ಅಶ್ವತ್ಥಕಟ್ಟೆ
ranjith.hoskere@gmail.com
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರಗಳು ತಪ್ಪುದಾರಿ ತುಳಿಯದಂತೆ ‘ಕಾಯುವುದು’ ಪ್ರತಿಪಕ್ಷದ ಕೆಲಸವಾದರೂ, ಭಾರತದಲ್ಲಿ ಸರಕಾರಗಳು ತೆಗೆದುಕೊಳ್ಳುವ ತೀರ್ಮಾನದಲ್ಲಿ ‘ಕೊಂಕಾಡುವುದು’ ಪ್ರತಿಪಕ್ಷದ ಕೆಲಸ ಎನ್ನುವ ಅಲಿಖಿತ ನಿಯಮವಿದೆ. ಈ ನಿಯಮದನ್ವಯವೇ ಕೇಂದ್ರದಲ್ಲಿರುವ ಮೋದಿ ಸರಕಾರದ ಪ್ರತಿ ತೀರ್ಮಾನವನ್ನೂ ಕಾಂಗ್ರೆಸ್ ವಿರೋಧಿಸಿಕೊಂಡೇ ಬರುತ್ತಿದೆ.
ಸಾಧಕ-ಬಾಧಕದ ಬಗ್ಗೆ ಯೋಚಿಸುವುದಕ್ಕಿಂತ ಯಾರು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದರ ಮೇಲೆ, ನಮ್ಮಲ್ಲಿನ ಪರ-ವಿರೋಧ ಚರ್ಚೆಗಳು ನಡೆಯುವುದು ಸಾಮಾನ್ಯ. ಕೇಂದ್ರ ಸರಕಾರ ಜಾರಿಗೊಳಿಸಿರುವ ಹಲವು ಯೋಜನೆಗಳನ್ನು ವಿರೋಧಿಸಿಕೊಂಡೇ ಬಂದಿರುವ ಕಾಂಗ್ರೆಸ್ ‘ಸಹಜ’ ಎನ್ನುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿತ್ತು. ಕರ್ನಾಟಕ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಎನ್‌ಇಪಿ ಬದಲು ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದು, ಅಧಿಕಾರಕ್ಕೆ ಬಂದ ಬಳಿಕ ಪ್ರೊ.ಸುಖ್‌ದೇವ್ ಥೋರಟ್ ನೇತೃತ್ವದಲ್ಲಿ ಎಸ್‌ಇಪಿ ಸಮಿತಿಯನ್ನು ರಚಿಸಿದ್ದು, ಕಳೆದ ವಾರ ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸಲ್ಲಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ವಿರೋಧಿಸಬೇಕು ಎನ್ನುವ ಏಕಮಾತ್ರ ಕಾರಣಕ್ಕೆ ಎನ್‌ಇಪಿ ಬದಲು, ಎಸ್‌ಇಪಿ ತರಲು ಹೊರಟಿರುವ ಈ ಕ್ರಮವು ರಾಜ್ಯ ಶಿಕ್ಷಣದ ಮೇಲೆ ಎಷ್ಟು ‘ಹೊರೆ’ಯಾಗಲಿದೆ ಎನ್ನುವ ಬಗ್ಗೆ ಯೋಚಿಸುವುದು ಇಂದಿನ ಅಗತ್ಯ ವಾಗಿದೆ.
ಹಾಗೆ ನೋಡಿದರೆ, ಕೇಂದ್ರ ಸರಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿರುವುದು ಕೇವಲ ಕರ್ನಾಟಕವಲ್ಲ. ಬದಲಿಗೆ ಈಗಾಗಲೇ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ಬಹುತೇಕ ರಾಜ್ಯಗಳು ವಿರೋಧಿಸಿವೆ. ಆದರೆ ಅಧಿಕೃತವಾಗಿ ಎನ್‌ಇಪಿ ಬೇಡ ಎನ್ನುವ ತೀರ್ಮಾನಕ್ಕೆ ಬಂದಿಲ್ಲ.
ಇದನ್ನೂ ಓದಿ: Ranjith H Ashwath Column: ಮತಗಳ್ಳತನವನ್ನು ಸಾಕ್ಷ್ಯ ಸಮೇತ ಕಟ್ಟಿಹಾಕಲಿ !
ಕರ್ನಾಟಕದಲ್ಲಿಯೂ ಎಸ್‌ಇಪಿ ಎನ್ನುವುದು ಕಾಗದದ ಮೇಲಿನ ದಾಖಲೆಯಾಗುವುದೋ ಅಥವಾ ಅಧಿಕೃತವಾಗಿ ಜಾರಿಯಾಗುವುದೋ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ರಾಜ್ಯ ಶಿಕ್ಷಣ ನೀತಿಯಲ್ಲಿ ಮಾಡಿರುವ ಕೆಲ ಶಿಫಾರಸುಗಳಿಂದ ಮಾತ್ರ ರಾಜ್ಯ ಶಿಕ್ಷಣಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದರೆ ತಪ್ಪಾಗುವುದಿಲ್ಲ.
ಕೇಂದ್ರ ಸರಕಾರ ಜಾರಿಗೊಳಿಸಿರುವ ಎನ್‌ಇಪಿಯಲ್ಲಿ ಎಲ್ಲವೂ ‘ಸರಿ’ಯಿದೆ ಎಂದಿಲ್ಲ. ಆದರೆ ಜಾರಿಯಲ್ಲಿರುವ ನೀತಿಯಲ್ಲಿ ಸರಿಪಡಿಸಿಕೊಳ್ಳಲು, ರಾಜ್ಯವಾರು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ ಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಅದನ್ನು ಮಾಡದೇ ಪ್ರತ್ಯೇಕ ಶಿಕ್ಷಣ ನೀತಿ ಯನ್ನೇ ಮಾಡಲು ಸಾಧ್ಯವೇ? ಏಕೆಂದರೆ ಶಿಕ್ಷಣ ಎನ್ನುವುದು ಸಂವಿಧಾನದ ’ concurrent’ ಪಟ್ಟಿಯಲ್ಲಿರುವ ವಿಷಯವಾಗಿದೆ.
ಅಂದರೆ ಶಿಕ್ಷಣ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಮಾನ ಅಧಿಕಾರವಿದೆ ಎನ್ನುವುದನ್ನು ಮರೆಯಬಾರದು. ಅಧಿಕಾರದ ವಿಷಯ ಒಂದು ಭಾಗವಾದರೆ, ಜಾರಿಗೊಳಿಸುವ ಸವಾಲು ಹಾಗೂ ಸಮಸ್ಯೆಗಳು ಮತ್ತೊಂದು ಪ್ರಮುಖ ಅಂಶ. ಒಂದು ವೇಳೆ ಕರ್ನಾಟಕ ಸರಕಾರವು ಪ್ರತ್ಯೇಕವಾದ ರಾಜ್ಯ ಶಿಕ್ಷಣ ನೀತಿಯನ್ನು ತರಲೇಬೇಕೆಂದು ಜಾರಿಗೊಳಿಸಿದರೆ, ಮುಂದೆ ಬರುವ ಸರಕಾರಗಳು ಪುನಃ ರಾಷ್ಟ್ರೀಯ ಶಿಕ್ಷಣ ನೀತಿಯನ್ನೇ ಅಳವಡಿಸಿಕೊಳ್ಳಬೇಕು ಅಥವಾ ಮತ್ತೊಂದು ನೀತಿಯನ್ನು ತರುತ್ತೇವೆ ಎಂದು ಹೊರಟರೆ ವಿದ್ಯಾರ್ಥಿಗಳ ಪಾಡೇನಾಗಬೇಕು.
ಆದ್ದರಿಂದ ಈ ವಿಷಯವನ್ನು ರಾಜಕೀಯ ಪಕ್ಷಗಳು ‘ಪ್ರತಿಷ್ಠೆ’ಯಾಗಿ ಪರಿಗಣಿಸುವುದಕ್ಕಿಂತ ವಿದ್ಯಾರ್ಥಿಗಳ ಅನುಕೂಲವನ್ನು ನೋಡಬೇಕಿದೆ. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿನ ಶಿಫಾರಸು ಗಳಲ್ಲಿ ‘ಮಾತೃಭಾಷಾ’ ಶಿಕ್ಷಣ, ದ್ವಿಭಾಷಾ ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳಿವೆ. ಇದಕ್ಕೆ ಕಾನೂನಿನಲ್ಲಿ ಯಾವ ರೀತಿಯ ಮಾನ್ಯತೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಸ್ಟೇಟ್ ಸಿಲಬಸ್ ಓದುತ್ತಿರುವ ಕಡೆಯಲ್ಲಿ ಜಾರಿಯಾಗಿರಲಿಲ್ಲ. ಆದ್ದರಿಂದ ಕೆಲವೊಂದಿಷ್ಟು ಅಂಶಗಳ ಹೊರತಾಗಿ ಹೊಸ ಶಿಫಾರಸುಗಳನ್ನು ಅಳವಡಿಸಿಕೊಳ್ಳುವುದು ಬಹುದೊಡ್ಡ ಸವಾಲೇನಲ್ಲ. ಆದರೆ ಉನ್ನತ ಶಿಕ್ಷಣದಲ್ಲಿ ಯಾವ ರೀತಿಯಲ್ಲಿ ಜಾರಿಗೊಳಿಸುತ್ತಾರೆ ಎನ್ನುವುದು ಈಗಿರುವ ಪ್ರಶ್ನೆ.
ಏಕೆಂದರೆ, ಈ ಹಿಂದಿನ ಬಿಜೆಪಿ ಸರಕಾರ ಯಾವುದೇ ಪೂರ್ವಸಿದ್ಧತೆ ಇಲ್ಲದೇ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ, ಒಂದೆರಡು ವರ್ಷ ಅದೇ ಮಾದರಿಯಲ್ಲಿ ಶಿಕ್ಷಣ ನೀಡಿದೆ. ಇದರೊಂದಿಗೆ ದ್ವಿತೀಯ ಪಿಯುಸಿ ಬಳಿಕ ದೇಶದಲ್ಲಿ ನಡೆಯುವ ಬಹುತೇಕ ಕೋರ್ಸ್‌ಗಳು ಯುಜಿಸಿ ಯ ‘ಮಾರ್ಗಸೂಚಿ’ಯಂತೆ ನಡೆಯುತ್ತವೆ.
ಹೀಗಿರುವಾಗ, ಉನ್ನತ ಶಿಕ್ಷಣದಲ್ಲಿಯೂ ರಾಜ್ಯ ಶಿಕ್ಷಣ ನೀತಿ ಜಾರಿಯಾದರೆ ರಾಜ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗೆ ‘ಸಂಘರ್ಷ’ವಾಗುವುದು ಖಚಿತ. ಈ ಸಂಘರ್ಷದ ನೇರ ಫಲಾನುಭವಿಗಳು ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯ ಗಳು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಶಿಫಾರಸು ಆಗಿರುವ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರೆ, ಯುಜಿಸಿಯ ಹಲವು ಮಾರ್ಗ ಸೂಚಿಗಳನ್ನು ಪಾಲಿಸಲು ಸಾಧ್ಯವಿಲ್ಲ. ಇದರೊಂದಿಗೆ ಕೇಂದ್ರ ಸೇವೆಗೆ ತೆರಳಲು ಬಯಸುವ ಅಭ್ಯರ್ಥಿಗಳಿಗೆ ಸಮಸ್ಯೆಯಾಗಲಿದೆ. ಉದಾಹರಣೆಗೆ, ಕೇಂದ್ರ ಸರಕಾರದ ಎನ್‌ಇಪಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಆದರೆ ರಾಜ್ಯ ಶಿಕ್ಷಣ ನೀತಿಯಲ್ಲಿ ಮೂರು ವರ್ಷಕ್ಕೆ ಕಡಿತಗೊಳಿಸಲಾಗಿದೆ.
ಹೀಗಾದಾಗ, ಕೇಂದ್ರ ಸರಕಾರಿ ಕೆಲಸಗಳ ಆಯ್ಕೆ ಸಮಯದಲ್ಲಿ ಕರ್ನಾಟಕದ ಅಭ್ಯರ್ಥಿಗಳು ಭಿನ್ನವಾಗಿ ನಿಲ್ಲುತ್ತಾರೆ. ಆ ಸಮಯದಲ್ಲಾಗುವ ವ್ಯತ್ಯಾಸವನ್ನು ಯಾವ ರೀತಿಯಲ್ಲಿ ಸರಿದೂಗಿಸ ಬೇಕು ಎನ್ನುವ ಪ್ರಶ್ನೆಗೆ ಶಿಫಾರಸಿನಲ್ಲಿ ಉತ್ತರವಿಲ್ಲ. ಇನ್ನು ದೇಶದಲ್ಲಿರುವ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯಗಳಿಗೆ ನ್ಯಾಕ್ ಮೂಲಕ ರೇಟಿಂಗ್ ನೀಡಲಾಗುತ್ತದೆ. ಈ ರೇಟಿಂಗ್ ಆಧಾರದಲ್ಲಿಯೇ ಯುಜಿಸಿ ಅನುದಾನವನ್ನು ಆಯಾ ಕಾಲೇಜು ಅಥವಾ ವಿವಿಗಳಿಗೆ ನೀಡಲಾಗುತ್ತದೆ.
ಒಂದು ವೇಳೆ ರಾಜ್ಯ ಶಿಕ್ಷಣ ನೀತಿಯನ್ನು ಪದವಿ ಕಾಲೇಜುಗಳಲ್ಲಿ ಅಳವಡಿಸಿಕೊಂಡರೆ, ನ್ಯಾಕ್ ನಿಗದಿಪಡಿಸಿರುವ ಹಲವು ‘ಮಾರ್ಗಸೂಚಿ’ಯಿಂದ ರಾಜ್ಯದ ಕಾಲೇಜು, ವಿವಿಗಳು ಹೊರ ಗುಳಿಯುತ್ತವೆ. ಇದರಿಂದಾಗಿ ನ್ಯಾಕ್ ರೇಟಿಂಗ್ ಮೇಲೆಯೂ ನೇರವಾದ ಹೊಡೆತ ಬೀಳುತ್ತದೆ. ಇದಿಷ್ಟೇ ಅಲ್ಲದೆ, ವಿಶ್ವವಿದ್ಯಾಲಯಗಳು ಯುಜಿಸಿಯ ಮಾರ್ಗಸೂಚಿಯಂತೆಯೆ ನಡೆಯುವು ದರಿಂದ, ಎಸ್‌ಇಪಿ ಜಾರಿ ಹೇಗೆ ಸಾಧ್ಯ? ಅದರಲ್ಲಿಯೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನ ನಿಜಕ್ಕೂ ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.
ಹಾಗೆಂದ ಮಾತ್ರಕ್ಕೆ, ರಾಜ್ಯ ಶಿಕ್ಷಣ ನೀತಿಯಲ್ಲಿ ಯಾವುದೇ ಉತ್ತಮ ಸಲಹೆಗಳಿಲ್ಲ ಎಂದೇನಿಲ್ಲ. ಶಿಕ್ಷಕರ ಭರ್ತಿಗೆ ಕ್ರಮ, ಗುತ್ತಿಗೆ ಶಿಕ್ಷಕರ ನೇಮಕಕ್ಕೆ ತಡೆ, ಆರ್‌ಟಿಇ ವ್ಯಾಪ್ತಿಯ ವಿಸ್ತರಣೆ, ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆಯ ರಚನೆ, ರಾಜ್ಯದ ಬಜೆಟ್‌ನಲ್ಲಿ ಶೇ.30ರಷ್ಟು ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಮೀಸಲು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಇದರೊಂದಿಗೆ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಕಾರವನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಹೊರತಂದು, ಕೆಇಎ ಮೂಲಕ ಲಿಖಿತ ಪರೀಕ್ಷೆ ನಡೆಸಲು ಹಾಗೂ ಸಂದರ್ಶನವನ್ನು ವಿವಿಗಳು ನಡೆಸಲು ಶಿಫಾರಸು ಮಾಡಲಾಗಿದೆ. ಸರಕಾರಿ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳನ್ನು ಕಾಲೇಜು ಶಿಕ್ಷಣ ಆಯ್ಕೆ ಸಮಿತಿ ಮಾಡಬೇಕು. ಅರ್ಹ ಯುಜಿಸಿ ಶಿಕ್ಷಕರಿಂದ ಅರ್ಜಿ ಸ್ವೀಕರಿಸಬೇಕು ಎಂದು ಹೇಳಲಾಗಿದೆ.
ಹಾಗೆ ನೋಡಿದರೆ, ಯುಜಿಸಿಯ ಹಲವು ಮಾರ್ಗಸೂಚಿಗಳಿಗೆ ವಿರೋಧಾಭಾಸ ಎನಿಸುವ ರೀತಿಯ ಶಿಫಾರಸು ಮಾಡಿರುವ ರಾಜ್ಯ ಶಿಕ್ಷಣ ನೀತಿಯನ್ನು ಸಿದ್ಧಪಡಿಸುವ ಸಮಿತಿಯಲ್ಲಿದ್ದ ಪ್ರೊ.ಸುಖದೇವ್ ಥೋರಟ್ ಅವರು ಈ ಹಿಂದೆ ಯುಜಿಸಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. 2006ರಿಂದ 2011ರವರೆಗೆ ಯುಜಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ದಂತೆ ಯುಜಿಸಿ ತೆಗೆದುಕೊಂಡಿದ್ದ ಅನೇಕ ತೀರ್ಮಾನಗಳಿಗೆ ‘ವ್ಯತಿರಿಕ್ತ’ ಎನ್ನುವ ರೀತಿಯಲ್ಲಿ ಈಗಿನ ಎಸ್‌ಇಪಿಯಲ್ಲಿ ಶಿಫಾರಸುಗಳನ್ನು ಮಾಡಲಾಗಿದೆ.
ಈ ರೀತಿ ಶಿಫಾರಸುಗಳನ್ನು ಮಾಡಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ಪಕ್ಷದ ಚುನಾವಣಾ ಪ್ರಣಾಳಿಕೆಗೆ ಸರಿಹೊಂದುವ ರೀತಿಯಲ್ಲಿ ಮಾಡಲಾಗಿದೆಯೇ ಅಥವಾ ಈ ಹಿಂದೆ ಅಧ್ಯಕ್ಷರಾಗಿದ್ದ ಅವಽಯಲ್ಲಿ ಮಾಡಿದ್ದ ‘ತಪ್ಪು’ಗಳ ಅರಿವಾಗಿ ಕರ್ನಾಟಕದ ಮಟ್ಟಿಗಾದರೂ ಈ ಲೋಪಗಳನ್ನು ಸರಿಪಡಿಸೋಣ ಎನ್ನುವ ಮನಸ್ಥಿತಿಯಲ್ಲಿ ಶಿಫಾರಸು ಮಾಡಿದ್ದಾರೋ ಗೊತ್ತಿಲ್ಲ.
ಶಿಕ್ಷಣ ನೀತಿ ಸಮಿತಿಯ ಶಿಫಾರಸುಗಳು, ತೀರ್ಮಾನಗಳು ಏನಾದರೂ ಇರಲಿ, ಆದರೆ ಮೇಲೆ ಹೇಳಿದಂತೆ, ಒಂದು ವೇಳೆ ಕರ್ನಾಟಕ ಸರಕಾರ ರಾಜ್ಯ ಶಿಕ್ಷಣ ನೀತಿಯನ್ನು ಪ್ರತ್ಯೇಕವಾಗಿ ಜಾರಿ ಗೊಳಿಸಲೇಬೇಕು ಎಂದಾದರೆ ಒಂದರಿಂದ ದ್ವಿತೀಯ ಪಿಯುಸಿವರೆಗೆ ಜಾರಿಗೊಳಿಸಲು ‘ಬಹು ದೊಡ್ಡ’ ಸವಾಲಿರುವುದಿಲ್ಲ. ಆದರೆ ಉನ್ನತ ಶಿಕ್ಷಣದಲ್ಲಿಯೂ ಬದಲಾವಣೆ ಮಾಡಲು ಹೊರಟರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಗಳ ‘ತಿಕ್ಕಾಟ’ದಲ್ಲಿ ರಾಜ್ಯದ ವಿದ್ಯಾರ್ಥಿಗಳು ನಲಗುವುದು ಖಚಿತ.
ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಾರಾಸಗಟಾಗಿ ತಳ್ಳಿ ಹಾಕುವುದಕ್ಕಿಂತ ಕೇಂದ್ರ ಸರಕಾರ ತನ್ನ ಎನ್‌ಇಪಿಯಲ್ಲಿ ಬದಲಾವಣೆಗೆ ನೀಡಿರುವ ಅವಕಾಶವನ್ನು ಬಳಸಿಕೊಳ್ಳುವುದು ಸೂಕ್ತ. ಏಕೆಂದರೆ, ರಾಜ್ಯ ಸರಕಾರದ ಕೈಸೇರಿರುವ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ, ಬಿಡುವ ಅಥವಾ ನೀಡಿರುವ ವರದಿಯಲ್ಲಿ ಕೆಲವೊಂದಿಷ್ಟು ಶಿಫಾರಸುಗಳನ್ನು ಮಾತ್ರ ಜಾರಿ ಗೊಳಿಸುವ ಸ್ವಾತಂತ್ರ್ಯ ಸರಕಾರಗಳಿಗೆ ಇದೆ.
ಅದಕ್ಕೂ ಮೊದಲು ಸಚಿವ ಸಂಪುಟ ಸಭೆಯಲ್ಲಿ, ಅಧಿವೇಶನದಲ್ಲಿ ಈ ವರದಿ ಮಂಡನೆಯಾಗಿ ಅನುಮೋದನೆಯಾಗಬೇಕು. ಈ ಎಲ್ಲವೂ ‘ಸುದೀರ್ಘ’ ಕ್ರಿಯೆ ಎನ್ನುವುದು ಬೇರೆ ಮಾತು. ಹಾಗೆ ನೋಡಿದರೆ, ಈ ವರದಿಯನ್ನು ಮಂಡಿಸಲು ಕಾನೂನಾತ್ಮಕವಾಗಿರುವ ಸವಾಲುಗಳು ಒಂದೆರಡಲ್ಲ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ತಿಳಿಯದ ವಿಷಯವೇನಲ್ಲ.
ಆದರೆ ರಾಜಕೀಯ ಕಾರಣಕ್ಕೆ, ಕೇಂದ್ರದ ಬಿಜೆಪಿ ಸರಕಾರದ ನೀತಿಯೊಂದನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ಹಾಗೂ ಕೇಂದ್ರ ಸರಕಾರದ ತೀರ್ಮಾನವನ್ನು ವಿರೋಧಿಸಿ ಒಂದು ‘ಪ್ರಕ್ರಿಯೆ’ ನಡೆಸಿದ್ದೇವೆ ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಬೇಕು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎನ್ನುವ ವಾದವನ್ನು ತಳ್ಳಿ ಹಾಕಬೇಕಿಲ್ಲ.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲ ತೀರ್ಮಾನಗಳನ್ನು ‘ರಾಜಕೀಯ’ವಾಗಿಯೇ ನೋಡ ಬೇಕು ಎನ್ನುವ ನಿಲುವಿಗೆ ಬಂದು ದಶಕಗಳು ಕಳೆದಿವೆ ಎನ್ನುವುದು ಸತ್ಯ. ಆದರೆ ಶಿಕ್ಷಣದಂಥ ಕ್ಷೇತ್ರದಲ್ಲಿ ‘ಗೊಂದಲ’ ಸೃಷ್ಟಿಸಿದರೆ ದೇಶ ಹಾಗೂ ರಾಜ್ಯದ ಭವಿಷ್ಯ ಗೊಂದಲದಲ್ಲಿರುತ್ತದೆ ಎನ್ನುವುದನ್ನು ಮರೆಯಬಾರದು.