ಒಂದೊಳ್ಳೆ ಮಾತು
ʼಕಥಾಸರಿತ್ಸಾಗರ’ದ ಬೇತಾಳ ಪಂಚ ವಿಂಶತಿಯ ಮೊದಲ ಕಥೆಯಾದ ಪದ್ಮಾವತಿ ಮತ್ತು ವಜ್ರಮುಕುಟನ ಪ್ರಸಂಗ ಬುದ್ಧಿವಂತಿಕೆಗೆ ನೈತಿಕತೆಯ ಸ್ಪರ್ಶವಿಲ್ಲದಿದ್ದರೆ ಅದು ಅದೆಂತಹ ದುರಂತಕ್ಕೆ ಕಾರಣವಾಗುತ್ತದೆ ಎಂಬುದನ್ನು ಎಚ್ಚರಿಸುವ ಒಂದು ಮನ ಮುಟ್ಟುವ ಕಥೆ. ವಾರಣಾಸಿಯ ರಾಜಕುಮಾರ ವಜ್ರಮುಕುಟ ಹಾಗೂ ಅವನ ಆಪ್ತ ಮಿತ್ರ, ಮಂತ್ರಿಯ ಮಗ ಬುದ್ಧಿಶರೀರ ಬೇಟೆಗೆಂದು ಕಾಡಿಗೆ ಹೋಗು ತ್ತಾರೆ. ಅಲ್ಲಿ ಸರೋವರದ ದಂಡೆಯ ಮೇಲೆ ಪದ್ಮಾವತಿ ಎಂಬ ರಾಜಕನ್ಯೆಯನ್ನು ಕಂಡು ವಜ್ರಮುಕುಟನು ಮೋಹಗೊಳ್ಳುತ್ತಾನೆ.
ಆಕೆಯೂ ರಾಜಕುಮಾರನತ್ತ ನೋಡಿ, ಮಾತಾಡದೆ ಕೆಲವು ಸಂಕೇತಗಳನ್ನು ಮಾಡುತ್ತಾಳೆ: ಕಮಲದ ಹೂವನ್ನು ಕಿವಿಯ ಮೇಲಿಡುತ್ತಾಳೆ. ಹಲ್ಲುಗಳಿಂದ ಕಚ್ಚುತ್ತಾಳೆ, ಕಾಲಿನ ಹೆಬ್ಬೆರಳಿನಿಂದ ನೆಲದ ಮೇಲೆ ತಾವರೆ ಯನ್ನು ಬಿಡಿಸಿ, ಎದೆಯ ಮೇಲಿಟ್ಟುಕೊಳ್ಳುತ್ತಾಳೆ. ವಿಷಯ ತಿಳಿಯದ ರಾಜಕುಮಾರ ವಿರಹ ದಿಂದ ಹಾಸಿಗೆ ಹಿಡಿದಾಗ, ಚತುರ ಮಂತ್ರಿಪುತ್ರ ಆ ಸಂಕೇತಗಳ ರಹಸ್ಯವನ್ನು ಬಿಡಿಸುತ್ತಾನೆ: ಆಕೆ ಕರ್ಣೋತ್ಪಲ ದೇಶದವಳು (ಕಿವಿಯ ಮೇಲಿಟ್ಟ ಕಮಲ), ರಾಜ ದಂತಘಾತನ ಪುತ್ರಿ (ಹಲ್ಲಿನಿಂದ ಕಚ್ಚಿದ್ದು), ಹೆಸರು ಪದ್ಮಾವತಿ (ನೆಲದ ಮೇಲಿನ ತಾವರೆ), ನಿನ್ನ ಹೃದಯದಲ್ಲಿ ನಾನಿದ್ದೇನೆ (ಎದೆಯ ಮೇಲಿಟ್ಟಿದ್ದು) ಎಂದರ್ಥ! ಇಬ್ಬರೂ ಗುಪ್ತವಾಗಿ ಆ ನಗರಕ್ಕೆ ತೆರಳಿ, ಪದ್ಮಾವತಿಯ ದಾದಿಯಾದ ಮುದುಕಿಯ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ.
ಇದನ್ನೂ ಓದಿ: Roopa Gururaj Column: ತನ್ನ ಭಕ್ತಿಯಿಂದ ಮಹಾಶಿವನ ಸಾಮೀಪ್ಯ ಪಡೆದುಕೊಂಡ ನಂದಿ
ಮಂತ್ರಿ ಪುತ್ರನ ಯುಕ್ತಿಯಿಂದ ಪ್ರೇಮಿಗಳ ಮಿಲನವಾಗುತ್ತದೆ. ಆದರೆ ರಾಜಕುಮಾರಿಯನ್ನು ತನ್ನ ರಾಜ್ಯಕ್ಕೆ ಕರೆದೊಯ್ಯಬೇಕಾದಾಗ ಮಂತ್ರಿಪುತ್ರ ಒಂದು ಕ್ರೂರ ತಂತ್ರ ಹೂಡುತ್ತಾನೆ. ಯೋಗಿಯ ವೇಷ ಧರಿಸಿ, ರಾಜಕುಮಾರನ ಮೂಲಕ ಪದ್ಮಾವತಿಯ ಮೈಮೇಲಿದ್ದ ರತ್ನಖಚಿತ ಆಭರಣಗಳನ್ನು ತರಿಸಿ, ಅವುಗಳನ್ನು ಕದ್ದಂತೆ ನಟಿಸಿ ರಾಜ ದಂತಘಾತನ ಆಸ್ಥಾನದಲ್ಲಿ ಪ್ರದರ್ಶಿಸುತ್ತಾನೆ. ಇವುಗಳನ್ನು ಆಕೆಯ ದಾದಿ ಮುದುಕಿಯೇ ನನಗೆ ಮಾರಲು ತಂದಿದ್ದಳು ಎಂದು ಆಪಾದಿಸುತ್ತಾನೆ.
ರಾಜ ಕುಮಾರಿಯ ಅಂತಃಪುರದ ಒಡವೆಗಳನ್ನು ಕದ್ದಳೆಂಬ ಅಪವಾದ ಹೊತ್ತು, ವಿಚಾರಣೆಯ ಭಯ ಮತ್ತು ಶಿಕ್ಷೆಯ ತೀವ್ರತೆಗೆ ಆ ಅಮಾಯಕ ದಾದಿ ಮುದುಕಿ ಪ್ರಾಣವನ್ನೇ ಬಿಡುತ್ತಾಳೆ!
ಅತ್ತ ಪ್ರೇಮಿ ಗಳಿಬ್ಬರೂ ಸುಖವಾಗಿ ತಮ್ಮ ನಗರಕ್ಕೆ ಮರಳುತ್ತಾರೆ. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆ ಮುಗ್ಧ ಮುದುಕಿಯ ಸಾವಿಗೆ ಯಾರು ಹೊಣೆ? ರಾಜಕುಮಾರನೇ? ಪದ್ಮಾವತಿಯೇ? ಮಂತ್ರಿಪುತ್ರನೇ? ಅಥವಾ ರಾಜ ದಂತಘಾತನೇ? ವಿಕ್ರಮಾದಿತ್ಯನು ಶಾಂತಚಿತ್ತದಿಂದ ಉತ್ತರಿಸುತ್ತಾನೆ: ರಾಜಕುಮಾರ ಕೇವಲ ಪ್ರೇಮದ ಅಂಧತೆ ಯಲ್ಲಿದ್ದ; ಪದ್ಮಾವತಿ ಪ್ರಿಯಕರನ ಮಾತನ್ನು ನಂಬಿದಳು; ಮಂತ್ರಿಪುತ್ರ ತನ್ನ ಒಡೆಯನ ಕಾರ್ಯ ಸಾಧನೆಗಾಗಿ ತಂತ್ರ ರೂಪಿಸಿದ. ಆದರೆ ನಿಜವಾದ ಅಪರಾಧಿ ರಾಜ ದಂತಘಾತ!
ಸತ್ಯಾಸತ್ಯತೆಯನ್ನು ಸ್ವತಃ ಪರೀಕ್ಷಿಸದೆ, ಆಳವಾದ ವಿಚಾರಣೆ ನಡೆಸದೆ ಕೇವಲ ಆಪಾದನೆಯನ್ನು ನಂಬಿ ಮುಗ್ಧ ವೃದ್ಧೆಯ ಸಾವಿಗೆ ಕಾರಣನಾದ ರಾಜನೇ ಈ ಅನ್ಯಾಯದ ಪರಮ ಪಾಪಿ. ಈ ಕಥೆ ಯಿಂದ ನಾವು ತಿಳಿಯಬಹುದಾದ ಅನೇಕಾರ್ಮಿಕ ವಿಷಯಗಳಿವೆ. ಅಧಿಕಾರದಲ್ಲಿರುವವರು ಅಥವಾ ಮನೆಯ ಮುಖ್ಯಸ್ಥರು ಎದುರಿಗಿರುವ ಸನ್ನಿವೇಶದ ಹೊರನೋಟವನ್ನು ನೋಡಿ ಅಥವಾ ಯಾರೋ ಹೂಡಿದ ತಂತ್ರಕ್ಕೆ ಮರುಳಾಗಿ ಏಕಾಏಕಿ ನಿರ್ಧಾರಕ್ಕೆ ಬರಬಾರದು.
ಸತ್ಯವನ್ನು ಅರಿಯದೆ ತೆಗೆದುಕೊಳ್ಳುವ ನಿರ್ಧಾರ ಕೆಲವೊಮ್ಮೆ ಅಮಾಯಕರ ಬದುಕನ್ನೇ ಬಲಿ ಪಡೆಯುತ್ತದೆ. ನಮ್ಮನ್ನು ಅಧೋಗತಿಗಿಳಿಸುವ ಮತ್ತೊಂದು ಗುಣ ಬುದ್ಧಿವಂತಿಕೆಯ ದುರ್ಬಳಕೆ. ಮಂತ್ರಿ ಪುತ್ರನಿಗೆ ಸಮಸ್ಯೆಗಳನ್ನು ಬಿಡಿಸುವ ಅಪಾರ ಬುದ್ಧಿಶಕ್ತಿಯಿತ್ತು. ಆದರೆ ಆ ಚಾತುರ್ಯ ವನ್ನು ಒಬ್ಬ ಮುಗ್ಧ ಮುದುಕಿಯ ಬಲಿಪೀಠದ ಮೇಲೆ ಬಳಸಿದ್ದು ಆತನ ಜಾಣ್ಮೆಯ ಕಪ್ಪುಚುಕ್ಕೆ. ಬುದ್ಧಿವಂತಿಕೆಯು ಇನ್ನೊಬ್ಬರನ್ನು ರಕ್ಷಿಸಲು ಬಳಕೆ ಯಾಗಬೇಕೇ ಹೊರತು, ಸ್ವಾರ್ಥದ ಸಾಧನೆ ಗಾಗಿ ಅಮಾಯಕರನ್ನು ಬಲಿಪಶು ಮಾಡುವುದಕ್ಕಲ್ಲ.
ಪ್ರಾಮಾಣಿಕ ವಿಚಾರಣೆ ಇಲ್ಲದ ಅಧಿಕಾರ ಮತ್ತು ಕರುಣೆ ಇಲ್ಲದ ಬುದ್ಧಿವಂತಿಕೆ ಇವೆರಡೂ ಸಮಾಜಕ್ಕೆ ಕಂಟಕ. ಎಷ್ಟೇ ಜಾಣತನವಿದ್ದರೂ, ಅದರ ಜೊತೆಗೆ ನ್ಯಾಯಪ್ರಜ್ಞೆ ಮತ್ತು ಮನುಷ್ಯತ್ವ ವನ್ನು ಉಳಿಸಿ ಕೊಳ್ಳುವುದೇ ನಿಜವಾದ ಮನುಷ್ಯರ ಲಕ್ಷಣ.