ಒಂದೊಳ್ಳೆ ಮಾತು
ಮಹಾಭಾರತದಲ್ಲಿ ಬರುವ ಕರ್ಣನ ಪಾತ್ರ ಅನೇಕರಲ್ಲಿ ಅನೇಕ ಭಾವನೆಗಳನ್ನು ಮೂಡಿಸುತ್ತದೆ. ಕೆಲವರಿಗೆ ಅವನು ಮಹಾದಾನಿಯಾಗಿ, ವಿಧಿಯ ಆಟಕ್ಕೆ ಸಿಲುಕಿದ ವೀರನಾಗಿ ಕಂಡರೆ ಮತ್ತೆ ಕೆಲವರಿಗೆ ಸ್ವಾರ್ಥಿಯಾಗಿ, ದುರುಳನಾಗಿ ಕಾಣುತ್ತಾನೆ. ಕರ್ಣನ ಈ ಎಲ್ಲಾ ವೈರುಧ್ಯಗಳ ಹಿಂದೆ ಆತನ ಎರಡು ಮೂಲ ಗುಣಗಳಿವೆ. ಆತನಲ್ಲಿನ ದಾನಗುಣ, ಶೌರ್ಯ ಮತ್ತು ಮಹತ್ವಕಾಂಕ್ಷೆಗಳು ಸೂರ್ಯದೇವನಿಂದ ಬಂದಿದ್ದರೆ; ಆತನ ಅತಿಯಾದ ಅಹಂಕಾರ, ಹಠ, ಮತ್ತು ದುರ್ಯೋಧನ ನೊಂದಿಗಿನ ಅಧರ್ಮದ ಸಹವಾಸವು ಆತನ ಪೂರ್ವಜನ್ಮದ ರಾಕ್ಷಸ ಧಂಭೋಧ್ಭವನ (ಸಹಸ್ರ ಕವಚ) ಅಂಶದಿಂದ ಬಂದಿದ್ದವು.
ಕರ್ಣ ಕೇವಲ ಕುಂತಿಯ ಮಗನಷ್ಟೇ ಅಲ್ಲ; ಆತನ ಹುಟ್ಟಿನ ಹಿಂದೆ ಸಾವಿರ ವರ್ಷಗಳಷ್ಟು ಹಳೆಯದಾದ ಶಾಪ ಮತ್ತು ಪ್ರತೀಕಾರದ ರಹಸ್ಯವಿತ್ತು. ಧಂಭೋಧ್ಭವನು ಸೂರ್ಯದೇವನ ತೀವ್ರ ಆರಾಧಕ. ಸೂರ್ಯನನ್ನು ಮೆಚ್ಚಿಸಿ ಆತ ಪಡೆದ ವರವೇ ವಿಚಿತ್ರವಾಗಿತ್ತು. ತನ್ನ ದೇಹದ ಮೇಲೆ 1000 ಅಭೇದ್ಯ ಕವಚಗಳಿರಬೇಕು. ಪ್ರತಿಯೊಂದು ಕವಚವನ್ನು ಒಡೆಯಬೇಕಾದರೆ ಎದುರಾಳಿಯು 1000 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿರಬೇಕು. ಅಷ್ಟೇ ಅಲ್ಲ, ಕವಚ ಒಡೆದ ತಕ್ಷಣವೇ ಆ ಎದುರಾಳಿ ಮರಣ ಹೊಂದಬೇಕು!
ಈ ಅಸಾಧ್ಯ ವರದಿಂದಾಗಿ ಆತನಿಗೆ ‘ಸಹಸ್ರಕವಚ’ ಎಂಬ ಹೆಸರು ಬಂತು. ಅಹಂಕಾರದಿಂದ ಮೆರೆದ ಆ ರಾಕ್ಷಸ ಮುನಿಗಳನ್ನು, ದೇವತೆಗಳನ್ನು ಪೀಡಿಸಲು ಪ್ರಾರಂಭಿಸಿದ.
ಇದನ್ನೂ ಓದಿ: Roopa Gururaj Column: ಮೌರ್ಯ ಸಾಮ್ರಾಜ್ಯದ ಕಲಿಗಳಾಗಿದ್ದ ವೀರ ಅಂಗರಕ್ಷಕಿಯರು
ಆತನ ದುರಾಡಳಿತವನ್ನು ಕೊನೆಗೊಳಿಸಲು ಭಗವಾನ್ ವಿಷ್ಣುವು ಬದರಿಕಾಶ್ರಮದಲ್ಲಿ ‘ನರ’ ಮತ್ತು ‘ನಾರಾಯಣ’ ಎಂಬ ಅವಳಿ ಋಷಿಗಳಾಗಿ ಅವತರಿಸಿದನು. ಸಹಸ್ರಕವಚನನ್ನು ಸಂಹರಿಸಲು ಇಬ್ಬರೂ ಅತ್ಯಂತ ವಿಶಿಷ್ಟ ತಂತ್ರ ರೂಪಿಸಿದರು.
ನರನು ಸಹಸ್ರಕವಚನೊಂದಿಗೆ ಯುದ್ಧಕ್ಕಿಳಿದರೆ, ನಾರಾಯಣನು ಸಾವಿರ ವರ್ಷಗಳ ತಪಸ್ಸಿನಲ್ಲಿ ನಿರತನಾಗುತ್ತಿದ್ದ. ನರನು ತನ್ನ 1000 ವರ್ಷಗಳ ತಪೋಬಲದಿಂದ ಸಹಸ್ರಕವಚನ ಮೊದಲ ಕವಚವನ್ನು ಮುರಿದು ತಾನು ಮೃತಪಟ್ಟನು. ತಕ್ಷಣವೇ ನಾರಾಯಣನು ತನ್ನ ತಪೋಶಕ್ತಿಯಿಂದ ನರನನ್ನು ಜೀವಂತಗೊಳಿಸಿದನು. ಬಳಿಕ ನಾರಾಯಣ ಯುದ್ಧಕ್ಕೆ ತೆರಳಿದರೆ, ನರ ತಪಸ್ಸಿಗೆ ಕುಳಿತನು.
ಹೀಗೆ ಸರದಿಯಂತೆ ನರ-ನಾರಾಯಣರು ಯುದ್ಧ ಮತ್ತು ತಪಸ್ಸನ್ನು ಹಂಚಿಕೊಳ್ಳುತ್ತಾ, ಒಂದೊಂದಾಗಿ 999 ಕವಚಗಳನ್ನು ಧ್ವಂಸಗೊಳಿಸಿದರು. ಕೊನೆಗೆ ತನ್ನಲ್ಲಿದ್ದ 999 ಕವಚಗಳು ನಾಶವಾಗಿ, ಕೇವಲ ಒಂದು ಕವಚ ಬಾಕಿ ಉಳಿದಾಗ ಸಹಸ್ರಕವಚ ಪ್ರಾಣಭಯದಿಂದ ತನ್ನ ಆರಾಧ್ಯ ದೇವ ಸೂರ್ಯನ ಬಳಿ ಓಡಿ ಹೋಗಿ ಶರಣಾದನು. ಸೂರ್ಯದೇವನು ಆತನಿಗೆ ಅಭಯ ನೀಡಿ ತನ್ನಲ್ಲಿ ಅಡಗಿಸಿಕೊಂಡನು.
ಸಮಯ ಉರುಳಿತು. ನರ-ನಾರಾಯಣರು ದ್ವಾಪರಯುಗದಲ್ಲಿ ಅರ್ಜುನ ಮತ್ತು ಶ್ರೀಕೃಷ್ಣರಾಗಿ ಜನ್ಮತಾಳಿದರು. ಸೂರ್ಯದೇವನಲ್ಲಿ ಅಡಗಿದ್ದ ಸಹಸ್ರಕವಚನು ತನ್ನ ಕೊನೆಯ ಕವಚ ಮತ್ತು ಕುಂಡಲಗಳೊಂದಿಗೆ ಕುಂತಿ ಹಾಗೂ ಸೂರ್ಯದೇವನ ಪುತ್ರನಾಗಿ ‘ಕರ್ಣ’ನೆಂಬ ಹೆಸರಿನಲ್ಲಿ ಜನ್ಮವೆತ್ತಿದನು.
ಪೂರ್ವಜನ್ಮದ ನರನೇ ಅರ್ಜುನನಾಗಿದ್ದರಿಂದ, ಆ ಕೊನೆಯ ಕವಚವನ್ನು ನಾಶಪಡಿಸುವ ಶಕ್ತಿ ಅರ್ಜುನನಿಗೆ ಮಾತ್ರವಿತ್ತು. ಆದರೆ ಆ ಕವಚ ಕರ್ಣನ ದೇಹದಲ್ಲಿರುವವರೆಗೂ ಆತನನ್ನು ಕೊಲ್ಲು ವುದು ಅಸಾಧ್ಯವೆಂದು ತಿಳಿದ ಕೃಷ್ಣನು, ಇಂದ್ರದೇವನ ಮೂಲಕ ದಾನದ ರೂಪದಲ್ಲಿ ಕವಚ-ಕುಂಡಲಗಳನ್ನು ಕರ್ಣನಿಂದ ಪಡೆದುಕೊಳ್ಳುವಂತೆ ಯೋಜಿಸಿದನು.
ಕರ್ಣನು ತನ್ನ ಕೊನೆಯ ಜನ್ಮದಲ್ಲಿ ಮಹಾದಾನಿ, ಸೂರ್ಯಭಕ್ತ ಮತ್ತು ಅಪ್ರತಿಮ ವೀರನಾ ಗಿದ್ದರೂ, ಪೂರ್ವಜನ್ಮದ ರಾಕ್ಷಸ ಅಂಶ ಹಾಗೂ ದುರ್ಯೋಧನನ ಸ್ನೇಹದಿಂದಾಗಿ ಅಧರ್ಮದ ಕಡೆಗೆ ನಿಲ್ಲಬೇಕಾಯಿತು. ಅಂತಿಮವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಬಾಣಕ್ಕೆ ಕರ್ಣ ಬಲಿಯಾಗುವ ಮೂಲಕ ಸಹಸ್ರಕವಚನ ಸಾವಿರ ವರ್ಷಗಳ ಕಥೆ ಅಂತ್ಯಗೊಂಡಿತು.
ಈ ಕಥೆಯ ಮೂಲವು ಮುಖ್ಯವಾಗಿ ಮಹಾಭಾರತದ ಉದ್ಯೋಗ ಪರ್ವ ಮತ್ತು ವನ ಪರ್ವಗಳಲ್ಲಿ ಕಂಡುಬರುತ್ತದೆ. ಇದರ ಜೊತೆಗೆ ಭಾಗವತ ಪುರಾಣ, ಪದ್ಮ ಪುರಾಣ ಮತ್ತು ವಿಷ್ಣು ಪುರಾಣಗಳಲ್ಲಿ ನರ-ನಾರಾಯಣರ ಅವತಾರದ ಮಹತ್ತ್ವ ಹಾಗೂ ಸಹಸ್ರಕವಚನು ಸೂರ್ಯನ ಆಶ್ರಯ ಪಡೆದು ಮುಂದೆ ದ್ವಾಪರಯುಗದಲ್ಲಿ ಕರ್ಣನಾಗಿ ಜನ್ಮವೆತ್ತಿದ ಪ್ರಸಂಗವನ್ನು ವಿಸ್ತಾರವಾಗಿ ದಾಖಲಿಸಲಾಗಿದೆ.
ನಮ್ಮ ಜೀವನದಲ್ಲಿ ಕೂಡ ನಮಗೆ ಅನೇಕ ಬಾರಿ ಇಂತಹ ವ್ಯಕ್ತಿತ್ವಗಳು ಎದುರಾಗುತ್ತವೆ. ನಮ್ಮ ಬಗ್ಗೆ ಅಕ್ಕರೆ ತೋರಿಸಿ ಸಹಾಯ ಮಾಡುವ ದೊಡ್ಡ ಗುಣ ಜೊತೆಗೆ ನಮ್ಮನ್ನು ಅವರ ಮುಷ್ಟಿಯಲ್ಲಿ ಹಿಡಿದಿಟ್ಟು ಉಸಿರಾಡದಂತೆ ಮಾಡುವ ವಿಕೃತಿಯನ್ನು ಕೂಡ ಅವರು ಮೆರೆಯುತ್ತಾರೆ. ಇಂತಹ ಸಮಯದಲ್ಲಿ ಅವರು ಮಾಡಿದ ಒಳಿತು ಅವರ ಕೆಡುಕನ್ನು ಕಡಿಮೆ ಮಾಡುವುದಿಲ್ಲ. ಯಾವ ಸ್ನೇಹ ಸಂಬಂಧದಲ್ಲಿ ಉಸಿರು ಗಟ್ಟುತ್ತದೆಯೋ ಅಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಇರುವುದು ಒಂದೇ ಜೀವನ ಅದನ್ನು ನೆಮ್ಮದಿಯಿಂದ, ಗೌರವದಿಂದ ಬದುಕುವ ಹಕ್ಕು ನಮ್ಮೆಲ್ಲರಿಗೂ ಇದೆ.