ಒಂದೊಳ್ಳೆ ಮಾತು
ಪ್ರಾಚೀನ ಕಾಲದಲ್ಲಿ ಪರಮ ಭಕ್ತನಾದ ಧ್ರುವ ಮಹಾರಾಜನ ಪುಣ್ಯ ವಂಶದಲ್ಲಿ ‘ಅಂಗ’ ಎಂಬ ಅತ್ಯಂತ ಧರ್ಮಾತ್ಮನಾದ ರಾಜನಿದ್ದನು. ಪ್ರಜೆಗಳನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ ಆತನಿಗೆ ಸುನೀಥೆ ಎಂಬ ಪತ್ನಿಯಿದ್ದಳು. ಈ ದಂಪತಿಗೆ ಜನಿಸಿದ ಮಗನೇ ‘ವೇನ’. ತಂದೆ ಅಂಗ ರಾಜನು ಬಹಳ ಒಳ್ಳೆಯವನಾಗಿದ್ದರೂ, ವೇನನು ಮಾತ್ರ ಹುಟ್ಟಿನಿಂದಲೇ ಕ್ರೂರ ಹಾಗೂ ಅಹಂಕಾರಿ ಸ್ವಭಾವದವನಾಗಿದ್ದನು. ಅವನಿಗೆ ಧರ್ಮ, ನ್ಯಾಯ ಮತ್ತು ಸಜ್ಜನರ ಬಗ್ಗೆ ಯಾವುದೇ ಗೌರವವಿರಲಿಲ್ಲ.
ಬಾಲ್ಯದಿಂದಲೇ ಪ್ರಾಣಿಗಳನ್ನು ಹಿಂಸಿಸುವುದು, ಮುಗ್ಧರಿಗೆ ಕಷ್ಟ ಕೊಡುವುದು ಅವನ ಚಾಳಿ ಯಾಗಿತ್ತು. ತನ್ನ ಮಗನ ದುಷ್ಟ ನಡವಳಿಕೆಯನ್ನು ತಿದ್ದಲು ಅಂಗ ರಾಜನು ಎಷ್ಟೇ ಪ್ರಯತ್ನಿಸಿ ದರೂ ವಿಫಲನಾದನು. ಕೊನೆಗೆ ಬೇಸತ್ತ ಅಂಗ ರಾಜನು ರಾಜ್ಯವನ್ನು ತ್ಯಜಿಸಿ ಕಾಡಿಗೆ ತಪಸ್ಸಿಗೆ ತೆರಳಿದನು. ಆಗ ಮಂತ್ರಿಗಳು ಮತ್ತು ಋಷಿಗಳು ಅನಿವಾರ್ಯವಾಗಿ ವೇನನಿಗೆ ಪಟ್ಟಾಭಿಷೇಕ ಮಾಡಿದರು.
ಸಿಂಹಾಸನವೇರಿದೊಡನೆ ವೇನನ ಅಹಂಕಾರ ಮುಗಿಲು ಮುಟ್ಟಿತು. ತಾನೇ ಈ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಶ್ರೇಷ್ಠ ಎಂಬ ದುರಹಂಕಾರ ಅವನ ತಲೆಗೇರಿತು. ಸಂಪೂರ್ಣ ಅಧಿಕಾರ ಕೈಗೆ ಬಂದ ಕೂಡಲೇ ಅವನು ರಾಜ್ಯದಲ್ಲಿ ಒಂದು ವಿಚಿತ್ರ ಮತ್ತು ಕ್ರೂರವಾದ ಆಜ್ಞೆಯನ್ನು ಹೊರಡಿಸಿ ದನು. ಈ ಭೂಮಿಯ ಮೇಲೆ ಯಾವುದೇ ಯಜ್ಞ, ಯಾಗ, ದಾನ, ಧರ್ಮಗಳು ನಡೆಯಬಾರದು. ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವಂತಿಲ್ಲ.
ಇದನ್ನೂ ಓದಿ: Roopa Gururaj Column: ಕ್ಷಮೆಯ ಹಿರಿಮೆ ಸಾರುವ ಗೃಷ್ಣೇಶ್ವರ ಜ್ಯೋತಿರ್ಲಿಂಗದ ಕಥೆ
ಭಗವಂತನಾದ ವಿಷ್ಣು ಅಥವಾ ಬೇರೆ ಯಾವುದೇ ದೇವರನ್ನು ಪೂಜಿಸುವಂತಿಲ್ಲ. ನಾನೇ ಸರ್ವ ಶ್ರೇಷ್ಠ, ನಾನೇ ದೇವರು. ಆದ್ದರಿಂದ ಎಲ್ಲರೂ ನನ್ನನ್ನು ಮಾತ್ರ ಪೂಜಿಸಬೇಕು ಎಂದು ಡಂಗುರ ಸಾರಿಸಿದನು. ವೇನನ ಈ ಅಧರ್ಮದ ಆಜ್ಞೆಯಿಂದ ರಾಜ್ಯದಲ್ಲಿ ಹಾಹಾಕಾರ ಉಂಟಾಯಿತು. ಯಜ್ಞ-ಯಾಗಾದಿಗಳು ನಿಂತುಹೋದ ಕಾರಣ ದೇವತೆಗಳಿಗೆ ತೃಪ್ತಿಯಾಗದೆ, ಮಳೆ-ಬೆಳೆಗಳಿಲ್ಲದೆ ಪ್ರಜೆಗಳು ಸಂಕಷ್ಟಕ್ಕೀಡಾದರು. ಇದನ್ನು ಗಮನಿಸಿದ ಸಪ್ತರ್ಷಿಗಳು ಮತ್ತು ಇತರ ಮಹರ್ಷಿಗಳು ಒಗ್ಗೂಡಿ ವೇನನ ಆಸ್ಥಾನಕ್ಕೆ ಬಂದರು. ಅವರು ಅತ್ಯಂತ ವಿನಯದಿಂದಲೇ ವೇನನಿಗೆ ಬುದ್ಧಿವಾದ ಹೇಳಿದರು. ಮಹಾರಾಜ, ಯಜ್ಞ- ಯಾಗಗಳು ಜಗತ್ತಿನ ಕಲ್ಯಾಣಕ್ಕಾಗಿ ನಡೆಯುತ್ತವೆ.
ಭಗವಂತನಾದ ವಿಷ್ಣುವಿನ ಆರಾಧನೆಯಿಂದ ರಾಜ್ಯಕ್ಕೆ ಸುಭಿಕ್ಷೆ ಲಭಿಸುತ್ತದೆ. ದಯವಿಟ್ಟು ನಿನ್ನ ಈ ಆeಯನ್ನು ಹಿಂಪಡೆದು, ಧರ್ಮದಿಂದ ರಾಜ್ಯಭಾರ ಮಾಡು ಎಂದು ಪ್ರಾರ್ಥಿಸಿದರು. ಆದರೆ ಅಧಿಕಾರದ ಮದದಲ್ಲಿದ್ದ ವೇನನಿಗೆ ಋಷಿಗಳ ಮಾತು ಮನನವಾಗಲಿಲ್ಲ. ಬದಲಾಗಿ ಅವನು ಋಷಿಗಳನ್ನು ಅವಮಾನಿಸಿದನು. ಯಾರು ಆ ವಿಷ್ಣು? ಆತನಿಗೆ ನನಗಿಂತ ಹೆಚ್ಚು ಶಕ್ತಿಯಿದೆಯೇ? ನಾನೇ ಸಕಲ ದೇವತೆಗಳಿಗಿಂತ ಮಿಗಿಲಾದವನು. ನನ್ನನ್ನು ಬಿಟ್ಟು ಬೇರೆ ದೇವರಿಲ್ಲ.
ನನ್ನ ಆಜ್ಞೆಯನ್ನು ಮೀರಿದರೆ ಕಠಿಣ ಶಿಕ್ಷೆಗೆ ಒಳಗಾಗುವಿರಿ ಎಂದು ಅಬ್ಬರಿಸಿದನು. ವೇನನ ಈ ಮಿತಿಮೀರಿದ ಅಹಂಕಾರ, ದೇವನಿಂದನೆಯನ್ನು ಕಂಡು ಋಷಿಗಳಿಗೆ ವಿಪರೀತ ಕೋಪ ಬಂತು. ಇವನು ಹೀಗೆಯೇ ಬದುಕಿದ್ದರೆ ಇಡೀ ಜಗತ್ತನ್ನೇ ನಾಶಮಾಡುತ್ತಾನೆ, ಧರ್ಮವು ಸಂಪೂರ್ಣ ವಾಗಿ ನಶಿಸಿಹೋಗುತ್ತದೆ ಎಂದು ನಿರ್ಧರಿಸಿದ ಋಷಿಗಳು, ತಮ್ಮ ತಪಃಶಕ್ತಿಯಿಂದ ಒಂದು ದರ್ಭೆ ಯನ್ನು (ಹುಲ್ಲಿನ ಕಡ್ಡಿ) ಮಂತ್ರಿಸಿ ವೇನನ ಮೇಲೆ ಪ್ರಯೋಗಿಸಿದರು. ಆ ಮಂತ್ರಿಸಿದ ಹುಲ್ಲಿನ ಪ್ರಭಾವ ದಿಂದಲೇ ದುರಹಂಕಾರಿ ವೇನನು ಪ್ರಾಣಬಿಟ್ಟನು.
ತದನಂತರ ರಾಜ್ಯಕ್ಕೆ ಅರಾಜಕತೆ ಬರದಂತೆ ತಡೆಯಲು ಋಷಿಗಳು ವೇನನ ಶರೀರವನ್ನು ಮಥಿಸಿ, ಸದ್ಗುಣ ಸಂಪನ್ನನಾದ ‘ಪೃಥು’ ಮಹಾರಾಜ ನನ್ನು ಸೃಷ್ಟಿಸಿದರು. ಆ ಪೃಥುವು ವೇನನ ಪಾಪ ಗಳನ್ನು ತೊಳೆದು, ಧರ್ಮದಿಂದ ರಾಜ್ಯವಾಳಿ ಜಗತ್ತನ್ನು ಉದ್ಧಾರ ಮಾಡಿದನು. ವಿಷ್ಣು ಪುರಾಣ ದಲ್ಲಿ ಬರುವ ಇದೇ ಕಥೆಯು ‘ಶ್ರೀಮದ್ಭಾಗವತ ಪುರಾಣ’ದಲ್ಲಿಯೂ ಹೆಚ್ಚು ವಿವರವಾಗಿ ಕಂಡುಬರುತ್ತದೆ.
ಅಧಿಕಾರ, ಸಂಪತ್ತು ಮತ್ತು ಶಕ್ತಿ ಬಂದಾಗ ಮನುಷ್ಯನು ವಿನಯಶೀಲನಾಗಬೇಕು. ಅಧಿಕಾರವನ್ನು ಸಮಾಜದ ಒಳಿತಿಗಾಗಿ ಬಳಸಬೇಕೇ ಹೊರತು, ತನ್ನ ಸ್ವಾರ್ಥ ಮತ್ತು ಅಹಂಕಾರದ ಪ್ರದರ್ಶನಕ್ಕಲ್ಲ. ವೇನನಿಗೆ ಇವೆಲ್ಲವೂ ಇದ್ದರೂ, ಅವನ ಅಹಂಕಾರ ಮತ್ತು ಅತಿಯಾದ ಗರ್ವವೇ ಅವನ ವಿನಾಶಕ್ಕೆ ಕಾರಣವಾಯಿತು. ಅಹಂಕಾರವು ಎಂಥ ಶಕ್ತಿಶಾಲಿಯನ್ನಾದರೂ ಮಣ್ಣುಪಾಲು ಮಾಡುತ್ತದೆ.