ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokesh Kayarga News: ದುಬಾ(ರಿ)ರೆ ಪಾಠ: ಪ್ರಾಣಿಗಳ ಪ್ರೀತಿಗಿರಲಿ ಜೀವದ ಅಂತರ !

ಆನೆ ಶಿಬಿರಗಳಲ್ಲಿ ಮದ ಗಜಗಳ ಕಾದಾಟ ಮತ್ತು ಸಾವು ಹೊಸದೇನಲ್ಲ. ಹಿಂದೆ ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿ ಅರಣ್ಯ ಶಿಬಿರದಲ್ಲಿ ಮದವೇರಿದ ಗಜೇಂದ್ರ ಹೆಸರಿನ ಆನೆಯು ಶ್ರೀರಾಮ ಹೆಸರಿನ ಆನೆಯನ್ನು ತಿವಿದು ಸಾಯಿಸಿತ್ತು. ಇವೆರಡೂ ದಸರೆಯಲ್ಲಿ ಜತೆಯಾಗಿ ಹೆಜ್ಜೆ ಹಾಕಿದ್ದ ಆನೆಗಳಾಗಿದ್ದವು. ದಸರೆ ಆನೆಗಳು ಸೇರಿ ಸಾಕಾನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಇಂತಹ ಕಾದಾಟಗಳು ಹಲವು ಬಾರಿ ನಡೆದಿವೆ. ಭೀಮನಕಟ್ಟೆ ಶಿಬಿರದಲ್ಲಿ ಅಂಬಾರಿ ಹೊತ್ತು ಸಾಗಿದ್ದ ಬಲರಾಮ ಆನೆ ತನ್ನ ವೃದ್ಧಾಪ್ಯದಲ್ಲಿ ಮತ್ತೊಂದು ಆನೆಯ ದಾಳಿಗೆ ಗುರಿಯಾಗಿದ್ದ. ಆದರೆ ಈ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಬಲಿಯಾಗಿರುವುದು ದುರದೃಷ್ಟಕರ.

ಲೋಕಮತ

ನಾಗರಹಾವು, ಕಾಳಿಂಗ ಸರ್ಪವನ್ನು ಹಿಡಿದು ಬಳಿಕ ಅದರೊಂದಿಗೆ ಸರಸವಾಡುವ ಕೆಲವು ರೀಲ್ಸ್‌ ಗಳನ್ನು ನಾವು ಆಗಾಗ ಇನ್‌ಸ್ಟಾ ಗ್ರಾಂ, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತೇವೆ. ಕೆಲವರು ನಾಗರಹಾವಿಗೆ, ಕಾಳಿಂಗ ಸರ್ಪಕ್ಕೆ ಮುತ್ತಿಕ್ಕುವ ಸಾಹಸವನ್ನೂ ಪ್ರದರ್ಶಿಸು ತ್ತಾರೆ. ಇಂತಹ ಹುಚ್ಚು ಪ್ರಯತ್ನದಲ್ಲಿ ತಮ್ಮ ಗೋರಿಯನ್ನು ತಾವೇ ತೋಡಿಕೊಂಡವ ರಿದ್ದಾರೆ. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಕೆಲವರು ತಮ್ಮ ದಿನಚರಿಯ ಪ್ರತಿಯೊಂದು ಕ್ಷಣವೂ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಬೇಕೆಂದು ಬಯಸುತ್ತಾರೆ. ಇದು ಜಾಲತಾಣಗಳ ವ್ಯಸನ ಅಥವಾ ಗೀಳು ಇರಬಹುದು. ಆದರೆ ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಪ್ರತಿ ಯೊಂದನ್ನೂ ಜಗತ್ತಿಗೆ ಸಾರುವ ತವಕದಲ್ಲಿ ನಾವು ಹಲವು ಸೂಕ್ಷ್ಮತೆಗಳನ್ನು ಮರೆಯುತ್ತಿದ್ದೇವೆ. ಇವುಗಳಲ್ಲಿ ಅತ್ಯಂತ ಆತಂಕಕಾರಿ ಮತ್ತು ಅಪಾಯಕಾರಿ ಪ್ರವೃತ್ತಿ ಎಂದರೆ ಅದು ಪ್ರಾಣಿ ಗಳೊಂದಿಗಿನ ಸೆಲ್ಫಿ ಕ್ರೇಜ್ ಅಥವಾ ‘ತೋರಿಕೆಯ ಪ್ರೀತಿ’.

ಮೂಕಪ್ರಾಣಿಗಳ ಜೊತೆಗಿನ ಒಡನಾಟ, ಅವುಗಳ ಮೇಲಿನ ಪ್ರೀತಿ ನಮ್ಮ ಮಾನವೀಯ ಗುಣದ ಪ್ರತೀಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಪ್ರೀತಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು, ಹತ್ತಾರು ಲೈಕ್ಸ್‌ ಗಿಟ್ಟಿಸಿಕೊಳ್ಳಲು ಮಾತ್ರ ಸೀಮಿತವಾದರೆ ಮತ್ತು ಪ್ರಾಣಿಗಳ ಹಾಗೂ ಮನುಷ್ಯರ ಜೀವಕ್ಕೇ ಕುತ್ತು ತರುವಂತಾದರೆ, ಅದನ್ನು ‘ಪ್ರೀತಿ’ ಎನ್ನಲಾಗದು. ಪರೋಕ್ಷವಾಗಿ ಇದು ಪ್ರೀತಿಯ ಹೆಸರಿನಲ್ಲಿ ನಡೆಸುವ ಕ್ರೌರ್ಯ.

ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ನಡುವೆ ಸಿಲುಕಿ ತಮಿಳು ನಾಡಿನ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೇವಲ ಆಕಸ್ಮಿಕ ದುರಂತವಲ್ಲ; ಇದು ವನ್ಯಜೀವಿಗಳ ನೈಜ ಪ್ರಕೃತಿಯನ್ನು ಮರೆತು, ಅವುಗಳನ್ನು ಕೇವಲ ಪ್ರವಾಸಿ ಆಕರ್ಷಣೆಯ ವಸ್ತುಗಳನ್ನಾಗಿ ನೋಡಿದ ನಮ್ಮ ಬೇಜವಾಬ್ದಾರಿತನಕ್ಕೆ ಸಿಕ್ಕ ಪ್ರತಿಫಲ. ದುಬಾರೆಯಲ್ಲಿ ನಡೆದ ಘಟನೆಯನ್ನು ಗಮನಿಸಿದರೆ, ದಸರೆಯಲ್ಲಿ ಭಾಗವಹಿಸುವ ಕಂಜನ್ ಹೆಸರಿನ ಸಾಕಾನೆ, ಮಾರ್ತಾಂಡ ಹೆಸರಿನ ಮಖ್ನಾ (ದಂತವಿಲ್ಲದ) ಆನೆಯ ಮೇಲೆ ಒಮ್ಮಿಂದೊಮ್ಮೆಲೆ ದಾಳಿ ಮಾಡಿ ದಂತದಿಂದ ತಿವಿದು ಸಾಯಿಸಿತು. ಈ ಭೀಕರ ಕಾದಾಟದ ಮಧ್ಯೆ ಸಿಲುಕಿದ ಪ್ರವಾಸಿ ಮಹಿಳೆ ಪ್ರಾಣ ಕಳೆದುಕೊಂಡರು.

ಇದನ್ನೂ ಓದಿ: Lokesh Kayarga Column: ಕುಕ್ಕೆ ಹೀಗೆ ಕುಕ್ಕರ್ ಆದ್ರೆ ಹೇಗೆ ಸ್ವಾಮಿ !?

ಮೇಲ್ನೋಟಕ್ಕೆ ಇದು ಆಕಸ್ಮಿಕ. ಆದರೆ ಆನೆ ಶಿಬಿರಗಳಲ್ಲಿ ಮದ ಗಜಗಳ ಕಾದಾಟ ಮತ್ತು ಸಾವು ಹೊಸದೇನಲ್ಲ. ಹಿಂದೆ ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿ ಅರಣ್ಯ ಶಿಬಿರದಲ್ಲಿ ಮದವೇರಿದ ಗಜೇಂದ್ರ ಹೆಸರಿನ ಆನೆಯು ಶ್ರೀರಾಮ ಹೆಸರಿನ ಆನೆಯನ್ನು ತಿವಿದು ಸಾಯಿಸಿತ್ತು. ಇವೆರಡೂ ದಸರೆಯಲ್ಲಿ ಜತೆಯಾಗಿ ಹೆಜ್ಜೆ ಹಾಕಿದ್ದ ಆನೆಗಳಾಗಿದ್ದವು. ದಸರೆ ಆನೆಗಳು ಸೇರಿ ಸಾಕಾನೆಗಳು ಹೆಚ್ಚಿನ ಸಂಖ್ಯೆ ಯಲ್ಲಿರುವ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಇಂತಹ ಕಾದಾಟಗಳು ಹಲವು ಬಾರಿ ನಡೆದಿವೆ. ಭೀಮನಕಟ್ಟೆ ಶಿಬಿರದಲ್ಲಿ ಅಂಬಾರಿ ಹೊತ್ತು ಸಾಗಿದ್ದ ಬಲರಾಮ ಆನೆ ತನ್ನ ವೃದ್ಧಾಪ್ಯದಲ್ಲಿ ಮತ್ತೊಂದು ಆನೆಯ ದಾಳಿಗೆ ಗುರಿಯಾಗಿದ್ದ.

ಈಗ ಖಳನಾಯಕನ ಪಟ್ಟ ಗಿಟ್ಟಿಸಿಕೊಂಡಿರುವ ಕಂಜನ್ ಆನೆ ಕೂಡ ಹಿಂದೆ ಪ್ರಶಾಂತ್ ಎಂಬ ಇನ್ನೊಂದು ದಸರಾ ಆನೆಯ ದಾಳಿಗೆ ಗುರಿಯಾಗಿದ್ದ. 2024ರ ದಸರೆಯ ವೇಳೆ ಮೈಸೂರು ಅರಮನೆಯ ಆರವರಣದಲ್ಲಿಯೇ ಕಂಜನ್ ಮೇಲೆ ಧನಂಜಯ ಹೆಸರಿನ ಆನೆ ದಾಳಿ ಮಾಡಿತ್ತು. ಹೆದರಿದ ಕಂಜನ್ ನೂರಾರು ಜನರ ಮಧ್ಯೆ ಓಡುತ್ತಾ ಅರಮನೆ ಗೇಟ್ ದಾಟಿ ನೇರವಾಗಿ ವಾಹನ ದಟ್ಟಣೆಯ ರಸ್ತೆಗೆ ಬಂದಿದ್ದ. ಅದೃಷ್ಟವಶಾತ್ ಅಂದು ಧನಂಜಯ ಆನೆಯನ್ನು ಮಾವುತ ಚಾಕ ಚಕ್ಯತೆಯಿಂದ ನಿಯಂತ್ರಿಸಿ ಸಂಭಾವ್ಯ ದುರಂತ ತಪ್ಪಿಸಿದ್ದ.

ಸಾಕಾನೆಗಳಾದರೂ ಕಾಳಗಕ್ಕೆ ನಿಂತರೆ ಅವು ಮಾವುತನ ಆದೇಶವನ್ನೂ ಲೆಕ್ಕಿಸುವುದಿಲ್ಲ. ಆದರೆ ಇಂತಹ ಪ್ರಸಂಗಗಳು ಅಪರೂಪ. ಸಾಮಾನ್ಯವಾಗಿ ಮದ ಏರಿದ ಸಂದರ್ಭದಲ್ಲಿ, ಇಲ್ಲವೇ ಹೆಣ್ಣಾನೆ ಯನ್ನು ಒಲಿಸಿಕೊಳ್ಳುವ ಪೈಪೋಟಿಯಲ್ಲಿ ಪರಸ್ಪರ ಕಾಳಗಕ್ಕಿಳಿಯುತ್ತವೆ. ಗಂಡಾನೆಗಳಿಗೆ ದಂತವೇ ಪ್ರಮುಖ ಆಯುಧ. ದಂತಗಳಿಲ್ಲದ ಮಖ್ನಾ ಆನೆಯು ದಂತಗಳಿರುವ ಆನೆಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಸಾಮಾನ್ಯವಾಗಿ ಮಖ್ನಾ ಆನೆ ದಾಳಿಯ ಸಂದರ್ಭ ಬಂದರೆ ಪಲಾಯನ ಮಾಡುತ್ತದೆ. ಆದರೆ ಕಾವೇರಿ ತಟದಲ್ಲಿ ಮಜ್ಜನ ಸೇವೆ ಮಾಡಿಸಿಕೊಳ್ಳುತ್ತಿದ್ದ ಮಾರ್ತಾಂಡನಿಗೆ ಓಡಲೂ ಅವಕಾಶ ಸಿಕ್ಕಿಲ್ಲ. ಇದರಡಿ ಸಿಲುಕಿದ ಮಹಿಳೆಗೂ ಇದು ಅನಿರೀಕ್ಷಿತ ವಾಗಿತ್ತು.

Screenshot_10

ದುಬಾರೆಯಲ್ಲಿ ಆನೆಗಳ ಜತೆ ಮನುಷ್ಯರ ಒಡನಾಟಕ್ಕೆ ಅದೆಷ್ಟೋ ವರ್ಷಗಳಿಂದ ಅಧಿಕೃತ ವಾಗಿಯೇ ಅವಕಾಶ ನೀಡಲಾಗಿದೆ. ಅರಣ್ಯ ಇಲಾಖೆ ಪಾಲಿಗೆ ಇದು ಪ್ರಮುಖ ಆದಾಯದ ಮೂಲ ವೂ ಹೌದು. ಇಲ್ಲಿ ನದಿಗಿಳಿದು ಆನೆಗಳ ಜತೆ ಫೋಟೋ ತೆಗೆಸಿಕೊಳ್ಳಲು, ಆನೆಗಳಿಗೆ ಸ್ನಾನ ಮಾಡಿಸು ವಾಗ ತಾವೂ ಕೈ ಜೋಡಿಸಲು, ಆನೆ ಮೇಲೆ ಸವಾರಿ ಮಾಡಲು ಪ್ರತ್ಯೇಕ ಶುಲ್ಕವನ್ನೇ ನಿಗದಿ ಮಾಡಲಾಗಿದೆ. ಸಾಕಾನೆಗಳ ಜತೆ ನಿಕಟ ಒಡನಾಟದ ಈ ಅವಕಾಶಕ್ಕಾಗಿಯೇ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಹೀಗೆ ಬರುವ ಪ್ರವಾಸಿಗರಿಂದ ಮಾವುತರು, ಕಾವಾಡಿಗರಿಗೆ ಕೈ ತುಂಬಾ ಭಕ್ಷೀಸು ಸಿಗುತ್ತಿತ್ತು. ಇದೀಗ ದುರಂತವೊಂದು ಘಟಿಸಿದ ಬಳಿಕ ಇವೆಲ್ಲಕ್ಕೂ ಬ್ರೇಕ್ ಹಾಕಿ ಅರಣ್ಯ ಇಲಾಖೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.

ಆದರೆ, ಇಂತಹ ಘಟನೆಗಳಿಂದ ನಾವು ಪಾಠ ಕಲಿಯುತ್ತಿಲ್ಲ ಎಂಬುದೇ ಬೇಸರದ ಸಂಗತಿ. ಆನೆಗಳು ಸಾಕುಪ್ರಾಣಿಗಳಾಗಿ ಬದಲಾದರೂ ವನ್ಯಸಹಜ ಪ್ರವೃತ್ತಿ ಸದಾ ಜೀವಂತವಾಗಿರುತ್ತದೆ. ವಿಶೇಷವಾಗಿ ಗಂಡಾನೆಗಳಿಗೆ ‘ಮಸ್ತಿ’ ಏರಿದಾಗ ಅವುಗಳ ವರ್ತನೆಯನ್ನು ಊಹಿಸಲು ಸಾಧ್ಯವಿಲ್ಲ. ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ನೂರಾರು ಪಟ್ಟು ಹೆಚ್ಚಾದಾಗ, ಅವು ತೀವ್ರ ಆಕ್ರಮಣಕಾರಿ ಯಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಸ್ವಂತ ಮಾವುತನನ್ನೂ ಅವು ಗುರುತಿಸುವುದಿಲ್ಲ. ಹೀಗಿರು ವಾಗ, ಪ್ರವಾಸಿಗರು ಅವುಗಳ ಹತ್ತಿರ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು, ಅವುಗಳ ಮೇಲೆ ಕೈಹಾಕಿ ಪೋಸ್ ನೀಡುವ ಸಾಹಸಕ್ಕೆ ಕೈಹಾಕುವುದು ಆತ್ಮಹತ್ಯೆಗೆ ಸಮಾನ.

ರೀಲ್ಸ್‌ ಹುಚ್ಚಿನ ಈ ಜಮಾನದಲ್ಲಿ ಜನತೆ ತಮ್ಮ ವಿವೇಕವನ್ನು ಕೈಯಲ್ಲಿಟ್ಟುಕೊಂಡಿರುವುದಿಲ್ಲ. ಮೊಬೈಲ್ ಹಿಡಿದು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಸಾವನ್ನೂ ಕೈಯಾರೆ ಬರ ಮಾಡಿ ಕೊಳ್ಳುತ್ತಾರೆ. ಎರಡು ತಿಂಗಳ ಹಿಂದೆ ಮುಳ್ಳಯ್ಯನಗಿರಿ ಚಾರಣದಲ್ಲಿ ಕೇರಳದ ಬಾಲಕಿ ಜಾರಿ ಬಿದ್ದು ಸಾವು ಕಂಡಿದ್ದು ಇಂಥದ್ದೇ ಸನ್ನಿವೇಶದಲ್ಲಿ. ಪ್ರತಿದಿನವೂ ನೂರಾರು ಪ್ರವಾಸಿಗರು ಆನೆಗಳೊಂದಿಗೆ ಮುಕ್ತವಾಗಿ ಬೆರೆಯುವ ದುಬಾರೆಯಲ್ಲಿ ಮೊನ್ನೆ ತನಕ ಆನೆ ದಾಳಿಯಂತಹ ಘಟನೆ ನಡೆದಿರಲಿಲ್ಲ ಎನ್ನುವುದೇ ಹೆಚ್ಚು ಅಚ್ಚರಿಯ ಸಂಗತಿ.

ನಾಗರಹಾವು, ಕಾಳಿಂಗ ಸರ್ಪದಂತಹ ಅತ್ಯಂತ ವಿಷಕಾರಿ ಹಾವುಗಳನ್ನು ಹಿಡಿದು, ಅವುಗಳೊಂದಿಗೆ ಸರಸವಾಡುವ, ಅವುಗಳ ಮುಖದ ಮುಂದೆ ಕೈ ಆಡಿಸುವ, ಹಾವಿನ ತಲೆಗೆ ಮುತ್ತಿಕ್ಕುವ ಸಾಹಸ ಪ್ರದರ್ಶಿಸುವ ರೀಲ್ಸ್‌ಗಳು ಇಂದು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿವೆ. ಇದು ಕಲೆಯಲ್ಲ, ಧೈರ್ಯದ ಪ್ರದರ್ಶನವೂ ಅಲ್ಲ; ಇಂತಹ ಹುಚ್ಚು ಪ್ರಯತ್ನಗಳಲ್ಲಿ ಹಾವು ಕಚ್ಚಿ ಪ್ರಾಣ ಕಳೆದು ಕೊಂಡ ಉರಗ ತಜ್ಞರು ಮತ್ತು ಯುವಕರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಹಾವು ಎಂದಿಗೂ ಮನುಷ್ಯನ ಪ್ರೀತಿಯನ್ನು ಅರ್ಥಮಾಡಿಕೊಳ್ಳುವ ಜೀವಿಯಲ್ಲ. ಅದಕ್ಕೆ ಅರ್ಥ ಮಾಡಿಕೊಳ್ಳುವಷ್ಟು ಮೆದುಳಿನ ವಿಕಾಸವೂ ಆಗಿರುವುದಿಲ್ಲ. ಹಾವಿಗೆ ತನ್ನ ರಕ್ಷಣೆ ಮಾತ್ರ ಮುಖ್ಯ. ಮನುಷ್ಯ ಹತ್ತಿರ ಬಂದಾಗ ಅದು ತನ್ನ ಆತ್ಮರಕ್ಷಣೆಗಾಗಿ ಕಚ್ಚುತ್ತದೆ. ಹಾವಿನ ಜತೆ ಸರಸವನ್ನು ಸಾಹಸ ಎಂದು ಬಿಂಬಿಸಿ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಮೂರ್ಖತನ.

ಥಾಯ್ಲೆಂಡ್‌ನ ಪಟ್ಟಾಯದಲ್ಲಿರುವ ಟೈಗರ್ ಪಾರ್ಕ್‌ಗೆ ಹೋಗುವ ಪ್ರವಾಸಿಗರು ಹುಲಿಯ ಮಗ್ಗುಲಲ್ಲಿ ಕುಳಿತು, ಅದರ ಬೆನ್ನ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಳ್ಳುವುದನ್ನು ಹೆಮ್ಮೆಯಿಂದ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಇಡೀ ಕಾಡನ್ನು ಆಳುವ ಈ ಮೃಗ ಮನುಷ್ಯನ ಮುಂದೆ ಬೆಕ್ಕಿನಂತೆ ಶಾಂತವಾಗಿ ಕುಳಿತುಕೊಳ್ಳಲು ಕಾರಣವೇನು ಎಂದು ಯಾರೂ ಯೋಚಿಸುವು ದಿಲ್ಲ. ಪ್ರವಾಸಿಗರ ಪ್ರದರ್ಶನಕ್ಕಾಗಿ ಈ ಹುಲಿಗಳಿಗೆ ಮತ್ತು ಬರಿಸುವ ಮತ್ತು ಅವುಗಳ ನರಮಂಡಲ ವನ್ನು ಮಂದಗೊಳಿಸುವ ರಾಸಾಯನಿಕ ಹಾಗೂ ಔಷಧಿಗಳನ್ನು ನೀಡಲಾಗುತ್ತದೆ ಎಂಬ ಕಹಿ ಸತ್ಯ ಅನೇಕರಿಗೆ ತಿಳಿಯದ ವಿಚಾರ. ಇದು ಪ್ರಾಣಿ ಪ್ರೇಮವಲ್ಲ, ಪ್ರಾಣಿಗಳ ಸಹಜ ನೈಸರ್ಗಿಕ ಹಕ್ಕನ್ನು ಕಸಿದುಕೊಂಡು ನಡೆಸುವ ಕ್ರೂರ ಮನರಂಜನೆ.

ಕರ್ನಾಟಕ ಮತ್ತು ಕೇರಳದ ದೇವಸ್ಥಾನಗಳಲ್ಲಿ ಆನೆಗಳನ್ನು ಪೂಜಿಸುವುದು, ಅವುಗಳಿಗೆ ಹಣ್ಣು-ಹಂಪಲು ನೀಡುವುದು ಒಂದು ಸಂಪ್ರದಾಯವಾಗಿ ಬೆಳೆದುಬಂದಿದೆ. ದೇವಸ್ಥಾನದ ಆನೆಗೆ ಬಾಳೆಹಣ್ಣು, ಕಬ್ಬು, ತೆಂಗಿನಕಾಯಿ ನೀಡಿ ಫೋಟೋ ತೆಗೆಸಿಕೊಳ್ಳುವುದು ಜನರ ಪಾಲಿಗೆ ಭಕ್ತಿಯ ಇನ್ನೊಂದು ಭಾವವಿರಬಹುದು. ಮಾವುತರು ಮತ್ತು ಕಾವಾಡಿಗರು ಹಣದ ಆಸೆಗಾಗಿ ಅಥವಾ ಯಾತ್ರಿಕರ ಒತ್ತಾಯಕ್ಕೆ ಮಣಿದು ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ಆದರೆ ಈ ದೇವರ ಆನೆಗಳು ಭಕ್ತರನ್ನು, ಮಾವುತರನ್ನು ತುಳಿದು ಸಾಯಿಸಿದ ಅದೆಷ್ಟೋ ಪ್ರಕರಣಗಳಿವೆ. ಎಷ್ಟೇ ಆದರೂ ಅವು ಮೂಲತಃ ವನ್ಯಪ್ರಾಣಿ. ತೀರಾ ಹತ್ತಿರಕ್ಕೆ ಸಾಗುವ ಮುನ್ನ ಈ ವಿವೇಕ ನಮಗಿರಬೇಕು.

ಕೆಲವರಿಗೆ ರಸ್ತೆಯಲ್ಲಿ ಸಾಗುವಾಗ ಗೋಮಾತೆ ಎಂದು ಹಸುಗಳ ಹತ್ತಿರ ಹೋಗಿ ನಮಸ್ಕರಿಸುವ, ಅವುಗಳ ಮೈದಡವುವ ಪರಿಪಾಠವಿದೆ. ಆದರೆ ಎಲ್ಲಾ ಹಸುಗಳೂ ಶಾಂತವಾಗಿರುವುದಿಲ್ಲ. ಕೆಲವು ತುಡುಗು ಸ್ವಭಾವದ ಅಥವಾ ಅಪರಿಚಿತರನ್ನು ಕಂಡು ಹೆದರುವ ದನಗಳು ತಮ್ಮ ಹತ್ತಿರ ಬಂದವರ ಮೇಲೆ ಹಾಯ್ದು ತೀವ್ರವಾಗಿ ಗಾಯಗೊಳಿಸಿದ, ಪ್ರಾಣ ತೆಗೆದ ಉದಾಹರಣೆಗಳಿವೆ. ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಪ್ರಾಣಿಗಳೊಂದಿಗಿನ ನಮ್ಮ ಒಡನಾಟಕ್ಕೂ ಅನ್ವಯಿಸುತ್ತದೆ.

ಸಿನಿಮಾ ಸೆಲೆಬ್ರಿಟಿಗಳು ತಮ್ಮ ಸಾಕು ನಾಯಿ, ಬೆಕ್ಕುಗಳ ಜೊತೆ ಬೆಡ್ ರೂಮ್‌ನಲ್ಲಿರುವ, ಅವುಗಳಿಗೆ ಮುತ್ತಿಕ್ಕುವ ಪೋಸ್ಟ್‌ಗಳನ್ನು ಹಂಚಿಕೊಂಡಾಗ, ಅಭಿಮಾನಿಗಳು ಅದನ್ನು ಕುರುಡಾಗಿ ಅನುಕರಿಸು ತ್ತಾರೆ. ಸಾಕುಪ್ರಾಣಿಗಳನ್ನು ಮನೆಯ ಸದಸ್ಯರಂತೆ ಸಾಕುವುದು ತಪ್ಪಲ್ಲ, ಆದರೆ ಅವುಗಳೊಂದಿಗೆ ಎಷ್ಟು ಅಂತರ ಕಾಯ್ದುಕೊಳ್ಳಬೇಕೋ ಅಷ್ಟಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯ. ನಾಯಿ ಮತ್ತು ಬೆಕ್ಕುಗಳನ್ನು ಬೆಡ್ ರೂಮ್‌ಗಳಲ್ಲಿ ಮಲಗಿಸಿಕೊಳ್ಳುವುದು, ಅವುಗಳ ಲಾಲಾರಸ ನಮ್ಮ ಮುಖ ಅಥವಾ ಬಾಯಿಗೆ ತಗಲುವಂತೆ ಸರಸವಾಡುವುದು ಅತ್ಯಂತ ಅಪಾಯಕಾರಿ. ಈ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ‘ಜೂನೋಟಿಕ್’ *(ಘಟಟ್ಞಟಠಿಜ್ಚಿ) ಕಾಯಿಲೆಗಳು ಹತ್ತು ಹಲವು. ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸಿದ್ದರೂ, ಕೆಲವೊಮ್ಮೆ ಗೀರು ಅಥವಾ ಲಾಲಾರಸದ ಮೂಲಕ ನರಮಂಡಲಕ್ಕೆ ಹಾನಿ ಮಾಡುವ ಈ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ಸಾಕು ಪ್ರಾಣಿಗಳಿಂದ ಹರಡುವ ಬ್ಯಾಕ್ಟೀರಿಯಾಗಳು ಪ್ರಾಣಾಂತಿಕ ಕಾಯಿಲೆಗೆ ದಾರಿಯಾಗಬಹುದು.

ದುಬಾರೆ ದುರ್ಘಟನೆಯ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಈಗ ಆನೆ ಶಿಬಿರಗಳಲ್ಲಿ ಸೆಲ್ಫಿ ತೆಗೆಯುವುದನ್ನು ಮತ್ತು ಆನೆಗಳ ಹತ್ತಿರ ಹೋಗುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ. ಆದರೆ, ನಮ್ಮ ಸರಕಾರದ ನೀತಿಗಳು ಯಾವಾಗಲೂ ಅವಘಡ ಸಂಭವಿಸಿದ ನಂತರ ಕೈಗೊಳ್ಳುವ ಮರಣೋತ್ತರ ಕ್ರಮಗಳು. ಅವಘಡಗಳ ಸಾಧ್ಯತೆಯನ್ನು ಮುಂಚಿತವಾಗಿಯೇ ಊಹಿಸಿ ಕಠಿಣ ನಿಯಮಗಳನ್ನು ಜಾರಿಗೆ ತರಬೇಕಾದುದು ಸರಕಾರದ ಕರ್ತವ್ಯ.

ಪ್ರಾಣಿಗಳ ಜೊತೆಗಿನ ಫೋಟೋ ಕ್ರೇಜ್ ಅನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗ ವೆಂದರೆ ಅದರ ಪ್ರಸಾರವನ್ನು ತಡೆಗಟ್ಟುವುದು. ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಇತ್ಯಾದಿಗಳಲ್ಲಿ ವನ್ಯಪ್ರಾಣಿಗಳನ್ನು ಹಿಡಿದು ಪ್ರದರ್ಶಿಸುವ, ಅವುಗಳ ಜೊತೆ ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳುವ ಫೋಟೋ ಮತ್ತು ವಿಡಿಯೋಗಳ ಪೋಸ್ಟಿಂಗ್ ಅನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು. ಸೈಬರ್ ಕಾನೂನಿನ ಅಡಿಯಲ್ಲಿ ಇಂತಹ ಕಂಟೆಂಟ್‌ಗಳನ್ನು ‘ಪ್ರಾಣಿ ಹಿಂಸೆ ಪ್ರಚೋದಕ’ ಎಂದು ಪರಿಗಣಿಸಿ, ಅಂತಹ ಖಾತೆಗಳನ್ನು ನಿರ್ಬಂಧಿಸುವ ವ್ಯವಸ್ಥೆ ಬರಬೇಕು. ಯಾವಾಗ ಜಾಲತಾಣಗಳಲ್ಲಿ ಜನಪ್ರಿಯತೆ, ಲೈಕ್ಸ್‌ ಮತ್ತು ರೀಲ್ಸ್ ಮೂಲಕ ಹಣ ಗಳಿಸುವ ಅವಕಾಶ ನಿಲ್ಲುತ್ತದೆಯೋ, ಆಗ ಜನರ ಈ ಸೆಲ್ಫಿ ಕ್ರೇಜ್ ತಾನಾಗಿಯೇ ಕಡಿಮೆಯಾಗುತ್ತದೆ.

ಪ್ರಾಣಿಗಳನ್ನು ಪ್ರೀತಿಸುವುದು ಎಂದರೆ ಅವುಗಳನ್ನು ನಮ್ಮ ಬೆಡ್ ರೂಮಿಗೆ ತಂದು ಕೂರಿಸಿ ಕೊಳ್ಳುವುದಲ್ಲ ಅಥವಾ ಅವುಗಳನ್ನು ಮಡಿಲಲ್ಲಿ ಇಟ್ಟುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಲ್ಲ. ನಿಜವಾದ ಪ್ರಾಣಿ ಪ್ರೇಮ ಎಂದರೆ ಅವುಗಳ ಸ್ವಾತಂತ್ರ್ಯವನ್ನು ಗೌರವಿಸುವುದು. ಕಾಡಿನ ಪ್ರಾಣಿ ಕಾಡಿನಲ್ಲೇ ಮುಕ್ತವಾಗಿರಬೇಕು, ನಾಡಿನ ಪ್ರಾಣಿಗೆ ಅದರದೇ ಆದ ಗಡಿ ಇರಬೇಕು. ಪ್ರಕೃತಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಬದುಕುವ ಹಕ್ಕಿದೆ. ಅದಕ್ಕೆ ತನ್ನದೇ ಆದ ಆವರಣದ ಅಗತ್ಯವಿದೆ. ಮಾನವ ತನ್ನ ಅಹಂಕಾರ ಮತ್ತು ಪ್ರದರ್ಶನ ಬುದ್ಧಿಯಿಂದ ಆ ಆವರಣವನ್ನು ಅತಿಕ್ರಮಿಸಿದಾಗ ಪ್ರಕೃತಿ ಭೀಕರವಾಗಿ ಪ್ರತಿಕ್ರಿಯಿಸುತ್ತದೆ. ದುಬಾರೆ ಘಟನೆ ನಮಗೊಂದು ಕಟು ಎಚ್ಚರಿಕೆ. ಪ್ರಾಣಿಗಳ ಜತೆಗಿನ ನಮ್ಮ ಒಡನಾಟವು ಫೋಟೋದ ಸಾಕ್ಷ್ಯ ಬೇಡದಿರಲಿ, ಹೃದಯದ ಒಲುಮೆಯಷ್ಟೇ ಸಾಕಾಗಲಿ.

ಲೋಕೇಶ್​ ಕಾಯರ್ಗ

View all posts by this author