ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghav Sharma Nidle Column: ಭಟ್‌ ಸಾಬ್‌ʼಗೆ ಲಿಚ್ಚಿ ಕಳುಹಿಸುತ್ತಿದ್ದ ಲಾಲೂ !

2025ರ ಬಿಹಾರ ವಿಧಾನಸಭಾ ಚುನಾವಣೆ ವರದಿಗಾಗಿ ನಾನು ಬಿಹಾರದಲ್ಲಿದ್ದೇನೆ ಎನ್ನುವುದು ಗೊತ್ತಾಗಿ, ಬೆಂಗಳೂರಿನ ಮನೆಯಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಕೆ.ಎನ್.ಭಟ್ಟರು ಫೋನಾಯಿಸಿದ್ದರು. “ನೀನು ಈಗ ಎಲ್ಲಿದ್ದಿ?" ಎಂದು ಭಟ್ಟರು ಕೇಳಿದ್ದಕ್ಕೆ ನಾನು, “ಮುಜಫರಪುರದ ಕರ್ನಾಟಕ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದೇನೆ" ಎಂದು ಉತ್ತರಿಸಿದೆ. “ಓಹ್ ಅಲ್ಲಿದ್ದೀಯಾ, ಹಾಗಾದರೆ ಮುಜಫರಪುರ ಲಿಚ್ಚಿ ತಿನ್ನದೆ ಬರಬೇಡ. ನನಗೆ ಲಾಲೂ ಪ್ರಸಾದ್ ಅಲ್ಲಿಂದ ಲಿಚ್ಚಿ ಕಳುಹಿಸಿಕೊಡುತ್ತಿದ್ದರು" ಎಂದರು.

ಜನಪಥ

ರಾಘವ ಶರ್ಮ ನಿಡ್ಲೆ

ಖಡಕ್ ಅಧಿಕಾರಿ ಎಂದೇ ಖ್ಯಾತರಾಗಿದ್ದ ಟಿ.ಎನ್.ಶೇಷನ್ ಅವರು ಭಾರತದ ಮುಖ್ಯ ಚುನಾವಣಾಧಿ ಕಾರಿಯಾಗಿದ್ದ (1990-96) ಕಾಲವದು. ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಗಳಷ್ಟೇ ಬಾಕಿ ಇದ್ದವು. ನಿಗದಿತ ಅವಧಿಗೆ ಬಿಹಾರ ಚುನಾವಣೆ ನಡೆಸಬೇಕೆಂದರೆ ಎಲ್ಲಾ ಮತದಾರರು ತಮ್ಮ ಗುರುತಿನ ಚೀಟಿ ಹೊಂದಿರಲೇಬೇಕು. ಮತದಾರರ ಚೀಟಿ ಇದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುವುದು.

ಹೀಗಾಗಿ, ಈ ಸಂಬಂಧ ರಾಜ್ಯ ಸರಕಾರ ಕಾರ್ಯೋನ್ಮುಖವಾಗಬೇಕು ಎಂದು ಶೇಷನ್ ಅವರು ಅಂದಿನ ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್‌ಗೆ ಪದೇಪದೆ ನೆನಪಿಸುತ್ತಿದ್ದರು. ಆದರೆ, ಲಾಲೂ ಅದನ್ನು ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಅವರ ಹಠಮಾರಿ ಧೋರಣೆಯಿಂದ ಸಿಟ್ಟಾದ ಶೇಷನ್, ಚುನಾವಣೆಯನ್ನು ಮುಂದಕ್ಕೆ ಹಾಕಲು ನಿರ್ಧರಿಸಿದರು.

ಚುನಾವಣಾ ಆಯೋಗದ ಕ್ರಮವನ್ನು ಟೀಕಿಸಿದ ಲಾಲೂ, ವಿರೋಧ ಪಕ್ಷಗಳಿಗೆ (ಕಾಂಗ್ರೆಸ್ ಮತ್ತು ಬಿಜೆಪಿ) ಲಾಭ ಮಾಡಲು ಮತ್ತು ಆರ್ ಜೆಡಿಯನ್ನು ರಾಜಕೀಯವಾಗಿ ನಾಶ ಮಾಡಲು ಶೇಷನ್ ಚುನಾವಣೆಗಳನ್ನು ಮುಂದೂಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ, ಚುನಾವಣೆಯನ್ನು ನಿಗದಿತ ಅವಧಿಗೇ ನಡೆಸಬೇಕು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ನ ಮೊರೆಹೋಗಲು ತೀರ್ಮಾನ ಮಾಡಿದರು.

ಇದನ್ನೂ ಓದಿ: Raghav Sharma Nidle Column: ಮಹಾಮೈತ್ರಿಯೊಳಗೆ ಅಪನಂಬಿಕೆಯ ಅಪಸ್ವರ

ಈ ಸಂದರ್ಭದಲ್ಲಿ, ಲಾಲೂಗೆ ಕರ್ನಾಟಕ ಮೂಲದ, ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕೆ.ಎನ್. ಭಟ್ ಅವರ ಪರಿಚಯವಾಗಿ ಅವರ ಮೂಲಕವೇ ಅರ್ಜಿ ಸಲ್ಲಿಸಿ ನಿಗದಿತ ಅವಧಿಗೆ ಚುನಾವಣೆ ನಡೆಸುವಂತೆ ಕೋರಲಾಯಿತು. ಲಾಲೂ ಪರ ವಾದಿಸಿದ ಕೆ.ಎನ್.ಭಟ್, ಚುನಾವಣೆ ದಿನಾಂಕವನ್ನು ಮುಂದಕ್ಕೆ ಹಾಕಿರುವ ಆಯೋಗದ ಕ್ರಮ ಏಕಪಕ್ಷೀಯವಾಗಿದ್ದು, ಆಯೋಗ ತನ್ನ ಅಧಿಕಾರ ಮೀರಿ ವರ್ತಿಸುತ್ತಿದೆ ಎಂದು ಹೇಳಿ ಗಮನ ಸೆಳೆದರು.

ಸುಪ್ರೀಂಕೋರ್ಟ್ ಕೂಡ ದಿನಾಂಕ ಮುಂದೂಡಿಕೆಗೆ ಅಸಮ್ಮತಿ ಸೂಚಿಸಿ, ನಿಗದಿತ ಅವಧಿಗೇ ನ್ಯಾಯಸಮ್ಮತ ಚುನಾವಣೆ ನಡೆಸುವಂತೆ ಆಯೋಗಕ್ಕೆ ನಿರ್ದೇಶಿಸಿತು. ಆಯೋಗಕ್ಕೆ ಮತ್ತು ತಮ್ಮ ವಿರುದ್ಧ ಬಹಿರಂಗ ಸಮರ ಸಾರಿದ್ದ ಟಿ.ಎನ್.ಶೇಷನ್‌ರಿಗೆ ಸುಪ್ರೀಂಕೋರ್ಟ್‌ನಲ್ಲಿ ಮುಖಭಂಗ ವಾಯ್ತು ಎಂದು ಸಂಭ್ರಮಿಸಿದ್ದ ಲಾಲೂ, ಕೇಸ್ ಗೆದ್ದ ಬಳಿಕ ಕೆ.ಎನ್. ಭಟ್ಟರನ್ನು ಬಿಗಿದಪ್ಪಿ ಕೊಂಡಿದ್ದರು.

ಶೇಷನ್ ಅವರು ಚುನಾವಣಾ ನೀತಿ ಸಂಹಿತೆಯ ಜಾರಿ, ಮತದಾರರ ಗುರುತಿನ ಚೀಟಿ ಜಾರಿಗೊಳಿಸು ವುದು, ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿಗೊಳಿಸುವುದು ಸೇರಿದಂತೆ ಅನೇಕ ಕಠಿಣ ಸುಧಾರಣೆ ಗಳನ್ನು ತಂದಿದ್ದರು ಮತ್ತು ಬಿಹಾರದಲ್ಲೂ ಇದನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದರು. ಅದು ಬಿಹಾರದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವ ಅವರ ವಿಶಾಲ ಪ್ರಯತ್ನದ ಭಾಗವಾಗಿತ್ತು.

Screenshot_6 R

ಕೋರ್ಟ್ ಆದೇಶದಂತೆ ಆಯೋಗ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿತು. ಕೋರ್ಟಿನಲ್ಲಿ ಹಿನ್ನಡೆಯಾಗಿದ್ದರೂ, ಲಾಲೂವನ್ನು ಸುಮ್ಮನೆ ಬಿಡಲಾರೆ ಎಂದು ತೀರ್ಮಾನಿಸಿದ್ದ ಶೇಷನ್, 30 ದಿನಗಳಲ್ಲಿ ಪೂರ್ಣಗೊಳಿಸಬೇಕಾಗಿದ್ದ ಚುನಾವಣೆಯನ್ನು, ಸುಮಾರು 70 ದಿನಗಳ ಕಾಲ ನಡೆಯುವಂತೆ ಮಾಡಿದರು.

ಹಲವು ಕ್ಷೇತ್ರಗಳಲ್ಲಿ ಮರುಚುನಾವಣೆಗೆ ಶೇಷನ್ ಆದೇಶಿಸಿದ್ದರಿಂದ ವಿವಿಧೆಡೆ ಮರು ಚುನಾವಣೆ ಗಳು ನಡೆದವು. ಅಕ್ರಮದ ಬಗ್ಗೆ ಅನುಮಾನ ಬಂದರೆ, ಆರೋಪಗಳು ಕೇಳಿ ಬಂದರೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಸುವ ಅಧಿಕಾರ ಚುನಾವಣಾ ಆಯೋಗಕ್ಕಿತ್ತು. ಇದರಿಂದಾಗಿ 1995ರ ಮಾರ್ಚ್ ತಿಂಗಳಲ್ಲಿ ಮುಗಿಯಬೇಕಾಗಿದ್ದ ಚುನಾವಣೆ ಏಪ್ರಿಲ್ 15ರ ಸುಮಾರಿಗೆ ಪೂರ್ಣ ಗೊಂಡಿತ್ತು.

ಈ ಚುನಾವಣೆ ಪ್ರಚಾರಕ್ಕೆ ಬರುವಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಲಾಲೂ ಯಾದವ್ ಆಹ್ವಾನ ನೀಡಿದ್ದರು. ಆದರೆ, ‘ನನಗೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಹೆಗಡೆ ತಿಳಿಸಿದರು. ಏನು ಮಾಡುವುದು ಎಂದು ಯೋಚಿಸಿದ ಲಾಲೂ, ವಕೀಲ ಮಿತ್ರ ಕೆ.ಎನ್. ಭಟ್ಟರಿಗೆ ಹೆಗಡೆಯವರ ಪರಿಚಯವಿದೆ ಎಂದು ತಿಳಿದು ಭಟ್ಟರಿಗೆ ಫೋನಾಯಿಸಿದರು.

“ಕೈಸೇ ಹೋ ಭಟ್ ಸಾಬ್" ಎಂದು ಮಾತು ಶುರು ಮಾಡಿದ ಲಾಲೂ, ರಾಮಕೃಷ್ಣ ಹೆಗಡೆಯವರು ಇಲ್ಲಿ ಪ್ರಚಾರಕ್ಕೆ ಬರುವಂತೆ ನೀವೇ ಹೇಳಬೇಕು. ನಾನು ಕೇಳಿದರೆ ಬರಲಾಗುತ್ತಿಲ್ಲ ಎನ್ನುತ್ತಿದ್ದಾರೆ. ಅವರನ್ನು ನೀವು ಒಪ್ಪಿಸಿ ಎಂದು ಫೋನಿಟ್ಟರು. ಭಟ್ಟರು ಹೆಗಡೆಯವರಿಗೆ ಫೋನಾಯಿಸಿ, “ನೀವು ಪಟನಾಕ್ಕೆ ಹೋದರೆ ಸಾಕು, ಉಳಿದೆ ವ್ಯವಸ್ಥೆಯನ್ನು ಲಾಲೂ ಮಾಡುತ್ತಾರೆ. ಇದನ್ನು ನಿಮಗೆ ತಿಳಿಸಿ ಒಪ್ಪಿಸಲು ಹೇಳಿದ್ದಾರೆ" ಎಂದರು.

ಅದಕ್ಕೆ ಹೆಗಡೆಯವರು, “ನೋಡಿ ಭಟ್ರೆ, ನನಗೆ ಕಣ್ಣು ನೋವು. ಪ್ರಚಾರ ಮಾಡಲು ಆಗುವುದಿಲ್ಲ. ಮೇಲಾಗಿ, ನಾನು ಬ್ರಾಹ್ಮಣನಾಗಿರುವುದರಿಂದ, ಬ್ರಾಹ್ಮಣರೂ ನಮ್ಮೊಂದಿಗೆ ಇದ್ದಾರೆ ಎನ್ನುವು ದನ್ನು ಲಾಲೂ ತೋರ್ಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಮಾತ್ರ ಅವರು ನನ್ನನ್ನು ಕರೆಯುತ್ತಿದ್ದಾರೆ.

ಕ್ಷಮಿಸಿ ಹೋಗಲಾರೆ" ಎಂದು ಹೇಳಿ ಫೋನಿಟ್ಟರು. ಅಲ್ಲಿಗೇ ಸುಮ್ಮನಾಗದ ಲಾಲೂ, ಹೆಗಡೆ ಬರದಿದ್ದರೆ ಏನಂತೆ, ದೇವೇಗೌಡರನ್ನು ಕರೆಯೋಣ ಎಂದು ಆಹ್ವಾನಿಸಿದರು. ದೇವೇಗೌಡರು ಲಾಲೂ ಆಹ್ವಾನಕ್ಕೆ ಒಪ್ಪಿ ಪ್ರಚಾರವನ್ನೂ ನಡೆಸಿದರು. ಅಂದು, ಮಾರ್ಚ್ ತಿಂಗಳೊಳಗೆ ಚುನಾವಣೆ ಮುಗಿದು, ಅಧಿಕಾರಕ್ಕೆ ಬಂದ ಹೊಸ ಸರಕಾರ ಬಜೆಟ್ ಮಂಡಿಸಿ, ಅದಕ್ಕೆ ಅನುಮೋ ದನೆ ಪಡೆದುಕೊಳ್ಳುವ ಪ್ರಕ್ರಿಯೆಯೂ ಮುಗಿದು ಹೋಗಬೇಕಿತ್ತು.

ಬಜೆಟ್‌ಗೆ ಅನುಮೋದನೆ ಪಡೆದುಕೊಳ್ಳಲು ಚುನಾವಣೆಯೇ ಮುಗಿದಿರಲ್ಲ, ಹೊಸ ಸರಕಾರವೂ ಇರಲಿಲ್ಲ. ಬಿಹಾರ ಸರಕಾರದ ಅವಧಿ ಮುಗಿದಿದ್ದರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಹೀಗಾಗಿ, ಏಪ್ರಿಲ್ ತಿಂಗಳಲ್ಲಿ ಕೇಂದ್ರ ಬಜೆಟ್ ಅಧಿವೇಶನ ನಡೆಯುತ್ತಿದ್ದ ವೇಳೆ ರಾಷ್ಟ್ರಪತಿಯವರು ಬಿಹಾರದ ತುರ್ತುಪರಿಸ್ಥಿತಿ ಬಗ್ಗೆ ಘೋಷಿಸಿ, ಸಂಸತ್ತಿನ ಬಿಹಾರ ಬಜೆಟ್‌ಗೆ ಅನುಮೋದನೆ ನೀಡುವಂತೆ ಆದೇಶ ನೀಡಿದರು. ಈ ಹಿನ್ನೆಲೆಯಲ್ಲಿ, ಬಿಹಾರ ಬಜೆಟ್‌ಗೆ ಸಂಸತ್ ಅನುಮೋದನೆ ನೀಡಿದ ಐತಿಹಾಸಿಕ ಘಟನೆಯೂ 1995ರಲ್ಲಿ ನಡೆಯಿತು.

ಆಯೋಗವು ವಿವಿಧೆಡೆ ಮರುಚುನಾವಣೆ ನಡೆಸಿದ್ದರಿಂದ ಹೈರಾಣಾಗಿದ್ದ ಲಾಲೂ, ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಲಾಲೂ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ಉದ್ಯಮಪತಿಗಳಿಗೂ ಅನುಮಾನ ಉಂಟಾಗಿ ಹಣಕಾಸು ಪೂರೈಕೆಯನ್ನು ನಿಲ್ಲಿಸಿದ್ದರು. ಹೀಗಾಗಿ, ಸಂಪನ್ಮೂಲ ಕ್ರೋಡೀ ಕರಣದ ದಾರಿ ಕಂಡುಕೊಳ್ಳಲು ಲಾಲೂ ಮುಂದಾಗಿದ್ದರು. ಅಂತಿಮವಾಗಿ, ಚುನಾವಣಾ ಆಯೋಗದ ಕ್ರಮ ಹಾಗೂ ಮರುಚುನಾವಣೆಗಳಿಂದ ಉಂಟಾಗಿದ್ದ ಆರ್ಥಿಕ ಬರವೂ ಅಂದು ‘ಮೇವು ಹಗರಣ’ ಸೃಷ್ಟಿಯಾಗಲು ಕಾರಣವಾಗಿತ್ತು.

ಮೇವು ಹಗರಣ ಬೆಳಕಿಗೆ ಬಂದ ನಂತರ ಲಾಲೂ ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಿತ್ತು ಮತ್ತು ಪತ್ನಿ ರಾಬ್ರಿ ದೇವಿಯನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿ, ಆಡಳಿತ ನಡೆಸುತ್ತಿದ್ದರು. ರಾಬ್ರಿ ದೇವಿಗೆ ಅಂದು ಆಡಳಿತದ ತಲೆ-ಕಾಲು ತಿಳಿದಿರಲಿಲ್ಲ. ಮೇವು ಹಗರಣದಲ್ಲಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದ ಲಾಲೂ, ಮೊದಲು ತಮ್ಮ ವಕೀಲ ಮಿತ್ರ ಕೆ. ಎನ್.ಭಟ್ಟರನ್ನೇ ಸಂಪರ್ಕಿಸಿದ್ದರು.

ಆದರೆ, ಭಟ್ಟರು ಆಗ ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರಿಂದ ಲಾಲೂ ಅವರ ಕೇಸ್ ತೆಗೆದುಕೊಂಡಿರಲಿಲ್ಲ. ಬದಲಿಗೆ, ಅವರನ್ನು ಮತ್ತೋರ್ವ ಹಿರಿಯ ವಕೀಲ ಕಪಿಲ್ ಸಿಬಲ್‌ರಿಗೆ ಪರಿಚಯ ಮಾಡಿಸಿದ್ದರು. ಅಲ್ಲಿಂದ ಕಪಿಲ್ ಸಿಬಲ್ ಕೇಸಿನ ಜವಾಬ್ದಾರಿ ವಹಿಸಿಕೊಂಡಿ ದ್ದರು.

1995ರಲ್ಲಿ ಟಿ.ಎನ್. ಶೇಷನ್ ಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದಕ್ಕೆ ಕೆ.ಎನ್. ಭಟ್ಟರ ವಾದವೇ ಕಾರಣ ಎಂದು ಅವರ ಬಗ್ಗೆ ಭಾರಿ ಅಭಿಮಾನ, ಕಾಳಜಿ ಹೊಂದಿದ್ದ ಲಾಲೂ, ಭಟ್ಟರಿಗೆ ಬಿಹಾರದ ಮುಜ-ರಪುರದ ಸುಪ್ರಸಿದ್ಧ ಲಿಚ್ಚಿ ಹಣ್ಣುಗಳನ್ನು ಆಗಾಗ್ಗೆ ಕಳುಹಿಸಿ ಕೊಡುತ್ತಿದ್ದರು...

2025ರ ಬಿಹಾರ ವಿಧಾನಸಭಾ ಚುನಾವಣೆ ವರದಿಗಾಗಿ ನಾನು ಬಿಹಾರದಲ್ಲಿದ್ದೇನೆ ಎನ್ನುವುದು ಗೊತ್ತಾಗಿ, ಬೆಂಗಳೂರಿನ ಮನೆಯಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಕೆ.ಎನ್.ಭಟ್ಟರು ಫೋನಾ ಯಿಸಿದ್ದರು. “ನೀನು ಈಗ ಎಲ್ಲಿದ್ದಿ?" ಎಂದು ಭಟ್ಟರು ಕೇಳಿದ್ದಕ್ಕೆ ನಾನು, “ಮುಜಫರಪುರದ ಕರ್ನಾಟಕ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದೇನೆ" ಎಂದು ಉತ್ತರಿಸಿದೆ. “ಓಹ್ ಅಲ್ಲಿದ್ದೀಯಾ, ಹಾಗಾದರೆ ಮುಜಫರಪುರ ಲಿಚ್ಚಿ ತಿನ್ನದೆ ಬರಬೇಡ. ನನಗೆ ಲಾಲೂ ಪ್ರಸಾದ್ ಅಲ್ಲಿಂದ ಲಿಚ್ಚಿ ಕಳುಹಿಸಿಕೊಡುತ್ತಿದ್ದರು" ಎಂದರು.

“ಅರೆ, ನಿಮಗ್ಯಾಕೆ ಅವರು ಕಳಿಸುತ್ತಿದ್ದರು?" ಎಂದು ಕೇಳಿದಾಗ ಟಿ.ಎನ್. ಶೇಷನ್ ಕಥೆ, ಕೋರ್ಟು ಕೇಸು, ಲಾಲೂ ಸ್ನೇಹ, ಮೇವು ಹಗರಣ ಸೇರಿ ಹಳೆಯ ನೆನಪುಗಳ ಬುತ್ತಿಯನ್ನೇ ಭಟ್ಟರು ತೆರೆದಿಟ್ಟರು.

ಮುಜಫರಪುರದ ಲಿಚ್ಚಿ, ಮುಖ್ಯವಾಗಿ ಶಾಹಿ ಲಿಚ್ಚಿ, ಇಲ್ಲಿನ ಒಂದು ವಿಶೇಷ ಹಣ್ಣಾಗಿದ್ದು, ಸಿಹಿ, ರಸಭರಿತ ತಿರುಳು ಮತ್ತು ಗುಲಾಬಿ ಸುಗಂಧದ ಪರಿಮಳಕ್ಕೆ ಹೆಸರುವಾಸಿ. ‘ಲೇಟ್ ಲಾರ್ಜ್ ರೆಡ್’ ಪ್ರಭೇದ ಕೂಡ ಇಲ್ಲಿ ಗಮನಸೆಳೆದಿದ್ದು, ಇದು ಕಡುಗೆಂಪು ಬಣ್ಣ ಮತ್ತು ಹೆಚ್ಚಿನ ಇಳುವರಿಗೆ ಖ್ಯಾತಿ ಪಡೆದಿದೆ. ಉತ್ತಮ ಗುಣಮಟ್ಟದ ಶಾಹಿಲಿಚ್ಚಿಗೆ 2018ರಲ್ಲಿ Geographical Indication (GI) ಟ್ಯಾಗ್ ಕೂಡ ಸಿಕ್ಕಿತ್ತು.

ದೇವೇಗೌಡರ ಬೆನ್ನು ಬಿದ್ದಿದ್ದರು

1997ರಲ್ಲಿ ಮೇವು ಹಗರಣದ ತನಿಖೆ ಮಾಡುತ್ತಿದ್ದ ಅಂದಿನ ಸಿಬಿಐ ನಿರ್ದೇಶಕ ಯು.ಎನ್. ಬಿಸ್ವಾಸ್ ಮೇಲೂ ಒತ್ತಡ ಹೇರಿ, ಆರೋಪಗಳಿಂದ ಪಾರಾಗಲು ಲಾಲೂ ಯತ್ನಿಸಿದ್ದರು. ಆದರೆ, ಅದು ಫಲಿಸಿರಲಿಲ್ಲ. ಇಲ್ಲ, ಇದಕ್ಕೆ ಪ್ರಧಾನಮಂತ್ರಿಯಿಂದಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾದರು ಲಾಲೂ. “ನೋಡಿ ದೇವೇಗೌಡಾ ಜೀ, ನೀವು ಮಾಡುತ್ತಿರುವುದು ಸರಿ ಇಲ್ಲ. ಇದರ ಪರಿಣಾಮವೂ ಕೆಟ್ಟದಾಗಿರುತ್ತದೆ.

ನಿಮಗೆ ಪಿತೂರಿಗಳನ್ನು ಮಾಡಲೇಬೇಕು ಎಂದಿದ್ದರೆ ನನ್ನನ್ನೇಕೆ ಗುರಿ ಮಾಡುತ್ತೀರಿ? ಬಿಜೆಪಿ ವಿರುದ್ಧ ಒಳಸಂಚು ಮಾಡಿ. ನನ್ನ ಹಿಂದೆ ಏಕೆ ಬಿದ್ದಿದ್ದೀರಿ" ಎಂದು ಲಾಲೂ ಸಿಡಿಮಿಡಿ ಗೊಂಡಿದ್ದರು. “ಕೋರ್ಟ್ ಆದೇಶದ ಮೇಲೆ ಸಿಬಿಐ ತನಿಖೆ ನಡೆಸುತ್ತಿದೆ. ಇಲ್ಲಿ ನಾನೇನು ಮಾಡಲಾಗುತ್ತದೆ?" ಎಂದು ಗೌಡರು ಮನವರಿಕೆ ಮಾಡಿದರೂ, ಲಾಲೂ ಸಮಾಧಾನಗೊಂಡಿರ ಲಿಲ್ಲ.

ಮೇವು ಹಗರಣದಲ್ಲಿ ಕಾನೂನಿನ ಬಿಗಿ ಅಸ್ತ್ರವು ಲಾಲೂವನ್ನು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿತ್ತು. 1997ರ ಜನವರಿ ತಿಂಗಳಲ್ಲಿ ಸಿಬಿಐ ತನಿಖೆಗೆ ಮುನ್ನ ದೇವೇಗೌಡರನ್ನು ಮತ್ತೊಮ್ಮೆ ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿದ್ದ ಲಾಲೂ, “ನನ್ನ ಮೇಲೆ ಕೇಸು ತಯಾರು ಮಾಡಲಿ ಎಂದೇ ನಿಮ್ಮನ್ನು ನಾನು ಪ್ರಧಾನಿ ಮಾಡಿದ್ದೆ? ನಿಮ್ಮನ್ನು ಪ್ರಧಾನಿ ಮಾಡಿ ನಾನು ಬಹಳ ದೊಡ್ಡ ತಪ್ಪು ಮಾಡಿದೆ" ಎಂದು ಬುಸುಗುಟ್ಟಿದ್ದರು. ಆದರೆ, ಗೌಡರು ಮಾತ್ರ ಸೌಮ್ಯದಿಂದಿದ್ದರು.

ಗೌಡರು ಪ್ರಧಾನಿಯಾಗಿದ್ದಾಗ ಕರ್ನಾಟಕ ಐಎಎಸ್ ಕೇಡರ್‌ನ ಜೋಗಿಂದರ್ ಸಿಂಗ್ ಸಿಬಿಐ ನಿರ್ದೇಶಕರಾಗಿದ್ದರು ಮತ್ತು ಅವರ ಆಯ್ಕೆಯ ಹಿಂದೆ ದೇವೇಗೌಡರ ಪ್ರಭಾವವಿತ್ತು. ಬಹುಶಃ ಈ ಕಾರಣಕ್ಕಾಗಿಯೇ, ಮೇವು ಹಗರಣದಲ್ಲಿ ಸಿಬಿಐ ಕುಣಿಕೆಯಿಂದ ಪಾರಾಗಲು ಇದೇ ಸರಿಯಾದ ಸಮಯ ಎಂದು ಲಾಲೂ ಭಾವಿಸಿದ್ದಿರಲೂಬಹುದು.

(ಲೇಖಕರು ಹಿರಿಯ ಪತ್ರಕರ್ತರು)