ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಬದುಕನ್ನು ಬದಲಿಸುವ ಶಕ್ತಿಯಿರುವುದು ಕಲಿಕೆಗೆ

ಜಗತ್ತಿನಲ್ಲಿ ಸಾವಿರ ವಿಷಯಗಳಿವೆ, ನಾವು ಅವೆಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ನಮ್ಮ ಕಾರ್ಯಕ್ಷೇತ್ರ ಯಾವುದಿದೆ ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ನಾವು ಶ್ರದ್ದೆಯಿಂದ ಕಲಿಯಬೇಕು. ಇಂಥ ಔಪಚಾರಿಕ ಕಲಿಕೆಯಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಇವುಗಳನ್ನು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವ ಅಡಿಯಲ್ಲಿ ಸರಿಯಾಗಿ ಬಳಸಿಕೊಂಡರೆ ನಾವು ತಲುಪುವ ಮಟ್ಟವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಅಂಥ ಪ್ರಚಂಡ ಶಕ್ತಿ ಕಲಿಕೆಯಲ್ಲಿದೆ.

ವಿಶ್ವರಂಗ

ಕಲಿಕೆ ಎನ್ನುವ ಪದಕ್ಕೆ ವಿಶಾಲವಾದ ಅರ್ಥವಿದೆ. ಕಲಿಕೆ ಎಂದರೆ ಕೇವಲ ಶಾಲೆಗೆ ಹೋಗುವುದಲ್ಲ, ಪುಸ್ತಕ ಓದುವುದಲ್ಲ, ಅದು ಕೇವಲ ಗಣಿತದ ಫಾರ್ಮುಲಾಗಳು ಕೂಡ ಅಲ್ಲ, ಇತಿಹಾಸದ ಇಸವಿಗಳು, ಘಟನೆಗಳು ಅಲ್ಲ. ಆದರೆ ಇವು ಕೂಡ ಕಲಿಕೆಯ ಅಂಶಗಳು. ಅಡುಗೆ ಮಾಡುವುದು, ಕ್ರಿಕೆಟ್ ಆಡುವುದು, ಚೆಸ್, ಕಬಡ್ಡಿ, ಚಿನ್ನಿ-ದಾಂಡುವಿನಿಂದ ಹಿಡಿದು, ಈಜುವುದು, ಓಡುವುದು, ಹಾಡುವುದು, ಕುಣಿಯುವುದು, ಮಾತನಾಡುವುದು, ಕೇಳಿಸಿಕೊಳ್ಳುವುದು ಕೂಡ ಕಲಿಕೆ.

ಸರಳವಾಗಿ ಹೇಳಬೇಕೆಂದರೆ ಬದುಕಿನ ಎಲ್ಲಾ ಹಂತದಲ್ಲೂ ನಾವು ಕಲಿಯುತ್ತಿರುತ್ತೇವೆ. ಕೆಲವು ಐಚ್ಛಿಕ, ಮತ್ತೆ ಕೆಲವು ಅನೈಚ್ಛಿಕ. ಪ್ರeಪೂರ್ವಕವಾಗಿ ನಿತ್ಯವೂ ಹತ್ತು ಪುಟವಾ ದರೂ ಓದುವ ಗುಣವನ್ನು, ಕಲೆಯನ್ನು ಬೆಳೆಸಿಕೊಂಡರೆ ಅದು ಐಚ್ಛಿಕ ಕಲಿಕೆ.

ಸುಖಾಸುಮ್ಮನೆ ರಸ್ತೆಯಲ್ಲಿ ಬೇರೊಬ್ಬರ ಮೇಲೆ ಜಗಳಕ್ಕೆ ಬಿದ್ದವರನ್ನು ನೋಡಿ, ರೋಡ್ ರೇಜ್‌ನಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎನ್ನುವ ವಿವೇಚನೆಯನ್ನು ಕಲಿಸಿದ್ದು ಅನೈಚ್ಛಿಕ ಕಲಿಕೆ. ತಿನ್ನುವುದು, ವಿಸರ್ಜಿಸುವುದು ಕೂಡ ಬದುಕಿನ ಒಂದು ಹಂತದಲ್ಲಿ ಐಚ್ಛಿಕ ಕಲಿಕೆ ಯಾಗಿತ್ತು ಅಲ್ಲವೇ? ಬದುಕಿನಲ್ಲಿ ಒಂದು ಹಂತದ ನಂತರ ಇವು ಮತ್ತೆ ಐಚ್ಚಿಕ ಕ್ರಿಯೆ ಗಳಾಗಿ ಮಾರ್ಪಾಟಾದರೆ ಅದರಲ್ಲಿ ವಿಶೇಷವೇನಿಲ್ಲ.

ಒಟ್ಟಾರೆ ಕಲಿಕೆ ಎನ್ನುವುದು ಜೀವನದ ಅವಿಭಾಜ್ಯ ಅಂಗ. ಅದು ಜೀವನ ಶೈಲಿ, ಬದುಕುವ ರೀತಿ.ಕೆಲವು ಕಲಿಕೆಗಳು ಬದುಕಿಗೆ ಅವಶ್ಯಕ. ಅದರಿಂದ ಲಾಭವನ್ನು ಲೆಕ್ಕ ಹಾಕುವಂತಿಲ್ಲ. ಇನ್ನು ಕೆಲವು ಲಾಭಕ್ಕಾಕಾಗಿ, ಬದುಕಿನ ಓಘವನ್ನು ಬದಲಿಸಿಕೊಳ್ಳಲು, ಇನ್ನಷ್ಟು ಉನ್ನತಿ ಯ ಕಡೆಗೆ ಸಾಗಲು ಅವಶ್ಯಕ.

ಇದನ್ನೂ ಓದಿ: Rangaswamy Mookanahalli Column: ಮಕ್ಕಳು ನಮ್ಮ ಕನಸನ್ನು ಪೂರೈಸಲು ಹುಟ್ಟಿಲ್ಲ !

ಬದುಕು ಬಹಳ ಸೂಕ್ಷ್ಮ, ಅದು ಯಾವಾಗ ಬೇಕಾದರೂ ಬದಲಾಗಬಹುದು. ನನ್ನ ಸ್ನೇಹಿತ ನೊಬ್ಬ ಆಸ್ಟೇಲಿಯಾ ದೇಶದಲ್ಲಿದ್ದಾನೆ. ನನಗಿಂತ ಎರಡು ವರ್ಷ ಹಿರಿಯ. ಕರೋನ ಸಮಯದಲ್ಲಿನ ಒತ್ತಡ ನಿರ್ವಹಣೆಯಲ್ಲಿ ಹೆಚ್ಚು ಕಡಿಮೆಯಾಗಿ ಪೆರಾಲಿಸಿಸ್‌ಗೆ ತುತ್ತಾಗಿದ್ದ.

ಫೋನ್ ಮಾಡಿ ಅವನನ್ನು ವಿಚಾರಿಸುವಾಗ, “ಮತ್ತೆ ಮಗುವಿನಂತೆ ನಡೆಯುವುದು ಕಲಿಯುತ್ತಿದ್ದೇನೆ. ಒಂದು ನಿಮಿಷ ಒಂದೇ ಸಮನೆ ನಿಲ್ಲಲು ಆಗುತ್ತಿಲ್ಲ" ಎಂದಿದ್ದ. ಇವತ್ತಿಗೆ ಮತ್ತೆ ಸಾಮಾನ್ಯವಾಗಿದ್ದಾನೆ ಎನ್ನುವುದು ಶುಭಸುದ್ದಿ. ಈ ಮಾತುಗಳನ್ನು ಹೇಳಲು ಕಾರಣ, ಕೆಲವೊಮ್ಮೆ ಕಲಿಕೆ ಇಷ್ಟಪಟ್ಟು ಆಗಬೇಕೆಂದಿಲ್ಲ! ಅದು ನಮ್ಮ ತಪ್ಪುಗಳಿಂದ, ಅಥವಾ ಇತರರ ತಪ್ಪುಗಳಿಂದ ಹೇಗೋ ಒಟ್ಟಾರೆ ಕಲಿಕೆಯಾಗುತ್ತದೆ.

ಜಗತ್ತಿನಲ್ಲಿ ಸಾವಿರ ವಿಷಯಗಳಿವೆ, ನಾವು ಅವೆಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ನಮ್ಮ ಕಾರ್ಯಕ್ಷೇತ್ರ ಯಾವುದಿದೆ ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ನಾವು ಶ್ರದ್ದೆಯಿಂದ ಕಲಿಯಬೇಕು. ಇಂಥ ಔಪಚಾರಿಕ ಕಲಿಕೆಯಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಇವು ಗಳನ್ನು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವ ಅಡಿಯಲ್ಲಿ ಸರಿಯಾಗಿ ಬಳಸಿಕೊಂಡರೆ ನಾವು ತಲುಪುವ ಮಟ್ಟವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಅಂಥ ಪ್ರಚಂಡ ಶಕ್ತಿ ಕಲಿಕೆಯಲ್ಲಿದೆ.

ನಿತ್ಯವೂ 30 ರಿಂದ 60 ನಿಮಿಷ ಓದಿಗೆ ಮೀಸಲಿಡಿ

ಓದು ಕಲಿಕೆಯ ಒಂದು ಮಹತ್ತರ ಭಾಗ. ಓದುವುದರಿಂದ ಓದಿದ ವಿಷಯ ಮನಸ್ಸಿನಲ್ಲಿ ನೇರವಾಗಿ ಜಾಗ ಪಡೆದುಕೊಳ್ಳುತ್ತದೆ. ಓದುವುದರ ಜತೆಗೆ ಮುಖ್ಯವಾದ ಅಂಶಗಳನ್ನು ಬರೆದಿಟ್ಟುಕೊಳ್ಳುವುದು ಕೂಡ ಮಾಡಬೇಕು.

ಇವತ್ತಿಗೆ ನೂರಾರು ಹೊಸ ವಿಧಾನಗಳು, ತಂತ್ರಜ್ಞಾನಗಳು ಬಂದಿವೆ. ಆದರೂ ನಾವು ಓದುವುದು ಮತ್ತು ಬರೆಯುವುದು ಮನಸ್ಸಿನ ಆಳಕ್ಕೆ ಇಳಿದಷ್ಟು ಬೇರೆ ಯಾವ ವಿಧಾನ ಗಳೂ ಪರಿಣಾಮಕಾರಿ ಆಗಿರುವುದಿಲ್ಲ ಎನ್ನುವುದು ನನ್ನ ಸ್ವಂತ ಅನುಭವ ಕೂಡ. ದಿನದಲ್ಲಿ ಒಂದು ಗಂಟೆ ಓದುತ್ತಾ ಹೋದರೆ ಆಗ ವಾರದಲ್ಲಿ ಒಂದು ಪುಸ್ತಕ ಓದಿ ಮುಗಿಸ ಬಹುದು.

Screenshot_3 ಋ

ವರ್ಷಕ್ಕೆ 50 ಪುಸ್ತಕ! ಹತ್ತು ವರ್ಷದಲ್ಲಿ 500 ಪುಸ್ತಕ ಓದಿ ಮುಗಿಸಬಹುದು. ನಿಮಗೆ ಗೊತ್ತಿರಲಿ ಒಬ್ಬ ಸಾಮಾನ್ಯ ಮನುಷ್ಯ ವರ್ಷದಲ್ಲಿ ಒಂದು ಪುಸ್ತಕ ಓದಿದರೆ ಅದು ಹೆಚ್ಚು! ದಿನಕ್ಕೆ ಒಂದು ಗಂಟೆ ಓದುವ ಅಭ್ಯಾಸ ನಮ್ಮನ್ನು ಅದ್ಯಾವ ಮಟ್ಟದಲ್ಲಿ ಸಾಮಾನ್ಯ ಮನುಷ್ಯನಿಗಿಂತ ವಿಭಿನ್ನವಾಗಿಸುತ್ತದೆ ಎನ್ನುವುದನ್ನು ಗಮನಿಸಿ.

ಓದು ಹೊಸ ಚಿಂತನೆಗೆ ನಮ್ಮನ್ನು ಹಚ್ಚುತ್ತದೆ. ಗೊತ್ತಿಲ್ಲದ ಹೊಸ ಆಯಾಮಗಳನ್ನು ನಮಗೆ ಉಣಬಡಿಸುತ್ತದೆ. ನಮ್ಮ ಸಮಕಾಲೀನರು ಯೋಚಿಸಲು ಕೂಡ ಆಗದ ಹೊಸ ವಿಚಾರಗಳನ್ನು ನಾವು ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಕಾರ್ಯಕ್ಷೇತ್ರದಲ್ಲಿ ಅಗ್ರಗಣ್ಯರಾಗಬಹುದು.

ಒಂದು ಗಂಟೆ ಓದುವುದರಿಂದ ಹಣ, ಹೆಸರು, ಅಂತಸ್ತು ಎಲ್ಲವನ್ನೂ ಪಡೆಯಲು ಸಾಧ್ಯ. ಅಚ್ಚರಿ ಎನ್ನಿಸುತ್ತೆ ಅಲ್ಲವೇ? ನೆನಪಿರಲಿ ಇದು ಒಂದು ದಿನ ಮಾಡಿ ನಿಲ್ಲಿಸುವ ಕೆಲಸವಲ್ಲ. ಕೆಲಸದಲ್ಲಿ ಪ್ರಮೋಷನ್ ಸಿಕ್ಕಿತು ಎಂದು ನಿಲ್ಲಿಸುವಂತೆಯೂ ಇಲ್ಲ. ಓಪ್ರಾ ವಿನ್ ಫ್ರೆ ಎನ್ನುವ ಅಮೆರಿಕನ್ ಮಹಿಳೆ ಸಾವಿರಾರು ಯಶಸ್ವಿ ವ್ಯಕ್ತಿಗಳನ್ನು ಸಂದರ್ಶನ ಮಾಡಿ ದ್ದಾರೆ. ಅಲ್ಲಿನ ಸಾರಾಂಶ ಅವರೆಲ್ಲರೂ ಓದಿನ ಗೀಳು ಹಚ್ಚಿಕೊಂಡವರು. ವರ್ಷದಲ್ಲಿ ಸರಾಸರಿ 60 ಪುಸ್ತಕ ಓದುತ್ತಿರುವವರು.

ವಾರೆನ್ ಬಫೆಟ್, ಬಿಲ್ ಗೇಟ್ಸ್ ಸಹಿತ ಜಗತ್ತಿನ ಬಹುಪಾಲು ಸಿಇಒಗಳು ಓದುತ್ತಾರೆ. ಸರಳ ವಾಗಿ ಹೇಳಬೇಕೆಂದರೆ ಅತ್ಯಂತ ಯಶಸ್ವಿ ಮತ್ತು ಬಿಲಿಯನೇರ್‌ಗಳ ಒಂದು ಸಾಮಾನ್ಯಗುಣ ‘ಓದು’. ಮುಂದಿನ ದಿನ ತಿನ್ನಲು ಏನು ಸಿಗುತ್ತದೆ ಎನ್ನುವುದರ ಗ್ಯಾರಂಟಿ ಇರದಿರುತ್ತಿದ್ದ ನನ್ನ ಬದುಕನ್ನು ಕೂಡ ಬದಲಿಸಿದ್ದು ಓದು.

ಒಪ್ಪತ್ತಿಗೆ ಆದರೆ ಮುಂದಿನ ಊಟದ ತತ್ವಾರ ಎದುರಿಸುತ್ತಿದ್ದ ನಮ್ಮ ಮನೆಯಲ್ಲಿ ಪುಸ್ತಕ‌ ಗಳಿಗೆ ಮಾತ್ರ ಕಡಿಮೆಯಿರುತ್ತಿರಲಿಲ್ಲ. ನಿತ್ಯವೂ ಎರಡು ನ್ಯೂಸ್ ಪೇಪರ್. ಒಂದು ಇಂಗ್ಲಿಷ್, ಇನ್ನೊಂದು ಕನ್ನಡ. ಜತೆಗೆ ರೀಡರ್ಸ್ ಡೈಜೆಸ್ಟ್, ಕಾಂಪಿಟಿಷನ್ ಸಕ್ಸಸ್ ರಿವ್ಯೂ, ದಿಕ್ಸೂಚಿ, ಹೀಗೆ ಹತ್ತಾರು ಮಾಸಿಕ, ಸಾಪ್ತಾಹಿಕ ಪತ್ರಿಕೆಗಳು ಮನೆಯನ್ನು, ಮನಸ್ಸನ್ನು ತುಂಬುತ್ತಿದ್ದವು.

ಇಂಟರ್ನೆಟ್ ಇಲ್ಲದ ಆ ಕಾಲದಲ್ಲಿ, ಮನಸ್ಸಿನಲ್ಲಿ ಏನಾದರೂ ಆಗಬೇಕೆನ್ನುವ ಕನಸು, ಹಂಬಲ ಬಿತ್ತಿದ್ದು ಪುಸ್ತಕಗಳು. ಎಂದಿಗೂ ಮೋಸ ಮಾಡದ, ಕುಸಿತ ಕಾಣದ ಬೆಸ್ಟ್‌ ಇನ್ವೆಸ್ಟ್‌ ಮೆಂಟ್ ಈ ಭೂಮಿಯ ಮೇಲಿದ್ದರೆ ಅದು ಓದು, ಪುಸ್ತಕಗಳು.

ಆಡಿಯೋ ಕಾರ್ಯಕ್ರಮಗಳನ್ನು ಕೇಳುವುದು

ಓದು ಅತ್ಯುತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದು ಜನರಲ್ಲಿ ಸಮಯದ ಅಭಾವ ಹೆಚ್ಚಾಗಿದೆ. ಅದಕ್ಕೆ ಕಾರಣಗಳು ಹಲವು. ಅದನ್ನು ವಿಮರ್ಶಿಸಲು ಇದು ಸ್ಥಳ ವಲ್ಲ. ಹೀಗಾಗಿ ಇದ್ದುದರಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇರುವ ಇನ್ನೊಂದು ಮಾರ್ಗ ಆಡಿಯೋ ಬುಕ್ಸ್ ಕೇಳುವುದು. ‌

ಪಾಡ್‌ಕಾಸ್ಟ್ ಇತ್ಯಾದಿಗಳನ್ನು ಕೇಳಬಹುದು. ಓಡುವಾಗ, ನಡೆಯುವಾಗ, ಕಾರಿನಲ್ಲಿ ಹೋಗುವಾಗ, ಹೀಗೆ ದೈಹಿಕ ಚಟುವಟಿಕೆ ಜತೆಗೆ ಮಾನಸಿಕವಾಗಿ ಕೂಡ ಅಭಿವೃದ್ಧಿ ಹೊಂದಬಹುದು. ನಿಮಗೆ ಒಂದು ಆಶ್ಚರ್ಯ ಎನ್ನಿಸಬಹುದಾದ ವಿಷಯವನ್ನು ಹೇಳುವೆ. ಸಾಮಾನ್ಯ ಮನುಷ್ಯ ಜಗತ್ತಿನ ಎಲ್ಲಾ ದೊಡ್ಡ ನಗರಗಳಲ್ಲಿ ವಾರ್ಷಿಕವಾಗಿ 500 ರಿಂದ 1000 ಗಂಟೆಗಳ ಕಾಲ ಕಾರು, ಬಸ್ ಅಥವಾ ಬೈಕ್, ರೈಲು, ಹೀಗೆ ಒಟ್ಟಾರೆ ಪ್ರಯಾಣದಲ್ಲಿ ಕಳೆಯುತ್ತಾನೆ.

ನೆನಪಿರಲಿ ಇದು ಕೇವಲ ಮನೆ ಮತ್ತು ಕೆಲಸದ ಜಾಗಕ್ಕೆ ಹೋಗಿ ಬರಲು ಆಗುವ ಪ್ರಯಾಣದ ಸಮಯ ಮಾತ್ರ! ಸಮಯವಿಲ್ಲ ಎನ್ನುವುದು ಅತ್ಯಂತ ಸಾಮಾನ್ಯ ಗೊಣಗಾಟ. ಇರುವ ಸಮಯವನ್ನು ನಾವು ಸರಿಯಾಗಿ ಪ್ಲಾನ್ ಮಾಡಿ ಬಳಸಿಕೊಂಡರೆ ಖಂಡಿತ ಎಲ್ಲಕ್ಕೂ ಸಮಯವನ್ನು ಹೊಂದಿಸಿಕೊಳ್ಳಬಹುದು. ಸರಳವಾಗಿ ಹೇಳಬೇಕೆಂದರೆ ಮಾಡಬೇಕು ಎನ್ನುವ ಇಚ್ಛೆ ಮನಸ್ಸಿನಲ್ಲಿ ಪ್ರಬಲವಾಗಿದ್ದರೆ ಸಮಯ, ದಾರಿ ಎಲ್ಲವೂ ಪೂರಕವಾಗಿ ಬದುಕಿಗೆ ಜತೆಯಾಗುತ್ತವೆ.

ಸರ್ಟಿಫಿಕೇಷನ್ ಕೋರ್ಸ್ ಮಾಡುವುದು

ನಮ್ಮ ವೃತ್ತಿಗೆ ಪೂರಕವಾದ ಕಲಿಕೆಯನ್ನು ಮಾಡುತ್ತಾ ಹೋದರೂ ಅದು ನಮ್ಮ ಬದುಕನ್ನು ಬದಲಿಸಿ ಬಿಡುತ್ತದೆ. ಇವತ್ತಿನ ದಿನದಲ್ಲಿ ಆನ್‌ಲೈನ್ ಮೂಲಕ ಬೇಕಾದಷ್ಟು ಸರ್ಟಿಫಿಕೇಷನ್ ಕೋರ್ಸ್ ಮಾಡಬಹುದು. ಆನ್‌ಲೈನ್ ಆದುದರಿಂದ ಇದೇ ಸಮಯಕ್ಕೆ ಅಲ್ಲಿ ಕೂರಬೇಕು ಎನ್ನುವ ಕಟ್ಟಳೆಗಳು ಇರುವುದಿಲ್ಲ.

ಕೇವಲ ಸರ್ಟಿಫಿಕೇಟ್ ಪಡೆಯಬೇಕು ಎನ್ನುವುದು ಉದ್ದೇಶವಾಗಿರದೆ ಹೊಸತು ಕಲಿಯ ಬೇಕು. ಅಪ್‌ಡೇಟ್ ಆಗಬೇಕು ಎಂದು ಕಲಿಯುವುದು ಬಹಳಷ್ಟು ವ್ಯತ್ಯಾಸ ಉಂಟುಮಾಡು ತ್ತದೆ. ಹಾಗೆ ಇಂದಿನ ದಿನಗಳಲ್ಲಿ ಬಹಳಷ್ಟು ಸೆಮಿನಾರ್, ವರ್ಕ್‌ ಶಾಪ್‌ಗಳು ನಡೆಯುತ್ತವೆ. ಅದಕ್ಕೆ ನಮ್ಮ ವೃತ್ತಿಬದುಕನ್ನು ಮತ್ತು ಒಟ್ಟಾರೆ ಜೀವನವನ್ನು ಉನ್ನತಿಯ ಕಡೆಗೆ ಒಯ್ಯುವ ಸಾಧ್ಯತೆಯಿದೆ ಎಂದಾಗ ಅಂಥ ಸೆಮಿನಾರ್ ಗಳಲ್ಲಿ ಭಾಗವಹಿಸಬೇಕು.

ಈ ರೀತಿಯ ವರ್ಕ್‌ಶಾಪ್ ನಡೆಸುವವರ ಜೀವನಾನುಭವ, ಕಲಿಕೆ ನಮಗೂ ಹೆಚ್ಚಿನ ಸಮಯ ಮತ್ತು ಖರ್ಚಿಲ್ಲದೆ ತಲುಪುತ್ತದೆ. ಇದರ ಉಪಯೋಗವನ್ನು ನಾವು ಮಾಡಿ ಕೊಳ್ಳಬೇಕು. ಇದು ಖಂಡಿತ ಸಾವಿರಾರು ರುಪಾಯಿ ಮತ್ತು ನೂರಾರು ಗಂಟೆಗಳನ್ನು ಉಳಿಸುತ್ತದೆ. ಅಷ್ಟು ಅನುಭವವನ್ನು ಕಟ್ಟಿಕೊಡುತ್ತದೆ.

ನೆನಪಿರಲಿ, ಮೈಂಡ್ ಎನ್ನುವುದು ಒಂದು ಮಸಲ್ ಇದ್ದಂತೆ! ಹೆಚ್ಚು ಬಳಸಿದಷ್ಟೂ ಹರಿತಾ ಗುತ್ತದೆ. ಇದರ ಜತೆಗೆ ಇನ್ನೊಂದು ಮುಖ್ಯ ಅಂಶವನ್ನು ಕೂಡ ಗಮನಿಸಿ. ನೀವು ಮಕ್ಕಳನ್ನು ನೋಡಿ, ಅವುಗಳಲ್ಲಿ ಸಹಜ ಕುತೂಹಲವಿರುತ್ತದೆ. ಅದೇಕೆ ಹೀಗೆ? ಅದೇನು? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಸದಾ ಕೇಳುತ್ತಲೇ ಇರುತ್ತವೆ.

ಬೆಳೆಯುತ್ತ ಹೋದಂತೆ ಈ ಪ್ರಶ್ನೆ ಕೇಳುವ ಪ್ರವೃತ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಕಾರಣ ನಾವು, ನಮ್ಮ ಸಮಾಜ. ಮಕ್ಕಳಲ್ಲಿ ಸಹಜವಾಗಿ ಮೂಡುವ ಕುತೂಹಲ, ಪ್ರಶ್ನಿಸುವ ಸ್ವಭಾವವನ್ನು ನಾವು ಕಾಪಿಡಬೇಕು. ಜತೆಗೆ ನಮ್ಮಲ್ಲಿರುವ ಆ ಮಗುವಿನ ಗುಣ ವನ್ನು ಕೂಡ ಜತನದಿಂದ ಪೋಷಿಸಬೇಕು.

ಎಲ್ಲಿಯವರೆಗೆ ಬದುಕಿನಲ್ಲಿ ಕುತೂಹಲ ಉಳಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ನಾವು ಅಭಿವೃದ್ಧಿಯ ಹಾದಿಯಲ್ಲಿದ್ದೇವೆ ಎಂದರ್ಥ. ಬದುಕು ಎಂದಿಗೂ ನಿಂತ ನೀರಾಗಬಾರದು. ಚಲನೆಯೇ ಬದುಕು, ಕ್ರಿಯಾಶೀಲತೆಯೇ ಶುಕ್ರದೆಸೆ, ಜಡತ್ವವೇ ಶನಿದೆಸೆ. ಈ ಸತ್ಯವನ್ನು ನಾವು ಎಷ್ಟು ಬೇಗ ಅರಿತುಕೊಳ್ಳುತ್ತೇವೋ ಅಷ್ಟು ನಮಗೆ ಒಳ್ಳೆಯದು. ಓದುವ ಅಭ್ಯಾಸ ಗುಣವಾಗಿ ಮಾರ್ಪಾಟಾದರೆ ಆಗ ನೋಡಿ ‘ಕಂಫರ್ಟ್ ಜೋನ್’ ಎನ್ನುವ ಬೌಂಡರಿ ಇರುವುದಿಲ್ಲ. ಏಕೆಂದರೆ ಎಲ್ಲ ಬೌಂಡರಿ ಕೂಡ ನಮ್ಮದೇ ಆಗಿರುತ್ತದೆ.

ಕಲಿಕೆಯಿಂದ ಆಗುವ ಲಾಭಗಳು ಒಂದಲ್ಲ ಹಲವಾರು. ಕಲಿಕೆ ಎನ್ನುವುದು ಬದುಕಿಗೆ ಒಂದು ಹೊಸ ಹುಮ್ಮಸ್ಸು ನೀಡುತ್ತದೆ ಎನ್ನುವುದು ನನ್ನ ಅನುಭವ ಕೂಡ. ಏನೂ ಮಾಡದೆ, ಅಂದರೆ ಹೊಸತನ್ನು ಕಲಿಯದೇ, ಓದದೇ ಒಂದು ವಾರ ಕಳೆದು ಬಿಟ್ಟರೆ ಸಾಕು. ಜೀವನ ಬಹಳ ಬೋರ್ ಎನ್ನಿಸಿಬಿಡುತ್ತದೆ. ಗೊತ್ತಿಲ್ಲದೇ ಬೇಸರ ಆವರಿಸಿಬಿಡುತ್ತದೆ.

ಸದಾ ಕಲಿಕೆಯಲ್ಲಿ ಮಗ್ನರಾಗಿದ್ದರೆ ಅದು ಬದುಕಿಗೆ ಒಂದು ಭರವಸೆ ನೀಡುತ್ತದೆ. ಏನೋ ಮಾಡುತ್ತಿದ್ದೇನೆ ಎನ್ನುವ ತೃಪ್ತಿ ನೀಡುತ್ತದೆ. ಪ್ರಮಾಣ ಮಾಡಿ ಹೇಳುತ್ತೇನೆ, ಒಮ್ಮೆ ಆ ಜೋನ್‌ಗೆ ಹೋಗಿ ನೋಡಿ, ಅದು ನೀಡುವ ಆನಂದ ಬೇರೆಯ ಮಟ್ಟದಲ್ಲಿರುತ್ತದೆ.

ಕಲಿಕೆಯ ಹಾದಿಯಲ್ಲಿ ಸಮಾನಮನಸ್ಕರ ಭೇಟಿ, ಹೊಸ ಸ್ನೇಹ, ಸಂಬಂಧವನ್ನು ಕೂಡ ಇದು ನೀಡುತ್ತದೆ. ಇದು ಬೆಲೆ ಕಟ್ಟಲಾಗದ ಲಾಭ. ಇಂಥ ಲಭ್ಯತೆ ಕಲಿಕೆಯ ಹೊರತಾಗಿ ಬೇರೆಡೆ ಸಿಕ್ಕರೂ ಅವುಗಳ ಆಯಸ್ಸು ಕಡಿಮೆಯಿರುತ್ತದೆ. ಕಲಿಕೆಯ ಜತೆಗಾರರು ಬಹಳ ದೂರ ಜತೆಯಾಗುತ್ತಾರೆ.

ಇವತ್ತಿನ ಜಗತ್ತಿನಲ್ಲಿ ಪ್ರಸ್ತುತತೆ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ ಕಲಿಕೆ. ಹೀಗಾಗಿ ‘ನೆವರ್ ಎವರ್ ಸ್ಟಾಪ್ ಲರ್ನಿಂಗ್’. ಬಹುದೊಡ್ಡ, ಪ್ರಸಿದ್ಧ, ಯಶಸ್ವಿ ವ್ಯಕ್ತಿಗಳನ್ನು ನೋಡಿ ಅವರು ಕಲಿಕೆಯನ್ನು ನಿಲ್ಲಿಸಿರುವುದಿಲ್ಲ. ನೆನಪಿರಲಿ, ಕಲಿಕೆ ಎನ್ನುವುದರ ವ್ಯಾಖ್ಯೆ ಬಹುದೊಡ್ಡದು.

ರಂಗಸ್ವಾಮಿ ಎಂ

View all posts by this author