Vinayaka Bhat Oni Vighneshwara Column: ಟ್ರಾಫಿಕ್ ಸಮಸ್ಯೆಗೆ ಸಮೂಹ ಸಾರಿಗೆಯೇ ಪರಿಹಾರ
ಈ ಟ್ರಾಫಿಕ್ ಜಾಮ್ ಅನ್ನುವುದು ಉದ್ಯಮದ, ಕೈಗಾರಿಕೆಗಳ ಸಮಯವನ್ನೂ ತಿನ್ನುತ್ತಾ ಉದ್ಯಮ ಶೀಲತೆಗೆ ಹೊಡೆತ ಕೊಡುತ್ತಿವೆ ಅನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಅದನ್ನ ಸರಿದೂಗಿಸಲು ಸಮೂಹ ಸಾರಿಗೆಯ ಉತ್ತೇಜನ ಒಂದೇ ಪರಿಹಾರ. ಬೆಂಗಳೂರಿನಂಥ ನಗರಗಳಲ್ಲಿ ರಸ್ತೆಗಳ ಅಗಲೀ ಕರಣ ಅಸಾಧ್ಯದ ಮಾತೇ ಸರಿ. ಹಾಗಾಗಿ ಇರುವ ಜಾಗವನ್ನು, ರಸ್ತೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದು ಒಂದೇ ಸರಿಯಾದ ಮಾರ್ಗ.
-
ಹಿತೋಪದೇಶ
ವಿನಾಯಕ ಭಟ್ ಓಣಿ ವಿಘ್ನೇ಼ಶ್ವರ
ಈ ಟ್ರಾಫಿಕ್ ಜಾಮ್ ಅನ್ನುವುದು ಉದ್ಯಮದ, ಕೈಗಾರಿಕೆಗಳ ಸಮಯವನ್ನೂ ತಿನ್ನುತ್ತಾ ಉದ್ಯಮಶೀಲತೆಗೆ ಹೊಡೆತ ಕೊಡುತ್ತಿದೆ. ಅದನ್ನು ಸರಿದೂಗಿಸಲು ಸಮೂಹ ಸಾರಿಗೆಯ ಉತ್ತೇಜನ ಒಂದೇ ಪರಿಹಾರ. ಬೆಂಗಳೂರಿನಂಥ ನಗರಗಳಲ್ಲಿ ರಸ್ತೆಗಳ ಅಗಲೀಕರಣ ಅಸಾಧ್ಯ.
ಬೆಂಗಳೂರು ಅವಕಾಶಗಳ ನಗರ. ಏನೂ ಇಲ್ಲದೇ ಏನನ್ನೂ ಸಾಧಿಸುವ ಅವಕಾಶಗಳನ್ನು ಬೆಂಗಳೂರು ಕೊಡುತ್ತದೆ. ಕೆಲಸ ಮಾಡುವ ಮನಸ್ಸೊಂದು ಇದ್ದರೆ ಸಾಕು, ಬೆಂಗಳೂರು ಕೆಲಸ ಕೊಡುತ್ತದೆ. ಅದು ದೈಹಿಕ ಶ್ರಮ ಬೇಡುವ ದಿನಗೂಲಿ ಇರಬಹುದು, ಮಾನಸಿಕ ಒತ್ತಡದ ಯಾವುದೋ ಕಂಪನಿಯ ಸಿಇಒ ಕೆಲಸ ಇರಬಹುದು. ಇಲ್ಲಿ ಅವಕಾಶಗಳು ಅಗಾಧ. ಇದೇ ಕಾರಣಕ್ಕೆ ದೇಶದ ಎಲ್ಲಾ ಭಾಗಗಳಿಂದ ಜನರು ಬಂದು ಬೆಂಗಳೂರನ್ನು ಸೇರುವುದು. ಈ ಎಲ್ಲಾ ಜನರ ಶ್ರಮದಿಂದಲೇ ಉದ್ದಿಮೆಗಳು, ಕೈಗಾರಿಕೆಗಳು ಬೆಳೆಯುತ್ತಾ ಸರಕಾರಕ್ಕೂ ಆದಾಯವನ್ನು ತರುವುದು. ತಾವು ಮಾಡಿದ ಕೆಲಸಕ್ಕೆ ಗಳಿಸುವ ಆದಾಯದಿಂದ ಸರಕಾರಕ್ಕೆ ತೆರುವ ತೆರಿಗೆ ಆದಾಯ ಮಾತ್ರ ಭಾಗ್ಯಗಳಿಗೆ ಹೊರತಾಗಿ ಹೋಗುವುದು ಕಾಣುವುದಿಲ್ಲ. ಅದರಲ್ಲೂ ಬೆಂಗಳೂರಿನ ರಸ್ತೆಗಳ ದುರವಸ್ಥೆಯಿಂದಾಗಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಎಲ್ಲ ವರ್ಗದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.
ಅದೆಷ್ಟೇ ಗುಂಡಿಗಳನ್ನು ಮುಚ್ಚಿದ್ದೇವೆಂದು ಪುಂಗಿ ಊದಿದರೂ ಸತ್ಯಾಂಶವು ಇಲ್ಲಿ ಒದ್ದಾಡು ತ್ತಿರುವವರಿಗೆ ಗೊತ್ತು. ಹೆಚ್ಚುತ್ತಿರುವ ಜನ, ಅದೇ ಪ್ರಮಾಣದಲ್ಲಿ ಹೆಚ್ಚುತ್ತಿರುವ ವಾಹನಗಳೂ ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಹೇರಳವಾಗಿ ಕೊಡುಗೆಗಳನ್ನು ನೀಡುತ್ತಿವೆ.
ಈ ಟ್ರಾಫಿಕ್ ಜಾಮ್ ಅನ್ನುವುದು ಉದ್ಯಮದ, ಕೈಗಾರಿಕೆಗಳ ಸಮಯವನ್ನೂ ತಿನ್ನುತ್ತಾ ಉದ್ಯಮ ಶೀಲತೆಗೆ ಹೊಡೆತ ಕೊಡುತ್ತಿವೆ ಅನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಅದನ್ನ ಸರಿದೂಗಿಸಲು ಸಮೂಹ ಸಾರಿಗೆಯ ಉತ್ತೇಜನ ಒಂದೇ ಪರಿಹಾರ. ಬೆಂಗಳೂರಿನಂಥ ನಗರಗಳಲ್ಲಿ ರಸ್ತೆಗಳ ಅಗಲೀಕರಣ ಅಸಾಧ್ಯದ ಮಾತೇ ಸರಿ. ಹಾಗಾಗಿ ಇರುವ ಜಾಗವನ್ನು, ರಸ್ತೆಯನ್ನು ಪರಿಣಾಮಕಾರಿ ಯಾಗಿ ಉಪಯೋಗಿಸಿಕೊಳ್ಳುವುದು ಒಂದೇ ಸರಿಯಾದ ಮಾರ್ಗ. ಸಮೂಹ ಸಾರಿಗೆ ಹೆಚ್ಚಿದಂತೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಅವಕಾಶವನ್ನೂ ಅದು ಹುಟ್ಟು ಹಾಕುತ್ತದೆ. ಆ ನಿಟ್ಟಿನಲ್ಲಿ ಮೆಟ್ರೋ ಸಂಚಾರ ಬೆಂಗಳೂರಿನ ಮಹತ್ವದ ಭಾಗ ಎನಿಸಿಕೊಳ್ಳುತ್ತದೆ.
ಇದನ್ನೂ ಓದಿ: Vinayak Bhat Naroor Column: ತೆಂಗಿನಕಾಯಿ ಸಿಪ್ಪೆ ಸುಲಿದು ಹಾಕುತ್ತಿರುವ ನಿಶಾಚರಿ!
ಇತ್ತೀಚೆಗೆ ನಮಗೆ ಮೆಟ್ರೋದ ಮೂರನೇ ಲೈನ್ ಕೂಡಾ ಸೇರ್ಪಡೆ ಆಗಿದೆ. ಆದರೂ ಆ ದಿಕ್ಕಿನಲ್ಲಿರುವ ಯಾವುದೇ ರಸ್ತೆಗಳ ಜಾಮ್ ಕಡಿಮೆ ಆಗಿಲ್ಲ ಅನ್ನುವುದು ವಿಷಾದನೀಯ ಸಂಗತಿ. ಇದಕ್ಕೆ ಕಾರಣ ಮತ್ತು ಪರಿಹಾರವನ್ನು ಕಂಡುಹಿಡಿದು ಅನುಷ್ಠಾನ ಮಾಡದೇ ಇದ್ದಲ್ಲಿ ಮೂರಲ್ಲ, ನೂರು ಮೆಟ್ರೋ ಬಂದರೂ ರಸ್ತೆಗಳಲ್ಲಿನ ಜಾಮ್ ಕಡಿಮೆ ಆಗುವ ಸಾಧ್ಯತೆಗಳೇ ಇಲ್ಲ.
ಸುಮ್ಮನೇ ಮೆಟ್ರೋ ಲೈನ್ ಇರುವ ರಸ್ತೆಗಳನ್ನೇ ಗಮನಿಸಿದರೆ ಇದು ಅರ್ಥ ಆಗುತ್ತದೆ. ನಮ್ಮ ಟ್ರಾಫಿಕ್ ಜಾಮ್‌ಗೆ ಕಾರು ಮತ್ತು ದ್ವಿಚಕ್ರ ವಾಹನಗಳ ಕೊಡುಗೆ ಗಣನೀಯ. ೪೦ ಜನ ಪ್ರಯಾಣಿ ಸುವ ಬಸ್ಸು ತೆಗೆದುಕೊಳ್ಳುವ ಜಾಗಕ್ಕೂ, ನಲವತ್ತು ದ್ವಿಚಕ್ರ ವಾಹನ ತೆಗೆದುಕೊಳ್ಳುವ ಜಾಗಕ್ಕೂ, ನಲವತ್ತು ಕಾರು ತೆಗೆದುಕೊಳ್ಳುವ ಜಾಗಕ್ಕೂ ಇರುವ ವ್ಯತ್ಯಾಸ ಸಾಮಾನ್ಯರಿಗೂ ಅರ್ಥವಾಗು ವಂಥದ್ದೇ.
ಲಕ್ಷಾಂತರ ದ್ವಿಚಕ್ರ ವಾಹನಗಳು.... ಇಡೀ ಕಾರಿನಲ್ಲಿ ಒಬ್ಬನೇ ವ್ಯಕ್ತಿ ಪ್ರಯಾಣಿಸುವುದನ್ನು ಕಾಣುತ್ತೇವೆ. ತಮ್ಮ ತಲೆಯ ಮೇಲೆಯೇ ಮೆಟ್ರೋ ಇದ್ದರೂ ಇವರ‍್ಯಾಕೆ ಅದನ್ನು ಉಪಯೋಗಿಸುವು ದಿಲ್ಲ ಎನ್ನುವ ಆಶ್ಚರ್ಯ ನಮ್ಮನ್ನು ಕಾಡುತ್ತದೆ. ಉರಿಯುವ ಬಿಸಿಲು, ಸುರಿಯುವ ಮಳೆಯನ್ನೂ ಲೆಕ್ಕಿಸದೆ ದ್ವಿಚಕ್ರ ವಾಹನದಲ್ಲಿ ತಮ್ಮ ಕಚೇರಿಗೆ ಹೋಗುವ ಜನ, ಹವಾನಿಯಂತ್ರಿತ ಮೆಟ್ರೋದಲ್ಲಿ ಹೋಗಲು ಹಿಂಜರಿಯುತ್ತಾರೆ.
ತಮ್ಮ ಕಾರಿನಲ್ಲಿ ಆಗುವ ಪೆಟ್ರೋಲ್ ಖರ್ಚನ್ನೂ ಲೆಕ್ಕಿಸದೇ ಒಬ್ಬರೇ ಅದರಲ್ಲಿ ಕಚೇರಿಗೆ ಹೋಗು ತ್ತಾರೆ. ಇವೆರಡನ್ನೂ ಕಡಿಮೆ ಮಾಡಿದರೆ ಬೆಂಗಳೂರಿನ ಟ್ರಾಫಿಕ್ ಜಾಮ್ ಸಲ್ಪ ಮಟ್ಟಿಗೆ ತಗ್ಗಬ ಹುದು. ಈ ಎರಡೂ ವರ್ಗ ಯಾಕೆ ಮೆಟ್ರೋವನ್ನು ಅವಲಂಬಿಸುವುದಿಲ್ಲ ಎನ್ನುವುದಕ್ಕೆ ಸರಳ ಉತ್ತರ- ಮೊದಲ ಮೈಲಿ ಮತ್ತು ಕೊನೆಯ ಮೈಲಿ. ಅಂದರೆ, ಅವರ ಮನೆಯಿಂದ ಸಮೀಪದ ಮೆಟ್ರೋ ನಿಲ್ದಾಣಕ್ಕೆ ಬರುವ ಸಾರಿಗೆ ವ್ಯವಸ್ಥೆ ಮತ್ತು ಸಮಯ ಹಾಗೂ ಮೆಟ್ರೋ ನಿಲ್ದಾಣದಿಂದ ಕಚೇರಿಗೆ ಇರುವ ದೂರ, ಸಾರಿಗೆ ವ್ಯವಸ್ಥೆ ಮತ್ತು ತಗಲುವ ಸಮಯ.
ಒಂದು ಉದಾಹರಣೆಯನ್ನು ನೋಡೋಣ: ಒಬ್ಬ ವ್ಯಕ್ತಿ ಕೆಂಗೇರಿ ಮೆಟ್ರೋ ಸ್ಟೇಷನ್‌ನಿಂದ ೨ ಕಿ.ಮೀ. ದೂರದ ಬಡಾವಣೆಯಲ್ಲಿ ಇದ್ದಾನೆ ಎಂದುಕೊಳ್ಳೋಣ. ಅವನ ಕಚೇರಿಯು ಬ್ರಿಗೇಡ್ ರಸ್ತೆಯ ತುದಿಯಲ್ಲಿ ಇದೆ ಎಂದುಕೊಳ್ಳೋಣ. ಮನೆಯಿಂದ ಮೆಟ್ರೋ ಸ್ಟೇಷನ್ ತನಕ ಅವನು ಹೇಗೆ ಬರಬೇಕು? ಅದೇ ರೀತಿಯಲ್ಲಿ ಎಂ.ಜಿ. ರೋಡ್ ಮೆಟ್ರೋ ಸ್ಟೇಷನ್‌ನಿಂದ ಕಚೇರಿಯ ತನಕ ಹೇಗೆ ಬರಬೇಕು? ಈ ಎರಡೂ ಕಡೆಯಲ್ಲಿ ಸುಲಭವಾಗಿ ಸಾರಿಗೆ ಸಿಗುವಂತಿದ್ದರೆ ಈ ವ್ಯಕ್ತಿ ಖಂಡಿತ ಬೈಕ್ ಅಥವಾ ಕಾರನ್ನು ಬಳಸುವುದಿಲ್ಲ.
ಇದರ ಜತೆಗೆ ಮೆಟ್ರೋ ಸ್ಟೇಷನ್‌ನಲ್ಲಿ ವಾಹನವನ್ನು ನಿಲ್ಲಿಸಿದರೆ ಪಾರ್ಕಿಂಗ್ ಫೀಸ್ ಬೇರೆ. ಇವೆ ಕಾರಣಗಳಿಂದ ಕೊನೆಯಲ್ಲಿ ಅವನು ಬೈಕ್ ಅಥವಾ ಕಾರಿನಲ್ಲಿಯೇ ಕಚೇರಿಗೆ ಬರುತ್ತಾನೆ. ಅಂದರೆ ಮೆಟ್ರೋ ಸಾರಿಗೆಯನ್ನು ಇನ್ನೂ ಹೆಚ್ಚು ಉಪಯೋಗ ಮಾಡಿಕೊಳ್ಳಬೇಕು ಎಂದರೆ ಈ ಸಮಸ್ಯೆಗೆ ಪರಿಹಾರ ಸಿಗಬೇಕು.
ಸರಕಾರ ಅದೆಷ್ಟೋ ಕೋಟಿಗಳ ವೆಚ್ಚದ ಸುರಂಗ ರಸ್ತೆಯ ಬಗ್ಗೆ ಆಲೋಚಿಸುತ್ತಿದೆ. ಅದರ ಬದಲಿಗೆ ಯಾವ ರೀತಿಯಿಂದ ಮೆಟ್ರೋ ಕಡೆಗೆ ಸುಲಭವಾಗಿ ಪ್ರಯಾಣಿಕರನ್ನು ಸೆಳೆಯಬಹುದು ಎಂದು ಆಲೋಚನೆ ಮಾಡುವುದು ಒಳ್ಳೆಯದು. ಅದರಲ್ಲೂ ಮೊದಲ ಸಂಪರ್ಕ ಮತ್ತು ಕೊನೆಯ ಸಂಪರ್ಕ ಸುಲಭವಾದರೆ ಇನ್ನಷ್ಟು ಜನರು ಖಂಡಿತಾ ಮೆಟ್ರೋ ಸಾರಿಗೆಗೆ ಬಂದೇ ಬರುತ್ತಾರೆ.
ಪರಿಹಾರಕ್ಕೂ ಒಂದೆರಡು ಉದಾಹರಣೆಗಳನ್ನು ಕೊಡಬಹುದು. ಮೊದಲನೆಯದು ಬಿಎಂಟಿಸಿ ಮಿನಿ ಬಸ್. ಇವುಗಳು ಪ್ರತಿ ರಸ್ತೆಯಲ್ಲೂ ಓಡಾಡಲಿ. ಯಾವುದೇ ಹತ್ತಿರದ ಮುಖ್ಯ ರಸ್ತೆಯಲ್ಲಿ ನಿಂತರೂ ಪೀಕ್ ಅವರ್‌ನಲ್ಲಿ ಐದು ನಿಮಿಷಕ್ಕೆ ಮೆಟ್ರೋ ಫೀಡರ್ ಮಿನಿ ಬಸ್ ಸಿಗಬೇಕು. ಇದಕ್ಕೆ ಪಾಸುಗಳ ವ್ಯವಸ್ಥೆ ಆಗಬೇಕು. ಟಿಕೆಟ್ ಕೊಡುವ ಕೆಲಸ ಕಡಿಮೆ.
ಯಾವುದೇ ಭಾಗ್ಯಗಳೂ ಈ ಮಿನಿ ಬಸ್‌ಗಳಿಗೆ ಅವಶ್ಯಕತೆ ಇಲ್ಲ. ಇದರಿಂದ ಆದಾಯದ ಸಮಸ್ಯೆ ಯೂ ಇಲ್ಲ. ಇವುಗಳು ಎಲ್ಲಾ ರಸ್ತೆಗಳಲ್ಲಿ ಸುತ್ತುಹಾಕುತ್ತಾ ಜನರನ್ನು ಮನೆಯಿಂದ ಮೆಟ್ರೋಗೆ, ಮೆಟ್ರೋದಿಂದ ಕಚೇರಿಗೆ ತಲುಪಿಸುವ ಕೆಲಸ ಮಾಡಲಿ.
ಇನ್ನು ಮತ್ತೊಂದು ಸಾಧ್ಯತೆಯನ್ನೂ ಸರಕಾರ ಆಲೋಚಿಸಬಹುದು. ಲಕ್ಷಾಂತರ ಆಟೋ ರಿಕ್ಷಾ ಗಳನ್ನು ಸಮೂಹ ಸಾರಿಗೆಗೆ ಬಳಸುವುದು. ಅದು ಬೆಂಗಳೂರಿನಲ್ಲಿ ಆಟೋರಿಕ್ಷಾ ಶೇರಿಂಗ್. ಇದಕ್ಕೆ ಆಟೋ ಚಾಲಕರು/ಮಾಲೀಕರ ಸಹಕಾರವೂ ಬೇಕೇ ಬೇಕು. ಈ ವ್ಯವಸ್ಥೆಯಲ್ಲಿ ಆಟೋ ಚಾಲಕರೂ ಜನರನ್ನು ಶೇರಿಂಗ್ ಮೂಲಕ ಮೆಟ್ರೋಗೆ ಬಿಡುವುದು ಮತ್ತು ಮೆಟ್ರೋದಿಂದ ಕರೆತರುವುದು.
ಒಬ್ಬರೇ ಹೋಗಿ-ಬಂದು ಮಾಡಿದರೂ ಸಿಗುವ ಅದೇ ಮೊತ್ತ ಚಾಲಕರಿಗೆ. ಖಾಲಿ ಗಾಡಿ ಓಡಿಸುವ ಅನಿವಾರ್ಯತೆಯೂ ಇಲ್ಲ. ಬೆಳಗ್ಗೆ ೮ರಿಂದ ರಾತ್ರಿ ೯ರ ತನಕ ಆಟೋ ಚಾಲಕರಿಗೆ ಖಚಿತ ವರಮಾನ, ಪ್ರಯಾಣಿಕರಿಗೆ ಅನುಕೂಲ. ಇವೆರಡೂ ಕ್ರಮಗಳು ಪ್ರಯಾಣಿಕರ ಜೇಬಿಗೂ ಅಂಥ ಭಾರವನ್ನು ಹೇರುವುದಿಲ್ಲ.
ಮಿನಿ ಬಸ್ ದರ ಮತ್ತು ಶೇರಿಂಗ್ ಆಟೋ ದರದಲ್ಲಿ ತುಂಬಾ ವ್ಯತ್ಯಾಸಗಳು ಆಗಬೇಕೆಂದೇನೂ ಇಲ್ಲ. ಒಬ್ಬ ವ್ಯಕ್ತಿ ಮನೆಯಿಂದ ಬೈಕ್‌ನಲ್ಲಿ ಹೊರಟು, ಮೆಟ್ರೋದಲ್ಲಿ ನಿಲ್ಲಿಸಿ ಕಚೇರಿಗೆ ಹೋಗಿ ಬರುವಾಗ ಪೂರ್ತಿ ದಿನಕ್ಕೆ ಪಾರ್ಕಿಂಗ್‌ಗೆ ೪೦ ರುಪಾಯಿ ಕೊಡುತ್ತಾನೆ. ಅದರ ಬದಲಿಗೆ ೩೦ ರುಪಾಯಿಗೆ ಎರಡೂ ಕಡೆ ಸಾರಿಗೆ ಸಿಕ್ಕರೆ ಅದರಷ್ಟು ಅನುಕೂಲ ಇನ್ನೊಂದಿಲ್ಲ.
ಅನವಶ್ಯಕವಾದ ಯೋಜನೆಗಳನ್ನು ಕೈ ಬಿಟ್ಟು ಇರುವ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳುವ, ಬಲಪಡಿಸುವ ಬಗ್ಗೆ ಸರಕಾರ ಆಲೋಚಿಸುವುದು ಒಳಿತು. ಅದರಿಂದ ಜನರಿಗೂ ಹೆಚ್ಚಿನ ಅನು ಕೂಲ. ಸಮೂಹ ಸಾರಿಗೆ ವ್ಯವಸ್ಥೆಗಳು ಯಾವಾಗಲೂ ಪರಿಸರದ ದೃಷ್ಟಿಯಿಂದ ಕೂಡಾ ಒಳ್ಳೆಯದೇ. ಇಂದಿನ ಬಹುತೇಕ ಜನರು ಸುಲಭವಾಗಿ ಆಗುತ್ತದೆ ಎಂದಾದರೆ ಖಂಡಿತಾ ಸಮೂಹ ಸಾರಿಗೆಯನ್ನೇ ಬಳಸುತ್ತಾರೆ. ಅದಕ್ಕೆ ಸರಕಾರ ಅನುಕೂಲ ಮಾಡಿಕೊಡಬೇಕು ಅಷ್ಟೇ. ಆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿ. ಸಮೂಹ ಸಾರಿಗೆಯನ್ನು ಉತ್ತೇಜಿಸಲಿ.
(ಲೇಖಕರು ಹವ್ಯಾಸಿ ಬರಹಗಾರರು)