ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಅಂದುಕೊಂಡದ್ದನ್ನೆಲ್ಲಾ ನೆರವೇರಿಸುವ ಅಶ್ವಿನಿ ದೇವತೆಗಳು

ಅಶ್ವಿನಿ ದೇವತೆಗಳು ಯಾವಾಗಲೂ ಅಸ್ತು-ತಥಾಸ್ತು ಎಂದು ಹೇಳುತ್ತಿರುತ್ತಾರೆ, ಅವರ ಅನುಗ್ರಹ ದಿಂದ ಆರೋಗ್ಯ- ಸಂಪತ್ತು-ಶಾಂತಿ ಮತ್ತು ಜ್ಞಾನ ಲಭಿಸುತ್ತದೆ. ಆದ್ದರಿಂದಲೇ ಹಿರಿಯರು ಒಳ್ಳೆಯ ಮಾತನಾಡಿ ಒಳ್ಳೆಯ ಯೋಚನೆಗಳನ್ನು ಮಾಡಿ ತಥಾಸ್ತು ದೇವತೆಗಳು ಅಂದರೆ ಅಶ್ವಿನಿ ಕುಮಾರರು ಅದನ್ನು ನೆರವೇರಿಸುತ್ತಾರೆ ಎಂದು ಹೇಳುತ್ತಾರೆ, ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.

ಅಂದುಕೊಂಡದ್ದನ್ನೆಲ್ಲಾ ನೆರವೇರಿಸುವ ಅಶ್ವಿನಿ ದೇವತೆಗಳು

-

ಒಂದೊಳ್ಳೆ ಮಾತು

ಅಶ್ವಿನಿ ದೇವತೆಗಳು ಸೂರ್ಯದೇವ ಹಾಗೂ ಸಂಧ್ಯಾದೇವಿಯ ಮಕ್ಕಳು. ಅಶ್ವಿನಿ ದೇವತೆ ಗಳು ಅಶ್ವ ಹಾಗೂ ಮಾನವ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಸೂರ್ಯನ ಪತ್ನಿ ಸಂಧ್ಯಾ ದೇವಿ (ವಿಶ್ವಕರ್ಮನ ಮಗಳು) ಸೂರ್ಯನ ತಾಪ ತಾಳಲಾರದೆ ಸ್ವಲ್ಪ ದಿನಗಳ ಮಟ್ಟಿಗೆ ವಿಶ್ರಾಂತಿಗಾಗಿ ಹಿಮಾಲಯ ಪರ್ವತಕ್ಕೆ ಹೋಗುತ್ತಾಳೆ.

ಅಲ್ಲಿ ಅವಳ ಗುರುತು ಯಾರಿಗೂ ತಿಳಿಯಬಾರದೆಂದು ಹೆಣ್ಣು ಕುದುರೆಯ ರೂಪ ಪಡೆದು ವಿಹರಿಸುತ್ತಾಳೆ. ಸಂಚರಿಸುತ್ತಿದ್ದ ಸೂರ್ಯನಿಗೆ ಅವಳ ಗುರುತು ಸಿಕ್ಕಿತು. ಅವನು ಗಂಡು ಕುದುರೆ ರೂಪದಲ್ಲಿ ಹೋಗಿ ಅವಳ ಜೊತೆ ವಿಹರಿಸುತ್ತಾನೆ.

ಅವರಿಬ್ಬರ ಸಂಯೋಗದಿಂದ ಕುದುರೆಮುಖ- ಮಾನವ ಶರೀರ ಹೊಂದಿರುವ ಅವಳಿ ಮಕ್ಕಳು ಜನಿಸಿದರು, ಅವರ ಹೆಸರು ಅಶ್ವಿನಿ ಕುಮಾರರು. ಅಪ್ರತಿಮ ಸುಂದರರು, ಇಬ್ಬರೂ ಸದಾ ಕಾಲ ಜೊತೆಯಲ್ಲೇ ಇರುವವರು. ಅವರು ವಾಸವಿರುವುದು ದೇವ ಲೋಕದಲ್ಲಾ ದರೂ, ಪ್ರತಿನಿತ್ಯ ಚಿನ್ನದ ರಥದಲ್ಲಿ ಭೂಮಿಗಿಳಿದು ಭೂ ಸಂಚಾರ ಮಾಡುತ್ತಾ ಬಂದು ನೇಗಿಲು ಹಿಡಿದು ಹೊಲ ಉಳುತ್ತಾರೆ.

ಇದನ್ನೂ ಓದಿ: Roopa Gururaj Column: ನಾವು ಕೊಡುವ ಅಮೂಲ್ಯ ಉಡುಗೊರೆ: ಸಮಯ

ಉಳುವಾಗ ಒಂದು ಸಲ ಹಂಸಗಳನ್ನು ಹೂಡುತ್ತಾರೆ, ಮತ್ತೊಂದು ಸಲ ಗರುಡನನ್ನು, ಮತ್ತೊಮ್ಮೆ ಕತ್ತೆಗಳನ್ನು ನೇಗಿಲಿಗೆ ಹೊಡುತ್ತಾರೆ. ಭೂಲೋಕದಲ್ಲಿ ಹೆಚ್ಚಾಗಿ ಯಜ್ಞ ಯಾಗಾದಿಗಳು ಮಾಡುವ ಜಾಗದಲ್ಲಿ ಸಂಚರಿಸುತ್ತಾರೆ ಎಂದು ಹೇಳಲಾಗುತ್ತದೆ.

ಅಶ್ವಿನಿ ಕುಮಾರರು ದೇವತೆಗಳಿಗೆ ವೈದ್ಯರು. ಒಮ್ಮೆ ರಾಕ್ಷಸರು ರೇಭನೆಂಬ ಋಷಿಯ ಕೈಕಾಲುಗಳನ್ನು ಮುರಿದು ಹಾಳು ಬಾವಿಯಲ್ಲಿ ಹಾಕಿದರು. ಆ ಋಷಿಗಳು ಅಶ್ವಿನಿ ಕುಮಾರರ ಸ್ಮರಣೆ ಮಾಡುತ್ತಾ ಹತ್ತು ದಿನಗಳ ಕಾಲ ಬಾವಿಯಲ್ಲಿ ಕಳೆದ.

ಇದನ್ನರಿತ ಅಶ್ವಿನಿ ಕುಮಾರರು ಆ ಖುಷಿಯನ್ನು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಬಾವಿ ಯಿಂದ ಮೇಲೆ ತೆಗೆದು ಆರೈಕೆ ಮಾಡಿದರು. ಪತಿ ಪಾರಾಯಣಿ ಸತಿ ಸುಕನ್ಯಾಳ ಗಂಡ ಚ್ಯವನ ಮಹರ್ಷಿಗಳಿಗೆ ಯೌವ್ವನ ಮತ್ತು ಸೌಂದರ್ಯವನ್ನು ಕೊಟ್ಟವರು ಅಶ್ವಿನಿ ಕುಮಾರರು.

ಹಿಂದೆ ದೌಮ್ಯ ಮಹರ್ಷಿಗಳ ಶಿಷ್ಯ ಉಪಮನ್ಯು ಗುರುಗಳ ಆಣತಿಯಂತೆ ಕಾಡಿನಲ್ಲಿ ಹಸುಗಳನ್ನು ಮೇಯಿಸುವಾಗ ಹಸಿವಾಗಿ ಗುರುಗಳ ಅನುಮತಿ ಇಲ್ಲದೆ ಭಿಕ್ಷೆ ಬೇಡಿ ಅದನ್ನು ತಿಂದನು. ಅದಕ್ಕಾಗಿ ಗುರುಗಳು ಅವನಿಗೆ ಐದು ಮನೆ ಮಾತ್ರ ಭಿಕ್ಷೆ ಮಾಡಬೇಕೆಂದು ತಂದ ಭಿಕ್ಷೆಗಳನ್ನೆಲ್ಲ ಅವರಿಗೆ ಕೊಡುವಂತೆ ಹೇಳಿ ತರಿಸಿ ಕೊಳ್ಳುತ್ತಿದ್ದರು.

ಒಂದು ದಿನ ಹಸಿವು ತಾಳಲಾರದೆ ಎಕ್ಕದ ಗಿಡದ ಹಾಲನ್ನು ಸೇವಿಸಲು ಹೋಗಿ ಕಣ್ಣಿಗೆ ಬಿದ್ದು ಕಣ್ಣು ಕಾಣದಾಯಿತು. ಕತ್ತಲಲ್ಲಿ ತಡಕಾಡುತ್ತಾ ಹೋಗಿ ಪಾಳು ಬಾವಿಯಲ್ಲಿ ಬಿದ್ದನು. ಶಿಷ್ಯನನ್ನು ಹುಡುಕಿಕೊಂಡು ಬಂದ ಗುರುಗಳು ಉಪಮನ್ಯುವಿನ ಸ್ಥಿತಿಗೆ ಮರುಗಿ ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಲು ಹೇಳಿದರು.

ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿದಾಗ ಉಪಮನ್ಯುವಿಗೆ ಅಶ್ವಿನಿಕುಮಾರರ ಅನುಗ್ರಹದಿಂದ ಆರೋಗ ಕಣ್ಣಿನ ದೃಷ್ಟಿ ಗುರುಗಳಿಂದ ಸಕಲ ವಿದ್ಯೆಯ ಆಶೀರ್ವಾದ ಎಲ್ಲವೂ ದೊರೆ ಯಿತು.

ಅಶ್ವಿನಿ ಕುಮಾರರು ಒಮ್ಮೆ ನಾರಾಯಣನ ದರ್ಶನ ಮಾಡಲು ವೈಕುಂಠಕ್ಕೆ ಬಂದರು. ಆ ಸಮಯದಲ್ಲಿ ನಾರಾಯಣನು ಲಕ್ಷ್ಮಿಯೊಡನೆ ಏಕಾಂತದಲ್ಲಿದ್ದನು. ವೈಕುಂಠದ ದ್ವಾರ ಪಾಲಕರಾಗಿದ್ದ ಜಯ-ವಿಜಯರು ಅಶ್ವಿನಿ ಕುಮಾರರನ್ನು ಒಳಗೆ ಬಿಡಲಿಲ್ಲ. ಪರಿಸ್ಥಿತಿ ಯನ್ನು ಅರಿತ ಅಶ್ವಿನಿ ಕುಮಾರರು ತಾಳ್ಮೆಯಿಂದ ನಾವು ವಿಷ್ಣು ದರ್ಶನಕ್ಕೆ ಬಂದಿದ್ದೇವೆ ಎಂದು ಇಲ್ಲಿಂದಲೇ ಮೂರು ಸಲ ಹೇಳಿ ಎಂದರು.

ಆದರೆ ಜಯ-ವಿಜಯರು ಏನೂ ಹೇಳದೆ ಮೌನವಾಗಿದ್ದರು. ಇದರಿಂದ ಕೋಪಗೊಂಡ ಅಶ್ವಿನಿ ಕುಮಾರರು, ಜಯ -ವಿಜಯರಿಗೆ ‘ನಾವು ಹೇಳಿದಂತೆ ಹೇಳಿ ಎಂದರೂ ಹೇಳಲಿಲ್ಲ ಅಲ್ಲವೇ? ಆದುದರಿಂದ ನೀವು ಮೂರು ಸಲ ಭೂಮಿಯಲ್ಲಿ ಜನಿಸಿರಿ’ ಎಂದು ಶಾಪ ಕೊಟ್ಟರು.

ಇದರಿಂದ ಸುಮ್ಮನಿರದ ಜಯ-ವಿಜಯರೂ ಸಹ ಅಶ್ವಿನಿ ಕುಮಾರರಿಗೆ, ‘ನೀವು ಸಹ ಒಂದು ಸಾರಿ ಭೂಮಿಯಲ್ಲಿ ಜನಿಸಿರಿ’ ಎಂದು ಶಾಪ ಕೊಟ್ಟರು. ಜಯ-ವಿಜಯರ ಶಾಪದಂತೆ ಅಶ್ವಿನಿ ಕುಮಾರರು ದ್ವಾಪರ ಯುಗದಲ್ಲಿ ಮಾದ್ರಿಗೆ ಅವಳಿ ಮಕ್ಕಳಾಗಿ ಜನಿಸಿ ಮಾದ್ರಿಯ ಮಡಿಲನ್ನು ಬೆಳಗಿದ ಪಾಂಡು ನಂದನರು ಹಾಗೂ ಪಂಚ ಪಾಂಡವರ ನಕುಲ-ಸಹದೇವರು.

ಅಶ್ವಿನಿ ದೇವತೆಗಳು ಯಾವಾಗಲೂ ಅಸ್ತು-ತಥಾಸ್ತು ಎಂದು ಹೇಳುತ್ತಿರುತ್ತಾರೆ, ಅವರ ಅನುಗ್ರಹದಿಂದ ಆರೋಗ್ಯ- ಸಂಪತ್ತು-ಶಾಂತಿ ಮತ್ತು ಜ್ಞಾನ ಲಭಿಸುತ್ತದೆ. ಆದ್ದರಿಂದಲೇ ಹಿರಿಯರು ಒಳ್ಳೆಯ ಮಾತನಾಡಿ ಒಳ್ಳೆಯ ಯೋಚನೆಗಳನ್ನು ಮಾಡಿ ತಥಾಸ್ತು ದೇವತೆಗಳು ಅಂದರೆ ಅಶ್ವಿನಿ ಕುಮಾರರು ಅದನ್ನು ನೆರವೇರಿಸುತ್ತಾರೆ ಎಂದು ಹೇಳುತ್ತಾರೆ, ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.