ಒಂದೊಳ್ಳೆ ಮಾತು
rgururaj628@gmail.com
ಕುಮಾರವ್ಯಾಸನ ಮೂಲ ಹೆಸರು ‘ನಾರಣಪ್ಪ’. ಆತನು ಗದುಗಿನ ವೀರನಾರಾಯಣನ ಪರಮ ಭಕ್ತನಾದುದರಿಂದ ಎಲ್ಲರೂ ಅವನನ್ನು ‘ಗದುಗಿನ ನಾರಣಪ್ಪ’ ಎಂದೇ ಕರೆಯುತ್ತಿದ್ದರು. ನಾರಣಪ್ಪನಿಗೆ ಕೃಷ್ಣನನ್ನು ಹಾಡಿ ಹೊಗಳುವುದೆಂದರೆ ಅಪರಿಮಿತವಾದ ಆನಂದ. ನಾರಾಯಣನ ಸ್ಮರಣೆಯಲ್ಲಿದ್ದಾಗ ಆತನು ತನ್ನನ್ನು ತಾನೇ ಮರೆತುಬಿಡುತ್ತಿದ್ದ.
ವ್ಯಾಸಭಾರತವನ್ನು ದೀರ್ಘವಾಗಿ ಅಭ್ಯಾಸ ಮಾಡಿದ್ದ ನಾರಣಪ್ಪನಿಗೆ ಮಹಾಭಾರತವನ್ನು ಸರಳ ವಾದ ಕನ್ನಡದಲ್ಲಿ ಓದುಗರ ಮನಮುಟ್ಟುವಂತೆ ಹೇಳಬೇಕೆಂಬ ಆಸೆ ಬೇರೂರಿತ್ತು. ಆದರೆ ಎಷ್ಟೇ ಪ್ರಯತ್ನಪಟ್ಟರೂ ಆ ಕೃಷ್ಣ ಕಥೆಯನ್ನು ಪ್ರಾರಂಭಿಸಲು ಕುಳಿತರೆ, ಮನದಾಳದಲ್ಲಿ ಹುದುಗಿದ್ದ ಭಕ್ತಿಸುಧೆಯನ್ನು ಬರವಣಿಗೆಯಲ್ಲಿ ಇಳಿಸಲಾಗುತ್ತಿರಲಿಲ್ಲ.
ಪ್ರತಿದಿನ ವೀರನಾರಾಯಣನ ದೇವಸ್ಥಾನಕ್ಕೆ ಬಂದು ತನಗೆ ಮಹಾಭಾರತ ಕಥೆಯನ್ನು ಬರೆಯು ವಂಥ ಶಕ್ತಿ ಹಾಗೂ ಕೌಶಲವನ್ನು ದಯಪಾಲಿಸು ಎಂದು ಪ್ರಾರ್ಥಿಸುತ್ತಿದ್ದನು. ಒಂದು ದಿನ ಹೀಗೆ ವೀರನಾರಾಯಣದ ದೇವಸ್ಥಾನದಲ್ಲಿ ಭಗವಂತನ ಮುಂದೆ ಕುಳಿತು ಅನನ್ಯವಾಗಿ ಪ್ರಾರ್ಥನೆ ಮಾಡುತ್ತಿದ್ದಾಗ ಹಾಗೇ ಜೊಂಪು ಹತ್ತಿದ ಹಾಗಾಗಿ ಕನಸು ಬಿದ್ದಿತು. ಆ ಕನಸಿನಲ್ಲಿ ಕಾಣಿಸಿಕೊಂಡ ಶ್ರೀಕೃಷ್ಣ ಪರಮಾತ್ಮನು, “ಭಕ್ತಾ, ಚಿಂತಿಸಬೇಡ. ಶೀಘ್ರದಲ್ಲಿಯೇ ನಿನಗೆ ನನ್ನ ಪರಮಭಕ್ತನೂ ಚಿರಂಜೀವಿಯೂ ಆದ ಅಶ್ವತ್ಥಾಮನ ದರ್ಶನವಾಗುತ್ತದೆ. ಅವನು ನಿನಗೆ ನನ್ನ ಕಥೆಯನ್ನು ಹೇಳುತ್ತಾನೆ. ನೀನು ಮಹಾಭಾರತ ಕಥೆಯನ್ನು ರಚಿಸುವುದರಲ್ಲಿ ಯಶಸ್ವಿಯಾಗುತ್ತೀಯ" ಎಂದು ಹೇಳಿದಂತಾಯಿತು.
ಇದನ್ನೂ ಓದಿ: Roopa Gururaj Column: ಧರ್ಮನಿಷ್ಠರಾಗಿರುವುದು ಬಹಳ ಮುಖ್ಯ
‘ಇದು ಭಗವಂತನ ಅನುಗ್ರಹವೇ ಇರಬೇಕು. ನಾನು ಅಶ್ವತ್ಥಾಮನನ್ನು ಹುಡುಕಿಯೇ ಹುಡುಕುತ್ತೇನೆ. ಅವನ ಸಹಕಾರದಿಂದ ಮಹಾಭಾರತದ ಕಥೆಯನ್ನು ಬರೆಯುತ್ತೇನೆ’ ಎಂದು ಕುಮಾರವ್ಯಾಸನು ಛಲತೊಟ್ಟು ಮುಂದಿನ ದಿನಗಳಲ್ಲಿ ಅಶ್ವತ್ಥಾಮನಿಗಾಗಿ ಹುಡುಕಾಡತೊಡಗಿದ. ಆ ಕಾಲದಲ್ಲಿ ಸಾಮಾನ್ಯವಾಗಿ. ‘ಸಾವಿರ ಮಂದಿ ಸೇರುವ ಧರ್ಮಕಾರ್ಯಗಳ ಸಂತರ್ಪಣೆಗಳಿಗೆ ಅಶ್ವತ್ಥಾಮನು ಆಗಮಿಸುತ್ತಾನೆ.
ಅಲ್ಲಿ ಅವನು ದೇವರ ಪ್ರಸಾದವನ್ನು ಸ್ವೀಕರಿಸಿ ಹೋಗುತ್ತಾನೆ’ ಎಂಬ ನಂಬಿಕೆಯಿದ್ದಿತು. ಅಂಥ ಅನೇಕ ಜಾಗಗಳಿಗೆ ಹೋದರೂ ಅಶ್ವತ್ಥಾಮನ ದರ್ಶನ ಆಗಲೇ ಇಲ್ಲ. ಛಲಬಿಡದ ಕುಮಾರ ವ್ಯಾಸನು ತನ್ನ ಪ್ರಯತ್ನವನ್ನು ಮುಂದುವರಿಸುತ್ತಲೇ ಹೋದ. ಒಮ್ಮೆ ಯಾವುದೋ ದೇವಾಲಯದಲ್ಲಿ ನಡೆಯುತ್ತಿದ್ದ ಧರ್ಮಕಾರ್ಯವೊಂದರಲ್ಲಿ ಭಾಗವಹಿಸಿದ್ದ ಕುಮಾರವ್ಯಾಸ, ಪ್ರಸಾದ ಸ್ವೀಕರಿಸಲೆಂದು ಊಟಕ್ಕೆ ಕುಳಿತಿದ್ದ, ಅವನು ಕುಳಿತಿದ್ದ ಎದುರಿನ ಸಾಲಿನಲ್ಲಿ ಇಬ್ಬರು ಮಕ್ಕಳು ಒಂದು ಬಾಳೆ ಎಲೆಗಾಗಿ ಕಿತ್ತಾಡುತ್ತಿದ್ದರು.
ಕೊನೆಗೆ ಅವರಲ್ಲಿ ಒಬ್ಬನು ಆ ಎಲೆಯನ್ನು ಗಿಟ್ಟಿಸುವುದರಲ್ಲಿ ಜಯಶೀಲನಾದನು. ಅವರ ಜಗಳ ವನ್ನು ನೋಡುತ್ತಿದ್ದ ಅ ಇದ್ದ ಮುದುಕನೊಬ್ಬ, “ಭೇಷ್, ಛಲ ಎಂದರೆ ಹೀಗಿರಬೇಕು ಮಗು. ದುರ್ಯೋಧನನಲ್ಲಿ ಇಂಥ ಛಲವನ್ನು ನೋಡಿದ್ದೆ, ಈಗ ನಿನ್ನಲ್ಲಿ ಈ ಛಲವನ್ನು ನೋಡು ತ್ತಿದ್ದೇನೆ" ಎನ್ನುತ್ತ ಆ ಗೆದ್ದ ಹುಡುಗನ ಬೆನ್ನು ತಟ್ಟಿ ಮುದ್ದಾಡಿದನು.
ಕುಮಾರವ್ಯಾಸನಿಗೆ ಮಿಂಚು ಹೊಡೆದಂತಾಗಿ ಅವನೇ ಅಶ್ವತ್ಥಾಮ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ. ತಕ್ಷಣ ಅ ಅವರ ಪಾದಗಳಿಗೆರಗುತ್ತ, “ಸ್ವಾಮೀ, ತಾವು ಅಶ್ವತ್ಥಾಮ ಮಹಾಮುನಿಗಳಲ್ಲವೇ? ದಯಮಾಡಿ ನನಗೆ ಮಹಾಭಾರತದ ಕಥೆಯನ್ನು ಹೇಳಬೇಕು. ಅದನ್ನು ಬರೆಯುವಂತೆ ನನಗೆ ಕೃಷ್ಣ ಪರಮಾತ್ಮನ ಪ್ರೇರಣೆಯಾಗಿದೆ" ಎಂದು ಪ್ರಾರ್ಥಿಸಿದನು.
ಶುರುವಿನಲ್ಲಿ ಆ ವೃದ್ಧನು ನಿರಾಕರಿಸಿದ. ಆದರೆ ಕುಮಾರವ್ಯಾಸ ಬಿಡದಿದ್ದಾಗ ಆ ವೃದ್ಧನು ಮಣಿಯಲೇಬೇಕಾಯಿತು. ಅವರು ಕುಮಾರವ್ಯಾಸನ ಕಡೆ ತಿರುಗಿ “ವತ್ಸ, ನೀನು ಹೇಳುತ್ತಿರುವಂತೆ ನಾನು ಅಶ್ವತ್ಥಾಮನೇ. ನಿನ್ನ ಅಪೇಕ್ಷೆಯಂತೆ ನಾನು ನಿನಗೆ ಮಹಾಭಾರತದ ಕಥೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ನಾನೂ ನಿನ್ನಂಥ ಒಬ್ಬ ಭಕ್ತನಿಗಾಗಿ ಹುಡುಕುತ್ತಿದ್ದೆ. ಆದರೆ ನನ್ನ ದೊಂದು ಷರತ್ತು. ನನ್ನ ಗೆಳೆಯ ದುರ್ಯೋಧನನ ಸಾವಿನ ತನಕ ಮಾತ್ರ ನಾನು ಮಹಾಭಾರತ ಕಥೆಯನ್ನು ಹೇಳಬಲ್ಲೆ, ಅಲ್ಲಿಂದ ಮುಂದೆ ನಾನು ಹೇಳಲಾರೆ, ಹೇಳುವುದಕ್ಕಾಗುವುದೂ ಇಲ್ಲ.
ನಮ್ಮ ಮಧ್ಯ ಪರದೆಯೊಂದು ಇರುತ್ತದೆ, ನೀನು ಯಾವುದೇ ಕಾರಣಕ್ಕೂ ಅದನ್ನು ಸರಿಸಿ ನನ್ನನ್ನು ನೋಡಬಾರದು. ಅದಕ್ಕೆ ನೀನು ಒಪ್ಪುವುದಾದರೆ ಮಹಾಭಾರತದ ಕಥೆಯನ್ನು ಬರೆಯಲು ನಾಳೆಯಿಂದಲೇ ಪ್ರಾರಂಭಿಸೋಣ" ಎಂದ. ಅಶ್ವತ್ಥಾಮನ ಮಾತುಗಳಿಂದ ಕುಮಾರವ್ಯಾಸ ನಿಗಾದ ಸಂತೋಷಕ್ಕೆ ಮಿತಿಯೇ ಇಲ್ಲವಾಯಿತು. ಅಶ್ವತ್ಥಾಮನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತ ಎಲ್ಲಕ್ಕೂ ಒಪ್ಪಿಗೆ ನೀಡಿದ.
ಜೀವನದಲ್ಲಿ ಮಹತ್ತರವಾದದ್ದೇನಾದರೂ ಸಾಧಿಸಬೇಕಾದೆ ಅದಕ್ಕೆ ಗುರುದರ್ಶನ, ಅವರ ಆಶೀರ್ವಾದ ಬಹಳ ಮುಖ್ಯ. ಇದಕ್ಕೆ ನಾವು ನಿರಂತರ ಅಂಥ ಒಂದು ಕೃಪಾಕಟಾಕ್ಷಕ್ಕೆ ಧ್ಯಾನಿಸುತ್ತಾ, ಅದನ್ನು ಸಾಧಿಸುವ ಒಂದೇ ಮನಸ್ಸಿನಿಂದ ಪರಿಶ್ರಮ ಪಟ್ಟಾಗ ಮಾತ್ರ ಇಂಥ ಗುರುದರ್ಶನಗಳು ಸಾಧ್ಯ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಅಂತ ಬಲ್ಲವರು ಹೇಳಿರುವುದು ಅದಕ್ಕೇ ಅಲ್ಲವೇ?