎಂಬ ಅಮೆರಿಕನ್ ರೈತರ ಪಂಚಾಂಗವನ್ನೂ ಅದೇ ಲೇಖನದಲ್ಲಿ ಪರಿಚಯಿಸಿದ್ದೆ. “ಅಮೆರಿಕದ ಈ ಹಳೆಯ ರೈತರ ಪಂಚಾಂಗ ನಿಜಕ್ಕೂ ಬಹಳ ಹಳೆಯ ಕಾಲದಿಂದ ಪ್ರಕಟವಾಗುತ್ತ ಬಂದಿದೆ. ಇದಕ್ಕೆ ಎರಡು ಶತಮಾನಗಳಿ ಗಿಂತಲೂ ಹೆಚ್ಚಿನ ಇತಿಹಾಸವಿದೆ.
1792ರಲ್ಲಿ, ಅಮೆರಿಕದ ಮೊತ್ತಮೊದಲ ರಾಷ್ಟ್ರಾಧ್ಯಕ್ಷ ಜಾರ್ಜ್ ವಾಷಿಂಗ್ಟನ್‌ನ ಆಡಳಿತಕಾಲದಲ್ಲಿ ನ್ಯೂ ಹ್ಯಾಂಪ್‌ಷೈರ್‌ನ ಡಬ್ಲಿನ್‌ನಲ್ಲಿ ರಾಬರ್ಟ್ ಥಾಮಸ್ ಎಂಬವನಿಂದ ಸ್ಥಾಪಿತವಾದ ಈ ಪಂಚಾಂಗಕ್ಕೆ ಆವತ್ತಿನಿಂದ ಇಂದಿನವರೆಗೂ ವರ್ಷವರ್ಷವೂ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಏಕೈಕ ಪ್ರಕಾಶನ ಎಂಬ ಹೆಗ್ಗಳಿಕೆಯಿದೆ.
1792ರಲ್ಲಿ ಮೊದಲ ಸಂಚಿಕೆಯ ಬೆಲೆ ಬರೀ ಆರು ಪೆನ್ನಿಗಳಷ್ಟು ಇತ್ತಂತೆ. ಪ್ರಸಾರ ಸಂಖ್ಯೆ ಸುಮಾರು ಮೂರು ಸಾವಿರ. ಈಗ 2008ನೇ ಇಸವಿಯ ಪಂಚಾಂಗ ಮಾರುಕಟ್ಟೆಗೆ ಬಿಡುಗಡೆ ಗೊಂಡಿದ್ದು ಇದು 216ನೇ ಸಂಚಿಕೆ; ಬೆಲೆ 6 ಡಾಲರ್ 95 ಸೆಂಟ್ಸ್; ಈಗ ಗ್ರಾಹಕರ ಸಂಖ್ಯೆ ಹದಿನೆಂಟು ಮಿಲಿಯಕ್ಕೂ ಹೆಚ್ಚು!
ಈ ಪಂಚಾಂಗ ಮುದ್ರಣಗೊಂಡು ಮಾರುಕಟ್ಟೆಗೆ ಬರುವಾಗಲೇ ಅದರ ಎಡ ಮೂಲೆಯಲ್ಲೊಂದು ತೂತು ಪಂಚ್ ಮಾಡಿದ್ದಿರುತ್ತದೆ, ಗೋಡೆಯ ಮೇಲಿನ ಮೊಳೆಗೆ ಸಿಕ್ಕಿಸಲು ಅನುಕೂಲವಾಗುವಂತೆ. ಅಂದರೆ ಪಂಚಾಂಗವನ್ನು ಮೊಳೆಗೆ ನೇತು ಹಾಕುವ ಪದ್ಧತಿ ಸಾರ್ವತ್ರಿಕ ಅಂತಾಯ್ತು. ಅಗತ್ಯ ವಿದ್ದಾಗ ಸುಲಭದಲ್ಲಿ ಕೈಗೆಟಕುವಂತೆ ಇರಬೇಕಿದ್ದರೆ ಎಲ್ಲೋ ಪುಸ್ತಕಗಳ ರಾಶಿಯಲ್ಲಿ ಇದ್ದರಾಗದು, ಪಂಚಾಂಗ ಎಂದಮೇಲೆ ಗೋಡೆಗೆ ತೂಗುಹಾಕಿದ್ದೇ ಇರಬೇಕು.
ರೈತರ ಪಂಚಾಂಗದ ಬಗ್ಗೆ ಬರೆಯುತ್ತ ಇಲ್ಲಿನ ಇಂಗ್ಲಿಷ್ ಪತ್ರಿಕೆಯೊಂದು The little yellow magazine still comes with the hole in the corner so it can be hung in outhouses for leisurely reading ಎಂದಿದೆ" ಎಂಬಿತ್ಯಾದಿ ವಿವರಗಳು ನನ್ನ ಆ ಲೇಖನದಲ್ಲಿದ್ದವು. ಕ್ಯಾಲೆಂಡರ್ ಗಾಗಲಿ ಪಂಚಾಂಗಕ್ಕಾಗಲಿ ರಂಧ್ರವ್ಯವಸ್ಥೆ ಎಷ್ಟು ಮುಖ್ಯವೆಂದು ನಿಮಗೀಗ ಮನದಟ್ಟಾಗಿರ ಬಹುದು. ಈಗ ಇಂಥದೇ ಇನ್ನೂ ಕೆಲವು ಅಜ್ಞಾತ ರಂಧ್ರಗಳತ್ತ ಗಮನ ಹರಿಸೋಣ.
ಉಗುರುಗಳನ್ನು ಕತ್ತರಿಸಲಿಕ್ಕೆ ಉಪಯೋಗಿಸುವ, ನಮ್ಮನಿಮ್ಮೆಲ್ಲರ ಮನೆಗಳಲ್ಲಿ ಇದ್ದೇಇರುವ ಒಂದು ಸರ್ವಸಾಮಾನ್ಯ ಉಪಕರಣವಾದ ನೇಲ್ ಕಟ್ಟರ್‌ಗೆ ತುದಿಯಲ್ಲೊಂದು ರಂಧ್ರವಿರುವು ದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹಾಗೆ ರಂಧ್ರ ಇರುವುದರ ಉದ್ದೇಶ ಏನಿರಬಹು ದೆಂದು ಯೋಚಿಸಿದ್ದೀರಾ? ನೇಲ್ ಕಟ್ಟರ್‌ನ ಆ ರಂಧ್ರದ ಬಗ್ಗೆಯೇ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಯಲ್ಲಿ, ರೀಡರ್ಸ್ ಡೈಜೆಸ್ಟ್ ನಿಯತಕಾಲಿಕೆಯಲ್ಲಿ ಲೇಖನಗಳು ಪ್ರಕಟ ಆಗಿವೆಯೆಂದರೆ ನಂಬುತ್ತೀರಾ? 1881ರಲ್ಲಿ ಅಮೆರಿಕದ ಸಿನ್ಸಿನಾಟಿಯ ಯೂಜೀನ್ ಹೀಮ್ ಮತ್ತು ಸೆಲೆಸ್ಟಿನ್ ಮಾಟ್ಜ್ ಎಂಬಿಬ್ಬರು ಸ-ರಂಧ್ರ ನೇಲ್ ಕಟ್ಟರ್ ವಿನ್ಯಾಸವನ್ನು ಆವಿಷ್ಕರಿಸಿದವರು, ಮತ್ತು ಅದಕ್ಕೆ ಯು.ಎಸ್ ಪೇಟೆಂಟ್ ಪಡೆದವರು ಎಂಬ ಕುತೂಹಲಕಾರಿ ಸಂಗತಿ ನಿಮಗೆ ಗೊತ್ತಿತ್ತೇ? ನೇಲ್ ಕಟ್ಟರ್‌ನ ರಂಧ್ರ ಆಲಂಕಾರಿಕವಾಗಿ ಚಂದ ಕಾಣಲಿಕ್ಕೆಂದು ಇರುವುದಲ್ಲ.
ಬದಲಿಗೆ, ನೇಲ್ ಕಟ್ಟರ್‌ಅನ್ನು ಕೀ-ಚೈನ್ ರೀತಿಯಲ್ಲಿ ಪೋಣಿಸಿಕೊಳ್ಳಲಿಕ್ಕೆ, ಅಥವಾ ಬಚ್ಚಲು ಮನೆಯ ಕಪಾಟಿನಲ್ಲಿ ಚಿಕ್ಕದೊಂದು ಮೊಳೆಗೆ ಸಿಕ್ಕಿಸಿಡಲಿಕ್ಕೆ ಅನುಕೂಲವಾಗಬೇಕೆಂಬ ಕಾರಣಕ್ಕೇ ಇರುತ್ತದೆ, ಮತ್ತು ಎಂಥೆಂಥ ಫ್ಯಾನ್ಸಿ ಮಾಡೆಲ್ ಆದರೂ ಪ್ರತಿಯೊಂದಕ್ಕೂ ರಂಧ್ರ ಇದ್ದೇಇರುತ್ತದೆ. ಆದರೆ ರಂಧ್ರದ ಬಗ್ಗೆ ಅರಿವು ಬಿಡಿ, ನೇಲ್ ಕಟ್ಟರ್ ನಂಥ ವಸ್ತುಗಳನ್ನೆಲ್ಲ ನಾವು ಎಷ್ಟು ಸಸಾರ ವಾಗಿಸುತ್ತೇವೆಂದರೆ ಯಾವ ಬ್ರ್ಯಾಂಡ್, ಎಲ್ಲಿ ಯಾವಾಗ ಕೊಂಡುಕೊಂಡಿದ್ದು, ಎಷ್ಟು ಬೆಲೆ ಅನ್ನೋದೂ ನಮ್ಮ ಅರಿವಿನಲ್ಲಿರುವು ದಿಲ್ಲ.
ಮನೆಯಲ್ಲಿ ಎಷ್ಟು ನೇಲ್ ಕಟ್ಟರ್‌ಗಳು ಎಲ್ಲೆಲ್ಲಿ (ಕಳೆದು ಹೋಗಿ) ಬಿದ್ದುಕೊಂಡಿವೆ ಅನ್ನೋದೂ ಗೊತ್ತಿರುವುದಿಲ್ಲ. ರಂಧ್ರವನ್ನು ಸರಿಯಾಗಿ ಬಳಸಿದ್ದೇ ಆದರೆ ನೇಲ್ ಕಟ್ಟರ್‌ಅನ್ನು ಉಪಯೋಗಿಸಿದ ನಂತರ ಯಥಾಸ್ಥಾನದಲ್ಲಿ ಇಡುವ ಒಳ್ಳೆಯ ಅಭ್ಯಾಸ ನಮ್ಮಲ್ಲಿ ಬೆಳೆಯುತ್ತದೆ. ಎಲ್ಲೆಂದರಲ್ಲಿ ಬಿಸಾಡಿ ಕಳೆದು ಹೋಗದೆ ಒಂದೇ ನೇಲ್ ಕಟ್ಟರ್ ಬಹುಕಾಲದವರೆಗೆ ಬಾಳಿಕೆಯೂ ಬರುತ್ತದೆ!
ಇನ್ನೊಂದು ಇಂಟೆರೆಸ್ಟಿಂಗ್ ರಂಧ್ರ ಇರುವುದು ವಿಮಾನದ ಕಿಟಕಿಗಳಿಗೆ, ಅದೂ ಕಂಡೂಕಾಣದಂತೆ ಅತಿಚಿಕ್ಕ ಗಾತ್ರದಲ್ಲಿ. ಇದರ ಬಗ್ಗೆ ವಿಶ್ವೇಶ್ವರ ಭಟ್ಟರು ‘ಸಂಪಾದಕರ ಸದ್ಯಶೋಧನೆ’ ಅಂಕಣದಲ್ಲಿ ಹಿಂದೊಮ್ಮೆ ಬರೆದಿದ್ದಾರೆ. ವಿಮಾನದ ಕಿಟಕಿಗಳ ಕೆಳಭಾಗದಲ್ಲಿರುವ ಚಿಕ್ಕ ರಂಧ್ರವನ್ನು Bleed Hole ಅಥವಾ Breather Hole ಎಂದು ಕರೆಯಲಾಗುತ್ತದೆ. ಎರಡು ಉದ್ದೇಶಗಳಿಂದಾಗಿ ಎರಡು ಹೆಸರುಗಳು. ಪ್ರಯಾಣಿಕರ ಸುರಕ್ಷತೆಗಾಗಿಯೇ ಈ ರಂಧ್ರ ಇರುವುದು.
ವಿಮಾನ ತುಂಬಾ ಎತ್ತರಕ್ಕೆ ಹೋದಂತೆ ಹೊರಗಿನ ಗಾಳಿಯ ಒತ್ತಡ ಕಡಿಮೆಯಾಗುತ್ತದೆ, ಆದರೆ ವಿಮಾನದ ಒಳಗಿನ ಒತ್ತಡ ಹೆಚ್ಚಾಗಿರುತ್ತದೆ. ವಿಮಾನದ ಕಿಟಕಿಗಳು ಮೂರು ಪದರಗಳ ಗಾಜಿನಿಂದ ಮಾಡಲ್ಪಟ್ಟಿರುತ್ತವೆ. ಈ ರಂಧ್ರವು ಕಿಟಕಿಯ ಮಧ್ಯದ ಮತ್ತು ಒಳಗಿನ ಪದರದ ನಡುವೆ ಗಾಳಿಯ ಒತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಒಳಗಿನ ಹೆಚ್ಚಿನ ಒತ್ತಡವು ನೇರವಾಗಿ ಹೊರಗಿನ ಮುಖ್ಯ ಗಾಜಿನ ಮೇಲೆ ಬಿದ್ದರೆ ಅದು ಒಡೆದು ಹೋದೀತು, ಹೀಗಾಗದಂತೆ ಮಧ್ಯದ ಗಾಜು ಒತ್ತಡವನ್ನು ತಡೆದುಕೊಂಡು ನೆರವಾಗುತ್ತದೆ.
ವಿಮಾನದ ಒಳಗೆ-ಹೊರಗೆ ತಾಪಮಾನದಲ್ಲಿಯೂ ವ್ಯತ್ಯಾಸವಿರುತ್ತದೆ. ರಂಧ್ರವು ಕಿಟಕಿಯ ಪದರಗಳ ನಡುವೆ ತೇವಾಂಶ ಕವಿಯದಂತೆ ನೋಡಿಕೊಳ್ಳುತ್ತದೆ. ಕಿಟಕಿಗಳು ಸದಾ ಸ್ವಚ್ಛವಾಗಿ ಕಾಣಿಸುತ್ತವೆ, ಪ್ರಯಾಣಿಕರು ಹೊರಗಿನ ದೃಶ್ಯವನ್ನು ಸುಲಭವಾಗಿ ನೋಡುವುದಕ್ಕಾಗುತ್ತದೆ. ಬಹು ಮಹಡಿ ಕಟ್ಟಡ ಗಳಲ್ಲಿ ಲಿಫ್ಟ್ʼನ ಬಾಗಿಲಿಗೆ ಇರುವ ಚಿಕ್ಕ ರಂಧ್ರ ಕೂಡ ಅಷ್ಟೇ ಪ್ರಾಮುಖ್ಯದ್ದು. ಇದನ್ನು ತಾಂತ್ರಿಕವಾಗಿ Hoistway Door Unlocking Device ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಜನರು ಇದನ್ನು ಇಂಟರ್‌ಕಾಮ್ ಅಥವಾ ಇಣುಕಿಂಡಿ ಎಂದು ಭಾವಿಸುತ್ತಾರೆ, ಆದರೆ ಇದರ ಅಸಲಿ ಉದ್ದೇಶ ಬೇರೆಯೇ ಇದೆ. ವಿದ್ಯುತ್ ಕೈಕೊಟ್ಟಾಗ ಅಥವಾ ತಾಂತ್ರಿಕ ದೋಷದಿಂದಾಗಿ ಲಿಫ್ಟ್ ಎರಡು ಮಹಡಿಗಳ ನಡುವೆ ಸಿಲುಕಿಕೊಂಡರೆ, ಒಳಗಿರುವ ಪ್ರಯಾಣಿಕ ರನ್ನು ಸುರಕ್ಷಿತವಾಗಿ ಹೊರಗೆ ತರಲು ಈ ರಂಧ್ರ ಸಹಾಯ ಮಾಡುತ್ತದೆ. ಅಗ್ನಿಶಾಮಕ ಸಿಬ್ಬಂದಿ ಅಥವಾ ಸುರಕ್ಷತಾ ಸಿಬ್ಬಂದಿ ಈ ರಂಧ್ರದ ಮೂಲಕ ವಿಶೇಷವಾದ ಕೀಲಿಯನ್ನು ಹಾಕಿ ಬಾಗಿಲನ್ನು ತೆರೆಯುತ್ತಾರೆ.
ಲಿಫ್ಟ್ ತಂತ್ರಜ್ಞರು ಲಿಫ್ಟ್ʼನ ಒಳಗಿನ ಭಾಗಗಳನ್ನು, ವೈರ್‌ಗಳನ್ನು ಅಥವಾ ಮೋಟಾರ್ ವ್ಯವಸ್ಥೆ ಯನ್ನು ಪರಿಶೀಲಿಸಲು ಮತ್ತು ದುರಸ್ತಿ ಮಾಡಲು ಈ ರಂಧ್ರದ ಮೂಲಕವೇ ಹೊರಗಿನ ಬಾಗಿಲನ್ನು ಲಾಕ್ ಮುಕ್ತ ಗೊಳಿಸುತ್ತಾರೆ. 1970ರ ದಶಕದಿಂದ ಜಾರಿಗೆ ಬಂದ ಅಗ್ನಿಸುರಕ್ಷತಾ ನಿಯಮಗಳ ಪ್ರಕಾರ, ಪ್ರತಿಯೊಂದು ಲಿಫ್ಟ್ ಬಾಗಿಲಿಗೆ ಇಂತಹ ತುರ್ತು ರಂಧ್ರ ಕಡ್ಡಾಯ. ಇದನ್ನು ತೆರೆಯುವ ವಿಶೇಷ ಕೀಲಿಗಳು ಕಟ್ಟಡದ ಮ್ಯಾನೇಜರ್, ಲಿಫ್ಟ್ ತಂತ್ರಜ್ಞರು ಅಥವಾ ತುರ್ತುರಕ್ಷಣಾ ಸಿಬ್ಬಂದಿಯ ಬಳಿ ಮಾತ್ರ ಇರುತ್ತವೆ.
ಹೀಗೆ ಸೂಕ್ಷ್ಮವಾಗಿ ಗಮನಿಸುವ ಆಸಕ್ತಿಯಿದ್ದರೆ ನಮ್ಮ ಸುತ್ತಮುತ್ತಲೂ ವಿಶಿಷ್ಟ ರಂಧ್ರಗಳು ಅನೇಕ ವಿದ್ದಾವೆ. ಅಂಚೆಚೀಟಿಗಳನ್ನು ಮುದ್ರಿಸಿದ ಹಾಳೆಯಿಂದ ಬೇಕಾದಷ್ಟೇ ಅಂಚೆಚೀಟಿಗಳನ್ನು ಪ್ರತ್ಯೇಕಿಸಲಿಕ್ಕಾಗು ವಂತೆ ಇರುವ ಪರ್ಫೆರೇಷನ್ ರಂಧ್ರಗಳು, ಷೆಲ್‌ಗಳ ಅಡ್ಡ ಹಲಗೆಗಳನ್ನು ನಮಗೆ ಬೇಕಾದ ಎತ್ತರದಲ್ಲಿ ಜೋಡಿಸಲಿಕ್ಕೆ ಆಗುವಂತೆ ಬದಿಯ ಚೌಕಟ್ಟಿಗೆ ಸಾಲುರಂಧ್ರಗಳು, ಡೆಸ್ಕ್/ಟೇಬಲ್‌ಗಳಲ್ಲಿ ಕಂಪ್ಯೂಟರ್ ವೈರಿಂಗ್ ವ್ಯವಸ್ಥೆಗಾಗಿ ರಂಧ್ರಗಳು, ಅಡುಗೆಮನೆ ಸಿಂಕ್‌ನಲ್ಲಿ ನೀರು ತುಂಬಿ ಚೆಲ್ಲದಂತೆ ಮೇಲ್ಭಾಗದಲ್ಲೊಂದು ಚಿಕ್ಕ ರಂಧ್ರ, ಹಳೇಕಾಲದ ಹಳ್ಳಿಗಳ ಅಡುಗೆಮನೆಯಲ್ಲಿ ‘ಕೋಡೋಲೆ’ ಎಂಬ ಶಾಖರಂಧ್ರ ಇತ್ಯಾದಿ.
ಮತ್ತೆ ಆ ಒಬ್ಬ ಪೆದ್ದ ವಿಜ್ಞಾನಿ ತಾನು ಸಾಕಿದ್ದ ಬೆಕ್ಕು ಮತ್ತದರ ಮರಿ ತಮ್ಮಪಾಡಿಗೆ ತಾವು ಲ್ಯಾಬೊ ರೇಟರಿಯ ಒಳ-ಹೊರಗೆ ಸಂಚರಿಸಲಿ ಕ್ಕಾಗುವಂತೆ ಬಾಗಿಲಿಗೆ ಮಾಡಿಟ್ಟಿದ್ದ ಎರಡು ಪ್ರತ್ಯೇಕ ರಂಧ್ರ ಗಳು- ದೊಡ್ಡ ಬೆಕ್ಕಿಗೆ ದೊಡ್ಡ ರಂಧ್ರ ಮತ್ತು ಮರಿಬೆಕ್ಕಿಗೆ ಪುಟ್ಟ ರಂಧ್ರ! ಬೇರೆಲ್ಲ ಯಾಕೆ, ನಾವೇ ಒಬ್ಬೊಬ್ಬರೂ ‘ನವರಂಧ್ರ’ಗಳನ್ನು ತಳೆದು ಬೆಳೆದು ಬುವಿಗೆ ಬಂದ ನರಬೊಂಬೆಗಳು ಆದ್ದರಿಂದ ರಂಧ್ರಾನ್ವೇಷಣೆ- ಸ್ವಭಾವದ್ದೋ ಸ್ವಾರಸ್ಯದಾಹದ್ದೋ ಅಲ್ಪಸ್ವಲ್ಪ ಇರಲೇಬೇಕು.