ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ತನ್ನ ಭಕ್ತಿಯಿಂದ ಮಹಾಶಿವನ ಸಾಮೀಪ್ಯ ಪಡೆದುಕೊಂಡ ನಂದಿ

ಶಿವನು ಬಹಳ ಶಕ್ತಿಶಾಲಿ. ಅವನಿಗೆ ಅಸಾಧ್ಯವಾದುದು ಯಾವುದು? ಎಂದನು. ಶಿವನು ನನ್ನ ವಿಧಿ ಯನ್ನು ಖಂಡಿತ ಬದಲಾಯಿಸುತ್ತಾನೆ, ಆಶೀರ್ವದಿಸು ಎಂದು ತಂದೆಯಿಂದ ಅನುಮತಿ ಪಡೆದು ದೂರ ಪರ್ವತಗಳಿಗೆ ಹೋಗಿ ಶಿವನಾಮ ಜಪಿಸುತ್ತಾ ಘೋರ ತಪಸ್ಸು ಮಾಡಿದನು. ನಂದಿಯ ಕಠೋರ ತಪಸ್ಸಿಗೆ ಶಿವ ಮೆಚ್ಚಿ ಪ್ರತ್ಯಕ್ಷನಾದನು. ಶಿವನ ಸೌಂದರ್ಯವನ್ನು ನೋಡುತ್ತಾ ಮೈಮರೆತ ನಂದಿಗೆ ವರ ಕೇಳುವುದು ಮರೆತು ಹೋಗಿ, ಬಾಯಿಂದ ಯಾವ ಶಬ್ದವೂ ಹೊರಡಲಿಲ್ಲ

ತನ್ನ ಭಕ್ತಿಯಿಂದ ಮಹಾಶಿವನ ಸಾಮೀಪ್ಯ ಪಡೆದುಕೊಂಡ ನಂದಿ

-

ಒಂದೊಳ್ಳೆ ಮಾತು

‘ಶಿಲಾಧರ’ ಎಂಬ ಋಷಿ, ಈತ ಶಿವನ ಪರಮ ಭಕ್ತನಾಗಿದ್ದನು. ಅವನು ಶಿವನನ್ನು ಕುರಿತು ತಪಸ್ಸು ಮಾಡಿ ತನಗಾಗಿ ಒಂದು ಸಂತಾನವನ್ನು ಬೇಡಿದನು. ಶಿವ ಅವನ ತಪಸ್ಸಿಗೆ ಮೆಚ್ಚಿ ತಥಾಸ್ತು ಎಂದನು. ಶಿಲಾಧರನು ಸಂತೋಷದಿಂದ ಕುಟೀರಕ್ಕೆ ಮರಳಿದ. ಕೆಲವು ದಿನಗಳ ನಂತರ ನಿತ್ಯ ಕ್ರಮದಂತೆ, ಹೊಲದ ಬದಿ ನಡೆದು ಹೋಗುತ್ತಿರುವಾಗ, ಬೇಲಿ ಬದಿಯಲ್ಲಿ ಅವನಿಗೆ ನವಜಾತ ಶಿಶುವೂಂದು ಕಂಡಿತು. ಆ ಮಗುವಿನ ಸುತ್ತಲೂ ಸೂರ್ಯನಂತೆ ತೇಜಸ್ಸನ್ನು ಹರಡಿತ್ತು. ಋಷಿಯು ಆ ಮಗುವನ್ನು ಕುಟೀರಕ್ಕೆ ತೆಗೆದುಕೊಂಡು ಬಂದನು. ಮಗುವಿಗೆ ‘ನಂದಿ’ ಎಂದು ನಾಮಕರಣ ಮಾಡಿದನು.

ನಂದಿಯು ನೋಡಲು ಬಹಳ ಮುದ್ದಾಗಿದ್ದು, ತುಂಬಾ ಬುದ್ಧಿವಂತನಾಗಿದ್ದನು. ನಂದಿಯು ಸ್ವಲ್ಪ ದೊಡ್ಡವ ನಾಗುತ್ತಿದ್ದಂತೆ ಅವರ ಕುಟೀರಕ್ಕೆ ‘ಮಿತ್ರ ಮತ್ತು ವರುಣ’ ಎಂಬ ಇಬ್ಬರು ಮಹಾನ್ ತಪಸ್ವಿಗಳು ಬಂದರು. ಆ ಋಷಿಗಳು ಅವರ ಮನೆಯಲ್ಲಿ ಸ್ವಲ್ಪ ಕಾಲ ತಂಗುವುದಾಗಿ ತಿಳಿಸಿದರು.

ಶಿಲಾಧರನು ಸಂತೋಷದಿಂದ ಒಪ್ಪಿದನು. ಋಷಿಗಳಿಗೆ ಬೇಕಾದುದನೆಲ್ಲವ ಒದಗಿಸಿ, ಅವರ ಅನುಷ್ಠಾನಗಳಿಗೆ ತೊಂದರೆಯಾಗದಂತೆ ಅವುಗಳನ್ನು ಒದಗಿಸಿ, ಅತಿಥಿ ಸತ್ಕಾರ ಮಾಡುವಂತೆ ನಂದಿಗೆ ಹೇಳಿದನು. ನಂದಿಯು ತಂದೆಯ ಮಾತಿನಂತೆ ಋಷಿಗಳ ಸೇವೆಯನ್ನು ತುಂಬಾ ಶ್ರದ್ಧಾಭಕ್ತಿ ಯಿಂದ ಮಾಡಿದನು. ಆ ಋಷಿಗಳು ಹೊರಡುವ ಮುನ್ನ, ಶಿಲಾಧರನಿಗೆ, ನೀನು ಸುಖ, ಸಂತೋಷವಾಗಿ ದೀರ್ಘಾಯುಷ್ಯವಂತನಾಗಿ ಬಾಳು ಎಂದು ಹರಸಿದರು.

ಇದನ್ನೂ ಓದಿ: Roopa Gururaj Column: ಕಥಾಸರಿತ್ಸಾಗರ: ಬ್ರಾಹಣ, ಅವನ ಹೆಂಡತಿ ಮತ್ತು ಮೂರು ವರಗಳು

ನಂದಿಗೆ ಆಶೀರ್ವದಿಸುವ ಮುನ್ನ ಋಷಿಗಳು ಸ್ವಲ್ಪಕಾಲ ಮೌನವಾಗಿದ್ದು ನಂತರ, ಗಂಭೀರ ವದನರಾಗಿ, ನಂದಿ, ನೀನು ನಿನ್ನ ತಂದೆಯನ್ನು ಹಾಗೂ ಗುರುವನ್ನು ಚೆನ್ನಾಗಿ ಪ್ರೀತಿಯಿಂದ ನೋಡಿಕೋ ಮತ್ತು ಅವರ ಬಗ್ಗೆ ಹೆಚ್ಚಿನ ಶ್ರದ್ಧೆವಹಿಸು ಎಂದರು. ತನ್ನ ಮಗನಿಗೆ ಈ ತರಹ ಆಶೀರ್ವದಿಸಿದಾಗ ಶಿಲಾಧರನು ವ್ಯಾಕುಲ ಗೊಂಡು, ಮಹರ್ಷಿಗಳೇ ಏನಾಯಿತು? ನನ್ನ ಮಗನು ನಿಮ್ಮ ಸೇವೆ ಮಾಡುವಲ್ಲಿ ಅಚಾತುರ್ಯದಿಂದ ನಿಮಗೇನಾದರೂ ಲೋಪ ಮಾಡಿ ದನೇ? ಹೇಳಿ ಎಂದು ಹೆದರಿ ಕೇಳಿದನು.

ಆಗ ಋಷಿಗಳು, ಹಾಗೆಲ್ಲ ನಂದಿ ತಪ್ಪು ಮಾಡುವನಲ್ಲ. ಅವನು ಶಿವನ ವರಪ್ರಸಾದದಿಂದ ದೊರೆತ ವನು. ಆದರೆ ನಾವು ನಿನ್ನ ಮಗನಿಗೆ ದೀರ್ಘಾಯುಷ್ಯವಂತನಾಗು ಎಂದು ಆಶೀರ್ವಾದ ಮಾಡಲಾ ಗುವುದಿಲ್ಲ. ಏನು ಮಾಡುವುದು. ನಮಗೆ ಈ ವಿಷಯವನ್ನು ಹೇಳಲು ಮನಸ್ಸಿಗೆ ನೋವಾಗುತ್ತಿದೆ. ಬಾಲಕನ ಆಯಸ್ಸು ತುಂಬಾ ಕಡಿಮೆ ಇದೆ ಎಂದು ಹೇಳಿ ಅವರು ಹೊರಟೇಬಿಟ್ಟರು. ತಂದೆಯಿಂದ ವಿಷಯ ತಿಳಿದ ಬಾಲಕ ನಗುತ್ತಾ ನೀನೇಕೆ ಹೆದರುತ್ತಿಯಾ? ನಾನು ಭಕ್ತಿಯಿಂದ ಶಿವನನ್ನು ಆರಾಧಿಸುತ್ತೇನೆ. ನನ್ನ ಪ್ರಾರ್ಥನೆಗೆ ಅವನು ಒಲಿಯುತ್ತಾನೆ.

ಶಿವನು ಬಹಳ ಶಕ್ತಿಶಾಲಿ. ಅವನಿಗೆ ಅಸಾಧ್ಯವಾದುದು ಯಾವುದು? ಎಂದನು. ಶಿವನು ನನ್ನ ವಿಧಿಯನ್ನು ಖಂಡಿತ ಬದಲಾಯಿಸುತ್ತಾನೆ, ಆಶೀರ್ವದಿಸು ಎಂದು ತಂದೆಯಿಂದ ಅನುಮತಿ ಪಡೆದು ದೂರ ಪರ್ವತಗಳಿಗೆ ಹೋಗಿ ಶಿವನಾಮ ಜಪಿಸುತ್ತಾ ಘೋರ ತಪಸ್ಸು ಮಾಡಿದನು. ನಂದಿಯ ಕಠೋರ ತಪಸ್ಸಿಗೆ ಶಿವ ಮೆಚ್ಚಿ ಪ್ರತ್ಯಕ್ಷನಾದನು. ಶಿವನ ಸೌಂದರ್ಯವನ್ನು ನೋಡುತ್ತಾ ಮೈಮರೆತ ನಂದಿಗೆ ವರ ಕೇಳುವುದು ಮರೆತುಹೋಗಿ, ಬಾಯಿಂದ ಯಾವ ಶಬ್ದವೂ ಹೊರಡಲಿಲ್ಲ.

ನಂದಿಯು ಮನಸ್ಸಿನಲ್ಲಿ, ಆಹಾ ನಾನು ಶಿವನ ವಾಹನವಾಗುವುದಾದರೆ ಎಷ್ಟು ಚೆನ್ನಾಗಿರುತ್ತದೆ. ಶಿವನ ವಾಹನವಾದರೆ ಯಾವಾಗಲೂ ಅವನ ಜೊತೆಯ ಇರಬಹುದು, ಮತ್ತು ಶಿವನನ್ನು ಸದಾಕಾಲವೂ ನೋಡುತ್ತಿರಬಹುದು ಅಲ್ಲವೇ? ಎಂದು ಮನಸ್ಸಿನಲ್ಲಿ ಅಂದುಕೊಂಡನು. ಶಿವನಿಗೆ ನಂದಿಯ ಮನಸ್ಸಿನ ಮಾತುಗಳು ತಿಳಿದು ನಗುತ್ತಾ, ಆಯ್ತು ನಂದಿ ನಿನ್ನ ಮನದಿಚ್ಛೆಯಂತೆ ಆಗಲಿ ಎಂದು ವರ ನೀಡಿದನು.

ಅಂದಿನಿಂದ ನಂದಿಯ ಮುಖ ವೃಷಭನಂತೆ ಆಗಿ ಶಿವನ ಪ್ರಮುಖ ವಾಹನವಾದನು ಹಾಗೂ ಶಿವನ ಎಲ್ಲಾ ಗಣಗಳಿಗೂ ನಾಯಕನಾದನು. ಈಶ್ವರನ ದೇವಸ್ಥಾನಕ್ಕೆ ಹೋದಾಗ ಶಿವನ ದರ್ಶನ ದೊಂದಿಗೆ, ನಂದಿಯ ಬಲಕಿವಿಯಲ್ಲಿ ಯಾರಿಗೂ ಕೇಳದಂತೆ ಪಿಸುಮಾತಿನಲ್ಲಿ ಮನದ ಇಷ್ಟಾರ್ಥ ವನ್ನು ಬೇಡಿಕೊಂಡರೆ, ನಂದಿಯ ಮೂಲಕ ಶಿವನಿಗೆ ತಲುಪಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. ಭಗವಂತನಲ್ಲಿ ಅಪರಿಮಿತವಾದ ನಂಬಿಕೆ, ಭಕ್ತಿ ಶ್ರದ್ಧೆ ಇದ್ದಾಗ ಎಂತಹವರ ಜೀವನಕ್ಕೂ ಕೂಡ ಒಂದು ಸಾರ್ಥಕ್ಯ ಸಿಕ್ಕೇ ಸಿಗುತ್ತದೆ.