ಒಂದೊಳ್ಳೆ ಮಾತು
ಒಂದು ಬೆಟ್ಟದ ತಪ್ಪಲಿನಲ್ಲಿ ಒಬ್ಬ ಗುರು ತನ್ನ ಶಿಷ್ಯನೊಂದಿಗೆ ಜೀವಿಸುತ್ತಿದ್ದನು. ಗುರು-ಶಿಷ್ಯರು ಕಾಡಿನಲ್ಲಿರುವ ಹಣ್ಣು- ಹಂಪಲು, ಗೆಡ್ಡೆ-ಗೆಣಸುಗಳನ್ನು ತಿಂದುಕೊಂಡು ಸ್ನಾನ-ಪೂಜೆ-ಧ್ಯಾನದಲ್ಲಿ ನಿರತರಾಗಿದ್ದರು. ಗುರುಗಳು ಮಹಾಜ್ಞಾನಿಗಳು, ಅವರಲ್ಲಿ ಭೂತ ಭವಿಷ್ಯತ್ ಜ್ಞಾನವಿತ್ತು, ಒಂದು ವಿಶೇಷ ಶಕ್ತಿಯೂ ಇತ್ತು.
ಅವರು ಧ್ಯಾನದಲ್ಲಿ ಕುಳಿತಾಗ ಮುಂದೇನಾಗುತ್ತದೆ ಎಂಬ ಭವಿಷ್ಯ ಗೊತ್ತಾಗುತ್ತಿತ್ತು. ಒಮ್ಮೆ ಧ್ಯಾನದಲ್ಲಿ ನಿರತರಾಗಿದ್ದಾಗ, ಇನ್ನು ಎಂಟು ದಿನಕ್ಕೆ ಸರಿಯಾಗಿ ತಮ್ಮ ಶಿಷ್ಯ ಮರಣ ಹೊಂದುತ್ತಾನೆ ಎಂದು ಅವರಿಗೆ ತಿಳಿಯಿತು.
ಇದರಿಂದ ಗುರುಗಳಿಗೆ ಬಹಳ ದುಃಖವಾಯಿತು. ಆತ ಅವರ ಪ್ರೀತಿಯ ಶಿಷ್ಯ, ಅವನಿಗೆ ಸಾವು ಬರುತ್ತದೆ ಎಂದಲ್ಲ; ಆತನದು ಇನ್ನೂ ಆಡುವ ವಯಸ್ಸು, ಅದಾಗಲೇ ಸಾವು ಬಂದಿ ತಲ್ಲ ಎಂಬ ಕಾರಣಕ್ಕೆ. ಹೀಗಾಗಿ ಅವರು ಶಿಷ್ಯ ನನ್ನು ಕರೆದು, “ಮಗು, ನೀನು ನಿನ್ನ ಹುಟ್ಟೂರಿಗೆ ಹೋಗಿ ತಂದೆ-ತಾಯಿ, ಒಡಹುಟ್ಟಿದವರೊಂದಿಗೆ ಎಂಟು ದಿನ ಕಳೆದು ಬಾ" ಎಂದರು.
ಇದರಿಂದ ಶಿಷ್ಯನಿಗೆ ಖುಷಿಯಾಗಿ, “ಗುರುಗಳೇ, ನಾನೇ ಈ ವಿಚಾರವನ್ನು ಕೇಳಬೇಕೆಂದು ಕೊಂಡಿದ್ದೆ. ನನಗೆ ನನ್ನ ಅಪ್ಪ-ಅಮ್ಮ, ಸಹೋದರನನ್ನು ನೋಡಬೇಕೆಂದು ತುಂಬಾ ಆಸೆಯಾಗಿತ್ತು. ಹಾಗಾದರೆ ಹೋಗಿ ಬರುತ್ತೇನೆ ಗುರುಗಳೇ" ಎಂದು ಗುರುಗಳ ಕಾಲಿಗೆ ನಮಸ್ಕರಿಸಿ ಹೊರಟನು.
ಇದನ್ನೂ ಓದಿ: Roopa Gururaj Column: ಅಂದುಕೊಂಡದ್ದನ್ನೆಲ್ಲಾ ನೆರವೇರಿಸುವ ಅಶ್ವಿನಿ ದೇವತೆಗಳು
ಗುರುಗಳು, “ಹೋಗಿ ಬಾ ಮಗು, ಎಂಟನೇ ದಿನ ಸೂರ್ಯಾಸ್ತವಾಗುವುದರೊಳಗೆ ಇಲ್ಲಿರ ಬೇಕು" ಎಂದರು. “ಆಯ್ತು ಗುರುಗಳೇ, ನೀವು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ, ನಿಮಗೆ ವಯಸ್ಸಾಗಿದೆ. ನಿಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟೇ ಕೆಲಸಗಳನ್ನು ಮಾಡಿ, ಉಳಿದ ಕೆಲಸಗಳನ್ನು ನಾನು ಬಂದ ಮೇಲೆ ಮಾಡುತ್ತೇನೆ" ಎಂದು ಗುರುಗಳ ಅನುಮತಿ ಪಡೆದು ಊರಿಗೆ ಹೊರಟನು ಶಿಷ್ಯ.
ಊರಿಗೆ ಹೋಗುವ ನಡುವೆ ಒಂದು ನದಿ ಅಡ್ಡ ಬರುತ್ತದೆ, ಅದನ್ನು ದಾಟಿ ಹೋಗಬೇಕಿತ್ತು. ಶಿಷ್ಯ ನದಿಯ ಸಮೀಪ ಬಂದನು. ನದಿ ದಡದಲ್ಲಿ ಮಣ್ಣಿನ ಹುತ್ತವಿದ್ದು ಅದರೊಳಗೆ ಲಕ್ಷಾಂತರ ಇರುವೆಗಳು ಹರಿದಾಡುತ್ತಿದ್ದವು. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಾಲಾಗಿ ಓಡಾಡುತ್ತಿದ್ದ ಇರುವೆಗಳ ಗೂಡಿನ ತುಂಬಾ ಇರುವೆಗಳು ತುಂಬಿರುವುದನ್ನು ನೋಡಿದ.
ಅವುಗಳನ್ನು ನೋಡಿ ಅವನಿಗೆ ಖುಷಿಯಾಯಿತು. ಸದಾ ಚಟುವಟಿಕೆಯಿಂದ ಇರುತ್ತವೆ ಎಂದುಕೊಳ್ಳುತ್ತಾ ನದಿಯ ಕಡೆ ನೋಡುತ್ತಾನೆ. ನದಿಯ ನೀರು ಏರುತ್ತಿದೆ. ಲಕ್ಷಾಂತರ ಇರುವೆಗಳು ಗೂಡು ಸಮೇತ ನೀರಿನಲ್ಲಿ ತೇಲಿ ಹೋಗುತ್ತವೆ, ಏನು ಮಾಡುವುದೆಂದು ಯೋಚಿಸಿ, ತಕ್ಷಣ ತಾನು ಉಟ್ಟಿದ ಪಂಚೆಯನ್ನು ಬಿಚ್ಚಿದನು. ಅದನ್ನು ಮಡಚಿ ಇರುವೆ ಗೂಡಿನ ಸುತ್ತ ಸುತ್ತಿ ಗೂಡನ್ನು ಮುಚ್ಚಿಬಿಟ್ಟನು.
ಪಂಚೆ ಹಾರಿಹೋಗದಂತೆ ಅದರ ಮೇಲೆ ಸುತ್ತಲೂ ಕಲ್ಲುಗಳನ್ನು ಒಂದರ ಪಕ್ಕ ಒಂದು ಜೋಡಿಸಿಟ್ಟನು. ಒಳಗೆ ನೀರು ಸೇರಿದರೆ ಹೊರಹೋಗಲು ಒಂದು ಸಣ್ಣ ತೂತು ಮಾಡಿ ದನು. ನದಿ ರಭಸದಿಂದ ಏರುತ್ತಾ ಗೂಡಿನ ಸುತ್ತ ಬಂದಿತು. ಗೂಡೊಳಗೆ ಬರಲಿಲ್ಲ, ಹೀಗಾಗಿ ಸಮಾಧಾನದಿಂದ ಮನೆ ಸೇರಿದನು.
ಮನೆಯಲ್ಲಿ ತಂದೆ-ತಾಯಿ, ಒಡಹುಟ್ಟಿದವರ ಜತೆ ಹಾಯಾಗಿ ಎಂಟು ದಿನ ಕಳೆದನು. ಆಶ್ರಮಕ್ಕೆ ಮರಳಬೇಕೆಂಬುದು ಅವನಿಗೆ ನೆನಪಾಯಿತು. ಈ ಕಡೆ ಗುರುಗಳು ಎಂಟನೇ ದಿನವೂ ಆಶ್ರಮಕ್ಕೆ ಶಿಷ್ಯ ಬಾರದಿರುವುದನ್ನು ನೋಡಿ ಅವನು ಸತ್ತುಹೋಗಿರಬಹುದು ಅಂದುಕೊಂಡರು. ಶಿಷ್ಯನ ಅಂತಿಮ ದರ್ಶನವನ್ನು ಮಾಡಲಾಗಲಿಲ್ಲ ಎಂದು ಚಿಂತೆ ಯಿಂದ ಆಶ್ರಮದಿಂದ ನದಿಯ ಕಡೆಗೆ ಹೊರಟಿದ್ದರು.
ಮುಸ್ಸಂಜೆ ಹೊತ್ತಲ್ಲಿ ದೂರದಿಂದ ಯಾರೋ ಬರುವುದು ಕಂಡಿತು. ಗುರುಗಳು ಕೈಯನ್ನು ಹಣೆಗೆ ಅಡ್ಡ ಕೊಟ್ಟು ಕಣ್ಣು ಕಿರಿದಾಗಿಸಿ ನೋಡಿದರು. ಓಡುವ ರೀತಿಯ ನಡೆದುಕೊಂಡು ಬಂದ ಶಿಷ್ಯನನ್ನು ಆಪಾದಮಸ್ತಕ ನೋಡಿ ಬಿಗಿಯಾಗಿ ತಬ್ಬಿಕೊಂಡರು. ಸ್ವಲ್ಪ ಸುಧಾರಿಸಿ ಕೊಂಡ ಮೇಲೆ ಶಿಷ್ಯನಿಂದ ನಡೆದzಲ್ಲವನ್ನೂ ತಿಳಿದುಕೊಂಡರು.
ತಮ್ಮ ಶಿಷ್ಯ ಲಕ್ಷಾಂತರ ಇರುವೆಗಳ ಜೀವವನ್ನು ಉಳಿಸಿದ್ದಾನೆ. ಈ ಪುಣ್ಯಕರ್ಮ ಫಲದಿಂದ ಶಿಷ್ಯನಿಗೆ ದೀರ್ಘಾಯುಷ್ಯ ಸಿಕ್ಕಿತು ಎಂದವರಿಗೆ ಅರ್ಥವಾಗಿತ್ತು. ನಾವು ಮಾಡುವ ಪ್ರತಿ ಯೊಂದು ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅಂತೆಯೇ ಕೆಟ್ಟ ಕೆಲಸ ಗಳಿಗೂ ಅದರದ್ದೇ ಆದ ಕರ್ಮ ತಟ್ಟದೆ ಬಿಡುವುದಿಲ್ಲ. ನಿಧಾನವಾಗಿಯಾದರೂ, ಕೆಲವೊಮ್ಮೆ ಜನ್ಮಾಂತರಗಳಾದರೂ ಸರಿ, ಕರ್ಮ ಮರಳಿ ಬರುತ್ತದೆ. ಆದ್ದರಿಂದ, ಮಾಡುವ ಪ್ರತಿ ಯೋಚನೆ ಮತ್ತು ಕೆಲಸದ ಬಗ್ಗೆಯೂ ಜಾಗೃತರಾಗಿರೋಣ...