Lokesh Kayarga Column: ಕುಕ್ಕೆ ಹೀಗೆ ಕುಕ್ಕರ್ ಆದ್ರೆ ಹೇಗೆ ಸ್ವಾಮಿ !?
ಬೆಟ್ಟ ಗುಡ್ಡಗಳನ್ನು ಏರಿಳಿದು, ಕಾಡುಮೇಡುಗಳನ್ನು ಸುತ್ತಿ, ನದಿ, ತೊರೆಗಳಲ್ಲಿ ಮಿಂದು ಪಾವನರಾಗುವ ಕ್ರಿಯೆ ಕೇವಲ ಭಕ್ತಿ ಮತ್ತು ನಂಬಿಕೆಗೆ ಸೀಮಿತವಾದುದಲ್ಲ. ಅದು ದೇಹ ಮತ್ತು ಮನಸ್ಸಿಗೆ ಮುದ ನೀಡುವ, ಮಾನಸಿಕ, ದೈಹಿಕ ಒತ್ತಡಗಳನ್ನು ಇಳಿಸಿಕೊಳ್ಳುವ, ಪರಸ್ಪರ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವ, ಮಾಡಿರುವ ತಪ್ಪುಗಳಿಗೆ ಮರುಗುವ, ಒಟ್ಟಾರೆಯಾಗಿ ನಮ್ಮ ಆರೋಗ್ಯವನ್ನು ಕಾಪಿಡುವ ಮಾರ್ಗವೂ ಹೌದು. ಆದರೆ ಇದಕ್ಕೆ ಸಾಕ್ಷಿಯಾಗುವ ಯಾವುದೇ ದೇಗುಲದ ಪರಿಸರವು ಪ್ರಕೃತಿದತ್ತವಾದ ಆಕರ್ಷಣೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಮಾಲ್‌ಗಳಿಗೂ, ಯಾತ್ರಾ ಸ್ಥಳಗಳಿಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ.
-
ಲೋಕಮತ
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸತತ 15ನೇ ವರ್ಷ ರಾಜ್ಯದ ಮುಜರಾಯಿ ದೇಗುಲಗಳ ಪೈಕಿ ಅತಿ ಹೆಚ್ಚು ಆದಾಯವಿರುವ ದೇಗುಲವಾಗಿ ಗುರುತಿಸಿಕೊಂಡಿದೆ. ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕ್ಷೇತ್ರದಲ್ಲಿ ನಾಗ ದೋಷಗಳ ಪರಿಹಾರಾರ್ಥ ಸೇವೆ ಸಲ್ಲಿಸಲು ದೇಶದ ನಾನಾ ಭಾಗಗಳಿಂದ ಜನರು ಬರುತ್ತಾರೆ. ಸಚಿನ್ ತೆಂಡುಲ್ಕರ್‌ರಂತಹ ಸ್ಟಾರ್ ಕ್ರಿಕೆಟಿಗರು, ಅಮಿತಾಭ್‌ರಂತಹ ಸ್ಟಾರ್ ಕಲಾವಿದರು ಕ್ಷೇತ್ರಕ್ಕೆ ಬಂದು ಹೋದ ಬಳಿಕ ಇಲ್ಲಿಗೆ ಆಗಮಿಸುವ ಸೆಲೆಬ್ರಿಟಿಗಳ ಸಂಖ್ಯೆಯೂ ಹೆಚ್ಚಿದೆ. ಕ್ಷೇತ್ರದ ಜನಪ್ರಿಯತೆಯೂ ದೇಶ-ಭಾಷೆಗಳ ಗಡಿ ದಾಟಿದೆ. ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ಗಳನ್ನು ಹಮ್ಮಿಕೊಳ್ಳುವುದು ಸಹಜ. ಆದರೆ ಪಶ್ಚಿಮಘಟ್ಟದ ತಪ್ಪಲಲ್ಲಿ ನಿಜ ನಾಗರ ಆವಾಸಸ್ಥಾನವಾಗಿ ತನ್ನ ನಿಸರ್ಗ ರಮಣೀಯತೆಯಿಂದಲೇ ಭಕ್ತರನ್ನು ಸೆಳೆಯುತ್ತಿದ್ದ ಕ್ಷೇತ್ರ, ನಾಗಸಮೂಹಕ್ಕೆ ಹುತ್ತಗಳಿಲ್ಲದ, ಬಿಲಗಳು ಕಾಣದ ಕ್ಷೇತ್ರವಾಗಿ ಕಾಂಕ್ರೀಟ್ ಕಟ್ಟಡಗಳ ಗೂಡಾಗಿ ಬೆಳೆದಿದ್ದು ಇತ್ತೀಚಿನ ದಶಕಗಳ ದುರಂತ ಕಥನ.
ಇದೀಗ ಕುಕ್ಕೆ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ 604 ಕೋಟಿ ರು. ಮೊತ್ತದ ಮಾಸ್ಟರ್ ಪ್ಲ್ಯಾನ್ ತಯಾರಾಗಿದೆ. ರಾಜ್ಯ ಸಚಿವ ಸಂಪುಟವು ಈ ‘ಅಭಿವೃದ್ಧಿ’ ಕಾಮಗಾರಿಗೆ ಅನುಮೋದನೆ ಯನ್ನೂ ನೀಡಿದೆ. ಈ ಮೊತ್ತದಲ್ಲಿ ದೇವಸ್ಥಾನದ ಸುತ್ತು ಪೌಳಿ, ಆಶ್ಲೇಷ ಬಲಿ ಮಂಟಪ, ಭೋಜನ ಶಾಲೆ, ವಿವಿಐಪಿ ಗೆಸ್ಟ್ ಹೌಸ್, ಸ್ಟಾಫ್ ಕ್ವಾರ್ಟರ್ಸ್ ಮತ್ತಿತರ 19 ಕಾಮಗಾರಿ ಗಳನ್ನು ನಡೆಸಲಾಗುವುದು ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಅಂದರೆ ಕುಕ್ಕೆಯಲ್ಲಿ ಮತ್ತಷ್ಟು ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುವುದು ಗ್ಯಾರಂಟಿ ಎಂದಾಯಿತು.
ಉಡುಪಿ ಅಷ್ಟಮಠಗಳಲ್ಲಿ ಒಂದಾದ ಸುಬ್ರಮಣ್ಯ ಮಠದ ಮೂಲಮಠವೂ ಈ ದೇಗುಲದ ಆವರಣದಲ್ಲಿದೆ. ಹಿಂದೊಮ್ಮೆ ಈ ಮಠದ ಪೀಠ ಅಲಂಕರಿಸಿದ್ದ ಗಾಯಕ ವಿದ್ಯಾ ಭೂಷಣರು, ‘ಇಲ್ಲಿ ಕಾಂಕ್ರೀಟ್ ಕಾಡಿಗೆ ಬುನಾದಿ ಹಾಕಿದವನು ನಾನೇ’ ಎಂದು ಪರಿತಪಿಸಿ ದ್ದರು. ಅವರು ಯತಿಗಳಾಗಿದ್ದ ಅವಧಿಯ ಕುಕ್ಕೆ ಕ್ಷೇತ್ರಕ್ಕೂ ಈಗಿನ ಕುಕ್ಕೆಗೂ ಅಜಗಜಾಂತರ ವಿದೆ. ದೇಗುಲದ ಎದುರಿನ ರಥ ಬೀದಿ ಈಗ ಹೆದ್ದಾರಿ ಮಾದರಿಯಲ್ಲಿ ವಿಶಾಲವಾಗಿದೆ. ರಥ ಬೀದಿಯುದ್ದಕ್ಕೂ ಭಕ್ತರು ಚಾಪೆ ಹಾಸಿಕೊಂಡು ಮಲಗುತ್ತಿದ್ದ ಹಂಚಿನ ಪಡಶಾಲೆಗಳು ಇತಿಹಾಸದ ಪುಟ ಸೇರಿವೆ. ಭಕ್ತರಿಗೆ ಆಶ್ರಯ ನೀಡುವ ಹೆಸರಿನಲ್ಲಿ ಹೊಸ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ‘ಆದಿಶೇಷ’ನ ಸಾನ್ನಿಧ್ಯ ಸ್ಥಳವೆಂದೇ ಪ್ರತೀತಿ ಇರುವ ಆದಿ ಸುಬ್ರಹ್ಮಣ್ಯ ದೇಗುಲದ ಎದುರು ಹಲವು ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಆದರೆ ಕುಕ್ಕೆಯ ಪರಿಸರ ಮತ್ತು ಇಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡಗಳು ಒಂದ ಕ್ಕೊಂದು ತಾಳೆಯಾಗುತ್ತಿಲ್ಲ ಎನ್ನುವುದು ನಮ್ಮಂತಹ ಸಾಮಾನ್ಯ ಭಕ್ತರಿಗೂ ಅರಿವಾಗು ತ್ತಿದೆ. ಹೊಸದಾಗಿ ನಿರ್ಮಾಣವಾದ ಬಹುತೇಕ ಕಟ್ಟಡಗಳು ಸರಕಾರಿ ಗೋದಾಮುಗಳಾಗಿ ಕಾಣುತ್ತಿವೆಯೇ ಹೊರತು ದೇಗುಲದ ಪರಿಸರದಲ್ಲಿ ಕಾಣಬೇಕಾದ ವಾಸ್ತುವಿನ್ಯಾಸಗಳಿಲ್ಲ ಎನ್ನುವುದು ಮೇಲ್ನೋಟಕ್ಕೆ ವೇದ್ಯವಾಗುತ್ತದೆ.
ಇದನ್ನೂ ಓದಿ:Lokesh Kayarga Column: ಗಳಿಸಿದ್ದನ್ನು ಉಳಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲು !
ಒಂದೆಡೆ ಕುಮಾರ ಪರ್ವತ, ಇನ್ನೊಂದೆಡೆ ಪಶ್ಚಿಮ ಘಟ್ಟದ ದಟ್ಟ ಕಾಡು, ದೇಗುಲದ ಹೊಸ್ತಿಲಲ್ಲೇ ದರ್ಪಣ ಹೊಳೆ. ದೇವರ ಸಹಜ ತಾಣದಂತಿರುವ ಕ್ಷೇತ್ರದಲ್ಲಿ ನಿರ್ಮಿಸುವ ಪ್ರತಿಯೊಂದು ಕಟ್ಟಡವು ಇಲ್ಲಿನ ಪ್ರಾಕೃತಿಕ ವಿಸ್ಮಯ, ಭೌಗೋಳಿಕ ಮತ್ತು ಆಧ್ಯಾತ್ಮಿಕ ಪರಿಸರಕ್ಕೆ ಪೂರಕವಾಗಿರಬೇಕಿತ್ತು. ಆದರೆ ಹೊಸದಾಗಿ ತಲೆ ಎತ್ತಿರುವ ಕಟ್ಟಡಗಳು ಕಾಂಕ್ರೀಟ್ ಕಾಡಿಗೆ ಮತ್ತೊಂದು ಸೇರ್ಪಡೆ ಎಂಬಂತಿದೆ ಹೊರತು, ಭಕ್ತರು ಕಣ್ತುಂಬಿಸಿ ಕೊಳ್ಳುವಂತಹ ವಾಸ್ತು ವಿನ್ಯಾಸಗಳನ್ನು, ನಾವೀನ್ಯತೆಯನ್ನು ಹೊಂದಿಲ್ಲ. ಕುಕ್ಕೆಯಲ್ಲಿ ಬೀಸುತ್ತಿದ ತಂಗಾಳಿ ಈಗ ಮಾಯವಾಗಿದೆ. ಗಾಳಿಯಲ್ಲಿ ಕಾಣುತ್ತಿದ್ದ ಮಾರ್ದವತೆಯೂ ಕಾಣೆಯಾಗಿದೆ.
ನಮ್ಮ ಯಾವುದೇ ಪ್ರಾಚೀನ ದೇಗುಲಗಳನ್ನು ತೆಗೆದುಕೊಂಡರೂ ಅಲ್ಲಿನ ಪರಿಸರ ವಿಶೇಷ ದಿಂದಾಗಿಯೇ ‘ದೇವರು’ ನೆಲೆ ನಿಂತಿರುವುದು ಸ್ಪಷ್ಟ. ನಮ್ಮ ದೇವರ ಸಾನ್ನಿಧ್ಯಕ್ಕೆ ಕನಿಷ್ಠ ಒಂದು ಕೊಳವಾದರೂ ಬೇಕೇ ಬೇಕು. ಪ್ರಸಿದ್ಧ ದೇಗುಲಗಳೆಲ್ಲವೂ ನದಿ, ತೊರೆ, ಕೆರೆಗಳು, ಬೆಟ್ಟ ಗುಡ್ಡಗಳು, ತಪ್ಪಲುಗಳು, ದಟ್ಟಡವಿಗಳ ಮಧ್ಯೆ ಸ್ಥಾಪನೆಯಾಗಿರುವುದರ ಹಿಂದೆ ನಮ್ಮ ಹಿರಿಯರ ಮುಂದಾಲೋಚನೆಗಳಿವೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ, ಕೊಲ್ಲೂರು, ಉಡುಪಿ, ಇಡಗುಂಜಿ, ಗೋಕರ್ಣದಂತಹ ಕರಾವಳಿಯ ಪ್ರಸಿದ್ಧ ದೇಗುಲಗಳಾ ಗಲಿ, ಶೃಂಗೇರಿಯ ಶಾರದೆ, ಮೈಸೂರಿನ ಚಾಮುಂಡಿ, ಚಾಮರಾಜನಗರದ ಮಲೆ ಮಹದೇಶ್ವರನಾಗಲಿ, ದರ್ಶನಕ್ಕೆ ಬರುವ ಭಕ್ತರು ದೇಗುಲದ ಆವರಣದಲ್ಲಿ ಮಾತ್ರವಲ್ಲ, ಅಲ್ಲಿನ ಪರಿಸರದಲ್ಲಿಯೇ ದೈವಿಕ ಕಳೆಯನ್ನು, ಸಕಾರಾತ್ಮಕ ಶಕ್ತಿಯನ್ನು (ಪಾಸಿಟಿವ್ ಎನರ್ಜಿ) ಕಾಣುತ್ತಾರೆ.
ಬೆಟ್ಟ ಗುಡ್ಡಗಳನ್ನು ಏರಿಳಿದು, ಕಾಡುಮೇಡುಗಳನ್ನು ಸುತ್ತಿ, ನದಿ, ತೊರೆಗಳಲ್ಲಿ ಮಿಂದು ಪಾವನರಾಗುವ ಕ್ರಿಯೆ ಕೇವಲ ಭಕ್ತಿ ಮತ್ತು ನಂಬಿಕೆಗೆ ಸೀಮಿತವಾದುದಲ್ಲ. ಅದು ದೇಹ ಮತ್ತು ಮನಸ್ಸಿಗೆ ಮುದ ನೀಡುವ, ಮಾನಸಿಕ, ದೈಹಿಕ ಒತ್ತಡಗಳನ್ನು ಇಳಿಸಿಕೊಳ್ಳುವ, ಪರಸ್ಪರ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವ, ಮಾಡಿರುವ ತಪ್ಪುಗಳಿಗೆ ಮರುಗುವ, ಒಟ್ಟಾರೆಯಾಗಿ ನಮ್ಮ ಆರೋಗ್ಯವನ್ನು ಕಾಪಿಡುವ ಮಾರ್ಗವೂ ಹೌದು. ಆದರೆ ಇದಕ್ಕೆ ಸಾಕ್ಷಿಯಾಗುವ ಯಾವುದೇ ದೇಗುಲದ ಪರಿಸರವು ಪ್ರಕೃತಿದತ್ತವಾದ ಆಕರ್ಷಣೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಮಾಲ್‌ಗಳಿಗೂ, ಯಾತ್ರಾ ಸ್ಥಳಗಳಿಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ.
ಶ್ರೀ ಕ್ಷೇತ್ರ ಕುಕ್ಕೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೊಂದೇ ಕ್ಷೇತ್ರವಲ್ಲ , ಇತ್ತೀಚಿನ ದಿನಗಳಲ್ಲಿ ಕರಾವಳಿಯ ಪ್ರತಿಯೊಂದು ದೇಗುಲಕ್ಕೂ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ತಕ್ಕುದಾದ ಸೌಲಭ್ಯ, ಸೌಕರ್ಯಗಳನ್ನು ಮಾಡುವುದು ಅನಿವಾರ್ಯ. ಮೂರ್ನಾಲ್ಕು ದಶಕಗಳ ಹಿಂದೆ ಷಷ್ಠಿ ಜಾತ್ರೆಯಂತಹ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನವೊಂದರ ಸಾವಿರ ದಾಟುತ್ತಿರಲಿಲ್ಲ. ಈಗ ಪ್ರತಿದಿನವೂ 10 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಸರಣಿ ರಜಾದಿನಳು ಬಂದರೆ 50 ಸಾವಿರಕ್ಕಿಂತ ಹೆಚ್ಚಿನ ಭಕ್ತರು ಸೇರುತ್ತಾರೆ.
ವಿಶೇಷ ಸೇವೆಗಳಿಗೆ ಬಂದವರು ಎರಡು ಮೂರು ದಿನ ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಇವರೆಲ್ಲರಿಗೂ ತಕ್ಕುದಾದ ವಸತಿ ಮತ್ತು ಅನ್ನದಾನ ಸೇವೆ ಕಲ್ಪಿಸು ವುದು ದೇಗುಲದ ವ್ಯವಸ್ಥಾಪನಾ ಸಮಿತಿ ಮತ್ತು ಮುಜರಾಯಿ ಇಲಾಖೆಯ ಕರ್ತವ್ಯ. ಆದರೆ ಭಕ್ತರ ಪಾಲಿಗೆ ಇದು ಮತ್ತೊಂದು ಲಾಡ್ಜ್ ಎನ್ನುವ ಭಾವನೆ ಬರಬಾರದು. ಶ್ರೀ ಕ್ಷೇತ್ರದ ಪ್ರತಿಯೊಂದು ಕಟ್ಟಡವೂ ದೇಗುಲದ ಭಾಗ ಮತ್ತು ಅಲ್ಲಿನ ಪ್ರತಿಯೊಂದು ನಡೆಯೂ ದೈವಿಕ ಎಂಬ ಭಾವನೆ ಬರುವಂತಿರಬೇಕು.
ದಶಕಗಳ ಹಿಂದೆ ಕುಕ್ಕೆಗೆ ಭೇಟಿ ಕೊಟ್ಟವರು ಅಂದು ಕಣ್ತುಂಬಿಕೊಂಡ ಪರಿಸರವನ್ನು ಇಂದು ಕಾಣಲು ಸಾಧ್ಯವಿಲ್ಲ. ದೇಗುಲದ ಸಮೀಪದ ಗುಡ್ಡಗಳೆಲ್ಲವೂ ಬಹುಮಹಡಿ ಕಟ್ಟಡಗಳಿಂದ ತುಂಬಿಹೋಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಆದಿ ಸುಬ್ರಹ್ಮಣ್ಯದ ಪರಿಸರ ಇಂದು ಪೂರ್ತಿ ಬದಲಾಗಿದೆ. ಮುಖ್ಯದೇಗುಲದಲ್ಲಿ ಕುಮಾರಸ್ವಾಮಿಯ ದರ್ಶನ ಪಡೆದು ಆದಿ ಸುಬ್ರಹ್ಮಣ್ಯದ ಕಡೆಗೆ ಹೆಜ್ಜೆ ಹಾಕುವಾಗ ಬಿರು ಬೇಸಿಗೆಯಲ್ಲೂ ತಂಪಿನ ವಾತಾ ವರಣವಿರುತ್ತಿತ್ತು.
ಸ್ಫಟಿಕ ಶುಭ್ರವಾದ ಕನ್ನಡಿ ಹೊಳೆ (ದರ್ಪಣ ತೀರ್ಥ)ಗೆ ಇಳಿದವರು ಕೇವಲ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುತ್ತಿರಲಿಲ್ಲ. ಈ ನೀರನ್ನು ತೀರ್ಥ ಎಂದು ಭಾವಿಸಿ ಸೇವಿಸುತ್ತಿದ್ದರು. ದೇಗುಲದ ಸುತ್ತಮುತ್ತಲ ವಾತಾವರಣವೇ ನಾಗನ ಸಾನ್ನಿಧ್ಯಕ್ಕೆ ಆಹ್ವಾನ ನೀಡುವಂತಿತ್ತು. ಇಂದು ದೇಗುಲದೊಳಗಿನ ಮೃತ್ತಿಕಾ ಪ್ರಸಾದದ ಹುತ್ತ ಬಿಟ್ಟರೆ ಪರಿಸರ ದಲ್ಲಿ ಮತ್ತೆಲ್ಲೂ ಹುತ್ತಗಳಿದ್ದಂತೆ ಕಾಣುತ್ತಿಲ್ಲ. ಕನ್ನಡಿಗೆ ಪರ್ಯಾಯದಂತಿದ್ದ ಹೊಳೆಯು ಬಟ್ಟೆ, ಪ್ಲಾಸ್ಟಿಕ್ ಗಳ ತ್ಯಾಜ್ಯ ರಾಶಿಯಿಂದ ಕಲುಷಿತಗೊಂಡಿದೆ.
ಕನ್ನಡಿ ಹೊಳೆಗೆ ಹೊಂದಿಕೊಂಡಂತೆ ಕಟ್ಟಿರುವ ವಸತಿ ಸೌಧಗಳಲ್ಲಿ ಇಲ್ಲಿನ ಪರಿಸರಕ್ಕೆ ಪೂರಕವಾದ ಕಲೆ ಮತ್ತು ಸೌಂದರ‌್ಯದ ಲವಶೇಷವೂ ಕಂಡು ಬರುತ್ತಿಲ್ಲ. ಮಾಮೂಲಿ ಮೇಸ್ತ್ರಿಯೊಬ್ಬನಿಗೆ ವಹಿಸಿಕೊಟ್ಟಿದ್ದರೂ ಈ ಕಟ್ಟಡಕ್ಕೊಂದು ‘ಅಸ್ತೆಟಿಕ್ ಲುಕ್’ ಕೊಡುವ ಮನಸ್ಸು ಮಾಡುತ್ತಿದ್ದ. ಅವಸರದಲ್ಲಿ ಸರಕಾರಿ ಕಾಮಗಾರಿ ಕೆಲಸಗಳನ್ನು ಮುಗಿಸಿದಂತೆ ತರಾತುರಿಯಲ್ಲಿ ಇಲ್ಲಿ ವಸತಿ ಸೌಧ ನಿರ್ಮಿಸುವ ಅನಿವಾರ‌್ಯತೆ ಏನಿತ್ತೋ ಗೊತ್ತಿಲ್ಲ.
ಕುಕ್ಕೆಯಲ್ಲಿ ಕಟ್ಟಡ ಕಾಮಗಾರಿಗೆ ತೋರಿಸಿದ ‘ಉಮೇದು’ ಇಲ್ಲಿನ ಸ್ವಚ್ಛತೆಯನ್ನು ಕಾಪಾಡು ವಲ್ಲೂ ತೋರಿಸಿದ್ದರೆ ಮುಜರಾಯಿ ಇಲಾಖೆ ಮತ್ತು ವ್ಯವಸ್ಥಾಪನಾ ಸಮಿತಿಗೊಂದು ಶಹಬ್ಬಾಸ್‌ಗಿರಿ ಕೊಡಬಹುದಿತ್ತು. ಆದರೆ ಸರಕಾರಿ, ಖಾಸಗಿ ಬಸ್ ಇಲ್ಲವೇ ಬಾಡಿಗೆ ವಾಹನ ಗಳಲ್ಲಿ ಕ್ಷೇತ್ರ ತಲುಪಿದ ಭಕ್ತರಿಗೆ ತಕ್ಷಣಕ್ಕೆ ದೇಹಬಾಧೆ ತೀರಿಸಿಕೊಳ್ಳಲು ಈಗಲೂ ಸರಿಯಾದ ವ್ಯವಸ್ಥೆ ಇಲ್ಲ. ಕೆಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಬಳಸಬೇಕಾದರೆ ಗುಡ್ಡ ಹತ್ತಬೇಕು.ರಾತ್ರಿ 9ರ ಬಳಿಕ, ಮುಂಜಾವದ ವೇಳೆ ಬಸ್ ನಿಲ್ದಾಣ ನಿರ್ಜನವಾಗಿರು ತ್ತದೆ. ಮಳೆಗಾಲದಲ್ಲಿ ಕರೆಂಟು ಇರುವುದೂ ಅಪರೂಪ. ಗಂಡಸರ ಪಾಲಿಗೆ ಬಸ್ ನಿಲ್ದಾಣಕ್ಕೆ ಸಾಗುವ ಹಾದಿ ತುರ್ತು ಶೌಚಾಲಯವಾದರೆ, ಹೆಣ್ಣು ಮಕ್ಕಳು ಇಲ್ಲಿಂದ ಕಿಲೋ ಮೀಟರ್ ದೂರದ ದೇವಸ್ಥಾನದ ಬಳಿಯ ಶೌಚಾಲಯ ತಲುಪುವವರೆಗೂ ತಡೆದುಕೊಂಡಿ ರುವುದು ಅನಿವಾರ್ಯ.
ಇನ್ನು ಕುಮಾರಧಾರಾ ಹೊಳೆಯಲ್ಲಿ ಮಡಿಸ್ನಾನಕ್ಕೆ ಹೋದವರಿಗೆ ಮಡಿಗಿಂತ ಮಾಲಿನ್ಯ ವೇ ಹೆಚ್ಚು ರಾಚುತ್ತದೆ. ಇಲ್ಲಿನ ಅನೈರ್ಮಲ್ಯ ಮತ್ತು ಅವ್ಯವಸ್ಥೆಯಲ್ಲಿ ಭಕ್ತರ ಪಾಲು ಹೆಚ್ಚಿದೆ. ತಾವು ತಂದ ಬಟ್ಟೆ ಬರೆಗಳನ್ನು, ಸೋಪು, ಶ್ಯಾಂಪು ಪ್ಯಾಕೇಟ್‌ಗಳನ್ನು, ಮನೆಗೆ ಬೇಡವಾದ ಹಳೆಯ ಫೋಟೋಗಳನ್ನು ನದಿಯಲ್ಲಿ ಬಿಸಾಡುವ ಭಕ್ತರಿದ್ದಾರೆ. ವ್ಯವಸ್ಥಾಪನಾ ಸಮಿತಿಯು ಇಲ್ಲಿ ಸುರಕ್ಷತೆ, ಮತ್ತು ನೈರ್ಮಲ್ಯವನ್ನು ಕಾಪಾಡಲು ಹಂತ, ಹಂತವಾಗಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ದಶಕಗಳ ಹಿಂದಿನಿಂದಲೂ ನಡೆದು ಬಂದ ‘ಗಲೀಜು’ ಪರಿಪಾಠ ಈಗಲೂ ಮುಂದುವರಿದಿದೆ.
ಇದು ಕುಕ್ಕೆಯೊಂದರ ಕಥೆಯಲ್ಲ. ಮುಜರಾಯಿ ಇಲಾಖೆಯ ಅಧೀನದಲ್ಲಿರುವ, ಭಕ್ತರು ಮತ್ತು ಆದಾಯ ಪ್ರಮಾಣ ಹೆಚ್ಚಿರುವ ಬಹುತೇಕ ಎಲ್ಲ ದೇಗುಲಗಳ ಕಥೆ ಇದಕ್ಕಿಂತ ಭಿನ್ನ ವಿಲ್ಲ. ಮೈಸೂರಿನ ಚಾಮುಂಡಿ ಬೆಟ್ಟವು ಸರಕಾರಿ ಕಟ್ಟಡಗಳ ಭಾರದ ಜತೆಗೆ ಖಾಸಗಿ ಯವರ ಅತಿಕ್ರಮಣದಿಂದ ನಲುಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಘೋಷಣೆ ಯಾದರೂ ಬೆಟ್ಟವಿಡಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿದೆ. ದೇವರ ಕೆರೆಯ ಬಳಿ ಕುಡುಕರ ‘ತೀರ್ಥ ಸೇವನೆ’ಗೆ ಕಡಿವಾಣ ಬಿದ್ದಿಲ್ಲ. ಇದೀಗ ಕೇಂದ್ರ ಸರಕಾರದ ‘ಪ್ರಸಾದ’ ಯೋಜನೆ ಯಡಿ ಬೆಟ್ಟದಲ್ಲಿ ಮತ್ತಷ್ಟು ಕಟ್ಟಡಗಳನ್ನು ನಿರ್ಮಿಸಲು ಸಿದ್ಧತೆ ನಡೆದಿದೆ.
ಇವೆಲ್ಲವೂ ಮತ್ತೊಂದು ಸರಕಾರಿ ಕಟ್ಟಡಗಳಾಗಿ ನಿರ್ಮಾಣವಾಗಲಿದೆ ಹೊರತು ಇಲ್ಲಿನ ದೇಗುಲದ ಪಾವಿತ್ರ್ಯ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಹೊಂದಿಕೊಳ್ಳುವ, ಮನಸ್ಸಿಗೆ ಮುದ ನೀಡುವ ಕನಿಷ್ಠ ವಾಸ್ತುಶಿಲ್ಪವನ್ನೂ ಹೊಂದಿರುವುದಿಲ್ಲ ಎನ್ನುವುದನ್ನು ಈಗಲೇ ಹೇಳಬಹುದು. ಪ್ರಕೃತಿಯ ಮಧ್ಯೆ, ದಟ್ಟಾರಣ್ಯದಲ್ಲಿ ಕಂಗೊಳಿಸುತ್ತಿದ್ದ ಮಾದಪ್ಪನ ಕ್ಷೇತ್ರದಲ್ಲೂ ‘ಸರಕಾರಿ ಗೆಸ್ಟ್ ಹೌಸ್’ಗಳ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಬಹುತೇಕ ಶಿಲಾಮಯವಾದ ನಮ್ಮ ಪ್ರಾಚೀನ ದೇಗುಲಗಳೆಲ್ಲವೂ ಅಲ್ಲಿನ ಪರಿಸರಕ್ಕೆ ಪೂರಕವಾಗಿ ನಿರ್ಮಾಣಗೊಂಡಿವೆ. ಸಿಮೆಂಟ್, ಕಬ್ಬಿಣ ಬಳಸದೆ, ಸ್ಥಳೀಯವಾಗಿ ದೊರಕುವ ಕಲ್ಲು, ಮಣ್ಣು, ಇಟ್ಟಿಗೆ ಮತ್ತಿತರ ಪರಿಕರಗಳಿಂದಲೇ ನಿರ್ಮಾಣವಾದ ದೇಗುಲಗಳು ಬೇಸಿಗೆಯಲ್ಲಿ ತಂಪಾಗಿರುತ್ತಿದ್ದವು. ಮಳೆ, ಚಳಿಯಲ್ಲಿ ಮೈ ಮನವನ್ನು ಬೆಚ್ಚಗಿಡುತ್ತಿದ್ದವು. ನಮ್ಮ ವೈದಿಕ ಪರಂಪರೆ ಮತ್ತು ಆಗಮ ಶಾಸ್ತ್ರದ ಪ್ರಕಾರವೂ ದೇಗುಲ ಮಾತ್ರವಲ್ಲ, ಸುತ್ತಮುತ್ತಲ ಪರಿಸರದಲ್ಲಿ ನಿರ್ಮಾಣವಾಗುವ ಕಟ್ಟಡಗಳೂ ಅಲ್ಲಿನ ಪರಿಸರಕ್ಕೆ ಪೂರಕವಾಗಿರಬೇಕು. ದೇಗುಲದ ಪರಿಸರದಲ್ಲಿ ನಿರ್ಮಾಣವಾದ ಕೆರೆ, ಬಾವಿ ಯಿಂದ ಹಿಡಿದು ಕಾಯಿ ಹೊಡೆಯುವ ಕಲ್ಲಿನವರೆಗೂ ಆಯ, ಪ್ರಮಾಣದ ಅಳತೆ ಗೋಲುಗಳಿರುತ್ತಿದ್ದವು.
ಬೃಹತ್ತಾದ, ಸುಂದರ ದೇಗುಲಗಳನ್ನು ಕಟ್ಟಿದ ನಮ್ಮ ಪೂರ್ವಜರಿಗೆ ಅದರ ಸಮೀಪವೇ ಇನ್ನೊಂದಷ್ಟು ಕಟ್ಟಡಗಳನ್ನು ಕಟ್ಟುವುದು ಕಷ್ಟವಿರಲಿಲ್ಲ. ಆದರೆ ದೇಗುಲದ ನಿರ್ಮಾತೃ ಗಳಿಗೂ, ಕಟ್ಟಿದ ಶಿಲ್ಪಿಗಳಿಗೂ ಅಲ್ಲಿನ ಪರಿಸರವೇ ಮೊದಲ ಆದ್ಯತೆಯಾಗಿರುತ್ತಿತ್ತು. ಪ್ರಕೃತಿ ದತ್ತ ಪರಿಸರದ ಅಂದಗೆಡಿಸಿದ ಸ್ಥಳದಲ್ಲಿ ನಮ್ಮ ಮನಸ್ಸನ್ನು ಉದ್ದೀಪಿಸುವ ದೈವಿಕ ಕಳೆ ಉಳಿಯಲು ಸಾಧ್ಯವಿಲ್ಲ. ಲಕ್ಷಾಂತರ ಭಕ್ತರ ನಂಬಿಕೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಕ್ಷೇತ್ರಕ್ಕೆ ಈ ಪರಿಸ್ಥಿತಿ ಬಾರದಿರಲಿ. 604 ಕೋಟಿ ರು. ಮೊತ್ತದ ಮಾಸ್ಟರ್ ಪ್ಲ್ಯಾನ್ ಮತ್ತಷ್ಟು ಕಾಂಕ್ರೀಟ್ ಕಟ್ಟಡಗಳ ಗೂಡಿಗೆ ವ್ಯಯವಾಗದಿರಲಿ.