ತಾಳ-ಮೇಳ
ವಿನಾಯಕ ಭಟ್ ಓಣಿ ವಿಘ್ನೇಶ್ವರ
ತಾಳಮದ್ದಳೆಯ ಅಪಸವ್ಯಗಳು, ಪ್ರಸಕ್ತ ಪರಿಸ್ಥಿತಿಗಳ ಬಗ್ಗೆ ವಿವಿಧ ವಿದ್ವಾಂಸರೂ, ಕೆಲವು ಕಲಾ ವಿದರೂ, ಸಂಶೋಧಕರೂ, ಹಿರಿಯರೂ ಈಗಾಗಲೇ ಬರೆದಿದ್ದಾರೆ. ಹಿರಿಯರಾದ ವಿಶ್ವೇಶ್ವರ ಭಟ್ಟರು ಬರೆದಂತೆ ಕರ್ನಾಟಕದ ಅತಿ ಮುಖ್ಯ ಶ್ರಾವ್ಯ ಕಾವ್ಯವಾದ ತಾಳಮದ್ದಳೆ ಎನ್ನುವ ಕನ್ನಡದ ಕಲೆಯ ಬಗ್ಗೆ ಸರಕಾರವಾಗಲೀ, ತಥಾಕಥಿತ ಕನ್ನಡ ಸಂಘಟನೆಗಳಾಗಲೀ ತಲೆ ಕೆಡಿಸಿಕೊಂಡಿಲ್ಲ ದಿರುವುದು ವಿಪರ್ಯಾಸ.
ಯಕ್ಷಗಾನ ಅಕಾಡೆಮಿ ಇದ್ದರೂ ಅದರಲ್ಲಿ ತಾಳಮದ್ದಳೆಗೆ ಅಷ್ಟೊಂದು ಅವಕಾಶಗಳೂ ಪ್ರೋತ್ಸಾಹಗಳೂ ಇದ್ದಂತಿಲ್ಲ. ಅಷ್ಟಕ್ಕೂ ಯಕ್ಷಗಾನದ ಭಾಗವಾಗಿರುವ ತಾಳಮದ್ದಳೆ ಕ್ಷೇತ್ರ ಅಕಾಡೆಮಿಯ ವ್ಯಾಪ್ತಿಯಲ್ಲಿ ಇದೆಯೋ ಇಲ್ಲವೋ ಎಂಬ ಸ್ಪಷ್ಟತೆಯೂ ಕಾಣುವುದಿಲ್ಲ.
ಆಟದಲ್ಲಿ ಇರುವಂತೆ ಒಂದು ಮೇಳದಂಥ ಸಂಘಟನೆಯ ವ್ಯವಸ್ಥೆ ಕೂಡಾ ಇಲ್ಲಿಲ್ಲ. ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಒಂದು ರಂಗಪ್ರಕಾರಕ್ಕೆ ಅಂಕು-ಡೊಂಕುಗಳು ಹೆಚ್ಚ ತೊಡಗಿದಾಗ ‘ವಿಶ್ವವಾಣಿ’ಯಂಥ ಪತ್ರಿಕೆ ಈ ವಿಷಯವನ್ನು ಎತ್ತಿಕೊಂಡು ಒಂದು ಇಡೀ ರಂಗ ಪರಂಪರೆಯನ್ನು ಎಚ್ಚರಿಸುತ್ತಿರುವುದು ಯಕ್ಷಗಾನ ರಂಗಕ್ಕೆ ಅದು ಕೊಡುತ್ತಿರುವ ಕೊಡುಗೆ ಎನ್ನಬಹುದು. ಅಭಿನಂದನೆಗಳು.
ಅದೆಷ್ಟೋ ವರ್ಷಗಳಿಂದ ಪ್ರೀತಿಸಿಕೊಂಡು ಕೇಳಿಕೊಂಡು ಬರುತ್ತಿರುವ ತಾಳಮದ್ದಳೆ ಕಲೆಯ ಪ್ರೇಕ್ಷಕನ ದೃಷ್ಟಿಯಿಂದ ಇಡೀ ವಿಚಾರವನ್ನು ನೋಡುವ ಪ್ರಯತ್ನ ಇದು. ಬಹುಶಃ ನಾವೆ ತಾಳ ಮದ್ದಳೆಗೆ ಹೋಗುವ ಕಾಲಕ್ಕೆ ಒಂದು ತಲೆಮಾರಿನ ದಿಗ್ಗಜ ಕಲಾವಿದರು ತೆರೆಮರೆಗೆ ಸರಿದು ಇಂದಿನ ಅನೇಕ ದಿಗ್ಗಜ ಕಲಾವಿದರು ತೆರೆಯ ಮೇಲೆ ವಿಜೃಂಭಿಸಲು ಶುರು ಮಾಡಿದ್ದರು.
ಇದನ್ನೂ ಓದಿ: Vinayaka Bhat Oni Vighneshwara Column: ಟ್ರಾಫಿಕ್ ಸಮಸ್ಯೆಗೆ ಸಮೂಹ ಸಾರಿಗೆಯೇ ಪರಿಹಾರ
ಈಗೊಂದು 10-15 ವರ್ಷಗಳ ಹಿಂದಿನ ತಾಳಮದ್ದಳೆಗಳನ್ನು ನೆನಪಿಸಿಕೊಂಡರೆ ಅದರ ಸ್ವರೂಪ ಬೇರೆ ಇತ್ತು ಅನ್ನಿಸುತ್ತದೆ. ಮೊದಲನೆಯದಾಗಿ ಹಿಮ್ಮೇಳ. ತಾಳಮದ್ದಳೆಗೆ ಬೇಕಾದಷ್ಟೇ ವ್ಯವಸ್ಥೆಯ ಹಿಮ್ಮೇಳ ಇರುತ್ತಿತ್ತು. ಭಾಗವತರು ಯಾರು ಎನ್ನುವ ಅಂಶದ ಮೇಲೆ ಕೂಡಾ ಕಾರ್ಯಕ್ರಮಕ್ಕೆ ಹೋಗುವವರ ಸಂಖ್ಯೆ ಇತ್ತು.
ತಾಂತ್ರಿಕವಾಗಿ ಆಟ ಆಡಿಸುವಾಗಿನ ಭಾಗವತಿಕೆಗೂ, ತಾಳಮದ್ದಳೆಯ ಭಾಗವತಿಕೆಗೂ ವ್ಯತ್ಯಾಸ ಗಳಿವೆ. ಆಟದಲ್ಲಿ ಪಾತ್ರ ಅಭಿನಯ ಮಾಡಬೇಕಾಗಿರುವುದರಿಂದ ಪದ್ಯಗಳೂ ಅದಕ್ಕೆ ತಕ್ಕ ವ್ಯವಸ್ಥೆಗೆ ಅಳವಡಿಸಲ್ಪಟ್ಟಿರುತ್ತವೆ. ಆದರೆ ತಾಳಮದ್ದಳೆಯಲ್ಲಿ ಪಾತ್ರಗಳು ಕುಣಿಯುವುದಿಲ್ಲವಾದ್ದರಿಂದ ಪದ್ಯ ಹೇಳುವ ಕ್ರಮ ಬೇರೆ.
ಆದ್ದರಿಂದ ಯಾವುದೇ ಭಾಗವತರ ಅದೆಷ್ಟೋ ಆಟ ನೋಡಿದ್ದರೂ, ಅವರದೇ ಹಿಮ್ಮೇಳದಲ್ಲಿ ತಾಳ ಮದ್ದಳೆ ಆಗುತ್ತದೆ ಎಂದರೆ ಅದೇ ಪ್ರಸಂಗದ ಆಟ ನೋಡಿದ ಜನ ತಾಳಮದ್ದಳೆಗೂ ಹಿಮ್ಮೇಳದ ಅನುಭವಕ್ಕಾಗಿ ಹೋಗುತ್ತಿದ್ದರು. ಆಟದಲ್ಲಿ ಭಾಗವತರು ಆ ಪದ್ಯವನ್ನು ಹೇಗೆ ಹೇಳಿದರು ಎಂಬು ದನ್ನು ತಾಳಮದ್ದಳೆಯಲ್ಲಿ ಅದೇ ಪದ್ಯವನ್ನು ಹೇಗೆ ಹೇಳಿದರು, ಯಾವ ಲಯ-ತಾಳ-ವಿನ್ಯಾಸ ಗಳನ್ನು ಬಳಸಿದರು ಅನ್ನುವ ಬಹಳಷ್ಟು ತಾಂತ್ರಿಕವಾದ ಕುತೂಹಲಗಳೂ ಇರುತ್ತಿದ್ದವು.
ಇದನ್ನೂ ಓದಿ: Sudhakar Kalchar Column: ಕಲಾವಿದರ ಬಗೆಗೂ ಸಹಾನುಭೂತಿ ಇರಲಿ
ಇನ್ನು ಅರ್ಥಧಾರಿಗಳ ಬಗ್ಗೆ ಹೇಳುವುದಾದರೆ- ರಂಗಸ್ಥಳದಲ್ಲಿ ಅದ್ಭುತ ವೇಷ ಮಾಡುವ ಎಲ್ಲರೂ ತಾಳಮದ್ದಳೆಯ ಅರ್ಥ ಹೇಳುವುದಿಲ್ಲ ಅನ್ನುವ ಸನ್ನಿವೇಶ. ಕೆಲವು ಕಲಾವಿದರು ಮಾತ್ರ ‘ಆಟಕ್ಕೂ ಸೈ ಕೂಟಕ್ಕೂ ಸೈ’ ಅನ್ನುವಂಥ ಪರಿಸ್ಥಿತಿ ಇತ್ತು. ಅವರ ಪ್ರದರ್ಶನದಲ್ಲಿ ಆಟದ ಅರ್ಥಧಾರಿಕೆಗೂ, ಕೂಟದ ಅರ್ಥಧಾರಿಕೆಗೂ ಅದೆಷ್ಟು ವ್ಯತ್ಯಾಸ!
ಆಟದಲ್ಲಿ ಒಂದು ಸನ್ನಿವೇಶವನ್ನು ಆಂಗಿಕ ಆಹಾರ್ಯ ಅಭಿನಯದಲ್ಲಿ ಕಟ್ಟಿಕೊಟ್ಟರೆ, ಕೂಟದಲ್ಲಿ ಅದೇ ಸನ್ನಿವೇಶವನ್ನು ಅಷ್ಟೇ ಸಮರ್ಥವಾಗಿ ವಾಚಿಕ ಅಭಿನಯದಲ್ಲಿ ಕಟ್ಟಿ ಕೊಡುವ ಸಾಮರ್ಥ್ಯ ಅವರಲ್ಲಿ ಢಾಳಾಗಿ ಕಂಡು ಬರುತ್ತಿತ್ತು. ಅಂದರೆ ತಾಳಮದ್ದಳೆ ಅನ್ನುವುದು ಕೂಡಾ ಒಂದು ಕಥೆಯ ವಾಚಿಕ ಅಭಿನಯದಿಂದ ಕೂಡಿದ ರಂಗಪ್ರದರ್ಶನವೇ ಆಗುತ್ತಿತ್ತು.
ಯಾವುದೇ ಜನಸಾಮಾನ್ಯ ಪ್ರೇಕ್ಷಕ ಕೂಡಾ ಇಡೀ ಪ್ರದರ್ಶನದ ಸವಿಯನ್ನು ಉಣ್ಣುವ, ಅದರ ಸ್ವಾರಸ್ಯವನ್ನು ಅರ್ಥೈಸಿಕೊಳ್ಳುವ ರೀತಿಯ ಪ್ರದರ್ಶನಗಳು ಆಗುತ್ತಿದ್ದವು ಎಂದರೆ ಹೆಚ್ಚಲ್ಲ. ಆದರೆ ಇವತ್ತಿನ ಪರಿಸ್ಥಿತಿ ಸ್ವಲ್ಪ ವಿಭಿನ್ನ ಅಂತಲೇ ಹೇಳಬೇಕಾಗುತ್ತದೆ. ಕೆಲವು ಕಾರ್ಯಕ್ರಮಗಳ ಹಿಮ್ಮೇ ಳದ ಬಗ್ಗೆ ಹೇಳುವುದಾದರೆ ಅತಿ ಅನ್ನಿಸುವ ರಾಗ-ಧಾಟಿಗಳ ಬಳಕೆಗಳು, ವಿನಾಕಾರಣ ಪದ್ಯಗಳನ್ನು ಎಳೆಯುವುದು, ಚಪ್ಪಾಳೆ ಬೀಳುವ ತನಕ ನಿಲ್ಲದ ಆಲಾಪಗಳು ಸಾಮಾನ್ಯವೇ ಅನ್ನಿಸುವಂತೆ ಆಗಿವೆ.
ತನ್ನ ಸ್ವಂತದ ಮಟ್ಟುಗಳನ್ನು ಹೊಂದಿರುವ ಯಕ್ಷಗಾನ ರಂಗಭೂಮಿಗೆ ಸುಗಮ ಸಂಗೀತವೋ, ಶಾಸ್ತ್ರೀಯ ಸಂಗೀತವೋ, ಸಿನಿಮಾ ಗೀತೆಯೋ ಮುಂತಾದ ಎರವಲು ತಂದ ಸಂಗೀತವನ್ನು ಬಳಸು ವುದು ಸಾಮಾನ್ಯ ಪ್ರೇಕ್ಷಕನಿಗೂ ಹಿತಕರ ಎನ್ನಿಸುವುದಿಲ್ಲ. ಯಕ್ಷಗಾನ ಸಂಗೀತಕ್ಕೆ ಬೇರೆ ಕಡೆಯಿಂದ ಕಡ ತರಬೇಕಾದ ಬಡತನ ಖಂಡಿತಾ ಇಲ್ಲ.
ಇದನ್ನೂ ಓದಿ: Prof R G Hegde Column: ಕ್ಷುಲ್ಲಕ ವಾಸ್ತವ ನಡುವೆಯೇ ಮನಸೆಳೆವ ತಾಳಮದ್ದಳೆ
ಅಂದಮೇಲೆ ಮೂಲ ಯಕ್ಷಗಾನದ ಮಟ್ಟುಗಳನ್ನು ಬಳಸಲು ಹಿಂದೇಟು ಏಕೆ ಎಂಬುದೇ ಅರ್ಥ ಆಗುತ್ತಿಲ್ಲ. ಇಂದಿನ ಬಹುತೇಕ ತಾಳಮದ್ದಳೆಯಲ್ಲಿ ಚಂಡೆಯ ಬಳಕೆ ಸಾಮಾನ್ಯ ಆಗಿದೆ. ಹಿಂದೆ ಚಂಡೆಯ ಬಳಕೆ ಇರಲಿಲ್ಲ. ಚಂಡೆ ಇದ್ದಾಗ ತಾಳಮದ್ದಳೆಯ ನಡುವೆಯೇ ಒಂದೆರಡು ಪದ್ಯಗಳು ಹಿಮ್ಮೇಳ ವೈಭವ ಆಗಿಯೇ ಆಗುತ್ತದೆ.
ಮದ್ದಳೆಯ ಕಲಾವಿದರಿಗೂ, ಚಂಡೆ ಕಲಾವಿದರಿಗೂ ಪೈಪೋಟಿ ಏರ್ಪಡಿಸುವುದು ಭಾಗವತರ ಆದ್ಯಕರ್ತವ್ಯ ಎನ್ನುವಂತೆ ಆಗಿರುವುದು ಕಂಡುಬರುತ್ತಿದೆ. ಅಂದರೆ ಅವಶ್ಯಕ-ಅನವಶ್ಯಕ ಪರಿಧಿ ಇಲ್ಲದೇ ಹಿಮ್ಮೇಳವನ್ನೂ ಬಳಸುತ್ತಿರುವುದು, ಮೂಲ ತಾಳಮದ್ದಳೆ ರಂಗದ ಆಶಯಕ್ಕೆ ಧಕ್ಕೆ ತರುವುದು ಆಗಿಲ್ಲವೇ? ಇನ್ನು ಅರ್ಥಧಾರಿಗಳ ಬಗ್ಗೆ ಹೇಳುವುದು ಏನೂ ಹೆಚ್ಚು ಉಳಿದಿಲ್ಲ.
ವಿಶ್ವೇಶ್ವರ ಭಟ್ಟರು ಬಳಸಿರುವ ಕಟುಶಬ್ದಗಳೇ ಅದಕ್ಕೆ ಉದಾಹರಣೆ. ಒಬ್ಬ ಸಾಮಾನ್ಯ ಪ್ರೇಕ್ಷಕ ಬಯಸುವುದು ಮನರಂಜನೆ. ಒಂದಿಷ್ಟು ಭಾವಲೋಕದ ಸಂಚಾರ. ಒಂದಷ್ಟು ಹೊತ್ತು ತನ್ನ ಎಲ್ಲ ನಿತ್ಯದ ಜಂಜಾಟಗಳನ್ನು, ತಲೆಬಿಸಿಗಳನ್ನು ಮರೆತು ಬೇರೆ ಒಂದು ಲೋಕದಲ್ಲಿ ವಿಹರಿಸುವುದು. ಸಾಹಿತ್ಯಕ್ಕೆ ಬೇಕಾದ ಶಕ್ತಿ ಅದುವೇ ಆಗಿದೆ. ತಾಳಮದ್ದಳೆಯ ಮೂಲಶಕ್ತಿ ಸಾಹಿತ್ಯವೇ. ಅಂದರೆ ಅರ್ಥಧಾರಿಕೆ ಎಂಬ ಕಲಾಪ್ರದರ್ಶನದ ಮೂಲಧಾತು ಸಾಹಿತ್ಯವೇ ಆದರೂ ಅದು ಪ್ರೇಕ್ಷಕನನ್ನು ಸರಳವಾಗಿ ಮುಟ್ಟಬೇಕು. ಅವನ ಮನಸ್ಸನ್ನು ತಟ್ಟಬೇಕು.
ಆ ಅರ್ಥಧಾರಿಕೆ ನಿಜವಾದ ಅರ್ಥಧಾರಿಕೆ ಎನ್ನುವುದು ಸಾಮಾನ್ಯ ಪ್ರೇಕ್ಷಕನ ಅಭಿಪ್ರಾಯ. ಆದರೆ ಇಂದು ಈ ಅರ್ಥಧಾರಿಕೆ ಅನ್ನುವುದು ಪಾಂಡಿತ್ಯ ಪ್ರದರ್ಶನವೇ ಆಗುತ್ತಿದೆ. ಪಾತ್ರದ ಔಚಿತ್ಯದ ನೆಲೆಯನ್ನು ಅರಿಯದೆ, ತನಗೆ ತಿಳಿದಿದೆ ಅನ್ನುವುದನ್ನು ಸ್ಥಾಪಿಸುವ ಹಂತ ತಲುಪಿರುವುದು ಮೂಲ ಕಲೆಯ ಆಶಯಕ್ಕೆ ವಿರುದ್ಧ. ಒಂದು ಉದಾಹರಣೆ ಕೊಡುವುದಾದರೆ, ಯಾವುದೋ ಒಂದು ಪ್ರಸಂಗದ ಒಬ್ಬ ಅನಕ್ಷರಸ್ಥನ ಪಾತ್ರವನ್ನು ಒಬ್ಬ ಸಂಸ್ಕೃತ ವಿದ್ವಾಂಸರು ನಿರ್ವಹಿಸಿದರು ಎಂದು ಕೊಳ್ಳಿ.
ಅದೆಷ್ಟೇ ವಿದ್ವಾಂಸರೇ ಆಗಿದ್ದರೂ, ಒಬ್ಬ ಅನಕ್ಷರಸ್ಥನಾಗಿ ಸಂಸ್ಕೃತ ಉಕ್ತಿಗಳನ್ನೋ, ವ್ಯಾಕರಣ, ಶಾಸ್ತ್ರಗಳ ವಿದ್ವತ್ಪೂರ್ಣ ಉದಾಹರಣೆಗಳನ್ನೋ ನೀಡಬಹುದೇ? ಒಂದು ವೇಳೆ ನೀಡಿದರೆ ಅದಕ್ಕೆ ಪಾತ್ರಪೋಷಣೆ ಎನ್ನಬಹುದೇ ಅಥವಾ ವಿದ್ವತ್ತಿನ ಪ್ರದರ್ಶನ ಎನ್ನಬಹುದೇ? ಈ ವಿದ್ವತ್ತಿನ ಪ್ರದರ್ಶ ನದ ಚಪಲವೇ ತಾಳಮದ್ದಳೆಯನ್ನು ಕವಲುದಾರಿಯಲ್ಲಿ ತಂದು ನಿಲ್ಲಿಸಿದೆಯಾ ಎಂದೂ ಅನ್ನಿಸುವುದುಂಟು.
ಅರ್ಥದಾರಿಕೆಯು ಪಾತ್ರಪೋಷಣೆಯ ಕಡೆಗೆ, ಕಥೆಯ ಹರಿವಿನ ಕಡೆಗೆ ಸಾಗಬೇಕಾಗಿದ್ದರೂ ಅರ್ಥ ಧಾರಿಯನ್ನು ವಿಜೃಂಭಿಸಲು ಶುರುಮಾಡಿರುವುದು ನಿಜವಾದ ಆತಂಕ. ಈ ಕಾರಣಕ್ಕಾಗಿಯೇ ಸಮಯದ ಮಿತಿಯೋ, ಪರಿವೆಯೋ ಇಲ್ಲದೇ ತಾಳಮದ್ದಳೆಗಳು ನಡೆಯುತ್ತಿರುವುದು, ಪ್ರೇಕ್ಷಕರ ಸಂಖ್ಯೆಯೂ ಕುಸಿಯುತ್ತಿರುವುದು. ಇಡೀ ತಾಳಮದ್ದಳೆ ಎಂಬ ರಂಗಪ್ರಕಾರವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಇದು.
ಅಲ್ಲಲ್ಲಿ ತಾಳಮದ್ದಳೆ ಕಮ್ಮಟಗಳೂ ಆಗಿವೆ. ಹಿರಿಯ ಕಲಾವಿದರ ಅಭಿಪ್ರಾಯಗಳೂ, ವಿದ್ವಾಂಸರ ಸಲಹೆಗಳೂ ಇದ್ದೇ ಇವೆ. ಅವನ್ನೆ ಕ್ರೋಡೀಕರಿಸಿ ಶುದ್ಧ ಕನ್ನಡದ ಅದ್ಭುತ ವಾಚಿಕಕಲೆಯು ತನ್ನ ಮೂಲಸ್ವರೂಪಕ್ಕೆ ಮರಳಿ ಮತ್ತೆ ಕಲಾಸಕ್ತರನ್ನು ಸೆಳೆಯಲಿ ಎಂಬುದು ಆಶಯ.
(ಲೇಖಕರು ಹವ್ಯಾಸಿ ಬರಹಗಾರರು)